ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಒಳ್ಳೆಯದು ಕೆಟ್ಟದ್ದನ್ನು ಜಯಿಸುವ ವಿಧ

ಒಳ್ಳೆಯದು ಕೆಟ್ಟದ್ದನ್ನು ಜಯಿಸುವ ವಿಧ

ಒಳ್ಳೆಯದು ಕೆಟ್ಟದ್ದನ್ನು ಜಯಿಸುವ ವಿಧ

ರಾಜ ದಾವೀದನು ಒಬ್ಬ ಒಳ್ಳೇ ಮನುಷ್ಯನಾಗಿದ್ದನು. ಅವನಿಗೆ ದೇವರ ಕಡೆಗೆ ಆಳವಾದ ಪ್ರೀತಿ, ನ್ಯಾಯಕ್ಕಾಗಿ ಹಂಬಲ ಮತ್ತು ಬಡವರಿಗಾಗಿ ಪ್ರೀತಿಭರಿತ ಕಾಳಜಿಯಿತ್ತು. ಹಾಗಿದ್ದರೂ, ಒಳ್ಳೆಯವನಾದ ಇದೇ ರಾಜನು ತನ್ನ ಭರವಸಾರ್ಹ ಪುರುಷರಲ್ಲಿ ಒಬ್ಬನ ಪತ್ನಿಯೊಂದಿಗೆ ವ್ಯಭಿಚಾರಗೈದನು. ಅನಂತರ ಆ ವ್ಯಕ್ತಿಯ ಪತ್ನಿಯಾದ ಬತ್ಷೆಬೆಯು ತನ್ನಿಂದ ಗರ್ಭಧರಿಸಿದಳೆಂದು ಅವನಿಗೆ ತಿಳಿದುಬಂದಾಗ ಅವಳ ಗಂಡನ ಕೊಲೆಯನ್ನು ಏರ್ಪಡಿಸಿದನು. ತದನಂತರ ಅವನು ತನ್ನ ಪಾತಕವನ್ನು ಮರೆಮಾಚಲು ಬತ್ಷೆಬೆಯನ್ನು ವಿವಾಹವಾದನು.​—⁠2 ಸಮುವೇಲ 11:​1-27.

ಬಹಳಷ್ಟು ಒಳ್ಳೇದನ್ನು ಮಾಡುವ ಸಾಮರ್ಥ್ಯ ಮನುಷ್ಯರಿಗಿದೆ ಎಂಬುದು ಸುವ್ಯಕ್ತ. ಹಾಗಿರುವಲ್ಲಿ, ಇಷ್ಟೊಂದು ಕೆಟ್ಟತನಕ್ಕೆ ಅವರೇಕೆ ಕಾರಣರಾಗಿದ್ದಾರೆ? ಇದಕ್ಕಿರುವ ಅನೇಕ ಮೂಲಭೂತ ಕಾರಣಗಳನ್ನು ಬೈಬಲ್‌ ಗುರುತಿಸುತ್ತದೆ. ಮಾತ್ರವಲ್ಲದೆ, ದೇವರು ಕ್ರಿಸ್ತ ಯೇಸುವಿನ ಮೂಲಕ ಹೇಗೆ ಕೆಟ್ಟತನವನ್ನು ಸಂಪೂರ್ಣವಾಗಿಯೂ ಶಾಶ್ವತವಾಗಿಯೂ ತೆಗೆದುಹಾಕುವನು ಎಂಬುದನ್ನು ಸಹ ಬೈಬಲ್‌ ತಿಳಿಯಪಡಿಸುತ್ತದೆ.

ಕೆಟ್ಟತನದ ಕಡೆಗೆ ಒಲವು

ದುಷ್ಕೃತ್ಯಗಳ ಹಿಂದಿರುವ ಒಂದು ಕಾರಣವನ್ನು ಸ್ವತಃ ರಾಜ ದಾವೀದನೇ ಗುರುತಿಸಿದನು. ಅವನ ಪಾತಕಗಳು ಬಯಲಾದ ಬಳಿಕ, ತನ್ನ ಕೃತ್ಯಗಳಿಗೆ ತಾನೇ ಪೂರ್ಣ ಜವಾಬ್ದಾರನು ಎಂಬುದನ್ನು ಅವನು ಒಪ್ಪಿಕೊಂಡನು. ಅನಂತರ ಅವನು ಪಶ್ಚಾತ್ತಾಪಭರಿತ ಹೃದಯದಿಂದ ಬರೆದದ್ದು: “ಹುಟ್ಟಿದಂದಿನಿಂದ ನಾನು ಪಾಪಿಯೇ; ಮಾತೃಗರ್ಭವನ್ನು ಹೊಂದಿದ ದಿನದಿಂದ ದ್ರೋಹಿಯೇ.” (ಕೀರ್ತನೆ 51:⁠5) ಪಾಪಿಗಳಾದ ಮಕ್ಕಳನ್ನು ತಾಯಂದಿರು ಗರ್ಭಧರಿಸಬೇಕೆಂಬುದು ಎಂದಿಗೂ ದೇವರ ಉದ್ದೇಶವಾಗಿರಲಿಲ್ಲ. ಹಾಗಿದ್ದರೂ, ಹವ್ವಳು ಮತ್ತು ಅನಂತರ ಆದಾಮನು ದೇವರಿಗೆ ವಿರುದ್ಧವಾಗಿ ದಂಗೆಯೇಳಲು ಆಯ್ಕೆಮಾಡಿದಾಗ, ಪಾಪರಹಿತ ಮಕ್ಕಳನ್ನು ಹಡೆಯುವ ಸಾಮರ್ಥ್ಯವನ್ನು ಅವರು ಕಳೆದುಕೊಂಡರು. (ರೋಮಾಪುರ 5:12) ಅಪರಿಪೂರ್ಣ ಮಾನವ ಸಂತತಿಯು ಹೆಚ್ಚಾಗುತ್ತಾ ಹೋದಂತೆ, “ಮನುಷ್ಯರ ಮನಸ್ಸಂಕಲ್ಪವು ಚಿಕ್ಕಂದಿನಿಂದಲೇ ಕೆಟ್ಟದ್ದು” ಎಂದು ಆದಿಕಾಂಡ 8:21ರಲ್ಲಿ ತಿಳಿಸಿರುವಂತೆ ಅವರಿಗೆ ಕೆಟ್ಟತನದ ಕಡೆಗೆ ಒಲವು ಇದೆ ಎಂಬುದು ರುಜುವಾಯಿತು.

ಕೆಟ್ಟತನದ ಕಡೆಗಿನ ಈ ಒಲವನ್ನು ಹತೋಟಿಯಲ್ಲಿಡದೇ ಹೋದರೆ, ಇದು “ಜಾರತ್ವ . . . ಹಗೆತನ ಜಗಳ ಹೊಟ್ಟೇಕಿಚ್ಚು ಸಿಟ್ಟು ಕಕ್ಷಭೇದ ಭಿನ್ನಮತ ಮತ್ಸರ” ಮತ್ತು ಇತರ ನಾಶಕಾರಕ ಗುಣಗಳನ್ನು ಉಂಟುಮಾಡುತ್ತದೆ. ಇಂಥ ಗುಣಗಳನ್ನು ಬೈಬಲ್‌ “ಶರೀರಭಾವದ ಕರ್ಮಗಳು” ಎಂಬುದಾಗಿ ವರ್ಣಿಸುತ್ತದೆ. (ಗಲಾತ್ಯ 5:​19-21) ರಾಜ ದಾವೀದನು ತನ್ನ ಶಾರೀರಿಕ ಬಲಹೀನತೆಗಳಿಗೆ ಮಣಿದು ವ್ಯಭಿಚಾರಗೈದನು. ಇದು ಹಿಂಸಾತ್ಮಕ ಜಗಳಗಳಿಗೆ ನಡೆಸಿತು. (2 ಸಮುವೇಲ 12:​1-12) ಅವನು ತನ್ನ ಅನೈತಿಕ ಪ್ರವೃತ್ತಿಯನ್ನು ಅಥವಾ ಒಲವನ್ನು ತಡೆಹಿಡಿಯಬಹುದಿತ್ತು. ಆದರೆ ಅದಕ್ಕೆ ಬದಲಾಗಿ ಅವನು ಬತ್ಷೆಬೆಗಾಗಿ ತನ್ನಲ್ಲಿದ್ದ ಆಸೆಯ ಕುರಿತು ಆಲೋಚಿಸುತ್ತಾ ಇದ್ದನು. ಈ ಕಾರಣದಿಂದಾಗಿ, ಶಿಷ್ಯನಾದ ಯಾಕೋಬನು ಅನಂತರ ವರ್ಣಿಸಿದಂತೆಯೇ ದಾವೀದನು ಮಾಡಿದ್ದನು. ಅವನು ಹೇಳಿದ್ದು: “ಆದರೆ ಪ್ರತಿಯೊಬ್ಬನೂ ತನ್ನಲ್ಲಿರುವ ಆಶಾಪಾಶದಿಂದ ಎಳೆಯಲ್ಪಟ್ಟು ಮರುಳುಗೊಂಡವನಾಗಿ ಪ್ರೇರೇಪಿಸಲ್ಪಡುತ್ತಾನೆ. ಆ ಮೇಲೆ ಆಶೆಯು ಬಸುರಾಗಿ ಪಾಪವನ್ನು ಹೆರುತ್ತದೆ; ಪಾಪವು ತುಂಬಾ ಬೆಳೆದು ಮರಣವನ್ನು ಹಡೆಯುತ್ತದೆ.”​—⁠ಯಾಕೋಬ 1:14, 15.

ಹಿಂದಿನ ಲೇಖನದಲ್ಲಿ ತಿಳಿಸಲಾದ ಸಾಮೂಹಿಕ ಹತ್ಯೆಗಳು, ಬಲಾತ್ಕಾರ ಸಂಭೋಗಗಳು ಮತ್ತು ಕೊಳ್ಳೆಹೊಡೆಯುವಿಕೆಗಳು, ತಮ್ಮ ಕೃತ್ಯಗಳನ್ನು ತಪ್ಪಾದ ಆಸೆಗಳು ಮಾರ್ಗದರ್ಶಿಸುವಂತೆ ಜನರು ಅನುಮತಿಸುವಾಗ ಏನು ಸಂಭವಿಸುತ್ತದೆ ಎಂಬುದರ ಘೋರ ಉದಾಹರಣೆಗಳಾಗಿವೆ.

ಅಜ್ಞಾನದಿಂದಾಗಿ ಸಂಭವಿಸುವ ಕೆಡುಕು

ಜನರು ಕೆಟ್ಟದ್ದನ್ನು ನಡೆಸುವುದಕ್ಕಾಗಿರುವ ಎರಡನೇ ಕಾರಣವನ್ನು ಅಪೊಸ್ತಲ ಪೌಲನ ಅನುಭವವು ಎತ್ತಿತೋರಿಸುತ್ತದೆ. ಪೌಲನು ಸಾಯುವಷ್ಟರೊಳಗಾಗಿ ಸಭ್ಯನೂ ಮಮತೆಯುಳ್ಳವನೂ ಆದ ವ್ಯಕ್ತಿ ಎಂಬ ಸತ್ಕೀರ್ತಿಯನ್ನು ಗಳಿಸಿದ್ದನು. ಅವನು ತನ್ನ ಕ್ರೈಸ್ತ ಸಹೋದರ ಸಹೋದರಿಯರಿಗಾಗಿ ನಿಸ್ವಾರ್ಥವಾಗಿ ತನ್ನನ್ನೇ ನೀಡಿಕೊಂಡಿದ್ದನು. (1 ಥೆಸಲೊನೀಕ 2:​7-9) ಹಾಗಿದ್ದರೂ, ಅವನ ಜೀವನದ ಆರಂಭದಲ್ಲಿ ಅಂದರೆ ಅವನು ಸೌಲನೆಂದು ಪ್ರಖ್ಯಾತನಾಗಿದ್ದಾಗ ಸಹೋದರ ಸಹೋದರಿಯರ ಇದೇ ಗುಂಪಿನ ವಿರುದ್ಧ “ಬೆದರಿಕೆಯ ಮಾತುಗಳನ್ನಾಡುತ್ತಾ ಅವರನ್ನು ಸಂಹರಿಸಬೇಕೆಂದು” ಆಶಿಸಿದನು. (ಅ. ಕೃತ್ಯಗಳು 9:​1, 2) ಆರಂಭದ ಕ್ರೈಸ್ತರಿಗೆ ವಿರುದ್ಧವಾಗಿ ನಡೆಸಲ್ಪಟ್ಟ ದುಷ್ಕೃತ್ಯಗಳನ್ನು ಪೌಲನು ಏಕೆ ಸಮ್ಮತಿಸಿದನು ಮತ್ತು ಅವುಗಳಲ್ಲಿ ಏಕೆ ಭಾಗವಹಿಸಿದನು? ‘ತಿಳಿಯದೆ [ಅಥವಾ, ಅಜ್ಞಾನದಿಂದ] ಹಾಗೆ ಮಾಡಿದೆ’ ಎಂದು ಅವನು ಹೇಳುತ್ತಾನೆ. (1 ತಿಮೊಥೆಯ 1:13) ಹೌದು, ಆರಂಭದಲ್ಲಿ ಪೌಲನಿಗೆ ‘ದೇವರಲ್ಲಿ ಆಸಕ್ತಿಯಿತ್ತು; ಆದರೂ [ಅದು] ಜ್ಞಾನಾನುಸಾರವಾದದ್ದಾಗಿರಲಿಲ್ಲ.’​—⁠ರೋಮಾಪುರ 10:⁠2.

ಪೌಲನಂತೆ, ಅನೇಕ ಯಥಾರ್ಥ ವ್ಯಕ್ತಿಗಳು ದೇವರ ಚಿತ್ತದ ನಿಷ್ಕೃಷ್ಟ ಜ್ಞಾನದ ಕೊರತೆಯಿಂದಾಗಿ ದುಷ್ಕೃತ್ಯಗಳಲ್ಲಿ ಭಾಗವಹಿಸಿದ್ದಾರೆ. ಉದಾಹರಣೆಗೆ, ಯೇಸು ತನ್ನ ಹಿಂಬಾಲಕರನ್ನು ಎಚ್ಚರಿಸಿದ್ದು: “ನಿಮ್ಮನ್ನು ಕೊಲ್ಲುವವನು ತಾನು ದೇವರಿಗೆ ಯಜ್ಞವನ್ನು ಮಾಡಿದ್ದೇನೆಂದು ನೆನಸುವ ಕಾಲ ಬರುತ್ತದೆ.” (ಯೋಹಾನ 16:⁠2) ಯೇಸುವಿನ ಮಾತುಗಳ ಸತ್ಯತೆಯನ್ನು ಇಂದಿರುವ ಯೆಹೋವನ ಸಾಕ್ಷಿಗಳು ಅನುಭವಿಸುತ್ತಿದ್ದಾರೆ. ಅನೇಕ ದೇಶಗಳಲ್ಲಿ, ದೇವರನ್ನು ಸೇವಿಸುತ್ತೇವೆ ಎಂದು ಹೇಳಿಕೊಳ್ಳುವ ಜನರಿಂದ ಯೆಹೋವನ ಸಾಕ್ಷಿಗಳು ಹಿಂಸೆಗೊಳಗಾಗುತ್ತಾರೆ ಮತ್ತು ಕೊಲ್ಲಲ್ಪಡುತ್ತಾರೆ ಸಹ. ಅಂಥ ತಪ್ಪಾದ ಹುರುಪನ್ನು ಸತ್ಯ ದೇವರು ಮೆಚ್ಚುವುದಿಲ್ಲ ಎಂಬುದು ನಿಶ್ಚಯ.​—⁠1 ಥೆಸಲೊನೀಕ 1:⁠6.

ಕೆಟ್ಟತನದ ಮೂಲನು

ಕೆಟ್ಟತನವು ಅಸ್ತಿತ್ವದಲ್ಲಿರಲು ಮೂಲಭೂತ ಕಾರಣ ಏನೆಂಬುದನ್ನು ಯೇಸು ಗುರುತಿಸಿದನು. ತನ್ನನ್ನು ಕೊಲ್ಲಲು ನಿರ್ಧರಿಸಿದ್ದ ಧಾರ್ಮಿಕ ಮುಖಂಡರನ್ನು ಸೂಚಿಸುತ್ತಾ ಅವನು ಹೇಳಿದ್ದು: ‘ಸೈತಾನನು ನಿಮ್ಮ ತಂದೆ; ನೀವು ಆ ತಂದೆಯಿಂದ ಹುಟ್ಟಿದವರಾಗಿದ್ದು ನಿಮ್ಮ ತಂದೆಯ ದುರಿಚ್ಛೆಗಳನ್ನೇ ನಡಿಸಬೇಕೆಂದಿದ್ದೀರಿ. ಅವನು ಆದಿಯಿಂದಲೂ ಕೊಲೆಗಾರನಾಗಿದ್ದಾನೆ.’ (ಯೋಹಾನ 8:44) ತನ್ನ ಸ್ವಾರ್ಥ ಕಾರಣಗಳಿಗಾಗಿ, ಆದಾಮಹವ್ವರು ದೇವರಿಗೆ ವಿರುದ್ಧವಾಗಿ ದಂಗೆಯೇಳುವಂತೆ ಮಾಡಿದವನು ಸೈತಾನನೇ ಆಗಿದ್ದಾನೆ. ಆ ದಂಗೆಯು ಇಡೀ ಮಾನವಕುಲಕ್ಕೆ ಪಾಪ ಮತ್ತು ಮರಣವನ್ನು ತಂದೊಡ್ಡಿತು.

ಸೈತಾನನ ಕೊಲೆಗಡುಕ ಸ್ವಭಾವವು, ಅವನು ಯೋಬನೊಂದಿಗೆ ವ್ಯವಹರಿಸಿದ ವಿಧದಲ್ಲಿ ಇನ್ನೂ ಸ್ಪಷ್ಟವಾಗಿ ತೋರಿಬಂತು. ಯೋಬನ ಸಮಗ್ರತೆಯನ್ನು ಪರೀಕ್ಷಿಸಲು ಅವನಿಗೆ ಯೆಹೋವನಿಂದ ಅನುಮತಿ ದೊರೆತಾಗ, ಕೇವಲ ಯೋಬನ ಸೊತ್ತುಗಳನ್ನು ಕಸಿದುಕೊಳ್ಳುವುದರಲ್ಲಿಯೇ ಅವನು ತೃಪ್ತನಾಗಲಿಲ್ಲ. ಅವನು ಯೋಬನ ಹತ್ತು ಮಕ್ಕಳ ಜೀವವನ್ನು ಸಹ ಬಲಿತೆಗೆದುಕೊಂಡನು. (ಯೋಬ 1:​9-19) ಇತ್ತೀಚಿನ ದಶಕಗಳಲ್ಲಿ, ಮಾನವ ಅಪರಿಪೂರ್ಣತೆ ಮತ್ತು ಅಜ್ಞಾನದಿಂದಾಗಿ ಮಾತ್ರವಲ್ಲದೆ ಮಾನವ ವ್ಯವಹಾರಗಳಲ್ಲಿ ಸೈತಾನನು ಹೆಚ್ಚೆಚ್ಚಾಗಿ ಮಧ್ಯೆ ಪ್ರವೇಶಿಸಿರುವುದರ ಫಲಿತಾಂಶವಾಗಿಯೂ ಮಾನವಕುಲವು ಅಸಂಖ್ಯಾತ ದುಷ್ಕೃತ್ಯಗಳನ್ನು ಅನುಭವಿಸಿದೆ. ಪಿಶಾಚನು “ದೊಬ್ಬಲ್ಪಟ್ಟು ಭೂಮಿಗೆ ಬಿದ್ದನು; ಅವನ ದೂತರೂ ಅವನೊಂದಿಗೆ ದೊಬ್ಬಲ್ಪಟ್ಟರು” ಎಂದು ಬೈಬಲ್‌ ಪ್ರಕಟಪಡಿಸುತ್ತದೆ. ಸೈತಾನನು ಭೂಮಿಗೆ ದೊಬ್ಬಲ್ಪಟ್ಟ ಕಾರಣ ‘ಭೂಮಿಯೇ ನಿನ್ನ ದುರ್ಗತಿಯನ್ನು ಏನು ಹೇಳಲಿ’ ಎಂಬುದಾಗಿ ಅದೇ ಪ್ರವಾದನೆಯು ನಿಷ್ಕೃಷ್ಟವಾಗಿ ಮುಂತಿಳಿಸಿದೆ. ಕೆಟ್ಟ ವಿಷಯಗಳನ್ನು ಮಾಡುವಂತೆ ಜನರನ್ನು ಒತ್ತಾಯಿಸಲು ಸೈತಾನನಿಗೆ ಸಾಧ್ಯವಿಲ್ಲವಾದರೂ, ಅವನು ‘ಭೂಲೋಕದವರನ್ನೆಲ್ಲಾ ಮರುಳುಗೊಳಿಸುವುದರಲ್ಲಿ’ ನಿಪುಣನಾಗಿದ್ದಾನೆ.​—⁠ಪ್ರಕಟನೆ 12:​9, 12.

ಕೆಟ್ಟತನದ ಕಡೆಗಿನ ಒಲವನ್ನು ತೆಗೆದುಹಾಕುವುದು

ಮಾನವ ಸಮಾಜದಿಂದ ಕೆಟ್ಟತನವನ್ನು ಶಾಶ್ವತವಾಗಿ ತೆಗೆದುಹಾಕಬೇಕಾದರೆ, ಕೆಟ್ಟತನದ ಕಡೆಗೆ ಓಲುವ ಮಾನವನ ಹುಟ್ಟುಗುಣವನ್ನು, ನಿಷ್ಕೃಷ್ಟ ಜ್ಞಾನದ ಕೊರತೆಯನ್ನು ಮತ್ತು ಸೈತಾನನ ಪ್ರಭಾವವನ್ನು ಇಲ್ಲವಾಗಿಸಬೇಕು. ಮೊದಲಾಗಿ, ಪಾಪಕೃತ್ಯಗಳ ಕಡೆಗೆ ಓಲುವ ಮಾನವನ ಹುಟ್ಟುಗುಣವನ್ನು ಅವನ ಹೃದಯದಿಂದ ತೆಗೆದುಹಾಕುವುದು ಹೇಗೆ?

ಯಾವನೇ ಶಸ್ತ್ರಚಿಕಿತ್ಸಕನು ಇಲ್ಲವೆ ಮಾನವನಿಂದ ತಯಾರಿಸಲ್ಪಟ್ಟಿರುವ ಯಾವುದೇ ಔಷಧವು ಈ ಕಾರ್ಯವನ್ನು ಸಾಧಿಸಸಾಧ್ಯವಿಲ್ಲ. ಆದರೆ ಯೆಹೋವ ದೇವರು, ಬಾಧ್ಯತೆಯಾಗಿ ಬಂದಿರುವ ಪಾಪ ಮತ್ತು ಅಪರಿಪೂರ್ಣತೆಯನ್ನು ತೆಗೆದುಹಾಕಲು ಬೇಕಾಗಿರುವ ಔಷಧವನ್ನು, ಸ್ವೀಕರಿಸಲು ಇಚ್ಛೆಯುಳ್ಳ ಎಲ್ಲರಿಗೂ ಒದಗಿಸಿದ್ದಾನೆ. ಅಪೊಸ್ತಲ ಯೋಹಾನನು ಬರೆದದ್ದು: ‘ಯೇಸುವಿನ ರಕ್ತವು ಸಕಲಪಾಪದಿಂದ ನಮ್ಮನ್ನು ಶುದ್ಧಿಮಾಡುತ್ತದೆ.’ (1 ಯೋಹಾನ 1:⁠7) ಪರಿಪೂರ್ಣ ಮಾನವನಾದ ಯೇಸು ತನ್ನ ಜೀವವನ್ನು ಇಚ್ಛಾಪೂರ್ವಕವಾಗಿ ನೀಡಿದಾಗ, “ನಾವು ಪಾಪದ ಪಾಲಿಗೆ ಸತ್ತು ನೀತಿವಂತರಾಗಿ ಜೀವಿಸುವಂತೆ ಆತನು ನಮ್ಮ ಪಾಪಗಳನ್ನು ತಾನೇ ತನ್ನ ದೇಹದಲ್ಲಿ ಹೊತ್ತುಕೊಂಡು ಮರಣದ ಕಂಬವನ್ನು ಏರಿದನು.” (1 ಪೇತ್ರ 2:24) ಯೇಸುವಿನ ಯಜ್ಞಾರ್ಪಿತ ಮರಣವು, ಆದಾಮನ ಕೆಟ್ಟ ಕೃತ್ಯದ ಪ್ರಭಾವಗಳನ್ನು ತೆಗೆದುಹಾಕುತ್ತದೆ. ಯೇಸು ಕ್ರಿಸ್ತನು “ಎಲ್ಲರಿಗೆ ಅನುರೂಪವಾದ ವಿಮೋಚನೆ”ಯಾದನು ಎಂದು ಪೌಲನು ಹೇಳುತ್ತಾನೆ. (1 ತಿಮೊಥೆಯ 2:⁠6, NW) ಹೌದು, ಆದಾಮನಿಂದ ಕಳೆದುಕೊಳ್ಳಲ್ಪಟ್ಟ ಪರಿಪೂರ್ಣತೆಯನ್ನು ಇಡೀ ಮಾನವಕುಲವು ಪುನಃ ಪಡೆದುಕೊಳ್ಳುವಂತೆ ಕ್ರಿಸ್ತನ ಮರಣವು ದಾರಿಮಾಡಿಕೊಟ್ಟಿತು.

ಆದರೂ ನೀವು ಹೀಗೆ ಕೇಳಬಹುದು, ‘ಸುಮಾರು 2,000 ವರುಷಗಳ ಹಿಂದೆ ಸಂಭವಿಸಿದ ಯೇಸುವಿನ ಮರಣವು ಮಾನವಕುಲವು ಪರಿಪೂರ್ಣತೆಯನ್ನು ಗಳಿಸುವುದನ್ನು ಸಾಧ್ಯವನ್ನಾಗಿ ಮಾಡಿತ್ತಾದರೆ, ಇಂದಿನ ವರೆಗೂ ಕೆಟ್ಟ ವಿಷಯಗಳು ಮತ್ತು ಮರಣವು ಏಕೆ ಅಸ್ತಿತ್ವದಲ್ಲಿದೆ? ಈ ಪ್ರಶ್ನೆಗೆ ಉತ್ತರವನ್ನು ಕಂಡುಕೊಂಡರೆ, ಕೆಟ್ಟತನಕ್ಕೆ ಎರಡನೇ ಕಾರಣವಾಗಿರುವ ದೇವರ ಉದ್ದೇಶದ ಕುರಿತಾದ ಮಾನವನ ಅಜ್ಞಾನವನ್ನು ಹೋಗಲಾಡಿಸಸಾಧ್ಯವಿದೆ.

ಒಳ್ಳೇತನವು ನಿಷ್ಕೃಷ್ಟ ಜ್ಞಾನದಿಂದ ಬಲಗೊಳಿಸಲ್ಪಡುತ್ತದೆ

ಯೆಹೋವನು ಮತ್ತು ಯೇಸು, ಕೆಟ್ಟತನವನ್ನು ತೆಗೆದುಹಾಕಲು ಈಗ ಏನನ್ನು ಮಾಡುತ್ತಿದ್ದಾರೆ ಎಂಬುದರ ಕುರಿತಾದ ನಿಷ್ಕೃಷ್ಟ ಜ್ಞಾನವು, ತಿಳಿಯದೇ ದುಷ್ಕೃತ್ಯಗಳನ್ನು ಅಂಗೀಕರಿಸದಂತೆ ಇಲ್ಲವೆ ಅದಕ್ಕಿಂತಲೂ ಮೋಸಕರವಾಗಿ, “ದೇವರ ಮೇಲೆ ಯುದ್ಧಮಾಡುವವರಾಗಿ” ಕಂಡುಬರದಂತೆ ಯಥಾರ್ಥ ವ್ಯಕ್ತಿಗಳನ್ನು ತಡೆಯಬಹುದು. (ಅ. ಕೃತ್ಯಗಳು 5:​38, 39) ಪೂರ್ವದಲ್ಲಿ ಅಜ್ಞಾನದಿಂದಾಗಿ ಗೈದ ತಪ್ಪುಗಳನ್ನು ಯೆಹೋವ ದೇವರು ಮರೆತುಬಿಡಲು ಸಿದ್ಧನಾಗಿದ್ದಾನೆ. ಅಥೇನೆ ಪಟ್ಟಣದಲ್ಲಿ ಮಾತಾಡುತ್ತಾ ಅಪೊಸ್ತಲ ಪೌಲನು ಹೇಳಿದ್ದು: “ಆ ಅಜ್ಞಾನಕಾಲಗಳನ್ನು ದೇವರು ಲಕ್ಷ್ಯಕ್ಕೆ ತರಲಿಲ್ಲ; ಈಗಲಾದರೋ ಆತನು ನಾಲ್ಕು ದಿಕ್ಕಿನಲ್ಲಿರುವ ಮನುಷ್ಯರೆಲ್ಲರೂ ತನ್ನ ಕಡೆಗೆ ತಿರುಗಿಕೊಳ್ಳಬೇಕೆಂದು ಅಪ್ಪಣೆಕೊಡುತ್ತಾನೆ. ಯಾಕಂದರೆ ಆತನು ನಿಷ್ಕರ್ಷೆಮಾಡಿದ ಪುರುಷನ ಕೈಯಿಂದ ನೀತಿಗನುಸಾರವಾಗಿ ಭೂಲೋಕದ ನ್ಯಾಯವಿಚಾರಣೆ ಮಾಡುವದಕ್ಕೆ ಒಂದು ದಿವಸವನ್ನು ಗೊತ್ತುಮಾಡಿದ್ದಾನೆ. ಅವನನ್ನು ಸತ್ತವರೊಳಗಿಂದ ಎಬ್ಬಿಸಿದ್ದರಲ್ಲಿ ಇದನ್ನು ನಂಬುವದಕ್ಕೆ ಎಲ್ಲರಿಗೂ ಆಧಾರ ಕೊಟ್ಟಿದ್ದಾನೆ.”​—⁠ಅ. ಕೃತ್ಯಗಳು 17:30, 31.

ಯೇಸು ಸತ್ತವರೊಳಗಿಂದ ಎಬ್ಬಿಸಲ್ಪಟ್ಟಿದ್ದಾನೆ ಎಂಬುದು ಪೌಲನಿಗೆ ಅನುಭವದಿಂದ ತಿಳಿದಿತ್ತು, ಏಕೆಂದರೆ ಪುನರುತ್ಥಿತ ಯೇಸುವೇ ಪೌಲನೊಂದಿಗೆ ಮಾತಾಡಿದ್ದನು ಮತ್ತು ಆರಂಭದ ಕ್ರೈಸ್ತರನ್ನು ಹಿಂಸಿಸದಂತೆ ತಡೆದಿದ್ದನು. (ಅ. ಕೃತ್ಯಗಳು 9:​3-7) ದೇವರ ಉದ್ದೇಶದ ನಿಷ್ಕೃಷ್ಟ ಜ್ಞಾನವು ಪೌಲನಿಗೆ ದೊರೆತ ಕೂಡಲೆ ಅವನು ಬದಲಾದನು ಮತ್ತು ಕ್ರಿಸ್ತನ ಅನುಕರಣೆಯಲ್ಲಿ ನಿಜವಾಗಿಯೂ ಒಬ್ಬ ಉತ್ತಮ ವ್ಯಕ್ತಿಯಾಗಿ ಪರಿಣಮಿಸಿದನು. (1 ಕೊರಿಂಥ 11:1; ಕೊಲೊಸ್ಸೆ 3:​9, 10) ಇದಕ್ಕೆ ಕೂಡಿಕೆಯಾಗಿ, “ಪರಲೋಕ ರಾಜ್ಯದ ಈ ಸುವಾರ್ತೆ”ಯನ್ನು ಪೌಲನು ಹುರುಪಿನಿಂದ ಸಾರಿದನು. (ಮತ್ತಾಯ 24:14) ಯೇಸು ಕ್ರಿಸ್ತನು ತನ್ನ ಮರಣ ಮತ್ತು ಪುನರುತ್ಥಾನದ ನಂತರ ಸುಮಾರು 2,000 ವರುಷಗಳಲ್ಲಿ ತನ್ನೊಂದಿಗೆ ರಾಜ್ಯದಲ್ಲಿ ಆಳಲಿರುವ ಪೌಲನಂಥ ವ್ಯಕ್ತಿಗಳನ್ನು ಮಾನವಕುಲದೊಳಗಿಂದ ಆಯ್ಕೆಮಾಡಿದ್ದಾನೆ.​—⁠ಪ್ರಕಟನೆ 5:​9, 10.

ಕಳೆದ ಶತಮಾನದಾದ್ಯಂತ ಮತ್ತು ಇಂದಿನ ವರೆಗೆ, ಯೆಹೋವನ ಸಾಕ್ಷಿಗಳು ಯೇಸುವಿನ ಆಜ್ಞೆಯನ್ನು ಹುರುಪಿನಿಂದ ನೆರವೇರಿಸುತ್ತಿದ್ದಾರೆ: “ಆದ್ದರಿಂದ ನೀವು ಹೊರಟುಹೋಗಿ ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ; ಅವರಿಗೆ ತಂದೆಯ, ಮಗನ, ಪವಿತ್ರಾತ್ಮನ ಹೆಸರಿನಲ್ಲಿ ದೀಕ್ಷಾಸ್ನಾನಮಾಡಿಸಿ ನಾನು ನಿಮಗೆ ಆಜ್ಞಾಪಿಸಿದ್ದನ್ನೆಲ್ಲಾ ಕಾಪಾಡಿಕೊಳ್ಳುವದಕ್ಕೆ ಅವರಿಗೆ ಉಪದೇಶ ಮಾಡಿರಿ.” (ಮತ್ತಾಯ 28:19, 20) ಈ ಸಂದೇಶಕ್ಕೆ ಕಿವಿಗೊಡುವ ಜನರಿಗೆ ಕ್ರಿಸ್ತನ ಸ್ವರ್ಗೀಯ ಸರಕಾರದ ಕೆಳಗೆ ಈ ಭೂಮಿಯಲ್ಲಿ ಸದಾ ಜೀವಿಸುವ ಪ್ರತೀಕ್ಷೆಯಿದೆ. ಯೇಸು ಹೇಳಿದ್ದು: “ಒಬ್ಬನೇ ಸತ್ಯದೇವರಾಗಿರುವ ನಿನ್ನನ್ನೂ ನೀನು ಕಳುಹಿಸಿಕೊಟ್ಟ ಯೇಸು ಕ್ರಿಸ್ತನನ್ನೂ ತಿಳಿಯುವದೇ ನಿತ್ಯಜೀವವು.” (ಯೋಹಾನ 17:3) ಇತರರು ಈ ಜ್ಞಾನವನ್ನು ಪಡೆಯುವಂತೆ ಸಹಾಯಮಾಡುವುದು, ಒಬ್ಬನು ಇನ್ನೊಬ್ಬನಿಗೆ ಮಾಡಸಾಧ್ಯವಿರುವುದರಲ್ಲೇ ಅತಿ ಮಹತ್ತಾದ ಒಳಿತಾಗಿದೆ.

ಈ ರಾಜ್ಯದ ಸುವಾರ್ತೆಯನ್ನು ಸ್ವೀಕರಿಸುವವರು “ಪ್ರೀತಿ ಸಂತೋಷ ಸಮಾಧಾನ ದೀರ್ಘಶಾಂತಿ ದಯೆ ಉಪಕಾರ ನಂಬಿಕೆ ಸಾಧುತ್ವ ಶಮೆದಮೆ” ಎಂಬ ಗುಣಗಳನ್ನು ಪ್ರದರ್ಶಿಸುತ್ತಾರೆ. (ಗಲಾತ್ಯ 5:​22, 23) ಯೇಸುವಿನ ಅನುಕರಣೆಯಲ್ಲಿ, ಅವರು “ಯಾರಿಗೂ ಅಪಕಾರಕ್ಕೆ ಅಪಕಾರವನ್ನು” ಮಾಡುವುದಿಲ್ಲ. (ರೋಮಾಪುರ 12:17) ವ್ಯಕ್ತಿಗತವಾಗಿ ಅವರು ‘ಒಳ್ಳೇತನದಿಂದ ಕೆಟ್ಟತನವನ್ನು ಸೋಲಿಸಲು’ ಹೆಣಗಾಡುತ್ತಾರೆ.​—⁠ರೋಮಾಪುರ 12:21; ಮತ್ತಾಯ 5:44.

ಕೆಟ್ಟತನವನ್ನು ಅಂತಿಮವಾಗಿ ಜಯಿಸುವುದು

ಕೆಟ್ಟತನದ ಮೂಲನಾಗಿರುವ ಪಿಶಾಚನಾದ ಸೈತಾನನನ್ನು ಮಾನವರು ತಾವಾಗಿಯೇ ಜಯಿಸಲು ಅಶಕ್ತರಾಗಿದ್ದಾರೆ. ಆದರೆ ಅತಿ ಬೇಗನೆ, ಸೈತಾನನ ತಲೆಯನ್ನು ಜಜ್ಜಲಿಕ್ಕಾಗಿ ಯೆಹೋವನು ಯೇಸುವನ್ನು ಉಪಯೋಗಿಸುವನು. (ಆದಿಕಾಂಡ 3:​15; ರೋಮಾಪುರ 16:20) ಮಾತ್ರವಲ್ಲದೆ, ಇತಿಹಾಸದಾದ್ಯಂತ ಬಹಳಷ್ಟು ಕೆಟ್ಟತನವನ್ನು ನಡೆಸಿರುವ ಅನೇಕ ವ್ಯವಸ್ಥೆಗಳನ್ನು ಒಳಗೊಂಡು ಎಲ್ಲ ರಾಜಕೀಯ ವ್ಯವಸ್ಥೆಗಳನ್ನು ‘ಭಂಗಪಡಿಸಿ ನಿರ್ನಾಮಮಾಡುವಂತೆ’ ಯೆಹೋವನು ಕ್ರಿಸ್ತ ಯೇಸುವನ್ನು ನಿರ್ದೇಶಿಸಲಿದ್ದಾನೆ. (ದಾನಿಯೇಲ 2:44; ಪ್ರಸಂಗಿ 8:⁠9) ಬರಲಿರುವ ಆ ನ್ಯಾಯತೀರ್ಪಿನ ದಿನದಲ್ಲಿ, ‘ನಮ್ಮ ಕರ್ತನಾದ ಯೇಸುವಿನ ಸುವಾರ್ತೆಗೆ ಒಳಪಡದವರು ನಿತ್ಯನಾಶನವೆಂಬ ದಂಡನೆಯನ್ನು ಅನುಭವಿಸುವರು.’​—⁠2 ಥೆಸಲೊನೀಕ 1:​8, 9; ಚೆಫನ್ಯ 1:14-18.

ಒಮ್ಮೆ ಸೈತಾನನನ್ನೂ ಅವನ ಬೆಂಬಲಿಗರನ್ನೂ ತೆಗೆದುಹಾಕಿದ ಅನಂತರ, ಪಾರಾಗಿ ಉಳಿದವರು ಈ ಭೂಮಿಯನ್ನು ಅದರ ಆರಂಭದ ಸ್ಥಿತಿಗೆ ತರುವಂತೆ ಸ್ವರ್ಗದಲ್ಲಿದ್ದುಕೊಂಡು ಯೇಸು ಸಹಾಯಮಾಡುವನು. ಅಷ್ಟುಮಾತ್ರವಲ್ಲದೆ, ಪುನಸ್ಸ್ಥಾಪಿತ ಭೂಮಿಯಲ್ಲಿ ಜೀವಿಸುವ ಸಂದರ್ಭವನ್ನು ಹೊಂದಲು ಅರ್ಹರಾದ ಎಲ್ಲರನ್ನು ಕ್ರಿಸ್ತನು ಪುನರುತ್ಥಾನಗೊಳಿಸಲಿದ್ದಾನೆ. (ಲೂಕ 23:32, 39-43; ಯೋಹಾನ 5:26-29) ಹೀಗೆ ಮಾಡುವ ಮೂಲಕ ಮಾನವಕುಲವು ಅನುಭವಿಸಿದ ಕೆಟ್ಟತನದ ಕೆಲವು ಪ್ರಭಾವಗಳನ್ನು ಅವನು ರದ್ದುಪಡಿಸುತ್ತಾನೆ.

ಯೇಸುವಿನ ಸುವಾರ್ತೆಗೆ ವಿಧೇಯರಾಗಲೇಬೇಕು ಎಂಬುದಾಗಿ ಯೆಹೋವನು ಜನರನ್ನು ಒತ್ತಾಯಿಸುವುದಿಲ್ಲ. ಹಾಗಿದ್ದರೂ, ಜೀವಕ್ಕೆ ನಡೆಸುವ ಜ್ಞಾನವನ್ನು ಪಡೆದುಕೊಳ್ಳುವ ಸಂದರ್ಭವನ್ನು ಆತನು ಅವರಿಗೆ ನೀಡುತ್ತಾನೆ. ಈಗ ಈ ಸಂದರ್ಭದ ಸದುಪಯೋಗವನ್ನು ಮಾಡಿಕೊಳ್ಳುವುದು ಅತಿ ಪ್ರಾಮುಖ್ಯವಾಗಿದೆ! (ಚೆಫನ್ಯ 2:​2, 3) ಒಂದುವೇಳೆ ನೀವು ಹೀಗೆ ಮಾಡುವುದಾದರೆ, ಈಗ ನಿಮ್ಮ ಜೀವನವನ್ನು ಬಾಧಿಸುತ್ತಿರುವಂಥ ಯಾವುದೇ ಕೆಟ್ಟ ವಿಷಯಗಳನ್ನು ನಿಭಾಯಿಸಲು ಕಲಿತುಕೊಳ್ಳುವಿರಿ. ಮುಂದಕ್ಕೆ ಕ್ರಿಸ್ತನು ಹೇಗೆ ದುಷ್ಟತನವನ್ನು ಅಂತಿಮವಾಗಿ ಜಯಿಸುವನು ಎಂಬುದನ್ನು ಸಹ ನೀವು ನೋಡುವಿರಿ.​—⁠ಪ್ರಕಟನೆ 19:11-16; 20:1-3, 10; 21:3, 4.

[ಪುಟ 5ರಲ್ಲಿರುವ ಚಿತ್ರ]

ನಿಷ್ಕೃಷ್ಟ ಜ್ಞಾನದ ಕೊರತೆಯಿಂದಾಗಿ ಸೌಲನು ದುಷ್ಕೃತ್ಯಗಳನ್ನು ಸಮ್ಮತಿಸಿದನು

[ಪುಟ 7ರಲ್ಲಿರುವ ಚಿತ್ರ]

ಇತರರು ದೇವರ ಕುರಿತಾದ ನಿಷ್ಕೃಷ್ಟ ಜ್ಞಾನವನ್ನು ಪಡೆಯುವಂತೆ ಸಹಾಯಮಾಡುವುದು, ಒಬ್ಬನು ಇನ್ನೊಬ್ಬನಿಗೆ ಮಾಡಸಾಧ್ಯವಿರುವುದರಲ್ಲೇ ಅತಿ ಮಹತ್ತಾದ ಒಳಿತಾಗಿದೆ