ಯೋಬ 1:1-22

  • ಯೋಬನ ನಿಯತ್ತು ಮತ್ತು ಸಂಪತ್ತು (1-5)

  • ಯೋಬನ ಮೇಲೆ ಸೈತಾನನ ಸವಾಲು (6-12)

  • ಯೋಬ ಸಂಪತ್ತನ್ನೂ ಮಕ್ಕಳನ್ನೂ ಕಳ್ಕೊಂಡ (13-19)

  • ಯೋಬ ದೇವರನ್ನ ದೂರಲಿಲ್ಲ (20-22)

1  ಊಚ್‌ ದೇಶದಲ್ಲಿ ಯೋಬ*+ ಅನ್ನೋ ಮನುಷ್ಯ ಇದ್ದ. ಅವನು ನೀತಿವಂತನಾಗಿದ್ದ, ದೇವರಿಗೆ ನಿಯತ್ತಾಗಿದ್ದ.*+ ದೇವರಿಗೆ ಭಯಪಡ್ತಿದ್ದ, ಕೆಟ್ಟದು ಮಾಡ್ತಿರಲಿಲ್ಲ.+  ಅವನಿಗೆ ಏಳು ಗಂಡು ಮಕ್ಕಳು, ಮೂರು ಹೆಣ್ಣು ಮಕ್ಕಳು ಇದ್ರು.  ಅವನ ಹತ್ರ 7,000 ಕುರಿ, 3,000 ಒಂಟೆ, 1,000 ದನ,* 500 ಕತ್ತೆ* ಇತ್ತು. ತುಂಬ ಕೆಲಸದವರು ಇದ್ರು. ಅವನು ಪೂರ್ವ ದಿಕ್ಕಲ್ಲಿ ವಾಸಿಸ್ತಿದ್ದ ಜನ್ರಲ್ಲಿ ಶ್ರೀಮಂತನಾಗಿದ್ದ, ಜನ್ರೆಲ್ಲ ಅವನಿಗೆ ತುಂಬ ಗೌರವ ಕೊಡ್ತಿದ್ರು.  ಅವನ ಗಂಡು ಮಕ್ಕಳು ಒಬ್ಬರಾದ ಮೇಲೆ ಒಬ್ರು ತಮ್ಮ ಮನೆಯಲ್ಲಿ ಔತಣ ಮಾಡಿಸ್ತಿದ್ರು. ತಮ್ಮ ಮೂವರು ತಂಗಿಯರನ್ನ* ಕರೆದು ಒಟ್ಟಿಗೆ ಊಟ ಮಾಡ್ತಿದ್ರು.  ಎಲ್ರ ಸರದಿ ಮುಗಿದ ಮೇಲೆ ಯೋಬ “ಒಂದು ವೇಳೆ ನನ್ನ ಮಕ್ಕಳು ಪಾಪ ಮಾಡಿರಬಹುದು, ಮನಸ್ಸಲ್ಲೇ ದೇವ್ರ ಬಗ್ಗೆ ತಪ್ಪಾಗಿ ಮಾತಾಡಿರಬಹುದು” ಅಂದ್ಕೊಂಡು ಅವ್ರನ್ನ ಶುದ್ಧೀಕರಿಸ್ತಿದ್ದ. ಬೆಳಿಗ್ಗೆ ಬೇಗ ಎದ್ದು ತನ್ನ ಮಕ್ಕಳಲ್ಲಿ ಪ್ರತಿಯೊಬ್ರಿಗಾಗಿ ಸರ್ವಾಂಗಹೋಮ ಬಲಿಗಳನ್ನ+ ಅರ್ಪಿಸ್ತಿದ್ದ. ಹೀಗೆ ಯೋಬ ಪ್ರತಿ ಸಲ ಮಾಡ್ತಿದ್ದ.+  ದೇವದೂತರು*+ ದೇವರ ಮುಂದೆ ಸೇರಿಬರಬೇಕಾದ ದಿನ ಬಂತು. ಅವರು ಯೆಹೋವನ ಮುಂದೆ ಸೇರಿ ಬಂದಾಗ+ ಸೈತಾನ+ ಕೂಡ ಅಲ್ಲಿ ಬಂದ.+  ಆಗ ಯೆಹೋವ ಸೈತಾನನಿಗೆ “ನೀನು ಎಲ್ಲಿಂದ ಬಂದೆ?” ಅಂತ ಕೇಳಿದನು. ಅದಕ್ಕೆ ಸೈತಾನ ಯೆಹೋವನಿಗೆ “ನಾನು ಭೂಮಿ ಮೇಲೆ ಸುತ್ತಾಡ್ತಾ ಬಂದೆ”+ ಅಂದ.  ಯೆಹೋವ ಸೈತಾನನಿಗೆ “ನನ್ನ ಸೇವಕನಾದ ಯೋಬನನ್ನ ಗಮನಿಸಿದ್ಯಾ? ಅವನ ಹಾಗೆ ಭೂಮಿ ಮೇಲೆ ಬೇರೆ ಯಾರೂ ಇಲ್ಲ. ಅವನು ನೀತಿವಂತ, ಅವನಲ್ಲಿ ಯಾವುದೇ ತಪ್ಪು ಇಲ್ಲ.*+ ಅವನು ನನಗೆ ಭಯಪಡ್ತಾನೆ, ಕೆಟ್ಟ ಕೆಲಸ ಮಾಡಲ್ಲ” ಅಂದನು.  ಅದಕ್ಕೆ ಸೈತಾನ ಯೆಹೋವನಿಗೆ “ಯೋಬ ಲಾಭ ಇಲ್ಲದೆ ದೇವರಿಗೆ ಭಯಪಡ್ತಾನಾ?+ 10  ನೀನು ಅವನನ್ನ, ಅವನ ಮನೆಯನ್ನ ಅವನಿಗಿರೋ ಎಲ್ಲವನ್ನ ಬೇಲಿ ಹಾಕಿ ಕಾಪಾಡ್ತಾ ಇದ್ದೀಯಲ್ಲಾ.+ ಅವನು ಮಾಡೋ ಎಲ್ಲ ಕೆಲಸಗಳನ್ನ ಆಶೀರ್ವದಿಸ್ತಾ ಇದ್ದೀಯ.+ ದೇಶದಲ್ಲೆಲ್ಲಾ ಅವನ ಪ್ರಾಣಿಗಳೇ ತುಂಬಿವೆ. 11  ನಿನ್ನ ಕೈಚಾಚಿ ಅವನಿಗೆ ಇರೋದನ್ನೆಲ್ಲ ಕಿತ್ಕೋ. ಆಗ ಎಲ್ರ ಮುಂದೆ ನಿಂಗೆ ಶಾಪ ಹಾಕ್ತಾನಾ ಇಲ್ವಾ ಅಂತ ನೋಡು” ಅಂದ. 12  ಅದಕ್ಕೆ ಯೆಹೋವ ಸೈತಾನನಿಗೆ “ನೋಡು! ಅವನ ಹತ್ರ ಇರೋದೆಲ್ಲ ಈಗ ನಿನ್ನ ಕೈಯಲ್ಲಿದೆ. ಆದ್ರೆ ಅವನನ್ನ ಮಾತ್ರ ನೀನು ಮುಟ್ಟಬಾರದು!” ಅಂದನು. ಆಗ ಸೈತಾನ ಯೆಹೋವನ ಸನ್ನಿಧಿಯಿಂದ ಹೋದ.+ 13  ಒಂದಿನ ಯೋಬನ ಎಲ್ಲ ಮಕ್ಕಳು ದೊಡ್ಡವನ ಮನೇಲಿ ಊಟಮಾಡ್ತಾ ದ್ರಾಕ್ಷಾಮದ್ಯ ಕುಡಿತಾ ಇದ್ರು.+ 14  ಆಗ ಯೋಬನ ಹತ್ರ ಒಬ್ಬ ಸೇವಕ ಬಂದು “ಎತ್ತುಗಳು ಹೊಲ ಊಳ್ತಾ ಇತ್ತು, ಅಲ್ಲೇ ಪಕ್ಕದಲ್ಲಿ ಕತ್ತೆಗಳು ಮೇಯ್ತಿತ್ತು. 15  ಆಗ ಇದ್ದಕ್ಕಿದ್ದ ಹಾಗೇ ಶೆಬದವರು ದಾಳಿ ಮಾಡಿ ಸೇವಕರನ್ನ ಕೊಂದು ಹಾಕಿ ದನಕತ್ತೆಗಳನ್ನೆಲ್ಲ ತಗೊಂಡು ಹೋದ್ರು. ನಾನೊಬ್ಬನೇ ತಪ್ಪಿಸ್ಕೊಂಡೆ. ಇದನ್ನೆಲ್ಲ ನಿನಗೆ ಹೇಳೋಕೆ ಬಂದೆ” ಅಂದ. 16  ಅವನು ಹೇಳಿ ಮುಗಿಸೋ ಮುಂಚೆನೇ ಇನ್ನೊಬ್ಬ ಬಂದು “ದೇವರು ಕಳಿಸಿದ ಬೆಂಕಿ* ಆಕಾಶದಿಂದ ಬಿದ್ದು ಕುರಿಗಳನ್ನ, ಸೇವಕರನ್ನ ಸುಟ್ಟುಬಿಡ್ತು. ಎಲ್ಲಾ ಸುಟ್ಟು ಬೂದಿ ಆಯ್ತು. ನಾನೊಬ್ಬನೇ ಉಳ್ಕೊಂಡೆ. ಇದನ್ನೆಲ್ಲ ಹೇಳೋಕೆ ಬಂದೆ” ಅಂದ. 17  ಅವನು ಹೇಳಿ ಮುಗಿಸೋ ಮುಂಚೆನೇ ಇನ್ನೊಬ್ಬ ಬಂದು “ಕಸ್ದೀಯರು+ ಮೂರು ಗುಂಪಾಗಿ ಬಂದು ಒಂಟೆಗಳ ಮೇಲೆ ದಾಳಿ ಮಾಡಿ ಅವುಗಳನ್ನ ತಗೊಂಡು ಹೋದ್ರು. ಸೇವಕರನ್ನ ಕತ್ತಿಯಿಂದ ಕೊಂದು ಹಾಕಿದ್ರು. ನಾನೊಬ್ಬನೇ ತಪ್ಪಿಸ್ಕೊಂಡೆ. ನಿನಗೆ ಹೇಳೋಕೆ ಬಂದೆ” ಅಂದ. 18  ಅವನು ಹೇಳಿ ಮುಗಿಸೋ ಮುಂಚೆನೇ ಇನ್ನೊಬ್ಬ ಬಂದು “ನಿನ್ನ ಮಕ್ಕಳು ದೊಡ್ಡವನ ಮನೇಲಿ ಊಟಮಾಡ್ತಾ ದ್ರಾಕ್ಷಾಮದ್ಯ ಕುಡಿತಿದ್ರು. 19  ತಕ್ಷಣ ಕಾಡಿಂದ* ಬಿರುಗಾಳಿ ಬೀಸಿ ಮನೆಯ ನಾಲ್ಕು ಮೂಲೆಗಳಿಗೆ ಬಡಿತು. ಮನೆ ಕುಸಿದು ನಿನ್ನ ಮಕ್ಕಳ ಮೇಲೆ ಬಿತ್ತು, ಅವ್ರೆಲ್ಲ ಸತ್ತು ಹೋದ್ರು. ನನ್ನೊಬ್ಬನ ಜೀವ ಮಾತ್ರ ಉಳಿತು. ಇದನ್ನೆಲ್ಲ ಹೇಳೋಕೆ ಬಂದೆ” ಅಂದ. 20  ಆ ವಿಷ್ಯ ಕೇಳಿ ಯೋಬ ಎದ್ದು ತನ್ನ ಬಟ್ಟೆ ಹರ್ಕೊಂಡು ತಲೆ ಬೋಳಿಸ್ಕೊಂಡ. ಆಮೇಲೆ ನೆಲದ ಮೇಲೆ ಬಿದ್ದು ದೇವರಿಗೆ ನಮಸ್ಕಾರ ಮಾಡಿ 21  ಹೀಗಂದ: “ನಾನು ಅಮ್ಮನ ಹೊಟ್ಟೆಯಿಂದ ಬಂದಾಗ ಏನೂ ತಗೊಂಡು ಬರಲಿಲ್ಲ,ಹೋಗುವಾಗ್ಲೂ ಏನೂ ತಗೊಂಡು ಹೋಗಲ್ಲ.+ ಯೆಹೋವನೇ ಕೊಟ್ಟನು,+ ಯೆಹೋವನೇ ತಗೊಂಡನು. ಯೆಹೋವನ ಹೆಸ್ರಿಗೆ ಯಾವಾಗ್ಲೂ ಹೊಗಳಿಕೆ ಸಿಗ್ಲಿ.” 22  ಇಷ್ಟೆಲ್ಲಾ ಆದ್ರೂ ಯೋಬ ಪಾಪ ಮಾಡಲಿಲ್ಲ, ದೇವರು ಕೆಟ್ಟದು ಮಾಡಿದ್ದಾನೆ ಅಂತ ದೂರಲಿಲ್ಲ.

ಪಾದಟಿಪ್ಪಣಿ

ಬಹುಶಃ ಇದರರ್ಥ “ದ್ವೇಷಕ್ಕೆ ಗುರಿಯಾದವನು.”
ಅಥವಾ “ನಿರ್ದೋಷಿ ಆಗಿದ್ದ, ಅವನಲ್ಲಿ ಯಾವುದೇ ತಪ್ಪಿರಲಿಲ್ಲ”
ಅಕ್ಷ. “500 ಜೋಡಿ ದನಗಳು.”
ಅಕ್ಷ. “ಹೆಣ್ಣು ಕತ್ತೆಗಳು.”
ಅಥವಾ “‘ಅಕ್ಕಂದಿರನ್ನ.’ ಇದ್ರ ಹೀಬ್ರು ಪದ ಅಕ್ಕಂದಿರನ್ನ ತಂಗಿಯರನ್ನ ಇಬ್ರನ್ನೂ ಸೂಚಿಸೋ ಪದ.”
ಅಕ್ಷ. “ದೇವರ ಮಕ್ಕಳು.”
ಅಥವಾ “ನಿರ್ದೋಷಿ.”
ಬಹುಶಃ, “ಸಿಡಿಲು.”