ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪರಂಪರೆಯಿಂದ ಬಂದ ನಮ್ಮ ಆಧ್ಯಾತ್ಮಿಕ ಸ್ವತ್ತು

ಪರಂಪರೆಯಿಂದ ಬಂದ ನಮ್ಮ ಆಧ್ಯಾತ್ಮಿಕ ಸ್ವತ್ತು

ಪರಂಪರೆಯಿಂದ ಬಂದ ನಮ್ಮ ಆಧ್ಯಾತ್ಮಿಕ ಸ್ವತ್ತು

“ಇದೇ ಯೆಹೋವನ ಸೇವಕರ ಬಾಧ್ಯತೆ.”​—⁠ಯೆಶಾ. 54:​17, ಪವಿತ್ರ ಗ್ರಂಥ ಭಾಷಾಂತರ.

ನಿಮ್ಮ ಉತ್ತರವೇನು?

ಯೆಹೋವನು ತನ್ನ ಲಿಖಿತ ವಾಕ್ಯವನ್ನು ಹೇಗೆ ಸಂರಕ್ಷಿಸಿದ್ದಾನೆ?

ತನ್ನ ಜನರ ಉಪಯೋಗಕ್ಕಾಗಿ ಯೆಹೋವನು ತನ್ನ ಹೆಸರನ್ನು ಹೇಗೆ ಕಾಪಾಡಿದ್ದಾನೆ?

ಆಧ್ಯಾತ್ಮಿಕ ಸತ್ಯವನ್ನು ಮರೆಮಾಚಲು ಪ್ರಯತ್ನ ನಡೆದರೂ ದೇವರು ಅದನ್ನು ಹೇಗೆ ಸಂರಕ್ಷಿಸಿದ್ದಾನೆಂದು ವಿವರಿಸಿ.

1. ಮಾನವಕುಲದ ಪ್ರಯೋಜನಕ್ಕಾಗಿ ಯೆಹೋವನು ಪ್ರೀತಿಯಿಂದ ಏನನ್ನು ಜೋಪಾನಮಾಡಿದ್ದಾನೆ?

‘ಜೀವಸ್ವರೂಪನೂ ಸದಾಕಾಲ ಇರುವಾತನೂ’ ಆದ ಯೆಹೋವ ದೇವರು ಜೀವದಾಯಕ ಸಂದೇಶವನ್ನು ಜೋಪಾನವಾಗಿಟ್ಟು ನಮ್ಮೆಲ್ಲರ ಕೈಸೇರುವಂತೆ ಮಾಡಿದ್ದಾನೆ. ಆ ಸಂದೇಶವು ಎಂದಿಗೂ ಅಳಿಯದು. ಏಕೆಂದರೆ ‘ಯೆಹೋವನ ಮಾತು [ಅಥವಾ “ವಾಕ್ಯ,” ಪವಿತ್ರ ಗ್ರಂಥ ಭಾಷಾಂತರ] ಸದಾಕಾಲ ಉಳಿಯುತ್ತದೆ.’ (1 ಪೇತ್ರ 1:​23-25) ಆತನು ನಮ್ಮ ಮೇಲಿನ ಪ್ರೀತಿಯಿಂದ ಬೈಬಲಿನಲ್ಲಿ ಆ ಎಲ್ಲ ಪ್ರಾಮುಖ್ಯ ಮಾಹಿತಿಯನ್ನು ಬರೆಯಿಸಿ ಸುರಕ್ಷಿತವಾಗಿ ಜೋಪಾನ ಮಾಡಿರುವುದಕ್ಕಾಗಿ ನಾವು ನಿಜಕ್ಕೂ ಕೃತಜ್ಞರು.

2. ಬೈಬಲಿನಲ್ಲಿ ದೇವರು ಏನನ್ನು ಜೋಪಾನ ಮಾಡಿದ್ದಾನೆ?

2 ಬೈಬಲಿನಿಂದ ತನ್ನ ನಾಮ ಅಳಿದುಹೋಗದಂತೆ ಕೂಡ ದೇವರು ನೋಡಿಕೊಂಡಿದ್ದಾನೆ. ಏಕೆಂದರೆ ತನ್ನ ಜನರು ಆ ಹೆಸರನ್ನು ಉಪಯೋಗಿಸಬೇಕು ಎಂಬುದು ಆತನ ಇಚ್ಛೆ. ಬೈಬಲಿನಲ್ಲಿ ಮೊತ್ತಮೊದಲ ಬಾರಿ “ಯೆಹೋವದೇವರು” ಎಂದು ಕಂಡುಬರುವುದು “ಭೂಮ್ಯಾಕಾಶಗಳ ನಿರ್ಮಾಣಚರಿತ್ರೆ”ಯಲ್ಲಿ. (ಆದಿ. 2:​4, 5) ಅದ್ಭುತ ರೀತಿಯಲ್ಲಿ ಕಲ್ಲಿನ ಹಲಿಗೆಗಳ ಮೇಲೆ ಕೆತ್ತಲಾದ ದಶಾಜ್ಞೆಗಳಲ್ಲಿಯೂ ಅನೇಕ ಬಾರಿ ದೇವರ ಹೆಸರಿದೆ. ಉದಾಹರಣೆಗೆ, ಮೊದಲನೇ ಆಜ್ಞೆಯಲ್ಲೇ ನಾವು ಹೀಗೆ ಓದುತ್ತೇವೆ: “ಯೆಹೋವನು ಎಂಬ ನಿನ್ನ ದೇವರು ನಾನೇ.” (ವಿಮೋ. 20:​1-17) ಸೈತಾನನು ದೇವರ ವಾಕ್ಯವನ್ನೂ ಆತನ ನಾಮವನ್ನೂ ಇಲ್ಲದಂತೆ ಮಾಡಲು ಸರ್ವಪ್ರಯತ್ನ ಮಾಡಿದ್ದಾನೆ. ಆದರೆ ಅದ್ಯಾವುದೂ ಯಶಸ್ಸು ಕಾಣಲಿಲ್ಲ. ಏಕೆಂದರೆ ಪರಮಾಧಿಕಾರಿ ಕರ್ತನಾದ ಯೆಹೋವನು ತನ್ನ ವಾಕ್ಯ ಮತ್ತು ತನ್ನ ನಾಮ ಅಳಿದು ಹೋಗದಂತೆ ನೋಡಿಕೊಂಡಿದ್ದಾನೆ. ಆದ್ದರಿಂದ ಯೆಹೋವನ ನಾಮ ಎಂದೆಂದಿಗೂ ಇರುವುದು.​—⁠ಅ. ಕಾ. 4:⁠24.

3. ಜಗತ್ತಿನೆಲ್ಲೆಡೆ ಧಾರ್ಮಿಕ ಸುಳ್ಳು ತುಂಬಿರುವುದಾದರೂ ದೇವರು ನಮಗಾಗಿ ಏನನ್ನು ಸುರಕ್ಷಿತವಾಗಿಟ್ಟಿದ್ದಾನೆ?

3 ಯೆಹೋವನು ತನ್ನ ವಾಕ್ಯವಾದ ಬೈಬಲಿನಲ್ಲಿ ಸತ್ಯವು ಸುರಕ್ಷಿತವಾಗಿ ಉಳಿಯುವಂತೆ ಸಹ ನೋಡಿಕೊಂಡಿದ್ದಾನೆ. ಜಗತ್ತಿನೆಲ್ಲೆಡೆ ದೇವರ ಬಗ್ಗೆ ಮಿಥ್ಯ ಕಲ್ಪನೆಗಳು ತುಂಬಿಕೊಂಡಿವೆ. ನಮಗಾದರೋ ಯೆಹೋವನು ಬೈಬಲಿನ ಮೂಲಕ ಆಧ್ಯಾತ್ಮಿಕ ಬೆಳಕು ಮತ್ತು ಸತ್ಯ ಸಿಗುವಂತೆ ಮಾಡಿದ್ದಾನೆ. ಅದಕ್ಕಾಗಿ ನಾವು ತುಂಬ ಕೃತಜ್ಞರು. (ಕೀರ್ತನೆ 43:​3, 4; ಜ್ಞಾನೋಕ್ತಿ 6:23 ಓದಿ.) ಜನಸಾಗರವು ಆಧ್ಯಾತ್ಮಿಕವಾಗಿ ಕತ್ತಲೆಯಲ್ಲಿ ನಡೆಯುತ್ತಿರುವುದಾದರೂ ನಾವು ಬೆಳಕಿನಲ್ಲಿ ನಡೆಯುತ್ತಿರುವುದಕ್ಕಾಗಿ ಹರ್ಷಿಸುತ್ತೇವೆ.​—⁠1 ಯೋಹಾ. 1:​6, 7.

ನಮಗಿರುವ ಬಹು ಅಮೂಲ್ಯ ಬಾಧ್ಯತೆ

4, 5. ಇಸವಿ 1931ರಿಂದ ಯಾವ ವಿಶೇಷ ಸುಯೋಗ ನಮಗಿದೆ?

4 ಕ್ರೈಸ್ತರಾದ ನಾವು ಬಹು ಅಮೂಲ್ಯವಾದ ಸ್ವತ್ತನ್ನು ಬಾಧ್ಯತೆಯಾಗಿ ಪಡೆದಿದ್ದೇವೆ. ಒಂದು ಶಬ್ದಕೋಶಕ್ಕನುಸಾರ “ವರ್ಷಾನುವರ್ಷಗಳಿಂದ ತಲೆಮಾರಿನಿಂದ ತಲೆಮಾರಿಗೆ ದಾಟಿಸಲಾದ ಗುಣಗಳು, ಸಂಪ್ರದಾಯಗಳು, ಜೀವನ ಶೈಲಿಗಳು ಆಯಾ ದೇಶದ ಬಾಧ್ಯತೆಯಾಗಿದೆ.” ನಾವು ಪರಂಪರಾಗತವಾಗಿ ಪಡೆದ ಆಧ್ಯಾತ್ಮಿಕ ಸ್ವತ್ತು ಯಾವುದು? ಆ ಸ್ವತ್ತಿನಲ್ಲಿ ಹಲವು ವಿಷಯಗಳು ಸೇರಿವೆ. ಕೆಲವೆಂದರೆ ದೇವರ ವಾಕ್ಯದ ನಿಷ್ಕೃಷ್ಟ ಜ್ಞಾನ, ದೇವರ ಕುರಿತು ಮತ್ತು ಆತನ ಉದ್ದೇಶದ ಕುರಿತು ಸ್ಪಷ್ಟ ತಿಳುವಳಿಕೆಯಾಗಿದೆ. ಬಹು ವಿಶೇಷವಾದ ಒಂದು ಸುಯೋಗವನ್ನು ಕೂಡ ನಾವು ಬಾಧ್ಯತೆಯಾಗಿ ಪಡೆದಿದ್ದೇವೆ. ಏನದು?

5 ಇಸವಿ 1931ರಲ್ಲಿ ಅಮೆರಿಕದ ಒಹಾಯೋದ ಕೊಲಂಬಸ್‌ನಲ್ಲಿ ನಡೆದ ಅಧಿವೇಶನದಲ್ಲಿ ಆ ಸುಯೋಗ ನಮ್ಮದಾಯಿತು. ಅಧಿವೇಶನದ ಕಾರ್ಯಕ್ರಮ ಹಾಳೆಯಲ್ಲಿ “JW” ಎಂದು ದೊಡ್ಡದಾಗಿ ಮುದ್ರಿಸಲಾಗಿತ್ತು. “JW” ಅಂದರೆ ಏನಿರಬಹುದು? ಎಂಬ ಕುತೂಹಲ ಅನೇಕರಲ್ಲಿ ಎದ್ದಿತು. ಕೆಲವರು ‘ಜಸ್ಟ್‌ ವೇಟ್‌’ (Just Wait) ಅಂದುಕೊಂಡರು. ಬೇರೆಯವರು ‘ಜಸ್ಟ್‌ ವಾಚ್‌’ (Just Watch) ಎಂದು ನೆನಸಿದ್ದರು. ಇನ್ನು ಕೆಲವರು ಸರಿಯಾದ ಉತ್ತರವನ್ನು ಅಂದಾಜುಮಾಡಿದ್ದರು” ಎಂದು ನೆನಪನ್ನು ಹಂಚಿಕೊಳ್ಳುತ್ತಾರೆ ಒಬ್ಬಾಕೆ ಸಹೋದರಿ. ಅಷ್ಟರ ವರೆಗೆ ನಮಗೆ ‘ಬೈಬಲ್‌ ವಿದ್ಯಾರ್ಥಿಗಳು’ ಎಂಬ ಹೆಸರಿತ್ತು. ಆ ಅಧಿವೇಶನದ ಭಾನುವಾರದ ಕಾರ್ಯಕ್ರಮದಲ್ಲಿ ಅಂದರೆ 1931ರ ಜುಲೈ 26ರಂದು ಒಂದು ವಿಶೇಷ ಭಾಷಣದಲ್ಲಿ ಠರಾವನ್ನು ಓದಿ ‘ಜೆಹೋವಾಸ್‌ ವಿಟ್ನೆಸಸ್‌’ (ಯೆಹೋವನ ಸಾಕ್ಷಿಗಳು) ಎಂಬ ಹೆಸರನ್ನು ಸ್ವೀಕರಿಸಲಾಯಿತು. ಬೈಬಲಾಧರಿತವಾದ ಆ ಹೆಸರನ್ನು ಪಡೆದುಕೊಂಡಿದ್ದು ನಿಜಕ್ಕೂ ರೋಮಾಂಚಕವಾಗಿತ್ತು. (ಯೆಶಾಯ 43:12 ಓದಿ.) “ಅಂದು ಅಲ್ಲಿ ನೆರೆದು ಬಂದವರ ಸಂತೋಷದ ಉದ್ಗಾರ, ನಿರಂತರ ಕರತಾಡನ ಮುಗಿಲುಮುಟ್ಟುವಂತಿತ್ತು. ಇನ್ನೂ ಆ ಸನ್ನಿವೇಶ ನನ್ನ ಕಣ್ಮುಂದೆಯೇ ಇದೆ” ಎನ್ನುತ್ತಾರೆ ಒಬ್ಬ ಸಹೋದರರು. ಲೋಕದ ಜನರಲ್ಲಿ ಯಾರಿಗೂ ಆ ಹೆಸರು ಬೇಡವಾಗಿತ್ತು. ನಮಗಾದರೋ ಕಳೆದ ಎಂಬತ್ತು ವರ್ಷಗಳಿಂದ ಆ ಹೆಸರನ್ನು ಧರಿಸುವ ಸೌಭಾಗ್ಯವನ್ನು ದೇವರು ಕೊಟ್ಟಿದ್ದಾನೆ. ಯೆಹೋವನಿಗೆ ಸಾಕ್ಷಿಗಳಾಗಿರುವುದು ಒಂದು ಅಪ್ರತಿಮ ಸುಯೋಗ!

6. ಬಾಧ್ಯತೆಯಾಗಿ ಪಡೆದ ಆಧ್ಯಾತ್ಮಿಕ ಸ್ವತ್ತಿನಲ್ಲಿ ಬೇರೆ ಯಾವುದು ಕೂಡ ಇದೆ?

6 ನಾವು ಬಾಧ್ಯತೆಯಾಗಿ ಪಡೆದ ಆಧ್ಯಾತ್ಮಿಕ ಸ್ವತ್ತಿನಲ್ಲಿ ಇನ್ನೊಂದು ಯಾವುದೆಂದು ನೋಡೋಣ. ಪ್ರಾಚೀನ ದೇವಸೇವಕರ ಕುರಿತು ನಿಖರವಾದ ಮತ್ತು ಅಮೂಲ್ಯ ಮಾಹಿತಿ ಬೈಬಲಿನಲ್ಲಿದೆ. ಉದಾಹರಣೆಗೆ ಅಬ್ರಹಾಮ, ಇಸಾಕ, ಯಾಕೋಬರ ಕುರಿತು ಬೈಬಲಿನಲ್ಲಿ ತಿಳಿಸಲಾಗಿದೆ. ಇವರು ಯೆಹೋವನನ್ನು ಮೆಚ್ಚಿಸುವಂಥ ರೀತಿಯಲ್ಲಿ ನಡೆದುಕೊಳ್ಳುವುದು ಹೇಗೆಂದು ಕುಟುಂಬವಾಗಿ ಚರ್ಚೆಗಳನ್ನು ನಡೆಸಿದ್ದಿರಬೇಕು. ಹಾಗಾಗಿಯೇ ಯೋಸೇಫನು ಅನೈತಿಕತೆಯನ್ನು ‘ದೇವರಿಗೆ ವಿರುದ್ಧವಾಗಿರುವ ಪಾಪ’ ಎಂದು ಹೇಳಿ ಅದರಿಂದ ದೂರ ಓಡಿಹೋದನು. (ಆದಿ. 39:​7-9) ಒಂದನೇ ಶತಮಾನದಲ್ಲಿ ಕ್ರೈಸ್ತ ಕಟ್ಟಳೆಗಳನ್ನು ಬಾಯಿಮಾತಿನ ಮೂಲಕ ಇಲ್ಲವೆ ಮಾದರಿ ಮೂಲಕ ಇತರರಿಗೆ ದಾಟಿಸಲಾಯಿತು. ಉದಾಹರಣೆಗೆ, ಅಪೊಸ್ತಲ ಪೌಲನು ಕರ್ತನ ಸಂಧ್ಯಾ ಭೋಜನಕ್ಕೆ ಸಂಬಂಧಿಸಿದ ಮಾಹಿತಿಯನ್ನು ಬೇರೆ ಬೇರೆ ಸಭೆಗಳಿಗೆ ತಿಳಿಸಿದನು. (1 ಕೊರಿಂ. 11:​2, 23) ಪೂರ್ವಕಾಲದಿಂದ ಬಂದಿರುವ ಆ ಎಲ್ಲ ಮಾಹಿತಿ ವಿವರ ಬೈಬಲಿನಲ್ಲಿ ದಾಖಲಾಗಿದೆ. ಈ ಮಾಹಿತಿ ಕೂಡ ನಮ್ಮ ಆಧ್ಯಾತ್ಮಿಕ ಸ್ವತ್ತಾಗಿದೆ. ಇದರಿಂದ ನಾವು ದೇವರನ್ನು “ಪವಿತ್ರಾತ್ಮದಿಂದಲೂ ಸತ್ಯದಿಂದಲೂ” ಆರಾಧಿಸಲು ಸಾಧ್ಯವಾಗುತ್ತದೆ. (ಯೋಹಾನ 4:​23, 24 ಓದಿ.) ಬೈಬಲಿನಿಂದ ಲೋಕದ ಎಲ್ಲ ಜನರಿಗೆ ಪ್ರಯೋಜನ ಇದೆಯಾದರೂ ಯೆಹೋವನ ಸೇವಕರಾದ ನಾವು ಅದಕ್ಕಾಗಿ ತುಂಬ ಕೃತಜ್ಞರು.

7. ಹೃದಯಸ್ಪರ್ಶಿಸುವ ಯಾವ ವಾಗ್ದಾನವು ನಮ್ಮ ಬಾಧ್ಯತೆಯ ಭಾಗವಾಗಿದೆ?

7 ‘ಯೆಹೋವನು ನಮ್ಮ ಕಡೆ ಇದ್ದಾನೆ’ ಎಂಬುದನ್ನು ಸಾಬೀತುಪಡಿಸಿದ ಅನೇಕ ಘಟನೆಗಳು ಇತ್ತೀಚೆಗೆ ನಮ್ಮ ಸಾಹಿತ್ಯದಲ್ಲಿ ಪ್ರಕಟವಾದವು. (ಕೀರ್ತ. 118:⁠7) ಆ ದಾಖಲೆಗಳು ನಾವು ಹಿಂಸೆಗೆ ಒಳಗಾದ ಸಂದರ್ಭಗಳಲ್ಲಿ ಸುರಕ್ಷಿತ ಭಾವನೆಯನ್ನು ನಮ್ಮಲ್ಲಿ ಮೂಡಿಸುತ್ತವೆ. ಯೆಹೋವನು ಹೀಗೆ ವಚನವಿತ್ತಿದ್ದಾನೆ: “ನಿನ್ನನ್ನು ಎದುರಿಸಲು ಕಲ್ಪಿಸಿದ ಯಾವ ಆಯುಧವೂ ಜಯಿಸದು; ನ್ಯಾಯವಿಚಾರಣೆಯಲ್ಲಿ ನಿನಗೆ ವಿರುದ್ಧವಾಗಿ ಏಳುವ ಪ್ರತಿಯೊಂದು ನಾಲಿಗೆಯನ್ನು ದೋಷಿಯೆಂದು ನೀನು ಖಂಡಿಸುವಿ. ಈ ಸ್ಥಿತಿಯೇ ಯೆಹೋವನ ಸೇವಕರ ಸ್ವಾಸ್ತ್ಯವೂ [“ಬಾಧ್ಯತೆಯು,” ಪವಿತ್ರ ಗ್ರಂಥ ಭಾಷಾಂತರ] ನಾನು ದಯಪಾಲಿಸುವ ಸದ್ಧರ್ಮಫಲವೂ ಆಗಿದೆ ಎಂದು ಯೆಹೋವನು ಅನ್ನುತ್ತಾನೆ.” (ಯೆಶಾ. 54:17) ಹೃದಯಸ್ಪರ್ಶಿಸುವ ಈ ವಾಗ್ದಾನವು ಕೂಡ ನಮ್ಮ ಆಧ್ಯಾತ್ಮಿಕ ಬಾಧ್ಯತೆಯಾಗಿದೆ. ಸೈತಾನ ಯಾವುದೇ ಅಸ್ತ್ರ ಬಳಸಲಿ ಅದ್ಯಾವುದೂ ನಮಗೆ ಶಾಶ್ವತ ಹಾನಿಯನ್ನು ಮಾಡಲಾರದು.

8. ಈ ಲೇಖನದಲ್ಲಿ ಮತ್ತು ಮುಂದಿನ ಲೇಖನದಲ್ಲಿ ನಾವು ಏನನ್ನು ಪರಿಗಣಿಸಲಿದ್ದೇವೆ?

8 ಸೈತಾನನು ದೇವರ ವಾಕ್ಯವನ್ನು ನಾಶಮಾಡಲು, ಯೆಹೋವನ ಹೆಸರನ್ನು ಅಳಿಸಿಹಾಕಲು ಮತ್ತು ಸತ್ಯವನ್ನು ಮರೆಮಾಚಲು ಎಲ್ಲಿಲ್ಲದ ಪ್ರಯತ್ನ ಮಾಡಿದ್ದಾನೆ. ಆದರೆ ಯೆಹೋವನ ಮುಂದೆ ಅವನ ಪ್ರಯತ್ನವೇನೂ ಸಾಗದು. ಈ ಲೇಖನದಲ್ಲಿ ಮತ್ತು ಮುಂದಿನ ಲೇಖನದಲ್ಲಿ ನಾವು ಮೂರು ಅಂಶಗಳನ್ನು ಗಮನಿಸೋಣ: (1) ಯೆಹೋವನು ತನ್ನ ವಾಕ್ಯವಾದ ಬೈಬಲ್‌ ಮತ್ತು ಅದರಲ್ಲಿರುವ ಸತ್ಯವನ್ನು ಹೇಗೆ ಸಂರಕ್ಷಿಸಿದ್ದಾನೆ? (2) ತನ್ನ ನಾಮ ಅಳಿದುಹೋಗದಂತೆ ಹೇಗೆ ನೋಡಿಕೊಂಡಿದ್ದಾನೆ? (3) ಸ್ವರ್ಗದಲ್ಲಿರುವ ತಂದೆಯಾದ ಯೆಹೋವನು ಸತ್ಯದ ಮೂಲನೂ ಸಂರಕ್ಷಕನೂ ಆಗಿರುವುದು ಹೇಗೆ?

ಯೆಹೋವನು ತನ್ನ ವಾಕ್ಯವನ್ನು ಸಂರಕ್ಷಿಸಿದ್ದಾನೆ

9-11. ನಾನಾ ರೀತಿಯ ಆಕ್ರಮಣಗಳಿಂದ ಬೈಬಲ್‌ ಪಾರಾಗಿದೆಯೆಂದು ಯಾವ ಉದಾಹರಣೆಗಳು ತೋರಿಸುತ್ತವೆ?

9 ಬೈಬಲನ್ನು ಇಲ್ಲದಂತೆ ಮಾಡಲು ಅನೇಕಾನೇಕ ಬಾರಿ ಪ್ರಯತ್ನಿಸಲಾಯಿತು. ಆದರೆ ಯೆಹೋವನು ತನ್ನ ವಾಕ್ಯವನ್ನು ಸಂರಕ್ಷಿಸಿದ್ದಾನೆ. ಒಂದು ಕ್ಯಾಥೊಲಿಕ್‌ ವಿಶ್ವಕೋಶ ಹೇಳುವ ಪ್ರಕಾರ ಆ್ಯಲ್ಬಿಜೆನ್ಸೀಸ್‌ ಮತ್ತು ವಾಲ್ಡೆನ್ಸೀಸರು ಚರ್ಚ್‌ ವಿರುದ್ಧ ದಂಗೆಯೆದ್ದಾಗ ಅವರ ಬಾಯಿ ಮುಚ್ಚಿಸಲಿಕ್ಕಾಗಿ, ಜನಸಾಮಾನ್ಯರು ದೇಶೀಯ ಭಾಷೆಗಳಿಗೆ ಅನುವಾದಗೊಂಡ ಬೈಬಲ್‌ಗಳನ್ನು ಇನ್ನು ಮುಂದೆ ಓದಬಾರದೆಂದು 1229ರ ಟುಲೂಸ್‌ನ ಕೌನ್ಸಿಲ್‌ ನಿಷೇಧ ಹೇರಿತು. 1234ರಲ್ಲಿ ಒಂದನೇ ಜೇಮ್ಸ್‌ ನೇತೃತ್ವದಲ್ಲಿ ಸ್ಪೇನ್‌ನ ಟರಾಗೂನದಲ್ಲಿ ನಡೆದ ಸಭೆಯು ಸಹ ಇಂಥದ್ದೇ ನಿಷೇಧವನ್ನು ಜಾರಿಗೊಳಿಸಿತು. 1559ರಲ್ಲಿ ಮೊತ್ತಮೊದಲ ಬಾರಿ ಈ ವಿಷಯದಲ್ಲಿ ರೋಮನ್‌ ಬಿಷಪರ ಅಧಿಕಾರ ಹಸ್ತಕ್ಷೇಪ ಮಾಡಿತು. 4ನೇ ಪೌಲ್‌ ತಯಾರಿಸಿದ ಇಂಡೆಕ್ಸ್‌ನಲ್ಲಿ ದೇಶೀಯ ಭಾಷೆಯ ಬೈಬಲುಗಳನ್ನು ಪವಿತ್ರ ಅಧಿಕಾರದ ಅನುಮತಿಯಿಲ್ಲದೆ ಮುದ್ರಿಸಬಾರದು ಮತ್ತು ಅದನ್ನು ಹೊಂದಿರಬಾರದು ಎಂದು ಹೇಳಲಾಗಿತ್ತು.

10 ಬೈಬಲನ್ನು ನಾಶಮಾಡಲು ನಾನಾ ರೀತಿಯಲ್ಲಿ ಪ್ರಯತ್ನ ಮಾಡಲಾಯಿತಾದರೂ ಇಂದು ಅದು ನಮ್ಮ ಕೈಸೇರುವಂತೆ ಯೆಹೋವನು ನೋಡಿಕೊಂಡಿದ್ದಾನೆ. ಸುಮಾರು ಇಸವಿ 1382ರಲ್ಲಿ ಜಾನ್‌ ವಿಕ್ಲಿಫ್‌ ಮತ್ತು ಅವನ ಸಂಗಡಿಗರು ಬೈಬಲನ್ನು ಪ್ರಪ್ರಥಮ ಬಾರಿ ಇಂಗ್ಲಿಷ್‌ ಭಾಷೆಗೆ ಭಾಷಾಂತರ ಮಾಡಿದರು. ವಿಲ್ಯಮ್‌ ಟಿಂಡೆಲ್‌ ಕೂಡ ಬೈಬಲನ್ನು ಇಂಗ್ಲಿಷ್‌ಗೆ ಭಾಷಾಂತರ ಮಾಡಿದರು. ಈ ಕಾರಣಕ್ಕಾಗಿ 1536ರಲ್ಲಿ ಟಿಂಡೆಲ್‌ಗೆ ಮರಣದಂಡನೆ ವಿಧಿಸಲಾಯಿತು. ಮರದ ಕಂಬಕ್ಕೆ ಅವರನ್ನು ಕಟ್ಟಿಹಾಕಲಾಯಿತು. ‘ಇಂಗ್ಲೆಂಡ್‌ನ ಅರಸನ ಕಣ್ತೆರೆ ಕರ್ತನೇ’ ಎಂದು ಕೂಗಿಕೊಳ್ಳುತ್ತಿದ್ದಾಗ ಅವರ ಕುತ್ತಿಗೆ ಹಿಸುಕಲಾಯಿತು. ಕೊನೆಗೆ ಅವರ ದೇಹವನ್ನು ಸುಟ್ಟು ಭಸ್ಮಮಾಡಲಾಯಿತು.

11 ಇಂಥೆಲ್ಲ ವಿರೋಧಗಳಿದ್ದರೂ ಬೈಬಲ್‌ ಪಾರಾಯಿತು. 1535ರಲ್ಲಿ ಮೈಲ್ಸ್‌ ಕವರ್‌ಡೇಲ್‌ ಎಂಬವರು ಕೂಡ ಬೈಬಲನ್ನು ಇಂಗ್ಲಿಷ್‌ಗೆ ಭಾಷಾಂತರ ಮಾಡಿದರು. “ಹೊಸ ಒಡಂಬಡಿಕೆ”ಯ ಅನುವಾದಕ್ಕೆ ಮತ್ತು “ಹಳೆ ಒಡಂಬಡಿಕೆ”ಯಲ್ಲಿ ಆದಿಕಾಂಡದಿಂದ ಪೂರ್ವಕಾಲವೃತ್ತಾಂತದ ವರೆಗಿನ ಅನುವಾದಕ್ಕೆ ಇವರು ಟಿಂಡೆಲ್‌ರವರ ಭಾಷಾಂತರವನ್ನು ಆಧಾರವಾಗಿ ಬಳಸಿಕೊಂಡರು. ಇನ್ನುಳಿದ ಭಾಗಗಳನ್ನು ಲ್ಯಾಟಿನ್‌ ಭಾಷೆಯ ಬೈಬಲಿನಿಂದ ಮತ್ತು ಮಾರ್ಟಿನ್‌ ಲೂಥರ್‌ರವರ ಜರ್ಮನ್‌ ಭಾಷಾಂತರದಿಂದ ಅನುವಾದಿಸಿದರು. ಇಂದು ನ್ಯೂ ವರ್ಲ್ಡ್‌ ಟ್ರಾನ್ಸ್‌ಲೇಷನ್‌ ಆಫ್‌ ದ ಹೋಲಿ ಸ್ಕ್ರಿಪ್ಚರ್ಸ್‌ ನಮ್ಮ ಕೈಸೇರಿದೆ. ಇದು ಲಭ್ಯವಿರುವುದಕ್ಕಾಗಿ ನಾವು ತುಂಬ ಕೃತಜ್ಞರು. ಸ್ಪಷ್ಟವೂ ನಿಖರವೂ ಆದ ಈ ಭಾಷಾಂತರವು ನಮ್ಮ ಸೇವೆಯಲ್ಲಿ ಬಹು ಉಪಯುಕ್ತ. ಯೆಹೋವನ ವಾಕ್ಯವನ್ನು ನಿರ್ನಾಮ ಮಾಡಲು ಸೈತಾನನು ಮತ್ತು ಯಾವನೇ ಮಾನವನು ಎಷ್ಟೇ ಪ್ರಯತ್ನ ಮಾಡಿದರೂ ಸೋಲುವುದು ಖಂಡಿತ.

ಯೆಹೋವನು ತನ್ನ ನಾಮ ಅಳಿದುಹೋಗದಂತೆ ನೋಡಿಕೊಂಡಿದ್ದಾನೆ

12. ದೈವಿಕ ನಾಮವನ್ನು ಉಳಿಸುವುದರಲ್ಲಿ ನ್ಯೂ ವರ್ಲ್ಡ್‌ ಟ್ರಾನ್ಸ್‌ಲೇಷನ್‌ ಯಾವ ಪಾತ್ರ ವಹಿಸಿದೆ?

12 ಯೆಹೋವನು ತನ್ನ ವಾಕ್ಯವಾದ ಬೈಬಲಿನಿಂದ ತನ್ನ ಹೆಸರನ್ನು ಯಾರೂ ತೆಗೆದುಹಾಕದಂತೆ ನೋಡಿಕೊಂಡಿದ್ದಾನೆ. ಈ ನಿಟ್ಟಿನಲ್ಲಿ ನ್ಯೂ ವರ್ಲ್ಡ್‌ ಟ್ರಾನ್ಸ್‌ಲೇಷನ್‌ ಆಫ್‌ ದ ಹೋಲಿ ಸ್ಕ್ರಿಪ್ಚರ್ಸ್‌ ಪ್ರಮುಖ ಪಾತ್ರ ವಹಿಸಿದೆ. ಈ ಬೈಬಲನ್ನು ಅನುವಾದಿಸಿದ ಸಮರ್ಪಣಾಭಾವದ ಭಾಷಾಂತರಕಾರರ ಸಮಿತಿ ಪೀಠಿಕೆಯಲ್ಲಿ ಹೀಗಂದಿದೆ: “ಈ ಭಾಷಾಂತರದ ವೈಶಿಷ್ಟ್ಯ ಏನೆಂದರೆ ದೈವಿಕ ನಾಮ ಮೂಲಪ್ರತಿಗಳಲ್ಲಿ ಎಲ್ಲೆಲ್ಲಿ ಇತ್ತೋ ಆ ಎಲ್ಲ ಕಡೆಗಳಲ್ಲಿ ಅದಿರುವಂತೆ ನೋಡಿಕೊಂಡಿರುವುದೇ. ಇಂಗ್ಲಿಷ್‌ನಲ್ಲಿ ಸಾಮಾನ್ಯವಾಗಿ ಸ್ವೀಕೃತವಾದ ‘ಜೆಹೋವ’ ಎಂಬ ಉಚ್ಚಾರಣೆಯನ್ನೇ ಇದರಲ್ಲಿ ಬಳಸಲಾಗಿದೆ. ಆ ನಾಮ ಹೀಬ್ರು ಶಾಸ್ತ್ರಗ್ರಂಥದಲ್ಲಿ ಒಟ್ಟು 6,973 ಬಾರಿ ಮತ್ತು ಕ್ರೈಸ್ತ ಗ್ರೀಕ್‌ ಶಾಸ್ತ್ರಗ್ರಂಥದಲ್ಲಿ ಒಟ್ಟು 237 ಬಾರಿ ಕಂಡುಬರುತ್ತದೆ.” ನ್ಯೂ ವರ್ಲ್ಡ್‌ ಟ್ರಾನ್ಸ್‌ಲೇಷನ್‌ ಈಗ ಪೂರ್ಣವಾಗಿ ಅಥವಾ ಭಾಗಶಃ ಒಟ್ಟು 116ಕ್ಕಿಂತ ಹೆಚ್ಚು ಭಾಷೆಗಳಲ್ಲಿ ಲಭ್ಯವಿದೆ. ಈ ವರೆಗೆ 17,85,45,862ಕ್ಕಿಂತ ಹೆಚ್ಚು ಪ್ರತಿಗಳನ್ನು ಮುದ್ರಿಸಲಾಗಿದೆ.

13. ಮಾನವ ಸೃಷ್ಟಿಯ ಆರಂಭದಿಂದಲೂ ಜನರಿಗೆ ದೇವರ ಹೆಸರು ತಿಳಿದಿದೆಯೆಂದು ಹೇಗೆ ಹೇಳಬಹುದು?

13 ಮಾನವ ಸೃಷ್ಟಿಯ ಆರಂಭದಿಂದಲೂ ದೇವರ ನಾಮವನ್ನು ಉಪಯೋಗಿಸಲಾಗುತ್ತಿತ್ತು. ಆದಾಮಹವ್ವರಿಗೆ ಆ ನಾಮ ಗೊತ್ತಿತ್ತು. ಆ ನಾಮದ ಸರಿಯಾದ ಉಚ್ಚಾರಣೆ ಅವರಿಗೆ ಗೊತ್ತಿತ್ತು. ನೋಹ ಕೂಡ ಆ ನಾಮವನ್ನು ಉಪಯೋಗಿಸಿದನು. ಅವನು ಅಂದದ್ದು: “ಶೇಮನ ದೇವರಾದ ಯೆಹೋವನಿಗೆ ಸ್ತೋತ್ರವಾಗಲಿ.” (ಆದಿ. 4:1; 9:26) ದೇವರು ತಾನೇ ತನ್ನ ಹೆಸರಿನ ಕುರಿತು ಹೀಗೆ ಪ್ರಕಟಿಸಿದನು: “ನಾನೇ ಯೆಹೋವನು; ಇದೇ ನನ್ನ ನಾಮವು; ನನ್ನ ಮಹಿಮೆಯನ್ನು ಮತ್ತೊಬ್ಬನಿಗೆ ಸಲ್ಲಗೊಡಿಸೆನು.” ಮಾತ್ರವಲ್ಲ ಆತನು ಹೇಳಿದ್ದು: “ನಾನೇ ಯೆಹೋವ, ಇನ್ನು ಯಾವನೂ ಅಲ್ಲ, ನಾನು ಹೊರತು ಯಾವ ದೇವರೂ ಇಲ್ಲ.” (ಯೆಶಾ. 42:8; 45:⁠5) ತನ್ನ ಹೆಸರು ಅಳಿದುಹೋಗದಂತೆ ಮತ್ತು ಭೂಮಿಯೆಲ್ಲೆಡೆ ಇರುವ ಜನರು ಆ ಹೆಸರನ್ನು ತಿಳಿದುಕೊಳ್ಳುವಂತೆ ಯೆಹೋವನು ನೋಡಿಕೊಂಡಿದ್ದಾನೆ. ನಾವು ಯೆಹೋವನ ನಾಮವನ್ನು ಉಪಯೋಗಿಸುತ್ತಿರುವುದು ಮತ್ತು ಆತನಿಗೆ ಸಾಕ್ಷಿಗಳಾಗಿ ಸೇವೆಸಲ್ಲಿಸುತ್ತಿರುವುದು ನಮಗಿರುವ ಮಹಾನ್‌ ಸುಯೋಗ! ಕೀರ್ತನೆಗಾರನಂತೆ ನಾವು ಸಹ “ನಮ್ಮ ದೇವರ ಹೆಸರಿನಲ್ಲಿ ಧ್ವಜ ಎತ್ತುವೆವು” ಎಂದು ಕೂಗಿಹೇಳುವೆವು.​—⁠ಕೀರ್ತ. 20:⁠5.

14. ಬೈಬಲ್‌ನಲ್ಲಿ ಅಲ್ಲದೆ ಬೇರೆಲ್ಲಿ ಕೂಡ ದೇವರ ಹೆಸರು ಕಂಡುಬರುತ್ತದೆ?

14 ದೇವರ ಹೆಸರು ಕಂಡುಬರುವುದು ಬೈಬಲಿನಲ್ಲಿ ಮಾತ್ರವಲ್ಲ. ಉದಾಹರಣೆಗೆ, ಮೃತ ಸಮುದ್ರದಿಂದ ಪೂರ್ವಕ್ಕೆ 21 ಕಿ.ಮೀ. ದೂರದಲ್ಲಿರುವ ದೀಬಾನ್‌ನಲ್ಲಿ (ಡೀಬೋನ್‌) ಸಿಕ್ಕಿದ ಮೋವಾಬ್ಯರ ಕಲ್ಲಿನಲ್ಲಿ ಯೆಹೋವನ ಹೆಸರು ಇದೆ. ಆ ಕಲ್ಲಿನಲ್ಲಿ ಇಸ್ರಾಯೇಲ್ಯರ ಅರಸನಾದ ಒಮ್ರಿಯ ಕುರಿತು ಮತ್ತು ಮೋವಾಬ್ಯರ ಅರಸನಾದ ಮೇಷನು ಇಸ್ರಾಯೇಲ್ಯರ ಅರಸನ ವಿರುದ್ಧ ದಂಗೆ ಎದ್ದದ್ದರ ಕುರಿತು ತಿಳಿಸಲಾಗಿದೆ. (1 ಅರ. 16:28; 2 ಅರ. 1:1; 3:​4, 5) ಆಸಕ್ತಿಕರ ವಿಷಯ ಏನೆಂದರೆ ಈ ಮೋವಾಬ್ಯರ ಕಲ್ಲಿನಲ್ಲಿ ದೇವರ ಹೆಸರು ಹೀಬ್ರು ಚತುರಕ್ಷರಿಗಳಲ್ಲಿ (YHWH) ಕಂಡುಬರುತ್ತದೆ. ಅಷ್ಟೇ ಅಲ್ಲ, ಮಣ್ಣಿನ ಮಡಿಕೆಗಳ ಮೇಲೆ ಬರೆಯಲಾದ ಲಾಕೀಷ್‌ ಪತ್ರಗಳನ್ನು ಇಸ್ರೇಲ್‌ನಲ್ಲಿ ಕಂಡುಕೊಳ್ಳಲಾಯಿತು. ಆ ಪತ್ರಗಳಲ್ಲಿ ಕೂಡ ದೇವರ ಹೆಸರು ಹೀಬ್ರು ಚತುರಕ್ಷರಿಗಳಲ್ಲಿ ತುಂಬ ಸಲ ಕಂಡುಬರುತ್ತದೆ.

15. (1) ಸೆಪ್ಟ್ಯುಅಜಿಂಟ್‌ ಅಂದರೆ ಯಾವುದು? (2) ಏಕೆ ಅದರ ಅಗತ್ಯ ಉಂಟಾಯಿತು?

15 ದೈವಿಕ ನಾಮವನ್ನು ಉಳಿಸುವುದರಲ್ಲಿ ಆರಂಭದ ಬೈಬಲ್‌ ಅನುವಾದಕರು ಪಾತ್ರ ವಹಿಸಿದರು. ಹೇಗೆ? ಯೆಹೂದ್ಯರು ಕ್ರಿ.ಪೂ. 607ರಿಂದ ಎಪ್ಪತ್ತು ವರ್ಷ ಬಾಬೆಲಿನಲ್ಲಿ ಬಂದಿವಾಸಿಗಳಾಗಿದ್ದರು. ಕ್ರಿ.ಪೂ. 537ರಲ್ಲಿ ಅವರು ಬಿಡುಗಡೆ ಹೊಂದಿದಾಗ ಅನೇಕ ಯೆಹೂದ್ಯರು ಸ್ವದೇಶಕ್ಕೆ ಹಿಂದಿರುಗಲಿಲ್ಲ. ಅವರು ಬೇರೆ ಬೇರೆ ಸ್ಥಳಗಳಿಗೆ ಹೋಗಿ ನೆಲೆಸಿದರು. ಕ್ರಿ.ಪೂ. 3ನೇ ಶತಮಾನದಷ್ಟಕ್ಕೆ ಅಲೆಕ್ಸಾಂದ್ರಿಯ, ಈಜಿಪ್ಟ್‌ನಲ್ಲಿ ಬಹು ಮಂದಿ ಯೆಹೂದ್ಯರಿದ್ದರು. ಅಲ್ಲಿ ಹೆಚ್ಚಾಗಿ ಬಳಕೆಯಲ್ಲಿದ್ದ ಭಾಷೆ ಗ್ರೀಕ್‌ ಆಗಿತ್ತು. ಆಗ ಹೀಬ್ರು ಶಾಸ್ತ್ರಗ್ರಂಥವನ್ನು ಗ್ರೀಕ್‌ ಭಾಷೆಯಲ್ಲಿ ಅನುವಾದಿಸುವ ಅಗತ್ಯ ಉಂಟಾಯಿತು. ಕ್ರಿ.ಪೂ. 2ನೇ ಶತಮಾನದಷ್ಟಕ್ಕೆ ಹೀಬ್ರು ಶಾಸ್ತ್ರಗ್ರಂಥವು ಗ್ರೀಕ್‌ ಭಾಷೆಗೆ ಭಾಷಾಂತರಗೊಂಡು ‘ಸೆಪ್ಟ್ಯುಅಜಿಂಟ್‌’ ಎಂಬ ಹೆಸರಿನಲ್ಲಿ ಹೊರಬಂತು. ಸೆಪ್ಟ್ಯುಅಜಿಂಟ್‌ನ ಕೆಲವು ಪ್ರತಿಗಳಲ್ಲಿ ಯೆಹೋವ ಎಂಬ ಹೆಸರು ಹೀಬ್ರು ರೂಪದಲ್ಲಿ ಕಂಡುಬರುತ್ತದೆ.

16. ಇಸವಿ 1640ರಲ್ಲಿ ಪ್ರಕಟವಾದ ಪುಸ್ತಕದಲ್ಲಿ ದೇವರ ನಾಮವನ್ನು ಬಳಸಲಾಗಿತ್ತು ಎನ್ನುವುದಕ್ಕೆ ಉದಾಹರಣೆ ಕೊಡಿ.

16 ಇಂಗ್ಲೆಂಡ್‌ನ ಅಮೆರಿಕನ್‌ ವಸಾಹತುಗಳಲ್ಲಿ ಪ್ರಕಟವಾದ ಮೊತ್ತಮೊದಲ ಸಾಹಿತ್ಯವು ಬೈಬಲಿನ ‘ಕೀರ್ತನೆಗಳು’ ಪುಸ್ತಕವಾಗಿದೆ. ಅದನ್ನು ‘ಬೇ ಸಾಮ್‌ ಬುಕ್‌’ ಎಂದು ಕರೆಯಲಾಗುತ್ತಿತ್ತು. ಹೀಬ್ರು ಭಾಷೆಯಿಂದ ಅಂದಿನ ಇಂಗ್ಲಿಷ್‌ಗೆ ಅನುವಾದಿಸಲಾದ ಈ ಪುಸ್ತಕ ಮೊದಲು ಮುದ್ರಣಗೊಂಡದ್ದು ಇಸವಿ 1640ರಲ್ಲಿ. ಆ ಪುಸ್ತಕದಲ್ಲಿ ದೇವರ ನಾಮ ಇದೆ. ಉದಾಹರಣೆಗೆ ಆ ಪುಸ್ತಕದಲ್ಲಿ ಕೀರ್ತನೆ 1:​1, 2ರಲ್ಲಿ “ಆಶೀರ್ವದಿತ ವ್ಯಕ್ತಿ” ದುಷ್ಟರ ಆಲೋಚನೆಯಂತೆ ನಡೆಯದೆ “ಇಹೋವನ (Iehovah) ಧರ್ಮಶಾಸ್ತ್ರದಲ್ಲಿ ಆನಂದಿಸಲು ಹಾತೊರೆಯುತ್ತಾನೆ” ಎಂದು ಹೇಳಲಾಗಿದೆ. ದೇವರ ನಾಮದ ಕುರಿತ ಹೆಚ್ಚಿನ ಮಾಹಿತಿಗಾಗಿ ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಪುಸ್ತಕದ ಪುಟ 195-197 ಮತ್ತು ಕ್ರೈಸ್ತ ಗ್ರೀಕ್‌ ಶಾಸ್ತ್ರಗ್ರಂಥದ ನೂತನ ಲೋಕ ಭಾಷಾಂತರದ ಪರಿಶಿಷ್ಟ 1, 2 ನೋಡಿ.

ಯೆಹೋವನು ಆಧ್ಯಾತ್ಮಿಕ ಸತ್ಯವನ್ನು ಸುರಕ್ಷಿತವಾಗಿರಿಸಿದ್ದಾನೆ

17, 18. (1) “ಸತ್ಯ” ಅಂದರೇನು ಎಂದು ನೀವು ಹೇಗೆ ವಿವರಿಸುವಿರಿ? (2) “ಸುವಾರ್ತೆಯ ಸತ್ಯ”ದಲ್ಲಿ ಏನೆಲ್ಲ ಒಳಗೂಡಿದೆ?

17 ‘ಸತ್ಯದ ದೇವರಾದ ಯೆಹೋವನನ್ನು’ ಆರಾಧಿಸಲು ನಾವು ಹರ್ಷಿಸುತ್ತೇವೆ. (ಕೀರ್ತ. 31:​5, ಪವಿತ್ರ ಗ್ರಂಥ ಭಾಷಾಂತರ) ಒಂದು ನಿಘಂಟಿಗನುಸಾರ “ಒಂದು ವಿಷಯದ ಕುರಿತಾದ ಸತ್ಯ ಅಂದರೆ ಆ ವಿಷಯದ ಕುರಿತ ಎಲ್ಲ ವಾಸ್ತವಾಂಶಗಳಾಗಿವೆ. ಊಹಾಪೋಹಗಳಲ್ಲ, ಕಲ್ಪಿಸಿದ ವಿಷಯಗಳಲ್ಲ.” ಬೈಬಲಿನಲ್ಲಿರುವ ‘ಸತ್ಯ’ ಎಂಬ ಪದಕ್ಕಿರುವ ಮೂಲ ಹೀಬ್ರು ಪದಕ್ಕೆ ನಿಜ, ಭರವಸಾರ್ಹ, ನಂಬಿಕೆಗೆ ಪಾತ್ರವಾದದ್ದು ಎಂಬ ಅರ್ಥವಿದೆ. ಸತ್ಯ ಎಂಬುದಕ್ಕಿರುವ ಗ್ರೀಕ್‌ ಪದವು ಯೋಗ್ಯವಾದ ಸರಿಯಾದ ವಿಷಯಕ್ಕೆ ಅಥವಾ ವಾಸ್ತವಾಂಶಕ್ಕೆ ಹೊಂದಿಕೆಯಲ್ಲಿರುವುದನ್ನು ಸೂಚಿಸುತ್ತದೆ.

18 ಆಧ್ಯಾತ್ಮಿಕ ಸತ್ಯವನ್ನು ಯೆಹೋವನು ಕಾಪಾಡುತ್ತಾ ಬಂದಿದ್ದಾನೆ. ಆ ಸತ್ಯದ ಜ್ಞಾನವು ನಮಗೆ ಹೆಚ್ಚೆಚ್ಚು ಸಮೃದ್ಧವಾಗಿ ಸಿಗುವಂತೆ ಮಾಡಿದ್ದಾನೆ. (2 ಯೋಹಾ. 1, 2) ಸತ್ಯದ ಕುರಿತ ನಮ್ಮ ತಿಳುವಳಿಕೆಯು ಅಧಿಕವಾಗುತ್ತಾ ಹೋಗುತ್ತದೆ. ಏಕೆಂದರೆ “ನೀತಿವಂತರ ಮಾರ್ಗವು ಮಧ್ಯಾಹ್ನದ ವರೆಗೂ ಹೆಚ್ಚುತ್ತಾ ಬರುವ ಬೆಳಗಿನ ಬೆಳಕಿನಂತಿದೆ.” (ಜ್ಞಾನೋ. 4:18) ಯೇಸು ಹೇಳಿದ ಮಾತನ್ನು ನಾವು ಪೂರ್ಣವಾಗಿ ಒಪ್ಪುತ್ತೇವೆ: “ನಿನ್ನ ವಾಕ್ಯವೇ ಸತ್ಯವು.” (ಯೋಹಾ. 17:17) ದೇವರ ಲಿಖಿತ ವಾಕ್ಯದಲ್ಲಿ “ಸುವಾರ್ತೆಯ ಸತ್ಯ” ಇದೆ. ಈ ಸತ್ಯದಲ್ಲಿ ಎಲ್ಲ ಸತ್ಕ್ರೈಸ್ತ ಬೋಧನೆಗಳು ಒಳಗೂಡಿವೆ. (ಗಲಾ. 2:14) ಅವುಗಳಲ್ಲಿ ಕೆಲವು ಯಾವುವೆಂದರೆ ದೇವರ ನಾಮ, ಆತನ ಪರಮಾಧಿಕಾರ, ಯೇಸುವಿನ ವಿಮೋಚನಾ ಮೌಲ್ಯ ಯಜ್ಞ, ದೇವರ ರಾಜ್ಯ ಮತ್ತು ಪುನರುತ್ಥಾನದ ಕುರಿತ ಸತ್ಯಾಂಶಗಳಾಗಿವೆ. ಸತ್ಯವನ್ನು ಮರೆಮಾಚಲು ಸೈತಾನನು ಹಲವು ಪ್ರಯತ್ನಗಳನ್ನು ಮಾಡಿದರೂ ಯೆಹೋವನು ಹೇಗೆ ಸತ್ಯವನ್ನು ಸುರಕ್ಷಿತವಾಗಿಟ್ಟನು ಎನ್ನುವುದನ್ನು ನೋಡೋಣ.

ಸತ್ಯವನ್ನು ಮರೆಮಾಚುವ ಪ್ರಯತ್ನಗಳನ್ನು ಯೆಹೋವನು ಭಂಗಗೊಳಿಸಿದ್ದಾನೆ

19, 20. (1) ನಿಮ್ರೋದನು ಯಾರು? (2) ಅವನ ಸಮಯದಲ್ಲಿ ನಡೆದ ಯಾವ ಪ್ರಯತ್ನವನ್ನು ದೇವರು ಭಂಗಗೊಳಿಸಿದನು?

19 ಜಲಪ್ರಳಯದ ನಂತರ ಇದ್ದ ನಿಮ್ರೋದ ಎಂಬವನು “ಯೆಹೋವನಿಗೆ ವಿರುದ್ಧ ಎದ್ದ ಅತಿಸಾಹಸಿಯಾದ ಬೇಟೆಗಾರ”ನಾಗಿದ್ದನು. (ಆದಿ. 10:​9, NW) ನಿಮ್ರೋದನು ಯೆಹೋವ ದೇವರನ್ನು ವಿರೋಧಿಸುತ್ತಿದ್ದುದರಿಂದ ಅವನು ನಿಜವಾಗಿ ಸೈತಾನನನ್ನು ಆರಾಧಿಸುತ್ತಿದ್ದನು ಮತ್ತು ಯೇಸುವನ್ನು ವಿರೋಧಿಸಿದ ಜನರಂತಿದ್ದನು. ಆ ಜನರಿಗೆ ಯೇಸು ಹೀಗಂದನು: “ನೀವು ನಿಮ್ಮ ತಂದೆಯಾದ ಪಿಶಾಚನಿಂದ ಹುಟ್ಟಿದವರಾಗಿದ್ದೀರಿ ಮತ್ತು ನಿಮ್ಮ ತಂದೆಯ ಇಚ್ಛೆಗಳನ್ನೇ ಮಾಡಬೇಕೆಂದಿದ್ದೀರಿ. ಅವನು . . . ಸತ್ಯದಲ್ಲಿ ನೆಲೆನಿಲ್ಲಲಿಲ್ಲ.”​—⁠ಯೋಹಾ. 8:⁠44.

20 ನಿಮ್ರೋದನು ಬಾಬೆಲನ್ನು ಮತ್ತು ಟೈಗ್ರಿಸ್‌ ಹಾಗೂ ಯೂಫ್ರೇಟೀಸ್‌ ನದಿಗಳ ಮಧ್ಯೆಯಿರುವ ಪಟ್ಟಣಗಳನ್ನು ಆಳಿದನು. (ಆದಿ. 10:10) ಪ್ರಾಯಶಃ ಅವನ ನಿರ್ದೇಶನದಡಿಯಲ್ಲೇ ಕ್ರಿ.ಪೂ. 2269ರಲ್ಲಿ ಬಾಬೆಲ್‌ ಪಟ್ಟಣವನ್ನು ಮತ್ತು ಅಲ್ಲೊಂದು ಗೋಪುರವನ್ನು ಕಟ್ಟಲು ಆರಂಭಿಸಲಾಯಿತು. ಮಾನವಕುಲವು ಭೂಮಿಯ ಎಲ್ಲ ಕಡೆಗಳಲ್ಲಿ ವಾಸಿಸಬೇಕೆಂಬುದು ಯೆಹೋವನ ಚಿತ್ತವಾಗಿತ್ತು. ಆದರೆ ಅದಕ್ಕೆ ವಿರುದ್ಧವಾಗಿ ಆ ನಿರ್ಮಾಣಕಾರರು, “ಬನ್ನಿ, . . . ಒಂದು ಪಟ್ಟಣವನ್ನೂ ಆಕಾಶವನ್ನು ಮುಟ್ಟುವ ಗೋಪುರವನ್ನೂ ಕಟ್ಟಿ ದೊಡ್ಡ ಹೆಸರನ್ನು ಪಡೆಯೋಣ; ಹೀಗೆ ಮಾಡಿದರೆ ಭೂಮಿಯ ಮೇಲೆಲ್ಲಾ ಚದರುವದಕ್ಕೆ ಆಸ್ಪದವಾಗುವದಿಲ್ಲ ಅಂದುಕೊಂಡರು.” ಆದರೆ ಅವರು ಕೈಹಾಕಿದ ಕೆಲಸ ಪೂರ್ಣಗೊಳ್ಳಲಿಲ್ಲ. ಏಕೆಂದರೆ “ಸಮಸ್ತಲೋಕದ ಭಾಷೆಯನ್ನು ಯೆಹೋವನು . . . ತಾರುಮಾರುಮಾಡಿ” ಅವರನ್ನು ಅಲ್ಲಿಂದ ಚದರಿಸಿಬಿಟ್ಟನು. (ಆದಿ. 11:​1-4, 8, 9) ಆ ನಿರ್ಮಾಣಕಾರ್ಯದ ಹಿಂದೆ ಸೈತಾನನ ಕೈವಾಡವಿದ್ದಿರಬೇಕು. ಸತ್ಯಧರ್ಮವನ್ನು ನಾಶಮಾಡಿ ಎಲ್ಲರೂ ತನ್ನನ್ನೇ ಆರಾಧಿಸುತ್ತಾ ಇರಬೇಕೆಂಬ ಅವನ ಯೋಜನೆಯನ್ನು ಯೆಹೋವನು ಭಂಗಪಡಿಸಿದನು. ಇತಿಹಾಸದಾದ್ಯಂತ ಆತನು ಸತ್ಯಾರಾಧನೆಯನ್ನು ಕಾಪಾಡುತ್ತಾ ಬಂದಿದ್ದಾನೆ. ಇಂದು ಪ್ರತಿ ದಿನವೂ ಸತ್ಯಾರಾಧನೆ ಅಭಿವೃದ್ಧಿಯೆತ್ತರಕ್ಕೆ ಏರುತ್ತಿದೆ.

21, 22. (1) ಸುಳ್ಳು ಧರ್ಮವು ಎಂದಿಗೂ ಸತ್ಯ ಧರ್ಮವನ್ನು ದಮನಮಾಡುವುದರಲ್ಲಿ ಜಯಹೊಂದಿಲ್ಲ ಏಕೆ? (2) ಮುಂದಿನ ಲೇಖನದಲ್ಲಿ ನಾವು ಯಾವ ವಿಷಯವನ್ನು ಚರ್ಚಿಸಲಿದ್ದೇವೆ?

21 ಸುಳ್ಳು ಧರ್ಮವು ಎಂದಿಗೂ ಸತ್ಯ ಧರ್ಮವನ್ನು ದಮನಮಾಡುವುದರಲ್ಲಿ ಜಯಹೊಂದಿಲ್ಲ. ಏಕೆ? ಏಕೆಂದರೆ ನಮ್ಮ ಮಹೋನ್ನತ ಬೋಧಕನಾದ ಯೆಹೋವನು ತನ್ನ ವಾಕ್ಯವಾಗಲಿ ತನ್ನ ನಾಮವಾಗಲಿ ಅಳಿದುಹೋಗುವಂತೆ ಬಿಡಲಿಲ್ಲ. ಮಾತ್ರವಲ್ಲ ಅಪರಿಮಿತ ಆಧ್ಯಾತ್ಮಿಕ ಸತ್ಯದ ಮೂಲನಾದ ಆತನು ನಮಗೆ ಸತ್ಯವನ್ನು ತಿಳಿಯಪಡಿಸುತ್ತಾ ಬಂದಿದ್ದಾನೆ. (ಯೆಶಾ. 30:​20, 21) ಸತ್ಯಕ್ಕೆ ಅನುಗುಣವಾಗಿ ದೇವರನ್ನು ಆರಾಧಿಸುವುದು ನಮಗೆ ಹರ್ಷವನ್ನು ತರುತ್ತದೆ. ಹಾಗೆ ಆರಾಧಿಸಲು ನಾವು ಆಧ್ಯಾತ್ಮಿಕವಾಗಿ ಎಚ್ಚರವಾಗಿ ಉಳಿಯಬೇಕು. ಯೆಹೋವನ ಮೇಲೆ ಪೂರ್ತಿ ಹೊಂದಿಕೊಳ್ಳಬೇಕು. ಪವಿತ್ರಾತ್ಮದ ಮಾರ್ಗದರ್ಶನವನ್ನು ಪಾಲಿಸಬೇಕು.

22 ಕೆಲವು ಸುಳ್ಳು ಬೋಧನೆಗಳು ಹೇಗೆ ಚಿಗುರೊಡೆದು ಬೆಳೆದವು ಎಂಬುದನ್ನು ನಾವು ಮುಂದಿನ ಲೇಖನದಲ್ಲಿ ನೋಡೋಣ. ಈ ಸುಳ್ಳುಗಳನ್ನು ಬೈಬಲ್‌ ವಚನಗಳ ಬೆಳಕಿನಲ್ಲಿ ನೋಡುವಾಗ ಅವು ಎಷ್ಟೊಂದು ಪೊಳ್ಳು ಎಂದು ಗೊತ್ತಾಗುತ್ತದೆ. ಮಾತ್ರವಲ್ಲ ಸತ್ಯದ ಅಪ್ರತಿಮ ಸಂರಕ್ಷಕನಾದ ಯೆಹೋವನು ನಮಗೆ ಹೇಗೆ ಸತ್ಯ ಬೋಧನೆಗಳನ್ನು ತಿಳಿಯಪಡಿಸಿದ್ದಾನೆ ಎನ್ನುವುದನ್ನೂ ಪರಿಗಣಿಸೋಣ. ಅವು ನಮಗೆ ಬಹು ಅಮೂಲ್ಯವಾದ ಆಧ್ಯಾತ್ಮಿಕ ಸ್ವತ್ತಿನ ಭಾಗವಾಗಿದೆ.

[ಅಧ್ಯಯನ ಪ್ರಶ್ನೆಗಳು]

[ಪುಟ 3ರಲ್ಲಿರುವ ಚಿತ್ರ]

[ಪುಟ 4ರಲ್ಲಿರುವ ಚಿತ್ರಗಳು]

1931ರ ಅಧಿವೇಶನದಲ್ಲಿ ‘ಯೆಹೋವನ ಸಾಕ್ಷಿಗಳು’ ಎಂಬ ಹೆಸರನ್ನು ಸ್ವೀಕರಿಸಿದಾಗ ನಮ್ಮಲ್ಲಿ ಹರ್ಷೋಲ್ಲಾಸ ಚಿಮ್ಮಿತು

[ಪುಟ 5ರಲ್ಲಿರುವ ಚಿತ್ರ]

ಟಿಂಡೆಲ್‌ ಮತ್ತು ಇತರರು ಬೈಬಲನ್ನು ಭಾಷಾಂತರಿಸಲು ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದರು

[ಕೃಪೆ]

From Foxe’s Book of Martyrs