ರೋಮನ್ನರಿಗೆ ಬರೆದ ಪತ್ರ 10:1-21

  • ದೇವರ ದೃಷ್ಟಿಯಲ್ಲಿ ನೀತಿವಂತರಾಗೋದು ಹೇಗೆ? (1-15)

    • ಎಲ್ರಿಗೆ ಸಾರಬೇಕು (10)

    • ಯೆಹೋವನ ಹೆಸ್ರು ಹೇಳಿ ಪ್ರಾರ್ಥಿಸೋದ್ರಿಂದ ರಕ್ಷಣೆ (13)

    • ಸಾರುವವ್ರ ಕಾಲುಗಳು ಸುಂದರ (15)

  • ಸಿಹಿಸುದ್ದಿಯನ್ನ ತಿರಸ್ಕರಿಸಿದ್ರು (16-21)

10  ಸಹೋದರರೇ, ನನ್ನ ಜನ್ರು ರಕ್ಷಣೆ ಪಡಿಬೇಕು ಅನ್ನೋದೇ ನನ್ನ ಮನದಾಳದ ಆಸೆ. ಅದಕ್ಕಾಗಿ ನಾನು ದೇವರಿಗೆ ಅಂಗಲಾಚಿ ಬೇಡ್ತಾ ಇದ್ದೀನಿ.+  ದೇವರ ಸೇವೆ ಮಾಡೋಕೆ ಅವ್ರಿಗೆ ತುಂಬ ಹುರುಪಿದೆ ಅಂತ ಸಾಕ್ಷಿ ಹೇಳ್ತೀನಿ.+ ಆದ್ರೆ ಅವರು ದೇವರ ಇಷ್ಟ ಏನಂತ ನಿಜವಾಗ್ಲೂ ಅರ್ಥ ಮಾಡ್ಕೊಂಡಿಲ್ಲ.*  ದೇವರು ಯಾವ ಆಧಾರದ ಮೇಲೆ ಒಬ್ಬನನ್ನ ನೀತಿವಂತನಾಗಿ ನೋಡ್ತಾನಂತ ಅವರು ತಿಳ್ಕೊಂಡಿಲ್ಲ.+ ಅವರು ನೀತಿವಂತರು ಅಂತ ಸಾಬೀತು ಮಾಡೋಕೆ ಅವ್ರೇ ಏನೆನೋ ಪ್ರಯತ್ನ ಮಾಡ್ತಿದ್ದಾರೆ.+ ಹಾಗಾಗಿ ದೇವರ ನೀತಿಯ ನಿಯಮಗಳಿಗೆ ತಕ್ಕ ಹಾಗೆ ಅವರು ಜೀವಿಸ್ತಿಲ್ಲ.+  ಕ್ರಿಸ್ತನ ಮೂಲಕ ನಿಯಮ ಪುಸ್ತಕ ಕೊನೆ ಆಯ್ತು.+ ಆತನಲ್ಲಿ ನಂಬಿಕೆ ಇಡೋ ಪ್ರತಿಯೊಬ್ಬನನ್ನೂ ದೇವರು ನೀತಿವಂತನಾಗಿ ನೋಡ್ತಾನೆ.+  ನಿಯಮ ಪುಸ್ತಕದ ಪ್ರಕಾರ ನೀತಿವಂತರಾಗೋದು ಹೇಗೆ ಅಂತ ಮೋಶೆ ಹೇಳಿದ. “ಒಬ್ಬನು ಇವುಗಳನ್ನ ಪಾಲಿಸೋದ್ರಿಂದ ಬದುಕ್ತಾನೆ” ಅಂತ ಅವನು ಬರೆದ.+  ಆದ್ರೆ ನಂಬಿಕೆಯಿದ್ರೆ ಒಬ್ಬನು ದೇವರ ದೃಷ್ಠಿಯಲ್ಲಿ ನೀತಿವಂತನಾಗ್ತಾನೆ ಅಂತಾನೂ ಪವಿತ್ರ ಗ್ರಂಥದಲ್ಲಿದೆ. “‘ಸ್ವರ್ಗಕ್ಕೆ ಹೋಗಿ ಕ್ರಿಸ್ತನನ್ನ+ ಯಾರು ಕೆಳಗೆ ಕರ್ಕೊಂಡು ಬರ್ತಾರೆ?’ ಅಂತಾಗ್ಲಿ+  ‘ಯಾರು ಅಗಾಧ ಸ್ಥಳಕ್ಕೆ ಇಳಿದುಹೋಗಿ ಕ್ರಿಸ್ತನನ್ನ+ ಜೀವಂತವಾಗಿ ಎಬ್ಬಿಸಿ ಕರ್ಕೊಂಡು ಬರ್ತಾರೆ?’ ಅಂತಾಗ್ಲಿ ನಿನ್ನ ಮನಸ್ಸಲ್ಲಿ ಅಂದ್ಕೊಬೇಡ” ಅಂತ ಅದ್ರಲ್ಲಿ ಬರೆದಿದೆ.  ಪವಿತ್ರ ಗ್ರಂಥ ಏನು ಹೇಳುತ್ತೆ? “ನಿಯಮ ಪುಸ್ತಕದ ಮಾತುಗಳು ನಿನ್ನ ಹತ್ರಾನೇ ಇವೆ, ನಿನ್ನ ಬಾಯಲ್ಲೇ ಹೃದಯದಲ್ಲೇ ಇವೆ” ಅಂತ ಹೇಳುತ್ತೆ.+ ನಂಬಿಕೆಯ ಆ ‘ಮಾತುಗಳನ್ನೇ’ ನಾವು ಸಾರುತ್ತಿದ್ದೀವಿ.  ಯೇಸುನೇ ಪ್ರಭು ಅಂತ ಎಲ್ರಿಗೂ ಸಾರಿ ಹೇಳಿದ್ರೆ+ ಮತ್ತು ದೇವರು ಆತನಿಗೆ ಮತ್ತೆ ಜೀವ ಕೊಟ್ಟನು ಅಂತ ನಿನ್ನ ಹೃದಯದಲ್ಲಿ ನಂಬಿಕೆ ಇಟ್ರೆ ನಿನಗೆ ರಕ್ಷಣೆ ಸಿಗುತ್ತೆ. 10  ಯಾಕಂದ್ರೆ ಒಬ್ಬ ನೀತಿವಂತ ಆಗಬೇಕಾದ್ರೆ ಹೃದಯದಲ್ಲಿ ನಂಬಿಕೆ ಇರಬೇಕು, ರಕ್ಷಣೆ ಪಡೀಬೇಕಾದ್ರೆ ಆ ನಂಬಿಕೆ ಬಗ್ಗೆ ಎಲ್ರಿಗೂ ಸಾರಬೇಕು.+ 11  “ಆತನ ಮೇಲೆ ಯಾರೆಲ್ಲ ನಂಬಿಕೆ ಇಡ್ತಾರೋ ಅವ್ರಿಗೆಲ್ಲ ನಿರಾಶೆ ಆಗಲ್ಲ” ಅಂತ ಪವಿತ್ರ ಗ್ರಂಥ ತಿಳಿಸುತ್ತೆ.+ 12  ಯೆಹೂದ್ಯ ಗ್ರೀಕ ಅನ್ನೋ ಭೇದಭಾವ ಇಲ್ಲ.+ ಯಾಕಂದ್ರೆ ನಮ್ಮೆಲ್ಲರಿಗೂ ಒಬ್ಬನೇ ಒಡೆಯ. ಸಹಾಯ ಕೇಳುವವ್ರಿಗೆಲ್ಲ ಆತನು ಉದಾರವಾಗಿ ಸಹಾಯ ಮಾಡ್ತಾನೆ. 13  ಯಾಕಂದ್ರೆ “ಯೆಹೋವನ* ಹೆಸ್ರು ಹೇಳಿ ಪ್ರಾರ್ಥಿಸೋ ಪ್ರತಿಯೊಬ್ಬನು ರಕ್ಷಣೆ ಪಡಿತಾನೆ.”+ 14  ಆದ್ರೆ ಅವರು ಆತನ ಮೇಲೆ ನಂಬಿಕೆ ಇಟ್ಟಿಲ್ಲ ಅಂದ್ರೆ ಆತನನ್ನ ಕೂಗೋದು ಹೇಗೆ? ಆತನ ಬಗ್ಗೆ ಕೇಳಿಸ್ಕೊಂಡಿಲ್ಲ ಅಂದ್ರೆ ಆತನ ಮೇಲೆ ನಂಬಿಕೆ ಇಡೋದು ಹೇಗೆ? ಯಾರಾದ್ರೂ ಸಾರದಿದ್ರೆ ಅವರು ಕೇಳಿಸ್ಕೊಳ್ಳೋದು ಹೇಗೆ? 15  ಅವ್ರನ್ನ ಯಾರೂ ಕಳಿಸದಿದ್ರೆ ಅವರು ಸಾರೋದು ಹೇಗೆ?+ “ಒಳ್ಳೇ ವಿಷ್ಯಗಳ ಬಗ್ಗೆ ಸಿಹಿಸುದ್ದಿ ಸಾರುವವ್ರ ಕಾಲುಗಳು ಎಷ್ಟೋ ಸುಂದರ!” ಅಂತ ಬರೆದಿದೆ.+ 16  ಆದ್ರೆ ಅವ್ರಲ್ಲಿ ಎಲ್ರೂ ಆ ಸಿಹಿಸುದ್ದಿಗೆ ತಕ್ಕ ಹಾಗೆ ನಡಿಲಿಲ್ಲ. “ಯೆಹೋವನೇ,* ನಮ್ಮಿಂದ ಕೇಳಿಸ್ಕೊಂಡ ವಿಷ್ಯಗಳಲ್ಲಿ ಯಾರು ನಂಬಿಕೆ ಇಟ್ಟಿದ್ದಾರೆ?” ಅಂತ ಯೆಶಾಯ ಹೇಳಿದ.+ 17  ಹಾಗಾಗಿ, ಒಬ್ಬನು ಆ ಸುದ್ದಿಯನ್ನ ಕೇಳಿಸ್ಕೊಂಡ ಮೇಲೆನೇ ನಂಬಿಕೆ ಇಡೋಕೆ ಆಗುತ್ತೆ.+ ಯಾರಾದ್ರೂ ಕ್ರಿಸ್ತನ ಬಗ್ಗೆ ಸಾರಿದಾಗ್ಲೇ ಅವನು ಆ ಸುದ್ದಿ ಕೇಳಿಸ್ಕೊಳ್ತಾನೆ. 18  ಹಾಗಾದ್ರೆ ಇಸ್ರಾಯೇಲ್ಯರು ಆ ಸಂದೇಶವನ್ನ ಕೇಳಿಸ್ಕೊಂಡಿಲ್ವಾ? ಅಂತ ನಾನು ಕೇಳ್ತೀನಿ. ನಿಜ ಏನಂದ್ರೆ “ಇಡೀ ಭೂಮಿಯಲ್ಲಿ ಶಬ್ದ ಪ್ರತಿಧ್ವನಿಸ್ತು, ಭೂಮಿಯ ಮೂಲೆಮೂಲೆಗೂ ಸಂದೇಶ ತಲುಪ್ತು.”+ 19  ಹಾಗಾದ್ರೆ ಇಸ್ರಾಯೇಲ್ಯರಿಗೆ ಅರ್ಥ ಆಗಲಿಲ್ವಾ?+ ಅಂತ ನಾನು ಕೇಳ್ತೀನಿ. ಮೊದ್ಲು ಮೋಶೆ ದೇವರ ಮಾತನ್ನ ಹೇಳ್ತಾ “ನಾನೂ ನಿಮ್ಮನ್ನ ಪ್ರಯೋಜನಕ್ಕೆ ಬಾರದ ಜನಾಂಗದಿಂದ ಗಲಿಬಿಲಿ ಮಾಡ್ತೀನಿ, ಒಂದು ಮೂರ್ಖ ಜನಾಂಗದಿಂದ ನಿಮಗೆ ರೋಷ ಬರೋ ತರ ಮಾಡ್ತೀನಿ” ಅಂದ.+ 20  ಆದ್ರೆ ಯೆಶಾಯ ತುಂಬ ಧೈರ್ಯದಿಂದ ದೇವರ ಮಾತುಗಳನ್ನ ಹೇಳ್ತಾ “ನನ್ನನ್ನ ಯಾರು ಹುಡುಕಲಿಲ್ವೋ ಅವ್ರಿಗೆ ನಾನು ಸಿಕ್ಕಿದೆ.+ ನನ್ನ ಬಗ್ಗೆ ಯಾರು ವಿಚಾರಿಸಲಿಲ್ವೋ ಅವ್ರಿಗೆ ನನ್ನ ಬಗ್ಗೆ ತಿಳಿಸಿದೆ” ಅಂದ.+ 21  ಆದ್ರೆ ಇಸ್ರಾಯೇಲ್ಯರ ಬಗ್ಗೆ ಅವನು “ಮಾತು ಕೇಳದ ಮತ್ತು ಹಠಮಾರಿ ಜನ್ರನ್ನ ನಾನು ಇಡೀ ದಿನ ಕೈಚಾಚಿ ಕರಿತಾನೇ ಇದ್ದೆ” ಅಂದ.+

ಪಾದಟಿಪ್ಪಣಿ

ಅಥವಾ “ಅವ್ರ ಹುರುಪು ನಿಷ್ಕೃಷ್ಟ ಜ್ಞಾನಕ್ಕೆ ತಕ್ಕ ಹಾಗಿಲ್ಲ.”