ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮಾರ್ಟಿನ್‌ ಲೂಥರ್‌ ಆ ಪುರುಷ ಮತ್ತು ಅವನು ಬಿಟ್ಟುಹೋದ ಆಸ್ತಿ

ಮಾರ್ಟಿನ್‌ ಲೂಥರ್‌ ಆ ಪುರುಷ ಮತ್ತು ಅವನು ಬಿಟ್ಟುಹೋದ ಆಸ್ತಿ

ಮಾರ್ಟಿನ್‌ ಲೂಥರ್‌ ಆ ಪುರುಷ ಮತ್ತು ಅವನು ಬಿಟ್ಟುಹೋದ ಆಸ್ತಿ

“ಮಾರ್ಟಿನ್‌ ಲೂಥರನ ಗುರುವಾಗಿದ್ದ ಯೇಸು ಕ್ರಿಸ್ತನನ್ನು ಬಿಟ್ಟರೆ, ಇತಿಹಾಸದಲ್ಲಿ ಬೇರಾವುದೇ ವ್ಯಕ್ತಿಗಿಂತಲೂ ಹೆಚ್ಚಾಗಿ [ಮಾರ್ಟಿನ್‌ ಲೂಥರ್‌]ನ ಬಗ್ಗೆ ಹೆಚ್ಚು ಪುಸ್ತಕಗಳು ಬರೆಯಲ್ಪಟ್ಟಿವೆ ಎಂದು ಹೇಳಲಾಗಿದೆ.” ಹೀಗೆಂದು ಟೈಮ್ಸ್‌ ಪತ್ರಿಕೆಯು ತಿಳಿಸಿತು. ಲೂಥರನ ಮಾತು ಹಾಗೂ ಕ್ರಿಯೆಗಳು, “ಮಾನವಕುಲದ ಇತಿಹಾಸದಲ್ಲಿಯೇ ಅತ್ಯಂತ ಗಮನಾರ್ಹವಾದ ಕ್ರಾಂತಿ” ಎಂದು ವರ್ಣಿಸಲಾಗಿರುವ ಧಾರ್ಮಿಕ ಚಳುವಳಿಯಾದ ‘ಮತಸುಧಾರಣೆ’ಯ ಜನನಕ್ಕೆ ನೆರವು ನೀಡಿದವು. ಈ ರೀತಿಯಲ್ಲಿ ಅವನು, ಯೂರೋಪಿನ ಧಾರ್ಮಿಕ ಸ್ಥಿತಿಯನ್ನು ಬದಲಾಯಿಸಲು ಮತ್ತು ಆ ಭೂಖಂಡದಲ್ಲಿ ಮಧ್ಯಯುಗಗಳಿಗೆ ಕೊನೆಯನ್ನು ತರಲು ಸಹಾಯಮಾಡಿದನು. ಲೂಥರನು, ಪ್ರಮಾಣಬದ್ಧವಾದ ಲಿಖಿತ ಜರ್ಮನ್‌ ಭಾಷೆಗೆ ಬುನಾದಿಯನ್ನೂ ಹಾಕಿದನು. ನಿಸ್ಸಂದೇಹವಾಗಿ, ಅವನ ಬೈಬಲ್‌ ಭಾಷಾಂತರವು ಜರ್ಮನ್‌ ಭಾಷೆಯಲ್ಲಿ ಅತಿ ಜನಪ್ರಿಯವಾಗಿದೆ.

ಮಾರ್ಟಿನ್‌ ಲೂಥರ್‌ ಯಾವ ರೀತಿಯ ವ್ಯಕ್ತಿಯಾಗಿದ್ದನು? ಅವನು ಹೇಗೆ ಯೂರೋಪಿಯನ್‌ ವ್ಯವಹಾರಗಳ ಮೇಲೆ ಅಷ್ಟೊಂದು ಪ್ರಭಾವವನ್ನು ಬೀರಶಕ್ತನಾದನು?

ಲೂಥರ್‌ ಒಬ್ಬ ವಿದ್ವಾಂಸನಾಗುತ್ತಾನೆ

ಇಸವಿ 1483ರ ನವೆಂಬರ್‌ ತಿಂಗಳಿನಂದು ಜರ್ಮನಿಯ ಐಸ್‌ಲೇಬೆನ್‌ ಎಂಬಲ್ಲಿ ಮಾರ್ಟಿನ್‌ ಲೂಥರ್‌ ಜನಿಸಿದನು. ಅವನ ತಂದೆ ತಾಮ್ರದ ಗಣಿ ಕೆಲಸಗಾರನಾಗಿದ್ದರೂ, ಮಾರ್ಟಿನ್‌ಗೆ ಉತ್ತಮ ವಿದ್ಯಾಭ್ಯಾಸವನ್ನು ನೀಡಲು ಸಾಕಾಗುವಷ್ಟು ಹಣವನ್ನು ಸಂಪಾದಿಸಿದನು. 1501ರಲ್ಲಿ ಮಾರ್ಟಿನನು, ಇರ್‌ಫರ್ಟ್‌ ವಿಶ್ವವಿದ್ಯಾನಿಲಯದ ಒಬ್ಬ ವಿದ್ಯಾರ್ಥಿಯಾದನು. ಅವನು ಮೊದಲ ಬಾರಿಗೆ ಬೈಬಲನ್ನು ಓದಿದ್ದು ಅಲ್ಲಿನ ಲೈಬ್ರರಿಯಲ್ಲಿಯೇ. “ಆ ಪುಸ್ತಕವು ನನ್ನನ್ನು ಬಹಳಷ್ಟು ಸಂತೋಷಗೊಳಿಸಿತು. ಒಂದು ದಿನ ನಾನೂ ಅಂಥ ಒಂದು ಪುಸ್ತಕದ ಸ್ವಂತ ಪ್ರತಿಯನ್ನು ಹೊಂದಲು ಅರ್ಹನಾಗುವಂತೆ ನಿರೀಕ್ಷಿಸಿದೆ,” ಎಂಬುದಾಗಿ ಅವನು ತಿಳಿಸಿದನು.

ಲೂಥರ್‌ 22 ವರುಷ ಪ್ರಾಯದವನಾಗಿದ್ದಾಗ, ಇರ್‌ಫರ್ಟ್‌ನಲ್ಲಿನ ಆಗಸ್ಟೀನ್‌ ಸನ್ಯಾಸಿ ಗ್ರಹಕ್ಕೆ ಸೇರಿದನು. ನಂತರ ಅವನು ವಿಟೆನ್‌ಬರ್ಗ್‌ನ ವಿಶ್ವವಿದ್ಯಾನಿಲಯಕ್ಕೆ ಸೇರಿ, ದೇವತಾಶಾಸ್ತ್ರದಲ್ಲಿ ಡಾಕ್ಟರೇಟ್‌ ಪದವಿಯನ್ನು ಪಡೆದುಕೊಂಡನು. ತಾನು ದೇವರ ಅನುಗ್ರಹವನ್ನು ಪಡೆಯಲು ಅಯೋಗ್ಯನಾಗಿದ್ದೇನೆಂದು ಲೂಥರನು ಪರಿಗಣಿಸಿದನು ಮತ್ತು ಕೆಲವೊಮ್ಮೆ ಅಪರಾಧಿ ಮನಸ್ಸಾಕ್ಷಿಯಿಂದಾಗಿ ತೀರ ಖಿನ್ನನಾಗುತ್ತಿದ್ದನು. ಆದರೆ, ಬೈಬಲಿನ ಅಧ್ಯಯನ, ಪ್ರಾರ್ಥನೆ ಮತ್ತು ಮನನವು, ದೇವರು ಪಾಪಿಗಳನ್ನು ಹೇಗೆ ವೀಕ್ಷಿಸುತ್ತಾನೆಂಬುದರ ಬಗ್ಗೆ ಹೆಚ್ಚು ಉತ್ತಮವಾಗಿ ಅರ್ಥಮಾಡಿಕೊಳ್ಳಲು ಅವನಿಗೆ ಸಹಾಯಮಾಡಿತು. ದೇವರ ಅನುಗ್ರಹವನ್ನು ಸಂಪಾದಿಸಿಕೊಳ್ಳಲು ಸಾಧ್ಯವಿಲ್ಲ, ಬದಲಾಗಿ ನಂಬಿಕೆಯನ್ನು ಪ್ರದರ್ಶಿಸುವವರಿಗೆ ಅದನ್ನು ಉಚಿತಾರ್ಥವಾದ ಕೃಪೆಯಿಂದ ಕೊಡಲಾಗುವುದು ಎಂಬುದನ್ನು ಲೂಥರ್‌ ಗ್ರಹಿಸಿದನು.​—ರೋಮಾಪುರ 1:16; 3:​23, 24, 28.

ತನ್ನ ಈ ಹೊಸ ತಿಳಿವಳಿಕೆಯು ಸರಿಯಾಗಿದೆ ಎಂಬ ತೀರ್ಮಾನಕ್ಕೆ ಲೂಥರ್‌ ಹೇಗೆ ತಲಪಿದನು? ಆದಿ ಚರ್ಚ್‌ ಇತಿಹಾಸ ಮತ್ತು ಹೊಸ ಒಡಂಬಡಿಕೆಯ ಮೂಲಪಾಠದ ಸಂಶೋಧನೆಯ ಪ್ರೊಫೆಸರರಾದ ಕರ್ಟ್‌ ಆ್ಯಲ್ಯಂಟ್‌ ಎಂಬವರು ಬರೆದದ್ದು: “ತಾನು ಹೊಸದಾಗಿ ಕಂಡುಕೊಂಡ ಈ ಜ್ಞಾನವು ಬೈಬಲಿನ ಇತರ ಹೇಳಿಕೆಗಳೊಂದಿಗೆ ಹೊಂದಿಕೆಯಲ್ಲಿದೆಯೋ ಎಂಬುದನ್ನು ಖಚಿತಪಡಿಸಿಕೊಳ್ಳಲು, ಅವನು ಇಡೀ ಬೈಬಲನ್ನು ಮನನ ಮಾಡಿದನು, ಮತ್ತು ಎಲ್ಲಾ ಕಡೆಗಳಲ್ಲಿಯೂ ಈ ವಿಷಯದಲ್ಲಿ ಅವನು ಸಮರ್ಥಿಸಲ್ಪಟ್ಟಿರುವುದನ್ನು ಕಂಡುಕೊಂಡನು.” ರಕ್ಷಣೆಯ ಸಿದ್ಧಾಂತ, ಅಂದರೆ ರಕ್ಷಣೆಯು ನಮ್ಮ ಕ್ರಿಯೆಗಳಿಂದಾಗಲಿ ಅಥವಾ ದೇಹದಂಡನೆಯಿಂದಾಗಲಿ ಅಲ್ಲ ಬದಲಾಗಿ ನಂಬಿಕೆಯಿಂದಲೇ ಸಾಧ್ಯ ಎಂಬ ಸಿದ್ಧಾಂತವು, ಲೂಥರ್‌ನ ಬೋಧನೆಗಳ ಪ್ರಮುಖ ಸ್ತಂಭವಾಗಿ ಉಳಿಯಿತು.

ಶೇಷಪಾಪಕ್ಷಮೆಯ ಕುರಿತು ಕ್ರೋಧ

ದೇವರು ಪಾಪಿಗಳನ್ನು ಹೇಗೆ ವೀಕ್ಷಿಸುತ್ತಾನೆಂಬ ಲೂಥರ್‌ನ ತಿಳಿವಳಿಕೆಯು ಅವನನ್ನು ರೋಮನ್‌ ಕ್ಯಾಥೊಲಿಕ್‌ ಚರ್ಚ್‌ನೊಂದಿಗೆ ತಿಕ್ಕಾಟಕ್ಕೆ ಗುರಿಮಾಡಿತು. ಏಕೆಂದರೆ, ಮರಣದ ನಂತರ ಒಂದು ನಿರ್ದಿಷ್ಟ ಸಮಯಾವಧಿಯ ವರೆಗೆ ಪಾಪಿಗಳು ಶಿಕ್ಷೆಯನ್ನು ಅನುಭವಿಸಬೇಕೆಂಬ ನಂಬಿಕೆಯು ಆಗ ವ್ಯಾಪಕವಾಗಿತ್ತು. ಹಾಗಿದ್ದರೂ, ಹಣಕ್ಕೆ ಬದಲಿಯಾಗಿ ಪಡೆದುಕೊಳ್ಳುವ, ಪೋಪರ ಅಧಿಕಾರದಿಂದ ದಯಪಾಲಿಸಲಾಗಿರುವ ಶೇಷಪಾಪಕ್ಷಮೆಯ ಮೂಲಕ ಆ ಸಮಯಾವಧಿಯನ್ನು ಕಡಿಮೆಗೊಳಿಸಸಾಧ್ಯವಿದೆ ಎಂದು ಹೇಳಲಾಗುತ್ತಿತ್ತು. ಮೈನ್ಸ್‌ನ ಆರ್ಚ್‌ಬಿಷಪನಾದ ಆಲ್ಬರ್ಟ್‌ಗೆ ಪ್ರತಿನಿಧಿಯಾಗಿ ಕೆಲಸಮಾಡುತ್ತಿದ್ದ ಯೋಹಾನ್‌ ಟೆಟ್‌ಸೆಲ್‌ನಂಥ ವ್ಯಾಪಾರಿಗಳು, ಸಾಮಾನ್ಯ ಜನರಿಗೆ ಶೇಷಪಾಪಕ್ಷಮೆಯನ್ನು ಮಾರಾಟಮಾಡುವ ಲಾಭದಾಯಕ ವ್ಯಾಪಾರವನ್ನು ನಡಿಸುತ್ತಿದ್ದರು. ಅನೇಕರು ಶೇಷಪಾಪಕ್ಷಮೆಯನ್ನು, ತಾವು ಭವಿಷ್ಯತ್ತಿನಲ್ಲಿ ಮಾಡಲಿರುವ ಪಾಪಗಳಿಗಾಗಿರುವ ಒಂದು ವಿಮೆಯಂತೆ ವೀಕ್ಷಿಸುತ್ತಿದ್ದರು.

ಶೇಷಪಾಪಕ್ಷಮೆಗಳ ಮಾರಾಟದ ವಿರುದ್ಧ ಲೂಥರ್‌ ಅತಿ ಕ್ರೋಧಿತನಾಗಿದ್ದನು. ಮಾನವರು ದೇವರೊಂದಿಗೆ ಚೌಕಾಸಿ ಮಾಡಸಾಧ್ಯವಿಲ್ಲ ಎಂಬುದು ಅವನಿಗೆ ತಿಳಿದಿತ್ತು. 1517ರ ಶರತ್ಕಾಲದಲ್ಲಿ ಅವನು ಆರ್ಥಿಕ, ತಾತ್ವಿಕ, ಮತ್ತು ಧಾರ್ಮಿಕ ದುರಾಚಾರಕ್ಕಾಗಿ ಚರ್ಚ್‌ ಅನ್ನು ಆರೋಪಿಸುತ್ತಾ, ತನ್ನ ಪ್ರಖ್ಯಾತವಾದ ‘95 ವಾದವಿಷಯಗಳನ್ನು’ ಬರೆದನು. ದಂಗೆಯನ್ನಲ್ಲ ಬದಲಾಗಿ ಸುಧಾರಣೆಯನ್ನು ಉತ್ತೇಜಿಸಲು ಬಯಸಿದ ಲೂಥರ್‌, ತನ್ನ ಈ ವಾದವಿಷಯಗಳ ಪ್ರತಿಗಳನ್ನು ಮೈನ್ಸ್‌ನ ಆರ್ಚ್‌ಬಿಷಪನಾದ ಆಲ್ಬರ್ಟ್‌ಗೆ ಮತ್ತು ಅನೇಕ ವಿದ್ವಾಂಸರಿಗೆ ಕಳುಹಿಸಿದನು. ಅನೇಕ ಇತಿಹಾಸಗಾರರು, ಇಸವಿ 1517ನ್ನು ಅಥವಾ ಅದರ ಆಸುಪಾಸಿನ ಸಮಯವನ್ನು ‘ಮತಸುಧಾರಣೆಯು’ ಆರಂಭಗೊಂಡ ಕಾಲ ಎಂಬುದಾಗಿ ಗುರುತಿಸುತ್ತಾರೆ.

ಚರ್ಚಿನ ತಪ್ಪು ಕೃತ್ಯಗಳ ಬಗ್ಗೆ ಪ್ರಲಾಪಿಸುವುದರಲ್ಲಿ ಲೂಥರ್‌ ಕೇವಲ ಒಬ್ಬಂಟಿಗನಾಗಿರಲಿಲ್ಲ. ನೂರು ವರುಷಗಳಿಗಿಂತಲೂ ಹಿಂದೆ, ಚೆಕ್‌ ಧಾರ್ಮಿಕ ಸುಧಾರಣೆಗಾರನಾದ ಯಾನ್‌ ಹಸ್‌ ಶೇಷಪಾಪಕ್ಷಮೆಯ ಮಾರಾಟವನ್ನು ಖಂಡಿಸಿದ್ದನು. ಹಸ್‌ಗಿಂತಲೂ ಮುಂಚೆ ಇಂಗ್ಲೆಂಡಿನ ಜಾನ್‌ ವಿಕ್ಲಿಫ್‌ನು, ಚರ್ಚಿನಲ್ಲಿ ಆಚರಿಸಲಾಗುವ ಕೆಲವು ಸಂಪ್ರದಾಯಗಳು ಅಶಾಸ್ತ್ರೀಯವಾಗಿವೆಯೆಂದು ಒತ್ತಿಹೇಳಿದನು. ಲೂಥರ್‌ನ ಸಮಕಾಲೀನರಾದ ರಾಟರ್‌ಡ್ಯಾಮ್‌ನ ಇರಾಸ್ಮಸ್‌ ಮತ್ತು ಇಂಗ್ಲೆಂಡಿನ ಟಿಂಡಲ್‌ ಸಹ ಸುಧಾರಣೆಯನ್ನು ಪ್ರಚೋದಿಸಿದರು. ಆದರೆ ಜರ್ಮನಿಯಲ್ಲಿ ಯೋಹಾನಸ್‌ ಗೂಟನ್‌ಬರ್ಗ್‌ರಿಂದ ತಯಾರಿಸಲ್ಪಟ್ಟ ಚಲಿಸುವ ಅಚ್ಚುಮೊಳೆಗಳಿರುವ ಮುದ್ರಣಯಂತ್ರದ ಸಹಾಯದಿಂದ, ಇತರ ಸುಧಾರಣಾಕಾರರಿಗಿಂತ ಲೂಥರ್‌ನ ಸ್ವರವು ಗಟ್ಟಿಯಾಗಿಯೂ ಬಹು ದೂರದವರೆಗೂ ಕೇಳಿಸಿತು.

ಗೂಟನ್‌ಬರ್ಗ್‌ರವರ ಮುದ್ರಣಯಂತ್ರವು ಇಸವಿ 1455ರಲ್ಲಿ ಮೈನ್ಸ್‌ನಲ್ಲಿ ಕಾರ್ಯನಡಿಸುತ್ತಿತ್ತು. 1500ಗಳ ಆರಂಭದಲ್ಲಿ, ಜರ್ಮನಿಯ 60 ಪಟ್ಟಣಗಳಲ್ಲಿ ಮತ್ತು ಇತರ 12 ಯೂರೋಪಿಯನ್‌ ದೇಶಗಳಲ್ಲಿ ಆ ಮುದ್ರಣಯಂತ್ರಗಳು ಕಾರ್ಯನಡಿಸುತ್ತಿದ್ದವು. ಇತಿಹಾಸದಲ್ಲಿಯೇ ಪ್ರಪ್ರಥಮ ಬಾರಿ, ಸಾರ್ವಜನಿಕರಿಗೆ ಸಂಬಂಧಪಟ್ಟ ವಿಷಯಗಳನ್ನು ಅವರ ಗಮನಕ್ಕೆ ಬಹು ತ್ವರಿತವಾಗಿ ತರಸಾಧ್ಯವಾಯಿತು. ಪ್ರಾಯಶಃ ಲೂಥರ್‌ನ ಒಪ್ಪಿಗೆಯಿಲ್ಲದೆಯೇ ಅವನ 95 ವಾದವಿಷಯಗಳನ್ನು ಮುದ್ರಿಸಿ, ವಿತರಿಸಲಾಯಿತು. ಆ ಸಮಯದಂದಿನಿಂದ, ಚರ್ಚ್‌ ಸುಧಾರಣೆಯ ವಿವಾದವು ಒಂದು ಸ್ಥಳಿಕ ವಿವಾದವಾಗಿ ಉಳಿಯಲಿಲ್ಲ. ಅದು ವ್ಯಾಪಕವಾಗಿ ಹಬ್ಬಿದ ಒಂದು ವಾಗ್ವಾದವಾಯಿತು ಮತ್ತು ಇದ್ದಕ್ಕಿದ್ದಂತೆ ಮಾರ್ಟಿನ್‌ ಲೂಥರನು ಜರ್ಮನಿಯಲ್ಲಿ ಅತಿ ಹೆಸರುವಾಸಿಯಾದ ವ್ಯಕ್ತಿಯಾದನು.

“ಸೂರ್ಯ ಮತ್ತು ಚಂದ್ರ”ನ ಪ್ರತಿಕ್ರಿಯೆ

ಅನೇಕ ಶತಮಾನಗಳಿಂದ, ಯೂರೋಪ್‌ ಎರಡು ಶಕ್ತಿಶಾಲಿ ಸಂಘಟನೆಗಳ ಅಧಿಕಾರದ ಕೆಳಗಿತ್ತು. ಅವು, ಪವಿತ್ರ ರೋಮನ್‌ ಸಾಮ್ರಾಜ್ಯ ಮತ್ತು ರೋಮನ್‌ ಕ್ಯಾಥೊಲಿಕ್‌ ಚರ್ಚ್‌ ಆಗಿದ್ದವು. “ಸಾಮ್ರಾಟನು ಮತ್ತು ಪೋಪ್‌, ಸೂರ್ಯ ಚಂದ್ರರಂತೆ ಅನ್ಯೋನ್ಯರಾಗಿದ್ದರು” ಎಂಬುದಾಗಿ ಲೂಥರನ್‌ ವರ್ಲ್ಡ್‌ ಫೆಡರೇಷನ್‌ನ ಮಾಜಿ ಅಧ್ಯಕ್ಷ ಹ್ಯಾನ್ಸ್‌ ಲೀಲ್‌ಯೆ ಎಂಬವರು ವಿವರಿಸಿದರು. ಹಾಗಿದ್ದರೂ, ಇವರಲ್ಲಿ ಸೂರ್ಯನು ಯಾರು ಮತ್ತು ಚಂದ್ರನು ಯಾರು ಎಂಬುದರ ಬಗ್ಗೆ ಬಹಳಷ್ಟು ಅನಿಶ್ಚಿತತೆಯಿತ್ತು. 16ನೆಯ ಶತಮಾನದ ಆರಂಭದಲ್ಲಿ, ಈ ಎರಡೂ ಸಂಘಟನೆಗಳು ತಮ್ಮ ಅಧಿಕಾರದ ಶಿಖರವನ್ನು ದಾಟಿದ್ದವು. ಒಂದು ಬದಲಾವಣೆಯು ಬೇಗನೆ ಸಂಭವಿಸಲಿತ್ತು.

ಆ 95 ವಾದವಿಷಯಗಳನ್ನು Xನೆಯ ಪೋಪ್‌ ಲೀಯೊ ನೋಡಿ, ಲೂಥರ್‌ ಬಹಿರಂಗವಾಗಿ ತಪ್ಪೊಪ್ಪಿಕೊಳ್ಳದಿದ್ದರೆ ಅವನನ್ನು ಬಹಿಷ್ಕಾರ ಮಾಡುವುದಾಗಿ ಬೆದರಿಕೆಯನ್ನೊಡ್ಡಿದನು. ಲೂಥರ್‌ ಧೈರ್ಯದಿಂದ ಆ ಬೆದರಿಕೆಯನ್ನು ಒಳಗೊಂಡ ಪೋಪರ ಆಜ್ಞಾಪತ್ರವನ್ನು ಬಹಿರಂಗವಾಗಿ ಸುಟ್ಟುಬಿಟ್ಟನು ಮತ್ತು ಪೋಪರ ಒಪ್ಪಿಗೆ ಇಲ್ಲದೆ ಚರ್ಚ್‌ ಅನ್ನು ಸುಧಾರಣೆ ಮಾಡುವಂತೆ ಸಂಸ್ಥಾನಗಳನ್ನು ಉತ್ತೇಜಿಸುವ ಇನ್ನೂ ಅನೇಕ ಕೃತಿಗಳನ್ನು ಪ್ರಕಾಶಿಸಿದನು. 1521ರಲ್ಲಿ, Xನೆಯ ಪೋಪ್‌ ಲೀಯೊ, ಲೂಥರ್‌ನನ್ನು ಬಹಿಷ್ಕರಿಸಿದನು. ನ್ಯಾಯವಾಗಿ ವಿಚಾರಣೆಮಾಡದೆ ತನ್ನನ್ನು ದಂಡನೆಗೆ ಗುರಿಮಾಡಲಾಗಿದೆ ಎಂದು ಲೂಥರ್‌ ಆಕ್ಷೇಪಿಸಿದಾಗ, ಸಾಮ್ರಾಟನಾದ Vನೆಯ ಚಾರ್ಲ್ಸ್‌ ಈ ಸುಧಾರಕನಿಗೆ ವರ್ಮ್ಸ್‌ನಲ್ಲಿ ಚಕ್ರಾಧಿಪತ್ಯದ ಶಾಸನ ಸಭೆಯ ಮುಂದೆ ಹಾಜರಾಗುವಂತೆ ಕರೆಕೊಟ್ಟನು. 1521ರ ಏಪ್ರಿಲ್‌ ತಿಂಗಳಿನಲ್ಲಿ, ಲೂಥರನು ವಿಟೆನ್‌ಬರ್ಗ್‌ನಿಂದ ವರ್ಮ್ಸ್‌ಗೆ ಮಾಡಿದ 15 ದಿನಗಳ ಪ್ರಯಾಣವು ವಿಜಯೋತ್ಸವದ ಮೆರವಣಿಗೆಯಂತಿತ್ತು. ಸಾರ್ವಜನಿಕರ ಬೆಂಬಲವು ಅವನಿಗಿತ್ತು ಮತ್ತು ಎಲ್ಲೆಡೆಯೂ ಜನರು ಅವನನ್ನು ನೋಡಲು ಬಯಸಿದರು.

ವರ್ಮ್ಸ್‌ನಲ್ಲಿ ಲೂಥರನು, ಸಾಮ್ರಾಟನ, ರಾಜಕುಮಾರರ, ಮತ್ತು ಪೋಪ್‌ ರಾಯಭಾರಿಯ ಮುಂದೆ ಹಾಜರಾದನು. 1415ರಲ್ಲಿ ಯಾನ್‌ ಹಸ್‌ ಸಹ ಇದೇ ರೀತಿಯ ವಿಚಾರಣೆಯನ್ನು ಕಾನ್‌ಸ್ಟೆನ್ಸ್‌ನಲ್ಲಿ ಎದುರಿಸಿದನು ಮತ್ತು ಅವನನ್ನು ಕಂಬಕ್ಕೆ ಕಟ್ಟಿ ಸುಡಲಾಯಿತು. ಈಗ ಚರ್ಚಿನ ಮತ್ತು ಸಾಮ್ರಾಜ್ಯದ ಕಣ್ಣು ಲೂಥರನ ಮೇಲೆ ಕೇಂದ್ರೀಕೃತವಾಗಿತ್ತು. ಆದರೆ, ಅವನು ತಪ್ಪಿತಸ್ಥನೆಂದು ಅವನ ವಿರೋಧಿಗಳು ಶಾಸ್ತ್ರಗಳಿಂದ ರುಜುಪಡಿಸುವ ವರೆಗೆ ಲೂಥರ್‌ ಬಹಿರಂಗವಾಗಿ ತಪ್ಪೊಪ್ಪಿಕೊಳ್ಳಲು ನಿರಾಕರಿಸಿದನು. ಆದರೆ ಶಾಸ್ತ್ರವಚನಗಳ ವಿಷಯದಲ್ಲಿ ಅವನಿಗಿದ್ದ ಜ್ಞಾಪಕಶಕ್ತಿಯನ್ನು ಯಾರೂ ಮೀರಿಸಲು ಸಾಧ್ಯವಿರಲಿಲ್ಲ. ವರ್ಮ್ಸ್‌ ಶಾಸನ ಎಂಬುದಾಗಿ ಕರೆಯಲಾದ ದಾಖಲೆಪತ್ರವು ಆ ವಿಚಾರಣೆಯ ಫಲಿತಾಂಶವನ್ನು ನೀಡಿತು. ಅದು, ಲೂಥರನು ಒಬ್ಬ ಕಾನೂನುಭ್ರಷ್ಟನು ಎಂದು ಘೋಷಿಸಿ, ಅವನ ಬರಹಗಳನ್ನು ನಿಷೇಧಿಸಿತು. ಪೋಪರಿಂದ ಬಹಿಷ್ಕರಿಸಲ್ಪಟ್ಟ ಮತ್ತು ಸಾಮ್ರಾಟನಿಂದ ಕಾನೂನುಭ್ರಷ್ಟನೆಂದು ಘೋಷಿಸಲ್ಪಟ್ಟ ಅವನು ಈಗ ಮಾರಕ ಗಂಡಾಂತರದಲ್ಲಿದ್ದನು.

ಆದರೆ ಆಗ, ನಾಟಕೀಯವೂ ಅನಿರೀಕ್ಷಿತವೂ ಆಗಿ ನಡೆದ ಒಂದು ಘಟನೆಯಿಂದಾಗಿ ಪರಿಸ್ಥಿತಿಯು ಬದಲಾಯಿತು. ವಿಟೆನ್‌ಬರ್ಗ್‌ಗೆ ಹಿಂದೆರಳುತ್ತಿದ್ದಾಗ, ಲೂಥರನ ಅಪಹರಣವಾಯಿತು. ಆದರೆ ಇದು, ಸ್ಯಾಕ್ಸೊನಿಯ ಫ್ರೆಡ್‌ರಿಕ್‌ ಎಂಬ ದಯಾಪರ ವ್ಯಕ್ತಿಯಿಂದ ಏರ್ಪಡಿಸಲಾದ ಒಂದು ನಾಟಕವಾಗಿತ್ತು. ಇದು ಲೂಥರ್‌ನನ್ನು ವೈರಿಗಳ ಕೈಗೆ ಸಿಗದಷ್ಟು ದೂರ ಕೊಂಡೊಯ್ದಿತು. ಲೂಥರ್‌ನನ್ನು ಏಕಾಂತ ಸ್ಥಳವಾದ ವಾರ್ಟ್‌ಬರ್ಗ್‌ ಕೋಟೆಮನೆಗೆ ಕೊಂಡೊಯ್ಯಲಾಯಿತು. ಅಲ್ಲಿ ಅವನು ಗಡ್ಡ ಬೆಳೆಸಿಕೊಂಡು, ಇನ್ನೊಬ್ಬ ವ್ಯಕ್ತಿ ಅಂದರೆ ಯಂಕರ್‌ ಜಾರ್ಜ್‌ ಎಂಬ ಹೆಸರಿನ ಒಬ್ಬ ಕುಲೀನ ವ್ಯಕ್ತಿಯೋಪಾದಿ ಜ್ಞಾತನಾದನು.

ಅತ್ಯಧಿಕ ಬೇಡಿಕೆಯಲ್ಲಿದ್ದ ಸೆಪ್ಟೆಂಬರ್‌ ಬೈಬಲ್‌

ಮುಂದಿನ ಹತ್ತು ತಿಂಗಳುಗಳ ವರೆಗೆ ಲೂಥರ್‌, ಸಾಮ್ರಾಟ ಮತ್ತು ಪೋಪರಿಂದ ತಲೆಮರೆಸಿಕೊಂಡು ವಾರ್ಟ್‌ಬರ್ಗ್‌ ಕೋಟೆಮನೆಯಲ್ಲಿಯೇ ವಾಸಿಸಿದನು. “ವಾರ್ಟ್‌ಬರ್ಗ್‌ನಲ್ಲಿನ ಸಮಯವು ಅವನ ಜೀವನದಲ್ಲಿನ ಅತಿ ಉತ್ಪನ್ನಕಾರಕ ಹಾಗೂ ಸೃಜನಾತ್ಮಕ ಅವಧಿಗಳಲ್ಲೊಂದಾಗಿತ್ತು,” ಎಂಬುದಾಗಿ ವೆಲ್ಟ್‌ಅರ್ಬಿ ವಾರ್ಟ್‌ಬರ್ಗ್‌ ಎಂಬ ಪುಸ್ತಕವು ವಿವರಿಸುತ್ತದೆ. ಅಲ್ಲಿಯೇ ಅವನು ತನ್ನ ಅತಿ ದೊಡ್ಡ ಸಾಧನೆಗಳಲ್ಲಿ ಒಂದಾದ, ಗ್ರೀಕ್‌ ಶಾಸ್ತ್ರವಚನಗಳ ಇರಾಸ್‌ಮಸ್‌ನ ವ್ಯಾಖ್ಯಾನವನ್ನು ಜರ್ಮನ್‌ ಭಾಷೆಗೆ ಭಾಷಾಂತರಿಸಿ ಮುಗಿಸಿದ್ದನು. ಇದರ ಭಾಷಾಂತರಕಾರನು ಲೂಥರ್‌ ಎಂಬುದಾಗಿ ಹೆಸರಿಸದೆ, 1522ರ ಸೆಪ್ಟೆಂಬರ್‌ ತಿಂಗಳಿನಲ್ಲಿ ಇದನ್ನು ಪ್ರಕಾಶಿಸಲಾಯಿತು. ಈ ಕೃತಿಯು, ಸೆಪ್ಟೆಂಬರ್‌ ಬೈಬಲ್‌ ಆಗಿ ಪ್ರಸಿದ್ಧವಾಯಿತು. ಇದರ ಬೆಲೆಯು ಒಂದೂವರೆ ಗೈಲ್ಡರ್‌, ಅಂದರೆ ಮನೆಗೆಲಸದವರ ಒಂದು ವರುಷದ ಸಂಬಳಕ್ಕೆ ಸಮಾನವಾಗಿತ್ತು. ಹಾಗಿದ್ದರೂ, ಈ ಸೆಪ್ಟೆಂಬರ್‌ ಬೈಬಲಿಗೆ ಬೇಡಿಕೆಯು ಅತ್ಯಧಿಕವಾಗಿತ್ತು. 12 ತಿಂಗಳೊಳಗೆ, ಎರಡು ಮುದ್ರಣಗಳಲ್ಲಿ 6,000 ಪ್ರತಿಗಳು ಮುದ್ರಿಸಲ್ಪಟ್ಟವು. ಮತ್ತು ಮುಂದಿನ 12 ವರ್ಷಗಳಲ್ಲಿ, ಕಡಿಮೆಪಕ್ಷ 69 ಮುದ್ರಣಗಳನ್ನು ಮಾಡಲಾಯಿತು.

ಇಸವಿ 1525ರಲ್ಲಿ ಮಾರ್ಟಿನ್‌ ಲೂಥರನು, ಹಿಂದೆ ಒಬ್ಬ ಕ್ರೈಸ್ತ ಸಂನ್ಯಾಸಿನಿಯಾಗಿದ್ದ ಕ್ಯಾತರೀನಳನ್ನು ವಿವಾಹವಾದನು. ಮನೆಯನ್ನು ನೋಡಿಕೊಳ್ಳುವುದರಲ್ಲಿ ಕ್ಯಾತರೀನಳು ಸಮರ್ಥಳಾಗಿದ್ದಳು ಮತ್ತು ತನ್ನ ಗಂಡನ ಉದಾರಗುಣದ ಕಾರಣ ಉಂಟಾಗುವ ಬೇಡಿಕೆಗಳನ್ನು ಪೂರೈಸಲು ಶಕ್ತಳಾಗಿದ್ದಳು. ಲೂಥರ್‌ನ ಮನೆವಾರ್ತೆಯಲ್ಲಿ ಕೇವಲ ಅವನ ಹೆಂಡತಿ ಮತ್ತು ಆರು ಮಕ್ಕಳಲ್ಲದೆ, ಅವನ ಸ್ನೇಹಿತರು, ವಿದ್ವಾಂಸರು ಮತ್ತು ಆಶ್ರಯಾರ್ಥಿಗಳೂ ಸೇರಿದ್ದರು. ತನ್ನ ಇಳಿವಯಸ್ಸಿನಲ್ಲಿ ಲೂಥರನು ಒಬ್ಬ ಸಲಹೆಗಾರನೋಪಾಗಿ ಎಷ್ಟೊಂದು ಪ್ರತಿಷ್ಠೆಯನ್ನು ಪಡೆದಿದ್ದನೆಂದರೆ, ಅವನ ಮನೆಯಲ್ಲಿ ಅತಿಥಿಗಳಾಗಿ ಇರುತ್ತಿದ್ದ ವಿದ್ವಾಂಸರು, ಲೂಥರನ ಅಭಿಪ್ರಾಯೋಕ್ತಿಗಳನ್ನು ಬರೆದುಕೊಳ್ಳಲು ಲೇಖನಿ ಹಾಗೂ ಕಾಗದದೊಂದಿಗೆ ಸಜ್ಜಿತರಾಗಿರುತ್ತಿದ್ದರು. ನಂತರ, ಈ ಟಿಪ್ಪಣಿಗಳನ್ನು ಸಂಗ್ರಹಿಸಿ, ಲೂಥರ್ಸ್‌ ಟಿಶ್‌ರೇಡೆನ್‌ (ಲೂಥರನ ಮೇಜು ಚರ್ಚೆ) ಎಂಬ ಪುಸ್ತಕವನ್ನು ತಯಾರಿಸಲಾಯಿತು. ಸ್ವಲ್ಪ ಸಮಯದ ವರೆಗೆ, ಇದು ಜರ್ಮನ್‌ ಭಾಷೆಯಲ್ಲಿ ಬೈಬಲಿನ ನಂತರ ಅತ್ಯಧಿಕ ಮಾರಾಟದಲ್ಲಿದ್ದ ಪುಸ್ತಕವಾಗಿತ್ತು.

ಮೇಧಾವಿ ಭಾಷಾಂತರಕಾರ ಮತ್ತು ವಿಪುಲ ಬರಹಗಾರ

ಇಸವಿ 1534ರೊಳಗಾಗಿ, ಲೂಥರನು ಇಬ್ರಿಯ ಶಾಸ್ತ್ರವಚನಗಳ ಭಾಷಾಂತರವನ್ನು ಮುಗಿಸಿದನು. ಶೈಲಿ, ತಾಳಬದ್ಧ ರಚನೆ, ಮತ್ತು ಶಬ್ದಭಂಡಾರ ಇವೆಲ್ಲವನ್ನೂ ಸಮತೂಕದಲ್ಲಿಡಲು ಅವನಿಗೆ ಸಾಮರ್ಥ್ಯವಿತ್ತು. ಇದರ ಪರಿಣಾಮವಾಗಿ, ಸಾಮಾನ್ಯ ಜನರೂ ಅರ್ಥಮಾಡಿಕೊಳ್ಳಬಲ್ಲ ಬೈಬಲು ತಯಾರಿಸಲ್ಪಟ್ಟಿತ್ತು. ತನ್ನ ಭಾಷಾಂತರ ವಿಧಾನದ ಬಗ್ಗೆ ಲೂಥರ್‌ ಬರೆದದ್ದು: “ಮನೆಯಲ್ಲಿರುವ ತಾಯಿ, ಬೀದಿಯಲ್ಲಿರುವ ಮಕ್ಕಳು ಮತ್ತು ಮಾರುಕಟ್ಟೆಯಲ್ಲಿರುವ ಸಾಮಾನ್ಯ ವ್ಯಕ್ತಿಯೊಂದಿಗೆ ನಾವು ಮಾತಾಡಬೇಕು ಮತ್ತು ನಂತರ, ಅವರು ಮಾತಾಡುವ ರೀತಿಯನ್ನು ಗಮನಕೊಟ್ಟು ಆಲಿಸಬೇಕು. ಆ ಮೇಲೆ, ಅದರಂತೆಯೇ ಭಾಷಾಂತರಿಸಬೇಕು.” ಲೂಥರನ ಬೈಬಲು, ಕಾಲಾನಂತರ ಜರ್ಮನಿಯಾದ್ಯಂತ ಸ್ವೀಕರಿಸಲ್ಪಟ್ಟ ಜರ್ಮನ್‌ ಭಾಷೆಯ ಪ್ರಮಾಣಬದ್ಧವಾದ ಲಿಪಿಗೆ ಬುನಾದಿಯನ್ನು ಹಾಕಿತು.

ಭಾಷಾಂತರಕಾರನೋಪಾದಿ ಲೂಥರನಿಗಿದ್ದ ಪ್ರತಿಭೆಯ ಜೊತೆಯಲ್ಲಿ, ಬರಹಗಾರನೋಪಾದಿ ಅವನಿಗಿದ್ದ ಕೌಶಲವು ಸಮ್ಮಿಲನಗೊಂಡಿತ್ತು. ಅವನು ತನ್ನ ಜೀವಮಾನದುದ್ದಕ್ಕೂ ಪ್ರತಿ ಎರಡು ವಾರಕ್ಕೊಂದು ಗ್ರಂಥವನ್ನು ಬರೆದನೆಂದು ಹೇಳಲಾಗುತ್ತದೆ. ಇವುಗಳಲ್ಲಿ ಕೆಲವು ಅದರ ಗ್ರಂಥಕರ್ತನಂತೆ ವಾದಾಸ್ಪದವಾಗಿದ್ದವು. ಅವನ ಆದಿ ಬರಹಗಳ ಶೈಲಿಯು ಹೇಗೆ ಬಹು ಕಟುವಾಗಿತ್ತೋ, ಅಂತೆಯೇ ಅವನು ವೃದ್ಧನಾದ ನಂತರ ಬರೆದ ಬರಹಗಳೂ ಇದ್ದವು. ವಯಸ್ಸಾಗುವಿಕೆಯು ಅವನ ಶೈಲಿಯಲ್ಲಿ ಯಾವ ಬದಲಾವಣೆಯನ್ನೂ ತರಲಿಲ್ಲ. ಅವನ ನಂತರದ ಪ್ರಬಂಧಗಳು ಹೆಚ್ಚೆಚ್ಚು ತೀಕ್ಷ್ಣವಾದವು. ಲೆಕ್ಸೀಕನ್‌ ಫರ್‌ ಟಾಓಲೋಗೀ ಉನ್ಡ್‌ ಕಿರ್ಕಿ ಎಂಬ ಪುಸ್ತಕಕ್ಕನುಸಾರ, ಲೂಥರ್‌ನ ಕೃತಿಗಳು “ಅವನ ಕೋಪದ ವೈಪರೀತ್ಯ” ಮತ್ತು “ನಮ್ರತೆ ಹಾಗೂ ಪ್ರೀತಿಯ ಕೊರತೆ,” ಹಾಗೂ “ತನ್ನ ಧ್ಯೇಯವನ್ನು ನೆರವೇರಿಸಬೇಕೆಂಬ ತೀವ್ರಭಾವ” ಮುಂತಾದ ವಿಷಯಗಳನ್ನು ವ್ಯಕ್ತಪಡಿಸುತ್ತವೆ.

ರೈತರ ಯುದ್ಧವು ಆರಂಭವಾಗಿ, ಸಂಸ್ಥಾನಗಳಲ್ಲಿ ರಕ್ತದ ಹೊಳೆಯು ಹರಿಯುತ್ತಿದ್ದಾಗ, ಈ ಬಂಡಾಯದ ಕುರಿತು ಲೂಥರನ ಅಭಿಪ್ರಾಯವೇನೆಂದು ಕೇಳಲಾಯಿತು. ರೈತರಿಗೆ ತಮ್ಮ ಊಳಿಗಮಾನ್ಯ ಪದ್ಧತಿಯ ಧಣಿಗಳ ವಿರುದ್ಧ ದೂರುಹೊರಿಸಲು ನ್ಯಾಯವಾದ ಕಾರಣವಿತ್ತೋ? ಹೆಚ್ಚಿನವರಿಗೆ ಮೆಚ್ಚಿಗೆಯಾಗುವಂಥ ಉತ್ತರವನ್ನು ಕೊಡುವ ಮೂಲಕ ಜನಸಾಮಾನ್ಯರ ಬೆಂಬಲವನ್ನು ಪಡೆಯಲು ಲೂಥರ್‌ ಪ್ರಯತ್ನಿಸಲಿಲ್ಲ. ಅಧಿಕಾರದಲ್ಲಿರುವವರಿಗೆ ದೇವರ ಸೇವಕರು ವಿಧೇಯರಾಗಲೇಬೇಕೆಂದು ಅವನು ನಂಬಿದನು. (ರೋಮಾಪುರ 13:1) ಆದುದರಿಂದ, ದಂಗೆಯನ್ನು ಬಲವಂತವಾಗಿ ನಿಲ್ಲಿಸಬೇಕೆಂದು ಲೂಥರ್‌ ತನ್ನ ನಿರ್ದಾಕ್ಷಿಣ್ಯದ ಅಭಿಪ್ರಾಯವನ್ನು ತಿಳಿಸಿದನು. ಅವನು ತಿಳಿಸಿದ್ದು: “ಯಾರೇ ಆಗಿರಲಿ, ಸಾಧ್ಯವಿದ್ದರೆ ಕತ್ತಿಯಿಂದ ತಿವಿದು, ಮೇಲೆರಗಿ, ಕೊಲ್ಲಿರಿ.” ಲೂಥರನ ಈ ಉತ್ತರದಿಂದಾಗಿ, “ಇದುವರೆಗೆ ಅವನಿಗೆ ಜನರ ಮಧ್ಯೆ ಇದ್ದಂಥ ಅಪೂರ್ವವಾದ ಪ್ರಖ್ಯಾತಿಯ” ಭಾರೀ ಬೆಲೆಯನ್ನು ತೆರಬೇಕಾಯಿತು ಎಂಬುದಾಗಿ ಹ್ಯಾನ್ಸ್‌ ಲೀಲ್‌ಯೆ ತಿಳಿಸುತ್ತಾರೆ. ಅಷ್ಟುಮಾತ್ರವಲ್ಲದೆ ತದನಂತರ ಅವನು, ಕ್ರೈಸ್ತ ಧರ್ಮಕ್ಕೆ ಮತಾಂತರಿಸಲು ನಿರಾಕರಿಸಿದ ಯೆಹೂದ್ಯರ ಕುರಿತು ಬರೆದ ಪ್ರಬಂಧಗಳು, ಪ್ರಾಮುಖ್ಯವಾಗಿ ಯೆಹೂದ್ಯರ ಮತ್ತು ಅವರ ಸುಳ್ಳುಗಳ ಕುರಿತು (ಇಂಗ್ಲಿಷ್‌) ಎಂಬ ಪ್ರಬಂಧವು, ಇದರ ಗ್ರಂಥಕರ್ತನು ಯೆಹೂದ್ಯ ವಿರೋಧಿ ಎಂಬುದಾಗಿ ಅನೇಕರು ಹೆಸರಿಸುವಂತೆ ಮಾಡಿತು.

ಲೂಥರನು ಬಿಟ್ಟುಹೋದ ಆಸ್ತಿ

ಲೂಥರ್‌, ಕ್ಯಾಲ್ವಿನ್‌, ಮತ್ತು ಜ್ವಿಂಗ್ಲಿ ಮುಂತಾದ ವ್ಯಕ್ತಿಗಳಿಂದ ಚಿತಾಯಿಸಲ್ಪಟ್ಟ ಈ ‘ಮತಸುಧಾರಣೆಯು,’ ಪ್ರಾಟೆಸ್ಟಂಟ್‌ ಮತವೆಂದು ಕರೆಯಲಾದ ಹೊಸ ಮತದ ಸ್ಥಾಪನೆಗೆ ನಡೆಸಿತು. ಪ್ರಾಟೆಸ್ಟಂಟ್‌ ಮತಕ್ಕೆ ಲೂಥರ್‌ ಬಿಟ್ಟುಹೋದ ದೊಡ್ಡ ಆಸ್ತಿ, ನಂಬಿಕೆಯಿಂದಲೇ ರಕ್ಷಣೆ ಎಂಬ ಅವನ ಮೂಲ ಬೋಧನೆಯೇ ಆಗಿದೆ. ಪ್ರತಿಯೊಂದು ಜರ್ಮನ್‌ ಸಂಸ್ಥಾನವು, ಒಂದೇ ಪ್ರಾಟೆಸ್ಟಂಟ್‌ ಇಲ್ಲವೆ ಕ್ಯಾಥೊಲಿಕ್‌ ನಂಬಿಕೆಯನ್ನು ಬೆಂಬಲಿಸಿತು. ಪ್ರಾಟೆಸ್ಟಂಟ್‌ ಮತವು ಸ್ಕಾಂಡಿನೇವಿಯಾ, ಸ್ವಿಟ್ಸರ್‌ಲೆಂಡ್‌, ಇಂಗ್ಲೆಂಡ್‌, ಮತ್ತು ನೆದರ್‌ಲ್ಯಾಂಡ್ಸ್‌ನಲ್ಲಿ ಹಬ್ಬಿತು ಮತ್ತು ನೂರಾರು ಕೋಟಿ ಜನರ ಬೆಂಬಲವನ್ನು ಪಡೆಯಿತು. ಇಂದು ಅದಕ್ಕೆ ಕೋಟ್ಯಂತರ ಅನುಯಾಯಿಗಳಿದ್ದಾರೆ.

ಲೂಥರ್‌ನಿಂದ ಕಲಿಸಲಾದ ಎಲ್ಲಾ ನಂಬಿಕೆಗಳನ್ನು ಒಪ್ಪಿಕೊಳ್ಳದಂಥ ಅನೇಕರು ಇದ್ದಾರಾದರೂ ಅವರಿಗೆ ಅವನ ಬಗ್ಗೆ ತುಂಬ ಗೌರವವಿದೆ. ಐಸ್‌ಲೇಬೆನ್‌, ಇರ್‌ಫರ್ಟ್‌, ವಿಟೆನ್‌ಬರ್ಗ್‌, ಮತ್ತು ವಾರ್ಟ್‌ಬರ್ಗ್‌ ಮುಂತಾದ ಸ್ಥಳಗಳನ್ನು ತನ್ನ ಗಡಿಯೊಳಗೆ ಹೊಂದಿರುವ ಪೂರ್ವ ಜರ್ಮನ್‌ ಡೆಮೊಕ್ರ್ಯಾಟಿಕ್‌ ರಿಪಬ್ಲಿಕ್‌ ಸಹ 1983ರಲ್ಲಿ ಲೂಥರನ 500ನೆಯ ಹುಟ್ಟುಹಬ್ಬದ ವಾರ್ಷಿಕೋತ್ಸವವನ್ನು ಆಚರಿಸಿತು. ಈ ಸಮಾಜವಾದಿ ಸರಕಾರವು ಸಹ, ಜರ್ಮನ್‌ ಇತಿಹಾಸ ಮತ್ತು ಸಂಸ್ಕೃತಿಯಲ್ಲಿ ಇವನೊಬ್ಬ ಪ್ರಮುಖ ವ್ಯಕ್ತಿಯಾಗಿದ್ದಾನೆಂದು ಅಂಗೀಕರಿಸಿತು. ಲೂಥರನು ಬೀರಿದ ಪ್ರಭಾವವನ್ನು ಸಾರಾಂಶಿಸುತ್ತಾ ಒಬ್ಬ ಕ್ಯಾಥೊಲಿಕ್‌ ದೇವತಾಶಾಸ್ತ್ರಜ್ಞನು ಹೀಗೆಂದು ಹೇಳಿಕೆ ನೀಡಿದನು: “ಲೂಥರ್‌ನ ನಂತರ ಬಂದ ಯಾವುದೇ ವ್ಯಕ್ತಿಯು ಅವನಿಗೆ ಸರಿಸಮಾನನಿರಲಿಲ್ಲ.” ಪ್ರೊಫೆಸರ್‌ ಆ್ಯಲೆಂಡ್‌ ಬರೆದದ್ದು: “ಮಾರ್ಟಿನ್‌ ಲೂಥರ್‌ ಮತ್ತು ‘ಮತಸುಧಾರಣೆಯ’ ಕುರಿತು ಪ್ರತಿ ವರುಷ ಕಡಿಮೆಪಕ್ಷ 500 ಹೊಸ ಪ್ರಕಾಶನಗಳು ಬಿಡುಗಡೆಯಾಗುತ್ತವೆ ಮತ್ತು ಇವು ಬಹುಮಟ್ಟಿಗೆ ಲೋಕದ ಎಲ್ಲಾ ಪ್ರಮುಖ ಭಾಷೆಗಳಲ್ಲಿ ಪ್ರಕಾಶಿಸಲ್ಪಡುತ್ತವೆ.”

ಮಾರ್ಟಿನ್‌ ಲೂಥರನಿಗೆ ತೀಕ್ಷ್ಣ ಬುದ್ಧಿಶಕ್ತಿ, ಅಸಾಮಾನ್ಯ ಜ್ಞಾಪಕಶಕ್ತಿ, ಶಬ್ದಭಂಡಾರದಲ್ಲಿ ಪರಿಣತೆ ಇತ್ತು ಮತ್ತು ಅವನು ಪರಿಶ್ರಮಪಟ್ಟು ದುಡಿಯುವ ಕೆಲಸಗಾರನಾಗಿದ್ದನು. ಆದರೆ ಅವನು ತಾಳ್ಮೆಯಿಲ್ಲದವನೂ ಹೀನೈಸುವ ಸ್ವಭಾವದವನೂ ಆಗಿದ್ದನು ಹಾಗೂ ತಾನು ಯಾವುದನ್ನು ಕಪಟತನವೆಂದು ಭಾವಿಸುತ್ತಿದ್ದನೋ ಅದರ ವಿಷಯದಲ್ಲಿ ಭಾವಾವೇಶದಿಂದ ಪ್ರತಿಕ್ರಿಯಿಸುತ್ತಿದ್ದನು. 1546ರ ಫೆಬ್ರವರಿ ತಿಂಗಳಿನಂದು ಲೂಥರ್‌ ಮರಣಶಯ್ಯೆಯಲ್ಲಿದ್ದಾಗ, ಅವನು ತಾನು ಇತರರಿಗೆ ಕಲಿಸಿದ ನಂಬಿಕೆಗಳ ವಿಷಯದಲ್ಲಿ ಈಗಲೂ ನಿಷ್ಠನಾಗಿದ್ದಾನೋ ಎಂಬುದಾಗಿ ಅವನ ಸ್ನೇಹಿತರು ಅವನನ್ನು ಪ್ರಶ್ನಿಸಿದರು. ಅದಕ್ಕೆ ಅವನು, “ಹೌದು” ಎಂಬುದಾಗಿ ಉತ್ತರಿಸಿದನು. ಲೂಥರ್‌ ತೀರಿಕೊಂಡನು, ಆದರೆ ಅವನು ಕಲಿಸಿದ ನಂಬಿಕೆಗಳಿಗೆ ಇನ್ನೂ ಅನೇಕರು ಅಂಟಿಕೊಂಡಿದ್ದಾರೆ.

[ಪುಟ 27ರಲ್ಲಿರುವ ಚಿತ್ರ]

ಶೇಷಪಾಪಕ್ಷಮೆಯ ಮಾರಾಟವನ್ನು ಲೂಥರ್‌ ವಿರೋಧಿಸಿದನು

[ಕೃಪೆ]

Mit freundlicher Genehmigung: Wartburg-Stiftung

[ಪುಟ 28ರಲ್ಲಿರುವ ಚಿತ್ರ]

ಅವನು ತಪ್ಪಿತಸ್ಥನೆಂದು ಅವನ ವಿರೋಧಿಗಳು ಶಾಸ್ತ್ರಗಳಿಂದ ರುಜುಪಡಿಸುವ ವರೆಗೆ ಲೂಥರ್‌ ಬಹಿರಂಗವಾಗಿ ತಪ್ಪೊಪ್ಪಿಕೊಳ್ಳಲು ನಿರಾಕರಿಸಿದನು

[ಕೃಪೆ]

From the book The Story of Liberty, 1878

[ಪುಟ 29ರಲ್ಲಿರುವ ಚಿತ್ರಗಳು]

ಲೂಥರನು ಬೈಬಲನ್ನು ಭಾಷಾಂತರಿಸಿದ ವಾರ್ಟ್‌ಬರ್ಗ್‌ ಕೋಟೆಮನೆಯಲ್ಲಿನ ಅವನ ಕೋಣೆ

[ಕೃಪೆ]

ಎರಡೂ ಚಿತ್ರಗಳು: Mit freundlicher Genehmigung: Wartburg-Stiftung

[ಪುಟ 26ರಲ್ಲಿರುವ ಚಿತ್ರ ಕೃಪೆ]

From the book Martin Luther The Reformer, 3rd Edition, published by Toronto Willard Tract Depository, Toronto, Ontario

[ಪುಟ 30ರಲ್ಲಿರುವ ಚಿತ್ರ ಕೃಪೆ]

From the book The History of Protestantism (Vol. I)