ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಂದು ಮತ್ತು ಇಂದು ಬೈಬಲ್‌ ಈ ವ್ಯಕ್ತಿಯನ್ನು ಬದಲಾಯಿಸಿದ ವಿಧ

ಅಂದು ಮತ್ತು ಇಂದು ಬೈಬಲ್‌ ಈ ವ್ಯಕ್ತಿಯನ್ನು ಬದಲಾಯಿಸಿದ ವಿಧ

“ದೇವರ ಸಮೀಪಕ್ಕೆ ಬನ್ನಿರಿ, ಆಗ ಆತನು ನಿಮ್ಮ ಸಮೀಪಕ್ಕೆ ಬರುವನು”

ಅಂದು ಮತ್ತು ಇಂದು ಬೈಬಲ್‌ ಈ ವ್ಯಕ್ತಿಯನ್ನು ಬದಲಾಯಿಸಿದ ವಿಧ

ರೋಲ್ಫ್‌ ಮಿಕಾಯೇಲ್‌ನ ಬದುಕಿನಲ್ಲಿ ಸಂಗೀತವೇ ಸರ್ವಸ್ವವಾಗಿತ್ತು. ಮಾದಕ ಪದಾರ್ಥವು ಅವನ ಗೀಳಾಗಿತ್ತು. ಅವನು ಯುವ ಪ್ರಾಯದಲ್ಲಿ ಜರ್ಮನಿಯಲ್ಲಿದ್ದಾಗ, ಅತಿಯಾಗಿ ಮದ್ಯವನ್ನು ಸೇವಿಸುತ್ತಿದ್ದನು ಮತ್ತು ಎಲ್‌ಎಸ್‌ಡಿ, ಕೊಕೇನ್‌, ಗಾಂಜ, ಹಾಗೂ ಮನಸ್ಸನ್ನು ಬಾಧಿಸುವ ಇತರ ಮಾದಕ ಪದಾರ್ಥಗಳನ್ನು ಯಾವುದೇ ಮಿತಿಯಿಲ್ಲದೆ ಉಪಯೋಗಿಸುತ್ತಿದ್ದನು.

ಆಫ್ರಿಕದ ಒಂದು ದೇಶಕ್ಕೆ ಮಾದಕ ಪದಾರ್ಥಗಳನ್ನು ಕಳ್ಳತನದಿಂದ ಸಾಗಿಸುತ್ತಿರುವಾಗ, ರೋಲ್ಫ್‌ ಮಿಕಾಯೇಲ್‌ ಬಂಧಿಸಲ್ಪಟ್ಟನು ಮತ್ತು 13 ತಿಂಗಳುಗಳನ್ನು ಸೆರೆಮನೆಯಲ್ಲಿ ಕಳೆದನು. ಆ ಸೆರೆವಾಸವು, ಜೀವನದ ನಿಜವಾದ ಉದ್ದೇಶದ ಕುರಿತು ಆಲೋಚಿಸುವಂತೆ ಅವನಿಗೆ ಸಮಯವನ್ನು ನೀಡಿತು.

ರೋಲ್ಫ್‌ ಮಿಕಾಯೇಲ್‌ ಮತ್ತು ಅವನ ಹೆಂಡತಿ ಉರ್‌ಸೂಲಾ, ಜೀವನದ ಅರ್ಥಕ್ಕಾಗಿ ಹುಡುಕಲು ಮತ್ತು ಸತ್ಯವನ್ನು ಅನ್ವೇಷಿಸಲು ಶತಪ್ರಯತ್ನಮಾಡಿದರು. ಕ್ರೈಸ್ತರೆನಿಸಿಕೊಳ್ಳುವಂಥ ಚರ್ಚ್‌ಗಳಲ್ಲಿ ಆದ ನಕಾರಾತ್ಮಕ ಅನುಭವಗಳ ಹೊರತಾಗಿಯೂ, ದೇವರನ್ನು ತಿಳಿಯಬೇಕೆಂಬ ಗಾಢವಾದ ಬಯಕೆಯು ಅವರಲ್ಲಿತ್ತು. ಅವರಿಗಿದ್ದ ಪ್ರಶ್ನೆಗಳಿಗೆ ವಿವಿಧ ಧಾರ್ಮಿಕ ಗುಂಪುಗಳಿಂದ ತೃಪ್ತಿಕರವಾದ ಉತ್ತರಗಳು ಸಿಗಲಿಲ್ಲ. ಅಷ್ಟುಮಾತ್ರವಲ್ಲದೆ, ಈ ಧರ್ಮಗಳು ಅವರು ತಮ್ಮ ಜೀವನವನ್ನು ಬದಲಾಯಿಸಿಕೊಳ್ಳಲು ಬೇಕಾಗಿರುವ ಪ್ರಭಾವಕಾರಿ ಪ್ರಚೋದನೆಯನ್ನೂ ನೀಡಲಿಲ್ಲ.

ಕ್ರಮೇಣ, ರೋಲ್ಫ್‌ ಮಿಕಾಯೇಲ್‌ ಮತ್ತು ಉರ್‌ಸೂಲಾಗೆ ಯೆಹೋವನ ಸಾಕ್ಷಿಗಳೊಂದಿಗೆ ಸಂಪರ್ಕವಾಯಿತು. ಬೈಬಲನ್ನು ಅಧ್ಯಯನ ಮಾಡಲು ಆರಂಭಿಸಿದ ನಂತರ ರೋಲ್ಫ್‌ ಮಿಕಾಯೇಲ್‌, “ದೇವರ ಸಮೀಪಕ್ಕೆ ಬನ್ನಿರಿ, ಆಗ ಆತನು ನಿಮ್ಮ ಸಮೀಪಕ್ಕೆ ಬರುವನು,” ಎಂಬ ಬೈಬಲಿನಲ್ಲಿ ಕಂಡುಬರುವ ಬುದ್ಧಿವಾದದಿಂದ ಗಾಢವಾಗಿ ಪ್ರಭಾವಿತನಾದನು. (ಯಾಕೋಬ 4:8) ‘ಮೋಸಕರವಾದ ದುರಾಶೆಗಳಿಂದ ಕೆಟ್ಟುಹೋಗುವಂಥ ಪೂರ್ವಸ್ವಭಾವವನ್ನು ತೆಗೆದುಹಾಕಿ, ದೇವರ ಹೋಲಿಕೆಯ ಮೇರೆಗೆ ಸತ್ಯಾನುಗುಣವಾದ ನೀತಿಯುಳ್ಳದ್ದಾಗಿಯೂ ದೇವಭಯವುಳ್ಳದ್ದಾಗಿಯೂ ಇರುವ ನೂತನಸ್ವಭಾವವನ್ನು ಧರಿಸಿಕೊಳ್ಳಲು’ ಅವನು ದೃಢನಿರ್ಣಯಮಾಡಿದನು.​—ಎಫೆಸ 4:22-24.

ರೋಲ್ಫ್‌ ಮಿಕಾಯೇಲ್‌, ಹೊಸ ವ್ಯಕ್ತಿತ್ವವನ್ನು ಧರಿಸಿಕೊಳ್ಳಲು ಹೇಗೆ ಸಾಧ್ಯವಾಯಿತು? “ನಿಷ್ಕೃಷ್ಟ ಜ್ಞಾನದ ಮೂಲಕ” ಒಬ್ಬನ ವ್ಯಕ್ತಿತ್ವವು “ಅದನ್ನು ಸೃಷ್ಟಿಸಿದಾತನ ಹೋಲಿಕೆಗೆ ಸರಿಯಾಗಿ ಹೊಸದು ಮಾಡಲ್ಪಡ”ಸಾಧ್ಯವಿದೆ ಎಂಬುದನ್ನು ಬೈಬಲಿನಿಂದ ಅವನಿಗೆ ತೊರಿಸಲಾಯಿತು.​—ಕೊಲೊಸ್ಸೆ 3:​9-11, NW.

ನಿಷ್ಕೃಷ್ಟ ಜ್ಞಾನವನ್ನು ಪಡೆದುಕೊಂಡಂತೆ, ರೋಲ್ಫ್‌ ಮಿಕಾಯೇಲ್‌ ದೇವರ ವಾಕ್ಯದ ಮೂಲತತ್ತ್ವಗಳಿಗೆ ಅನುಸಾರವಾಗಿ ತನ್ನ ಜೀವನವನ್ನು ಹೊಂದಿಸಿಕೊಂಡನು. (ಯೋಹಾನ 17:3) ಮಾದಕ ಪದಾರ್ಥಗಳ ಚಟದಿಂದ ಹೊರಬರುವುದು ಸುಲಭವಾಗಿರಲಿಲ್ಲ, ಆದರೂ ರೋಲ್ಫ್‌ ಮಿಕಾಯೇಲ್‌ ಯೆಹೋವನನ್ನು ಪ್ರಾರ್ಥನೆಯಲ್ಲಿ ಸಮೀಪಿಸುವ ಮೌಲ್ಯವನ್ನು ಕಂಡುಕೊಂಡನು ಮತ್ತು ಆತನ ಸಹಾಯವನ್ನು ಅನುಭವಿಸಿದನು. (1 ಯೋಹಾನ 5:​14, 15) ಅಷ್ಟುಮಾತ್ರವಲ್ಲದೆ, ಈಗಾಗಲೇ ಯೆಹೋವನ ಸಾಕ್ಷಿಗಳಾಗಿದ್ದು, ದೇವರ ಚಿತ್ತವನ್ನು ಮಾಡಲು ಪ್ರಯಾಸಪಡುತ್ತಿರುವವರೊಂದಿಗಿನ ನಿಕಟವಾದ ಸಹವಾಸದಿಂದ ಅವನಿಗೆ ಇನ್ನೂ ಹೆಚ್ಚಿನ ಸಹಾಯವು ದೊರಕಿತು.

ಲೋಕವು ಗತಿಸಿಹೋಗುತ್ತದೆ ಮತ್ತು ದೇವರ ಚಿತ್ತವನ್ನು ಮಾಡುವವರು ಎಂದೆಂದಿಗೂ ಇರುವರು ಎಂಬ ಜ್ಞಾನವು ಸಹ ರೋಲ್ಫ್‌ ಮಿಕಾಯೇಲ್‌ಗೆ ಸಹಾಯಮಾಡಿತು. ಇದು, ತಾತ್ಕಾಲಿಕವಾಗಿರುವ ಈ ಲೋಕದ ಮೇಲಣ ಪ್ರೀತಿಯನ್ನು ಆಯ್ಕೆಮಾಡದೆ, ಪ್ರೀತಿಯ ದೇವರಾದ ಯೆಹೋವನೊಂದಿಗಿನ ಆಪ್ತ ಸಂಬಂಧದಿಂದ ಸಿಗುವ ನಿತ್ಯ ಆಶೀರ್ವಾದವನ್ನು ಆಯ್ಕೆಮಾಡುವಂತೆ ಅವನಿಗೆ ನೆರವು ನೀಡಿತು. (1 ಯೋಹಾನ 2:​15-17) “ಮಗನೇ, ಜ್ಞಾನವನ್ನು ಪಡೆದುಕೊಂಡು ನನ್ನ ಮನಸ್ಸನ್ನು ಸಂತೋಷಪಡಿಸು; ಹಾಗಾದರೆ, ನನ್ನನ್ನು ದೂರುವವನಿಗೆ ನಾನು ಉತ್ತರ ಕೊಡಲಾಗುವದು” ಎಂಬ ಜ್ಞಾನೋಕ್ತಿ 27:11ರ ಮಾತುಗಳು ರೋಲ್ಫ್‌ ಮಿಕಾಯೇಲ್‌ನನ್ನು ಗಾಢವಾಗಿ ಪ್ರಭಾವಿಸಿದವು. ಅವನು ಆಳವಾದ ಗಣ್ಯತೆಯಿಂದ ತಿಳಿಸುವುದು: “ಈ ವಚನವು ದೇವರ ಪ್ರೀತಿಯ ಆಳವನ್ನು ತಿಳಿಸುತ್ತದೆ. ಏಕೆಂದರೆ, ಮಾನವರು ತನ್ನ ಹೃದಯವನ್ನು ಸಂತೋಷಗೊಳಿಸಲು ಆತನು ಸಂದರ್ಭವನ್ನು ನೀಡುತ್ತಾನೆ.”

ರೋಲ್ಫ್‌ ಮಿಕಾಯೇಲ್‌, ಅವನ ಪತ್ನಿ ಮತ್ತು ಅವರ ಮೂವರು ಮಕ್ಕಳಂತೆ, ಸಾವಿರಾರು ಕುಟುಂಬಗಳು ಬೈಬಲ್‌ ಮೂಲತತ್ತ್ವಗಳನ್ನು ಅನುಸರಿಸುವ ಮೂಲಕ ಪ್ರಯೋಜನವನ್ನು ಪಡೆದುಕೊಂಡಿವೆ. ಲೋಕವ್ಯಾಪಕವಾಗಿರುವ ಯೆಹೋವನ ಸಾಕ್ಷಿಗಳ ಸಭೆಗಳಲ್ಲಿ ಅಂಥ ವ್ಯಕ್ತಿಗಳನ್ನು ಕಂಡುಕೊಳ್ಳಸಾಧ್ಯವಿದೆ. ದುಃಖಕರವಾಗಿ, ಕೆಲವು ದೇಶಗಳಲ್ಲಿ ಯೆಹೋವನ ಸಾಕ್ಷಿಗಳು ಕುಟುಂಬಗಳನ್ನು ಒಡೆಯುವ ಭಯಾನಕ ಗುಂಪು ಎಂಬ ಸುಳ್ಳು ಆಪಾದನೆಯನ್ನು ಹೊರಿಸಲಾಗಿದೆ. ಆದರೆ ರೋಲ್ಫ್‌ ಮಿಕಾಯೇಲ್‌ನ ಅನುಭವವು ಇದು ಸುಳ್ಳು ಎಂಬುದನ್ನು ರುಜುಪಡಿಸುತ್ತದೆ.​—ಇಬ್ರಿಯ 4:12.

ಆತ್ಮಿಕ ವಿಷಯಗಳಿಗೆ ಆದ್ಯತೆ ನೀಡುವಂತೆ ಉತ್ತೇಜಿಸುವ ಮತ್ತಾಯ 6:​33ನೆಯ ವಚನವು ತಮ್ಮ ಕುಟುಂಬದ “ದಿಕ್ಸೂಚಿ”ಯಂತಿದ್ದು ತಮ್ಮನ್ನು ಸರಿಯಾದ ಕಡೆಗೆ ಮಾರ್ಗದರ್ಶಿಸುತ್ತಿದೆ ಎಂಬುದಾಗಿ ರೋಲ್ಫ್‌ ಮಿಕಾಯೇಲ್‌ ತಿಳಿಸುತ್ತಾರೆ. ಕ್ರೈಸ್ತರೋಪಾದಿ ಅವರು ಆನಂದಿಸುತ್ತಿರುವ ಸಂತೋಷಕರವಾದ ಕುಟುಂಬ ಜೀವನಕ್ಕಾಗಿ, ಅವರು ಮತ್ತು ಅವರ ಕುಟುಂಬವು ಯೆಹೋವನಿಗೆ ತುಂಬ ಆಭಾರಿಯಾಗಿದೆ. “ಯೆಹೋವನ ಮಹೋಪಕಾರಗಳಿಗೆ ಬದಲೇನು ಮಾಡಲಿ?” ಎಂಬ ಕೀರ್ತನೆಗಾರನ ಅನಿಸಿಕೆಯೊಂದಿಗೆ ಅವರೂ ಒಮ್ಮತದಿಂದಿದ್ದಾರೆ.​—ಕೀರ್ತನೆ 116:12.

[ಪುಟ 9ರಲ್ಲಿರುವ ಸಂಕ್ಷಿಪ್ತ ವಿವರಣೆ]

ದೇವರು ತನ್ನ ಹೃದಯವನ್ನು ಸಂತೋಷಪಡಿಸುವ ಸಂದರ್ಭವನ್ನು ಮಾನವರಿಗೆ ನೀಡುತ್ತಾನೆ

[ಪುಟ 9ರಲ್ಲಿರುವ ಚೌಕ]

ಕಾರ್ಯರೂಪದಲ್ಲಿರುವ ಬೈಬಲ್‌ ಮೂಲತತ್ತ್ವಗಳು

ಮರಣಕಾರಕ ವ್ಯಸನದಿಂದ ಹೊರಬರಲು ಅನೇಕರನ್ನು ಪ್ರಚೋದಿಸಿರುವ ಬೈಬಲ್‌ ಮೂಲತತ್ತ್ವಗಳಲ್ಲಿ ಇವು ಕೆಲವು:

“ಯೆಹೋವನನ್ನು ಪ್ರೀತಿಸುವವರೇ, ಕೆಟ್ಟತನವನ್ನು ಹಗೆಮಾಡಿರಿ.” (ಕೀರ್ತನೆ 97:10) ಮರಣಕಾರಕ ಹವ್ಯಾಸಗಳು ಎಷ್ಟು ಕೆಟ್ಟದ್ದಾಗಿವೆ ಎಂಬುದನ್ನು ಮನಗಂಡ ಬಳಿಕ ಮತ್ತು ಅವುಗಳ ಕಡೆಗೆ ನಿಜವಾದ ಹಗೆಯನ್ನು ಬೆಳೆಸಿಕೊಂಡ ಬಳಿಕ, ದೇವರು ಏನನ್ನು ಮೆಚ್ಚುತ್ತಾನೊ ಅದನ್ನು ಮಾಡಲು ಒಬ್ಬ ವ್ಯಕ್ತಿಗೆ ಸುಲಭವಾಗುತ್ತದೆ.

“ಜ್ಞಾನಿಗಳ ಸಹವಾಸಿ ಜ್ಞಾನಿಯಾಗುವನು; ಜ್ಞಾನಹೀನರ ಒಡನಾಡಿ ಸಂಕಟಪಡುವನು.” (ಜ್ಞಾನೋಕ್ತಿ 13:20) ಮಾದಕ ಪದಾರ್ಥಗಳನ್ನು ಮತ್ತು ಇತರ ವ್ಯಸನಕಾರಿ ಪದಾರ್ಥಗಳನ್ನು ತೊರೆಯಲು ಒಬ್ಬ ವ್ಯಕ್ತಿಯು ತನ್ನ ಸಹವಾಸಿಗಳನ್ನು ಜಾಗರೂಕತೆಯಿಂದ ಆಯ್ಕೆಮಾಡುವ ಅಗತ್ಯವಿದೆ. ಅವನ ತೀರ್ಮಾನವನ್ನು ಬೆಂಬಲಿಸುವ ಕ್ರೈಸ್ತರೊಂದಿಗೆ ಗೆಳೆತನವನ್ನು ಬೆಳೆಸಿಕೊಳ್ಳುವುದು ನಿಜವಾಗಿಯೂ ಪ್ರಯೋಜನಕಾರಿಯಾಗಿರುವುದು.

“ಯಾವ ಸಂಬಂಧವಾಗಿಯೂ ಚಿಂತೆಮಾಡದೆ ಸರ್ವವಿಷಯದಲ್ಲಿ ದೇವರ ಮುಂದೆ ಕೃತಜ್ಞತಾಸ್ತುತಿಯನ್ನೂ ಪ್ರಾರ್ಥನೆವಿಜ್ಞಾಪನೆಗಳನ್ನೂ ಮಾಡುತ್ತಾ ನಿಮಗೆ ಬೇಕಾದದ್ದನ್ನು ತಿಳಿಯಪಡಿಸಿರಿ. ಆಗ ಎಲ್ಲಾ ಗ್ರಹಿಕೆಯನ್ನು ಮೀರುವ ದೇವಶಾಂತಿಯು ನಿಮ್ಮ ಹೃದಯಗಳನ್ನೂ ಯೋಚನೆಗಳನ್ನೂ ಕ್ರಿಸ್ತ ಯೇಸುವಿನಲ್ಲಿ ಕಾಯುವದು.” (ಫಿಲಿಪ್ಪಿ 4:6, 7) ಹೃದಮನಗಳ ಅಂಥ ಶಾಂತಿಯು, ಬೇರೆ ಯಾವುದೇ ವಿಷಯಗಳಿಂದ ಬರಸಾಧ್ಯವಿಲ್ಲ. ಮತ್ತು ಒಬ್ಬನು ವ್ಯಸನಕಾರಿ ಮಾದಕ ಪದಾರ್ಥಗಳನ್ನು ಅವಲಂಬಿಸದೆ ಜೀವನದ ಸಮಸ್ಯೆಗಳನ್ನು ನಿಭಾಯಿಸಲು, ಪ್ರಾರ್ಥನಾಪೂರ್ವಕವಾಗಿ ದೇವರ ಮೇಲೆ ಆತುಕೊಳ್ಳುವಿಕೆಯು ಸಹಾಯಮಾಡುತ್ತದೆ.