ವಿಮೋಚನಕಾಂಡ 16:1-36

  • ಊಟಕ್ಕಾಗಿ ಜನ ಗೊಣಗಿದ್ರು (1-3)

  • ಗೊಣಗಿದ್ದನ್ನ ಯೆಹೋವ ಕೇಳಿಸ್ಕೊಂಡನು (4-12)

  • ಲಾವಕ್ಕಿ, ಮನ್ನ ಕೊಟ್ಟಿದ್ದು (13-21)

  • ಸಬ್ಬತ್‌ ದಿನ ಮನ್ನ ಇಲ್ಲ (22-30)

  • ನೆನಪಿಗಾಗಿ ಮನ್ನ ತೆಗೆದಿಟ್ಟಿದ್ದು (31-36)

16  ಎಲ್ಲಾ ಇಸ್ರಾಯೇಲ್ಯರು ಏಲೀಮಿಂದ ಪ್ರಯಾಣ ಮಾಡ್ತಾ ಏಲೀಮ್‌ ಮತ್ತು ಸಿನಾಯಿಗೆ ಮಧ್ಯ ಇರೋ ಸೀನ್‌+ ಅನ್ನೋ ಕಾಡಿಗೆ ಬಂದ್ರು. ಅವರು ಈಜಿಪ್ಟನ್ನ ಬಿಟ್ಟುಬಂದ ಮೇಲೆ ಎರಡನೇ ತಿಂಗಳಿನ 15ನೇ ದಿನ ಅಲ್ಲಿಗೆ ಬಂದ್ರು.  ಆಮೇಲೆ ಆ ಕಾಡಲ್ಲಿ ಇಸ್ರಾಯೇಲ್ಯರೆಲ್ಲ ಮೋಶೆ ಆರೋನರ ವಿರುದ್ಧ ಗೊಣಗೋಕೆ ಶುರುಮಾಡಿದ್ರು.+  ಇಸ್ರಾಯೇಲ್ಯರು ಅವರಿಗೆ “ಈಜಿಪ್ಟ್‌ ದೇಶದಲ್ಲಿ ನಮಗೆ ಹೊಟ್ಟೆ ತುಂಬ ಊಟ ಸಿಗ್ತಿತ್ತು, ಬೇಕಾದಷ್ಟು ಮಾಂಸ* ತಿಂತಿದ್ವಿ.+ ಅಲ್ಲಿದ್ದಾಗ್ಲೇ ನಾವು ಯೆಹೋವನ ಕೈಯಿಂದ ಸತ್ತಿದ್ರೆ ಎಷ್ಟೋ ಚೆನ್ನಾಗಿತ್ತು. ನಮ್ಮನ್ನೆಲ್ಲ ಹಸಿವೆಯಿಂದ ಸಾಯಿಸಬೇಕು ಅಂತಾನೇ ನೀವು ಇಲ್ಲಿಗೆ ಕರ್ಕೊಂಡು ಬಂದಿದ್ದೀರ”+ ಅಂತ ಮತ್ತೆಮತ್ತೆ ಹೇಳ್ತಿದ್ರು.  ಆಗ ಯೆಹೋವ ಮೋಶೆಗೆ “ನಾನು ನಿಮಗಾಗಿ ಆಕಾಶದಿಂದ ಆಹಾರ ಸುರಿಸ್ತೀನಿ.+ ನೀವೆಲ್ಲ ಪ್ರತಿದಿನ ಹೊರಗೆ ಹೋಗಿ ಆ ದಿನಕ್ಕೆ ಬೇಕಾದಷ್ಟು ಆಹಾರ ಕೂಡಿಸಿಕೊಳ್ಳಬೇಕು.+ ಹೀಗೆ ಅವರು ನನ್ನ ಮಾತು ಕೇಳ್ತಾರೋ ಇಲ್ವೋ ಅಂತ ನಾನು ಅವರನ್ನ ಪರೀಕ್ಷೆ ಮಾಡಿ ತಿಳ್ಕೊಳ್ತೀನಿ.+  ಆದ್ರೆ ಆರನೇ ದಿನ+ ಅವರು ಬೇರೆ ದಿನಕ್ಕಿಂತ ಎರಡು ಪಟ್ಟು ಜಾಸ್ತಿ ಆಹಾರ ಕೂಡಿಸಬೇಕು. ಆ ದಿನಾನೇ ಅಡುಗೆ ಮಾಡಿಟ್ಕೊಬೇಕು”+ ಅಂದನು.  ಹಾಗಾಗಿ ಮೋಶೆ ಆರೋನ ಎಲ್ಲ ಇಸ್ರಾಯೇಲ್ಯರಿಗೆ “ನಿಮ್ಮನ್ನ ಈಜಿಪ್ಟ್‌ ದೇಶದಿಂದ ಬಿಡಿಸ್ಕೊಂಡು ಬಂದಿದ್ದು ಯೆಹೋವನೇ ಅಂತ ಸಂಜೆ ನಿಮಗೆ ಖಂಡಿತ ಗೊತ್ತಾಗುತ್ತೆ.+  ನೀವು ಯಾರ ವಿರುದ್ಧ ಗೊಣಗ್ತಾ ಇದ್ದೀರ ಗೊತ್ತಾ? ಯೆಹೋವನ ವಿರುದ್ಧ. ಆತನಿಗೆ ನಿಮ್ಮ ಮಾತೆಲ್ಲ ಕೇಳಿದೆ. ಹಾಗಾಗಿ ಬೆಳಿಗ್ಗೆ ನೀವು ಯೆಹೋವನ ಶಕ್ತಿನ ನೋಡ್ತೀರ” ಅಂದ್ರು.  ಆಮೇಲೆ ಮೋಶೆ ಅವರಿಗೆ “ಸಂಜೆ ಯೆಹೋವ ನಿಮಗೆ ತಿನ್ನಕ್ಕೆ ಮಾಂಸ ಕೊಡ್ತಾನೆ, ಬೆಳಿಗ್ಗೆ ತೃಪ್ತಿಯಾಗುವಷ್ಟು ರೊಟ್ಟಿ ಕೊಡ್ತಾನೆ. ಆಗ ಯೆಹೋವನ ವಿರುದ್ಧ ನೀವು ಗೊಣಗಿದ ಮಾತುಗಳನ್ನ ಆತನು ಕೇಳಿಸ್ಕೊಂಡಿದ್ದಾನೆ ಅಂತ ನಿಮಗೆ ಗೊತ್ತಾಗುತ್ತೆ. ಯಾರ ವಿರುದ್ಧ ನೀವು ಗೊಣಗ್ತಾ ಇದ್ದೀರ ಗೊತ್ತಾ? ನಮ್ಮ ವಿರುದ್ಧ ಅಲ್ಲ, ಯೆಹೋವನ ವಿರುದ್ಧ”+ ಅಂದ.  ಆಮೇಲೆ ಮೋಶೆ ಆರೋನನಿಗೆ “ನೀನು ಇಸ್ರಾಯೇಲ್ಯರ ಹತ್ರ ಹೋಗಿ ಅವರು ಗೊಣಗೋದನ್ನ ಯೆಹೋವ ಕೇಳಿಸ್ಕೊಂಡಿದ್ದಾನೆ. ಹಾಗಾಗಿ ಅವರೆಲ್ಲ ಆತನ ಮುಂದೆ ಸೇರಿ ಬರಬೇಕು ಅಂತ ಹೇಳು”+ ಅಂದ. 10  ಆರೋನ ಹೋಗಿ ಅದನ್ನ ಎಲ್ಲ ಇಸ್ರಾಯೇಲ್ಯರಿಗೆ ಹೇಳಿದ. ತಕ್ಷಣ ಅವರೆಲ್ಲ ಹಿಂದೆ ತಿರುಗಿ ಕಾಡಿನ ಕಡೆ ನೋಡಿದಾಗ ಮೋಡದಲ್ಲಿ ಯೆಹೋವನ ಶಕ್ತಿ ಕಾಣಿಸ್ತು.+ 11  ಯೆಹೋವ ಮೋಶೆ ಜೊತೆ ಇನ್ನೂ ಮಾತಾಡ್ತಾ 12  “ಇಸ್ರಾಯೇಲ್ಯರು ಗೊಣಗಿದ್ದನ್ನ ನಾನು ಕೇಳಿಸ್ಕೊಂಡಿದ್ದೀನಿ.+ ಅದಕ್ಕೆ ನೀನು ಈ ಮಾತುಗಳನ್ನ ಅವರಿಗೆ ಹೇಳು: ಸೂರ್ಯ ಮುಳುಗಿದ ಮೇಲೆ* ನೀವು ಮಾಂಸ ತಿಂತೀರ, ಬೆಳಿಗ್ಗೆ ಹೊಟ್ಟೆ ತುಂಬ ರೊಟ್ಟಿ ತಿಂತೀರ.+ ಆಗ ನಾನೇ ನಿಮ್ಮ ದೇವರಾದ ಯೆಹೋವ ಅಂತ ನಿಮಗೆ ಗೊತ್ತಾಗುತ್ತೆ”+ ಅಂದನು. 13  ಆ ಸಂಜೆ ಲಾವಕ್ಕಿಗಳು ಹಾರಿ ಬಂದು ಪಾಳೆಯನ ಮುಚ್ಚಿಕೊಂಡ್ವು.+ ಬೆಳಿಗ್ಗೆ ಪಾಳೆಯದ ಸುತ್ತಮುತ್ತ ಇಬ್ಬನಿಯ ಪದರ ಇತ್ತು. 14  ಆ ಇಬ್ಬನಿಯ ಪದರ ಆವಿ ಆದಾಗ ಕಾಡಿನ ನೆಲದ ಮೇಲೆಲ್ಲ ಚಿಕ್ಕಚಿಕ್ಕ ಕಾಳುಗಳು ಹಿಮದ ತರ ಬಿದ್ದಿದ್ವು.+ 15  ಇಸ್ರಾಯೇಲ್ಯರು ಅದನ್ನ ನೋಡಿ ಅದು ಏನಂತ ಗೊತ್ತಾಗದೆ ಒಬ್ರಿಗೊಬ್ರು “ಇದೇನು?” ಅಂತ ಕೇಳಿದ್ರು. ಅದಕ್ಕೆ ಮೋಶೆ “ಇದು ಯೆಹೋವ ನಿಮಗೋಸ್ಕರ ಕೊಟ್ಟ ಆಹಾರ.+ 16  ಯೆಹೋವ ಈ ಆಜ್ಞೆ ಕೊಟ್ಟಿದ್ದಾನೆ: ‘ಇದನ್ನ ಪ್ರತಿಯೊಬ್ರು ತಮಗೆ ತಿನ್ನೋಕೆ ಆಗುವಷ್ಟು ಕೂಡಿಸ್ಕೊಬೇಕು. ಡೇರೆಯಲ್ಲಿ ಎಷ್ಟು ಜನ ಇದ್ದಾರೋ ಅಷ್ಟು ಜನ್ರಿಗೆ ಒಬ್ಬೊಬ್ರಿಗೆ ಒಂದೊಂದು ಓಮೆರ್‌ ಅಳತೆಯಷ್ಟು*+ ಆಹಾರ ಕೂಡಿಸ್ಕೊಬೇಕು’ ” ಅಂದ. 17  ಇಸ್ರಾಯೇಲ್ಯರು ಹಾಗೇ ಮಾಡಿದ್ರು. ಸ್ವಲ್ಪ ಜನ ಜಾಸ್ತಿ ಕೂಡಿಸ್ಕೊಂಡ್ರು, ಇನ್ನು ಸ್ವಲ್ಪ ಜನ ಕಮ್ಮಿ ಕೂಡಿಸ್ಕೊಂಡ್ರು. 18  ಅವರು ಕೂಡಿಸಿದ್ದನ್ನ ಓಮೆರಿಂದ ಅಳತೆಮಾಡಿ ನೋಡಿದಾಗ ಜಾಸ್ತಿ ಕೂಡಿಸಿಕೊಂಡವನಿಗೆ ಜಾಸ್ತಿ ಏನೂ ಉಳಿಲಿಲ್ಲ, ಕಮ್ಮಿ ಕೂಡಿಸಿಕೊಂಡವನಿಗೆ ಏನೂ ಕಮ್ಮಿ ಆಗಲಿಲ್ಲ.+ ಪ್ರತಿಯೊಬ್ಬ ತನಗೆ ತಿನ್ನೋಕೆ ಆಗುವಷ್ಟೇ ಕೂಡಿಸ್ಕೊಂಡಿದ್ದ. 19  ಆಮೇಲೆ ಮೋಶೆ “ಇದ್ರಲ್ಲಿ ಸ್ವಲ್ಪಾನೂ ನಾಳೆ ಬೆಳಿಗ್ಗೆ ತನಕ ಯಾರೂ ಇಟ್ಕೊಬಾರದು”+ ಅಂದ. 20  ಆದ್ರೆ ಸ್ವಲ್ಪ ಜನ ಮೋಶೆ ಮಾತನ್ನ ಕೇಳಲಿಲ್ಲ, ಮಾರನೇ ದಿನ ಬೆಳಿಗ್ಗೆಗೆ ಅಂತ ಸ್ವಲ್ಪ ಇಟ್ಕೊಂಡ್ರು. ಬೆಳಿಗ್ಗೆ ಅದು ಹುಳ ಹಿಡಿದು ವಾಸನೆ ಬರ್ತಿತ್ತು. ಅವರ ಮೇಲೆ ಮೋಶೆಗೆ ತುಂಬ ಕೋಪ ಬಂತು. 21  ಹೀಗೆ ಪ್ರತಿದಿನ ಬೆಳಿಗ್ಗೆ ಅವರು ಆಹಾರ ಕೂಡಿಸ್ಕೊಳ್ತಿದ್ರು. ಪ್ರತಿಯೊಬ್ಬನು ತನಗೆ ತಿನ್ನೋಕೆ ಆಗುವಷ್ಟೇ ಕೂಡಿಸಿಕೊಳ್ತಿದ್ದ. ಬಿಸಿಲು ಜಾಸ್ತಿ ಆದಾಗ ಅದು ಕರಗಿಹೋಗ್ತಿತ್ತು. 22  ಆರನೇ ದಿನ ಅವರು ಎರಡು ಪಟ್ಟು ಆಹಾರ ಅಂದ್ರೆ ಒಬ್ಬೊಬ್ಬನಿಗೆ ಎರಡೆರಡು ಓಮೆರ್‌ ಆಹಾರನ ಕೂಡಿಸ್ಕೊಂಡ್ರು.+ ಆಗ ಇಸ್ರಾಯೇಲ್ಯರ ಎಲ್ಲ ಪ್ರಧಾನರು ಬಂದು ಆ ವಿಷ್ಯನ ಮೋಶೆಗೆ ತಿಳಿಸಿದ್ರು. 23  ಅದಕ್ಕೆ ಅವನು “ಯೆಹೋವ ಹೇಳೋದು ಏನಂದ್ರೆ: ನಾಳೆ ಎಲ್ರೂ ಪೂರ್ತಿ ವಿಶ್ರಾಂತಿ ಪಡ್ಕೊಳ್ಳಬೇಕು.* ಯಾಕಂದ್ರೆ ನಾಳೆ ಪವಿತ್ರ ಸಬ್ಬತ್‌* ದಿನ.+ ಯೆಹೋವನಿಗೆ ಗೌರವ ಕೊಡೋಕೆ ನಾವು ಅದನ್ನ ಆಚರಿಸ್ತೀವಿ. ಆಹಾರ ಸಿದ್ಧಮಾಡಿ ಇಟ್ಕೊಳ್ಳಿ. ಯಾವುದನ್ನ ಸುಡಬೇಕು ಅಂತಿದ್ದಿರೋ ಅದನ್ನ ಸುಟ್ಟು ಇಟ್ಕೊಳ್ಳಿ. ಯಾವುದನ್ನ ಬೇಯಿಸಬೇಕು ಅಂತಿದ್ದಿರೋ ಅದನ್ನ ಬೇಯಿಸಿ ಇಟ್ಕೊಳ್ಳಿ.+ ಇವತ್ತು ಉಳಿದ ಆಹಾರನ ನಾಳೆಗೆ ಇಟ್ಕೊಳ್ಳಿ” ಅಂದ. 24  ಅದಕ್ಕೆ ಅವರು ಮೋಶೆ ಆಜ್ಞೆ ಕೊಟ್ಟ ಹಾಗೆ ಅದನ್ನ ನಾಳೆ ಬೆಳಿಗ್ಗೆಗೆ ಇಟ್ಕೊಂಡ್ರು. ಬೆಳಿಗ್ಗೆ ಅದು ವಾಸನೆ ಬರಲೂ ಇಲ್ಲ, ಹುಳ ಹಿಡಿಲೂ ಇಲ್ಲ. 25  ಮೋಶೆ ಅವರಿಗೆ “ಇವತ್ತು ಅದನ್ನ ತಿನ್ನಿ. ಯಾಕಂದ್ರೆ ಈ ದಿನ ಯೆಹೋವನಿಗೆ ಗೌರವ ಕೊಡೋಕೆ ಆಚರಿಸೋ ಸಬ್ಬತ್‌ ದಿನ. ಇವತ್ತು ನೆಲದ ಮೇಲೆ ಆಹಾರ ಬೀಳಲ್ಲ. 26  ನೀವು ಆರು ದಿನ ಅದನ್ನ ಕೂಡಿಸ್ಕೊಳ್ತೀರ. ಆದ್ರೆ ಏಳನೇ ದಿನ ಅಂದ್ರೆ ಸಬ್ಬತ್‌+ ದಿನ ನಿಮಗೆ ಅದು ಸಿಗಲ್ಲ” ಅಂದ. 27  ಹಾಗಿದ್ರೂ ಏಳನೇ ದಿನ ಸ್ವಲ್ಪ ಜನ ಆಹಾರ ಕೂಡಿಸ್ಕೊಳ್ಳೋಕೆ ಹೊರಗೆ ಹೋದ್ರು. ಆದ್ರೆ ಅವರಿಗೆ ಏನೂ ಸಿಗಲಿಲ್ಲ. 28  ಹಾಗಾಗಿ ಯೆಹೋವ ಮೋಶೆಗೆ “ಇನ್ನೂ ಎಷ್ಟು ದಿನ ಅಂತ ನೀವು ನನ್ನ ಆಜ್ಞೆಗಳನ್ನ, ನಿಯಮಗಳನ್ನ ಪಾಲಿಸದೆ ಇರ್ತಿರ?+ 29  ಯೆಹೋವ ಸಬ್ಬತ್ತನ್ನ ನಿಮಗಾಗಿ ಏರ್ಪಾಡು ಮಾಡಿದ್ದಾನೆ ಅನ್ನೋದನ್ನ ಮರಿಬೇಡಿ.+ ಹಾಗಾಗಿ ಆರನೇ ದಿನ ಆತನು ನಿಮಗೆ ಎರಡು ದಿನಕ್ಕೆ ಬೇಕಾಗುವಷ್ಟು ಆಹಾರ ಕೊಡ್ತಿದ್ದಾನೆ. ಏಳನೇ ದಿನ ಹೊರಗೆ ಎಲ್ಲೂ ಹೋಗಬಾರದು, ಎಲ್ರೂ ಅವರಿರೋ ಜಾಗದಲ್ಲೇ ಇರ್ಬೇಕು” ಅಂದನು. 30  ಹಾಗಾಗಿ ಜನ ಏಳನೇ ದಿನ ಸಬ್ಬತ್‌ ಆಚರಿಸಿದ್ರು.*+ 31  ಇಸ್ರಾಯೇಲ್ಯರು ಆ ಆಹಾರಕ್ಕೆ “ಮನ್ನ”* ಅಂತ ಹೆಸರಿಟ್ರು. ಅದು ಬೆಳ್ಳಗಿತ್ತು, ಕೊತ್ತಂಬರಿ ಬೀಜದ ತರ ಇತ್ತು. ಅದ್ರ ರುಚಿ ಜೇನುತುಪ್ಪ ಹಾಕಿದ ತೆಳ್ಳಗಿನ ರೊಟ್ಟಿ ತರ ಇತ್ತು.+ 32  ಆಮೇಲೆ ಮೋಶೆ “ಯೆಹೋವನ ಆಜ್ಞೆ ಏನಂದ್ರೆ ‘ನೀವು ಒಂದು ಓಮೆರ್‌ ಅಳತೆಯಷ್ಟು ಮನ್ನ ತೆಗೆದಿಡಿ. ನಾನು ಈಜಿಪ್ಟ್‌ ದೇಶದಿಂದ ನಿಮ್ಮನ್ನ ಬಿಡಿಸ್ಕೊಂಡು ಬರುವಾಗ ಕಾಡಲ್ಲಿ ತಿನ್ನೋಕೆ ನಿಮಗೆ ಕೊಟ್ಟ ಈ ಆಹಾರನ ನಿಮ್ಮ ಮುಂದಿನ ಪೀಳಿಗೆಯವರು ನೋಡ್ಲಿ’”+ ಅಂದನು. 33  ಹಾಗಾಗಿ ಮೋಶೆ ಆರೋನನಿಗೆ “ನೀನು ಒಂದು ಪಾತ್ರೆ ತಗೊಂಡು ಅದ್ರಲ್ಲಿ ಒಂದು ಓಮೆರ್‌ ಅಳತೆಯಷ್ಟು ಮನ್ನ ಹಾಕಿ ಯೆಹೋವನ ಮುಂದೆ ಇಡು. ಅದನ್ನ ಮುಂದಿನ ತಲೆಮಾರುಗಳ ತನಕ ಇಡಬೇಕು”+ ಅಂದ. 34  ಯೆಹೋವ ಮೋಶೆಗೆ ಆಜ್ಞೆ ಕೊಟ್ಟ ಹಾಗೇ ಆ ಆಹಾರನ ಸಂರಕ್ಷಿಸಿ ಇಡೋಕೆ ಆರೋನ ಅದನ್ನ ಸಾಕ್ಷಿ ಮಂಜೂಷದ*+ ಮುಂದೆ ಇಟ್ಟ. 35  ಇಸ್ರಾಯೇಲ್ಯರು 40 ವರ್ಷ ಅಂದ್ರೆ ಬೇರೆ ಜನ್ರಿದ್ದ ದೇಶಕ್ಕೆ+ ಬರೋ ತನಕ ಮನ್ನಾನೇ ತಿಂದ್ರು.+ ಕಾನಾನ್‌ ದೇಶದ ಗಡಿ ತಲಪೋ ತನಕ ಮನ್ನಾನೇ ಅವರಿಗೆ ಆಹಾರ ಆಗಿತ್ತು.+ 36  ಒಂದು ಓಮೆರ್‌ ಅಂದ್ರೆ ಏಫಾ ಅಳತೆಯ* ಹತ್ತನೇ ಒಂದು ಭಾಗ.

ಪಾದಟಿಪ್ಪಣಿ

ಅಕ್ಷ. “ಮಾಂಸದ ಪಾತ್ರೆ ಹತ್ರ ಕೂತು.”
ಅಕ್ಷ. “ಎರಡು ಸಂಜೆಗಳ ಮಧ್ಯ.” ಇದು, ಸೂರ್ಯ ಮುಳುಗಿದ ಮೇಲೆ, ಪೂರ್ತಿ ಕತ್ತಲಾಗೋ ಮುಂಚೆ ಇರಬೇಕು.
ಸುಮಾರು 2.2 ಲೀ. ಪರಿಶಿಷ್ಟ ಬಿ14 ನೋಡಿ.
ಅಥವಾ “ಪ್ರತಿಯೊಬ್ರು ಸಬ್ಬತ್‌ ಆಚರಿಸಬೇಕು.”
ಅಥವಾ “ವಿಶ್ರಾಂತಿ ಪಡ್ಕೊಂಡ್ರು.”
ಬಹುಶಃ “ಇದೇನು?” ಅನ್ನೋದಕ್ಕೆ ಹೀಬ್ರು ಭಾಷೆಯಲ್ಲಿರೋ ಪದ.
ಇದು, ಪ್ರಾಮುಖ್ಯ ದಾಖಲೆಗಳನ್ನ ಸುರಕ್ಷಿತವಾಗಿ ಇಡೋಕೆ ಬಳಸ್ತಿದ್ದ ಪೆಟ್ಟಿಗೆ.
ಒಂದು ಏಫಾ ಅಂದ್ರೆ 22 ಲೀ. ಪರಿಶಿಷ್ಟ ಬಿ14 ನೋಡಿ.