ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

‘ಶರೀರದಲ್ಲಿ ನಾಟಿರುವ ಮುಳ್ಳನ್ನು’ ಸಹಿಸಿಕೊಂಡು ಹೋಗುವುದು

‘ಶರೀರದಲ್ಲಿ ನಾಟಿರುವ ಮುಳ್ಳನ್ನು’ ಸಹಿಸಿಕೊಂಡು ಹೋಗುವುದು

‘ಶರೀರದಲ್ಲಿ ನಾಟಿರುವ ಮುಳ್ಳನ್ನು’ ಸಹಿಸಿಕೊಂಡು ಹೋಗುವುದು

“ನನ್ನ ಕೃಪೆಯೇ ನಿನಗೆ ಸಾಕು.”—2 ಕೊರಿಂಥ 12:9.

1, 2. (ಎ) ನಾವು ಪರೀಕ್ಷೆಗಳನ್ನೂ ಸಮಸ್ಯೆಗಳನ್ನೂ ಎದುರಿಸುತ್ತಿರುವುದರ ಬಗ್ಗೆ ತಬ್ಬಿಬ್ಬುಗೊಳ್ಳಬಾರದೇಕೆ? (ಬಿ) ಪರೀಕ್ಷೆಗಳ ಎದುರಿನಲ್ಲಿ ನಾವು ಏಕೆ ಭರವಸೆಯಿಂದಿರಬಲ್ಲೆವು?

“ಕ್ರಿಸ್ತ ಯೇಸುವಿನಲ್ಲಿ ಸದ್ಭಕ್ತರಾಗಿ ಜೀವಿಸುವದಕ್ಕೆ ಮನಸ್ಸು ಮಾಡುವವರೆಲ್ಲರೂ ಹಿಂಸೆಗೊಳಗಾಗುವರು.” (2 ತಿಮೊಥೆಯ 3:12) ಹೀಗೇಕೆ? ಏಕೆಂದರೆ ಮನುಷ್ಯನು ದೇವರನ್ನು ಕೇವಲ ಸ್ವಾರ್ಥ ಕಾರಣಗಳಿಗೋಸ್ಕರ ಸೇವಿಸುತ್ತಾನೆಂದು ಸೈತಾನನು ಪ್ರತಿಪಾದಿಸುತ್ತಾನೆ, ಮತ್ತು ತನ್ನ ಈ ಪ್ರತಿಪಾದನೆಯು ಸತ್ಯವೆಂದು ಸಾಧಿಸಿ ತೋರಿಸಲು ಅವನು ಏನು ಮಾಡಲೂ ಹೇಸುವುದಿಲ್ಲ. ಯೇಸು ತನ್ನ ನಂಬಿಗಸ್ತ ಅಪೊಸ್ತಲರಿಗೆ ಒಮ್ಮೆ ಹೀಗೆ ಎಚ್ಚರಿಸಿದನು: “ಸೈತಾನನು ನಿಮ್ಮನ್ನು ಗೋದಿಯಂತೆ ಒನೆಯಬೇಕೆಂದು ಅಪ್ಪಣೆ ಕೇಳಿಕೊಂಡನು.” (ಲೂಕ 22:31) ವೇದನಾಭರಿತ ಸಮಸ್ಯೆಗಳ ಮೂಲಕ ನಮ್ಮನ್ನು ಪರೀಕ್ಷಿಸುವಂತೆ ದೇವರು ಸೈತಾನನನ್ನು ಅನುಮತಿಸುತ್ತಾನೆಂದು ಯೇಸುವಿಗೆ ಚೆನ್ನಾಗಿ ತಿಳಿದಿತ್ತು. ಇದರರ್ಥ, ನಾವು ಜೀವನದಲ್ಲಿ ಎದುರಿಸುವಂಥ ಪ್ರತಿಯೊಂದು ತೊಂದರೆಯೂ ನೇರವಾಗಿ ಸೈತಾನನಿಂದ ಇಲ್ಲವೇ ಅವನ ದೆವ್ವಗಳಿಂದ ಬಂದದ್ದಾಗಿದೆ ಎಂದಲ್ಲ. (ಪ್ರಸಂಗಿ 9:11) ಆದರೆ ನಮ್ಮ ಸಮಗ್ರತೆಯನ್ನು ಮುರಿಯಲು ಸೈತಾನನು ತನ್ನಿಂದ ಸಾಧ್ಯವಿರುವ ಯಾವುದೇ ಸಾಧನವನ್ನು ಬಳಸಲು ಕಾತುರನಾಗಿದ್ದಾನೆ.

2 ನಮಗೆ ಬರುವ ಕಷ್ಟಗಳ ಕುರಿತಾಗಿ ನಾವು ತಬ್ಬಿಬ್ಬುಗೊಳ್ಳಬಾರದೆಂದು ಬೈಬಲು ನಮಗೆ ಹೇಳುತ್ತದೆ. ನಮ್ಮ ಮೇಲೆ ಏನೇ ಬಂದರೂ, ಅದು ಅಸಾಮಾನ್ಯವಾದದ್ದು ಇಲ್ಲವೇ ಅನಿರೀಕ್ಷಿತವಾದದ್ದಲ್ಲ. (1 ಪೇತ್ರ 4:​12, NW) ವಾಸ್ತವದಲ್ಲಿ, “ಲೋಕದಲ್ಲಿರುವ [ನಮ್ಮ] ಸಹೋದರರೂ ಅಂಥ ಬಾಧೆಗಳನ್ನೇ ಅನುಭವಿಸುತ್ತಿದ್ದಾರೆ.” (1 ಪೇತ್ರ 5:9) ಇಂದು ಸೈತಾನನು ದೇವರ ಪ್ರತಿಯೊಬ್ಬ ಸೇವಕನ ಮೇಲೂ ಅತೀವ ಒತ್ತಡವನ್ನು ಹಾಕುತ್ತಿದ್ದಾನೆ. ಸಾಧ್ಯವಿರುವಷ್ಟು ಹೆಚ್ಚು ಮುಳ್ಳಿನಂಥ ಸಮಸ್ಯೆಗಳಿಂದ ನಾವು ಪೀಡಿಸಲ್ಪಡುವುದನ್ನು ನೋಡಿ ಪಿಶಾಚನು ಹರ್ಷಿಸುತ್ತಾನೆ. ಇದನ್ನು ಸಾಧಿಸಲಿಕ್ಕಾಗಿ, ಅವನು ‘ನಮ್ಮ ಶರೀರದಲ್ಲಿ ನಾಟಿರುವ’ ಯಾವುದೇ ‘ಮುಳ್ಳುಗಳಿಗೆ’ ಕೂಡಿಸುವ ಇಲ್ಲವೇ ಅವುಗಳನ್ನು ಹೆಚ್ಚಿಸುವಂಥ ರೀತಿಯಲ್ಲಿ ತನ್ನ ವಿಷಯಗಳ ವ್ಯವಸ್ಥೆಯನ್ನು ಉಪಯೋಗಿಸುತ್ತಾನೆ. (2 ಕೊರಿಂಥ 12:7, NW) ಆದರೂ, ಸೈತಾನನ ದಾಳಿಗಳು ನಮ್ಮ ಸಮಗ್ರತೆಯನ್ನು ಮುರಿಯುವ ಅಗತ್ಯವಿಲ್ಲ. ಶೋಧನೆಯನ್ನು ತಾಳಿಕೊಳ್ಳುವಂತೆ ಯೆಹೋವನು ನಮಗೋಸ್ಕರ “ತಪ್ಪಿಸಿಕೊಳ್ಳುವ ಮಾರ್ಗವನ್ನು ಸಿದ್ಧಮಾಡು”ವಂತೆಯೇ, ನಮ್ಮ ಶರೀರದಲ್ಲಿ ಮುಳ್ಳುಗಳಂತಿರುವ ತೊಂದರೆಗಳನ್ನು ನಾವು ಎದುರಿಸುವಾಗಲೂ ಆತನು ಹಾಗೆಯೇ ಮಾಡುವನು.​—1 ಕೊರಿಂಥ 10:13.

ಒಂದು ಮುಳ್ಳನ್ನು ಸಹಿಸಿಕೊಳ್ಳುವ ವಿಧ

3. ತನ್ನ ಶರೀರದಲ್ಲಿರುವ ಮುಳ್ಳನ್ನು ತೆಗೆಯುವಂತೆ ಪೌಲನು ಯೆಹೋವನನ್ನು ಕೇಳಿಕೊಂಡಾಗ ಆತನು ಕೊಟ್ಟ ಉತ್ತರವೇನು?

3 ತನ್ನ ಶರೀರದಿಂದ ಆ ಮುಳ್ಳನ್ನು ತೆಗೆಯುವಂತೆ ಅಪೊಸ್ತಲ ಪೌಲನು ದೇವರನ್ನು ಬೇಡಿಕೊಂಡನು. “ಈ ಪೀಡೆಯ ವಿಷಯದಲ್ಲಿ ಅದು ನನ್ನನ್ನು ಬಿಟ್ಟುಹೋಗಬೇಕೆಂದು ಮೂರು ಸಾರಿ ಕರ್ತನನ್ನು ಬೇಡಿಕೊಂಡೆನು.” ಪೌಲನ ಈ ಉತ್ಕಟವಾದ ವಿನಂತಿಗೆ ಯೆಹೋವನ ಉತ್ತರವೇನಾಗಿತ್ತು? “ನನ್ನ ಕೃಪೆಯೇ ನಿನಗೆ ಸಾಕು; ಬಲಹೀನತೆಯಲ್ಲಿಯೇ ಬಲವು ಪೂರ್ಣಸಾಧಕವಾಗುತ್ತದೆ.” (2 ಕೊರಿಂಥ 12:8, 9) ಈ ಉತ್ತರವನ್ನು ನಾವೀಗ ಪರಿಶೀಲಿಸೋಣ ಮತ್ತು ನಮ್ಮನ್ನು ನೋಯಿಸುವಂಥ ಯಾವುದೇ ಮುಳ್ಳಿನಂಥ ಸಮಸ್ಯೆಗಳನ್ನು ನಾವು ಸಹಿಸಿಕೊಂಡು ಹೋಗುವಂತೆ ಅದು ನಮಗೆ ಹೇಗೆ ಸಹಾಯಮಾಡಬಲ್ಲದೆಂಬುದನ್ನು ನೋಡೋಣ.

4. ಪೌಲನು ಯೆಹೋವನ ಅಪಾತ್ರ ಕೃಪೆಯಿಂದ ಯಾವ ವಿಧಗಳಲ್ಲಿ ಪ್ರಯೋಜನಹೊಂದಿದ್ದನು?

4 ಕ್ರಿಸ್ತನ ಮೂಲಕ ಅವನಿಗೆ ಈಗಾಗಲೇ ತೋರಿಸಲ್ಪಟ್ಟಿದ್ದ ಕೃಪೆಗಾಗಿ ಕೃತಜ್ಞನಾಗಿರುವಂತೆ ದೇವರು ಪೌಲನನ್ನು ಉತ್ತೇಜಿಸಿದನೆಂಬುದನ್ನು ಗಮನಿಸಿರಿ. ಹೌದು, ಪೌಲನು ಅನೇಕ ವಿಧಗಳಲ್ಲಿ ಆಶೀರ್ವದಿಸಲ್ಪಟ್ಟಿದ್ದನು. ಹಿಂದೆ ಅವನು ಯೇಸುವಿನ ಹಿಂಬಾಲಕರನ್ನು ಮತಾಭಿಮಾನದಿಂದ ವಿರೋಧಿಸುವವನಾಗಿದ್ದರೂ, ಅವನು ಯೇಸುವಿನ ಶಿಷ್ಯನಾಗುವಂಥ ಸುಯೋಗವನ್ನು ಯೆಹೋವನು ಪ್ರೀತಿಯಿಂದ ಅವನಿಗೆ ದಯಪಾಲಿಸಿದ್ದನು. (ಅ. ಕೃತ್ಯಗಳು 7:58; 8:​3; 9:​1-4) ತದನಂತರ ಯೆಹೋವನು ಪೌಲನಿಗೆ ರೋಮಾಂಚಕರವಾದ ನೇಮಕಗಳು ಮತ್ತು ಸುಯೋಗಗಳನ್ನು ಕೊಟ್ಟನು. ಇದರಿಂದ ನಾವು ಸ್ಪಷ್ಟವಾದ ಪಾಠವನ್ನು ಕಲಿಯಬಹುದು. ತೀರ ಕೆಟ್ಟ ಸಮಯಗಳಲ್ಲೂ, ನಾವು ಕೃತಜ್ಞರಾಗಿರಬಹುದಾದ ಅನೇಕ ಆಶೀರ್ವಾದಗಳು ನಮಗಿರುತ್ತವೆ. ನಮ್ಮ ಪರೀಕ್ಷೆಗಳು, ಯೆಹೋವನು ನಮಗೆ ತೋರಿಸುವ ಹೇರಳವಾದ ಒಳ್ಳೇತನವನ್ನು ಮರೆತುಬಿಡುವಂತೆ ಮಾಡಬಾರದು.​—ಕೀರ್ತನೆ 31:19.

5, 6. (ಎ) ದೈವಿಕ ಬಲವು ‘ಬಲಹೀನತೆಯಲ್ಲಿ ಪೂರ್ಣಸಾಧಕವಾಗುತ್ತದೆ’ ಎಂಬುದನ್ನು ಯೆಹೋವನು ಪೌಲನಿಗೆ ಕಲಿಸಿದ್ದು ಹೇಗೆ? (ಬಿ) ಸೈತಾನನು ಸುಳ್ಳುಗಾರನಾಗಿದ್ದಾನೆಂಬುದನ್ನು ಪೌಲನ ಮಾದರಿಯು ಹೇಗೆ ರುಜುಪಡಿಸಿತು?

5 ಯೆಹೋವನ ಅಪಾತ್ರ ಕೃಪೆಯು ಬೇರೊಂದು ವಿಧದಲ್ಲಿ ಸಾಕಾಗಿರುವುದಾಗಿ ಕಂಡುಬರುತ್ತದೆ. ನಮ್ಮ ಪರೀಕ್ಷೆಗಳ ಸಮಯವನ್ನು ದಾಟಲಿಕ್ಕಾಗಿ ನಮಗೆ ದೇವರ ಶಕ್ತಿ ಇದ್ದರೆ ಸಾಕು, ಬೇರಾವುದರ ಅಗತ್ಯವಿಲ್ಲ. (ಎಫೆಸ 3:20) ದೈವಿಕ ಶಕ್ತಿಯು ‘ಬಲಹೀನತೆಯಲ್ಲಿಯೇ ಪೂರ್ಣಸಾಧಕವಾಗುತ್ತದೆ’ ಎಂದು ಯೆಹೋವನು ಪೌಲನಿಗೆ ಕಲಿಸಿದನು. ಇದು ಹೇಗೆ? ಪೌಲನು ತನ್ನ ಪರೀಕ್ಷೆಯನ್ನು ಸಹಿಸಿಕೊಳ್ಳಲು ಬೇಕಾಗಿದ್ದ ಎಲ್ಲ ಬಲವನ್ನು ಆತನು ಪ್ರೀತಿಯಿಂದ ಅವನಿಗೆ ಒದಗಿಸಿದನು. ಮತ್ತು ಹೀಗೆ ಪೌಲನ ತಾಳ್ಮೆ ಮತ್ತು ಯೆಹೋವನಲ್ಲಿ ಅವನಿಗಿದ್ದ ಸಂಪೂರ್ಣ ಭರವಸೆಯು, ಈ ದುರ್ಬಲ ಹಾಗೂ ಪಾಪಪೂರ್ಣ ಮನುಷ್ಯನ ವಿಷಯದಲ್ಲಿ ದೇವರ ಶಕ್ತಿಯು ಜಯಹೊಂದುತ್ತಿದೆಯೆಂಬುದನ್ನು ಎಲ್ಲ ಕ್ರೈಸ್ತರಿಗೆ ಪ್ರಕಟಪಡಿಸಿತು. ಇದರಿಂದಾಗಿ, ಎಲ್ಲವೂ ಸುಗಮವಾಗಿಯೂ ಸಮಸ್ಯೆಯಿಲ್ಲದೆಯೂ ನಡೆಯುತ್ತಿರುವಾಗ ಮಾತ್ರ ಮನುಷ್ಯರು ದೇವರನ್ನು ಸೇವಿಸುತ್ತಾರೆಂದು ಹೇಳುವ ಪಿಶಾಚನ ಮೇಲಾದ ಪರಿಣಾಮವನ್ನು ಸ್ವಲ್ಪ ಪರಿಗಣಿಸಿರಿ. ಪೌಲನ ಸಮಗ್ರತೆಯು, ಆ ಚಾಡಿಕೋರನ ಕೆನ್ನೆಗೇ ಏಟು ಬಾರಿಸಿದಂತಿತ್ತು!

6 ಇದೇ ಪೌಲನು, ಒಂದು ಕಾಲದಲ್ಲಿ ದೇವರ ವಿರುದ್ಧವಾದ ಹೋರಾಟದಲ್ಲಿ ಸೈತಾನನೊಂದಿಗೆ ಸಹಕರಿಸಿದವನಾಗಿದ್ದನು, ಕ್ರೈಸ್ತರನ್ನು ಧಿಕ್ಕರಿಸುತ್ತಿದ್ದ ಹಿಂಸಕನಾಗಿದ್ದನು, ಮತ್ತು ಉಚ್ಚ ವರ್ಗದಲ್ಲಿ ಹುಟ್ಟಿದವನಾಗಿದ್ದದರಿಂದ ನಿಸ್ಸಂದೇಹವಾಗಿಯೂ ಐಷಾರಾಮದ ಜೀವಿತವನ್ನು ಆನಂದಿಸುತ್ತಿದ್ದ ಒಬ್ಬ ಹುರುಪಿನ ಫರಿಸಾಯನಾಗಿದ್ದನು. ಆದರೆ ಪೌಲನು ಈಗ ‘ಅಪೊಸ್ತರಲ್ಲಿ ಕನಿಷ್ಠ’ನೋಪಾದಿ ಯೆಹೋವನಿಗೂ ಕ್ರಿಸ್ತನಿಗೂ ಸೇವೆಸಲ್ಲಿಸುತ್ತಿದ್ದನು. (1 ಕೊರಿಂಥ 15:9) ಹೀಗೆ, ಅವನು ಪ್ರಥಮ ಶತಮಾನದ ಕ್ರೈಸ್ತ ಆಡಳಿತ ಮಂಡಳಿಯ ಅಧಿಕಾರಕ್ಕೆ ನಮ್ರಭಾವದಿಂದ ಅಧೀನನಾಗುತ್ತಿದ್ದನು. ಮತ್ತು ತನ್ನ ಶರೀರದಲ್ಲಿನ ಮುಳ್ಳಿನ ಎದುರಿನಲ್ಲೂ ಅವನು ನಂಬಿಗಸ್ತಿಕೆಯಿಂದ ತಾಳಿಕೊಳ್ಳುತ್ತಿದ್ದನು. ಜೀವನದ ಸಂಕಷ್ಟಗಳು ಪೌಲನ ಹುರುಪನ್ನು ಒಂದಿಷ್ಟೂ ಕುಂದಿಸದಿದ್ದದ್ದನ್ನು ನೋಡಿ ಸೈತಾನನಿಗೆ ತೀವ್ರ ಸಂಕಟವಾಗಿದ್ದಿರಬೇಕು. ತಾನು ಕ್ರಿಸ್ತನ ಸ್ವರ್ಗೀಯ ರಾಜ್ಯದಲ್ಲಿ ಪಾಲ್ಗೊಳ್ಳುವೆನೆಂಬ ನಿರೀಕ್ಷೆಯನ್ನು ಪೌಲನು ಎಂದೂ ಕಳೆದುಕೊಳ್ಳಲಿಲ್ಲ. (2 ತಿಮೊಥೆಯ 2:12; 4:18) ಒಂದು ಮುಳ್ಳು ಎಷ್ಟೇ ವೇದನಾಭರಿತವಾಗಿದ್ದರೂ ಅದು ಅವನ ಹುರುಪಿಗೆ ತಣ್ಣೀರೆರಚಲು ಸಾಧ್ಯವಾಗಲಿಲ್ಲ. ನಮ್ಮ ಹುರುಪು ಸಹ ಹಾಗೆಯೇ ಬಲವಾಗಿರಲಿ! ನಮ್ಮ ಸಂಕಷ್ಟಗಳ ಸಮಯದಲ್ಲೂ ನಮ್ಮನ್ನು ಪೋಷಿಸುವ ಮೂಲಕ, ಯೆಹೋವನು ನಮಗೆ ಸೈತಾನನನ್ನು ಸುಳ್ಳುಗಾರನೆಂದು ರುಜುಪಡಿಸುವುದರಲ್ಲಿ ಸಹಾಯಮಾಡುವ ಸುಯೋಗವನ್ನು ಕೊಟ್ಟು ನಮ್ಮನ್ನು ಘನಪಡಿಸುತ್ತಾನೆ.​—ಜ್ಞಾನೋಕ್ತಿ 27:11.

ಯೆಹೋವನ ಒದಗಿಸುವಿಕೆಗಳು ಅತ್ಯಾವಶ್ಯಕ

7, 8. (ಎ) ಯೆಹೋವನು ಯಾವುದರ ಮೂಲಕ ತನ್ನ ಸೇವಕರನ್ನು ಇಂದು ಬಲಪಡಿಸುತ್ತಾನೆ? (ಬಿ) ನಮ್ಮ ಶರೀರದಲ್ಲಿರುವ ಒಂದು ಮುಳ್ಳನ್ನು ಸಹಿಸಿಕೊಂಡು ಹೋಗಲಿಕ್ಕಾಗಿ ದೈನಂದಿನ ಬೈಬಲ್‌ ವಾಚನ ಮತ್ತು ಅಧ್ಯಯನವು ಏಕೆ ಅತ್ಯಾವಶ್ಯಕವಾಗಿದೆ?

7 ಇಂದು ಯೆಹೋವನು ನಂಬಿಗಸ್ತ ಕ್ರೈಸ್ತರನ್ನು, ತನ್ನ ಪವಿತ್ರಾತ್ಮ, ತನ್ನ ವಾಕ್ಯ ಮತ್ತು ನಮ್ಮ ಕ್ರೈಸ್ತ ಸಹೋದರತ್ವದ ಮೂಲಕ ಬಲಪಡಿಸುತ್ತಾನೆ. ಅಪೊಸ್ತಲ ಪೌಲನಂತೆ, ನಾವು ಪ್ರಾರ್ಥನೆಯ ಮೂಲಕ ಯೆಹೋವನ ಮೇಲೆ ನಮ್ಮ ಭಾರವನ್ನು ಹಾಕಬಲ್ಲೆವು. (ಕೀರ್ತನೆ 55:22) ದೇವರು ನಮ್ಮ ಪರೀಕ್ಷೆಗಳನ್ನು ತೆಗೆದುಹಾಕದಿದ್ದರೂ, ಅವುಗಳನ್ನು ಹಾಗೂ ವಿಶೇಷವಾಗಿ ತಾಳಿಕೊಳ್ಳಲು ಕಷ್ಟಕರವಾಗಿರುವ ಪರೀಕ್ಷೆಗಳನ್ನು ಸಹಿಸಿಕೊಂಡು ಹೋಗಲಿಕ್ಕಾಗಿ ಆತನು ವಿವೇಕವನ್ನು ದಯಪಾಲಿಸುವನು. ನಾವು ತಾಳಿಕೊಳ್ಳುವಂತೆ ಸಹಾಯಮಾಡಲಿಕ್ಕಾಗಿ ಯೆಹೋವನು ನಮಗೆ ಸ್ಥೈರ್ಯವನ್ನು ಒದಗಿಸುತ್ತಾ, “ಬಲಾಧಿಕ್ಯ”ವನ್ನು ಕೊಡುವನು.​—2 ಕೊರಿಂಥ 4:7.

8 ನಾವು ಅಂಥ ಸಹಾಯವನ್ನು ಹೇಗೆ ಪಡೆದುಕೊಳ್ಳುತ್ತೇವೆ? ನಾವು ದೇವರ ವಾಕ್ಯವನ್ನು ಶ್ರದ್ಧೆಯಿಂದ ಅಧ್ಯಯನ ಮಾಡಬೇಕು, ಯಾಕೆಂದರೆ ಅದರಲ್ಲಿಯೇ ಆತನ ಖಚಿತವಾದ ಸಂತೈಸುವಿಕೆಗಳನ್ನು ನಾವು ಕಂಡುಕೊಳ್ಳಬಹುದು. (ಕೀರ್ತನೆ 94:19) ದೇವರ ಸೇವಕರು ದೈವಿಕ ಸಹಾಯಕ್ಕಾಗಿ ಯಾಚಿಸುತ್ತಾ ನುಡಿದ ಮನಮುಟ್ಟುವ ಮಾತುಗಳನ್ನು ನಾವು ಬೈಬಲಿನಲ್ಲಿ ಓದುತ್ತೇವೆ. ಸಾಂತ್ವನದಾಯಕ ಮಾತುಗಳನ್ನು ಉಪಯೋಗಿಸುತ್ತಾ ಯೆಹೋವನು ಅವರಿಗೆ ಕೊಟ್ಟ ಪ್ರತ್ಯುತ್ತರಗಳು, ಮನನಮಾಡಲಿಕ್ಕಾಗಿ ಮನಸ್ಸಿಗೆ ಆಹಾರವಾಗಿವೆ. ದೇವರ ವಾಕ್ಯದ ಅಧ್ಯಯನವು ನಮ್ಮನ್ನು ಬಲಪಡಿಸುವುದು. ಹೀಗೆ “ಬಲಾಧಿಕ್ಯವು ದೇವರದೇ ಹೊರತು ನಮ್ಮೊಳಗಿಂದ ಬಂದದ್ದಲ್ಲವೆಂದು” ವ್ಯಕ್ತವಾಗುವುದು. ಪೋಷಣೆ ಮತ್ತು ಶಕ್ತಿಗಾಗಿ ನಮಗೆ ಪ್ರತಿದಿನವೂ ಶಾರೀರಿಕ ಆಹಾರವು ಅಗತ್ಯವಾಗಿರುವಂತೆ, ನಾವು ದೇವರ ಮಾತುಗಳನ್ನು ಕ್ರಮವಾಗಿ ಉಣ್ಣುತ್ತಾ ಇರತಕ್ಕದ್ದು. ನಾವಿದನ್ನು ಮಾಡುತ್ತೇವೊ? ನಾವು ಹಾಗೆ ಮಾಡುವಲ್ಲಿ, ನಾವು ಪಡೆಯುವ “ಬಲಾಧಿಕ್ಯವು” ನಮ್ಮನ್ನು ಈಗ ಬಾಧಿಸುತ್ತಿರುವ ಯಾವುದೇ ಸಾಂಕೇತಿಕ ಮುಳ್ಳುಗಳನ್ನು ತಾಳಿಕೊಳ್ಳಲು ಸಹಾಯಮಾಡುತ್ತದೆಂಬುದನ್ನು ನೋಡುವೆವು.

9. ಸಮಸ್ಯೆಗಳನ್ನು ಎದುರಿಸುತ್ತಿರುವವರಿಗೆ ಹಿರಿಯರು ಹೇಗೆ ಬೆಂಬಲವನ್ನು ನೀಡಬಲ್ಲರು?

9 ದೇವಭಯವುಳ್ಳ ಕ್ರೈಸ್ತ ಹಿರಿಯರು, ಸಂಕಷ್ಟದ “ಗಾಳಿಯಲ್ಲಿ ಮರೆಯಂತೆಯೂ,” ಸಮಸ್ಯೆಗಳೆಂಬ “ಅತಿವೃಷ್ಟಿಯಲ್ಲಿ ಆವರಣದ ಹಾಗೂ” ಇರಬಲ್ಲರು. ಆ ಪ್ರೇರಿತ ವರ್ಣನೆಗೆ ಹೊಂದಿಕೊಳ್ಳಲು ಬಯಸುವಂಥ ಹಿರಿಯರು, ಯಥೋಚಿತವಾದ ಮಾತುಗಳೊಂದಿಗೆ ಕಷ್ಟಾನುಭವಿಸುತ್ತಿರುವವರಿಗೆ ಉತ್ತರಿಸುವುದು ಹೇಗೆಂಬುದನ್ನು ತಾವು ತಿಳಿದುಕೊಳ್ಳಲಿಕ್ಕಾಗಿ, “ಶಿಕ್ಷಿತರ ನಾಲಿಗೆಯನ್ನು” ಕೊಡುವಂತೆ ನಮ್ರತೆಯಿಂದ ಮತ್ತು ಪ್ರಾಮಾಣಿಕವಾಗಿ ಯೆಹೋವನ ಬಳಿ ಬೇಡಿಕೊಳ್ಳುತ್ತಾರೆ. ಹಿರಿಯರ ಮಾತುಗಳು, ಬದುಕಿನ ಕಷ್ಟಕರ ಸಮಯಗಳಲ್ಲಿ ನಮಗೆ ಮನಶ್ಶಾಂತಿಯನ್ನೂ ಸಾಂತ್ವನವನ್ನೂ ನೀಡುವ ಸೌಮ್ಯವಾದ ಮಳೆಯಂತಿರಬಲ್ಲವು. “ಮನಗುಂದಿದವರಿಗೆ ಸಂತೈಸುವಂಥ ರೀತಿಯಲ್ಲಿ” ಮಾತಾಡುವ ಮೂಲಕ, ತಮ್ಮ ಶರೀರದಲ್ಲಿನ ಯಾವುದೋ ಮುಳ್ಳಿನಿಂದಾಗಿ ಬಳಲಿಹೋಗುತ್ತಿರುವ ಅಥವಾ ಖಿನ್ನರಾಗುತ್ತಿರುವ ತಮ್ಮ ಆತ್ಮಿಕ ಸಹೋದರ ಸಹೋದರಿಯರನ್ನು ಅವರು ನಿಜವಾಗಿ ಬೆಂಬಲಿಸಬಲ್ಲರು.​—ಯೆಶಾಯ 32:2; 50:4; 1 ಥೆಸಲೊನೀಕ 5:14, NW.

10, 11. ಕಠಿನವಾದ ಪರೀಕ್ಷೆಗಳನ್ನು ಅನುಭವಿಸುತ್ತಿರುವ ಇತರರನ್ನು ದೇವರ ಸೇವಕರು ಹೇಗೆ ಉತ್ತೇಜಿಸಬಹುದು?

10 ಯೆಹೋವನ ಸೇವಕರೆಲ್ಲರೂ ಆತನ ಐಕ್ಯ ಕ್ರೈಸ್ತ ಕುಟುಂಬದ ಭಾಗವಾಗಿದ್ದಾರೆ. ಹೌದು, ನಾವು “ಒಬ್ಬೊಬ್ಬರಾಗಿ ಪರಸ್ಪರ ಅಂಗಗಳಾಗಿದ್ದೇವೆ” ಮತ್ತು ನಾವು “ಒಬ್ಬರನ್ನೊಬ್ಬರು ಪ್ರೀತಿಸುವ ಹಂಗಿನಲ್ಲಿದ್ದೇವೆ.” (ರೋಮಾಪುರ 12:5; 1 ಯೋಹಾನ 4:11) ನಾವು ಈ ಹಂಗನ್ನು ಹೇಗೆ ಪೂರೈಸುತ್ತೇವೆ? 1 ಪೇತ್ರ 3:8ಕ್ಕನುಸಾರ, ನಂಬಿಕೆಯಲ್ಲಿ ನಮಗೆ ಸಂಬಂಧಿಸಿರುವವರೆಲ್ಲರ ‘ಸುಖದುಃಖಗಳಲ್ಲಿ ಸೇರಿ, ಅಣ್ಣತಮ್ಮಂದಿರಂತೆ ಒಬ್ಬರನ್ನೊಬ್ಬರು ಪ್ರೀತಿಸುವ, ಮತ್ತು ಕರುಣೆಯೂ ದೀನಭಾವವೂ ಉಳ್ಳವರಾಗಿರುವ’ ಮೂಲಕವೇ. ಆದರೆ ತುಂಬ ವೇದನಾಭರಿತವಾದ ಶಾರೀರಿಕ ಮುಳ್ಳನ್ನು ಸಹಿಸುತ್ತಿರುವವರು ವೃದ್ಧರಾಗಿರಲಿ, ಎಳೆಯರಾಗಿರಲಿ, ಅವರೆಲ್ಲರಿಗೆ ನಾವು ವಿಶೇಷವಾದ ಪರಿಗಣನೆಯನ್ನು ತೋರಿಸಬಹುದು. ಹೇಗೆ?

11 ಅವರು ಅನುಭವಿಸುತ್ತಿರುವ ಕಷ್ಟದ ಕುರಿತು ನಾವು ಯಾವಾಗಲೂ ಅರಿವುಳ್ಳವರಾಗಿದ್ದು, ಅವರನ್ನು ಅರ್ಥಮಾಡಿಕೊಳ್ಳುವವರಾಗಿರಬೇಕು. ನಾವು ಸಹಾನುಭೂತಿಯಿಲ್ಲದವರೂ, ನಿರ್ಭಾವುಕರೂ ಇಲ್ಲವೇ ಉದಾಸೀನಭಾವದವರೂ ಆಗಿರುವಲ್ಲಿ, ನಮಗರಿವಿಲ್ಲದೇ ನಾವು ಅವರ ಕಷ್ಟವನ್ನು ಇನ್ನೂ ಹೆಚ್ಚಿಸಬಹುದು. ಅವರ ಸಂಕಷ್ಟಗಳ ಅರಿವುಳ್ಳವರಾಗಿರುವುದು, ನಾವೇನನ್ನು ಹೇಳುತ್ತೇವೆ, ಅದನ್ನು ಹೇಗೆ ಹೇಳುತ್ತೇವೆ ಮತ್ತು ಅವರೊಂದಿಗೆ ಹೇಗೆ ನಡೆದುಕೊಳ್ಳುತ್ತೇವೆ ಎಂಬುದರ ಕುರಿತಾಗಿ ಜಾಗ್ರತೆವಹಿಸುವಂತೆ ನಮ್ಮನ್ನು ಪ್ರೇರಿಸತಕ್ಕದ್ದು. ನಾವು ಆಶಾವಾದಿಗಳೂ, ಉತ್ತೇಜನ ನೀಡುವವರೂ ಆಗಿರುವುದು, ಅವರನ್ನು ಬಾಧಿಸುತ್ತಿರುವ ಯಾವುದೇ ಮುಳ್ಳಿನ ತೀಕ್ಷ್ಣವಾದ ನೋವನ್ನು ಕಡಿಮೆಗೊಳಿಸಲು ಸಹಾಯಮಾಡಬಲ್ಲದು. ಈ ರೀತಿಯಲ್ಲಿ ನಾವು ಅವರಿಗೆ ಬಲವರ್ಧಕ ಸಹಾಯಕವಾಗಿರಬಹುದು.​—ಕೊಲೊಸ್ಸೆ 4:​11, NW.

ಕೆಲವರು ಯಶಸ್ವಿಕರವಾಗಿ ಸಹಿಸಿಕೊಂಡಿರುವ ರೀತಿ

12-14. (ಎ) ಕ್ಯಾನ್ಸರ್‌ ರೋಗವನ್ನು ನಿಭಾಯಿಸಿಕೊಂಡು ಹೋಗಲಿಕ್ಕಾಗಿ ಒಬ್ಬ ಕ್ರೈಸ್ತಳು ಏನು ಮಾಡಿದಳು? (ಬಿ) ಈ ಸ್ತ್ರೀಯ ಆತ್ಮಿಕ ಸಹೋದರ ಸಹೋದರಿಯರು ಅವಳಿಗೆ ಹೇಗೆ ಬೆಂಬಲ ಮತ್ತು ಉತ್ತೇಜನವನ್ನು ನೀಡಿದರು?

12 ಈ ಕಡೇ ದಿವಸಗಳ ಅಂತ್ಯವು ಹತ್ತಿರವಾಗುತ್ತಿರುವಾಗ, ‘ನೂತನಕಾಲವು ಹುಟ್ಟುವ ಪ್ರಸವವೇದನೆಯು’ ದಿನೇದಿನೇ ಹೆಚ್ಚಾಗುತ್ತಾ ಹೋಗುತ್ತಿದೆ. (ಮತ್ತಾಯ 24:8) ಹೀಗಿರುವುದರಿಂದ, ಭೂಮಿಯ ಮೇಲಿರುವ ಪ್ರತಿಯೊಬ್ಬರನ್ನು, ವಿಶೇಷವಾಗಿ ದೇವರ ಚಿತ್ತವನ್ನು ಮಾಡಲು ಪ್ರಯತ್ನಿಸುತ್ತಿರುವ ಯೆಹೋವನ ನಂಬಿಗಸ್ತ ಸೇವಕರನ್ನು ಸಂಕಷ್ಟಗಳು ಬಾಧಿಸುವವು. ಉದಾಹರಣೆಗಾಗಿ, ಪೂರ್ಣ ಸಮಯದ ಶುಶ್ರೂಷೆಯಲ್ಲಿ ಸೇವೆಸಲ್ಲಿಸುತ್ತಿದ್ದ ಒಬ್ಬ ಕ್ರೈಸ್ತಳನ್ನು ಪರಿಗಣಿಸಿರಿ. ಅವಳಿಗೆ ಕ್ಯಾನ್ಸರ್‌ ರೋಗವಿದೆಯೆಂದು ಪತ್ತೆಹಚ್ಚಲಾಯಿತು, ಮತ್ತು ಶಸ್ತ್ರಚಿಕಿತ್ಸೆಯ ಮೂಲಕ ಅವಳ ರಸಗ್ರಂಥಿಗಳು ಮತ್ತು ದುಗ್ಧಗ್ರಂಥಿಗಳನ್ನು ತೆಗೆಯಬೇಕಾಗಿತ್ತು. ತನಗೆ ಈ ರೋಗವಿದೆಯೆಂದು ಅವಳಿಗೂ ಅವಳ ಗಂಡನಿಗೂ ಗೊತ್ತಾದಾಗ, ಅವರು ಕೂಡಲೆ ಯೆಹೋವನಿಗೆ ದೈನ್ಯಭಾವದಿಂದ ಬೇಡಿಕೊಳ್ಳುತ್ತಾ, ಒಂದು ದೀರ್ಘವಾದ ಪ್ರಾರ್ಥನೆಯನ್ನು ಮಾಡಿದರು. ಆಗ ಅವರಲ್ಲಿ ಒಂದು ರೀತಿಯ ನಂಬಲಸಾಧ್ಯವಾದ ಶಾಂತಿಯು ನೆಲೆಸಿತೆಂದು ಅವಳು ಅನಂತರ ಹೇಳಿದಳು. ಆದರೂ, ತನ್ನ ಚಿಕಿತ್ಸೆಗಳ ಪಾರ್ಶ್ವ ಪರಿಣಾಮಗಳನ್ನು ಸಹಿಸುತ್ತಿರುವಾಗ ಅವಳು ಅನೇಕ ಏರಿಳಿತಗಳನ್ನು ತಾಳಿಕೊಂಡಳು.

13 ತನ್ನ ಈ ಪರಿಸ್ಥಿತಿಯೊಂದಿಗೆ ವ್ಯವಹರಿಸಲಿಕ್ಕಾಗಿ, ಈ ಸಹೋದರಿಯು ಕ್ಯಾನ್ಸರ್‌ನ ಬಗ್ಗೆ ತನ್ನಿಂದ ಸಾಧ್ಯವಿರುವಷ್ಟು ಮಾಹಿತಿಯನ್ನು ಸಂಗ್ರಹಿಸಲು ಪ್ರಯತ್ನಿಸಿದಳು. ಅವಳು ತನ್ನ ಡಾಕ್ಟರುಗಳೊಂದಿಗೆ ವಿಚಾರಿಸಿ ನೋಡಿದಳು. ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳು ಮತ್ತು ಸಂಬಂಧಿತ ಕ್ರೈಸ್ತ ಪ್ರಕಾಶನಗಳಲ್ಲಿ, ಕೆಲವರು ಈ ರೋಗವನ್ನು ಭಾವನಾತ್ಮಕವಾಗಿ ನಿಭಾಯಿಸಿದ ರೀತಿಯನ್ನು ತೋರಿಸಿದಂಥ ಜೀವನ ಕಥೆಗಳನ್ನು ಅವಳು ಕಂಡುಕೊಂಡಳು. ಕಷ್ಟಗಳ ಸಮಯದಲ್ಲಿ ತನ್ನ ಜನರನ್ನು ಪೋಷಿಸುವ ಯೆಹೋವನ ಸಾಮರ್ಥ್ಯವನ್ನು ತೋರಿಸುವ ಸಂಬಂಧಿತ ಬೈಬಲ್‌ ವಚನಗಳು ಮತ್ತು ಇನ್ನಿತರ ಸಹಾಯಕ ಮಾಹಿತಿಯನ್ನು ಸಹ ಅವಳು ಓದಿದಳು.

14 ಹತಾಶೆಯನ್ನು ನಿಭಾಯಿಸುವುದರ ಕುರಿತಾದ ಒಂದು ಲೇಖನವು ಈ ವಿವೇಕಯುತ ಮಾತುಗಳನ್ನು ಉಲ್ಲೇಖಿಸಿತು: ‘ಜನರಲ್ಲಿ ಸೇರದವನು ಸ್ವೇಚ್ಛಾನುಸಾರ ನಡೆಯುವನು.’ (ಜ್ಞಾನೋಕ್ತಿ 18:1) ಆದುದರಿಂದ ಆ ಲೇಖನವು ಈ ಬುದ್ಧಿವಾದವನ್ನು ನೀಡಿತು: “ಬೇರೆಯವರಿಂದ ನಿಮ್ಮನ್ನೇ ಪ್ರತ್ಯೇಕಿಸದಿರಿ.” * ಆ ಸಹೋದರಿಯು ತಿಳಿಸುವುದು: “ನಾವು ನಿಮಗಾಗಿ ಪ್ರಾರ್ಥಿಸುತ್ತಿದ್ದೇವೆಂದು ಅನೇಕರು ನನಗೆ ಹೇಳಿದರು; ಬೇರೆಯವರು ನನ್ನೊಂದಿಗೆ ಫೋನಿನಲ್ಲಿ ಮಾತಾಡಿದರು. ಇಬ್ಬರು ಹಿರಿಯರು ಕ್ರಮವಾಗಿ ಫೋನ್‌ ಮಾಡಿ ನನ್ನ ಯೋಗಕ್ಷೇಮವನ್ನು ವಿಚಾರಿಸಿಕೊಳ್ಳುತ್ತಿದ್ದರು. ನನಗೆ ಹೂವುಗಳನ್ನು ಕಳುಹಿಸಲಾಗುತ್ತಿತ್ತು ಮತ್ತು ರಾಶಿಗಟ್ಟಲೆ ಕಾರ್ಡುಗಳು ಬರುತ್ತಿದ್ದವು. ಕೆಲವರು ನನಗಾಗಿ ಊಟಗಳನ್ನೂ ತಯಾರಿಸಿ ಕೊಡುತ್ತಿದ್ದರು. ಅಷ್ಟುಮಾತ್ರವಲ್ಲದೆ, ನನ್ನ ವೈದ್ಯಕೀಯ ಚಿಕಿತ್ಸೆಗಳಿಗಾಗಿ ನನ್ನನ್ನು ಕರೆದುಕೊಂಡು ಹೋಗಲಿಕ್ಕಾಗಿಯೂ ಅನೇಕರು ಮುಂದೆ ಬಂದರು.”

15-17. (ಎ) ಅಪಘಾತಗಳಿಂದಾಗಿ ಫಲಿಸಿದ ಕಷ್ಟಗಳನ್ನು ಒಬ್ಬ ಕ್ರೈಸ್ತಳು ಹೇಗೆ ನಿಭಾಯಿಸಿದಳು? (ಬಿ) ಸಭೆಯಲ್ಲಿದ್ದವರು ಯಾವ ರೀತಿಯ ಬೆಂಬಲವನ್ನು ನೀಡಿದರು?

15 ಅಮೆರಿಕದಲ್ಲಿ, ನ್ಯೂ ಮೆಕ್ಸಿಕೊ ಎಂಬ ನಗರದಲ್ಲಿದ್ದುಕೊಂಡು ಯೆಹೋವನನ್ನು ಬಹಳ ಸಮಯದಿಂದ ಸೇವಿಸುತ್ತಿರುವ ಒಬ್ಬ ಸಾಕ್ಷಿಯು, ಎರಡು ವಾಹನ ಅಪಘಾತಗಳಲ್ಲಿ ಗಾಯಗೊಂಡಳು. ಅವಳ ಕುತ್ತಿಗೆ ಮತ್ತು ಭುಜಗಳಿಗೆ ಗಾಯಗಳಾಗಿ, 25ಕ್ಕಿಂತಲೂ ಹೆಚ್ಚು ವರ್ಷಗಳಿಂದ ಅವಳು ಸಹಿಸಿಕೊಂಡು ಬಂದಿದ್ದ ಸಂಧಿವಾತ ರೋಗದ ಸ್ಥಿತಿಯನ್ನು ಅದು ಉಲ್ಬಣಗೊಳಿಸಿತು. ಅವಳು ಹೇಳುವುದು: “ನನ್ನ ತಲೆಯನ್ನು ಎತ್ತಿಹಿಡಿಯುವುದು ಮತ್ತು ಎರಡು ಕಿಲೊಗ್ರಾಮ್‌ಗಳಿಗಿಂತಲೂ ಹೆಚ್ಚಿನ ಭಾರವುಳ್ಳ ಯಾವುದೇ ವಸ್ತುವನ್ನು ಎತ್ತುವುದು ನನಗೆ ತುಂಬ ಕಷ್ಟಕರವಾಗಿತ್ತು. ಆದರೆ ಯೆಹೋವನಿಗೆ ಕಟ್ಟಕ್ಕರೆಯಿಂದ ನಾನು ಮಾಡುತ್ತಿದ್ದ ಪ್ರಾರ್ಥನೆಯು ನನಗೆ ತುಂಬ ಆಸರೆಯನ್ನು ಕೊಟ್ಟಿತು. ನಾವು ಅಧ್ಯಯನ ಮಾಡಿರುವ ಕಾವಲಿನಬುರುಜು ಲೇಖನಗಳು ಸಹ ಸಹಾಯಮಾಡಿದವು. ಒಂದು ಲೇಖನವು, ಮೀಕ 6:8ರ ಕುರಿತಾಗಿ ವಿವರಿಸುತ್ತಾ ಹೇಳಿದ್ದೇನೆಂದರೆ, ದೇವರೊಂದಿಗೆ ನಮ್ರವಾಗಿ ನಡೆದುಕೊಳ್ಳುವುದರ ಅರ್ಥ, ಒಬ್ಬ ವ್ಯಕ್ತಿಯು ತನ್ನ ಇತಿಮಿತಿಗಳನ್ನು ತಿಳಿದುಕೊಳ್ಳುವುದೇ ಆಗಿದೆ. ನಾನು ಬಯಸಿದಷ್ಟು ಸಮಯವನ್ನು ಶುಶ್ರೂಷೆಯಲ್ಲಿ ಕಳೆಯಲು ಸಾಧ್ಯವಾಗದಿದ್ದರೂ, ನನ್ನ ಈ ಸ್ಥಿತಿಯಲ್ಲೂ ನಾನು ನಿರುತ್ತೇಜಿತಳಾಗಬಾರದೆಂಬುದನ್ನು ಗ್ರಹಿಸುವಂತೆ ಇದು ನನಗೆ ಸಹಾಯಮಾಡಿತು. ಶುದ್ಧವಾದ ಉದ್ದೇಶಗಳೊಂದಿಗೆ ಆತನ ಸೇವೆಮಾಡುವುದೇ ಮಹತ್ವಪೂರ್ಣ ಸಂಗತಿಯಾಗಿದೆ.”

16 ಅವಳು ಇದನ್ನೂ ವರದಿಸಿದಳು: “ಕೂಟಗಳಿಗೆ ಹಾಜರಾಗಲು ಮತ್ತು ಕ್ಷೇತ್ರ ಸೇವೆಗೆ ಹೋಗಲು ನಾನು ಮಾಡುತ್ತಿದ್ದ ಪ್ರಯತ್ನಗಳಿಗಾಗಿ ಹಿರಿಯರು ಯಾವಾಗಲೂ ನನ್ನನ್ನು ಶ್ಲಾಘಿಸುತ್ತಿದ್ದರು. ಚಿಕ್ಕ ಮಕ್ಕಳು ನನ್ನನ್ನು ಅಪ್ಪಿಕೊಂಡು ವಂದಿಸುತ್ತಿದ್ದರು. ಪಯನೀಯರ್‌ ಶುಶ್ರೂಷಕರು ನನ್ನ ವಿಷಯದಲ್ಲಿ ತುಂಬ ತಾಳ್ಮೆಯನ್ನು ತೋರಿಸಿದರು ಮತ್ತು ನಾನು ತೀರ ಅಸ್ವಸ್ಥಳಾಗಿದ್ದು ಸೇವೆಗೆ ಹೋಗಲಾಗದ ದಿನಗಳಂದು, ಅನೇಕ ಸಲ ತಮ್ಮ ಯೋಜನೆಗಳನ್ನು ಪುನಃ ಏರ್ಪಡಿಸಿಕೊಳ್ಳುತ್ತಿದ್ದರು. ಹವಾಮಾನವು ಪ್ರತಿಕೂಲವಾಗಿರುವಾಗ, ಅವರು ದಯೆಯಿಂದ ನನ್ನನ್ನು ಅವರ ಪುನರ್ಭೇಟಿಗಳಿಗೆ ಕರೆದುಕೊಂಡು ಹೋಗುತ್ತಿದ್ದರು ಇಲ್ಲವೇ ತಮ್ಮ ಬೈಬಲ್‌ ಅಧ್ಯಯನಗಳ ಸಮಯದಲ್ಲಿ ಕುಳಿತುಕೊಳ್ಳುವಂತೆ ಆಮಂತ್ರಿಸುತ್ತಿದ್ದರು. ಮತ್ತು ನನ್ನ ಸೇವೆಯ ಬ್ಯಾಗನ್ನು ನಾನು ಹಿಡಿಯಲಶಕ್ತಳಾಗಿದ್ದದರಿಂದ, ನಾನು ಸಾರುವ ಕೆಲಸಕ್ಕೆ ಹೋಗುತ್ತಿದ್ದಾಗ ಇತರ ಪ್ರಚಾರಕರು ನನ್ನ ಸಾಹಿತ್ಯವನ್ನು ತಮ್ಮ ಬ್ಯಾಗ್‌ನಲ್ಲಿ ಇಟ್ಟುಕೊಳ್ಳುತ್ತಿದ್ದರು.”

17 ಸಭಾ ಹಿರಿಯರು ಮತ್ತು ಜೊತೆ ವಿಶ್ವಾಸಿಗಳು ಈ ಇಬ್ಬರು ಸಹೋದರಿಯರಿಗೆ ತಮ್ಮ ಮುಳ್ಳಿನಂಥ ದೌರ್ಬಲ್ಯಗಳನ್ನು ನಿಭಾಯಿಸಲು ಹೇಗೆ ಸಹಾಯಮಾಡಿದ್ದರು ಎಂಬುದನ್ನು ಗಮನಿಸಿರಿ. ನಿರ್ದಿಷ್ಟವಾದ ಆತ್ಮಿಕ, ಶಾರೀರಿಕ, ಮತ್ತು ಭಾವನಾತ್ಮಕ ಅಗತ್ಯಗಳನ್ನು ಪೂರೈಸಲಿಕ್ಕಾಗಿ ವಿನ್ಯಾಸಿಸಲ್ಪಟ್ಟಿರುವ ದಯಾಪೂರ್ವಕ ವ್ಯಾವಹಾರಿಕ ನೆರವನ್ನು ಅವರು ನೀಡಿದರು. ಸಮಸ್ಯೆಗಳನ್ನು ಅನುಭವಿಸುತ್ತಿರುವ ಇತರ ಸಹೋದರ ಸಹೋದರಿಯರಿಗೆ ನೆರವನ್ನು ನೀಡುವಂತೆ ಅದು ನಿಮ್ಮನ್ನು ಉತ್ತೇಜಿಸುವುದಿಲ್ಲವೊ? ಎಳೆಯರಾದ ನೀವೂ ನಿಮ್ಮ ಸಭೆಯಲ್ಲಿ ತಮ್ಮ ಶರೀರಕ್ಕೆ ನಾಟಿರುವ ಮುಳ್ಳುಗಳೊಂದಿಗೆ ಹೋರಾಡುತ್ತಿರುವವರಿಗೆ ಸಹಾಯವನ್ನು ಮಾಡಬಲ್ಲಿರಿ.​—ಜ್ಞಾನೋಕ್ತಿ 20:29.

18. ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳಲ್ಲಿ ಪ್ರಕಾಶಿಸಲ್ಪಡುವ ಜೀವನ ಕಥೆಗಳಲ್ಲಿ ನಾವು ಯಾವ ಉತ್ತೇಜನವನ್ನು ಕಂಡುಕೊಳ್ಳಬಹುದು?

18ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳು, ಜೀವಿತದ ಸಮಸ್ಯೆಗಳನ್ನು ನಿಭಾಯಿಸಿರುವ ಮತ್ತು ಈಗಲೂ ನಿಭಾಯಿಸಿಕೊಂಡು ಹೋಗುತ್ತಿರುವ ಸಾಕ್ಷಿಗಳ ಜೀವನ ಕಥೆಗಳು ಹಾಗೂ ಅನುಭವಗಳನ್ನು ಪ್ರಕಾಶಿಸಿವೆ. ಇಂಥ ಲೇಖನಗಳನ್ನು ನೀವು ಕ್ರಮವಾಗಿ ಓದುತ್ತಿರುವಾಗ, ಲೋಕದಲ್ಲೆಲ್ಲಾ ಇರುವ ನಿಮ್ಮ ಸಹೋದರ ಸಹೋದರಿಯರಲ್ಲಿ ಹೆಚ್ಚಿನವರು, ಆರ್ಥಿಕ ಬಿಕ್ಕಟ್ಟುಗಳು, ವಿಪತ್ತುಗಳಲ್ಲಿ ಪ್ರಿಯ ಜನರ ಮರಣ, ಮತ್ತು ಯುದ್ಧ ಸಮಯದ ಅಪಾಯಕಾರಿ ಪರಿಸ್ಥಿತಿಗಳನ್ನು ತಾಳಿಕೊಂಡಿದ್ದಾರೆಂಬುದನ್ನು ನೋಡುವಿರಿ. ಇನ್ನೂ ಕೆಲವರಿಗೆ ದುರ್ಬಲಗೊಳಿಸುವಂಥ ರೋಗಗಳಿರುತ್ತವೆ. ಆರೋಗ್ಯದಿಂದಿರುವವರು ಸಲೀಸಾಗಿ ಮಾಡುವಂಥ ಸರಳವಾದ ಕೆಲವೊಂದು ಕೆಲಸಗಳನ್ನು ಅನೇಕರು ಮಾಡಲಶಕ್ತರಾಗಿದ್ದಾರೆ. ಅವರ ಕಾಯಿಲೆಗಳು ಅವರನ್ನು ತುಂಬ ಪರೀಕ್ಷಿಸುತ್ತವೆ. ವಿಶೇಷವಾಗಿ, ಅವರು ಕ್ರೈಸ್ತ ಚಟುವಟಿಕೆಗಳಲ್ಲಿ ಬಯಸುವಷ್ಟನ್ನು ಮಾಡಲು ಸಾಧ್ಯವಿಲ್ಲದಿರುವಾಗ ಇದು ನಿಜವಾಗಿರುತ್ತದೆ. ತಮ್ಮ ಸಹೋದರ ಸಹೋದರಿಯರಾಗಿರುವ ಆಬಾಲವೃದ್ಧರೆಲ್ಲರೂ ಅವರಿಗೆ ಕೊಡುವ ಸಹಾಯ ಮತ್ತು ಬೆಂಬಲವನ್ನು ಅವರು ಎಷ್ಟು ಗಾಢವಾಗಿ ಗಣ್ಯಮಾಡುತ್ತಾರೆ!

ತಾಳ್ಮೆಯು ಸಂತೋಷವನ್ನು ತರುತ್ತದೆ

19. ತನ್ನ ಮುಳ್ಳಿನಂಥ ಪರೀಕ್ಷೆಗಳು ಮತ್ತು ಬಲಹೀನತೆಗಳ ಎದುರಿನಲ್ಲೂ ಪೌಲನು ಏಕೆ ಹರ್ಷಿಸಲು ಶಕ್ತನಾಗಿದ್ದನು?

19 ದೇವರು ತನ್ನನ್ನು ಬಲಪಡಿಸಿದ ರೀತಿಯನ್ನು ನೋಡಿ ಪೌಲನು ಹರ್ಷಿಸಿದನು. ಅವನಂದದ್ದು: “ಹೀಗಿರಲಾಗಿ ಕ್ರಿಸ್ತನ ಬಲವು ನನ್ನಲ್ಲಿ ನೆಲಸಿಕೊಂಡಿರಬೇಕೆಂದು ನನಗುಂಟಾಗುವ ನಿರ್ಬಲಾವಸ್ಥೆಗಳ ವಿಷಯದಲ್ಲಿಯೇ ಬಹುಸಂತೋಷವಾಗಿ ಹೆಚ್ಚಳಪಡುವೆನು. ಆದದರಿಂದ ಕ್ರಿಸ್ತನ ನಿಮಿತ್ತ ನನಗೆ ನಿರ್ಬಲಾವಸ್ಥೆಯೂ ತಿರಸ್ಕಾರವೂ ಕೊರತೆಯೂ ಹಿಂಸೆಯೂ ಇಕ್ಕಟ್ಟೂ ಸಂಭವಿಸಿದಾಗ ಸಂತುಷ್ಟನಾಗಿದ್ದೇನೆ. ನಾನು ಯಾವಾಗ ನಿರ್ಬಲನಾಗಿದ್ದೇನೋ ಆವಾಗಲೇ ಬಲವುಳ್ಳವನಾಗಿದ್ದೇನೆ.” (2 ಕೊರಿಂಥ 12:9, 10) ತನಗಾದ ವೈಯಕ್ತಿಕ ಅನುಭವಗಳಿಂದಾಗಿ ಪೌಲನು ಪೂರ್ಣ ಭರವಸೆಯೊಂದಿಗೆ ಹೀಗೆ ಹೇಳಸಾಧ್ಯವಿತ್ತು: “ಕೊರತೆಯಲ್ಲಿದ್ದೇನೆಂದು ಸೂಚಿಸುವದಕ್ಕೆ ನಾನು ಇದನ್ನು ಹೇಳುವದಿಲ್ಲ; ನಾನಂತೂ ಇದ್ದ ಸ್ಥಿತಿಯಲ್ಲಿಯೇ ಸಂತುಷ್ಟನಾಗಿರುವದನ್ನು ಕಲಿತುಕೊಂಡಿದ್ದೇನೆ. ಬಡವನಾಗಿರಲೂ ಬಲ್ಲೆನು, ಸಮೃದ್ಧಿಯುಳ್ಳವನಾಗಿರಲೂ ಬಲ್ಲೆನು. ನಾನು ತೃಪ್ತನಾಗಿದ್ದರೂ ಹಸಿದವನಾಗಿದ್ದರೂ, ಸಮೃದ್ಧಿಯುಳ್ಳವನಾದರೂ ಕೊರತೆಯುಳ್ಳವನಾದರೂ, ಯಾವ ತರದ ಸ್ಥಿತಿಯಲ್ಲಿರುವವನಾದರೂ ಅದರ ಗುಟ್ಟು ನನಗೆ ತಿಳಿದದೆ. ನನ್ನನ್ನು ಬಲಪಡಿಸುವಾತನಲ್ಲಿದ್ದುಕೊಂಡು ಎಲ್ಲಕ್ಕೂ ಶಕ್ತನಾಗಿದ್ದೇನೆ.”​—ಫಿಲಿಪ್ಪಿ 4:11-13.

20, 21. (ಎ) ನಾವು “ಕಾಣದಿರುವಂಥ” ವಿಷಯಗಳ ಕುರಿತಾಗಿ ಮನನಮಾಡುವುದರಿಂದ ಹೇಗೆ ಆನಂದವನ್ನು ಪಡೆಯಬಲ್ಲೆವು? (ಬಿ) ಭೂಪರದೈಸದಲ್ಲಿ ನೀವು ನೋಡಲು ನಿರೀಕ್ಷಿಸುತ್ತಿರುವ “ಕಾಣದಿರುವಂಥ” ಸಂಗತಿಗಳಲ್ಲಿ ಕೆಲವು ಯಾವುವು?

20 ಹಾಗಾದರೆ, ನಮ್ಮ ಶರೀರದಲ್ಲಿರುವ ಯಾವುದೇ ಸಾಂಕೇತಿಕ ಮುಳ್ಳನ್ನು ಸಹಿಸಿಕೊಳ್ಳುವ ಮೂಲಕ, ನಮ್ಮ ಬಲಹೀನತೆಯಿಂದಾಗಿ ಯೆಹೋವನ ಶಕ್ತಿಯು ಪೂರ್ಣಸಾಧಕವಾಗುತ್ತಿದೆಯೆಂದು ಎಲ್ಲರಿಗೂ ತೋರಿಸುವುದರಲ್ಲಿ ನಾವು ತುಂಬ ಸಂತೋಷವನ್ನು ಪಡೆಯಬಹುದು. ಪೌಲನು ಬರೆದುದು: “ನಾವು ಧೈರ್ಯಗೆಡುವದಿಲ್ಲ. . . . ನಮ್ಮ ಆಂತರ್ಯವು ದಿನೇದಿನೇ ಹೊಸದಾಗುತ್ತಾ ಬರುತ್ತದೆ. ಹೇಗಂದರೆ ಕ್ಷಣಮಾತ್ರವಿರುವ ನಮ್ಮ ಹಗುರವಾದ ಸಂಕಟವು ಅತ್ಯಂತಾಧಿಕವಾದ ಪ್ರತಿಫಲವನ್ನು ಉಂಟುಮಾಡಿ ನಮಗೆ ನಿರಂತರವಾಗಿರುವ ಗೌರವವಾದ ಪ್ರಭಾವವನ್ನು ದೊರಕಿಸುತ್ತದೆ. ನಾವು . . . ಕಾಣದಿರುವಂಥದನ್ನು ಲಕ್ಷಿಸುವವರಾಗಿದ್ದೇವೆ. . . . ಕಾಣದಿರುವಂಥದು ಸದಾಕಾಲವೂ ಇರುವದು.”​—2 ಕೊರಿಂಥ 4:16-18.

21 ಇಂದು ಯೆಹೋವನ ಜನರಲ್ಲಿ ಹೆಚ್ಚಿನವರು, ಆತನ ಭೂಪರದೈಸದಲ್ಲಿ ಜೀವಿಸಲು ಮತ್ತು ಆತನು ವಾಗ್ದಾನಿಸಿರುವ ಆಶೀರ್ವಾದಗಳಲ್ಲಿ ಆನಂದಿಸಲು ನಿರೀಕ್ಷಿಸುತ್ತಾರೆ. ಅಂಥ ಆಶೀರ್ವಾದಗಳನ್ನು ನಾವು ಇಂದು ‘ಕಾಣದಿರುವಂಥದ್ದಾಗಿ’ ಪರಿಗಣಿಸಬಹುದು. ಆದರೆ ನಾವು ಆ ಆಶೀರ್ವಾದಗಳನ್ನು ಕಣ್ಣಾರೆ ನೋಡಿ, ಅವುಗಳಲ್ಲಿ ಸದಾಕಾಲ ಆನಂದಿಸುವ ಸಮಯವು ಬಹುಬೇಗನೆ ಹತ್ತಿರ ಬರುತ್ತಾ ಇದೆ. ಅಂಥ ಆಶೀರ್ವಾದಗಳಲ್ಲಿ ಒಂದು, ಯಾವುದೇ ರೀತಿಯ ಮುಳ್ಳಿನಂಥ ಸಮಸ್ಯೆಯೊಂದಿಗೆ ಇನ್ನು ಮುಂದೆ ಜೀವಿಸದೇ ಇರುವ ಉಪಶಮನವೇ ಆಗಿದೆ! ದೇವರ ಪುತ್ರನು ‘ಸೈತಾನನ ಕೆಲಸಗಳನ್ನು ಲಯಮಾಡಿ,’ ‘ಮರಣಾಧಿಕಾರಿಯನ್ನು ಅಡಗಿಸಿಬಿಡುವನು.’​—1 ಯೋಹಾನ 3:8; ಇಬ್ರಿಯ 2:14.

22. ನಮಗೆ ಯಾವ ಭರವಸೆ ಮತ್ತು ದೃಢನಿರ್ಧಾರವಿದೆ?

22 ಆದುದರಿಂದ ಇಂದು ನಮ್ಮ ಶರೀರದಲ್ಲಿ ನೋವನ್ನುಂಟುಮಾಡುತ್ತಿರುವ ಯಾವುದೇ ಮುಳ್ಳು ನಾಟಿರುವಲ್ಲಿ, ನಾವದನ್ನು ಸಹಿಸಿಕೊಳ್ಳುತ್ತಾ ಮುಂದುವರಿಯೋಣ. ಪೌಲನಂತೆ, ನಮಗೆ ಉದಾರವಾಗಿ ಶಕ್ತಿಯನ್ನು ಕೊಡುವಂಥ ಯೆಹೋವನಿಂದಾಗಿ ನಮಗೆ ಹಾಗೆ ಮಾಡಲು ಬೇಕಾದ ಬಲವು ಇರುವುದು. ನಾವು ಭೂಪರದೈಸದಲ್ಲಿ ಜೀವಿಸುತ್ತಿರುವಾಗ, ಯೆಹೋವನು ನಮಗೋಸ್ಕರ ಮಾಡುವ ಎಲ್ಲ ಅದ್ಭುತಕರ ಸಂಗತಿಗಳಿಗಾಗಿ ನಾವು ಪ್ರತಿದಿನವೂ ಯೆಹೋವನನ್ನು ಕೊಂಡಾಡುವೆವು.​—ಕೀರ್ತನೆ 103:2.

[ಪಾದಟಿಪ್ಪಣಿ]

^ ಪ್ಯಾರ. 14 ಎಚ್ಚರ! ಪತ್ರಿಕೆಯ ಜೂನ್‌ 8, 2000 ಸಂಚಿಕೆಯಲ್ಲಿರುವ “ಬೈಬಲಿನ ದೃಷ್ಟಿಕೋನ: ಹತಾಶೆಯನ್ನು ಹೇಗೆ ನಿಭಾಯಿಸಸಾಧ್ಯವಿದೆ?” ಎಂಬ ಲೇಖನವನ್ನು ನೋಡಿರಿ.

ನೀವು ಹೇಗೆ ಉತ್ತರಿಸುವಿರಿ?

• ಪಿಶಾಚನು ಏಕೆ ಮತ್ತು ಹೇಗೆ ಸತ್ಯ ಕ್ರೈಸ್ತರ ಸಮಗ್ರತೆಯನ್ನು ಮುರಿಯಲು ಪ್ರಯತ್ನಿಸುತ್ತಾನೆ?

• ಯೆಹೋವನ ಶಕ್ತಿಯು ‘ಬಲಹೀನತೆಯಲ್ಲಿ ಪೂರ್ಣಸಾಧಕವಾಗುವುದು’ ಹೇಗೆ?

• ಸಮಸ್ಯೆಗಳಿಂದ ನೊಂದಿರುವವರನ್ನು ಹಿರಿಯರು ಮತ್ತು ಇತರರು ಹೇಗೆ ಉತ್ತೇಜಿಸಬಲ್ಲರು?

[ಅಧ್ಯಯನ ಪ್ರಶ್ನೆಗಳು]

[ಪುಟ 18ರಲ್ಲಿರುವ ಚಿತ್ರ]

ತನ್ನ ಶರೀರದಲ್ಲಿ ನಾಟಿದ್ದ ಮುಳ್ಳನ್ನು ತೆಗೆಯುವಂತೆ ಪೌಲನು ಮೂರು ಸಲ ದೇವರಿಗೆ ಪ್ರಾರ್ಥಿಸಿದನು