ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

‘ಭಯಪಡಬೇಡ, ನಾನೇ ನಿನಗೆ ಸಹಾಯಮಾಡುತ್ತೇನೆ’

‘ಭಯಪಡಬೇಡ, ನಾನೇ ನಿನಗೆ ಸಹಾಯಮಾಡುತ್ತೇನೆ’

‘ಭಯಪಡಬೇಡ, ನಾನೇ ನಿನಗೆ ಸಹಾಯಮಾಡುತ್ತೇನೆ’

ತನ್ನ ಹಿಂಬಾಲಕರಿಗೆ ಯೇಸು “ನೀವು ಪೂರ್ಣವಾಗಿ ಪರೀಕ್ಷಿಸಲ್ಪಡುವಂತೆ . . . ಪಿಶಾಚನು ನಿಮ್ಮಲ್ಲಿ ಕೆಲವರನ್ನು ಸೆರೆಮನೆಗೆ ಹಾಕುತ್ತಾ ಇರುವನು” ಎಂಬ ಮುನ್ನೆಚ್ಚರಿಕೆಯನ್ನು ಕೊಟ್ಟನು. ಆದರೆ ಈ ಎಚ್ಚರಿಕೆಯನ್ನು ಕೊಡುವ ಸ್ವಲ್ಪ ಮುಂಚೆ ಯೇಸು ಹೇಳಿದ್ದು: “ನಿನಗೆ ಸಂಭವಿಸುವದಕ್ಕಿರುವ ಬಾಧೆಗಳಿಗೆ ಹೆದರಬೇಡ.” ರಾಜ್ಯದ ಸಾರುವಿಕೆಯನ್ನು ನಿಲ್ಲಿಸಲು ಸೈತಾನನು ಸೆರೆವಾಸದ ಬೆದರಿಕೆಯನ್ನು ಸಾಧನವಾಗಿ ಬಳಸುತ್ತಾ ಇರುವುದರಿಂದ ಕೆಲವು ಸರಕಾರಗಳು ನಿಜ ಕ್ರೈಸ್ತರನ್ನು ಹಿಂಸಿಸುವ ಸಾಧ್ಯತೆ ಇದೆ. (ಪ್ರಕ. 2:10; 12:17) ಆದ್ದರಿಂದ ಸೈತಾನನ ಈ ಸಂಚುಗಳಿಗೆ ಸಿದ್ಧರಾಗಿರಲು ಮತ್ತು ಯೇಸು ಬುದ್ಧಿಹೇಳಿದಂತೆ ‘ಭಯಪಡದೆ’ ಇರಲು ನಮಗೆ ಯಾವುದು ಸಹಾಯಮಾಡುವುದು?

ನಮ್ಮಲ್ಲಿ ಹೆಚ್ಚಿನವರು ಒಂದಲ್ಲ ಒಂದು ಸಂದರ್ಭದಲ್ಲಿ ಸ್ವಲ್ಪಮಟ್ಟಿಗಿನ ಭಯವನ್ನು ಅನುಭವಿಸಿದ್ದೇವೆ ನಿಶ್ಚಯ. ಆದರೂ ಯೆಹೋವನ ಸಹಾಯದಿಂದ ಭಯಕ್ಕೆ ಬಲಿಬೀಳುವುದನ್ನು ನಾವು ವರ್ಜಿಸಬಲ್ಲೆವು ಎಂದು ದೇವರ ವಾಕ್ಯ ಆಶ್ವಾಸನೆ ಕೊಡುತ್ತದೆ. ಅದು ಹೇಗೆ? ವಿರೋಧವನ್ನು ಎದುರಿಸಲು ಸಿದ್ಧರಾಗಿರುವಂತೆ ಯೆಹೋವನು ಸಹಾಯಮಾಡುವ ಒಂದು ವಿಧವು ಸೈತಾನನು ಹಾಗೂ ಅವನ ಕಾರುಭಾರಿಗಳು ಉಪಯೋಗಿಸುವ ತಂತ್ರಗಳನ್ನು ನಾವು ಗುರುತಿಸುವಂತೆ ಮಾಡುವುದೇ. (2 ಕೊರಿಂ. 2:11) ಇದು ಹೇಗೆ ಎಂಬುದನ್ನು ದೃಷ್ಟಾಂತಿಸಲು ಬೈಬಲ್‌ ಕಾಲಗಳಲ್ಲಿ ನಡೆದ ಒಂದು ಘಟನೆಯನ್ನು ನಾವು ಪರಿಗಣಿಸೋಣ. ಮಾತ್ರವಲ್ಲ ‘ಪಿಶಾಚನ ತಂತ್ರೋಪಾಯಗಳ ವಿರುದ್ಧ ದೃಢರಾಗಿ ನಿಂತ’ ಆಧುನಿಕ ದಿನದ ನಂಬಿಗಸ್ತ ಜೊತೆ ವಿಶ್ವಾಸಿಗಳ ಕೆಲವು ಉದಾಹರಣೆಗಳನ್ನೂ ನೋಡೋಣ.—ಎಫೆ. 6:11-13.

ದೇವಭೀರು ರಾಜನ ಎದುರಾಗಿ ದುಷ್ಟ ರಾಜ

ಕ್ರಿ.ಪೂ. ಎಂಟನೇ ಶತಮಾನದಲ್ಲಿ ಅಶ್ಶೂರದ ದುಷ್ಟ ರಾಜ ಸನ್ಹೇರೀಬನು ಅನೇಕ ರಾಷ್ಟ್ರಗಳ ಮೇಲೆ ಸರಣಿ ವಿಜಯಗಳನ್ನು ಸಾಧಿಸಿದನು. ಈ ವಿಜಯಗಳಿಂದ ಉಬ್ಬಿದವನಾಗಿ ಅತಿ ಆತ್ಮವಿಶ್ವಾಸದಿಂದ ಅವನೀಗ ದೇವಜನರ ಮೇಲೆ ಮತ್ತು ದೇವಭೀರು ರಾಜ ಹಿಜ್ಕೀಯನು ಆಳುತ್ತಿದ್ದ ಅವರ ರಾಜಧಾನಿ ಯೆರೂಸಲೇಮಿನ ಮೇಲೆ ಕಣ್ಣುಹಾಕಿದನು. (2 ಅರ. 18:1-3, 13) ಸೈತಾನನು ಈ ಸಂದರ್ಭವನ್ನು ದುರುಪಯೋಗಿಸಿಕೊಳ್ಳುತ್ತಿದ್ದನು ನಿಶ್ಚಯ. ಸತ್ಯಾರಾಧನೆಯು ಈ ಭೂಮಿಯಿಂದಲೇ ಅಳಿಸಿಹೋಗುವಂತೆ ತನ್ನ ತಂತ್ರಗಳನ್ನು ನಿರ್ವಹಿಸಲು ಸನ್ಹೇರೀಬನನ್ನು ಸೈತಾನನು ಪ್ರಚೋದಿಸುತ್ತಿದ್ದನು.—ಆದಿ. 3:15.

ಸನ್ಹೇರೀಬನು ಪ್ರತಿನಿಧಿಗಳ ಒಂದು ತಂಡವನ್ನು ಯೆರೂಸಲೇಮಿಗೆ ಕಳುಹಿಸಿ ನಗರದಲ್ಲಿರುವವರು ಶರಣಾಗುವಂತೆ ಒತ್ತಾಯಿಸಿದನು. ರಾಜನ ಮುಖ್ಯ ವಕ್ತಾರನಾಗಿ ಆ ತಂಡದಲ್ಲಿ ಕೂಡಿದ್ದವನೇ ರಬ್ಷಾಕೆ. * (2 ಅರ. 18:17) ರಬ್ಷಾಕೆಯ ಗುರಿ ಏನಾಗಿತ್ತೆಂದರೆ ಯೆಹೂದ್ಯರ ಸ್ಥೈರ್ಯಗೆಡಿಸಿ ಹೋರಾಟವಿಲ್ಲದೆ ಅವರನ್ನು ವಶಪಡಿಸಿಕೊಳ್ಳುವುದು. ಯೆಹೂದ್ಯರ ಮನಸ್ಸಿನಲ್ಲಿ ಭಯವನ್ನು ಬಿತ್ತಲು ಪ್ರಯತ್ನಿಸುತ್ತಾ ರಬ್ಷಾಕೆಯು ಯಾವ ವಿಧಾನಗಳನ್ನು ಉಪಯೋಗಿಸಿದನು?

ಒಬ್ಬಂಟಿಗರಾದರೂ ನಂಬಿಗಸ್ತರು

ರಬ್ಷಾಕೆ ಹಿಜ್ಕೀಯನ ಪ್ರತಿನಿಧಿಗಳಿಗೆ ಹೇಳಿದ್ದು: “ಮಹಾರಾಜನಾದ ಅಶ್ಶೂರದ ಅರಸನ ಮಾತುಗಳನ್ನು ತಿಳಿಸಿರಿ. ಅವನು—ನಿನ್ನ ಭರವಸಕ್ಕೆ ಯಾವ ಆಧಾರವುಂಟು? . . . ಜಜ್ಜಿದ ದಂಟಿಗೆ ಸಮಾನವಾಗಿರುವ [ಈಜಿಪ್ಟಿನಲ್ಲಿ] ಭರವಸವಿಟ್ಟಿರುತ್ತೀಯಷ್ಟೆ. ಒಬ್ಬನು ಅಂಥ ದಂಟಿನ ಮೇಲೆ ಕೈಯೂರಿಕೊಳ್ಳುವದಾದರೆ ಅದು ಅವನ ಕೈಯನ್ನು ತಿವಿದು ಒಳಗೆ ಹೋಗುತ್ತದಲ್ಲವೇ!” (2 ಅರ. 18:19, 21) ರಬ್ಷಾಕೆ ಹೊರಿಸಿದ ಆರೋಪವು ಸುಳ್ಳಾಗಿತ್ತು. ಏಕೆಂದರೆ ಹಿಜ್ಕೀಯನು ಈಜಿಪ್ಟಿನೊಂದಿಗೆ ಮೈತ್ರಿಯನ್ನು ಮಾಡಿರಲೇ ಇಲ್ಲ. ಆದರೆ ‘ತಮ್ಮ ಸಹಾಯಕ್ಕೆ ಯಾರೂ ಇಲ್ಲ. ತಾವು ಒಬ್ಬಂಟಿಗರಾಗಿದ್ದೇವೆ’ ಎಂಬುದನ್ನು ಯೆಹೂದ್ಯರು ಸ್ಪಷ್ಟವಾಗಿ ನೆನಪಿನಲ್ಲಿಡಬೇಕೆಂದು ರಬ್ಷಾಕೆ ಬಯಸಿದನು ಮತ್ತು ಅದನ್ನು ಆ ಆರೋಪವು ಒತ್ತಿಹೇಳಿತು.

ಹೆಚ್ಚು ಈಚಿಗಿನ ಸಮಯಗಳಲ್ಲಿ ಸತ್ಯಾರಾಧನೆಯ ವಿರೋಧಿಗಳು ನಿಜ ಕ್ರೈಸ್ತರಲ್ಲಿ ಭಯವನ್ನು ಹುಟ್ಟಿಸಲು ಪ್ರಯತ್ನಿಸುತ್ತಾ ಅವರನ್ನು ಇತರರಿಂದ ಪ್ರತ್ಯೇಕಿಸಿ ಒಬ್ಬಂಟಿಗರನ್ನಾಗಿ ಮಾಡುವ ಬೆದರಿಕೆಯನ್ನು ಹಾಕಿದ್ದಾರೆ. ಒಬ್ಬಾಕೆ ಕ್ರೈಸ್ತ ಸಹೋದರಿ ನಂಬಿಕೆಗಾಗಿ ಸೆರೆಮನೆಗೆ ಹಾಕಲ್ಪಟ್ಟು ಹಲವಾರು ವರ್ಷಗಳ ತನಕ ಜೊತೆವಿಶ್ವಾಸಿಗಳಿಂದ ಪ್ರತ್ಯೇಕವಾಗಿ ಒಬ್ಬಂಟಿಗಳಾಗಿದ್ದಳು. ಭಯಕ್ಕೆ ಬಲಿಬೀಳದಂತೆ ತನಗೆ ಯಾವುದು ಸಹಾಯಮಾಡಿತೆಂಬುದನ್ನು ಅವಳು ತದನಂತರ ಮರುಕಳಿಸುತ್ತಾ ಅಂದದ್ದು: “ಯೆಹೋವನಿಗೆ ಆಪ್ತಳಾಗುವಂತೆ ಪ್ರಾರ್ಥನೆ ನನಗೆ ಸಹಾಯಮಾಡಿತು. . . . ದೇವರು ‘ದೀನನೂ ಮನಮುರಿದವನೂ’ ಆಗಿರುವವನನ್ನು ಕಟಾಕ್ಷಿಸುತ್ತಾನೆ ಎಂಬ ಯೆಶಾಯ 66:2ರಲ್ಲಿರುವ ಆಶ್ವಾಸನೆಯನ್ನು ಮನಸ್ಸಿನಲ್ಲಿಟ್ಟೆ. ಇದು ಯಾವಾಗಲೂ ನನಗೆ ಬಲ ಮತ್ತು ಮಹಾ ಸಾಂತ್ವನದ ಮೂಲವಾಗಿತ್ತು.” ತದ್ರೀತಿ ಹಲವಾರು ವರ್ಷಗಳನ್ನು ಏಕಾಂತ ಸೆರೆವಾಸದಲ್ಲಿ ಕಳೆದ ಒಬ್ಬ ಸಹೋದರನು ಹೇಳುವುದು: “ಒಬ್ಬ ವ್ಯಕ್ತಿ ದೇವರೊಂದಿಗೆ ಅತ್ಯಾಪ್ತ ಸಂಬಂಧದಲ್ಲಿ ಆನಂದಿಸುವಾಗ ಒಂದು ಚಿಕ್ಕದಾದ ಚೌಕ ಬಂದಿಕೋಣೆಯು ಸಹ ವಿಶಾಲ ವಿಶ್ವದಂತೆ ಅನಿಸುತ್ತದೆ ಎಂಬುದನ್ನು ನಾನು ಅರಿತೆ.” ಹೌದು, ಯೆಹೋವನೊಂದಿಗಿನ ಆಪ್ತ ಸಂಬಂಧವು ಈ ಇಬ್ಬರು ಕ್ರೈಸ್ತರಿಗೆ ತಮ್ಮ ಏಕಾಂಗಿತನವನ್ನು ಸಹಿಸಲು ಅವಶ್ಯಕ ಬಲವನ್ನು ಕೊಟ್ಟಿತು. (ಕೀರ್ತ. 9:9, 10) ಅವರ ಹಿಂಸಕರು ಅವರನ್ನು ಕುಟುಂಬದಿಂದ, ಸ್ನೇಹಿತರಿಂದ, ಜೊತೆ ವಿಶ್ವಾಸಿಗಳಿಂದ ಬೇರ್ಪಡಿಸಶಕ್ತರಿದ್ದರು. ಆದರೆ ವಿರೋಧಿಗಳು ತಮ್ಮನ್ನು ಯೆಹೋವನಿಂದ ಎಂದಿಗೂ ಬೇರ್ಪಡಿಸಸಾಧ್ಯವಿಲ್ಲ ಎಂಬುದನ್ನು ಸೆರೆಯಲ್ಲಿದ್ದ ಸಾಕ್ಷಿಗಳು ತಿಳಿದಿದ್ದರು.—ರೋಮ. 8:35-39.

ಆದ್ದರಿಂದ ಯೆಹೋವನೊಂದಿಗೆ ನಮ್ಮ ಆಪ್ತತೆಯನ್ನು ಬಲಗೊಳಿಸಲು ಸಿಗುವ ಎಲ್ಲ ಅವಕಾಶಗಳನ್ನು ಸದುಪಯೋಗಿಸಿಕೊಳ್ಳುವುದು ಎಷ್ಟೊಂದು ಪ್ರಾಮುಖ್ಯ! (ಯಾಕೋ. 4:8) ನಾವು ಕ್ರಮವಾಗಿ ನಮ್ಮನ್ನು ಹೀಗೆ ಕೇಳಿಕೊಳ್ಳಬೇಕು: ‘ಯೆಹೋವನು ನನಗೆ ಎಷ್ಟು ನೈಜನೂ ಆಪ್ತನೂ ಆಗಿದ್ದಾನೆ? ದಿನನಿತ್ಯದ ಜೀವನದಲ್ಲಿ ನಾನು ಚಿಕ್ಕದೊಡ್ಡ ನಿರ್ಣಯಗಳನ್ನು ಮಾಡುವಾಗ ಆತನ ಮಾತುಗಳು ನನ್ನನ್ನು ಗಾಢವಾಗಿ ಪ್ರಭಾವಿಸುತ್ತವೊ?’ (ಲೂಕ 16:10) ದೇವರೊಂದಿಗೆ ಆಪ್ತ ಸಂಬಂಧದಲ್ಲಿರಲು ನಾವು ಪ್ರಯಾಸಪಡುವುದಾದರೆ ಭಯಪಡಲು ನಮಗೆ ಯಾವುದೇ ಕಾರಣವಿಲ್ಲ. ಸಂಕಟಕ್ಕೀಡಾದ ಯೆಹೂದ್ಯರ ಪರವಾಗಿ ಮಾತಾಡುತ್ತಾ ಪ್ರವಾದಿ ಯೆರೆಮೀಯನು ಹೇಳಿದ್ದು: “ಯೆಹೋವನೇ, ಅಗಾಧವಾದ ನೆಲಮಾಳಿಗೆಯಲ್ಲಿ ನಿನ್ನ ಹೆಸರೆತ್ತಿ ಪ್ರಾರ್ಥಿಸಿದೆನು. . . . ನಾನು ನಿನ್ನನ್ನು ಕೂಗಿಕೊಂಡಾಗ ನನ್ನ ಸಮೀಪಕ್ಕೆ ಬಂದು ಭಯಪಡಬೇಡ ಎಂದು ಹೇಳಿದಿ.”—ಪ್ರಲಾ. 3:55-57.

ಸಂದೇಹ ಬಿತ್ತುವ ತಂತ್ರ ಫಲಿಸಲಿಲ್ಲ

ರಬ್ಷಾಕೆಯು ಕುತಂತ್ರದ ವಾದಸರಣಿಯನ್ನು ಉಪಯೋಗಿಸುತ್ತಾ ಸಂದೇಹವನ್ನು ಬಿತ್ತಲು ಪ್ರಯತ್ನಿಸಿದನು. ಅವನಂದದ್ದು: “ಹಿಜ್ಕೀಯನು . . . ಆ ಯೆಹೋವನ ಪೂಜಾಸ್ಥಳಗಳನ್ನೂ ಬೇರೆ ಎಲ್ಲಾ ಯಜ್ಞವೇದಿಗಳನ್ನೂ ಹಾಳುಮಾಡಿದನಲ್ಲಾ! . . . ಇಲ್ಲಿಗೆ ಬಂದು ಇದನ್ನು ಹಾಳುಮಾಡಿಬಿಡು ಎಂದು ಯೆಹೋವನೇ ನನಗೆ ಆಜ್ಞಾಪಿಸಿದನು.” (2 ಅರ. 18:22, 25) ಹೀಗೆ ಯೆಹೋವನು ಯೆಹೂದ್ಯರ ಮೇಲೆ ಕೋಪಗೊಂಡಿರುವುದರಿಂದ ಅವರಿಗಾಗಿ ಹೋರಾಡನು ಎಂದು ರಬ್ಷಾಕೆ ವಾದಿಸಿದನು. ಆದರೆ ಇದು ಶುದ್ಧ ಸುಳ್ಳಾಗಿತ್ತು. ಏಕೆಂದರೆ ಹಿಜ್ಕೀಯನು ಹಾಗೂ ಯೆಹೂದ್ಯರು ಶುದ್ಧಾರಾಧನೆಗೆ ಹಿಂತಿರುಗಿದ್ದರಿಂದ ಯೆಹೋವನು ಸಂತೋಷಗೊಂಡಿದ್ದನು.—2 ಅರ. 18:3-7.

ಇಂದು ಸಹ ಕುಟಿಲರಾದ ಹಿಂಸಕರು ಸತ್ಯ ಮಾಹಿತಿಯ ತುಣುಕುಗಳನ್ನು ತಿಳಿಸಿ ಮನವೊಲಿಸಲು ಪ್ರಯತ್ನಿಸಾರು. ಆದರೆ ಕುತಂತ್ರದಿಂದ ಅಲ್ಲಲ್ಲಿ ಸುಳ್ಳುಗಳನ್ನು ಜೋಡಿಸುತ್ತಾ ನಮ್ಮಲ್ಲಿ ಸಂದೇಹಗಳನ್ನು ಬಿತ್ತುವುದೇ ಅವರ ಗುರಿ. ಉದಾಹರಣೆಗೆ, ‘ನಿಮ್ಮ ದೇಶದಲ್ಲಿ ಮೇಲ್ವಿಚಾರಣೆ ಮಾಡುವ ಸಹೋದರನು ತನ್ನ ನಂಬಿಕೆಯನ್ನು ತ್ಯಜಿಸಿಬಿಟ್ಟಿದ್ದಾನೆ. ಆದುದರಿಂದ ನೀವು ಸಹ ಹಾಗೆ ಮಾಡುವುದು ತಪ್ಪೇನಲ್ಲ’ ಎಂದು ಸೆರೆಯಲ್ಲಿರುವ ಸಹೋದರ ಸಹೋದರಿಯರಿಗೆ ಕೆಲವೊಮ್ಮೆ ಹೇಳಲಾಗುತ್ತದೆ. ಆದರೆ ವಿರೋಧಿಗಳು ಮಾಡುವ ಇಂಥ ಕುತರ್ಕಗಳು ವಿವೇಚನೆಯುಳ್ಳ ಕ್ರೈಸ್ತರ ಮನಸ್ಸಿನಲ್ಲಿ ಸಂದೇಹವನ್ನು ಬಿತ್ತಲು ವಿಫಲಗೊಳ್ಳುತ್ತವೆ.

ಎರಡನೇ ಮಹಾ ಯುದ್ಧದ ಸಮಯದಲ್ಲಿ ಒಬ್ಬಾಕೆ ಸಹೋದರಿಗೆ ಏನಾಯಿತೆಂಬುದನ್ನು ಪರಿಗಣಿಸಿ. ಜವಾಬ್ದಾರಿಯಲ್ಲಿದ್ದ ಒಬ್ಬ ಸಹೋದರನು ತನ್ನ ನಂಬಿಕೆಯನ್ನು ಬಿಟ್ಟುಕೊಟ್ಟನು ಎಂಬುದನ್ನು ಸೂಚಿಸುವ ಲಿಖಿತ ಹೇಳಿಕೆಗಳನ್ನು ಸೆರೆಮನೆಯಲ್ಲಿ ಅವಳಿಗೆ ತೋರಿಸಲಾಯಿತು. ಆ ಸಾಕ್ಷಿ ಸಹೋದರನನ್ನು ಆಕೆ ನಂಬಿದ್ದಳೋ ಎಂದು ವಿಚಾರಣೆ ನಡೆಸುವವನು ಸಹೋದರಿಗೆ ಕೇಳಿದನು. “[ಅವರು] ಒಬ್ಬ ಅಪರಿಪೂರ್ಣ ಮನುಷ್ಯರಷ್ಟೆ” ಎಂದು ಸಹೋದರಿ ಹೇಳಿದಳು. ಎಷ್ಟರ ವರೆಗೆ ಅವರು ಬೈಬಲ್‌ ಮೂಲತತ್ತ್ವಗಳಿಗನುಸಾರ ನಡೆದರೋ ಅಷ್ಟರ ವರೆಗೆ ದೇವರು ಅವರನ್ನು ಉಪಯೋಗಿಸಿದನು ಎಂದು ಹೇಳುತ್ತಾ “ಅವರ ಹೇಳಿಕೆಗಳು ಬೈಬಲಿಗೆ ಅನುಸಾರವಾಗಿ ಇಲ್ಲದಿರುವುದರಿಂದ ಈಗ ಅವರು ನನ್ನ ಸಹೋದರರಲ್ಲ” ಎಂದು ಅವಳು ಉತ್ತರ ಕೊಟ್ಟಳು. “ಪ್ರಭುಗಳಲ್ಲಿ ಭರವಸವಿಡಬೇಡಿರಿ; ಮಾನವನನ್ನು ನೆಚ್ಚಬೇಡಿರಿ, ಅವನು ಸಹಾಯಮಾಡ ಶಕ್ತನಲ್ಲ” ಎಂಬ ಬೈಬಲ್‌ ಸಲಹೆಯನ್ನು ಈ ನಂಬಿಗಸ್ತ ಸಹೋದರಿ ವಿವೇಕದಿಂದ ಅನುಸರಿಸಿದಳು.—ಕೀರ್ತ. 146:3.

ನಾವು ಬೈಬಲಿನ ನಿಷ್ಕೃಷ್ಟ ಜ್ಞಾನವನ್ನು ಪಡೆದುಕೊಂಡು ಅದರ ಸಲಹೆಯನ್ನು ಅನ್ವಯಿಸಿಕೊಳ್ಳಬೇಕು. ಹೀಗೆ ಮಾಡುವುದಾದರೆ ತಾಳಿಕೊಳ್ಳುವ ನಮ್ಮ ದೃಢಸಂಕಲ್ಪವನ್ನು ದುರ್ಬಲಗೊಳಿಸಬಲ್ಲ ಮೋಸಕರ ತರ್ಕದಿಂದ ಅದು ನಮ್ಮನ್ನು ಸಂರಕ್ಷಿಸುವುದು. (ಎಫೆ. 4:13, 14; ಇಬ್ರಿ. 6:19) ಒತ್ತಡದ ಕೆಳಗಿರುವಾಗ ಸರಿಯಾಗಿ ಯೋಚಿಸಸಾಧ್ಯವಾಗುವಂತೆ ನಮ್ಮನ್ನು ಸಿದ್ಧಗೊಳಿಸಲು ನಾವು ದಿನನಿತ್ಯವೂ ಬೈಬಲ್‌ ಓದುವಿಕೆ ಹಾಗೂ ವೈಯಕ್ತಿಕ ಅಧ್ಯಯನಕ್ಕೆ ಪ್ರಥಮ ಸ್ಥಾನಕೊಡುವ ಅಗತ್ಯವಿದೆ. (ಇಬ್ರಿ. 4:12) ಹೌದು, ಜ್ಞಾನವನ್ನು ಆಳಗೊಳಿಸುವ ಹಾಗೂ ನಂಬಿಕೆಯನ್ನು ಬಲಗೊಳಿಸುವ ಸಮಯವು ಇದೇ ಆಗಿದೆ. ಹಲವಾರು ವರ್ಷ ಏಕಾಂತ ಸೆರೆವಾಸವನ್ನು ತಾಳಿಕೊಂಡ ಒಬ್ಬ ಸಹೋದರನು ಹೇಳುವುದು: “ನಮಗೆ ಕೊಡಲಾಗುವ ಎಲ್ಲ ಆಧ್ಯಾತ್ಮಿಕ ಆಹಾರಕ್ಕಾಗಿ ಯೋಗ್ಯ ಗಣ್ಯತೆಯನ್ನು ತೋರಿಸುವಂತೆ ನಾನು ಎಲ್ಲರನ್ನು ಉತ್ತೇಜಿಸಲು ಬಯಸುತ್ತೇನೆ. ಏಕೆಂದರೆ ಕೆಲವೊಮ್ಮೆ ಅದು ಎಷ್ಟೊಂದು ಮೌಲ್ಯವುಳ್ಳದ್ದಾಗಿರುತ್ತದೆಂದು ನಮಗೆ ಗೊತ್ತಿರುವುದಿಲ್ಲ.” ನಾವು ದೇವರ ವಾಕ್ಯವನ್ನು ಹಾಗೂ ಇಂದು ಆಳು ವರ್ಗದಿಂದ ಕೊಡಲ್ಪಡುವ ಪ್ರಕಾಶನಗಳನ್ನು ಗಮನಕೊಟ್ಟು ಅಧ್ಯಯನ ಮಾಡುವದಾದರೆ ಜೀವನದ ಸಂಕಷ್ಟಕರ ಕ್ಷಣಗಳಲ್ಲಿ ಪವಿತ್ರಾತ್ಮವು ನಾವು ಕಲಿತಿರುವುದನ್ನು ನಮ್ಮ ‘ಮನಸ್ಸಿಗೆ ತರುವುದು.’—ಯೋಹಾ. 14:26.

ಬೆದರಿಕೆಗಳಿಂದ ಸುರಕ್ಷಿತರು

ರಬ್ಷಾಕೆಯು ಯೆಹೂದ್ಯರನ್ನು ಬೆದರಿಸಲು ಪ್ರಯತ್ನಿಸಿದನು. ಅವನು ಹಿಜ್ಕೀಯನಿಗೆ ಹೇಳಿದ್ದು: “ನನ್ನ ಒಡೆಯನಾದ ಅಶ್ಶೂರದ ಅರಸನೊಂದಿಗೆ ಪಂಥಹಾಕುವದಕ್ಕೆ ನಿನಗೆ ಮನಸ್ಸುಂಟೋ? ಹಾಗಾದರೆ ಅವನು ನಿನಗೆ ಎರಡು ಸಾವಿರ ಕುದುರೆಗಳನ್ನು ಕೊಡುತ್ತಾನೆ; ನೀನು ಅಷ್ಟು ಮಂದಿ ಸವಾರರನ್ನು ಅವುಗಳ ಮೇಲೆ ಕುಳ್ಳಿರಿಸುವಿಯೋ? ಇದೂ ನಿನಗೆ ಅಸಾಧ್ಯವಾಗುವದಾದರೆ ನನ್ನ ಒಡೆಯನ ಸೇನಾಪತಿಗಳಲ್ಲಿ ಅತ್ಯಲ್ಪನನ್ನಾದರೂ ಸೋಲಿಸುವದು ಹೇಗೆ?” (2 ಅರ. 18:23, 24) ಮಾನುಷ ದೃಷ್ಟಿಯಲ್ಲಿ ನೋಡುವುದಾದರೆ ಹಿಜ್ಕೀಯ ಹಾಗೂ ಅವನ ಜನರು ಬಲಾಢ್ಯ ಅಶ್ಶೂರ ಸೈನ್ಯವನ್ನು ಎದುರಿಸುವುದು ಅಸಾಧ್ಯವಾಗಿತ್ತು.

ಇಂದು ಸಹ ನಮ್ಮ ಹಿಂಸಕರು ಬಹಳ ಬಲಾಢ್ಯರೆಂದು ನಮಗನಿಸಬಹುದು. ಸರಕಾರವು ಅವರಿಗೆ ಪೂರ್ಣ ಬೆಂಬಲ ಕೊಡುವಾಗಲಂತೂ ಹೀಗನಿಸುವುದು ಸಾಮಾನ್ಯ. ಎರಡನೇ ಮಹಾಯುದ್ಧದ ಸಮಯದಲ್ಲಿ ನಾಸೀ ಹಿಂಸಕರ ವಿಷಯದಲ್ಲೂ ಇದು ಸತ್ಯವಾಗಿತ್ತು ನಿಶ್ಚಯ. ಅವರು ದೇವರ ಸೇವಕರಲ್ಲಿ ಅನೇಕರಿಗೆ ಬೆದರಿಕೆಯೊಡ್ಡಲು ಪ್ರಯತ್ನಿಸಿದರು. ಅನೇಕ ವರ್ಷಗಳನ್ನು ಸೆರೆಯಲ್ಲಿ ಕಳೆದ ನಮ್ಮ ಸಹೋದರನೊಬ್ಬನು ತನ್ನನ್ನು ಹೇಗೆ ಬೆದರಿಸಲಾಯಿತು ಎಂಬುದನ್ನು ತದನಂತರ ವಿವರಿಸಿದನು. ಒಂದು ಸಂದರ್ಭದಲ್ಲಿ ಅಧಿಕಾರಿಯು ಅವನಿಗೆ ಕೇಳಿದ್ದು: “ನಿನ್ನ ತಮ್ಮನನ್ನು ಹೇಗೆ ಗುಂಡಿಕ್ಕಿ ಕೊಂದೆವೆಂದು ನೋಡಿದೆಯಾ? ಅದರಿಂದ ನೀನೇನಾದರೂ ಪಾಠ ಕಲಿತೆಯೋ ಇಲ್ಲವೋ?” ಅದಕ್ಕೆ ಸಹೋದರನು ಉತ್ತರಿಸಿದ್ದು: “ನಾನು ಯೆಹೋವನ ಒಬ್ಬ ಸಾಕ್ಷಿ, ಆತನ ಸಾಕ್ಷಿಯಾಗಿಯೇ ಉಳಿಯುತ್ತೇನೆ.” ಆಗ ಅಧಿಕಾರಿಯು “ಹಾಗೋ? ಹಾಗಾದರೆ ಸಾಯಲು ಸಿದ್ಧನಾಗು” ಎಂದು ಬೆದರಿಕೆಯೊಡ್ಡಿದನು. ಆದಾಗ್ಯೂ ನಮ್ಮ ಸಹೋದರನು ಅಚಲನಾಗಿ ನಿಂತನು, ಮತ್ತು ವಿರೋಧಿಗಳು ಸುಮ್ಮನಾದರು. ಅಂಥ ಬೆದರಿಕೆಗೆ ಎದೆಕೊಟ್ಟು ನಿಲ್ಲಲು ಸಹೋದರನಿಗೆ ಯಾವುದು ಬಲಕೊಟ್ಟಿತು? “ಯೆಹೋವನ ನಾಮದಲ್ಲಿ ನಾನು ಭರವಸೆಯಿಟ್ಟೆ” ಎಂದವನು ಹೇಳುತ್ತಾನೆ.—ಜ್ಞಾನೋ. 18:10.

ಯೆಹೋವನಲ್ಲಿ ಪೂರ್ಣ ನಂಬಿಕೆಯನ್ನಿಡುವುದೇ ನಮ್ಮನ್ನು ರಕ್ಷಿಸುವ ಒಂದು ದೊಡ್ಡ ಗುರಾಣಿಯಾಗಿದೆ. ಸೈತಾನನು ನಮ್ಮ ವಿರುದ್ಧವಾಗಿ ತರುವ ಎಲ್ಲ ಆಧ್ಯಾತ್ಮಿಕ ಹಾನಿಯನ್ನು ಎದುರಿಸಲು ಅದು ನಮ್ಮನ್ನು ಶಕ್ತಗೊಳಿಸುವುದು. (ಎಫೆ. 6:16) ಆದುದರಿಂದ ನಮ್ಮ ನಂಬಿಕೆಯನ್ನು ಬಲಪಡಿಸಲು ಸಹಾಯಮಾಡುವಂತೆ ಪ್ರಾರ್ಥನೆಯಲ್ಲಿ ಯೆಹೋವನನ್ನು ಕೇಳಿಕೊಳ್ಳುವುದು ಒಳ್ಳೇದು. (ಲೂಕ 17:5) ಮಾತ್ರವಲ್ಲ ನಂಬಿಗಸ್ತ ಆಳು ವರ್ಗದಿಂದ ಒದಗಿಸಲಾಗುವ ನಂಬಿಕೆವರ್ಧಕ ಏರ್ಪಾಡುಗಳನ್ನೂ ಸದುಪಯೋಗಿಸಿಕೊಳ್ಳುವುದು ಅವಶ್ಯ. ನಮಗೆ ಬೆದರಿಕೆಗಳು ಎದುರಾಗುವಾಗ ಯೆಹೋವನು ಪ್ರವಾದಿ ಯೆಹೆಜ್ಕೇಲನಿಗೆ ಕೊಟ್ಟ ಆಶ್ವಾಸನೆಯನ್ನು ನೆನಪಿಸಿಕೊಳ್ಳುವುದು ಬಲವರ್ಧಕ. ಅವನಿಗೆ ಸಹ ಹಠಮಾರಿ ಜನರೊಂದಿಗೆ ವ್ಯವಹರಿಸಲಿಕ್ಕಿತ್ತು. ಯೆಹೋವನು ಅವನಿಗೆ ಹೇಳಿದ್ದು: “ಅವರ ಕಠಿನ ಮುಖಕ್ಕೆ ವಿರುದ್ಧವಾಗಿ ನಿನ್ನ ಮುಖವನ್ನು ಕಠಿನಪಡಿಸಿದ್ದೇನೆ; ಅವರ ಹಣೆಗೆ ಪ್ರತಿಯಾಗಿ ನಿನ್ನ ಹಣೆಯನ್ನು ಗಟ್ಟಿಮಾಡಿದ್ದೇನೆ. ನಿನ್ನ ಹಣೆಯನ್ನು ಕಗ್ಗಲ್ಲಿಗಿಂತ ಕಠಿನವಾದ ವಜ್ರದಷ್ಟು ಕಠಿನಪಡಿಸಿದ್ದೇನೆ.” (ಯೆಹೆ. 3:8, 9) ಅಗತ್ಯವಿದ್ದಲ್ಲಿ ಯೆಹೆಜ್ಕೇಲನಂತೆ ನಾವು ಸಹ ವಜ್ರದಷ್ಟು ಕಠಿನರಾಗಿ ಉಳಿಯುವಂತೆ ಯೆಹೋವನು ಸಹಾಯಮಾಡಬಲ್ಲನು.

ಪ್ರಲೋಭನೆಗಳನ್ನು ನಿರೋಧಿಸುವುದು

ಬೇರೆ ಯಾವುದೂ ಯಶಸ್ವಿಯಾಗದಿದ್ದಾಗ ಆಕರ್ಷಕ ಆಮಿಷಗಳು ಒಬ್ಬ ವ್ಯಕ್ತಿಯ ಸಮಗ್ರತೆಯನ್ನು ಕೆಲವೊಮ್ಮೆ ಮುರಿಯಬಲ್ಲವು ಎಂಬುದನ್ನು ವಿರೋಧಿಗಳು ಕಂಡುಕೊಂಡಿದ್ದಾರೆ. ಈ ವಿಧಾನವನ್ನು ರಬ್ಷಾಕೆ ಸಹ ಬಳಸಿದನು. ಅವನು ಯೆರೂಸಲೇಮಿನಲ್ಲಿದ್ದವರಿಗೆ ಹೇಳಿದ್ದು: “ಅಶ್ಶೂರದ ಅರಸನಾದ ನನ್ನ ಮಾತನ್ನು ಕೇಳಿರಿ; ನನ್ನೊಡನೆ ಒಡಂಬಡಿಕೆಮಾಡಿಕೊಂಡು ನನ್ನ ಆಶ್ರಯದಲ್ಲಿ ಸೇರಿರಿ. . . . ಸ್ವಲ್ಪ ಕಾಲವಾದನಂತರ ನಾನು ಬಂದು ನಿಮ್ಮನ್ನು ಧಾನ್ಯ ದ್ರಾಕ್ಷಾರಸ ಆಹಾರ ದ್ರಾಕ್ಷೇತೋಟ ಎಣ್ಣೇಮರ ಜೇನುತುಪ್ಪ ಇವು ಸಮೃದ್ಧಿಯಾಗಿರುವ ನಿಮ್ಮ ದೇಶಕ್ಕೆ ಸಮಾನವಾದ ಇನ್ನೊಂದು ದೇಶಕ್ಕೆ ಕರಕೊಂಡುಹೋಗುವೆನು; ನೀವು ಸಾಯುವದಿಲ್ಲ, ಬದುಕುವಿರಿ.” (2 ಅರ. 18:31, 32) ಮುತ್ತಿಗೆಹಾಕಲ್ಪಟ್ಟ ಪೌಳಿಗೋಡೆಯೊಳಗೇ ಕಟ್ಟಿಹಾಕಿದಂತೆ ಇದ್ದ ಜನರಿಗೆ ತಾಜಾ ರೊಟ್ಟಿ ತಿನ್ನುವ ಹಾಗೂ ದ್ರಾಕ್ಷಾರಸವನ್ನು ಕುಡಿಯುವ ಆಸೆಯೇ ತುಂಬ ಆಕರ್ಷಕವಾಗಿದ್ದಿರಬೇಕು!

ಬಂಧನದಲ್ಲಿದ್ದ ಒಬ್ಬ ಮಿಷನೆರಿಯ ದೃಢಸಂಕಲ್ಪವನ್ನು ದುರ್ಬಲಗೊಳಿಸ ಪ್ರಯತ್ನಿಸಲು ಒಮ್ಮೆ ಅಂಥ ಒಂದು ಆಸೆಯನ್ನು ಹುಟ್ಟಿಸಲಾಯಿತು. ಮಿಷನೆರಿಯನ್ನು, ಅವನು ಚೆನ್ನಾಗಿ ಯೋಚಿಸುವಂತೆ ಆರು ತಿಂಗಳ ತನಕ ‘ಸುಂದರ ತೋಟದ’ ಒಂದು ‘ಚೆಂದದ ಮನೆಗೆ’ ತಕ್ಕೊಂಡು ಹೋಗುವೆವೆಂದು ಹೇಳಲಾಯಿತು. ಆದರೆ ಆ ಸಹೋದರನು ಆಧ್ಯಾತ್ಮಿಕವಾಗಿ ಎಚ್ಚರದಿಂದಿದ್ದನು ಹಾಗೂ ಕ್ರೈಸ್ತ ಮೂಲತತ್ತ್ವಗಳನ್ನು ಬಿಟ್ಟುಕೊಡಲಿಲ್ಲ. ಹೀಗೆ ಮಾಡಲು ಯಾವುದು ಸಹಾಯಮಾಡಿತು? ನಂತರ ಅವನು ವಿವರಿಸಿದ್ದು: “ದೇವರ ರಾಜ್ಯವೇ ನಿಜ ನಿರೀಕ್ಷೆಯೆಂದು ಪರಿಗಣಿಸಿ ಅದರ ಕುರಿತು ಆಲೋಚಿಸುತ್ತಿದ್ದೆ. . . . ದೇವರ ರಾಜ್ಯದ ಕುರಿತ ಜ್ಞಾನದಿಂದ ಬಲಪಡಿಸಲ್ಪಟ್ಟೆ. ಅದರಲ್ಲಿ ಖಚಿತ ಭರವಸೆಯಿಟ್ಟೆ. ಕ್ಷಣಮಾತ್ರಕ್ಕೂ ಅದನ್ನು ಸಂದೇಹಿಸದೆ ಇದ್ದದರಿಂದ ನನ್ನ ನಂಬಿಕೆಯನ್ನು ಸ್ವಲ್ಪವೂ ಅಲುಗಾಡಿಸಲು ಅವರಿಂದ ಸಾಧ್ಯವಾಗಲಿಲ್ಲ.”

ನಾವು ದೇವರ ರಾಜ್ಯವನ್ನು ಎಷ್ಟು ನೈಜವಾಗಿ ಪರಿಗಣಿಸುತ್ತೇವೆ? ಪೂರ್ವಜ ಅಬ್ರಹಾಮ, ಅಪೊಸ್ತಲ ಪೌಲ ಹಾಗೂ ಸ್ವತಃ ಯೇಸು ಕಷ್ಟಕರ ಪರೀಕ್ಷೆಗಳನ್ನು ತಾಳಿಕೊಂಡದ್ದು ಹೇಗೆ? ದೇವರ ರಾಜ್ಯವನ್ನು ನೈಜವಾಗಿ ಪರಿಗಣಿಸಿದ್ದರಿಂದಲೇ. (ಫಿಲಿ. 3:13, 14; ಇಬ್ರಿ. 11:8-10; 12:2) ಹಾಗಾದರೆ ದೇವರ ರಾಜ್ಯವನ್ನು ನಮ್ಮ ಜೀವಿತದಲ್ಲಿ ಪ್ರಥಮವಾಗಿಡುತ್ತಾ ಅದರ ನಿತ್ಯನಿರಂತರ ಆಶೀರ್ವಾದಗಳನ್ನು ಮನಸ್ಸಿನಲ್ಲಿಟ್ಟರೆ ಸಂಕಷ್ಟಗಳಿಂದ ತಾತ್ಕಾಲಿಕ ಬಿಡುಗಡೆ ಪಡೆಯುವ ಪ್ರಲೋಭನೆಗಳನ್ನು ನಿರೋಧಿಸುವುದರಲ್ಲಿ ನಾವು ಸಹ ವಿಜಯಿಗಳಾಗಬಲ್ಲೆವು.—2 ಕೊರಿಂ. 4:16-18.

ಯೆಹೋವನು ನಮ್ಮ ಕೈಬಿಡನು

ರಬ್ಷಾಕೆಯು ಯೆಹೂದ್ಯರ ಧೈರ್ಯಗೆಡಿಸಲು ಎಷ್ಟೇ ಪ್ರಯತ್ನಿಸಿದರೂ ಹಿಜ್ಕೀಯನು ಮತ್ತು ಅವನ ಪ್ರಜೆಗಳು ಯಹೋವನಲ್ಲಿ ಅಚಲ ಭರವಸೆಯಿಟ್ಟರು. (2 ಅರ. 19:14, 15, 19; ಯೆಶಾ. 37:5-7) ಸಹಾಯಕ್ಕಾಗಿ ಅವರಿಟ್ಟ ಮೊರೆಯನ್ನು ಆಲಿಸಿ ಯೆಹೋವನು ತನ್ನ ದೂತನನ್ನು ಕಳುಹಿಸಿದನು. ಆ ದೂತನು ಒಂದೇ ರಾತ್ರಿಯಲ್ಲಿ ಅಶ್ಶೂರ್ಯರ ಪಾಳೆಯದಲ್ಲಿದ್ದ 1,85,000 ಸೈನಿಕರನ್ನು ಸಂಹರಿಸಿದನು. ಇದರಿಂದ ಅವಮಾನಗೊಂಡ ಸನ್ಹೇರೀಬನು ಮರುದಿನವೇ ಅಳಿದುಳಿದ ಕೆಲವೇ ಸೈನಿಕರೊಂದಿಗೆ ತನ್ನ ರಾಜಧಾನಿ ನಿನೆವೆಗೆ ತ್ವರೆಯಾಗಿ ಹಿಂತಿರುಗಿದನು.—2 ಅರ. 19:35, 36.

ನಿಜವಾಗಿಯೂ ಯೆಹೋವನು ತನ್ನಲ್ಲಿ ಭರವಸೆಯಿಟ್ಟವರ ಕೈಬಿಡಲಿಲ್ಲ. ಯೆಹೋವನ ವಿಷಯದಲ್ಲಿ ಇದು ಇಂದು ಸಹ ಸತ್ಯ ಎಂಬುದನ್ನು ಪರೀಕ್ಷೆಗಳ ಎದುರೂ ಸ್ಥಿರರಾಗಿ ನಿಂತ ಆಧುನಿಕ ದಿನದ ನಮ್ಮ ಸಹೋದರ ಸಹೋದರಿಯರ ಉದಾಹರಣೆಗಳು ತೋರಿಸುತ್ತವೆ. ಆದುದರಿಂದ ಸಕಾರಣದಿಂದಲೇ ನಮ್ಮ ಸ್ವರ್ಗೀಯ ತಂದೆಯು ನಮಗೆ ಆಶ್ವಾಸನೆ ಕೊಡುತ್ತಾನೆ: “ಭಯಪಡಬೇಡ, ನಿನಗೆ ಸಹಾಯಮಾಡುತ್ತೇನೆ ಎಂದು ನಿನಗೆ ಹೇಳುವ ನಿನ್ನ ದೇವರಾದ ಯೆಹೋವನೆಂಬ ನಾನೇ ನಿನ್ನ ಕೈಹಿಡಿಯುತ್ತೇನಲ್ಲಾ.”—ಯೆಶಾ. 41:13.

[ಪಾದಟಿಪ್ಪಣಿ]

^ ಪ್ಯಾರ. 6 “ರಬ್ಷಾಕೆ” ಎಂಬುದು ಪ್ರಮುಖ ಅಶ್ಶೂರ ಅಧಿಕಾರಿಯ ಬಿರುದಾಗಿತ್ತು. ಅವನ ವೈಯಕ್ತಿಕ ಹೆಸರು ವೃತ್ತಾಂತದಲ್ಲಿ ತಿಳಿಸಲಾಗಿರುವುದಿಲ್ಲ.

[ಪುಟ 13ರಲ್ಲಿರುವ ಸಂಕ್ಷಿಪ್ತ ವಿವರಣೆ]

ಯೆಹೋವನು ತಾನೇ ತನ್ನ ವಾಕ್ಯದಲ್ಲಿ ಸುಮಾರು 30ಕ್ಕಿಂತ ಹೆಚ್ಚು ಬಾರಿ ತನ್ನ ಸೇವಕರಿಗೆ ಭಯಪಡಬೇಡ ಎಂಬ ಆಶ್ವಾಸನೆ ಕೊಟ್ಟಿದ್ದಾನೆ

[ಪುಟ 12ರಲ್ಲಿರುವ ಚಿತ್ರ]

ರಬ್ಷಾಕೆಯ ಕುತಂತ್ರಗಳು ಇಂದು ದೇವಜನರ ವಿರೋಧಿಗಳು ಉಪಯೋಗಿಸುವ ತಂತ್ರಗಳಿಗೆ ಹೇಗೆ ಸದೃಶವಾಗಿದ್ದವು?

[ಪುಟ 15ರಲ್ಲಿರುವ ಚಿತ್ರಗಳು]

ಯೆಹೋವನೊಂದಿಗಿನ ಆಪ್ತ ಸಂಬಂಧವು ಪರೀಕ್ಷೆಯ ಕೆಳಗೂ ಸಮಗ್ರತೆ ಕಾಪಾಡಿಕೊಳ್ಳಲು ನಮ್ಮನ್ನು ಸಾಧ್ಯಗೊಳಿಸುತ್ತದೆ