ಲೂಕ 16:1-31

  • ಮೋಸಗಾರ ಸೇವಕನ ಉದಾಹರಣೆ (1-13)

    • ‘ಚಿಕ್ಕಚಿಕ್ಕ ವಿಷ್ಯಗಳಲ್ಲಿ ನಂಬಿಕೆ ಉಳಿಸ್ಕೊಳ್ಳುವವರು ದೊಡ್ಡದೊಡ್ಡ ವಿಷ್ಯಗಳಲ್ಲೂ ಉಳಿಸ್ಕೊಳ್ತಾರೆ’ (10)

  • ನಿಯಮ ಪುಸ್ತಕ ಮತ್ತು ದೇವರ ಆಳ್ವಿಕೆ (14-18)

  • ಶ್ರೀಮಂತ ಮತ್ತು ಲಾಜರನ ಉದಾಹರಣೆ (19-31)

16  ಆಮೇಲೆ ಯೇಸು ಶಿಷ್ಯರಿಗೆ ಹೀಗಂದನು “ಒಬ್ಬ ಶ್ರೀಮಂತನ ಮನೆಯಲ್ಲಿ ಎಲ್ಲ ಕೆಲಸಗಳನ್ನ ನೋಡ್ಕೊಳ್ತಿದ್ದ ಒಬ್ಬ ಮೇಲ್ವಿಚಾರಕ ಇದ್ದ. ಅವನು ಯಜಮಾನನ ವಸ್ತುಗಳನ್ನ ಹಾಳುಮಾಡ್ತಿದ್ದಾನೆ ಅಂತ ಯಜಮಾನನಿಗೆ ದೂರು ಬಂತು.  ಆಗ ಯಜಮಾನ ಅವನನ್ನ ಕರೆದು ‘ಏನಿದು ನಾನು ಕೇಳ್ತಿರೋದು? ಇಷ್ಟು ದಿನ ಏನೇನು ಮಾಡಿದೆ ಅಂತ ಲೆಕ್ಕಕೊಡು. ಇನ್ನು ಮುಂದೆ ನೀನು ನನ್ನ ಮನೆ ನೋಡ್ಕೊಳ್ಳಲ್ಲ’ ಅಂದ.  ಆಗ ಆ ಮೇಲ್ವಿಚಾರಕ ಮನಸ್ಸಲ್ಲೇ ‘ಯಜಮಾನ ನನ್ನನ್ನ ಕೆಲಸದಿಂದ ತೆಗೆದುಬಿಡ್ತಾನಲ್ಲಾ, ಈಗೇನು ಮಾಡಲಿ? ಹೊಲದಲ್ಲಿ ಕೆಲಸ ಮಾಡುವಷ್ಟು ಶಕ್ತಿ ನಂಗಿಲ್ಲ. ಭಿಕ್ಷೆಬೇಡೋಣ ಅಂದ್ರೆ ನಾಚಿಕೆ ಆಗುತ್ತೆ.  ಆ! ನನ್ನನ್ನ ಕೆಲಸದಿಂದ ತೆಗೆದ್ರೆ ಒಂದು ಉಪಾಯ ಇದೆ. ಹಾಗೆ ಮಾಡಿದ್ರೆ ನನ್ನ ಕೆಲಸ ಹೋದ್ರೂ ಜನ ನನ್ನನ್ನ ಮನೆಯೊಳಗೆ ಸೇರಿಸ್ಕೊಳ್ತಾರೆ’ ಅಂತ ಯೋಚಿಸಿದ.  ಆಮೇಲೆ ಯಜಮಾನನ ಸಾಲಗಾರರಲ್ಲಿ ಒಬ್ಬೊಬ್ರನ್ನೇ ಕರೆದ. ಮೊದಲನೇ ವ್ಯಕ್ತಿಗೆ ‘ನನ್ನ ಯಜಮಾನನ ಹತ್ರ ನಿಂಗೆಷ್ಟು ಸಾಲ ಇದೆ?’ ಅಂತ ಕೇಳಿದ.  ಅವನು ‘2,200 ಲೀಟರ್‌* ಆಲೀವ್‌ ಎಣ್ಣೆ’ ಅಂದ. ಆಗ ಮೇಲ್ವಿಚಾರಕ ‘ತಗೋ ನಿನ್ನ ಕರಾರು ಪತ್ರ. ಕೂತ್ಕೊಂಡು ಅದನ್ನ 1,100 ಲೀಟರ್‌ ಅಂತ ತಿದ್ದಿ ಬರಿ’ ಅಂದ.  ಇನ್ನೊಬ್ಬನಿಗೆ ‘ನಿನಗೆಷ್ಟು ಸಾಲ ಇದೆ?’ ಅಂತ ಕೇಳಿದ. ಅವನು ‘170 ಕ್ವಿಂಟಲ್‌* ಗೋದಿ’ ಅಂದ. ಅದಕ್ಕೆ ಮೇಲ್ವಿಚಾರಕ ‘ತಗೋ ನಿನ್ನ ಕರಾರು ಪತ್ರ. ಇದ್ರಲ್ಲಿ 136 ಕ್ವಿಂಟಲ್‌* ಅಂತ ಬರಿ’ ಅಂದ.  ಈ ರೀತಿ ಮೇಲ್ವಿಚಾರಕ ಮೋಸ ಮಾಡಿದ್ರೂ ಯಜಮಾನ ಅವನನ್ನ ಹೊಗಳಿದ. ಯಾಕಂದ್ರೆ ಅವನು ಬುದ್ಧಿ ಬಳಸಿ ಕೆಲಸ ಮಾಡಿದ. ಇದನ್ನ ಯಾಕೆ ಹೇಳ್ತಾ ಇದ್ದೀನಿ ಅಂದ್ರೆ, ಈ ಕಾಲದ* ಜನ ದೇವರ ಸೇವಕರಿಗಿಂತ*+ ಹೆಚ್ಚು ಬುದ್ಧಿವಂತರಾಗಿ ನಡ್ಕೊಳ್ತಾರೆ.  ಅಷ್ಟೇ ಅಲ್ಲ ಲೋಕದಲ್ಲಿ ನಿಮಗಿರೋ ಸಿರಿ-ಸಂಪತ್ತನ್ನ+ ಉಪಯೋಗಿಸಿ ಸ್ವರ್ಗದಲ್ಲಿ ಸ್ನೇಹಿತರನ್ನ ಮಾಡ್ಕೊಳ್ಳಿ. ಆಗ ಈ ಸಂಪತ್ತು ಹೋದ್ರೂ ಆ ಸ್ನೇಹಿತರು ನಿಮ್ಮನ್ನ ಯಾವತ್ತೂ ನಾಶವಾಗದ ಮನೆಯೊಳಗೆ+ ಕರ್ಕೊಳ್ತಾರೆ. 10  ದೇವರ ಮುಂದೆ ಚಿಕ್ಕಚಿಕ್ಕ ವಿಷ್ಯಗಳಲ್ಲಿ ನಂಬಿಕೆ ಉಳಿಸ್ಕೊಳ್ಳುವವರು ದೊಡ್ಡದೊಡ್ಡ ವಿಷ್ಯಗಳಲ್ಲೂ ನಂಬಿಕೆ ಉಳಿಸ್ಕೊಳ್ತಾರೆ. ಚಿಕ್ಕಚಿಕ್ಕ ವಿಷ್ಯಗಳಲ್ಲಿ ನಂಬಿಕೆ ಕಳ್ಕೊಳ್ಳುವವರು ದೊಡ್ಡದೊಡ್ಡ ವಿಷ್ಯಗಳಲ್ಲೂ ನಂಬಿಕೆ ಕಳ್ಕೊತಾರೆ. 11  ಹಾಗಾಗಿ ಈ ಲೋಕದ ಕೆಟ್ಟ ಸಿರಿ-ಸಂಪತ್ತನ್ನ ಚೆನ್ನಾಗಿ ಉಪಯೋಗಿಸ್ಕೊಳ್ಳದೇ ಇದ್ರೆ ನಿಜವಾದ ಸಂಪತ್ತನ್ನ ಯಾರು ನಿಮ್ಮ ಕೈಗೆ ಒಪ್ಪಿಸ್ತಾರೆ? 12  ಇನ್ನೊಬ್ಬನ ಆಸ್ತಿ ವಿಷ್ಯದಲ್ಲಿ ನೀವು ನಂಬಿಗಸ್ತರಾಗಿ ಇರಲಿಲ್ಲಾಂದ್ರೆ ನಿಮಗಾಗಿ ಇಟ್ಟಿರೋ ಆಸ್ತಿಯನ್ನ ಯಾರು ತಾನೇ ಕೊಡ್ತಾರೆ?+ 13  ಯಾವ ಆಳಿಗೂ ಇಬ್ರು ಯಜಮಾನರ ಸೇವೆಮಾಡೋಕೆ ಆಗಲ್ಲ. ಅವನು ಒಬ್ಬ ಯಜಮಾನನನ್ನ ದ್ವೇಷಿಸ್ತಾನೆ, ಇನ್ನೊಬ್ಬನನ್ನ ಪ್ರೀತಿಸ್ತಾನೆ ಅಥವಾ ಒಬ್ಬ ಯಜಮಾನನ ಜೊತೆ ಇರ್ತಾನೆ, ಇನ್ನೊಬ್ಬನನ್ನ ಕೀಳಾಗಿ ನೋಡ್ತಾನೆ. ನೀವು ಒಂದೇ ಸಮಯದಲ್ಲಿ ದೇವರಿಗೂ ದುಡ್ಡಿಗೂ ದಾಸರಾಗಿ ಇರೋಕಾಗಲ್ಲ.”+ 14  ಈ ಎಲ್ಲ ವಿಷ್ಯಗಳನ್ನ ಫರಿಸಾಯರು ಕೇಳಿಸ್ಕೊಳ್ತಾ ಇದ್ರು. ಅವ್ರಿಗೆ ತುಂಬ ಹಣದಾಸೆ ಇತ್ತು. ಅವರು ಯೇಸುವನ್ನ ಗೇಲಿ ಮಾಡೋಕೆ ಶುರುಮಾಡಿದ್ರು.+ 15  ಅದಕ್ಕೆ ಯೇಸು ಹೀಗಂದನು “ನೀವು ಮನುಷ್ಯರ ಮುಂದೆ ನೀತಿವಂತರ ತರ ನಡ್ಕೊಳ್ತೀರ.+ ಆದ್ರೆ ನಿಮ್ಮ ಹೃದಯದಲ್ಲಿ ಏನಿದೆ ಅಂತ ದೇವರಿಗೆ ಗೊತ್ತು.+ ಯಾಕಂದ್ರೆ ಮನುಷ್ಯನಿಗೆ ಅದ್ಭುತ ಅಂತ ಅನಿಸೋದು ದೇವರಿಗೆ ಅಸಹ್ಯ.+ 16  ನಿಯಮ ಪುಸ್ತಕದಲ್ಲಿದ್ದ ಮತ್ತು ಪ್ರವಾದಿಗಳು ಬರೆದ ಮಾತುಗಳು ಯೋಹಾನ ಬರೋ ತನಕ ಇದ್ದವು. ಆಮೇಲಿಂದ ದೇವರ ಆಳ್ವಿಕೆಯ ಸಿಹಿಸುದ್ದಿಯನ್ನ ಸಾರಲಾಗುತ್ತಿದೆ. ಎಲ್ಲ ತರದ ಜನ ದೇವರ ಆಳ್ವಿಕೆಯಲ್ಲಿ ಇರೋಕೆ ಶತಪ್ರಯತ್ನ ಮಾಡ್ತಿದ್ದಾರೆ.+ 17  ಆಕಾಶ ಭೂಮಿ ನಾಶ ಆದ್ರೂ ನಿಯಮ ಪುಸ್ತಕದಲ್ಲಿರೋ ಯಾವ ಮಾತೂ ಸುಳ್ಳಾಗಲ್ಲ.+ 18  ಹೆಂಡತಿಗೆ ವಿಚ್ಛೇದನ ಕೊಟ್ಟು ಇನ್ನೊಬ್ಬಳನ್ನ ಮದುವೆ ಆಗುವವನು ವ್ಯಭಿಚಾರಿ ಆಗ್ತಾನೆ. ವಿಚ್ಛೇದನ ಆದ ಸ್ತ್ರೀಯನ್ನ ಮದುವೆ ಆಗುವವನು ವ್ಯಭಿಚಾರಿ ಆಗ್ತಾನೆ.+ 19  ಒಬ್ಬ ಶ್ರೀಮಂತ ಯಾವಾಗ್ಲೂ ನೇರಳೆ ಬಣ್ಣದ ದುಬಾರಿ ಬಟ್ಟೆ ಹಾಕೊಂಡು ಇರ್ತಿದ್ದ. ದಿನಾ ಐಶಾರಾಮಿ ಜೀವನ ಮಾಡ್ತಿದ್ದ. 20  ಜನ ಇವನ ಮನೆಬಾಗಿಲಿಗೆ ಲಾಜರ ಅನ್ನೋ ಒಬ್ಬ ಭಿಕ್ಷುಕನನ್ನ ತಂದುಬಿಡ್ತಾ ಇದ್ರು. ಆ ಭಿಕ್ಷುಕನ ಮೈತುಂಬಾ ಹುಣ್ಣಿತ್ತು. 21  ಅವನು ಆ ಶ್ರೀಮಂತನ ಮೇಜಿಂದ ಬೀಳೋ ರೊಟ್ಟಿ ತುಂಡುಗಳನ್ನ ತಿಂದು ಹೊಟ್ಟೆತುಂಬಿಸ್ಕೊಳ್ಳೋಕೆ ಕಾಯ್ತಾ ಇರ್ತಿದ್ದ. ನಾಯಿಗಳು ಅವನ ಮೈಮೇಲಿದ್ದ ಹುಣ್ಣುಗಳನ್ನ ನೆಕ್ತಿದ್ದವು. 22  ಸ್ವಲ್ಪ ಸಮಯ ಆದಮೇಲೆ ಆ ಭಿಕ್ಷುಕ ಸತ್ತುಹೋದ. ದೇವದೂತರು ಅವನನ್ನ ಅಬ್ರಹಾಮನ ಹತ್ರ ಕರ್ಕೊಂಡು ಬಂದ್ರು. ಆಮೇಲೆ ಆ ಶ್ರೀಮಂತನೂ ಸತ್ತುಹೋದ. ಅವನನ್ನ ಸಮಾಧಿ ಮಾಡಿದ್ರು. 23  ಸಮಾಧಿಯಲ್ಲಿ ಅವನು ನರಳ್ತಿದ್ದ. ಅಲ್ಲಿಂದ ಕಣ್ಣೆತ್ತಿ ನೋಡಿದಾಗ ದೂರದಲ್ಲಿ ಅಬ್ರಹಾಮನನ್ನ ನೋಡಿದ. ಅವನ ಹತ್ರ ಲಾಜರ ಇದ್ದ. 24  ಆಗ ಆ ಶ್ರೀಮಂತ ಕರೆದು ‘ತಂದೆ ಅಬ್ರಹಾಮಾ, ನನಗೆ ಕರುಣೆ ತೋರಿಸು. ನೀರಲ್ಲಿ ಬೆರಳ ತುದಿಯನ್ನ ಅದ್ದಿ ನನ್ನ ನಾಲಿಗೆಯನ್ನ ತಣ್ಣಗೆ ಮಾಡೋಕೆ ಲಾಜರನನ್ನ ಕಳಿಸು. ಯಾಕಂದ್ರೆ ಧಗಧಗ ಅಂತ ಉರಿಯೋ ಈ ಬೆಂಕಿಯಲ್ಲಿ ನಾನು ನರಳ್ತಾ ಇದ್ದೀನಿ’ ಅಂತ ಜೋರಾಗಿ ಕೂಗಿದ. 25  ಅದಕ್ಕೆ ಅಬ್ರಹಾಮ ‘ಕಂದಾ, ನೀನು ಬದುಕಿದ್ದಾಗ ಜೀವನಪೂರ್ತಿ ಒಳ್ಳೊಳ್ಳೇ ವಿಷ್ಯಗಳಿಂದ ಮಜಾ ಮಾಡಿದೆ. ಆದ್ರೆ ಲಾಜರ ಬರೀ ಕೆಟ್ಟ ವಿಷ್ಯಗಳನ್ನೇ ಅನುಭವಿಸಿದ್ದಾನೆ. ಈಗ ಅವನು ನೆಮ್ಮದಿಯಾಗಿ ಇದ್ದಾನೆ. ನೀನು ನರಳ್ತಾ ಇದ್ದೀಯ. 26  ಅಷ್ಟೇ ಅಲ್ಲ ಇಲ್ಲಿ ನಮ್ಮ-ನಿಮ್ಮ ಮಧ್ಯ ಒಂದು ದೊಡ್ಡ ಕಣಿವೆ ಇದೆ. ಹಾಗಾಗಿ ಯಾರಿಗೂ ಇಲ್ಲಿಂದ ಆ ಕಡೆ ಹೋಗೋಕೂ ಆಗಲ್ಲ. ಅಲ್ಲಿಂದ ಈ ಕಡೆ ಬರೋಕೂ ಆಗಲ್ಲ’ ಅಂದ. 27  ಆಗ ಆ ಶ್ರೀಮಂತ ‘ಹಾಗಾದ್ರೆ ತಂದೆ, ಲಾಜರನನ್ನ ನನ್ನ ಅಪ್ಪನ ಮನೆಗೆ ಕಳಿಸು ಅಂತ ಕೇಳ್ಕೊಳ್ತೀನಿ. 28  ಯಾಕಂದ್ರೆ ನನಗೆ ಐದು ಸಹೋದರರು ಇದ್ದಾರೆ. ಅವ್ರ ಹತ್ರ ಇವನು ಹೋಗಿ ಚೆನ್ನಾಗಿ ಅರ್ಥಮಾಡಿಸಲಿ. ನನ್ನ ತರ ಅವರೂ ಈ ಜಾಗಕ್ಕೆ ಬಂದು ನರಳೋದು ಬೇಡ’ ಅಂದ. 29  ಆದ್ರೆ ಅಬ್ರಹಾಮ ‘ಅವ್ರ ಹತ್ರ ಮೋಶೆ ಮತ್ತು ಪ್ರವಾದಿಗಳು ಬರೆದಿರೋ ಪುಸ್ತಕಗಳಿವೆ. ಅದ್ರಲ್ಲಿರೋ ಮಾತಿನ ಪ್ರಕಾರ ನಡೀಲಿ’ ಅಂದ.+ 30  ಅದಕ್ಕೆ ಆ ಶ್ರೀಮಂತ ‘ತಂದೆ ಅಬ್ರಹಾಮ, ಹಾಗಲ್ಲ. ಸತ್ತವರು ಯಾರಾದ್ರೂ ಅವ್ರ ಹತ್ರ ಹೋದ್ರೆ ಅವರು ಪಶ್ಚಾತ್ತಾಪಪಡ್ತಾರೆ’ ಅಂದ. 31  ಆದ್ರೆ ಅಬ್ರಹಾಮ ‘ಅವರು ಮೋಶೆ ಮತ್ತು ಪ್ರವಾದಿಗಳು ಬರೆದ ಪುಸ್ತಕದ ಮಾತುಗಳನ್ನೇ ಕೇಳದಿದ್ರೆ+ ಸತ್ತವರಲ್ಲಿ ಯಾರಾದ್ರೂ ಮತ್ತೆ ಬದುಕಿ ಬಂದು ಹೇಳಿದ್ರೂ ನಂಬಲ್ಲ’ ಅಂದ.”

ಪಾದಟಿಪ್ಪಣಿ

ಅಕ್ಷ. “‘100 ಬತ್‌.’ ಒಂದು ಬತ್‌ ಅಂದ್ರೆ 22 ಲೀಟರ್‌.” ಪರಿಶಿಷ್ಟ ಬಿ14 ನೋಡಿ.
ಅಕ್ಷ. “‘100 ಕೋರ್‌’. ಒಂದು ಕೋರ್‌ ಅಂದ್ರೆ ಸುಮಾರು 220 ಲೀಟರ್‌.” ಪರಿಶಿಷ್ಟ ಬಿ14 ನೋಡಿ.
ಅಕ್ಷ. “80 ಕೋರ್‌.”
ಪದವಿವರಣೆಯಲ್ಲಿ “ಲೋಕದ ವ್ಯವಸ್ಥೆ” ನೋಡಿ.
ಅಕ್ಷ. “ಬೆಳಕಿನ ಪುತ್ರರು.”