ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ತಕ್ಕ ಕಾಲದಲ್ಲಿ ಆಡಿದ ಮಾತು ಎಷ್ಟೋ ಒಳ್ಳೆಯದು!”

“ತಕ್ಕ ಕಾಲದಲ್ಲಿ ಆಡಿದ ಮಾತು ಎಷ್ಟೋ ಒಳ್ಳೆಯದು!”

“ತಕ್ಕ ಕಾಲದಲ್ಲಿ ಆಡಿದ ಮಾತು ಎಷ್ಟೋ ಒಳ್ಳೆಯದು!”

ಯೆಹೋವನ ಸಾಕ್ಷಿಗಳ ಇಡೀ ದಿನದ ಒಂದು ಸಮ್ಮೇಳನದಲ್ಲಿ, ಕಿಮ್‌ ತನ್ನ ಎರಡೂವರೆ ವರುಷದ ಮಗಳನ್ನು ಮೌನವಾಗಿ ಕುಳಿತುಕೊಳ್ಳುವಂತೆ ಮಾಡಿ ಅದೇ ಸಮಯದಲ್ಲಿ ಕಾರ್ಯಕ್ರಮಕ್ಕೆ ಕಿವಿಗೊಟ್ಟು ಟಿಪ್ಪಣಿಯನ್ನು ತೆಗೆದುಕೊಳ್ಳಲು ಬಹಳಷ್ಟು ಪ್ರಯತ್ನವನ್ನು ಮಾಡಿದಳು. ಕಾರ್ಯಕ್ರಮದ ಅಂತ್ಯದಲ್ಲಿ, ಅದೇ ಸಾಲಿನಲ್ಲಿ ಕುಳಿತಿದ್ದ ಒಬ್ಬ ಸಹೋದರಿಯು, ಕಾರ್ಯಕ್ರಮದಾದ್ಯಂತ ಕಿಮ್‌ ಮತ್ತು ಅವಳ ಗಂಡ ಅವರ ಮಗಳನ್ನು ನೋಡಿಕೊಂಡ ರೀತಿಗಾಗಿ ಯಥಾರ್ಥವಾಗಿ ಶ್ಲಾಘಿಸಿದಳು. ಆ ಶ್ಲಾಘನೆಯು ಕಿಮ್‌ಗೆ ಎಷ್ಟೊಂದು ಉತ್ತೇಜನವನ್ನು ನೀಡಿತೆಂದರೆ, ಅನೇಕ ವರುಷಗಳ ಅನಂತರವೂ ಅಂದರೆ ಇಂದು ಸಹ, “ಮುಖ್ಯವಾಗಿ ನನಗೆ ಸುಸ್ತಾಗಿದ್ದಾಗ ಕೂಟಗಳಲ್ಲಿ ಆ ಸಹೋದರಿಯ ಮಾತುಗಳನ್ನು ನಾನು ನೆನಪಿಸಿಕೊಳ್ಳುತ್ತೇನೆ. ಆಕೆಯ ದಯಾಭರಿತ ಮಾತುಗಳು, ನಾನು ನನ್ನ ಮಗಳಿಗೆ ತರಬೇತಿ ನೀಡುತ್ತಾ ಮುಂದುವರಿಯುವಂತೆ ನನ್ನನ್ನು ಈಗಲೂ ಉತ್ತೇಜಿಸುತ್ತಿವೆ” ಎಂದು ಅವಳು ಹೇಳುತ್ತಾಳೆ. ಸಮಯೋಚಿತವಾದ ಮಾತುಗಳು ಒಬ್ಬ ವ್ಯಕ್ತಿಯನ್ನು ಹುರಿದುಂಬಿಸಬಲ್ಲವು ಎಂಬುದು ನಿಜ. ಬೈಬಲ್‌ ಹೇಳುವುದು: “ತಕ್ಕ ಕಾಲದಲ್ಲಿ ಆಡಿದ ಮಾತು ಎಷ್ಟೋ ಒಳ್ಳೆಯದು!”​—⁠ಜ್ಞಾನೋಕ್ತಿ 15:​23, NIBV.

ನಮ್ಮಲ್ಲಿ ಕೆಲವರಿಗೆ ಇತರರನ್ನು ಶ್ಲಾಘಿಸುವುದು ಕಷ್ಟಕರ ವಿಷಯವಾಗಿ ಕಂಡುಬರಬಹುದು. ಕೆಲವೊಂದು ಸಮಯಗಳಲ್ಲಿ, ನಮ್ಮ ಸ್ವಂತ ಕುಂದುಕೊರತೆಗಳೇ ಇದನ್ನು ಮಾಡುವುದನ್ನು ಕಷ್ಟಕರವನ್ನಾಗಿ ಮಾಡಸಾಧ್ಯವಿದೆ. ಒಬ್ಬ ಕ್ರೈಸ್ತನು ಹೇಳುವುದು: “ಇದು ನನಗೆ ಕೆಸರಿನ ನೆಲದಲ್ಲಿ ನಿಂತಿರುವುದಕ್ಕೆ ಸಮಾನವಾಗಿದೆ. ಇತರರನ್ನು ಎಷ್ಟು ಹೆಚ್ಚು ಎತ್ತಿಮಾತಾಡುತ್ತೇನೊ ನಾನು ಅಷ್ಟೇ ಹೆಚ್ಚು ಕೆಳಕ್ಕೆ ಕುಗ್ಗುತ್ತೇನೆ.” ನಾಚಿಕೆ, ಆತ್ಮವಿಶ್ವಾಸದ ಕೊರತೆ ಇಲ್ಲವೆ ಇತರರಿಂದ ತಪ್ಪರ್ಥ ಮಾಡಿಕೊಳ್ಳಲ್ಪಡುವೆನೊ ಎಂಬ ಭಯವು ಶ್ಲಾಘನೆಯನ್ನು ನೀಡುವುದನ್ನು ಕಷ್ಟಕರವನ್ನಾಗಿ ಮಾಡಸಾಧ್ಯವಿದೆ. ಇದಕ್ಕೆ ಕೂಡಿಕೆಯಾಗಿ, ನಾವು ಬೆಳೆಯುತ್ತಿರುವಾಗ ನಮಗೆ ಹೆಚ್ಚಿನ ಅಥವಾ ಯಾವುದೇ ಶ್ಲಾಘನೆ ಸಿಕ್ಕಿಲ್ಲದಿರುವಲ್ಲಿ ಇತರರನ್ನು ಶ್ಲಾಘಿಸುವುದು ನಮಗೆ ಕಷ್ಟಕರವಾಗಿ ಕಂಡುಬರಬಹುದು.

ಹಾಗಿದ್ದರೂ, ಶ್ಲಾಘನೆಯು ಅದನ್ನು ನೀಡುವಾತನಿಗೂ ಪಡೆಯುವಾತನಿಗೂ ಪ್ರಯೋಜನಕರವಾಗಿದೆ ಎಂಬುದನ್ನು ತಿಳಿಯುವುದು, ತಕ್ಕ ಕಾಲದಲ್ಲಿ ಶ್ಲಾಘನೆಯ ಮಾತನ್ನು ಆಡುವಂತೆ ನಮ್ಮನ್ನು ಪ್ರೋತ್ಸಾಹಿಸಬಹುದು. (ಜ್ಞಾನೋಕ್ತಿ 3:27) ಹಾಗಾದರೆ, ಶ್ಲಾಘಿಸುವುದರಿಂದ ಸಿಗುವ ಸಕಾರಾತ್ಮಕ ಫಲಗಳಾವುವು? ಕೆಲವನ್ನು ನಾವೀಗ ಸಂಕ್ಷಿಪ್ತವಾಗಿ ಪರಿಗಣಿಸೋಣ.

ಸಕಾರಾತ್ಮಕ ಫಲಗಳು

ಸೂಕ್ತವಾದ ಶ್ಲಾಘನೆಯು ಅದನ್ನು ಪಡೆಯುವವರಲ್ಲಿ ಆತ್ಮವಿಶ್ವಾಸವನ್ನು ಮೂಡಿಸಬಲ್ಲದು. “ಜನರು ನನ್ನನ್ನು ಶ್ಲಾಘಿಸುವಾಗ ಅವರಿಗೆ ನನ್ನಲ್ಲಿ ಭರವಸೆಯಿದೆ, ಅವರು ನನ್ನನ್ನು ನಂಬುತ್ತಾರೆ ಎಂಬ ಭಾವನೆ ನನಗಾಗುತ್ತದೆ,” ಎಂದು ಇಲೇನ್‌ ಎಂಬ ಒಬ್ಬ ಕ್ರೈಸ್ತ ಪತ್ನಿಯು ತಿಳಿಸುತ್ತಾಳೆ. ಹೌದು, ಆತ್ಮವಿಶ್ವಾಸದ ಕೊರತೆಯಿರುವ ಒಬ್ಬ ವ್ಯಕ್ತಿಯನ್ನು ಶ್ಲಾಘಿಸುವಾಗ ಅದು ಅವನಿಗೆ, ಅಡ್ಡಿತಡೆಗಳನ್ನು ಎದುರಿಸಲು ಧೈರ್ಯವನ್ನು ಒದಗಿಸುತ್ತದೆ ಮತ್ತು ಇದರ ಪರಿಣಾಮವಾಗಿ ಅವನು ಆನಂದವನ್ನು ಕಂಡುಕೊಳ್ಳುತ್ತಾನೆ. ಮುಖ್ಯವಾಗಿ ಯುವ ಜನರು ತಾವು ಹೊಂದಲು ಅರ್ಹವಾದ ಶ್ಲಾಘನೆಯಿಂದ ಪ್ರಯೋಜನವನ್ನು ಪಡೆದುಕೊಳ್ಳುತ್ತಾರೆ. ತನ್ನ ಸ್ವಂತ ನಕಾರಾತ್ಮಕ ಆಲೋಚನೆಗಳಿಂದ ಖಿನ್ನಳಾಗಿದ್ದ ಒಬ್ಬ ಹದಿಹರೆಯದ ಹುಡುಗಿಯು ಹೇಳುವುದು: “ಯೆಹೋವನನ್ನು ಮೆಚ್ಚಿಸಲು ನನ್ನಿಂದ ಸಾಧ್ಯವಾದದ್ದೆಲ್ಲವನ್ನು ನಾನು ಯಾವಾಗಲೂ ಮಾಡುತ್ತೇನೆ, ಆದರೂ ನಾನು ಏನು ಮಾಡಿದರೂ ಅದು ಕಡಿಮೆಯೇ ಎಂಬ ಭಾವನೆ ಕೆಲವೊಮ್ಮೆ ನನ್ನನ್ನು ಕಾಡುತ್ತಿತ್ತು. ಯಾರಾದರೂ ನನ್ನನ್ನು ಶ್ಲಾಘಿಸಿದರೆ, ಆಂತರ್ಯದಲ್ಲಿ ನನಗೆ ಬಹಳ ಸಂತೋಷವಾಗುತ್ತಿತ್ತು.” ಆದುದರಿಂದ, ಬೈಬಲಿನ ಈ ನಾಣ್ಣುಡಿಯು ಸತ್ಯವಾಗಿದೆ: “ಸಮಯೋಚಿತವಾದ ಮಾತುಗಳು ಬೆಳ್ಳಿಯ ನಕಾಸಿಯಲ್ಲಿ ಖಚಿತವಾದ ಬಂಗಾರದ ಹಣ್ಣುಗಳಿಗೆ ಸಮಾನ.”​—⁠ಜ್ಞಾನೋಕ್ತಿ 25:11.

ಶ್ಲಾಘನೆಯು ಒಬ್ಬ ವ್ಯಕ್ತಿಯನ್ನು ಪ್ರಚೋದಿಸಿ, ಉತ್ತೇಜಿಸಬಲ್ಲದು. ಒಬ್ಬ ಪೂರ್ಣ ಸಮಯದ ಶುಶ್ರೂಷಕನು ಹೇಳುವುದು, “ನಾನು ಇನ್ನಷ್ಟು ಶ್ರಮಪಟ್ಟು ಕೆಲಸಮಾಡುವಂತೆ ಮತ್ತು ನನ್ನ ಶುಶ್ರೂಷೆಯ ಗುಣಮಟ್ಟವನ್ನು ಹೆಚ್ಚಿಸುವಂತೆ ಶ್ಲಾಘನೆಯು ನನ್ನನ್ನು ಉತ್ತೇಜಿಸುತ್ತದೆ.” ತನ್ನ ಮಕ್ಕಳು ಕೂಟಗಳಲ್ಲಿ ಉತ್ತರ ನೀಡುವಾಗ ಮತ್ತು ಅದನ್ನು ಇತರ ಮಕ್ಕಳು ಶ್ಲಾಘಿಸುವಾಗ ಅವರು ಇನ್ನೂ ಹೆಚ್ಚು ಉತ್ತರಗಳನ್ನು ಹೇಳಲು ಬಯಸುತ್ತಾರೆ ಎಂಬುದಾಗಿ ಇಬ್ಬರು ಮಕ್ಕಳ ತಾಯಿಯೊಬ್ಬಳು ತಿಳಿಸುತ್ತಾಳೆ. ಹೌದು, ಯುವ ಜನರು ಕ್ರೈಸ್ತ ಜೀವನದಲ್ಲಿ ಪ್ರಗತಿಯನ್ನು ಮಾಡುವಂತೆ ಶ್ಲಾಘನೆಯು ಪ್ರಚೋದಿಸುತ್ತದೆ. ವಾಸ್ತವದಲ್ಲಿ, ನಾವು ಗಣ್ಯಮಾಡಲ್ಪಡುತ್ತೇವೆ ಮತ್ತು ನಮ್ಮ ಕೆಲಸಕ್ಕೆ ಬೆಲೆ ಇದೆ ಎಂಬ ಪುನರಾಶ್ವಾಸನೆಯು ನಮ್ಮೆಲ್ಲರಿಗೆ ಅಗತ್ಯವಾಗಿದೆ. ಈ ಒತ್ತಡಭರಿತ ಲೋಕವು ನಾವು ಸೋತುಹೋಗುವಂತೆ ಮತ್ತು ಖಿನ್ನರಾಗುವಂತೆ ಮಾಡಬಹುದು. ಒಬ್ಬ ಕ್ರೈಸ್ತ ಹಿರಿಯನು ಹೇಳುವುದು, “ನಾನು ಖಿನ್ನನಾಗಿರುವಾಗ ಶ್ಲಾಘನೆಯು ನನ್ನ ಪ್ರಾರ್ಥನೆಗಳಿಗೆ ಉತ್ತರದಂತಿರುತ್ತದೆ.” ಇದೇ ರೀತಿಯಾಗಿ ಇಲೇನ್‌ ಹೇಳುವುದು, “ಕೆಲವೊಮ್ಮೆ ಯೆಹೋವನು ತನ್ನ ಅಂಗೀಕಾರವನ್ನು ಇತರರ ಮಾತುಗಳ ಮೂಲಕ ತೋರಿಸುವಂತೆ ನನಗೆ ತೋರುತ್ತದೆ.”

ಶ್ಲಾಘಿಸಲ್ಪಡುತ್ತಿರುವುದು ಆಪ್ತ ಸಂಬಂಧವನ್ನು ಉಂಟುಮಾಡಬಲ್ಲದು. ಯಥಾರ್ಥವಾದ ಶ್ಲಾಘನೆಯನ್ನು ನೀಡುವುದು ಆಲೋಚನಾಪರತೆಯನ್ನು ತೋರಿಸುತ್ತದೆ ಮತ್ತು ಆದರದ, ಭದ್ರವಾದ ಹಾಗೂ ಗಣ್ಯತೆಯ ವಾತಾವರಣವನ್ನು ಸೃಷ್ಟಿಸುತ್ತದೆ. ನಾವು ನಮ್ಮ ಜೊತೆ ಕ್ರೈಸ್ತರನ್ನು ನಿಜವಾಗಿಯೂ ಪ್ರೀತಿಸುತ್ತೇವೆ ಮತ್ತು ಅವರನ್ನು ಗಣ್ಯಮಾಡುತ್ತೇವೆ ಎಂಬುದಕ್ಕೆ ಅದು ರುಜುವಾತಾಗಿದೆ. ಜೊಸೀ ಎಂಬ ಒಬ್ಬ ತಾಯಿಯು ಹೇಳುವುದು: “ಹಿಂದೆ, ಧಾರ್ಮಿಕವಾಗಿ ವಿಭಜಿತವಾದ ಕುಟುಂಬದಲ್ಲಿ ನಾನು ಸತ್ಯಕ್ಕಾಗಿ ನನ್ನ ನಿಲುವನ್ನು ತೆಗೆದುಕೊಳ್ಳಬೇಕಾಗಿತ್ತು. ಆ ಸಮಯದಲ್ಲಿ, ಆಧ್ಯಾತ್ಮಿಕವಾಗಿ ಪ್ರೌಢರಾದ ವ್ಯಕ್ತಿಗಳಿಂದ ಮಾನ್ಯಮಾಡಲ್ಪಟ್ಟದ್ದು, ನನ್ನ ಹೋರಾಟವನ್ನು ಬಿಟ್ಟುಬಿಡಬಾರದು ಎಂಬ ನಿರ್ಧಾರವನ್ನು ಬಲಪಡಿಸಿತು.” ನಿಜವಾಗಿಯೂ, ‘ನಾವು ಒಬ್ಬರಿಗೊಬ್ಬರು ಅಂಗಗಳಾಗಿದ್ದೇವೆ.’​—⁠ಎಫೆಸ 4:25.

ಶ್ಲಾಘಿಸುವ ಮನಸ್ಸು ಇತರರಲ್ಲಿ ಒಳ್ಳೇದನ್ನು ನೋಡುವಂತೆ ನಮಗೆ ಸಹಾಯಮಾಡುತ್ತದೆ. ಇತರರಲ್ಲಿರುವ ಬಲವನ್ನು ನಾವು ನೋಡುತ್ತೇವೆಯೇ ಹೊರತು ಬಲಹೀನತೆಯನ್ನಲ್ಲ. ಡೇವಿಡ್‌ ಎಂಬ ಕ್ರೈಸ್ತ ಹಿರಿಯನು ಹೇಳುವುದು, “ಇತರರು ಏನು ಮಾಡುತ್ತಾರೊ ಅದಕ್ಕೆ ಗಣ್ಯತೆಯನ್ನು ತೋರಿಸುವವರಾಗಿರುವುದು ಇತರರನ್ನು ಹೆಚ್ಚು ಬಾರಿ ಶ್ಲಾಘಿಸುವಂತೆ ಸಹಾಯಮಾಡುತ್ತದೆ.” ಅಪರಿಪೂರ್ಣ ಮನುಷ್ಯರನ್ನು ಪ್ರಶಂಸಿಸುವುದರಲ್ಲಿ ಯೆಹೋವನು ಮತ್ತು ಆತನ ಮಗನು ಎಷ್ಟು ಉದಾರಿಗಳಾಗಿದ್ದಾರೆ ಎಂಬುದನ್ನು ಮನಸ್ಸಿನಲ್ಲಿಡಿರಿ. ಇದು, ಈ ವಿಷಯದಲ್ಲಿ ನಾವೂ ಉದಾರಿಗಳಾಗಿರುವಂತೆ ಪ್ರಚೋದಿಸುತ್ತದೆ.​—⁠ಮತ್ತಾಯ 25:​21-23; 1 ಕೊರಿಂಥ 4:⁠5.

ಶ್ಲಾಘನೆಗೆ ಅರ್ಹರಾದ ವ್ಯಕ್ತಿಗಳು

ಯೆಹೋವ ದೇವರು ಸೃಷ್ಟಿಕರ್ತನಾಗಿರುವ ಕಾರಣ ಎಲ್ಲರಿಗಿಂತಲೂ ಹೆಚ್ಚಾಗಿ ಸ್ತುತಿಯನ್ನು ಪಡೆಯಲು ಅರ್ಹನಾಗಿದ್ದಾನೆ. (ಪ್ರಕಟನೆ 4:11) ಯೆಹೋವನ ಆತ್ಮವಿಶ್ವಾಸವನ್ನು ಕಟ್ಟಲು ಇಲ್ಲವೆ ಆತನನ್ನು ಹುರಿದುಂಬಿಸಲು ಆತನಿಗೆ ನಮ್ಮ ಅಗತ್ಯವಿಲ್ಲವಾದರೂ ಆತನ ಭಯಭಕ್ತಿಪ್ರೇರಕ ಗುಣಗಳು ಮತ್ತು ಪ್ರೀತಿಪೂರ್ವಕ ದಯೆಗಾಗಿ ನಾವು ಆತನನ್ನು ಸ್ತುತಿಸುವಾಗ, ಆತನು ನಮ್ಮ ಸಮೀಪಕ್ಕೆ ಬರುತ್ತಾನೆ ಹಾಗೂ ನಾವು ಆತನೊಂದಿಗೆ ಸಂಬಂಧವನ್ನು ಬೆಳೆಸುತ್ತೇವೆ. ದೇವರನ್ನು ಸ್ತುತಿಸುವುದು, ನಮ್ಮ ಸ್ವಂತ ಸಾಧನೆಗಳ ಕುರಿತು ಹಿತಕರವಾದ ಮತ್ತು ಮಿತವಾದ ನೋಟವನ್ನು ಬೆಳೆಸಿಕೊಳ್ಳುವಂತೆ ಹಾಗೂ ನಮ್ಮ ಯಶಸ್ಸಿಗಾಗಿ ಕೀರ್ತಿಯನ್ನು ಯೆಹೋವನಿಗೆ ಸಲ್ಲಿಸುವಂತೆ ಸಹಾಯಮಾಡುತ್ತದೆ. (ಯೆರೆಮೀಯ 9:​23, 24) ಅರ್ಹರಾದ ಎಲ್ಲ ಮಾನವರಿಗೆ ಯೆಹೋವನು ನಿತ್ಯಜೀವದ ಪ್ರತೀಕ್ಷೆಯನ್ನು ನೀಡುತ್ತಾನೆ ಮತ್ತು ಇದು ಆತನನ್ನು ಸ್ತುತಿಸಲು ಪ್ರಚೋದಿಸುವಂಥ ಇನ್ನೊಂದು ಕಾರಣವಾಗಿದೆ. (ಪ್ರಕಟನೆ 21:​3, 4) ಪುರಾತನ ಕಾಲದ ರಾಜ ದಾವೀದನು ‘ದೇವರ ನಾಮವನ್ನು ಕೊಂಡಾಡುವ’ ಮತ್ತು ‘ಕೃತಜ್ಞತಾಸ್ತುತಿಯಿಂದ [ಆತನನ್ನು] ಘನಪಡಿಸುವ’ ಇಚ್ಛೆಯುಳ್ಳವನಾಗಿದ್ದನು. (ಕೀರ್ತನೆ 69:30) ಇದು ನಮ್ಮ ಇಚ್ಛೆಯೂ ಆಗಿರಲಿ.

ಜೊತೆ ಆರಾಧಕರು ಸೂಕ್ತವಾದ ಶ್ಲಾಘನೆಯನ್ನು ಪಡೆಯಲು ಅರ್ಹರಾಗಿದ್ದಾರೆ. ಅದನ್ನು ನಾವು ನೀಡುವಾಗ, “ಪರಸ್ಪರ ಹಿತಚಿಂತಕರಾಗಿದ್ದು ಪ್ರೀತಿಸುತ್ತಿರಬೇಕೆಂತಲೂ ಸತ್ಕಾರ್ಯಮಾಡಬೇಕೆಂತಲೂ” ತಿಳಿಸಲ್ಪಟ್ಟಿರುವ ದೈವಿಕ ಆಜ್ಞೆಗೆ ಅನುಸಾರ ಕ್ರಿಯೆಗೈಯುತ್ತೇವೆ. (ಇಬ್ರಿಯ 10:24) ಅಪೊಸ್ತಲ ಪೌಲನು ಈ ವಿಷಯದಲ್ಲಿ ಮಾದರಿಯಾಗಿದ್ದನು. ರೋಮ್‌ನಲ್ಲಿದ್ದ ಸಭೆಗೆ ಅವನು ಬರೆದದ್ದು: “ಮೊದಲನೇದು, ನಿಮ್ಮ ನಂಬಿಕೆಯು ಲೋಕದಲ್ಲೆಲ್ಲಾ ಪ್ರಸಿದ್ಧಿಗೆ ಬಂದದ್ದರಿಂದ ನಿಮ್ಮೆಲ್ಲರ ವಿಷಯವಾಗಿ ಯೇಸು ಕ್ರಿಸ್ತನ ಮೂಲಕ ನನ್ನ ದೇವರಿಗೆ ಸ್ತೋತ್ರ ಮಾಡುತ್ತೇನೆ.” (ರೋಮಾಪುರ 1:8) ಅಂತೆಯೇ, ‘ಸತ್ಯವನ್ನನುಸರಿಸಿ ನಡೆಯುವುದರಲ್ಲಿ’ ತನ್ನ ಜೊತೆ ಕ್ರೈಸ್ತನಾದ ಗಾಯನು ಇಟ್ಟಂಥ ಅತ್ಯುತ್ತಮ ಮಾದರಿಯನ್ನು ಅಪೊಸ್ತಲ ಯೋಹಾನನು ಗಣ್ಯಮಾಡಿದನು.​—⁠3 ಯೋಹಾನ 1-4.

ಇಂದು, ಜೊತೆ ಕ್ರೈಸ್ತನು ಕ್ರಿಸ್ತನಂಥ ಗುಣವನ್ನು ಮಾದರಿಯ ರೀತಿಯಲ್ಲಿ ಪ್ರದರ್ಶಿಸುವಾಗ, ಕೂಟದಲ್ಲಿನ ಭಾಗವನ್ನು ಉತ್ತಮವಾಗಿ ತಯಾರಿಸಿ ನಿರ್ವಹಿಸುವಾಗ ಇಲ್ಲವೆ ಕೂಟದಲ್ಲಿ ಹೃದಯದಾಳದಿಂದ ಹೇಳಿಕೆಯನ್ನು ನೀಡುವಾಗ ಆ ವ್ಯಕ್ತಿಗೆ ನಮ್ಮ ಶ್ಲಾಘನೆಯನ್ನು ತಿಳಿಸಲು ಅತ್ಯುತ್ತಮ ಸಂದರ್ಭವಿದೆ. ಅಥವಾ, ಒಂದು ಮಗುವು ವಚನಗಳನ್ನು ತೆರೆದುನೋಡಲು ಕಠಿನವಾಗಿ ಪ್ರಯತ್ನಪಡುವಾಗ ನಾವು ಶ್ಲಾಘನೆಯ ಮಾತುಗಳನ್ನು ತಿಳಿಸಬಲ್ಲೆವು. ಹಿಂದೆ ಉಲ್ಲೇಖಿಸಲಾಗಿರುವ ಇಲೇನ್‌ ಹೇಳುವುದು: “ನಮಗೆ ಬೇರೆ ಬೇರೆ ರೀತಿಯ ವರಗಳು ಕೊಡಲ್ಪಟ್ಟಿವೆ. ಇನ್ನೊಬ್ಬರು ಮಾಡುವ ವಿಷಯವನ್ನು ಗಮನಿಸುವ ಮೂಲಕ, ದೇವಜನರ ಮಧ್ಯೆ ಇರುವ ವೈವಿಧ್ಯಮಯ ವರಗಳಿಗಾಗಿ ನಾವು ಗಣ್ಯತೆಯನ್ನು ತೋರಿಸುತ್ತೇವೆ.”

ಕುಟುಂಬದಲ್ಲಿ

ನಮ್ಮ ಸ್ವಂತ ಕುಟುಂಬದ ಸದಸ್ಯರಿಗೆ ಗಣ್ಯತೆಯ ಮಾತುಗಳನ್ನು ನುಡಿಯುವ ವಿಷಯದಲ್ಲೇನು? ಗಂಡಹೆಂಡತಿಯರಿಗೆ ತಮ್ಮ ಕುಟುಂಬಕ್ಕಾಗಿ ಆಧ್ಯಾತ್ಮಿಕ, ಭಾವನಾತ್ಮಕ ಮತ್ತು ಭೌತಿಕ ಬೆಂಬಲವನ್ನು ನೀಡಲು ಬಹಳಷ್ಟು ಸಮಯ, ಶ್ರಮ ಮತ್ತು ಪ್ರೀತಿಪರ ಗಮನದ ಅಗತ್ಯವಿರುತ್ತದೆ. ಖಂಡಿತವಾಗಿಯೂ ಅವರು ಪರಸ್ಪರರಿಂದ ಮತ್ತು ತಮ್ಮ ಮಕ್ಕಳಿಂದ ಶ್ಲಾಘನೆಯ ಮಾತುಗಳನ್ನು ಕೇಳಿಸಿಕೊಳ್ಳಲು ಅರ್ಹರಾಗಿದ್ದಾರೆ. (ಎಫೆಸ 5:33) ಉದಾಹರಣೆಗೆ, ಗುಣವತಿಯಾದ ಸತಿಯ ಕುರಿತು ದೇವರ ವಾಕ್ಯವು ಹೇಳುವುದು: “[ಆಕೆಯ] ಮಕ್ಕಳು ಎದ್ದುನಿಂತು ಆಕೆಯನ್ನು ಧನ್ಯಳು ಎಂದು ಹೇಳುವರು; ಪತಿಯು ಸಹ . . . ಆಕೆಯನ್ನು ಕೊಂಡಾಡುವನು.”​—⁠ಜ್ಞಾನೋಕ್ತಿ 31:​10, 28, 29.

ಮಕ್ಕಳಿಗೂ ಶ್ಲಾಘನೆಯ ಅಗತ್ಯವಿದೆ. ಕೆಲವು ಹೆತ್ತವರು ತಮ್ಮ ಮಕ್ಕಳು ಏನೇನು ಮಾಡಬೇಕು ಎಂಬುದನ್ನು ಬೇಗನೇ ಹೇಳುತ್ತಾರೆ, ಆದರೆ ಮಕ್ಕಳು ಗೌರವ ತೋರಿಸಲು ಮತ್ತು ವಿಧೇಯರಾಗಲು ಮಾಡುವ ಪ್ರಯತ್ನವನ್ನು ಶ್ಲಾಘಿಸುವುದು ಮಾತ್ರ ಅಪರೂಪ ಎಂಬುದು ದುಃಖಕರ ಸಂಗತಿಯಾಗಿದೆ. (ಲೂಕ 3:22) ಮಗುವಿನ ಬೆಳವಣಿಗೆಯ ಆರಂಭದ ವರುಷಗಳಲ್ಲಿ ಶ್ಲಾಘನೆಯು ದೊರೆತರೆ, ತನ್ನ ಮೇಲೆ ಹೆತ್ತವರಿಗೆ ಪ್ರೀತಿಯಿದೆ ಎಂಬ ಮತ್ತು ಭದ್ರತೆಯ ಅನಿಸಿಕೆ ಮಗುವಿಗಾಗುತ್ತದೆ.

ಇತರರನ್ನು ಶ್ಲಾಘಿಸಲು ಪ್ರಯತ್ನದ ಅಗತ್ಯವಿದೆ ಎಂಬುದು ನಿಜ, ಆದರೂ ಹಾಗೆ ಮಾಡುವುದರ ಮೂಲಕ ನಾವು ಅನೇಕ ಪ್ರಯೋಜನಗಳನ್ನು ಕೊಯ್ಯುತ್ತೇವೆ. ವಾಸ್ತವದಲ್ಲಿ, ಅರ್ಹರಾದವರನ್ನು ಶ್ಲಾಘಿಸುವುದರಲ್ಲಿ ನಾವು ಎಷ್ಟು ಶ್ರದ್ಧೆಯುಳ್ಳವರಾಗಿರುತ್ತೇವೊ, ನಮ್ಮ ಸಂತೋಷವು ಅಷ್ಟೇ ಹೆಚ್ಚಾಗುತ್ತದೆ.​—⁠ಅ. ಕೃತ್ಯಗಳು 20:35.

ಸರಿಯಾದ ಹೇತುವಿನೊಂದಿಗೆ ಶ್ಲಾಘನೆಯನ್ನು ಸ್ವೀಕರಿಸಿರಿ ಮತ್ತು ನೀಡಿರಿ

ಶ್ಲಾಘನೆಯನ್ನು ಪಡೆಯುವುದು ಕೆಲವರಿಗೆ ಒಂದು ಪರೀಕ್ಷೆಯಂತಿರಸಾಧ್ಯವಿದೆ. (ಜ್ಞಾನೋಕ್ತಿ 27:21) ಉದಾಹರಣೆಗೆ, ಹೆಮ್ಮೆಯ ಪ್ರವೃತ್ತಿಯಿರುವ ವ್ಯಕ್ತಿಗಳಲ್ಲಿ ಅದು ಶ್ರೇಷ್ಠತೆಯ ಭಾವನೆಯನ್ನು ಉಂಟುಮಾಡಬಲ್ಲದು. (ಜ್ಞಾನೋಕ್ತಿ 16:18) ಆದುದರಿಂದ, ಎಚ್ಚರಿಕೆಯಿಂದಿರಲು ಸಕಾರಣವಿದೆ. ಅಪೊಸ್ತಲ ಪೌಲನು ಈ ಪ್ರಾಯೋಗಿಕ ಸಲಹೆಯನ್ನು ನೀಡುತ್ತಾನೆ: “ನಿಮ್ಮಲ್ಲಿ ಒಬ್ಬೊಬ್ಬನಿಗೂ ಹೇಳುವದೇನಂದರೆ ಯಾರೂ ತನ್ನ ಯೋಗ್ಯತೆಗೆ ಮೀರಿ ತನ್ನನ್ನು ಭಾವಿಸಿಕೊಳ್ಳದೆ ದೇವರು ಒಬ್ಬೊಬ್ಬನಿಗೆ ಎಂಥೆಂಥ ವಿಶ್ವಾಸ ಬಲವನ್ನು ಕೊಟ್ಟನೋ ಅದಕ್ಕೆ ತಕ್ಕ ಹಾಗೆ ನ್ಯಾಯವಾದ ಅಭಿಪ್ರಾಯದಿಂದ ತನ್ನನ್ನು ಭಾವಿಸಿಕೊಳ್ಳಬೇಕು.” (ರೋಮಾಪುರ 12:3) ತಮ್ಮ ಬಗ್ಗೆ ಹೆಚ್ಚಾಗಿ ನೆನಸಿಕೊಳ್ಳುವ ಪಾಶಕ್ಕೆ ಇತರರು ಬೀಳದಂತೆ ಸಹಾಯಮಾಡುವ ಸಲುವಾಗಿ ನಾವು ಅವರ ಅತಿಯಾದ ಬುದ್ಧಿವಂತಿಕೆ ಇಲ್ಲವೆ ಸೌಂದರ್ಯಕ್ಕೆ ಗಮನಕೊಡದೆ ಇರುವುದು ವಿವೇಕಯುತವಾಗಿರಬಹುದು. ಬದಲಾಗಿ, ನಾವು ಇತರರನ್ನು ಅವರ ಉತ್ತಮ ಕೃತ್ಯಗಳಿಗಾಗಿ ಶ್ಲಾಘಿಸಬೇಕು.

ಸರಿಯಾದ ಹೇತುವಿನೊಂದಿಗೆ ಶ್ಲಾಘನೆಯ ಮಾತುಗಳನ್ನು ನೀಡುವಾಗ ಮತ್ತು ಸ್ವೀಕರಿಸುವಾಗ, ಅವು ನಮ್ಮ ಮೇಲೆ ಸಕಾರಾತ್ಮಕ ವಿಧದಲ್ಲಿ ಪ್ರಭಾವ ಬೀರಬಲ್ಲವು. ನಾವು ಮಾಡುವ ಯಾವುದೇ ಒಳ್ಳೇ ವಿಷಯಕ್ಕೆ ಯೆಹೋವನಿಗೆ ಋಣಿಗಳಾಗಿದ್ದೇವೆ ಎಂಬುದನ್ನು ಅಂಗೀಕರಿಸುವಂತೆ ನಾವು ಪ್ರೇರೇಪಿಸಲ್ಪಡಬಹುದು. ಶ್ಲಾಘನೆಯು, ಉತ್ತಮ ರೀತಿಯಲ್ಲಿ ನಮ್ಮನ್ನು ನಡೆಸಿಕೊಳ್ಳುತ್ತಾ ಮುಂದುವರಿಯುವಂತೆ ಉತ್ತೇಜನವನ್ನು ನೀಡುತ್ತದೆ.

ಯಥಾರ್ಥವಾದ ಮತ್ತು ಅರ್ಹವಾದ ಶ್ಲಾಘನೆಯು ನಾವೆಲ್ಲರೂ ನೀಡಬಲ್ಲ ಉಡುಗೊರೆಯಾಗಿದೆ. ನಾವು ವಿವೇಚನೆಯಿಂದ ಯಾರಿಗಾದರೂ ಈ ಉಡುಗೊರೆಯನ್ನು ನೀಡುವಾಗ, ಅದನ್ನು ಪಡೆಯುವವನಿಗೆ ಅದು ನಾವು ನೆನಸುವುದಕ್ಕಿಂತ ಹೆಚ್ಚಿನ ಪ್ರಯೋಜನವನ್ನು ತರಬಹುದು.

[ಪುಟ 18ರಲ್ಲಿರುವ ಚೌಕ/ಚಿತ್ರ]

ಆಕೆಯ ಹೃದಯವನ್ನು ಸ್ಪರ್ಶಿಸಿದ ಒಂದು ಪತ್ರ

ತಾವು ಮತ್ತು ತಮ್ಮ ಪತ್ನಿ, ಚಳಿಗಾಲದ ವಿಪರೀತ ಚಳಿಯಿದ್ದ ಒಂದು ದಿನವನ್ನು ಶುಶ್ರೂಷೆಯಲ್ಲಿ ಕಳೆದು ಮನೆಗೆ ಹಿಂದಿರುಗಿದ ಒಂದು ಸಂದರ್ಭವು ಒಬ್ಬ ಸಂಚರಣ ಮೇಲ್ವಿಚಾರಕರ ಮನಸ್ಸಿನಲ್ಲಿ ಇನ್ನೂ ಹಚ್ಚಹಸುರಾಗಿದೆ. ಅವರು ಹೇಳುವುದು: “ನನ್ನ ಹೆಂಡತಿಯು ನೀರಸಳಾಗಿಯೂ ಖಿನ್ನಳಾಗಿಯೂ ಇದ್ದಳು. ತನಗೆ ಈ ಕೆಲಸವನ್ನು ಇನ್ನು ಮುಂದುವರಿಸಲು ಸಾಧ್ಯವಿಲ್ಲ ಎಂದು ಅವಳಿಗೆ ಅನಿಸುತ್ತಿತ್ತು. ಅವಳು ಹೇಳಿದ್ದು, ‘ಒಂದು ಸಭೆಯೊಂದಿಗೆ ಒಂದೇ ಸ್ಥಳದಲ್ಲಿ ಇದ್ದುಕೊಂಡು ನಮ್ಮದೇ ಸ್ವಂತ ಬೈಬಲ್‌ ಅಧ್ಯಯನಗಳನ್ನು ನಡೆಸುತ್ತಾ ಪೂರ್ಣ ಸಮಯದ ಶುಶ್ರೂಷಾ ಸೇವೆಯನ್ನು ಮಾಡುವುದು ಎಷ್ಟು ಒಳ್ಳೇದು.’ ಈ ವಾರದಲ್ಲಿ ಉಳಿದಿರುವ ದಿನಗಳನ್ನು ಮುಗಿಸಿ ಅನಂತರ ಅವಳಿಗೆ ಹೇಗನಿಸುತ್ತದೆ ಎಂದು ನೋಡಿ ಆಮೇಲೆ ನಿರ್ಣಯವನ್ನು ಮಾಡೋಣ ಎಂದೆಣಿಸಿ ನಾನು ಆಗ ಯಾವುದೇ ನಿರ್ಣಯವನ್ನು ಮಾಡಲಿಲ್ಲ. ಒಂದುವೇಳೆ ಆಗಲೂ ಅವಳಿಗೆ ಈ ಕೆಲಸವನ್ನು ನಿಲ್ಲಿಸಬೇಕೆಂದು ಅನಿಸಿದರೆ, ಅವಳ ಭಾವನೆಗಳನ್ನು ಪರಿಗಣನೆಗೆ ತೆಗೆದುಕೊಳ್ಳುತ್ತೇನೆ ಎಂದು ನಾನು ನೆನಸಿದೆ. ಅದೇ ದಿನ ನಾವು ಮನೆಗೆ ಹಿಂದಿರುಗುವಾಗ ಅಂಚೆ ಕಚೇರಿಗೆ ಹೋಗಿದ್ದೆವು. ಅಲ್ಲಿ, ಬ್ರಾಂಚ್‌ ಆಫೀಸಿನಿಂದ ವೈಯಕ್ತಿಕವಾಗಿ ಅವಳಿಗೆ ಸಂಬೋಧಿಸಿ ಬರೆಯಲ್ಪಟ್ಟ ಒಂದು ಪತ್ರವಿತ್ತು. ಆ ಪತ್ರದಲ್ಲಿ, ಅವಳು ಕ್ಷೇತ್ರ ಶುಶ್ರೂಷೆಯಲ್ಲಿ ಮಾಡುವ ಪ್ರಯತ್ನಗಳಿಗಾಗಿ ಮತ್ತು ಪ್ರತಿ ವಾರ ಬೇರೆ ಬೇರೆ ಸ್ಥಳಗಳಲ್ಲಿ ಮಲಗುವುದು ಎಷ್ಟು ಕಷ್ಟಕರ ಎಂಬುದನ್ನು ತಾವು ಗ್ರಹಿಸುತ್ತೇವೆ ಎಂದು ಹೇಳುತ್ತಾ ಈ ವಿಷಯದಲ್ಲಿ ಅವಳು ತೋರಿಸುವ ತಾಳ್ಮೆಗಾಗಿ ಆದರದ ಶ್ಲಾಘನೆಯ ಮಾತುಗಳಿದ್ದವು. ಈ ಮಾತುಗಳು ಅವಳನ್ನು ಎಷ್ಟು ಸ್ಪರ್ಶಿಸಿದವೆಂದರೆ, ಮುಂದೆಂದೂ ಸಂಚರಣ ಕೆಲಸವನ್ನು ನಿಲ್ಲಿಸುವ ವಿಷಯದಲ್ಲಿ ಅವಳು ಮಾತಾಡಲೇ ಇಲ್ಲ. ವಾಸ್ತವದಲ್ಲಿ, ಅನಂತರ ಕೆಲವೊಮ್ಮೆ ನಾನು ಈ ಕೆಲಸವನ್ನು ಬಿಟ್ಟುಬಿಡುವ ಆಲೋಚನೆಯನ್ನು ಮಾಡಿದಾಗ, ಹಾಗೆ ಮಾಡದಂತೆ ಅವಳು ನನ್ನನ್ನು ಉತ್ತೇಜಿಸಿದಳು.” ಈ ದಂಪತಿಗಳು ಹೆಚ್ಚುಕಡಿಮೆ 40 ವರುಷಗಳ ವರೆಗೆ ಸಂಚರಣ ಕೆಲಸದಲ್ಲಿ ಉಳಿದರು.

[ಪುಟ 17ರಲ್ಲಿರುವ ಚಿತ್ರ]

ನಿಮ್ಮ ಸಭೆಯಲ್ಲಿ ಯಾರು ಶ್ಲಾಘನೆಗೆ ಅರ್ಹರಾಗಿದ್ದಾರೆ?

[ಪುಟ 19ರಲ್ಲಿರುವ ಚಿತ್ರ]

ಪ್ರೀತಿಪರ ಗಮನ ಮತ್ತು ಶ್ಲಾಘನೆಯಿಂದ ಮಕ್ಕಳು ಏಳಿಗೆಹೊಂದುತ್ತಾರೆ