ಕೀರ್ತನೆ 31:1-24

  • ಯೆಹೋವನಲ್ಲಿ ಆಶ್ರಯ ಪಡಿಯೋದು

    • “ನಾನು ನನ್ನ ಜೀವವನ್ನ ನಿನ್ನ ಕೈಗೆ ಒಪ್ಪಿಸಿದ್ದೀನಿ” (5)

    • ‘ಯೆಹೋವ, ಸತ್ಯದ ದೇವರು’ (5)

    • ದೇವರ ಒಳ್ಳೇತನ ಎಷ್ಟೋ ಅಪಾರ (19)

ಗಾಯಕರ ನಿರ್ದೇಶಕನಿಗೆ ಸೂಚನೆ: ದಾವೀದನ ಮಧುರ ಗೀತೆ. 31  ಯೆಹೋವನೇ, ನಾನು ನಿನ್ನಲ್ಲಿ ಆಶ್ರಯ ಪಡ್ಕೊಂಡಿದ್ದೀನಿ.+ ಯಾವತ್ತೂ ನನಗೆ ಅವಮಾನ ಆಗದೆ ಇರೋ ತರ ನೋಡ್ಕೊ.+ ನಿನ್ನ ನೀತಿಯ ಕಾರಣ ನನ್ನನ್ನ ಕಾಪಾಡು.+  2  ನಾನು ಹೇಳೋದನ್ನ ಬಗ್ಗಿ ಕೇಳಿಸ್ಕೊ. ತಕ್ಷಣ ಬಂದು ನನ್ನನ್ನ ರಕ್ಷಿಸು.+ ನನಗಾಗಿ ಬೆಟ್ಟದ ಭದ್ರಕೋಟೆ ಆಗು, ನನ್ನನ್ನ ರಕ್ಷಿಸೋಕೆ ಸುರಕ್ಷಿತ ಸ್ಥಳ ಆಗು.+  3  ಯಾಕಂದ್ರೆ ನೀನು ನನ್ನ ಕಡಿದಾದ ಬಂಡೆ, ನನ್ನ ಭದ್ರಕೋಟೆ.+ ನಿನ್ನ ಹೆಸ್ರಿಗೆ ತಕ್ಕ ಹಾಗೆ+ ನೀನು ನನ್ನನ್ನ ನಡಿಸ್ತೀಯ, ಮಾರ್ಗದರ್ಶಿಸ್ತೀಯ.+  4  ಶತ್ರುಗಳು ನನ್ನನ್ನ ಬೀಳಿಸೋಕೆ ಬಚ್ಚಿಟ್ಟಿರೋ ಬಲೆಯಿಂದ ನೀನು ನನ್ನನ್ನ ಬಿಡಿಸ್ತೀಯ,+ಯಾಕಂದ್ರೆ ನೀನೇ ನನ್ನ ಕೋಟೆ.+  5  ನಾನು ನನ್ನ ಜೀವವನ್ನ ನಿನ್ನ ಕೈಗೆ ಒಪ್ಪಿಸಿದ್ದೀನಿ.+ ಯೆಹೋವನೇ, ಸತ್ಯದ ದೇವರೇ*+ ನೀನು ನನ್ನನ್ನ ಬಿಡಿಸಿದ್ದೀಯ.  6  ಯಾವ ಪ್ರಯೋಜನಕ್ಕೂ ಬರದ ವ್ಯರ್ಥ ಮೂರ್ತಿಗಳನ್ನ ಆರಾಧಿಸೋರನ್ನ ನಾನು ದ್ವೇಷಿಸ್ತೀನಿ. ಆದ್ರೆ ನಾನು ಯೆಹೋವನಲ್ಲೇ ಭರವಸೆ ಇಟ್ಟಿದ್ದೀನಿ.  7  ನಿನ್ನ ಶಾಶ್ವತ ಪ್ರೀತಿಯಿಂದ ನನಗೆ ತುಂಬ ಖುಷಿಯಾಗುತ್ತೆ,ಯಾಕಂದ್ರೆ ನನ್ನ ಸಂಕಟವನ್ನ ನೀನು ನೋಡಿದ್ದೀಯ,+ನನ್ನ ಮನದಾಳದ ಯಾತನೆಯನ್ನ ನೀನು ತಿಳ್ಕೊಂಡಿದ್ದೀಯ.  8  ನೀನು ನನ್ನನ್ನ ಶತ್ರುವಿನ ಕೈಗೆ ಒಪ್ಪಿಸದೆ,ಸುರಕ್ಷಿತ ಜಾಗದಲ್ಲಿ* ನಿಲ್ಲಿಸಿದ್ದೀಯ.  9  ಯೆಹೋವನೇ, ನಾನು ತುಂಬ ಕಷ್ಟದಲ್ಲಿದ್ದೀನಿ. ನನಗೆ ದಯೆ ತೋರಿಸು. ಕಡುಸಂಕಟದಿಂದ ನನಗೆ ಕಣ್ಣೇ ಬಿಡಕ್ಕಾಗ್ತಿಲ್ಲ,+ ನನ್ನ ದೇಹದಲ್ಲಿ ಶಕ್ತಿನೇ ಇಲ್ಲ.+ 10  ದುಃಖದಿಂದ ನನ್ನ ಜೀವ ಇಂಗಿಹೋಗಿದೆ,+ಕೊರಗ್ತಾ ಕೊರಗ್ತಾ ನನ್ನ ಆಯಸ್ಸು ಆವಿಯಾಗ್ತಿದೆ.+ ನನ್ನ ತಪ್ಪಿಂದಾಗಿ ನನ್ನ ಬಲ ಕುಗ್ಗಿಹೋಗ್ತಿದೆ,ನನ್ನ ಎಲುಬು ಸವೆದುಹೋಗ್ತಿದೆ.+ 11  ನನ್ನ ಎಲ್ಲ ಶತ್ರುಗಳು,ವಿಶೇಷವಾಗಿ ನನ್ನ ಪರಿಚಿತರೇ ನನ್ನನ್ನ ಕೀಳಾಗಿ ನೋಡ್ತಿದ್ದಾರೆ.+ ನನ್ನ ಆಪ್ತರೇ ನನ್ನನ್ನ ನೋಡಿ ಭಯಪಡ್ತಾರೆ,ನನ್ನನ್ನ ದಾರಿಯಲ್ಲಿ ನೋಡಿದ್ರೆ ಸಾಕು ಅವರು ನನ್ನಿಂದ ದೂರ ಓಡಿಹೋಗ್ತಾರೆ.+ 12  ಸತ್ತವನನ್ನ ಮರೆಯೋ ತರ ಅವರು ನನ್ನನ್ನ ಮರೆತಿದ್ದಾರೆ, ಅವ್ರ ಹೃದಯದಿಂದ* ನನ್ನನ್ನ ತೆಗೆದುಹಾಕಿದ್ದಾರೆ. ನಾನು ಒಡೆದ ಮಡಿಕೆ ತರ ಇದ್ದೀನಿ. 13  ನಾನು ನನ್ನ ಬಗ್ಗೆ ಸಿಕ್ಕಾಪಟ್ಟೆ ಕೆಟ್ಟ ಗಾಳಿಸುದ್ದಿಗಳನ್ನ ಕೇಳಿಸ್ಕೊಂಡಿದ್ದೀನಿ,ಆತಂಕ ನನ್ನನ್ನ ಸುತ್ಕೊಂಡಿದೆ.+ ಅವ್ರೆಲ್ಲ ನನ್ನ ವಿರುದ್ಧ ಸೇರಿದಾಗ,ನನ್ನ ಪ್ರಾಣ ತೆಗೀಬೇಕು ಅಂತ ಹೊಂಚುಹಾಕ್ತಾರೆ.+ 14  ಆದ್ರೆ ಯೆಹೋವನೇ, ನಾನು ನಿನ್ನಲ್ಲಿ ಭರವಸೆ ಇಟ್ಟಿದ್ದೀನಿ.+ “ನೀನೇ ನನ್ನ ದೇವರು” ಅಂತ ಜೋರಾಗಿ ಹೇಳ್ತೀನಿ.+ 15  ನನ್ನ ಜೀವ* ನಿನ್ನ ಕೈಯಲ್ಲಿದೆ. ನನ್ನ ಶತ್ರುಗಳ ಕೈಯಿಂದ, ನನಗೆ ಹಿಂಸೆ ಕೊಡೋರ ಕೈಯಿಂದ ನನ್ನನ್ನ ಬಿಡಿಸು.+ 16  ನಿನ್ನ ಸೇವಕನ ಕಡೆ ತಿರುಗಿ ನೀನು ನಕ್ಕರೆ ಸಾಕು.+ ನಿನ್ನ ಶಾಶ್ವತ ಪ್ರೀತಿಯಿಂದ ನನ್ನನ್ನ ಕಾಪಾಡು. 17  ಯೆಹೋವನೇ, ನಾನು ನಿನಗೆ ಮೊರೆ ಇಡ್ತೀನಿ, ನನಗೆ ಅವಮಾನ ಆಗದ ಹಾಗೆ ನೋಡ್ಕೋ.+ ಕೆಟ್ಟವರಿಗೆ ಅವಮಾನ ಆಗಲಿ,+ ಸಮಾಧಿಯಲ್ಲಿ* ಬಾಯಿ ಮುಚ್ಕೊಂಡಿರಲಿ.+ 18  ಸುಳ್ಳು ಹೇಳೋ ಬಾಯಿ* ಮೂಕ ಆಗಲಿ,+ಅದು ಜಂಬದಿಂದ, ದ್ವೇಷಿಸ್ತಾ ನೀತಿವಂತನ ವಿರುದ್ಧ ಸೊಕ್ಕಿಂದ ಮಾತಾಡುತ್ತೆ. 19  ನಿನ್ನ ಒಳ್ಳೇತನ ಎಷ್ಟೋ ಅಪಾರ!+ ನಿನ್ನ ಮೇಲೆ ಭಯಭಕ್ತಿ ಇರೋರಿಗೆ ನೀನು ಅದನ್ನ ಕೂಡಿಸಿಟ್ಟಿದ್ದೀಯ,+ನೀನು ಎಲ್ಲ ಜನ್ರ ಮುಂದೆ, ನಿನ್ನನ್ನ ಆಶ್ರಯ ಮಾಡ್ಕೊಂಡವ್ರಿಗೆ ಅದನ್ನ ತೋರಿಸಿದ್ದೀಯ.+ 20  ಜನ್ರ ಸಂಚಿನಿಂದ ಕಾಪಾಡೋಕೆ,ನೀನು ಅವ್ರನ್ನ ನಿನ್ನ ಸನ್ನಿಧಿಯಲ್ಲಿ ಬಚ್ಚಿಡ್ತೀಯ,+ಪ್ರಾಣ ತೆಗಿಯೋ ದಾಳಿಯಿಂದ* ರಕ್ಷಿಸೋಕೆ,ಅವ್ರನ್ನ ನಿನ್ನ ಆಸರೆಯಲ್ಲಿ ಮರೆಮಾಡ್ತೀಯ.+ 21  ಯೆಹೋವನಿಗೆ ಹೊಗಳಿಕೆ ಸಿಗಲಿ,ಯಾಕಂದ್ರೆ ಮುತ್ತಿಗೆ ಹಾಕಿದ್ದ ಪಟ್ಟಣದಲ್ಲಿ+ ನಾನಿದ್ದಾಗ, ಆತನು ತನ್ನ ಶಾಶ್ವತ ಪ್ರೀತಿಯನ್ನ ನನಗೆ ಅದ್ಭುತವಾಗಿ ತೋರಿಸಿದ್ದಾನೆ.+ 22  ನಾನು ತುಂಬ ಹೆದರಿಹೋದೆ,“ಅವರು ನನ್ನನ್ನ ಸಾಯಿಸಿಬಿಡ್ತಾರೆ” ಅಂದ್ಕೊಂಡೆ.+ ಆದ್ರೆ ನಾನು ಸಹಾಯಕ್ಕಾಗಿ ಮೊರೆಯಿಟ್ಟಾಗ ನೀನು ಅದನ್ನ ಕೇಳಿಸ್ಕೊಂಡೆ.+ 23  ಯೆಹೋವನಿಗೆ ನಿಷ್ಠೆ ತೋರಿಸೋರೇ ಆತನನ್ನ ಪ್ರೀತಿಸಿ!+ ಯೆಹೋವ ನಂಬಿಗಸ್ತರನ್ನ ಕಾಪಾಡ್ತಾನೆ,+ಆದ್ರೆ ಜಂಬದಿಂದ ಮೆರೆಯೋರನ್ನ ಕಠಿಣವಾಗಿ ಶಿಕ್ಷಿಸ್ತಾನೆ.+ 24  ಯೆಹೋವನಿಗಾಗಿ ತಾಳ್ಮೆಯಿಂದ ಕಾಯ್ತಿರೋರೇ+ ನೀವೆಲ್ಲ ಧೈರ್ಯವಾಗಿರಿ, ದೃಢವಾಗಿರಿ.*+

ಪಾದಟಿಪ್ಪಣಿ

ಅಥವಾ “ನಂಬಿಗಸ್ತ ದೇವರೇ.”
ಅಥವಾ “ವಿಶಾಲವಾದ ಸ್ಥಳದಲ್ಲಿ.”
ಅಥವಾ “ಮನಸ್ಸಿಂದ.”
ಅಕ್ಷ. “ನನ್ನ ದಿನಗಳು.”
ಅಕ್ಷ. “ತುಟಿಗಳು.”
ಅಕ್ಷ. “ನಾಲಿಗೆಗಳ ಜಗಳದಿಂದ.”
ಅಥವಾ “ನಿಮ್ಮ ಹೃದಯ ಬಲವಾಗಿರಲಿ.”