ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯುವ ಜನರೇ—ಯೆಹೋವನು ನಿಮ್ಮ ಕೆಲಸವನ್ನು ಮರೆಯಲಾರನು!

ಯುವ ಜನರೇ—ಯೆಹೋವನು ನಿಮ್ಮ ಕೆಲಸವನ್ನು ಮರೆಯಲಾರನು!

ಯುವ ಜನರೇ​—ಯೆಹೋವನು ನಿಮ್ಮ ಕೆಲಸವನ್ನು ಮರೆಯಲಾರನು!

“ನೀವು ದೇವಜನರಿಗೆ ಉಪಚಾರ ಮಾಡಿದಿರಿ, ಇನ್ನೂ ಮಾಡುತ್ತಾ ಇದ್ದೀರಿ. ಈ ಕೆಲಸವನ್ನೂ ಇದರಲ್ಲಿ ನೀವು ದೇವರ ನಾಮದ ವಿಷಯವಾಗಿ ತೋರಿಸಿದ ಪ್ರೀತಿಯನ್ನೂ ಆತನು ಮರೆಯುವದಕ್ಕೆ ಅನ್ಯಾಯಸ್ಥನಲ್ಲ.”​—ಇಬ್ರಿಯ 6:10.

1. ಯೆಹೋವನು ನಿಮ್ಮ ಸೇವೆಯನ್ನು ಅಮೂಲ್ಯವೆಂದೆಣಿಸುತ್ತಾನೆ ಎಂಬುದನ್ನು ಬೈಬಲಿನ ಇಬ್ರಿಯ ಮತ್ತು ಮಲಾಕಿಯ ಪುಸ್ತಕಗಳು ಹೇಗೆ ತೋರಿಸುತ್ತವೆ?

ನೀವು ನಿಮ್ಮ ಮಿತ್ರನಿಗಾಗಿ ಒಂದು ಸಹಾಯವನ್ನು ಮಾಡಿದ್ದೀರೆಂದು ನೆನಸಿರಿ. ಆದರೆ ಅವನಿಂದ ಕೃತಜ್ಞತೆಯ ಯಾವ ಮಾತುಗಳೂ ಬರುವದಿಲ್ಲ. ಒಂದು ಉದಾರ ಕೃತ್ಯವನ್ನು ಈ ರೀತಿ ಹಗುರವಾಗಿ ಎಣಿಸುವುದು ಇಲ್ಲವೆ, ಇನ್ನೂ ವಿಷಾದಕರವಾಗಿ, ಅದನ್ನು ಪೂರ್ಣವಾಗಿ ಮರೆತುಬಿಡುವುದು ಮನಸ್ಸಿಗೆ ತುಂಬ ನೋವನ್ನುಂಟು ಮಾಡಬಲ್ಲದು. ಆದರೆ ನಾವು ಯೆಹೋವನಿಗೆ ಪೂರ್ಣ ಹೃದಯದ ಸೇವೆಯನ್ನು ಸಲ್ಲಿಸುವಾಗಲಾದರೊ, ಅದೆಷ್ಟು ಭಿನ್ನವಾಗಿರುತ್ತದೆ! ಬೈಬಲನ್ನುವುದು: “ನೀವು ದೇವಜನರಿಗೆ ಉಪಚಾರ ಮಾಡಿದಿರಿ, ಇನ್ನೂ ಮಾಡುತ್ತಾ ಇದ್ದೀರಿ. ಈ ಕೆಲಸವನ್ನೂ ಇದರಲ್ಲಿ ನೀವು ದೇವರ ನಾಮದ ವಿಷಯವಾಗಿ ತೋರಿಸಿದ ಪ್ರೀತಿಯನ್ನೂ ಆತನು ಮರೆಯುವದಕ್ಕೆ ಅನ್ಯಾಯಸ್ಥನಲ್ಲ.” (ಇಬ್ರಿಯ 6:10) ಇದೇನನ್ನು ಸೂಚಿಸುತ್ತದೆ ಎಂಬುದರ ಕುರಿತು ಯೋಚಿಸಿರಿ. ನೀವು ಯೆಹೋವನ ಸೇವೆಯಲ್ಲಿ ಮಾಡಿರುವ ಮತ್ತು ಮಾಡುತ್ತಾ ಇರುವ ಕೆಲಸವನ್ನು ಒಂದುವೇಳೆ ಆತನು ಮರೆತರೆ, ಅದನ್ನಾತನು ತನ್ನ ಪಾಲಿಗೆ ಅನ್ಯಾಯದ ಕೃತ್ಯವಾಗಿ ಪರಿಗಣಿಸುವನೆಂದೇ ಇದರ ಅರ್ಥ. ಎಂತಹ ಕೃತಜ್ಞತೆಯುಳ್ಳ ದೇವರಾತನು!​—ಮಲಾಕಿಯ 3:10.

2. ಯೆಹೋವನ ಸೇವೆ ಮಾಡುವುದನ್ನು ನಿಜವಾಗಿಯೂ ವಿಶೇಷಗೊಳಸುವಂಥ ಸಂಗತಿ ಯಾವುದು?

2 ಈ ಕೃತಜ್ಞತಾಭಾವದ ದೇವರನ್ನು ಆರಾಧಿಸುವ ಮತ್ತು ಸೇವಿಸುವ ವಿಶೇಷ ಸುಸಂದರ್ಭವು ನಿಮ್ಮದಾಗಿದೆ. ಲೋಕದಾದ್ಯಂತವಿರುವ ಸುಮಾರು 60 ದಶಕೋಟಿ ಜನರೊಂದಿಗೆ ತುಲನೆಯಲ್ಲಿ ಕೇವಲ 60 ಲಕ್ಷ ಜೊತೆ ವಿಶ್ವಾಸಿಗಳು ಮಾತ್ರ ಇರಲಾಗಿ, ನಿಮಗಿರುವ ಸುಸಂದರ್ಭವು ಅಪೂರ್ವವೇ ಸರಿ. ಅದಲ್ಲದೆ, ಸುವಾರ್ತಾ ಸಂದೇಶಕ್ಕೆ ನೀವು ಕಿವಿಗೊಡುತ್ತಿದ್ದೀರಿ ಮತ್ತು ಪ್ರತಿಕ್ರಿಯಿಸುತ್ತಿದ್ದೀರೆಂಬ ನಿಜತ್ವವು, ಯೆಹೋವನು ನಿಮ್ಮಲ್ಲಿ ವೈಯಕ್ತಿಕ ಆಸಕ್ತಿಯನ್ನು ತೆಗೆದುಕೊಳ್ಳುತ್ತಿದ್ದಾನೆಂಬುದಕ್ಕೆ ರುಜುವಾತಾಗಿದೆ. ಎಷ್ಟೆಂದರೂ, ಯೇಸುವಂದದ್ದು: “ನನ್ನನ್ನು ಕಳುಹಿಸಿಕೊಟ್ಟಂಥ ತಂದೆಯು ಎಳೆದ ಹೊರತು ಯಾವನೂ ನನ್ನ ಬಳಿಗೆ ಬರಲಾರನು.” (ಯೋಹಾನ 6:44) ಹೌದು, ಕ್ರಿಸ್ತನ ಯಜ್ಞದ ಪ್ರಯೋಜನಗಳನ್ನು ಸದುಪಯೋಗಿಸುವಂತೆ ಯೆಹೋವನು ಜನರಿಗೆ ವ್ಯಕ್ತಿಗತವಾಗಿ ಸಹಾಯಮಾಡುತ್ತಾನೆ.

ನಿಮ್ಮ ಭವ್ಯವಾದ ಸುಯೋಗಕ್ಕಾಗಿ ಕೃತಜ್ಞರಾಗಿರುವುದು

3. ಯೆಹೋವನನ್ನು ಸೇವಿಸುವ ಸುಯೋಗಕ್ಕಾಗಿ ಕೋರಹನ ಪುತ್ರರು ಹೇಗೆ ಕೃತಜ್ಞತೆಯನ್ನು ವ್ಯಕ್ತಪಡಿಸಿದರು?

3 ಹಿಂದಿನ ಲೇಖನದಲ್ಲಿ ಚರ್ಚಿಸಲ್ಪಟ್ಟಂತೆ, ಯೆಹೋವನ ಮನಸ್ಸನ್ನು ಸಂತೋಷಪಡಿಸುವ ಅಪೂರ್ವವಾದ ಸ್ಥಾನದಲ್ಲಿ ನೀವಿದ್ದೀರಿ. (ಜ್ಞಾನೋಕ್ತಿ 27:11) ಇದನ್ನು ನೀವೆಂದೂ ಹಗುರವಾಗಿ ಎಣಿಸಬಾರದು. ಕೋರಹನ ಪುತ್ರರು, ತಮ್ಮ ಪ್ರೇರಿತ ಕೀರ್ತನೆಗಳೊಂದರಲ್ಲಿ, ಯೆಹೋವನನ್ನು ಸೇವಿಸುವ ಸುಯೋಗಕ್ಕಾಗಿ ಕೃತಜ್ಞತೆಯನ್ನು ವ್ಯಕ್ತಪಡಿಸಿದರು. ನಾವು ಓದುವುದು: “ನಿನ್ನ ಆಲಯದ ಅಂಗಳಗಳಲ್ಲಿ ಕಳೆದ ಒಂದು ದಿನವು ಬೇರೆ ಸಹಸ್ರದಿನಗಳಿಗಿಂತ ಉತ್ತಮವಾಗಿದೆ. ದುಷ್ಟರ ಗುಡಾರಗಳಲ್ಲಿ ವಾಸಿಸುವದಕ್ಕಿಂತ ನನ್ನ ದೇವರ ಆಲಯದ ಬಾಗಿಲನ್ನು ಕಾಯ್ದುಕೊಂಡಿರುವದೇ ಲೇಸು.”​—ಕೀರ್ತನೆ 84:10.

4. (ಎ) ಯೆಹೋವನ ಆರಾಧನೆಯು ನಿರ್ಬಂಧಕರವಾಗಿದೆಯೆಂದು ವೀಕ್ಷಿಸುವುದಕ್ಕೆ ಕೆಲವರನ್ನು ಯಾವುದು ನಡಿಸಬಹುದು? (ಬಿ) ಯೆಹೋವನು ತನ್ನ ಸೇವಕರನ್ನು ಗಮನಿಸಲು ಮತ್ತು ಪ್ರತಿಫಲ ಕೊಡಲು ಕಾತುರನಾಗಿದ್ದಾನೆ ಎಂಬದನ್ನು ಯಾವ ವಿಧದಲ್ಲಿ ತೋರಿಸುತ್ತಾನೆ?

4 ನಿಮ್ಮ ಸ್ವರ್ಗೀಯ ತಂದೆಯನ್ನು ಸೇವಿಸುವ ನಿಮ್ಮ ಸುಯೋಗದ ಕುರಿತು ನಿಮಗೂ ಇದೇ ರೀತಿಯ ಭಾವನೆ ಇದೆಯೆ? ಕೆಲವೊಮ್ಮೆ, ಯೆಹೋವನ ಆರಾಧನೆಯು ನಿಮ್ಮ ಸ್ವಾತಂತ್ರ್ಯವನ್ನು ನಿರ್ಬಂಧಿಸುತ್ತಿರುವಂತೆ ತೋರಬಹುದು ಎಂಬುದು ಒಪ್ಪತಕ್ಕ ಮಾತು. ಬೈಬಲಿನ ಮೂಲತತ್ತ್ವಗಳಿಗನುಸಾರ ಜೀವಿಸುವದಕ್ಕೆ ಸ್ವಲ್ಪ ಸ್ವತ್ಯಾಗದ ಆವಶ್ಯಕತೆಯಿದೆ ಎಂಬುದು ಸತ್ಯ. ಆದರೆ, ಯೆಹೋವನು ನಿಮ್ಮಿಂದ ಏನನ್ನು ಕೇಳುತ್ತಾನೊ ಅದೆಲ್ಲವೂ ಕಟ್ಟಕಡೆಗೆ ನಿಮ್ಮ ಪ್ರಯೋಜನಕ್ಕಾಗಿಯೇ ಇದೆ. (ಕೀರ್ತನೆ 1:​1-3) ಅದಲ್ಲದೆ, ಯೆಹೋವನು ನಿಮ್ಮ ಪ್ರಯತ್ನಗಳನ್ನು ನೋಡುತ್ತಾನೆ ಮತ್ತು ನಿಮ್ಮ ನಂಬಿಗಸ್ತಿಕೆಗಾಗಿ ಆತನಿಗಿರುವ ಗಣ್ಯತೆಯನ್ನು ವ್ಯಕ್ತಪಡಿಸುತ್ತಾನೆ. ನಿಶ್ಚಯವಾಗಿಯೂ ಯೆಹೋವನು “ತನ್ನನ್ನು ಹುಡುಕುವವರಿಗೆ ಪ್ರತಿಫಲವನ್ನು ಕೊಡುತ್ತಾನೆ” ಎಂದು ಪೌಲನು ಬರೆದನು. (ಇಬ್ರಿಯ 11:6) ಇದನ್ನು ಮಾಡುವ ಸಂದರ್ಭಗಳಿಗಾಗಿ ಯೆಹೋವನು ಹುಡುಕುತ್ತಿರುತ್ತಾನೆ. ಪುರಾತನ ಇಸ್ರಾಯೇಲಿನ ಒಬ್ಬ ನೀತಿವಂತ ಪ್ರವಾದಿಯು ಹೇಳಿದ್ದು: “ಯೆಹೋವನು ಭೂಲೋಕದ ಎಲ್ಲಾ ಕಡೆಗಳಲ್ಲಿಯೂ ದೃಷ್ಟಿಯನ್ನು ಪ್ರಸರಿಸುತ್ತಾ ತನ್ನ ಕಡೆಗೆ ಯಥಾರ್ಥಮನಸ್ಸುಳ್ಳವರ ರಕ್ಷಣೆಗಾಗಿ ತನ್ನ ಪ್ರತಾಪವನ್ನು ತೋರ್ಪಡಿಸುತ್ತಾನೆ.”​—2 ಪೂರ್ವಕಾಲವೃತ್ತಾಂತ 16:9.

5. (ಎ) ಯೆಹೋವನೆಡೆಗೆ ನೀವು ಯಥಾರ್ಥಮನಸ್ಸುಳ್ಳವರು ಆಗಿದ್ದೀರಿ ಎಂದು ನೀವು ತೋರಿಸಬಲ್ಲ ಒಂದು ಅತ್ಯುತ್ತಮ ವಿಧಾನ ಯಾವುದು? (ಬಿ) ಇತರರೊಂದಿಗೆ ನಿಮ್ಮ ನಂಬಿಕೆಯ ಕುರಿತು ಮಾತನಾಡುವುದು ಕಷ್ಟಕರವಾಗಿ ಕಾಣಬಹುದು ಏಕೆ?

5 ನೀವು ಯೆಹೋವನೆಡೆಗೆ ಯಥಾರ್ಥಮನಸ್ಸುಳ್ಳವರು ಆಗಿದ್ದೀರಿ ಎಂಬದನ್ನು ತೋರಿಸುವ ಒಂದು ಅತ್ಯುತ್ತಮ ವಿಧಾನವು, ಇತರರೊಂದಿಗೆ ಆತನ ಕುರಿತು ಮಾತಾಡುವುದೇ. ನಿಮ್ಮ ಸಹಪಾಠಿಗಳಲ್ಲಿ ಕೆಲವರೊಂದಿಗಾದರೂ ನಿಮ್ಮ ನಂಬಿಕೆಯ ಕುರಿತಾಗಿ ಮಾತಾಡಲು ನಿಮಗೆಂದಾದರೂ ಅವಕಾಶ ಸಿಕ್ಕಿದೆಯೊ? ಮೊದಮೊದಲು ಇದು ಕಷ್ಟಕರವಾಗಿ ತೋರಬಹುದು. ಆ ವಿಚಾರವು ತಾನೇ ತುಸು ಹೆದರಿಕೆಯನ್ನು ಉಂಟುಮಾಡೀತು. ನೀವು ಹೀಗನ್ನಬಹುದು: ‘ಅವರು ನನಗೆ ತಮಾಷೆಮಾಡಿ ನಕ್ಕರೆ? ನಿನ್ನ ಧರ್ಮವೆಷ್ಟು ವಿಚಿತ್ರವಪ್ಪಾ, ಎಂದರೆ?’ ರಾಜ್ಯದ ಸಂದೇಶವನ್ನು ಪ್ರತಿಯೊಬ್ಬರೂ ಕೇಳಲಾರರು ಎಂದು ಯೇಸು ತಾನೇ ಒಪ್ಪಿದ್ದಾನೆ. (ಯೋಹಾನ 15:20) ಆದರೂ ನಿಮ್ಮ ಜೀವಮಾನವಿಡೀ ಹಾಸ್ಯ ಮತ್ತು ತಿರಸ್ಕಾರಕ್ಕೆ ನೀವು ಗುರಿಯಾಗುವಿರಿ ಎಂಬುದು ಇದರ ಅರ್ಥವಲ್ಲ. ವ್ಯತಿರಿಕ್ತವಾಗಿ, ಅನೇಕ ಯುವ ಸಾಕ್ಷಿಗಳು ತಮಗೆ ಕಿವಿಗೊಡಲು ಸಿದ್ಧರಾಗಿದ್ದವರನ್ನು ಕಂಡುಕೊಂಡಿದ್ದಾರೆ ಮತ್ತು ನಿಶ್ಚಿತಾಭಿಪ್ರಾಯಗಳನ್ನು ಸಮರ್ಥಿಸಿ ನಿಂತದ್ದಕ್ಕಾಗಿ ತಮ್ಮ ಸಮಾನಸ್ಥರಿಂದ ಹೆಚ್ಚಿನ ಮನ್ನಣೆಯನ್ನೂ ಗಳಿಸಿದ್ದಾರೆ.

“ಯೆಹೋವನು ನಿಮಗೆ ಸಹಾಯಮಾಡುವನು”

6, 7. (ಎ) ಒಬ್ಬಾಕೆ 17 ವರ್ಷ ಪ್ರಾಯದ ಹುಡುಗಿಯು ತನ್ನ ಸಹಪಾಠಿಗಳಿಗೆ ಸಾಕ್ಷಿಕೊಡಲು ಶಕ್ತಳಾದದ್ದು ಹೇಗೆ? (ಬಿ) ಜೆನಿಫರಳ ಅನುಭವದಿಂದ ನೀವೇನನ್ನು ಕಲಿತಿರಿ?

6 ಆದರೆ ನಿಮ್ಮ ನಂಬಿಕೆಯ ಕುರಿತು ಮಾತನಾಡುವುದಕ್ಕೆ ನೀವು ಧೈರ್ಯವನ್ನು ಹೇಗೆ ಪಡೆದುಕೊಳ್ಳಬಲ್ಲಿರಿ? ನಿಮ್ಮ ಧರ್ಮದ ಕುರಿತು ಜನರು ಪ್ರಶ್ನೆ ಕೇಳುವಾಗ ನೀವು ಪ್ರಾಮಾಣಿಕರೂ ಮುಚ್ಚುಮರೆಯಿಲ್ಲದವರೂ ಆಗಿರುವಂತೆ ದೃಢನಿಶ್ಚಯ ಮಾಡಿರಿ. 17 ವರ್ಷ ಪ್ರಾಯದ ಜೆನಿಫರಳ ಅನುಭವವನ್ನು ಪರಿಗಣಿಸಿರಿ. ಅವಳನ್ನುವುದು: “ಒಂದು ದಿನ ನಾನು ಶಾಲೆಯಲ್ಲಿ ಮಧ್ಯಾಹ್ನದ ಊಟವನ್ನು ಮಾಡುತ್ತಿದ್ದೆ. ನನ್ನೊಟ್ಟಿಗೆ ಒಂದೇ ಮೇಜಿನಲ್ಲಿದ್ದ ಹುಡುಗಿಯರು ಧರ್ಮದ ಕುರಿತು ಮಾತನಾಡಲು ತೊಡಗಿದ್ದರು. ಅವರಲ್ಲೊಬ್ಬಳು ನನ್ನ ಧರ್ಮ ಯಾವುದೆಂದು ಕೇಳಿದಳು.” ಉತ್ತರಕೊಡಲು ಜೆನಿಫರಳಿಗೆ ಗಾಬರಿಯಾಯಿತೊ? “ಹೌದು, ಯಾಕಂದರೆ ನನ್ನ ಉತ್ತರಕ್ಕೆ ಯಾವ ರೀತಿಯ ಪ್ರತಿಕ್ರಿಯೆ ದೊರಕೀತೆಂದು ನನಗೆ ಗೊತ್ತಿರಲಿಲ್ಲ,” ಎಂದು ಅವಳು ಒಪ್ಪಿಕೊಳ್ಳುತ್ತಾಳೆ. ಹಾಗಾದರೆ ಆಕೆ ಮಾಡಿದ್ದೇನು? ಅವಳು ಮುಂದುವರಿಸಿ ಹೇಳಿದ್ದು: “ನಾನು ಯೆಹೋವನ ಸಾಕ್ಷಿಗಳಲ್ಲಿ ಒಬ್ಬಳು ಎಂದು ಹುಡುಗಿಯರಿಗೆ ಹೇಳಿಬಿಟ್ಟೆ. ಮೊದಲು ಅವರಿಗೆ ಆಶ್ಚರ್ಯವಾದಂತೆ ತೋರಿತು. ಯೆಹೋವನ ಸಾಕ್ಷಿಗಳು ವಿಚಿತ್ರ ಜನರಾಗಿದ್ದರೆಂಬ ಭಾವನೆ ಅವರಿಗಿದ್ದಿರಬಹುದು. ಇದು ಅವರು ನನಗೆ ಪ್ರಶ್ನೆಗಳನ್ನು ಕೇಳುವುದಕ್ಕೆ ನಡಿಸಿತು, ಮತ್ತು ಅವರಿಗಿದ್ದ ತಪ್ಪು ಕಲ್ಪನೆಗಳಲ್ಲಿ ಕೆಲವನ್ನು ಸರಿಪಡಿಸಲು ನಾನು ಶಕ್ತಳಾದೆ. ಆ ದಿನದ ಅನಂತರವೂ ಕೆಲವು ಹುಡುಗಿಯರು ಆಗಿಂದಾಗ್ಗೆ ಪ್ರಶ್ನೆಗಳೊಂದಿಗೆ ನನ್ನ ಬಳಿಗೆ ಬರತೊಡಗಿದರು.”

7 ತನ್ನ ನಂಬಿಕೆಗಳ ಕುರಿತು ಸ್ಪಷ್ಟವಾಗಿ ಮಾತಾಡಲು ಆ ಸಂದರ್ಭವನ್ನು ಸದುಪಯೋಗಿಸಿದ್ದಕ್ಕಾಗಿ ಜೆನಿಫರ್‌ ವಿಷಾದಪಟ್ಟಳೊ? ಖಂಡಿತವಾಗಿಯೂ ಇಲ್ಲ! “ಮಧ್ಯಾಹ್ನದೂಟದ ವಿರಾಮ ಮುಗಿದಾಗ ನನಗೆ ತುಂಬ ಹಾಯೆನಿಸಿತು. ಯೆಹೋವನ ಸಾಕ್ಷಿಗಳು ಯಾರು ಎಂಬ ಒಳ್ಳೆಯ ಮಾಹಿತಿ ಆ ಹುಡುಗಿಯರಿಗೆ ಈಗ ಸಿಕ್ಕಿಯದೆ” ಎಂದಳಾಕೆ. ಈಗ ಜೆನಿಫರಳ ಸಲಹೆ ತೀರಾ ಸರಳ: “ಸಹಪಾಠಿಗಳಿಗೆ ಅಥವಾ ಶಿಕ್ಷಕರಿಗೆ ಸಾಕ್ಷಿಕೊಡಲು ನಿಮಗೆ ಕಷ್ಟವೆನಿಸಿದರೆ, ಒಂದು ಚಿಕ್ಕ ಪ್ರಾರ್ಥನೆ ಮಾಡಿಬಿಡಿ. ಯೆಹೋವನು ನಿಮಗೆ ಸಹಾಯಮಾಡುವನು. ಸಾಕ್ಷಿಕೊಡುವ ಸಂದರ್ಭದ ಸದುಪಯೋಗವನ್ನು ಮಾಡಿದುದಕ್ಕಾಗಿ ನಿಮಗೆ ಸಂತೋಷವಾಗುವುದು.”​—1 ಪೇತ್ರ 3:15.

8. (ಎ) ಒಂದು ಅನಿರೀಕ್ಷಿತ ಸನ್ನಿವೇಶವನ್ನು ಎದುರಿಸಿದಾಗ, ನೆಹೆಮೀಯನಿಗೆ ಪ್ರಾರ್ಥನೆಯು ಹೇಗೆ ಸಹಾಯಮಾಡಿತು? (ಬಿ) ಯೆಹೋವನಿಗೆ ನೀವು ಒಂದು ಚಿಕ್ಕ, ಮೌನ ಪ್ರಾರ್ಥನೆಯನ್ನು ಮಾಡಬೇಕಾಗಬಹುದಾದ ಕೆಲವು ಸನ್ನಿವೇಶಗಳು ಯಾವುವು?

8 ನಿಮ್ಮ ನಂಬಿಕೆಯ ಕುರಿತು ಸಾಕ್ಷಿಕೊಡುವ ಸಂದರ್ಭವು ದೊರೆತಾಗ, ಯೆಹೋವನಿಗೆ ‘ಒಂದು ಚಿಕ್ಕ ಪ್ರಾರ್ಥನೆಯನ್ನು ಮಾಡಿಬಿಡಿ,’ ಎಂಬ ಜೆನಿಫರಳ ಸಲಹೆಯನ್ನು ತುಸು ಪರಿಗಣಿಸಿರಿ. ಒಂದು ಅನಿರೀಕ್ಷಿತ ಸನ್ನಿವೇಶವು ಎದುರಾದಾಗ, ಪಾರಸಿಯ ರಾಜನಾದ ಅರ್ತಷಸ್ತನ ಪಾನಸೇವಕನಾಗಿದ್ದ ನೆಹೆಮೀಯನು ಹೀಗೆಯೇ ಮಾಡಿದ್ದನು. ಯೆಹೂದ್ಯರ ಅವಸ್ಥೆ ಮತ್ತು ಯೆರೂಸಲೇಮಿನ ಗೋಡೆಗಳು ಹಾಗೂ ಕೋಟೆ ಬಾಗಲುಗಳು ಹಾಳುಬಿದ್ದಿರುವ ಕುರಿತು ಸುದ್ದಿ ಸಿಕ್ಕಿದಾಗ ನೆಹೆಮೀಯನು ಮನೋವೇದನೆಯಿಂದ ಕಳೆಗುಂದಿದ್ದನು. ನೆಹೆಮೀಯನ ಕಳವಳವನ್ನು ಅರಸನು ಗಮನಿಸಿದಾಗ, ಅದಕ್ಕೆ ಕಾರಣವೇನೆಂದು ಕೇಳಿದನು. ಉತ್ತರ ಕೊಡುವ ಮುಂಚೆ, ನೆಹೆಮೀಯನು ಮಾರ್ಗದರ್ಶನಕ್ಕಾಗಿ ಪ್ರಾರ್ಥಿಸಿದನು. ಅನಂತರ ಯೆರೂಸಲೇಮಿಗೆ ಹಿಂತಿರುಗಲು ಮತ್ತು ಹಾಳುಬಿದ್ದ ಪಟ್ಟಣವನ್ನು ಪುನಃ ಕಟ್ಟಲು ಅನುಮತಿ ಕೊಡಬೇಕೆಂದು ಧೈರ್ಯದಿಂದ ಅರಸನಿಗೆ ಬಿನ್ನೈಸಿದನು. ಅರ್ತಷಸ್ತನು ನೆಹೆಮೀಯನ ವಿನಂತಿಗೆ ಅನುಮತಿಯನ್ನಿತ್ತನು. (ನೆಹೆಮೀಯ 2:​1-8) ಇದರಲ್ಲಿ ನಿಮಗಿರುವ ಪಾಠವೇನು? ನಿಮ್ಮ ನಂಬಿಕೆಯ ಕುರಿತು ಸಾಕ್ಷಿಕೊಡುವ ಸಂದರ್ಭವು ಎದುರಾದಾಗ ನೀವು ಗಾಬರಿಗೊಳ್ಳುವುದಾದರೆ, ಮೌನವಾಗಿ ಒಂದು ಪ್ರಾರ್ಥನೆಯನ್ನು ಸಲ್ಲಿಸುವ ಅವಕಾಶವನ್ನು ಅಲಕ್ಷ್ಯಮಾಡದಿರ್ರಿ. “ನಿಮ್ಮ ಚಿಂತೆಯನ್ನೆಲ್ಲಾ ಆತನ ಮೇಲೆ ಹಾಕಿರಿ, ಆತನು ನಿಮಗೋಸ್ಕರ ಚಿಂತಿಸುತ್ತಾನೆ,” ಎಂದು ಪೇತ್ರನು ಬರೆದಿದ್ದಾನಲ್ಲಾ.​—1 ಪೇತ್ರ 5:7; ಕೀರ್ತನೆ 55:22.

“ಉತ್ತರ ಹೇಳುವದಕ್ಕೆ ಯಾವಾಗಲೂ ಸಿದ್ಧರಾಗಿರಿ”

9. ಯುವ ಜನರ ಪ್ರಶ್ನೆಗಳು ಪುಸ್ತಕದ 23 ಪ್ರತಿಗಳನ್ನು ನೀಡಲು 13 ವರ್ಷ ಪ್ರಾಯದ ಲಿಯ ಶಕ್ತಳಾದದ್ದು ಹೇಗೆ?

9 ಇನ್ನೊಂದು ಅನುಭವವನ್ನು ಪರಿಗಣಿಸಿರಿ. ಯುವ ಜನರ ಪ್ರಶ್ನೆಗಳು​—ಕಾರ್ಯಸಾಧಕ ಉತ್ತರಗಳು * ಎಂಬ ಪುಸ್ತಕವನ್ನು 13 ವರ್ಷ ಪ್ರಾಯದ ಲಿಯ, ತನ್ನ ಶಾಲೆಯ ಊಟದ ವಿರಾಮದಲ್ಲಿ ಓದುತ್ತಿದ್ದಳು. “ಇತರರು ನನ್ನ ಕಡೆಗೇ ನೋಡುತ್ತಿದ್ದರು. ಬೇಗನೆ ಒಂದು ಗುಂಪೇ ಅಲ್ಲಿ ಸೇರಿ, ನನ್ನ ಹೆಗಲ ಮೇಲಿಂದ ಇಣುಕುತ್ತ, ಅದು ಯಾವ ರೀತಿಯ ಪುಸ್ತಕವೆಂದು ಕೇಳತೊಡಗಿದರು.” ಆ ದಿನದಂತ್ಯದೊಳಗೆ ನಾಲ್ಕು ಮಂದಿ ಹುಡುಗಿಯರು ಯುವ ಜನರ ಪ್ರಶ್ನೆಗಳು ಪುಸ್ತಕದ ಪ್ರತಿಗಾಗಿ ಕೇಳಿಕೊಂಡರು. ಈ ಹುಡುಗಿಯರು ಆ ಪುಸ್ತಕವನ್ನು ಇತರರಿಗೆ ತೋರಿಸಲಾಗಿ, ಅವರೂ ಒಂದೊಂದು ಪ್ರತಿಯನ್ನು ಬಯಸಿದರು. ಮುಂದಿನ ಕೆಲವು ವಾರಗಳೊಳಗೆ ಲಿಯ ತನ್ನ ಸಹಪಾಠಿಗಳು ಮತ್ತು ಸ್ನೇಹಿತರೊಂದಿಗೆ ಯುವ ಜನರ ಪ್ರಶ್ನೆಗಳು ಪುಸ್ತಕದ 23 ಪ್ರತಿಗಳನ್ನು ನೀಡಿದ್ದಳು. ತಾನು ಓದುತ್ತಿದ್ದ ಪುಸ್ತಕದ ಕುರಿತು ಇತರರು ಆರಂಭದಲ್ಲಿ ಪ್ರಶ್ನಿಸಿದಾಗ, ಲಿಯಗೆ ಉತ್ತರಕೊಡಲು ಸುಲಭವಾಗಿತ್ತೊ? ಖಂಡಿತವಾಗಿಯೂ ಸುಲಭವಾಗಿರಲಿಲ್ಲ! ಅವಳು ಒಪ್ಪಿಕೊಂಡದ್ದು: “ಮೊದಮೊದಲು ನಾನು ಗಾಬರಿಗೊಂಡೆ. ಆದರೂ ನಾನು ಪ್ರಾರ್ಥಿಸಿದೆ ಮತ್ತು ಯೆಹೋವನು ನನ್ನೊಂದಿಗಿದ್ದಾನೆಂದು ನನಗೆ ಗೊತ್ತಿತ್ತು.”

10, 11. ಸಿರಿಯ ದೇಶದ ಸೈನ್ಯಾಧಿಕಾರಿಯು ಯೆಹೋವನ ಕುರಿತು ಕಲಿಯುವಂತೆ ಸಹಾಯಮಾಡಲು ಒಬ್ಬ ಚಿಕ್ಕ ಇಸ್ರಾಯೇಲ್ಯ ಹುಡುಗಿಯು ಶಕ್ತಳಾದದ್ದು ಹೇಗೆ?

10 ಲಿಯಳ ಅನುಭವವು, ಸಿರಿಯ ದೇಶಕ್ಕೆ ಬಂಧಿಯಾಗಿ ಒಯ್ಯಲ್ಪಟ್ಟಿದ್ದ ಆ ಚಿಕ್ಕ ಇಸ್ರಾಯೇಲ್ಯ ಹುಡುಗಿಗೆ ಎದುರಾದ ತದ್ರೀತಿಯ ಸನ್ನಿವೇಶವನ್ನು ನಿಮ್ಮ ಜ್ಞಾಪಕಕ್ಕೆ ತರಬಹುದು. ಸಿರಿಯದ ಸೈನ್ಯಾಧಿಕಾರಿಯಾಗಿದ್ದ ನಾಮಾನನು ಒಬ್ಬ ಕುಷ್ಠರೋಗಿಯಾಗಿದ್ದನು. ಈ ಹುಡುಗಿಯು ತನ್ನ ನಂಬಿಕೆಯ ಕುರಿತು ಮಾತನಾಡುವಂತೆ, ಪ್ರಾಯಶಃ ನಾಮಾನನ ಪತ್ನಿಯು ಆರಂಭಿಸಿದ್ದ ಸಂಭಾಷಣೆಯು ಅವಳನ್ನು ಪ್ರೇರೇಪಿಸಿದ್ದಿರಬಹುದು. ಅವಳಂದದ್ದು: “ನಮ್ಮ ದಣಿಯು ಸಮಾರ್ಯದಲ್ಲಿರುವ ಪ್ರವಾದಿಯ ಹತ್ತಿರ ಇರುತ್ತಿದ್ದರೆ ಎಷ್ಟೋ ಒಳ್ಳೇದಾಗುತ್ತಿತ್ತು. ಅವನು ಇವನನ್ನು ಕುಷ್ಠರೋಗದಿಂದ ವಾಸಿ ಮಾಡುತ್ತಿದ್ದನು.”​—2 ಅರಸುಗಳು 5:1-3.

11 ಈ ಚಿಕ್ಕ ಹುಡುಗಿಯು ಧೈರ್ಯದಿಂದ ಮಾತನಾಡಿದ್ದರ ಫಲಿತಾಂಶವಾಗಿ, ನಾಮಾನನಿಗೆ “ಇಸ್ರಾಯೇಲ್‌ ದೇಶದಲ್ಲಿರುವ ದೇವರ ಹೊರತಾಗಿ ಲೋಕದಲ್ಲಿ ಬೇರೆ ದೇವರು ಇರುವದೇ ಇಲ್ಲ” ಎಂದು ಪ್ರತ್ಯಕ್ಷವಾಗಿ ತಿಳಿದುಬಂತು. “ಇನ್ನು ಮುಂದೆ ಎಲ್ಲಾ ದೇವತೆಗಳನ್ನು ಬಿಟ್ಟು ಯೆಹೋವನೊಬ್ಬನಿಗೇ ಸರ್ವಾಂಗಹೋಮಯಜ್ಞಗಳನ್ನು ಸಮರ್ಪಿಸಬೇಕೆಂದಿರುತ್ತೇನೆ,” ಎಂಬ ನಿರ್ಣಯವನ್ನೂ ಅವನು ಮಾಡಿದನು. (2 ಅರಸುಗಳು 5:​15, 17) ಯೆಹೋವನು ಆ ಪುಟ್ಟ ಹುಡುಗಿಯ ಧೈರ್ಯವನ್ನು ಖಂಡಿತವಾಗಿಯೂ ಆಶೀರ್ವದಿಸಿದನು. ಇಂದಿನ ಯುವ ಜನರಿಗಾಗಿಯೂ ಆತನು ನಿಶ್ಚಯವಾಗಿ ಅದನ್ನೇ ಮಾಡಶಕ್ತನು ಮತ್ತು ಮಾಡುವನು. ಲಿಯಗೆ ಅದರ ನೈಜ ಅನುಭವವಾಗಿತ್ತು. ಸಮಯಾನಂತರ ಆಕೆಯ ಕೆಲವು ಸಹಪಾಠಿಗಳು ಅವಳನ್ನು ಸಮೀಪಿಸಿ, ಯುವ ಜನರ ಪ್ರಶ್ನೆಗಳು ಪುಸ್ತಕವು ತಮ್ಮ ನಡವಳಿಯನ್ನು ಸುಧಾರಿಸಲು ಸಹಾಯಮಾಡುತ್ತಿದೆ ಎಂದು ತಿಳಿಸಿದರು. ಲಿಯ ಅನ್ನುವುದು: “ನಾನು ಸಂತೋಷಪಟ್ಟೆ. ಯಾಕಂದರೆ ಯೆಹೋವನ ಕುರಿತು ಹೆಚ್ಚನ್ನು ಕಲಿಯಲು ಮತ್ತು ತಮ್ಮ ಜೀವಿತವನ್ನು ಬದಲಾಯಿಸಲು ನಾನು ಇತರರಿಗೆ ನೆರವಾಗುತ್ತಿದ್ದೇನೆಂಬ ಮನವರಿಕೆ ನನಗಾಗಿದೆ.”

12. ನಿಮ್ಮ ನಂಬಿಕೆಯನ್ನು ಸಮರ್ಥಿಸಲಿಕ್ಕಾಗಿ ನೀವು ಹೇಗೆ ಬಲವನ್ನು ಪಡೆದುಕೊಳ್ಳಬಹುದು?

12 ಜೆನಿಫರ್‌ ಮತ್ತು ಲಿಯಗಾದಂಥ ಅನುಭವಗಳು ನಿಮಗೂ ಆಗಸಾಧ್ಯವಿದೆ. ಕ್ರೈಸ್ತರಾಗಿರುವ ನೀವು “ನಿಮ್ಮಲ್ಲಿರುವ ನಿರೀಕ್ಷೆಗೆ ಆಧಾರವೇನೆಂದು ಕೇಳುವವರೆಲ್ಲರಿಗೆ ಉತ್ತರ ಹೇಳುವದಕ್ಕೆ ಯಾವಾಗಲೂ ಸಿದ್ಧವಾಗಿರಿ” ಎಂದು ಬರೆದ ಪೇತ್ರನ ಬುದ್ಧಿವಾದವನ್ನು ಪರಿಪಾಲಿಸಿರಿ. “ಆದರೆ ಅದನ್ನು ಸಾತ್ವಿಕತ್ವದಿಂದಲೂ ಮನೋಭೀತಿಯಿಂದಲೂ [“ಆಳವಾದ ಮರ್ಯಾದೆಯಿಂದಲೂ,” NW] ಹೇಳಿರಿ.” (1 ಪೇತ್ರ 3:15) ನೀವದನ್ನು ಮಾಡುವದು ಹೇಗೆ? “ಧೈರ್ಯದಿಂದ” ಸಾರುವ ಹಾಗೆ ಯೆಹೋವನು ತಮಗೆ ಸಹಾಯಮಾಡಲಿ ಎಂದು ಪ್ರಾರ್ಥಿಸಿದ ಒಂದನೇ ಶತಮಾನದ ಕ್ರೈಸ್ತರ ಮಾರ್ಗಕ್ರಮವನ್ನು ಅನುಕರಿಸಿರಿ. (ಅ. ಕೃತ್ಯಗಳು 4:​29, 30) ಆ ಮೇಲೆ ಧೈರ್ಯ ತೆಗೆದುಕೊಂಡು ನಿಮ್ಮ ನಂಬಿಕೆಯ ಕುರಿತು ಇತರರೊಂದಿಗೆ ಮಾತನಾಡಿರಿ. ದೊರೆಯುವ ಫಲಿತಾಂಶಗಳು ನಿಮ್ಮನ್ನು ಆಶ್ಚರ್ಯಪಡಿಸಬಹುದು. ಅದಲ್ಲದೆ, ನೀವು ಯೆಹೋವನ ಮನಸ್ಸನ್ನು ಸಂತೋಷಪಡಿಸುವಿರಿ.

ವಿಡಿಯೋಗಳು ಮತ್ತು ವಿಶಿಷ್ಟ ಪ್ರಾಜೆಕ್ಟ್‌ಗಳು

13. ಕೆಲವು ಯುವ ಜನರು ಸಾಕ್ಷಿಕೊಡುವ ಯಾವ ಸಂದರ್ಭಗಳ ಸದುಪಯೋಗವನ್ನು ಮಾಡಿದ್ದಾರೆ? (ಪುಟ 20 ಮತ್ತು 21ರಲ್ಲಿರುವ ಚೌಕಗಳನ್ನು ನೋಡಿರಿ.)

13 ಅನೇಕ ಯುವ ಜನರು, ವಿಡಿಯೋಗಳನ್ನು ಉಪಯೋಗಿಸುವ ಮೂಲಕ ಸಹಪಾಠಿಗಳಿಗೆ ಇಲ್ಲವೆ ಶಿಕ್ಷಕರಿಗೆ ತಮ್ಮ ನಂಬಿಕೆಯ ಬಗ್ಗೆ ವಿವರಿಸಿದ್ದಾರೆ. ಕೆಲವೊಮ್ಮೆ, ಶಾಲೆಯ ಪ್ರಾಜೆಕ್ಟ್‌ಗಳು ಸಹ ಯೆಹೋವನಿಗೆ ಸ್ತುತಿಯನ್ನು ತರಲು ಅವಕಾಶಗಳನ್ನು ಒದಗಿಸಿವೆ. ಉದಾಹರಣೆಗೆ, 15 ವರ್ಷ ಪ್ರಾಯದ ಇಬ್ಬರು ಯೆಹೋವನ ಸಾಕ್ಷಿಗಳ ಹುಡುಗರಿಗೆ ಜಗತ್ತಿನ ಇತಿಹಾಸದ ಕುರಿತಾದ ಪಾಠಕ್ರಮದ ಭಾಗವಾಗಿ, ಲೋಕದ ಧರ್ಮವೊಂದರ ಕುರಿತು ಒಂದು ವರದಿಯನ್ನು ಬರೆಯುವ ನೇಮಕಾತಿ ಸಿಕ್ಕಿತು. ಇವರಿಬ್ಬರೂ ಜೊತೆಗೂಡಿ, ಯೆಹೋವನ ಸಾಕ್ಷಿಗಳು​—ದೇವರ ರಾಜ್ಯದ ಘೋಷಕರು * ಪುಸ್ತಕವನ್ನುಪಯೋಗಿಸಿ, ಯೆಹೋವನ ಸಾಕ್ಷಿಗಳ ಕುರಿತು ತಮ್ಮ ವರದಿಯನ್ನು ಬರೆದರು. ಐದು ನಿಮಿಷಗಳ ಮೌಖಿಕ ವರದಿಯನ್ನೂ ಅವರಿಗೆ ನೀಡಬೇಕಾಯಿತು. ಆ ಮೇಲೆ ಅವರ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಎಷ್ಟು ಪ್ರಶ್ನೆಗಳನ್ನು ಕೇಳತೊಡಗಿದರೆಂದರೆ, ಇನ್ನೂ 20 ನಿಮಿಷಗಳ ವರೆಗೆ ಅವರಿಗೆ ಕ್ಲಾಸಿನ ಎದುರು ನಿಲ್ಲಬೇಕಾಯಿತು. ತದನಂತರ ಅನೇಕ ವಾರಗಳ ತನಕ ಅವರ ಸಹಪಾಠಿಗಳು ಯೆಹೋವನ ಸಾಕ್ಷಿಗಳ ಕುರಿತು ಪ್ರಶ್ನೆಕೇಳುತ್ತಾ ಇದ್ದರು!

14, 15. (ಎ) ಮನುಷ್ಯನ ಭಯ ಉರುಲಾಗಿದೆಯೇಕೆ? (ಬಿ) ಇತರರೊಂದಿಗೆ ನಿಮ್ಮ ನಂಬಿಕೆಗಳನ್ನು ಹಂಚುವ ಕುರಿತು ನೀವು ಭರವಸವುಳ್ಳವರಾಗಿರಬೇಕು ಏಕೆ?

14 ಮೇಲಿನ ಅನುಭವಗಳಿಗನುಸಾರ, ಯೆಹೋವನ ಸಾಕ್ಷಿಗಳಾದ ನೀವು ನಿಮ್ಮ ನಂಬಿಕೆಗಳನ್ನು ಮತ್ತು ನಿಶ್ಚಿತಾಭಿಪ್ರಾಯಗಳನ್ನು ಇತರರಿಗೆ ತಿಳಿಸುವ ಮೂಲಕ ಮಹಾ ಆಶೀರ್ವಾದಗಳನ್ನು ಅನುಭವಿಸಬಲ್ಲಿರಿ. ಯೆಹೋವನನ್ನು ಇತರರು ತಿಳಿಯುವಂತೆ ಸಹಾಯಮಾಡುವ ಸುಯೋಗ ಮತ್ತು ಸಂತೋಷವನ್ನು, ಮನುಷ್ಯನ ಭಯವು ನಿಮ್ಮಿಂದ ಅಪಹರಿಸದಿರಲಿ. ಬೈಬಲನ್ನುವುದು: “ಮನುಷ್ಯನ ಭಯ ಉರುಲು; ಯೆಹೋವನ ಭರವಸ ಉದ್ಧಾರ.”​—ಜ್ಞಾನೋಕ್ತಿ 29:25.

15 ಕ್ರೈಸ್ತ ಯುವ ಜನರೋಪಾದಿ ನಿಮ್ಮಲ್ಲಿ, ನಿಮ್ಮ ಸಮಾನಸ್ಥರಿಗೆ ಅತ್ಯಗತ್ಯವಾಗಿ ಬೇಕಾಗಿರುವ ಸದ್ಯದ ಅತ್ಯುತ್ತಮ ಜೀವನ ಮಾರ್ಗ ಮತ್ತು ಭವಿಷ್ಯತ್ತಿನಲ್ಲಿ ನಿತ್ಯಜೀವದ ವಾಗ್ದಾನವು ಇದೆ ಎಂಬುದನ್ನು ಮರೆಯದಿರಿ. (1 ತಿಮೊಥೆಯ 4:8) ಎಲ್ಲಿ ಸಾಮಾನ್ಯವಾಗಿ ಜನರು ನಿರಾಸಕ್ತರೂ ಪ್ರಾಪಂಚಿಕ ಭಾವದವರೂ ಆಗಿದ್ದಾರೆಂದು ನೀವು ನೆನಸಬಹುದೊ ಆ ಅಮೆರಿಕ ದೇಶದಲ್ಲಿ ಒಂದು ಸಮೀಕ್ಷೆಯು ನಡೆಸಲ್ಪಟ್ಟಿತು. ಅದರಲ್ಲಿ ಸುಮಾರು ಅರ್ಧದಷ್ಟು ಯುವ ಜನರು ಧರ್ಮವನ್ನು ಅತಿ ಗಂಭೀರವಾಗಿ ಪರಿಗಣಿಸುವವರೂ ಮೂರನೇ ಒಂದಂಶ ಯುವ ಜನರು ಧಾರ್ಮಿಕ ನಂಬಿಕೆಯನ್ನು ತಮ್ಮ ಜೀವಿತದ “ಅತಿ ಮಹತ್ವದ ಪ್ರಭಾವ”ವೆಂದು ಹೇಳುವವರೂ ಆಗಿದ್ದಾರೆಂದು ತಿಳಿದುಬಂದಿದೆ. ಲೋಕದ ಇತರ ಅನೇಕ ಭಾಗಗಳಲ್ಲೂ ಪರಿಸ್ಥಿತಿಯು ಇದೇ ಆಗಿರುವ ಸಂಭವವಿದೆ. ಆದುದರಿಂದ ಶಾಲೆಯಲ್ಲಿ ನೀವು ಬೈಬಲಿನ ವಿಷಯಗಳನ್ನು ಹೇಳುವಾಗ ನಿಮ್ಮ ಸಮಾನಸ್ಥರು ಸಂತೋಷದಿಂದ ಕೇಳಿಸಿಕೊಳ್ಳುವ ಹೆಚ್ಚಿನ ಸಂಭಾವ್ಯತೆಯು ಇದೆ.

ಒಬ್ಬ ಯುವ ವ್ಯಕ್ತಿಯೋಪಾದಿ ಯೆಹೋವನ ಸಮೀಪಕ್ಕೆ ಬನ್ನಿರಿ

16. ಯೆಹೋವನನ್ನು ಮೆಚ್ಚಿಸುವುದರಲ್ಲಿ ಆತನ ಕುರಿತು ಇತರರೊಂದಿಗೆ ಮಾತನಾಡುವುದು ಮಾತ್ರವಲ್ಲದೆ ಬೇರೆ ಯಾವುದು ಒಳಗೊಂಡಿದೆ?

16 ಯೆಹೋವನ ಮನಸ್ಸನ್ನು ಸಂತೋಷಪಡಿಸಲು, ಕೇವಲ ಆತನ ಕುರಿತು ಇತರರೊಂದಿಗೆ ಮಾತನಾಡುವುದಕ್ಕಿಂತಲೂ ಹೆಚ್ಚಿನದ್ದು ಒಳಗೊಂಡಿದೆಯೆಂಬುದು ನಿಶ್ಚಯ. ನಿಮ್ಮ ನಡತೆಯನ್ನೂ ಆತನ ಮಟ್ಟಗಳಿಗನುಸಾರ ಹೊಂದಿಸಿಕೊಳ್ಳುವ ಆವಶ್ಯಕತೆ ಇದೆ. ಅಪೊಸ್ತಲ ಯೋಹಾನನು ಬರೆದದ್ದು: “ದೇವರ ಮೇಲಣ ಪ್ರೀತಿ ಏನಂದರೆ ಆತನ ಆಜ್ಞೆಗಳನ್ನು ಕೈಕೊಂಡು ನಡೆಯುವದೇ. ಆತನ ಆಜ್ಞೆಗಳು ಭಾರವಾದವುಗಳಲ್ಲ.” (1 ಯೋಹಾನ 5:3) ನೀವು ಯೆಹೋವನ ಸಮೀಪಕ್ಕೆ ಬರುವಲ್ಲಿ, ಇದು ನಿಮಗೆ ಸತ್ಯವೆಂದು ಕಂಡುಬರುವುದು. ನೀವದನ್ನು ಹೇಗೆ ಮಾಡಬಲ್ಲಿರಿ?

17. ನೀವು ಹೇಗೆ ಯೆಹೋವನ ಸಮೀಪಕ್ಕೆ ಬರಬಲ್ಲಿರಿ?

17 ಬೈಬಲನ್ನು ಮತ್ತು ಬೈಬಲಾಧಾರಿತ ಪ್ರಕಾಶನಗಳನ್ನು ಓದಲಿಕ್ಕಾಗಿ ಸಮಯವನ್ನು ಬದಿಗಿಡಿರಿ. ಯೆಹೋವನ ಕುರಿತು ನೀವು ಎಷ್ಟು ಹೆಚ್ಚನ್ನು ಕಲಿಯುತ್ತೀರೊ, ಆತನ ಆಜ್ಞೆಗಳಿಗೆ ವಿಧೇಯರಾಗಲು ಮತ್ತು ಆತನ ಕುರಿತು ಇತರರೊಂದಿಗೆ ಮಾತನಾಡಲು ಅಷ್ಟೇ ಹೆಚ್ಚು ಸುಲಭವಾಗುವುದು. ಯೇಸುವಂದದ್ದು: “ಒಳ್ಳೆಯವನು ತನ್ನ ಹೃದಯವೆಂಬ ಒಳ್ಳೆಯ ಬೊಕ್ಕಸದೊಳಗಿಂದ ಒಳ್ಳೆಯದನ್ನು ತರುತ್ತಾನೆ.” ಯಾಕಂದರೆ “ಹೃದಯದಲ್ಲಿ ತುಂಬಿರುವದೇ ಬಾಯಲ್ಲಿ ಹೊರಡುವದು.” (ಲೂಕ 6:45) ಆದುದರಿಂದ, ನಿಮ್ಮ ಹೃದಯವನ್ನು ಒಳ್ಳೆಯ ವಿಷಯಗಳಿಂದ ತುಂಬಿಸಿರಿ. ಈ ವಿಷಯದಲ್ಲಿ ಕೆಲವು ಗುರಿಗಳನ್ನು ಯಾಕಿಡಬಾರದು? ಪ್ರಾಯಶಃ ಮುಂದಿನ ವಾರದ ಸಭಾ ಕೂಟಗಳಿಗಾಗಿ ಮಾಡುವ ತಯಾರಿಯಲ್ಲಿ ನೀವು ಪ್ರಗತಿಯನ್ನು ಮಾಡಬಹುದು. ನಿಮ್ಮ ಮುಂದಿನ ಗುರಿಯು, ಸಂಕ್ಷಿಪ್ತವೂ ಹೃತ್ಪೂರ್ವಕವೂ ಆದ ಉತ್ತರಗಳನ್ನು ಕೊಡುವ ಮೂಲಕ ಕೂಟದಲ್ಲಿ ಭಾಗವಹಿಸುವುದಾಗಿರಬಹುದು. ನೀವು ಕಲಿತಂಥ ವಿಷಯಗಳನ್ನು ಕಾರ್ಯರೂಪಕ್ಕೆ ಹಾಕುವುದು ಸಹ ಖಂಡಿತವಾಗಿಯೂ ಮಹತ್ವದ್ದಾಗಿದೆ.​—ಫಿಲಿಪ್ಪಿ 4:9.

18. ನೀವು ಸ್ವಲ್ಪ ವಿರೋಧವನ್ನು ಅನುಭವಿಸಬಹುದಾದರೂ, ಯಾವ ವಿಷಯದಲ್ಲಿ ನೀವು ಭರವಸದಿಂದಿರಸಾಧ್ಯವಿದೆ?

18 ಯೆಹೋವನ ಸೇವೆಯಿಂದ ಬರುವ ಆಶೀರ್ವಾದಗಳೊ ಬಾಳುವಂಥವುಗಳು ಹೌದು, ಶಾಶ್ವತವಾದವು ಆಗಿವೆ. ಯೆಹೋವನ ಸಾಕ್ಷಿಗಳಲ್ಲಿ ಒಬ್ಬರಾಗಿರುವುದಕ್ಕಾಗಿ ಆಗಿಂದಾಗ್ಗೆ ನಿಮಗೆ ಸ್ವಲ್ಪ ಮಟ್ಟಿಗೆ ವಿರೋಧ ಅಥವಾ ಅಪಹಾಸ್ಯವನ್ನು ಅನುಭವಿಸಬೇಕಾದೀತು. ಆದರೆ ಮೋಶೆಯ ಕುರಿತು ಯೋಚಿಸಿರಿ. ಅವನು, “ಬರುವ ಪ್ರತಿಫಲದ ಮೇಲೆ ಕಣ್ಣಿಟ್ಟಿದ್ದನು” ಎಂದು ಬೈಬಲು ಹೇಳುತ್ತದೆ. (ಇಬ್ರಿಯ 11:​24-26) ಆತನ ಕುರಿತು ಕಲಿಯಲು ಮತ್ತು ಆತನ ಕುರಿತು ಇತರರೊಂದಿಗೆ ಮಾತನಾಡಲು ನೀವು ಮಾಡುವ ಪ್ರಯತ್ನಗಳಿಗಾಗಿ ಯೆಹೋವನು ನಿಮಗೂ ಪ್ರತಿಫಲವನ್ನು ಕೊಡುವನೆಂಬ ವಿಷಯದಲ್ಲಿ ನೀವೂ ಭರವಸದಿಂದಿರಸಾಧ್ಯವಿದೆ. ನಿಶ್ಚಯವಾಗಿಯೂ, ಆತನೆಂದಿಗೂ ನಿಮ್ಮ ‘ಕೆಲಸವನ್ನೂ ಆತನ ನಾಮದ ವಿಷಯವಾಗಿ ತೋರಿಸಿದ ಪ್ರೀತಿಯನ್ನೂ ಮರೆಯಲಾರನು.’​—ಇಬ್ರಿಯ 6:10.

[ಪಾದಟಿಪ್ಪಣಿಗಳು]

^ ಪ್ಯಾರ. 9 ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತ.

^ ಪ್ಯಾರ. 13 ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತ. ಕನ್ನಡದಲ್ಲಿ ಲಭ್ಯವಿಲ್ಲ.

ನಿಮಗೆ ನೆನಪಿದೆಯೆ?

• ಯೆಹೋವನು ನಿಮ್ಮ ಸೇವೆಯನ್ನು ಅಮೂಲ್ಯವೆಂದೆಣಿಸುತ್ತಾನೆಂಬ ನಿಶ್ಚಯ ನಿಮಗಿರಬಲ್ಲದೇಕೆ?

• ಶಾಲೆಯಲ್ಲಿ ಸಾಕ್ಷಿಕೊಡುವ ಯಾವ ವಿಧಾನಗಳನ್ನು ಕೆಲವರು ಯಶಸ್ವಿಕರವಾಗಿ ಕಂಡುಕೊಂಡಿದ್ದಾರೆ?

• ಸಹಪಾಠಿಗಳಿಗೆ ಸಾಕ್ಷಿಕೊಡಲು ನೀವು ಹೇಗೆ ಬಲಗೊಳ್ಳಬಲ್ಲಿರಿ?

• ನೀವು ಹೇಗೆ ಯೆಹೋವನ ಸಮೀಪಕ್ಕೆ ಬರಬಲ್ಲಿರಿ?

[ಅಧ್ಯಯನ ಪ್ರಶ್ನೆಗಳು]

[ಪುಟ 20ರಲ್ಲಿರುವ ಚೌಕ/ಚಿತ್ರಗಳು]

ತೀರ ಚಿಕ್ಕ ಪ್ರಾಯದವರು ಸಹ ಯೆಹೋವನನ್ನು ಸ್ತುತಿಸುತ್ತಾರೆ!

ಹದಿಪ್ರಾಯಕ್ಕಿಂತ ಚಿಕ್ಕ ವಯಸ್ಸಿನವರು ಸಹ ಶಾಲೆಯಲ್ಲಿ ಸಾಕ್ಷಿಯನ್ನು ಕೊಡಲು ಶಕ್ತರಾಗಿದ್ದಾರೆ. ಈ ಅನುಭವಗಳನ್ನು ಪರಿಗಣಿಸಿರಿ.

ಹತ್ತು ವರ್ಷ ಪ್ರಾಯದ ಆ್ಯಂಬರ್‌ ಐದನೆಯ ತರಗತಿಯಲ್ಲಿ ಓದುತ್ತಿದ್ದಳು. ಅವಳ ತರಗತಿಯು, IIನೆಯ ಲೋಕ ಯುದ್ಧದ ಸಮಯದಲ್ಲಿ ಯೆಹೂದ್ಯರ ಮೇಲೆ ನಾಸಿಗಳು ಮಾಡಿದ್ದ ಆಕ್ರಮಣದ ಕುರಿತ ಒಂದು ಪುಸ್ತಕವನ್ನು ಓದುತ್ತಿತ್ತು. ಕೆನ್ನೀಲಿ ತ್ರಿಕೋನಗಳು (ಇಂಗ್ಲಿಷ್‌) ಎಂಬ ವಿಡಿಯೋವನ್ನು ತನ್ನ ಶಿಕ್ಷಕಿಗಾಗಿ ತರಲು ಆ್ಯಂಬರ್‌ ನಿರ್ಣಯಿಸಿದಳು. ನಾಸಿ ಆಳಿಕೆಯ ಕೆಳಗೆ ಯೆಹೋವನ ಸಾಕ್ಷಿಗಳು ಸಹ ಹಿಂಸಿಸಲ್ಪಟ್ಟಿದ್ದರೆಂದು ತಿಳಿದು, ಶಿಕ್ಷಕಿಗೆ ಆಶ್ಚರ್ಯವಾಯಿತು. ಇಡೀ ಕ್ಲಾಸಿಗೆ ಆ ವಿಡಿಯೋವನ್ನು ಶಿಕ್ಷಕಿಯು ತೋರಿಸಿದಳು.

ಎಂಟು ವರ್ಷ ಪ್ರಾಯದ ಅಲೆಕ್ಸ ತನ್ನ ಕ್ಲಾಸಿಗೆ ಪತ್ರ ಬರೆಯುತ್ತಾ, ತಾನು ಅವರ ಕ್ರಿಸ್‌ಮಸ್‌ ಪಾರ್ಟಿಯಲ್ಲಿ ಏಕೆ ಭಾಗವಹಿಸಲಾರೆನೆಂದು ವಿವರಿಸಿದಳು. ಶಿಕ್ಷಕಿಯು ಎಷ್ಟು ಪ್ರಭಾವಿತಳಾದಳೆಂದರೆ, ಅವಳ ಸ್ವಂತ ಕ್ಲಾಸಿಗೆ ಮತ್ತು ಬೇರೆ ಎರಡು ಕ್ಲಾಸುಗಳಿಗೂ, ಅಲೆಕ್ಸ ತನ್ನ ಪತ್ರವನ್ನು ಗಟ್ಟಿಯಾಗಿ ಓದಿಹೇಳುವಂತೆ ಮಾಡಿದಳು! “ಯಾರ ನಂಬಿಕೆಗಳು ನನ್ನದಕ್ಕಿಂತ ಭಿನ್ನವಾಗಿವೆಯೊ ಅವರನ್ನು ಗೌರವದಿಂದ ನೋಡುವಂತೆ ನನಗೆ ಕಲಿಸಲಾಗಿದೆ ಮತ್ತು ಕ್ರಿಸ್‌ಮಸ್‌ ಆಚರಿಸದಿರುವ ನನ್ನ ನಿರ್ಣಯವನ್ನು ನೀವು ಗೌರವಿಸಿದಕ್ಕಾಗಿ ನಾನು ಉಪಕಾರ ಹೇಳುತ್ತೇನೆ” ಎಂದು ಕೊನೆಯಲ್ಲಿ ಹೇಳಿದಳು ಅಲೆಕ್ಸ.

ಒಂದನೇ ತರಗತಿಯಲ್ಲಿ ಕಲಿಯುತ್ತಿದ್ದ ಎರಿಕ್‌, ಬೈಬಲ್‌ ಕಥೆಗಳ ನನ್ನ ಪುಸ್ತಕವನ್ನು ಶಾಲೆಗೆ ಒಯ್ದು ತನ್ನ ಸಹಪಾಠಿಗಳಿಗೆ ಅದನ್ನು ತೋರಿಸುವುದಕ್ಕೆ ಅನುಮತಿ ಕೇಳಿದ. “ಅದಕ್ಕಿಂತ ಒಳ್ಳೆಯ ಉಪಾಯವನ್ನು ಹೇಳುತ್ತೇನೆ” ಎಂದರು ಶಿಕ್ಷಕಿ. “ಅದರ ಒಂದು ಕಥೆಯನ್ನು ಕ್ಲಾಸಿಗೆ ಏಕೆ ಓದಿಹೇಳಬಾರದು?” ಎರಿಕ್‌ ಓದಿಹೇಳಿದ. ಅನಂತರ ಯಾರಿಗೆಲ್ಲಾ ಆ ಪುಸ್ತಕ ಬೇಕೊ ಅವರು ಕೈ ಎತ್ತುವಂತೆ ಆಮಂತ್ರಿಸಿದ. ಶಿಕ್ಷಕಿಯನ್ನು ಒಳಗೊಂಡು ಹದಿನೆಂಟು ಮಂದಿ ಕೈಯೆತ್ತಿದರು! ತನಗೆ ಸಾಕ್ಷಿಕೊಡಲು ತನ್ನ ಸ್ವಂತ ವಿಶೇಷ ಟೆರಿಟೊರಿಯು ಇದೆಯೆಂದು ಎರಿಕ್‌ ಈಗ ಭಾವಿಸುತ್ತಾನೆ.

ಒಂಬತ್ತು ವರ್ಷ ಪ್ರಾಯದ ವಿಟ್ನಿ, ಯೆಹೋವನ ಸಾಕ್ಷಿಗಳು ಮತ್ತು ಶಿಕ್ಷಣ * ಎಂಬ ಬ್ರೋಷರ್‌ಗಾಗಿ ಕೃತಜ್ಞಳಾಗಿದ್ದಾಳೆ. “ನನ್ನ ಅಮ್ಮ ಈ ಬ್ರೋಷರನ್ನು ಸಾಮಾನ್ಯವಾಗಿ ಪ್ರತಿ ವರ್ಷ ಶಿಕ್ಷಕಿಯರಿಗೆ ಕೊಡುತ್ತಾರೆ. ಆದರೆ ಈ ವರ್ಷ ಮಾತ್ರ ನಾನೇ ಅದನ್ನು ಕೊಟ್ಟೆ. ಆ ಬ್ರೋಷರ್‌ನಿಂದಾಗಿ ನನ್ನ ಶಿಕ್ಷಕಿ ‘ವಾರದ ಉತ್ತಮ ವಿದ್ಯಾರ್ಥಿ’ಯ ಹುದ್ದೆಗೆ ನನ್ನನ್ನು ನಮೂದಿಸಿದರು.”

[ಪಾದಟಿಪ್ಪಣಿ]

^ ಪ್ಯಾರ. 56 ಸೂಚಿಸಲ್ಪಟ್ಟಿರುವ ಎಲ್ಲ ಪ್ರಕಾಶನಗಳು ಯೆಹೋವನ ಸಾಕ್ಷಿಗಳಿಂದ ತಯಾರಿಸಲ್ಪಟ್ಟವು.

[ಪುಟ 21ರಲ್ಲಿರುವ ಚೌಕ/ಚಿತ್ರಗಳು]

ತಮ್ಮ ನಂಬಿಕೆಯ ಬಗ್ಗೆ ಮಾತಾಡಲು ಕೆಲವರು ಬಳಸಿಕೊಂಡಿರುವ ಸನ್ನಿವೇಶಗಳು

ಒಂದು ಶಾಲಾ ವರದಿಯನ್ನು ಅಥವಾ ಪ್ರಾಜೆಕ್ಟ್‌ ಅನ್ನು ತಯಾರಿಸಲು ನೇಮಿಸಲ್ಪಟ್ಟಾಗ, ಕೆಲವರು ಒಂದು ಸಾಕ್ಷಿಯನ್ನು ಕೊಡಲು ಸಾಧ್ಯವಾಗುವ ವಿಷಯವನ್ನು ಆರಿಸಿಕೊಂಡಿದ್ದಾರೆ

ಹಲವಾರು ಯುವ ಜನರು ತರಗತಿಯಲ್ಲಿ ಚರ್ಚಿಸಲ್ಪಡುವ ವಿಷಯಕ್ಕೆ ಸಂಬಂಧಿಸುವ ಒಂದು ವಿಡಿಯೋ ಅಥವಾ ಒಂದು ಪ್ರಕಾಶನವನ್ನು ತಮ್ಮ ಶಿಕ್ಷಕರಿಗೆ ನೀಡಿದ್ದಾರೆ

ಕೆಲವು ಯುವ ಜನರು ವಿರಾಮ ಸಮಯದಲ್ಲಿ ಬೈಬಲನ್ನೊ, ಬೈಬಲಾಧಾರಿತ ಪ್ರಕಾಶನವನ್ನೊ ಓದುತ್ತಿದ್ದಾಗ, ಇತರ ಯುವ ಜನರು ಅವರ ಬಳಿ ಬಂದು ಪ್ರಶ್ನೆಗಳನ್ನು ಕೇಳಿದ್ದಾರೆ

[ಪುಟ 18ರಲ್ಲಿರುವ ಚಿತ್ರ]

ಅನುಭವಸ್ಥರು ಯುವ ಜನರಿಗೆ ಯೆಹೋವನನ್ನು ಸೇವಿಸಲು ತರಬೇತು ಕೊಡಸಾಧ್ಯವಿದೆ