ವಿಮೋಚನಕಾಂಡ 22:1-31

 • ಇಸ್ರಾಯೇಲ್ಯರಿಗೆ ಕೊಟ್ಟ ತೀರ್ಪುಗಳು (1-31)

  • ಕಳ್ಳತನದ ಬಗ್ಗೆ (1-4)

  • ಬೆಳೆ ಹಾನಿಯಾದ್ರೆ (5, 6)

  • ನಷ್ಟಭರ್ತಿ ಮತ್ತು ಯಜಮಾನನ ಬಗ್ಗೆ (7-15)

  • ಒಬ್ಬಳಿಗೆ ಮೋಸಮಾಡಿ ಲೈಂಗಿಕ ಸಂಬಂಧ ಇಟ್ಕೊಂಡ್ರೆ (16, 17)

  • ಆರಾಧನೆ ಬಗ್ಗೆ, ಅನ್ಯಾಯ ಮಾಡಬಾರದು ಅನ್ನೋದ್ರ ಬಗ್ಗೆ (18-31)

22  “ಒಬ್ಬ ಒಂದು ಹೋರಿ ಅಥವಾ ಕುರಿನ ಕದ್ದು ಅದನ್ನ ಕಡಿದ್ರೆ ಅಥವಾ ಮಾರಿದ್ರೆ ಆ ಒಂದು ಹೋರಿಗೆ ಐದು ಹೋರಿಗಳನ್ನ, ಒಂದು ಕುರಿಗೆ ನಾಲ್ಕು ಕುರಿಗಳನ್ನ ಕೊಟ್ಟು ನಷ್ಟಭರ್ತಿ ಮಾಡಬೇಕು.+  (ಕಳ್ಳ+ ರಾತ್ರಿ ಕದಿಯೋಕೆ ಮನೆಯೊಳಗೆ ನುಗ್ಗುವಾಗ್ಲೇ ಯಾರಾದ್ರೂ ಹೊಡೆದು ಅವನು ಸತ್ತರೆ ಹೊಡೆದವನು ಕೊಲೆಗಾರ ಆಗಲ್ಲ.  ಆದ್ರೆ ಸೂರ್ಯ ಹುಟ್ಟಿದ ಮೇಲೆ ಹೀಗೆ ನಡೆದ್ರೆ ಹೊಡೆದವನು ಕೊಲೆಗಾರ ಆಗ್ತಾನೆ.) ಕಳ್ಳ ನಷ್ಟಭರ್ತಿ ಮಾಡ್ಲೇಬೇಕು. ಅವನ ಹತ್ರ ಏನೂ ಇಲ್ಲದಿದ್ರೆ ಕದ್ದ ವಸ್ತುಗಳ ನಷ್ಟಭರ್ತಿ ಮಾಡೋ ತನಕ ದಾಸನಾಗಿರೋಕೆ ಅವನನ್ನ ಮಾರಬೇಕು.  ಅವನು ಕದ್ದ ಹೋರಿಯಾಗ್ಲಿ ಕತ್ತೆಯಾಗ್ಲಿ ಕುರಿಯಾಗ್ಲಿ ಅವನ ಹತ್ರ ಜೀವಂತ ಸಿಕ್ಕಿದ್ರೆ ಅವನು ಅದ್ರ ಎರಡು ಪಟ್ಟು ವಾಪಸ್‌ ಕೊಡಬೇಕು.  ಒಬ್ಬ ತನ್ನ ಪ್ರಾಣಿಗಳನ್ನ ಹೊಲದಲ್ಲಿ ಅಥವಾ ದ್ರಾಕ್ಷಿತೋಟದಲ್ಲಿ ಮೇಯಿಸೋವಾಗ ಅವುಗಳನ್ನ ಬೇರೆಯವರ ಹೊಲದಲ್ಲಿ ಮೇಯೋಕೆ ಬಿಟ್ರೆ ಅವನು ತನ್ನ ಹೊಲದ ಅಥವಾ ದಾಕ್ಷಿತೋಟದ ಒಳ್ಳೇ ಬೆಳೆ ಕೊಟ್ಟು ನಷ್ಟಭರ್ತಿ ಮಾಡಬೇಕು.  ಒಬ್ಬ ಹೊತ್ತಿಸಿದ ಬೆಂಕಿ ಮುಳ್ಳಿನ ಪೊದೆಗಳಿಗೆ ತಗಲಿ ಬೇರೆಯವನ ಹೊಲದಲ್ಲಿರೋ ಸಿವುಡುಗಳನ್ನ, ಕೊಯ್ಲಿಗೆ ಸಿದ್ಧವಾಗಿರೋ ತೆನೆಗಳನ್ನ ಅಥವಾ ಇಡೀ ಹೊಲನ ಸುಟ್ಟುಬಿಟ್ರೆ ಬೆಂಕಿ ಹೊತ್ತಿಸಿದವನು ಸುಟ್ಟುಹೋಗಿರೋದರ ನಷ್ಟಭರ್ತಿ ಮಾಡಬೇಕು.  ಒಬ್ಬ ತನ್ನ ಹಣ ಅಥವಾ ವಸ್ತುಗಳನ್ನ ಸುರಕ್ಷಿತವಾಗಿ ಇಡೋಕಂತ ಇನ್ನೊಬ್ಬನಿಗೆ ಕೊಟ್ಟಾಗ ಅವು ಅವನ ಮನೆಯಿಂದ ಕಳವಾದ್ರೆ ಮತ್ತು ಕಳ್ಳ ಸಿಕ್ಕಿದ್ರೆ ಆ ಕಳ್ಳ ತಾನು ಕದ್ದದ್ರ ಎರಡುಪಟ್ಟು ವಾಪಸ್‌ ಕೊಡಬೇಕು.+  ಕಳ್ಳ ಸಿಗದೆ ಹೋದ್ರೆ ಮನೆ ಯಜಮಾನನೇ ಅವುಗಳನ್ನ ಕದ್ದಿದ್ದಾನಾ ಇಲ್ವಾ ಅಂತ ಕಂಡುಹಿಡಿಯೋಕೆ ಅವನನ್ನ ಸತ್ಯದೇವರ ಮುಂದೆ+ ಕರ್ಕೊಂಡು ಬರಬೇಕು.  ಕಳೆದು ಹೋದ ತನ್ನ ಹೋರಿ, ಕತ್ತೆ, ಕುರಿ, ಬಟ್ಟೆ ಅಥವಾ ಬೇರೆ ಯಾವುದೇ ವಸ್ತು ಇನ್ನೊಬ್ಬನ ಹತ್ರ ಇರೋದನ್ನ ನೋಡಿ ‘ಇದು ನಂದು’ ಅಂತ ಹೇಳಿದಾಗ ಅವರಿಬ್ರ ಮಧ್ಯ ಜಗಳ ಆದ್ರೆ ಅವರ ಸಮಸ್ಯೆಯನ್ನ ಸತ್ಯದೇವರ ಮುಂದೆ ತರಬೇಕು.+ ಆಗ ದೇವರು ಯಾರು ತಪ್ಪು ಅಂತ ಹೇಳ್ತಾನೋ ಅವನು ಅದ್ರ ಎರಡುಪಟ್ಟು ಇನ್ನೊಬ್ಬನಿಗೆ ಕೊಡಬೇಕು.+ 10  ಒಬ್ಬ ತನ್ನ ಕತ್ತೆ, ಹೋರಿ, ಕುರಿ ಅಥವಾ ಬೇರೆ ಯಾವುದೇ ಸಾಕುಪ್ರಾಣಿಯನ್ನ ಸ್ವಲ್ಪ ಸಮಯ ನೋಡ್ಕೊಳ್ಳೋಕೆ ಇನ್ನೊಬ್ಬನಿಗೆ ಕೊಟ್ಟಾಗ ಆ ಪ್ರಾಣಿ ಸತ್ತರೆ, ಊನವಾದ್ರೆ ಅಥವಾ ಯಾರೂ ನೋಡದಿದ್ದಾಗ ಬೇರೆಯವರು ಅದನ್ನ ಹೊಡ್ಕೊಂಡು ಹೋದ್ರೆ 11  ಆ ಪ್ರಾಣಿನ ನೋಡ್ಕೊಳ್ತಿದ್ದವನು ತಾನು ಅದನ್ನ ಕದ್ದಿಲ್ಲ ಅಂತ ಯೆಹೋವನ ಮುಂದೆ ಆಣೆ ಮಾಡಬೇಕು. ಆ ಮಾತನ್ನ ಪ್ರಾಣಿಯ ಯಜಮಾನ ಒಪ್ಕೊಳ್ಳಬೇಕು. ಆಗ ಆಣೆ ಮಾಡಿದವನು ನಷ್ಟಭರ್ತಿ ಮಾಡಬೇಕಾಗಿಲ್ಲ.+ 12  ಆದ್ರೆ ಆ ಪ್ರಾಣಿ ಅವನ ಬೇಜವಾಬ್ದಾರಿಯಿಂದ ಕಳವಾಗಿ ಹೋದ್ರೆ ಅವನು ಅದ್ರ ಯಜಮಾನನಿಗೆ ನಷ್ಟಭರ್ತಿ ಮಾಡಬೇಕು. 13  ಯಾವುದಾದ್ರೂ ಕಾಡುಪ್ರಾಣಿ ಅದನ್ನ ಸೀಳಿಹಾಕಿದ್ರೆ ಅವನು ಅದ್ರ ಉಳಿದ ಭಾಗವನ್ನ ಸಾಕ್ಷಿಯಾಗಿ ತಂದು ತೋರಿಸಬೇಕು. ಕಾಡುಪ್ರಾಣಿ ಕೊಂದದ್ದಕ್ಕೆ ಅವನು ನಷ್ಟಭರ್ತಿ ಮಾಡಬೇಕಾಗಿಲ್ಲ. 14  ಆದ್ರೆ ಒಬ್ಬ ಇನ್ನೊಬ್ಬನಿಂದ ಒಂದು ಪ್ರಾಣಿಯನ್ನ ಸ್ವಲ್ಪ ಸಮಯಕ್ಕಂತ ತಗೊಂಡು ಹೋದಾಗ, ಆ ಪ್ರಾಣಿಯ ಯಜಮಾನ ಇಲ್ಲದಿದ್ದಾಗ ಅದು ಊನವಾದ್ರೆ ಅಥವಾ ಸತ್ತುಹೋದ್ರೆ ಆ ಪ್ರಾಣಿನ ತಗೊಂಡವನು ನಷ್ಟಭರ್ತಿ ಮಾಡಬೇಕು. 15  ಒಂದುವೇಳೆ ಆ ಸಂದರ್ಭದಲ್ಲಿ ಪ್ರಾಣಿಯ ಯಜಮಾನ ಅಲ್ಲೇ ಇದ್ರೆ ನಷ್ಟಭರ್ತಿ ಮಾಡಬೇಕಾಗಿಲ್ಲ. ಆ ಪ್ರಾಣಿಯನ್ನ ಬಾಡಿಗೆಗೆ ತಗೊಂಡು ಹೋಗಿದ್ರೆ ಅದಕ್ಕಾಗಿ ಕೊಟ್ಟ ಬಾಡಿಗೆಯನ್ನೇ ನಷ್ಟಭರ್ತಿ ಅಂತ ನೆನಸಬೇಕು. 16  ಇನ್ನೂ ಮದುವೆ ನಿಶ್ಚಯ ಆಗದಿರೋ ಕನ್ಯೆನ ಒಬ್ಬ ಪುಸಲಾಯಿಸಿ ಅವಳ ಜೊತೆ ಸಂಬಂಧ ಇಟ್ಕೊಂಡ್ರೆ ಅವನು ವಧುದಕ್ಷಿಣೆ ಕೊಟ್ಟು ಅವಳನ್ನ ಮದುವೆ ಆಗಬೇಕು.+ 17  ಒಂದುವೇಳೆ ಅವಳ ತಂದೆ ಅವಳನ್ನ ಅವನಿಗೆ ಕೊಡೋದೇ ಇಲ್ಲ ಅಂತ ಖಂಡಿತವಾಗಿ ಹೇಳಿದ್ರೆ ಅವನು ವಧುದಕ್ಷಿಣೆಗೆ ಕೊಡುವಷ್ಟೇ ಹಣ ಕೊಡಬೇಕು. 18  ನೀವು ಮಾಟಗಾತಿಯನ್ನ ಜೀವಂತ ಉಳಿಸಬಾರದು.+ 19  ಪ್ರಾಣಿಗಳ ಜೊತೆ ಸಂಭೋಗ ಮಾಡಿದವನನ್ನ ಸಾಯಿಸ್ಲೇಬೇಕು.+ 20  ಯೆಹೋವನಿಗಲ್ಲದೆ ಬೇರೆ ದೇವರಿಗೆ ಬಲಿ ಅರ್ಪಿಸೋ ವ್ಯಕ್ತಿಯನ್ನ ನಾಶ ಮಾಡಬೇಕು.+ 21  ನೀವು ವಿದೇಶಿ ಜೊತೆ ಕೆಟ್ಟದಾಗಿ ವರ್ತಿಸಬಾರದು, ಅವನನ್ನ ಪೀಡಿಸಲೂಬಾರದು.+ ಯಾಕಂದ್ರೆ ನೀವು ಸಹ ಈಜಿಪ್ಟ್‌ ದೇಶದಲ್ಲಿ ವಿದೇಶಿಯರಾಗಿ ಇದ್ರಲ್ಲಾ.+ 22  ನೀವು ವಿಧವೆಗೆ, ಅನಾಥ* ಮಗುಗೆ ತೊಂದ್ರೆ ಕೊಡಬಾರದು.+ 23  ನೀವು ಅವರನ್ನ ಪೀಡಿಸಿ ಅವರೇನಾದ್ರೂ ನನಗೆ ಪ್ರಾರ್ಥನೆ ಮಾಡಿದ್ರೆ ನಾನು ಖಂಡಿತ ಅವರ ಪ್ರಾರ್ಥನೆ ಕೇಳ್ತೀನಿ.+ 24  ಆಗ ನನ್ನ ಕೋಪ ಹೊತ್ತಿ ಉರಿಯುತ್ತೆ, ನಿಮ್ಮನ್ನ ಕತ್ತಿಯಿಂದ ಕೊಲ್ತೀನಿ. ಇದ್ರಿಂದ ನಿಮ್ಮ ಹೆಂಡತಿಯರು ವಿಧವೆಯರಾಗ್ತಾರೆ, ನಿಮ್ಮ ಮಕ್ಕಳು ತಬ್ಬಲಿ ಆಗ್ತಾರೆ. 25  ನೀವು ನನ್ನ ಜನ್ರಲ್ಲಿ ಒಬ್ಬ ಬಡವನಿಗೆ ಸಾಲ ಕೊಟ್ರೆ ಬಡ್ಡಿ ವ್ಯವಹಾರ ಮಾಡೋರ ತರ* ಅವನ ಜೊತೆ ನಡ್ಕೊಳ್ಳಬಾರದು. ಅವನಿಂದ ಬಡ್ಡಿ ಕೇಳಬಾರದು.+ 26  ನೀವು ಇನ್ನೊಬ್ಬನಿಗೆ ಸಾಲ ಕೊಡುವಾಗ ಅವನ ಮೇಲಂಗಿನ ಅಡವು+ ಇಟ್ಕೊಂಡ್ರೆ ಸೂರ್ಯ ಮುಳುಗೋ ಮುಂಚೆ ವಾಪಸ್‌ ಕೊಡಬೇಕು. 27  ಯಾಕಂದ್ರೆ ಅವನ ಹತ್ರ ಇರೋದು ಅದೊಂದೇ ಹೊದಿಕೆ, ಅದ್ರಿಂದಾನೇ ಅವನು ತನ್ನ ದೇಹ ಮುಚ್ಕೊಳ್ತಾನೆ. ಅದಿಲ್ಲಾಂದ್ರೆ ಅವನು ಮಲಗೋದು ಹೇಗೆ?+ ನಾನು ಕನಿಕರ ತೋರಿಸೋ ದೇವರು, ಅವನು ನನಗೆ ಪ್ರಾರ್ಥನೆ ಮಾಡಿದ್ರೆ ಖಂಡಿತ ಕೇಳ್ತೀನಿ.+ 28  ನೀವು ದೇವರನ್ನ ಬೈಬಾರದು.*+ ನಿಮ್ಮ ಜನ್ರ ಪ್ರಧಾನನನ್ನ* ಸಹ ಬೈಬಾರದು.+ 29  ನಿಮಗೆ ಸಿಕ್ಕಾಪಟ್ಟೆ ಬೆಳೆ ಬೆಳೆದಾಗ, ದ್ರಾಕ್ಷಾಮದ್ಯ ಎಣ್ಣೆ ತುಂಬಿತುಳುಕಿದಾಗ ನನಗೆ ಕಾಣಿಕೆ ಅರ್ಪಿಸೋಕೆ ಹಿಂದೆಮುಂದೆ ನೋಡಬಾರದು.+ ನಿಮ್ಮ ಮೊದಲನೇ ಗಂಡುಮಗನನ್ನ ನನಗೆ ಕೊಡಬೇಕು.+ 30  ನಿಮ್ಮ ಕುರಿದನಗಳ ಮೊದಲ ಮರಿ ಹುಟ್ಟಿದ ಮೇಲೆ ಏಳು ದಿನ ತಾಯಿ ಹತ್ರಾನೇ ಇರಬೇಕು.+ ಎಂಟನೇ ದಿನ ಅದನ್ನ ನನಗೆ ಕೊಡಬೇಕು.+ 31  ನೀವು ನನಗೆ ಪವಿತ್ರ ಜನರಾಗಿ ಇರಬೇಕು.+ ಬಯಲಲ್ಲಿ ಕಾಡುಪ್ರಾಣಿ ಸೀಳಿಹಾಕಿದ ಯಾವುದರ ಮಾಂಸವನ್ನೂ ತಿನ್ನಬಾರದು.+ ಅದನ್ನ ನಾಯಿಗಳಿಗೆ ಹಾಕಬೇಕು.

ಪಾದಟಿಪ್ಪಣಿ

ಅಥವಾ “ತಂದೆ ಇಲ್ಲದ.”
ಅಥವಾ “ಜಾಸ್ತಿ ಬಡ್ಡಿಗೆ ಸಾಲ ಕೊಡುವವನ ತರ.”
ಅಥವಾ “ಶಾಪ ಹಾಕಬಾರದು.”
ಅಥವಾ “ರಾಜನನ್ನ.”