ಆದಿಕಾಂಡ 9:1-29

  • ಮಾನವಕುಲಕ್ಕೆ ನಿರ್ದೇಶನ (1-7)

    • ರಕ್ತದ ಬಗ್ಗೆ ನಿಯಮ (4-6)

  • ಮಳೆಬಿಲ್ಲಿನ ಒಪ್ಪಂದ (8-17)

  • ನೋಹನ ವಂಶದವರ ಬಗ್ಗೆ ಮುಂಚೆನೇ ಹೇಳಿದ್ದು (18-29)

9  ದೇವರು ನೋಹ, ಅವನ ಮಕ್ಕಳನ್ನ ಆಶೀರ್ವದಿಸ್ತಾ ಹೀಗಂದನು: “ನೀವು ತುಂಬ ಮಕ್ಕಳನ್ನ ಪಡೆದು ಭೂಮೀಲಿ ತುಂಬ ಜನ ತುಂಬ್ಕೊಳಿ.+  ಭೂಮಿಯಲ್ಲಿರೋ ಎಲ್ಲ ಜೀವಿಗಳು ಮುಂದಕ್ಕೂ ನಿಮಗೆ ಹೆದರುತ್ತೆ. ಆಕಾಶದಲ್ಲಿ ಹಾರೋ, ನೆಲದ ಮೇಲೆ ಚಲಿಸೋ ಎಲ್ಲ ಜೀವಿಗಳು, ಸಮುದ್ರದಲ್ಲಿರೋ ಎಲ್ಲ ಮೀನುಗಳು ನಿಮಗೆ ಭಯಪಡುತ್ತೆ. ಇವನ್ನೆಲ್ಲ ನಾನು ನಿಮ್ಮ ಕೈಗೆ ಒಪ್ಪಿಸಿದ್ದೀನಿ.*+  ಭೂಮಿಯಲ್ಲಿ ಜೀವಂತವಾಗಿರೋ ಎಲ್ಲ ಪ್ರಾಣಿಗಳನ್ನ ನೀವು ತಿನ್ನಬಹುದು.+ ನಾನು ನಿಮಗೆ ಊಟಕ್ಕಾಗಿ ಹಸಿರು ಸಸ್ಯಗಳನ್ನ ಕೊಟ್ಟ ಹಾಗೆ ಇವನ್ನೆಲ್ಲ ಕೊಡ್ತೀನಿ.+  ಆದ್ರೆ ರಕ್ತ ಇರೋ ಮಾಂಸನ ನೀವು ತಿನ್ನಲೇಬಾರದು.+ ಯಾಕಂದ್ರೆ ರಕ್ತ+ ಜೀವವಾಗಿದೆ.  ಯಾರಾದ್ರೂ ಜೀವ ಆಗಿರೋ ನಿಮ್ಮ ರಕ್ತನ ಸುರಿಸಿದ್ರೆ* ನಾನು ಅವ್ರಿಂದ ಲೆಕ್ಕ ಕೇಳ್ತೀನಿ. ನಿಮ್ಮ ರಕ್ತ ಸುರಿಸಿದ್ದು ಪ್ರಾಣಿಯಾಗಿದ್ರೆ ಅದನ್ನ ಸಾಯಿಸಬೇಕು.+ ರಕ್ತ ಸುರಿಸಿದ್ದು ಮನುಷ್ಯನಾಗಿದ್ರೆ ಸತ್ತವನ ಜೀವಕ್ಕೆ ಬದಲು ಅವನು ತನ್ನ ಜೀವ ಕೊಡಲೇಬೇಕು. ಯಾಕಂದ್ರೆ ಅವನು ಕೊಂದಿದ್ದು ತನ್ನ ಸಹೋದರನನ್ನ ಅಲ್ವಾ?  ದೇವರು ಮನುಷ್ಯನನ್ನ ತನ್ನ ಹಾಗೆ ಸೃಷ್ಟಿ ಮಾಡಿದ್ರಿಂದ+ ಯಾರಾದ್ರೂ ಮನುಷ್ಯನ ರಕ್ತ ಸುರಿಸಿದ್ರೆ+ ಅವನ ರಕ್ತನೂ ಮನುಷ್ಯನೇ ಸುರಿಸ್ತಾನೆ.  ನೀವು ತುಂಬ ಮಕ್ಕಳನ್ನ ಪಡೆದು ತುಂಬ ಜನ ಆಗಿ ಇಡೀ ಭೂಮಿ ತುಂಬ್ಕೊಳಿ.”+  ಆಮೇಲೆ ದೇವರು ನೋಹ, ಅವನ ಜೊತೆ ಇದ್ದ ಮಕ್ಕಳಿಗೆ ಹೀಗಂದನು:  “ಈಗ ನಾನು ನಿಮ್ಮ ಜೊತೆ, ನಿಮಗಾಗೋ ಸಂತಾನದ ಜೊತೆ ಒಪ್ಪಂದ ಮಾಡ್ಕೊಳ್ತೀನಿ.+ 10  ನಿಮ್ಮ ಜೊತೆ ಹಡಗಿಂದ ಹೊರಗೆ ಬಂದ ಪ್ರತಿಯೊಂದು ಜೀವಿಯ ಜೊತೆ ಅಂದ್ರೆ ಪಕ್ಷಿಗಳು, ಸಾಕುಪ್ರಾಣಿಗಳು, ಕಾಡುಪ್ರಾಣಿಗಳ ಜೊತೆ ಒಪ್ಪಂದ ಮಾಡ್ಕೊಳ್ತೀನಿ. ಈ ಒಪ್ಪಂದವನ್ನ ಭೂಮಿಯ ಎಲ್ಲ ಜೀವಿಗಳ ಜೊತೆ ಮಾಡ್ಕೊಳ್ತೀನಿ.+ 11  ಅದೇನಂದ್ರೆ ನಾನು ಇನ್ನು ಯಾವತ್ತೂ ಜಲಪ್ರಳಯದಿಂದ ಎಲ್ಲ ಪ್ರಾಣಿಗಳನ್ನ, ಮನುಷ್ಯರನ್ನ ನಾಶಮಾಡಲ್ಲ. ಇನ್ನು ಯಾವತ್ತೂ ಇಡೀ ಭೂಮಿನ ನೀರಿಂದ ನಾಶಮಾಡಲ್ಲ ಅಂತ ನಿಮಗೆ ಮಾತು ಕೊಡ್ತೀನಿ.”+ 12  ದೇವರು ಇದನ್ನೂ ಹೇಳಿದನು: “ನಿಮ್ಮ ಜೊತೆ, ಎಲ್ಲ ಜೀವಿಗಳ ಜೊತೆ ನಾನು ಮಾಡಿರೋ ಈ ಒಪ್ಪಂದ ಮುಂದಿನ ಎಲ್ಲ ತಲೆಮಾರುಗಳ ತನಕ ಇರುತ್ತೆ. ಈ ಒಪ್ಪಂದಕ್ಕೆ ಒಂದು ಗುರುತಾಗಿ 13  ನಾನು ಮೋಡಗಳಲ್ಲಿ ಮಳೆಬಿಲ್ಲು ಇಡ್ತೀನಿ. ಭೂಮಿಯಲ್ಲಿ ಜೀವಿಸೋ ಎಲ್ಲ ಮನುಷ್ಯರ ಜೊತೆ, ಜೀವಿಗಳ ಜೊತೆ ನಾನು ಮಾಡ್ಕೊಂಡಿರೋ ಒಪ್ಪಂದಕ್ಕೆ ಇದು ಗುರುತಾಗಿರುತ್ತೆ. 14  ನಾನು ಆಕಾಶದಲ್ಲಿ ಮೋಡ ತಂದಾಗೆಲ್ಲ ಆ ಮೋಡದಲ್ಲಿ ಮಳೆಬಿಲ್ಲು ಕಾಣಿಸುತ್ತೆ. 15  ಆಗ ನಾನು ನಿಮ್ಮ ಜೊತೆ, ಎಲ್ಲ ಜಾತಿಯ ಜೀವಿಗಳ ಜೊತೆ ಮಾಡ್ಕೊಂಡಿರೋ ಶಾಶ್ವತ ಒಪ್ಪಂದನ ನೆನಪಿಸ್ಕೊಳ್ತೀನಿ. ಹಾಗಾಗಿ ನಾನು ಮುಂದೆ ಯಾವತ್ತೂ ಪ್ರಾಣಿಗಳನ್ನ ಮನುಷ್ಯರನ್ನ ನೀರಿಂದ ನಾಶಮಾಡಲ್ಲ.+ 16  ಮೋಡದಲ್ಲಿ ಮಳೆಬಿಲ್ಲು ಕಾಣಿಸ್ವಾಗ ಅದನ್ನ ನೋಡಿ ಭೂಮಿಯಲ್ಲಿರೋ ಎಲ್ಲ ಜಾತಿಯ ಜೀವಿಗಳ ಜೊತೆ ನಾನು ಮಾಡ್ಕೊಂಡ ಆ ಒಪ್ಪಂದವನ್ನ ನೆನಪಿಸ್ಕೊಳ್ತೀನಿ.” 17  ದೇವರು ಮತ್ತೆ ನೋಹಗೆ “ನಾನು ಭೂಮಿಯಲ್ಲಿರೋ ಪ್ರಾಣಿಗಳ ಜೊತೆ, ಮನುಷ್ಯರ ಜೊತೆ ಮಾಡಿರೋ ಒಪ್ಪಂದಕ್ಕೆ ಗುರುತೇ ಈ ಮಳೆಬಿಲ್ಲು”+ ಅಂದನು. 18  ಹಡಗಿಂದ ಹೊರಗೆ ಬಂದ ನೋಹನ ಮಕ್ಕಳು ಯಾರಂದ್ರೆ ಶೇಮ್‌, ಹಾಮ್‌, ಯೆಫೆತ್‌.+ ಆಮೇಲೆ ಹಾಮನಿಗೆ ಕಾನಾನ ಹುಟ್ಟಿದ.+ 19  ಈ ಮೂವರು ನೋಹನ ಮಕ್ಕಳು. ಇವರಿಂದಾನೇ ಭೂಮಿಯಲ್ಲಿರೋ ಎಲ್ಲ ಜನ್ರು ಹುಟ್ಟಿದ್ರು, ಎಲ್ಲ ಕಡೆ ಹರಡ್ಕೊಂಡ್ರು.+ 20  ನೋಹ ವ್ಯವಸಾಯ ಮಾಡೋಕೆ ಶುರುಮಾಡಿದ. ಅವನು ಒಂದು ದ್ರಾಕ್ಷಿತೋಟ ಮಾಡಿದ. 21  ಒಂದು ದಿನ ದ್ರಾಕ್ಷಾಮದ್ಯ ಕುಡಿದು ಅಮಲೇರಿ ತನ್ನ ಡೇರೆಯೊಳಗೆ ಬೆತ್ತಲೆಯಾಗಿ ಬಿದ್ದಿದ್ದ. 22  ಕಾನಾನನ ತಂದೆ ಹಾಮ ತನ್ನ ತಂದೆ ಬೆತ್ತಲೆಯಾಗಿ ಇರೋದನ್ನ ನೋಡಿ* ಹೊರಗಿದ್ದ ಅಣ್ಣಂದಿರಿಗೆ ಹೇಳಿದ. 23  ಆಗ ಶೇಮ್‌ ಮತ್ತು ಯೆಫೆತ್‌ ಉದ್ದವಾದ ಬಟ್ಟೆನ ತಮ್ಮ ಹೆಗಲ ಮೇಲೆ ಹಾಕೊಂಡು ನೋಹನ ಕಡೆಗೆ ಬೆನ್ನುಮಾಡಿ ಹಿಂದೆಹಿಂದೆ ನಡ್ಕೊಂಡು ಹೋಗಿ ಆ ಬಟ್ಟೆನ ಅಪ್ಪಗೆ ಹೊದಿಸಿದ್ರು. ಅವರು ಹಿಂದೆ ತಿರುಗಿದ್ರಿಂದ ನೋಹ ಬೆತ್ತಲೆಯಾಗಿ ಇರೋದನ್ನ ನೋಡಲಿಲ್ಲ. 24  ಅಮಲು ಇಳಿದ ಮೇಲೆ ನೋಹ ಎದ್ದಾಗ ಅವನ ಚಿಕ್ಕ ಮಗ ಮಾಡಿದ್ದು ಗೊತ್ತಾಗಿ 25  ಹೀಗಂದ: “ಕಾನಾನನ+ ಮೇಲೆ ಶಾಪ ಬರಲಿಅವನು ತನ್ನ ಅಣ್ಣಂದಿರ ದಾಸರಿಗೆ ದಾಸ ಆಗ್ಲಿ.”+ 26  ನೋಹ ಇದನ್ನೂ ಹೇಳಿದ: “ಶೇಮನ ದೇವರಾದ ಯೆಹೋವನನ್ನ ಹೊಗಳಲಿ,ಕಾನಾನ ಶೇಮನಿಗೆ ದಾಸ ಆಗಲಿ.+ 27  ಯೆಫೆತನಿಗೆ ದೇವರು ವಿಸ್ತಾರ ಸ್ಥಳ ಕೊಡ್ಲಿ,ಯೆಫೆತ ಶೇಮನ ಡೇರೆಯಲ್ಲಿ ವಾಸ ಮಾಡ್ಲಿ. ಕಾನಾನ ಯೆಫೆತನಿಗೂ ದಾಸ ಆಗ್ಲಿ.” 28  ಜಲಪ್ರಳಯ ಆದ್ಮೇಲೆ ನೋಹ 350 ವರ್ಷ ಬದುಕಿದ.+ 29  ನೋಹ ಒಟ್ಟು 950 ವರ್ಷ ಬದುಕಿ ಸತ್ತ.

ಪಾದಟಿಪ್ಪಣಿ

ಅಥವಾ “ಇವುಗಳ ಮೇಲೆ ನಾನು ನಿನಗೆ ಅಧಿಕಾರ ಕೊಟ್ಟಿದ್ದೀನಿ.”
ಅಂದ್ರೆ, “ನಿಮ್ಮನ್ನ ಕೊಲ್ಲೋ.”
ಈ ಪದ, ಪ್ರಜ್ಞೆ ಇಲ್ಲದ ನೋಹನ ಮೇಲೆ ಕಾನಾನ ಮಾಡಿದ ಅಥವಾ ಮಾಡೋಕೆ ಪ್ರಯತ್ನಿಸಿದ ಯಾವುದೋ ಕೆಟ್ಟ ವಿಷ್ಯವನ್ನ ಸೂಚಿಸಬಹುದು.