ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

‘ಸ್ವತಃ ಜೀವವುಳ್ಳವನು’ ಎಂಬುದು ಏನನ್ನು ಅರ್ಥೈಸುತ್ತದೆ?

ಯೇಸು ಕ್ರಿಸ್ತನು ‘ಸ್ವತಃ ಜೀವವುಳ್ಳವನು’ ಮತ್ತು ಅವನ ಹಿಂಬಾಲಕರು ‘ಅವರೊಳಗೆ ಜೀವ’ವನ್ನು ಹೊಂದಿರುವವರು ಎಂಬುದಾಗಿ ಬೈಬಲ್‌ ತಿಳಿಸುತ್ತದೆ. (ಯೋಹಾನ 5:26; 6:53) ಹಾಗಿದ್ದರೂ, ಈ ಎರಡು ಶಾಸ್ತ್ರವಚನಗಳು ಒಂದೇ ಅರ್ಥವನ್ನು ಹೊಂದಿರುವುದಿಲ್ಲ.

ಯೇಸು ಹೇಳಿದ್ದು: “ತಂದೆಯು ತಾನು ಹೇಗೆ ಸ್ವತಃ ಜೀವವುಳ್ಳವನಾಗಿದ್ದಾನೋ ಹಾಗೆಯೇ ಮಗನೂ ಸ್ವತಃ ಜೀವವುಳ್ಳವನಾಗಿರುವಂತೆ ಮಾಡಿದನು.” ಈ ಹೇಳಿಕೆಯನ್ನು ನುಡಿಯುವ ಮುನ್ನ ಯೇಸು ಹೇಳಿದ್ದು: “ನಿಮಗೆ ನಿಜನಿಜವಾಗಿ ಹೇಳುತ್ತೇನೆ, ನನ್ನ ವಾಕ್ಯವನ್ನು ಕೇಳಿ ನನ್ನನ್ನು ಕಳುಹಿಸಿದಾತನನ್ನು ನಂಬುವವನು ನಿತ್ಯಜೀವವನ್ನು ಹೊಂದಿದ್ದಾನೆ. . . . ಸತ್ತವರು ದೇವಕುಮಾರನ ಧ್ವನಿಯನ್ನು ಕೇಳುವ ಕಾಲ ಬರುತ್ತದೆ, ಈಗಲೇ ಬಂದಿದೆ; ಕೇಳಿದವರು ಬದುಕುವರು.” ಇಲ್ಲಿ ಯೇಸು, ತಂದೆಯು ತನಗೆ ಕೊಟ್ಟಿರುವ ಅಸಾಮಾನ್ಯ ಶಕ್ತಿ, ಅಂದರೆ ಮನುಷ್ಯರಿಗೆ ದೇವರ ಮುಂದೆ ಉತ್ತಮ ನಿಲುವನ್ನು ಕೊಡುವಂಥ ಸಾಮರ್ಥ್ಯಕ್ಕೆ ಸೂಚಿಸಿ ಮಾತಾಡುತ್ತಾನೆ. ಅಷ್ಟುಮಾತ್ರವಲ್ಲದೆ, ಮರಣದಲ್ಲಿ ನಿದ್ರಿಸುತ್ತಿರುವವರನ್ನು ಪುನರುತ್ಥಾನಗೊಳಿಸಿ ಅವರಿಗೆ ಜೀವ ನೀಡಲೂ ಯೇಸು ಸಮರ್ಥನಾಗಿದ್ದಾನೆ. ಯೇಸು ‘ಸ್ವತಃ ಜೀವವುಳ್ಳವನಾಗಿರುವುದು’ ಎಂಬುದು, ಈ ಎಲ್ಲಾ ಶಕ್ತಿಗಳನ್ನು ಹೊಂದಿರುವ ಅರ್ಥದಲ್ಲಿಯೇ. ‘ಸ್ವತಃ ಜೀವವುಳ್ಳವನು’ ಎಂಬ ಪದಗಳನ್ನು ‘ಸ್ವತಃ ಜೀವದ ವರವುಳ್ಳವನು’ ಎಂಬುದಾಗಿಯೂ ಭಾಷಾಂತರಿಸಬಹುದು. ಆದುದರಿಂದ, ತಂದೆಯಂತೆ ಮಗನೂ ‘ಸ್ವತಃ ಜೀವದ ವರವುಳ್ಳವನಾಗಿದ್ದಾನೆ.’ (ಯೋಹಾನ 5:​24-26) ಅವನ ಹಿಂಬಾಲಕರ ಕುರಿತಾಗಿ ಏನು?

ಸುಮಾರು ಒಂದು ವರುಷದ ನಂತರ, ಯೇಸು ತನ್ನ ಕೇಳುಗರಿಗೆ ಈ ರೀತಿ ಹೇಳಿ ಸಂಬೋಧಿಸಿದನು: “ನಿಮಗೆ ನಿಜನಿಜವಾಗಿ ಹೇಳುತ್ತೇನೆ, ನೀವು ಮನುಷ್ಯಕುಮಾರನ ಮಾಂಸವನ್ನು ತಿನ್ನದೆ ಅವನ ರಕ್ತವನ್ನು ಕುಡಿಯದೆ ಹೋದರೆ ನಿಮ್ಮೊಳಗೆ ಜೀವವಿಲ್ಲ; ನನ್ನ ಮಾಂಸವನ್ನು ತಿಂದು ನನ್ನ ರಕ್ತವನ್ನು ಕುಡಿಯುವವನು ನಿತ್ಯಜೀವವನ್ನು ಹೊಂದಿದ್ದಾನೆ; ಮತ್ತು ನಾನು ಅವನನ್ನು ಕಡೇದಿನದಲ್ಲಿ ಎಬ್ಬಿಸುವೆನು.” (ಯೋಹಾನ 6:​53, 54) ಇಲ್ಲಿ ಯೇಸು, “ನಿಮ್ಮೊಳಗೆ ಜೀವ” ಹೊಂದುವುದನ್ನು, “ನಿತ್ಯಜೀವ”ವನ್ನು ಪಡೆಯುವುದರೊಂದಿಗೆ ಸಮಾನಗೊಳಿಸುತ್ತಾನೆ. “ನಿಮ್ಮೊಳಗೆ ಜೀವ” ಎಂಬ ಪದಗಳ ವ್ಯಾಕರಣ ರಚನೆಯಂಥ ಹೇಳಿಕೆಗಳು, ಗ್ರೀಕ್‌ ಶಾಸ್ತ್ರವಚನಗಳಲ್ಲಿ ಬೇರೆ ಕಡೆಗಳಲ್ಲೂ ಕಂಡುಬರುತ್ತವೆ. ಅದರ ಎರಡು ಉದಾಹರಣೆಗಳು, “ನಿಮ್ಮೊಳಗೆ ಉಪ್ಪು ಇರಲಿ” ಮತ್ತು “ತಕ್ಕ ಫಲವನ್ನು ತಮ್ಮಲ್ಲಿ ಹೊಂದುವವರಾದರು” ಎಂಬವೇ ಆಗಿವೆ. (ಮಾರ್ಕ 9:50; ರೋಮಾಪುರ 1:27) ಈ ಎರಡು ಸನ್ನಿವೇಶಗಳಲ್ಲಿ, ಆ ವಾಕ್ಸರಣಿಗಳು ಉಪ್ಪನ್ನು ಅಥವಾ ತಕ್ಕ ಫಲವನ್ನು ಇತರರಿಗೆ ಕೊಡುವ ಶಕ್ತಿಯನ್ನು ಸೂಚಿಸುವುದಿಲ್ಲ. ಬದಲಾಗಿ, ಅವು ಆಂತರಿಕ ಪೂರ್ಣತೆಯನ್ನು ಸೂಚಿಸುತ್ತವೆ. ಹೀಗಿರುವುದರಿಂದ, ಯೋಹಾನ 6:53ರಲ್ಲಿ ಉಪಯೋಗಿಸಲಾದ “ನಿಮ್ಮೊಳಗೆ ಜೀವ”ವಿರುವುದು ಎಂಬುದರ ಅರ್ಥವು, ಜೀವನದ ಪೂರ್ಣತೆಗೆ ಪ್ರವೇಶಿಸುವುದು ಎಂದಾಗಿದೆ.

ತನ್ನ ಹಿಂಬಾಲಕರು ಅವರೊಳಗೆ ಜೀವವನ್ನು ಹೊಂದಿರುವುದರ ಕುರಿತು ತಿಳಿಸುವಾಗ, ಯೇಸು ತನ್ನ ಮಾಂಸ ಮತ್ತು ರಕ್ತದ ಬಗ್ಗೆ ಉಲ್ಲೇಖಿಸಿದನು. ನಂತರ, ಕರ್ತನ ಸಂಧ್ಯಾ ಭೋಜನವನ್ನು ಸ್ಥಾಪಿಸುವಾಗ, ಯೇಸು ಇನ್ನೊಂದಾವರ್ತಿ ತನ್ನ ಮಾಂಸ ಮತ್ತು ರಕ್ತದ ಕುರಿತು ಮಾತನಾಡಿದನು ಹಾಗೂ ಹೊಸ ಒಡಂಬಡಿಕೆಯೊಳಗೆ ಬರುವ ತನ್ನ ಹಿಂಬಾಲಕರು ಕುರುಹುಗಳಲ್ಲಿ ಅಂದರೆ ಹುಳಿಯಿಲ್ಲದ ರೊಟ್ಟಿ ಮತ್ತು ದ್ರಾಕ್ಷಾರಸದಲ್ಲಿ ಪಾಲ್ಗೊಳ್ಳುವಂತೆ ನಿರ್ದೇಶಿಸಿದನು. ಇದು, ಯೆಹೋವ ದೇವರೊಂದಿಗೆ ಹೊಸ ಒಡಂಬಡಿಕೆಯಲ್ಲಿ ಸೇರಿರುವ ಅಭಿಷಿಕ್ತ ಕ್ರೈಸ್ತರು ಮಾತ್ರ ಅಂಥ ಜೀವದ ಪೂರ್ಣತೆಯನ್ನು ಪ್ರವೇಶಿಸುವರೆಂದು ಅರ್ಥೈಸುತ್ತದೋ? ಇಲ್ಲ. ಏಕೆಂದರೆ ಈ ಮಾತುಗಳು ನುಡಿಯಲ್ಪಟ್ಟಂಥ ಎರಡು ಸಂದರ್ಭಗಳ ಮಧ್ಯೆ ಒಂದು ವರುಷದ ಅಂತರವಿತ್ತು. ಯೋಹಾನ 6:​53, 54ರಲ್ಲಿ ದಾಖಲಿಸಲ್ಪಟ್ಟಿರುವ ಯೇಸುವಿನ ಮಾತುಗಳನ್ನು ಕೇಳಿಸಿಕೊಂಡ ಜನರಿಗೆ, ಕ್ರಿಸ್ತನ ಮಾಂಸ ಮತ್ತು ರಕ್ತವನ್ನು ಸೂಚಿಸುವ ಕುರುಹುಗಳ ವಾರ್ಷಿಕಾಚರಣೆಯ ಕುರಿತು ಯಾವುದೇ ಜ್ಞಾನವಿರಲಿಲ್ಲ.

ಯೋಹಾನ 6ನೆಯ ಅಧ್ಯಾಯಕ್ಕನುಸಾರ, ಯೇಸು ಮೊದಲಾಗಿ ತನ್ನ ಮಾಂಸವನ್ನು ಮನ್ನಕ್ಕೆ ಹೋಲಿಸಿದನು. ಅವನು ಹೇಳಿದ್ದು: “ನಿಮ್ಮ ಹಿರಿಯರು ಅಡವಿಯಲ್ಲಿ ಮನ್ನಾ ತಿಂದರೂ ಸತ್ತುಹೋದರು; ಪರಲೋಕದಿಂದ ಇಳಿದು ಬರುವ ರೊಟ್ಟಿ ಎಂಥದಂದರೆ ಅದನ್ನು ತಿಂದವನು ಸಾಯುವದಿಲ್ಲ. ಪರಲೋಕದಿಂದ ಇಳಿದುಬರುವ ಜೀವವುಳ್ಳ ರೊಟ್ಟಿಯು ನಾನೇ; ಈ ರೊಟ್ಟಿಯನ್ನು ಯಾವನಾದರೂ ತಿಂದರೆ ಅವನು ಸದಾಕಾಲ ಬದುಕುವನು.” ಯೇಸುವಿನ ರಕ್ತದೊಂದಿಗೆ, ಅವನ ಮಾಂಸವು ಅಕ್ಷರಾರ್ಥವಾದ ಮನ್ನಕ್ಕಿಂತಲೂ ಹೆಚ್ಚು ಶ್ರೇಷ್ಠವಾಗಿತ್ತು. ಹೇಗೆ? ಹೇಗೆಂದರೆ, ಅವನ ಮಾಂಸವು “ಲೋಕದ ಜೀವಕ್ಕೋಸ್ಕರ” ಕೊಡಲ್ಪಟ್ಟಿದ್ದು, ನಿತ್ಯಜೀವವನ್ನು ಸಾಧ್ಯಗೊಳಿಸುತ್ತದೆ. * ಆದುದರಿಂದ, ಯೋಹಾನ 6:53ರಲ್ಲಿರುವ “ನಿಮ್ಮೊಳಗೆ ಜೀವ”ವನ್ನು ಹೊಂದುವುದು ಎಂಬ ಹೇಳಿಕೆಯು, ಸ್ವರ್ಗದಲ್ಲಿಯಾಗಲಿ ಅಥವಾ ಭೂಮಿಯಲ್ಲಿಯಾಗಲಿ ನಿತ್ಯಜೀವವನ್ನು ಪಡೆಯುವ ಎಲ್ಲರಿಗೂ ಅನ್ವಯಿಸುತ್ತದೆ.​—ಯೋಹಾನ 6:​48-51.

ಕ್ರಿಸ್ತನ ಹಿಂಬಾಲಕರು ಯಾವಾಗ ತಮ್ಮೊಳಗೆ ಜೀವವನ್ನು ಪಡೆದುಕೊಳ್ಳುವರು ಅಥವಾ ಜೀವದ ಪೂರ್ಣತೆಯನ್ನು ಪ್ರವೇಶಿಸುವರು? ಅಭಿಷಿಕ್ತ ರಾಜ್ಯ ಬಾಧ್ಯಸ್ಥರ ವಿಷಯದಲ್ಲಿ, ಅವರು ಅಮರ ಆತ್ಮ ಜೀವಿಗಳಾಗಿ ಸ್ವರ್ಗೀಯ ಜೀವನಕ್ಕೆ ಪುನರುತ್ಥಾನಹೊಂದುವಾಗ ಇದು ಸಂಭವಿಸುತ್ತದೆ. (1 ಕೊರಿಂಥ 15:​52, 53; 1 ಯೋಹಾನ 3:2) ಯೇಸುವಿನ “ಬೇರೆ ಕುರಿಗಳು,” ಅವನ ಸಾವಿರ ವರುಷದ ಆಳ್ವಿಕೆಯ ಅಂತ್ಯದಲ್ಲಿ ಜೀವದ ಪೂರ್ಣತೆಯನ್ನು ಪ್ರವೇಶಿಸುವರು. ಆ ಸಮಯದೊಳಗಾಗಿ ಅವರು ಪರೀಕ್ಷಿಸಲ್ಪಟ್ಟು, ನಂಬಿಗಸ್ತರೆಂದು ಕಂಡುಕೊಳ್ಳಲ್ಪಟ್ಟಿರುವರು ಮತ್ತು ಪರದೈಸ ಭೂಮಿಯಲ್ಲಿ ನಿತ್ಯಜೀವವನ್ನು ಪಡೆಯಲು ನೀತಿವಂತರೆಂದು ನಿರ್ಣಯಿಸಲ್ಪಟ್ಟಿರುವರು.​—ಯೋಹಾನ 10:16; ಪ್ರಕಟನೆ 20:​5, 7-10.

[ಪಾದಟಿಪ್ಪಣಿ]

^ ಪ್ಯಾರ. 7 ಅರಣ್ಯದಲ್ಲಿ, ಇಸ್ರಾಯೇಲ್ಯರಿಗೂ ‘ಬಹು ಮಂದಿ ಅನ್ಯರಿಗೂ’ ಜೀವದಿಂದಿರಲು ಮನ್ನವು ಅಗತ್ಯವಾಗಿತ್ತು. (ವಿಮೋಚನಕಾಂಡ 12:​37, 38; 16:​13-18) ಅಂತೆಯೇ ಸದಾಕಾಲ ಜೀವಿಸಲಿಕ್ಕಾಗಿ, ಎಲ್ಲಾ ಕ್ರೈಸ್ತರು​—ಅಭಿಷಿಕ್ತರಾಗಿರಲಿ ಇಲ್ಲದಿರಲಿ​—ಯಜ್ಞವಾಗಿ ನೀಡಲ್ಪಟ್ಟಿರುವ ಯೇಸುವಿನ ಮಾಂಸ ಮತ್ತು ರಕ್ತದ ವಿಮೋಚನಾ ಶಕ್ತಿಯಲ್ಲಿ ನಂಬಿಕೆಯನ್ನು ಇಡುವ ಮೂಲಕ ಸ್ವರ್ಗೀಯ ಮನ್ನದ ಪ್ರಯೋಜನವನ್ನು ಸ್ವತಃ ಪಡೆದುಕೊಳ್ಳಬೇಕು.​—1988, ಫೆಬ್ರವರಿ 1ರ ಕಾವಲಿನಬುರುಜು (ಇಂಗ್ಲಿಷ್‌) ಪುಟ 30-1ನ್ನು ನೋಡಿರಿ.

[ಪುಟ 31ರಲ್ಲಿರುವ ಚಿತ್ರಗಳು]

ಎಲ್ಲಾ ಸತ್ಯ ಕ್ರೈಸ್ತರು ‘ತಮ್ಮೊಳಗೆ ಜೀವವನ್ನು ಹೊಂದಿರ’ ಸಾಧ್ಯವಿದೆ