ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬೈಬಲ್‌ ಬದುಕಿನ ಪಠ್ಯಪುಸ್ತಕ

ಬೈಬಲ್‌ ಬದುಕಿನ ಪಠ್ಯಪುಸ್ತಕ

ಬೈಬಲ್‌ ಬದುಕಿನ ಪಠ್ಯಪುಸ್ತಕ

“ದೇವರ ವಾಕ್ಯವು ಸಜೀವವಾದದ್ದು, ಕಾರ್ಯಸಾಧಕವಾದದ್ದು, ಯಾವ ಇಬ್ಬಾಯಿಕತ್ತಿಗಿಂತಲೂ ಹದವಾದದ್ದು, . . . ಹೃದಯದ ಆಲೋಚನೆಗಳನ್ನೂ ಉದ್ದೇಶಗಳನ್ನೂ ವಿವೇಚಿಸುವಂಥದು ಆಗಿದೆ.” (ಇಬ್ರಿಯ 4:12) ದೇವರ ವಾಕ್ಯವು ಏನನ್ನು ಸಾಧಿಸಬಲ್ಲದು ಎಂಬುದನ್ನು ತಿಳಿಸುವ ಈ ವರ್ಣನೆಯು, ಬೈಬಲ್‌ ಕೇವಲ ಒಂದು ಒಳ್ಳೆಯ ಪುಸ್ತಕಕ್ಕಿಂತಲೂ ಹೆಚ್ಚಿನದ್ದಾಗಿದೆ ಎಂಬ ವಿಷಯವನ್ನು ದೃಢೀಕರಿಸುತ್ತದೆ.

“ಅದರಲ್ಲಿರುವ ಸಂದೇಶವು ನಮ್ಮ ಉಸಿರಾಟದಷ್ಟೇ ಅತ್ಯಗತ್ಯವಾಗಿದೆ,” ಎಂದು ಒಬ್ಬ ಧಾರ್ಮಿಕ ಲೇಖಕನು ಸಂಕ್ಷಿಪ್ತವಾಗಿ ತಿಳಿಸಿದನು. ಅನಂತರ ಅವನು ಕೂಡಿಸಿ ಹೇಳಿದ್ದು: “ಇಂದು ನಾವು ಹಾತೊರೆಯುವ ಮತ್ತು ನಮಗೆ ಅಗತ್ಯವಿರುವ ಉಪಶಮನವನ್ನು ಪಡೆದುಕೊಳ್ಳುವ ದೃಷ್ಟಿಕೋನದಿಂದ ನಾವು ಬೈಬಲನ್ನು ಓದುವಲ್ಲಿ, ನಮ್ಮನ್ನು ಚಕಿತಗೊಳಿಸುವಂಥ ಫಲಿತಾಂಶಗಳು ದೊರಕುವವು.” ಪ್ರಕಾಶಮಾನವಾಗಿ ಬೆಳಗುತ್ತಿರುವ ಒಂದು ದೀಪದಂತೆ ಬೈಬಲ್‌, ಆಧುನಿಕ ದಿನದ ಜೀವಿತದ ಜಟಿಲವಾದ ಸವಾಲುಗಳು ಮತ್ತು ಸಮಸ್ಯೆಗಳ ಮೇಲೆ ಬೆಳಕನ್ನು ಬೀರುತ್ತದೆ.​—⁠ಕೀರ್ತನೆ 119:105.

ಹೌದು, ಬೈಬಲಿನಲ್ಲಿರುವ ವಿವೇಕಕ್ಕೆ ನಮ್ಮ ಯೋಚನಾ ರೀತಿಯನ್ನು ರೂಪಿಸಲು, ಸಮಸ್ಯೆಗಳನ್ನು ಬಗೆಹರಿಸಲಿಕ್ಕಾಗಿ ಸಹಾಯಮಾಡಲು, ನಮ್ಮ ಜೀವಿತದ ಗುಣಮಟ್ಟವನ್ನು ಉತ್ತಮಗೊಳಿಸಲು, ಮತ್ತು ನಾವು ಬದಲಾಯಿಸಲಾಗದಂತಹ ಸನ್ನಿವೇಶಗಳನ್ನು ನಿಭಾಯಿಸಿಕೊಂಡು ಹೋಗಲಿಕ್ಕಾಗಿ ಬೇಕಾಗಿರುವ ಕೌಶಲಗಳೊಂದಿಗೆ ನಮ್ಮನ್ನು ಸಜ್ಜುಗೊಳಿಸುವ ಶಕ್ತಿಯಿದೆ. ಅತಿ ಪ್ರಾಮುಖ್ಯವಾಗಿ, ನಾವು ದೇವರನ್ನು ತಿಳಿದುಕೊಂಡು, ಆತನನ್ನು ಪ್ರೀತಿಸುವಂತೆ ಬೈಬಲ್‌ ನಮಗೆ ಸಹಾಯಮಾಡುತ್ತದೆ.

ಜೀವಿತಕ್ಕೆ ಉದ್ದೇಶವನ್ನು ಕೊಡುವ ಒಂದು ಪುಸ್ತಕ

ಬೈಬಲಿನ ಲೇಖಕನಾದ ಯೆಹೋವ ದೇವರಿಗೆ, ‘ನಮ್ಮ ನಡತೆಯೆಲ್ಲಾ ಗೋಚರವಾಗಿದೆ.’ ನಮ್ಮ ಶಾರೀರಿಕ, ಭಾವನಾತ್ಮಕ ಮತ್ತು ಆತ್ಮಿಕ ಅಗತ್ಯಗಳ ಕುರಿತಾಗಿ ನಮಗಿಂತಲೂ ಹೆಚ್ಚಾಗಿ ಆತನಿಗೇ ಗೊತ್ತಿದೆ. (ಕೀರ್ತನೆ 139:​1-3) ಇದನ್ನು ಮನಸ್ಸಿನಲ್ಲಿಟ್ಟುಕೊಂಡು ನಾವು ಹೇಗೆ ನಡೆದುಕೊಳ್ಳಬೇಕೆಂಬುದರ ಕುರಿತು ಆತನು ಸ್ಪಷ್ಟವಾದ ಪರಿಮಿತಿಗಳನ್ನಿಟ್ಟಿದ್ದಾನೆ. (ಮೀಕ 6:⁠8) ಆದುದರಿಂದ, ಆ ಪರಿಮಿತಿಗಳನ್ನು ಹಾಗೂ ಮಾರ್ಗದರ್ಶನವನ್ನು ಅರ್ಥಮಾಡಿಕೊಂಡು, ಅದಕ್ಕನುಸಾರ ಜೀವಿಸಲು ಕಲಿಯುವುದು ಬುದ್ಧಿವಂತಿಕೆಯಾಗಿದೆ. “ಯೆಹೋವನ ಧರ್ಮಶಾಸ್ತ್ರದಲ್ಲಿ ಆನಂದಪಡುವ” ವ್ಯಕ್ತಿಯು ಧನ್ಯನು ಎಂದು ಕೀರ್ತನೆಗಾರನು ಹೇಳುತ್ತಾನೆ. “ಅವನ ಕಾರ್ಯವೆಲ್ಲವೂ ಸಫಲವಾಗುವದು.” (ಕೀರ್ತನೆ 1:​1-3) ಆದುದರಿಂದ ಅಂತಹ ಸಾಧ್ಯತೆಯ ಬಗ್ಗೆ ಹೆಚ್ಚನ್ನು ತಿಳಿದುಕೊಳ್ಳುವುದು ಖಂಡಿತವಾಗಿಯೂ ಸಾರ್ಥಕವಾಗಿರುವುದು.

ಮೊರಿಸ್‌ ಎಂಬುವರು ಒಬ್ಬ ನಿವೃತ್ತ ಶಾಲಾ ಶಿಕ್ಷಕರಾಗಿದ್ದಾರೆ. ಬೈಬಲಿಗೆ ಐತಿಹಾಸಿಕ ಮತ್ತು ಸಾಹಿತ್ಯಿಕ ಮೌಲ್ಯವಿದೆಯೆಂಬುದನ್ನು ಅವರು ಯಾವಾಗಲೂ ನಂಬುತ್ತಾ ಬಂದಿದ್ದರು. ಆದರೂ, ಅದು ದೇವರ ಪ್ರೇರಣೆಯಿಂದ ಬರೆಯಲ್ಪಟ್ಟಿದೆ ಎಂಬುದರ ಕುರಿತು ಅವರಿಗೆ ಶಂಕೆಯಿತ್ತು. ದೇವರು ತನ್ನ ಲಿಖಿತ ವಾಕ್ಯವನ್ನು ಮನುಷ್ಯರಿಗೆ ಏಕೆ ಕೊಟ್ಟನೆಂಬುದರ ಒಂದು ವಿವರಣೆಗೆ ಕಿವಿಗೊಟ್ಟ ನಂತರ, ಮೊರಿಸ್‌ ಬೇರೆ ಬೇರೆ ಬೈಬಲ್‌ ಪ್ರವಾದನೆಗಳನ್ನು ಪರೀಕ್ಷಿಸಿ ನೋಡಿದರು. ಯುವ ಪ್ರಾಯದಲ್ಲಿ ಅವರು ಪ್ರಾಚೀನಕಾಲದ ಇತಿಹಾಸ, ಸಾಹಿತ್ಯ, ವಿಜ್ಞಾನ ಮತ್ತು ಭೂಗೋಳಶಾಸ್ತ್ರವನ್ನು ಅಭ್ಯಾಸಮಾಡಿದ್ದರು. ಬೈಬಲಿನ ವಿಶ್ವಾಸಾರ್ಹತೆಯನ್ನು ಬೆಂಬಲಿಸುವಂಥ ಅಸಂಖ್ಯಾತ ಉದಾಹರಣೆಗಳನ್ನು ಅವರು ನೋಡಿರಲಿಲ್ಲ ಯಾಕೆಂದರೆ, ತಾನೇ ಬುದ್ಧಿವಂತ ಎಂದೆಣಿಸುತ್ತಿದ್ದೆನೆಂದು ಅವರು ಒಪ್ಪಿಕೊಳ್ಳುತ್ತಾರೆ. “ಐಷಾರಾಮ, ಧನ ಮತ್ತು ಜೀವನದ ಸುಖಭೋಗಗಳ ಹಿಂದೆ ಓಡುವುದರಲ್ಲಿಯೇ ನಾನು ಕಾರ್ಯಮಗ್ನನಾಗಿದ್ದೆ. ದುಃಖದ ಸಂಗತಿಯೇನೆಂದರೆ, ಬರೆಯಲ್ಪಟ್ಟಿರುವ ಪುಸ್ತಕಗಳಲ್ಲೇ ಅತಿ ಶ್ರೇಷ್ಠವಾದ ಪುಸ್ತಕದ ಸೊಬಗು ಮತ್ತು ಸತ್ಯತೆಯ ಕುರಿತಾಗಿ ನಾನು ತಿಳುವಳಿಕೆಯಿಲ್ಲದವನೂ, ಅಜ್ಞಾನಿಯೂ ಆಗಿದ್ದೆ.”

ಈಗ 70ರ ಪ್ರಾಯದಲ್ಲಿರುವ ಮೊರಿಸ್‌, ಯೇಸು ಅಪೊಸ್ತಲ ತೋಮನಿಗೆ ಪ್ರತ್ಯಕ್ಷನಾದಂಥ ವೃತ್ತಾಂತಕ್ಕೆ ಸೂಚಿಸುತ್ತಾ ಗಣ್ಯತೆಯಿಂದ ಹೇಳಿದ್ದು: “ನನ್ನ ಕೈ ‘ರಕ್ತಸ್ರವಿಸುತ್ತಿರುವ ಗಾಯವನ್ನು’ ಮುಟ್ಟುವಂತೆ ಸಹಾಯಮಾಡಲಾಗಿದೆ. ಇದು, ಬೈಬಲ್‌ ಸತ್ಯವಾಗಿದೆಯೆಂಬುದರ ಬಗ್ಗೆ ನನ್ನ ಮನಸ್ಸಿನಲ್ಲಿದ್ದ ಎಲ್ಲ ಸಂದೇಹಗಳನ್ನು ” (ಯೋಹಾನ 20:​24-29) ಹೃದಯದಲ್ಲಿರುವ ಗುಪ್ತ ಉದ್ದೇಶಗಳನ್ನು ಬೈಬಲ್‌ ಬಯಲುಪಡಿಸುತ್ತದೆಂದು ಅಪೊಸ್ತಲ ಪೌಲನು ಸರಿಯಾಗಿಯೇ ಹೇಳಿದನು. ಅಷ್ಟುಮಾತ್ರವಲ್ಲ ಅದು ಜೀವಿತಕ್ಕೆ ಅರ್ಥವನ್ನೂ ಕೊಡುತ್ತದೆ. ಅದು ನಿಜವಾಗಿಯೂ ಬದುಕಿನ ಪಠ್ಯಪುಸ್ತಕವಾಗಿದೆ.

ಅಸ್ತವ್ಯಸ್ತಗೊಂಡಿರುವ ಜೀವನವನ್ನು ಸ್ಥಿರಗೊಳಿಸುವುದು

ಕೆಟ್ಟ ಚಾಳಿಗಳನ್ನು ಬಿಟ್ಟುಬಿಡಲು ಸಹಾಯಮಾಡುವ ಸಲಹೆಯನ್ನು ಸಹ ಬೈಬಲ್‌ ಕೊಡುತ್ತದೆ. ಉದಾಹರಣೆಗೆ, ಡ್ಯಾನಿಯೆಲ್‌ ಎಂಬುವನಿಗೆ ಧೂಮಪಾನ ಮಾಡುವ, ಪಾರ್ಟಿಗಳಿಗೆ ಹೋಗುವ ಹುಚ್ಚು ಮತ್ತು ಮದ್ಯಪಾನದ ದುರುಪಯೋಗದಂತಹ ಕೆಟ್ಟ ಅಭ್ಯಾಸಗಳಿದ್ದವು. ಆದರೆ ಅವನು ಅದೆಲ್ಲವನ್ನು ಬಿಟ್ಟುಬಿಟ್ಟನು. (ರೋಮಾಪುರ 13:13; 2 ಕೊರಿಂಥ 7:1; ಗಲಾತ್ಯ 5:​19-21) ವಾಸ್ತವದಲ್ಲಿ ಅಂಥ ಚಾಳಿಗಳನ್ನು ಕಿತ್ತೊಗೆಯಲು ಮತ್ತು “ನೂತನಸ್ವಭಾವವನ್ನು” ಧರಿಸಿಕೊಳ್ಳಲು ದೃಢಸಂಕಲ್ಪದಿಂದ ಕೂಡಿದ ಪ್ರಯತ್ನವು ಬೇಕಾಗಿರುತ್ತದೆ. (ಎಫೆಸ 4:​22-24) “ನಾವು ಅಪರಿಪೂರ್ಣರಾಗಿರುವುದರಿಂದ ಅದೊಂದು ಸವಾಲಾಗಿತ್ತು” ಎಂದು ಡ್ಯಾನಿಯೇಲ್‌ ಹೇಳುತ್ತಾನೆ. ಹಾಗಿದ್ದರೂ, ಅವನು ಅದನ್ನು ಮಾಡಲು ಶಕ್ತನಾದನು. ಈಗ ಡ್ಯಾನಿಯೇಲ್‌ ಪ್ರತಿ ದಿನ ತಪ್ಪದೆ ಬೈಬಲನ್ನು ಓದುತ್ತಾನೆ ಮತ್ತು ಇದು ಅವನು ಯೆಹೋವನೊಂದಿಗೆ ನಿಕಟವಾಗಿರಲು ಸಹಾಯಮಾಡುತ್ತದೆ.

ಆದರೆ ಅವನಿಗೆ ಹಿಂದಿನಿಂದಲೂ ಬೈಬಲನ್ನು ಓದುವ ಅಭ್ಯಾಸವಿರಲಿಲ್ಲ. ಆದರೂ ಅವನು ದೊಡ್ಡವನಾಗುತ್ತಾ ಇದ್ದಾಗ ಬೈಬಲಿನ ಕುರಿತಾಗಿ ಅವನಿಗೆ ತುಂಬ ಗೌರವವಿತ್ತು ಮತ್ತು ಪ್ರತಿ ರಾತ್ರಿ ದೇವರಿಗೆ ಪ್ರಾರ್ಥನೆಮಾಡುತ್ತಿದ್ದನು. ಹೀಗಿದ್ದರೂ, ಎಲ್ಲಿಯೋ ಏನೋ ಕೊರತೆಯಿದ್ದಂತೆ ಅವನಿಗೆ ಅನಿಸುತ್ತಿತ್ತು. ಅವನಿಗೆ ಸಂತೋಷ ಎಂಬುದು ಇರಲಿಲ್ಲ. ಆದರೆ ಅವನು ಪ್ರಥಮ ಬಾರಿ ಬೈಬಲಿನಲ್ಲಿ ಯೆಹೋವ ಎಂಬ ದೇವರ ಹೆಸರನ್ನು ನೋಡಿದಾಗ ಒಂದು ದೊಡ್ಡ ಬದಲಾವಣೆಯಾಯಿತು. (ವಿಮೋಚನಕಾಂಡ 6:3; ಕೀರ್ತನೆ 83:18) ಅಂದಿನಿಂದ, ಅವನು ಯೆಹೋವನ ಹೆಸರನ್ನು ಹಿಡಿದು ಪ್ರಾರ್ಥನೆಮಾಡಿದನು. ಮತ್ತು ಅವನು ತನ್ನ ಪ್ರಾರ್ಥನೆಗಳಲ್ಲಿ ತನ್ನ ಮನದಾಳದಲ್ಲಿದ್ದ ಹಾಗೂ ವೈಯಕ್ತಿಕವಾದ ವಿಚಾರಗಳನ್ನು ದೇವರಿಗೆ ತಿಳಿಸಲು ಶಕ್ತನಾದನು. “ಯೆಹೋವನು ನನಗೆ ತೀರ ಹತ್ತಿರದ ವ್ಯಕ್ತಿಯಾದನು, ಮತ್ತು ಈಗಲೂ ಆತನೇ ನನ್ನ ಅತ್ಯಾಪ್ತ ಸ್ನೇಹಿತನಾಗಿದ್ದಾನೆ.”

ಬೈಬಲಿನ ಕುರಿತಾಗಿ ಕಲಿಯುವ ಮುಂಚೆ, ಡ್ಯಾನಿಯೆಲನಿಗೆ ಭವಿಷ್ಯತ್ತಿನ ಕುರಿತಾಗಿ ಒಂದು ನಿರಾಶಾದಾಯಕ ದೃಷ್ಟಿಕೋನವಿತ್ತು. ಅವನು ಹೇಳುವುದು: “ಲೋಕದಲ್ಲಿ ಏನು ನಡೆಯುತ್ತಿದೆಯೆಂಬುದನ್ನು ಒಬ್ಬ ಸಾಧಾರಣ ವ್ಯಕ್ತಿ ಸಹ ಗ್ರಹಿಸಬಲ್ಲನು. ಇದರಿಂದಾಗಿ ನಾನು ಹೆದರಿಹೋಗಿದ್ದೆ, ಮತ್ತು ಅದರ ಬಗ್ಗೆ ಯೋಚಿಸದೇ ಇರಲಿಕ್ಕಾಗಿ ಬಹಳ ಕಾರ್ಯಮಗ್ನನಾಗಿರಲು ಪ್ರಯತ್ನಿಸುತ್ತಿದ್ದೆ.” ಆದರೆ ದೇವರು ಈ ಭೂಮಿಯನ್ನು ಶುದ್ಧೀಕರಿಸಿ, ನ್ಯಾಯವನ್ನು ಸ್ಥಾಪಿಸಲಿದ್ದಾನೆ ಮತ್ತು ಆಗ ವಿಧೇಯ ಮನುಷ್ಯರು ನಿತ್ಯ ಶಾಂತಿ ಹಾಗೂ ಸಂತೋಷದಲ್ಲಿ ಆನಂದಿಸುವರು ಎಂಬುದು ನಂತರವೇ ಅವನಿಗೆ ಗೊತ್ತಾಯಿತು. (ಕೀರ್ತನೆ 37:​10, 11; ದಾನಿಯೇಲ 2:44; ಪ್ರಕಟನೆ 21:​3, 4) ಈಗ ಡ್ಯಾನಿಯೆಲನಿಗೆ ಒಂದು ಖಚಿತವಾದ ನಿರೀಕ್ಷೆಯಿದೆ. ಬೈಬಲಿನ, ಈ ಸ್ಥಿರಗೊಳಿಸುವ ಪ್ರಭಾವದಿಂದಾಗಿ ಅವನು ಜೀವಿತದ ಕುರಿತಾಗಿ ಒಂದು ಸಕಾರಾತ್ಮಕ ಹೊರನೋಟವನ್ನು ಕಾಪಾಡಿಕೊಳ್ಳಲು ಶಕ್ತನಾಗಿದ್ದಾನೆ.

ಭಾವನಾತ್ಮಕ ಸಮಸ್ಯೆಗಳನ್ನು ನಿಭಾಯಿಸಲು ಸಹಾಯ

ಜಾರ್ಜ್‌ ಏಳು ವರ್ಷದವನಾಗಿದ್ದಾಗ ಅವನ ತಾಯಿ ತೀರಿಹೋದರು. ಅವನು ರಾತ್ರಿ ನಿದ್ದೆಮಾಡಲು ಹೆದರುತ್ತಿದ್ದನು, ಯಾಕೆಂದರೆ ತಾನು ಮರುದಿನ ಏಳುವೆನೆಂಬ ಭರವಸೆ ಅವನಿಗಿರಲಿಲ್ಲ. ಮರಣ ಮತ್ತು ಪುನರುತ್ಥಾನದ ಕುರಿತಾಗಿ ಯೇಸು ಹೇಳಿದಂತಹ ಮಾತುಗಳನ್ನು ಅವನು ಬೈಬಲಿನಲ್ಲಿ ಓದಿದನು: “ಸಮಾಧಿಗಳಲ್ಲಿರುವವರೆಲ್ಲರು ಆತನ ಧ್ವನಿಯನ್ನು ಕೇಳಿ ಎದ್ದು ಹೊರಗೆ ಬರುವ ಕಾಲ ಬರುತ್ತದೆ.” ಅಷ್ಟುಮಾತ್ರವಲ್ಲ ಯೇಸುವಿನ ಈ ಮಾತುಗಳು ಸಹ ಅವನ ಮನಮುಟ್ಟಿದವು: “ನಾನೇ ಪುನರುತ್ಥಾನವೂ ಜೀವವೂ ಆಗಿದ್ದೇನೆ; ನನ್ನನ್ನು ನಂಬುವವನು ಸತ್ತರೂ ಬದುಕುವನು.” (ಯೋಹಾನ 5:28, 29; 11:25) ಆ ವಿಚಾರಗಳು, ಅವನಿಗೆ ಸಮಂಜಸವೂ, ತರ್ಕಬದ್ಧವೂ ಆಗಿರುವಂತೆ ತೋರಿದವು ಮತ್ತು ಅವನಿಗೆ ಸಾಂತ್ವನವನ್ನೂ ನೀಡಿದವು. “ಈ ಸತ್ಯವು ಮನಸ್ಸನ್ನು ಮಾತ್ರವಲ್ಲ, ಹೃದಯವನ್ನೂ ಸ್ಪರ್ಶಿಸುತ್ತದೆ” ಎಂದು ಜಾರ್ಜ್‌ ಹೇಳುತ್ತಾನೆ.

ಈ ಹಿಂದೆ ತಿಳಿಸಲ್ಪಟ್ಟಿರುವ ಡ್ಯಾನಿಯೆಲನಿಗೆ ಬೇರೆ ರೀತಿಯ ಭಯಗಳಿದ್ದವು. ಅವನ ತಾಯಿಗೆ, ಅವನನ್ನು ಒಬ್ಬಳೇ ನೋಡಿಕೊಳ್ಳಲು ಸಾಧ್ಯವಾಗಲಿಲ್ಲ. ಆದುದರಿಂದ ಅವನನ್ನು ಒಂದರ ನಂತರ ಇನ್ನೊಂದು, ಹೀಗೆ ಅನೇಕ ಅನಾಥಾಲಯಗಳಲ್ಲಿ ಇರಿಸಲಾಯಿತು. ತಾನು ಹೊರಗಿನವನು ಎಂಬ ಭಾವನೆ ಯಾವಾಗಲೂ ಅವನಲ್ಲಿರುತ್ತಿತ್ತು, ಮತ್ತು ಪ್ರೀತಿಯ ಹೊಳೆಯನ್ನೇ ಹರಿಸುತ್ತಿರುವ ಒಂದು ಕುಟುಂಬದ ಸದಸ್ಯನಾಗಿರಲು ಅವನು ಹಾತೊರೆಯುತ್ತಿದ್ದನು. ಕಟ್ಟಕಡೆಗೆ ಅವನಿಗೆ ಅದು ಸಿಕ್ಕಿತು. ಹೇಗೆ? ಬೈಬಲನ್ನು ಅಭ್ಯಾಸಿಸುವ ಮೂಲಕವೇ. ಯೆಹೋವನ ಸಾಕ್ಷಿಗಳ ಕ್ರೈಸ್ತ ಸಭೆಯೊಂದಿಗೆ ಅವನ ಸಂಪರ್ಕವಾಯಿತು ಮತ್ತು ಅವನು ಅವರೊಂದಿಗೆ ಸಹವಾಸಮಾಡಲಾರಂಭಿಸಿದನು. ಹೀಗೆ, ಅವನು ಒಂದು ಆತ್ಮಿಕ ಕುಟುಂಬದ ಸದಸ್ಯನಾದನು ಮತ್ತು ಇತರರು ಅವನನ್ನು ತಮ್ಮ ಕುಟುಂಬದವನೋಪಾದಿ ಸ್ವೀಕರಿಸಿ ಪ್ರೀತಿಸಲಾರಂಭಿಸಿದರು. ಹೌದು, ಬೈಬಲ್‌ ವ್ಯಾವಹಾರಿಕ ರೀತಿಯಲ್ಲಿ ಮಾತ್ರವಲ್ಲ, ಭಾವನಾತ್ಮಕ ಸಮಸ್ಯೆಗಳನ್ನು ಬಗೆಹರಿಸುವುದರಲ್ಲಿಯೂ ಉಪಯುಕ್ತವಾಗಿದೆ.

ಯೆಹೋವನು, ನಮ್ಮ ಹೃದಯದಲ್ಲೇನಿದೆ ಎಂಬುದನ್ನು ನೋಡುತ್ತಾನೆ ಮತ್ತು ನಾವು ಯಾವುದಕ್ಕಾಗಿ ಹುಡುಕುತ್ತಿದ್ದೇವೆ ಎಂಬುದು ಆತನಿಗೆ ತಿಳಿದಿದೆಯೆಂಬುದನ್ನು ಮನಸ್ಸಿನಲ್ಲಿಡಿ. ದೇವರು ‘ಹೃದಯಗಳನ್ನು ಪರೀಕ್ಷಿಸುತ್ತಾನೆ’ ಮತ್ತು ಆತನು, ‘ಪ್ರತಿಯೊಬ್ಬನಿಗೂ ಅವನವನ ನಡತೆಗೆ ತಕ್ಕ ಹಾಗೆ’ ಪ್ರತಿಫಲ ಕೊಡುತ್ತಾನೆ.​—⁠ಜ್ಞಾನೋಕ್ತಿ 21:2; ಯೆರೆಮೀಯ 17:⁠10.

ಕುಟುಂಬ ಜೀವನದ ಬಗ್ಗೆ ವ್ಯಾವಹಾರಿಕ ಸಲಹೆ

ಮಾನವ ಸಂಬಂಧಗಳ ವಿಷಯದಲ್ಲೂ ಬೈಬಲ್‌ ವ್ಯಾವಹಾರಿಕ ಸಲಹೆಯನ್ನು ಕೊಡುತ್ತದೆ. ಜಾರ್ಜ್‌ ಹೇಳುವುದು: “ವ್ಯಕ್ತಿತ್ವ ಘರ್ಷಣೆಗಳು ಇಲ್ಲವೇ ಭಿನ್ನಾಭಿಪ್ರಾಯಗಳು, ಜೀವಿತದಲ್ಲಿನ ಅತಿ ಸಂಕಷ್ಟಕರ ಸನ್ನಿವೇಶಗಳಾಗಿವೆ.” ಅವನು ಅಂಥ ಸನ್ನಿವೇಶಗಳಲ್ಲಿರುವಾಗ ಏನು ಮಾಡುತ್ತಾನೆ? “ನನ್ನ ವಿರುದ್ಧ ಯಾರಿಗಾದರೂ ಮನಸ್ಸಿನಲ್ಲಿ ಏನಾದರೂ ಇದೆಯೆಂದು ನನಗೆ ಗೊತ್ತಾಗುವಲ್ಲಿ, ನಾನು ಮತ್ತಾಯ 5:​23, 24ರಲ್ಲಿರುವ ನೇರವಾದ ಸಲಹೆಯನ್ನು ಅನ್ವಯಿಸಿಕೊಳ್ಳುತ್ತೇನೆ: ‘ನಿನ್ನ ಸಹೋದರನ ಸಂಗಡ ಒಂದಾಗು.’ ನಾನು ಆ ಘರ್ಷಣೆಯ ಕುರಿತಾಗಿ ಮಾತಾಡಲು ಶಕ್ತನಾಗಿರುವುದರಿಂದ, ನನಗೆ ಫಲಿತಾಂಶಗಳು ಸಿಕ್ಕಿವೆ. ಬೈಬಲಿನಲ್ಲಿ ತಿಳಿಸಲ್ಪಟ್ಟಿರುವ ದೇವಶಾಂತಿಯನ್ನು ನಾನು ಅನುಭವಿಸಲು ಶಕ್ತನಾಗಿದ್ದೇನೆ. ಬೈಬಲಿನ ಸಲಹೆಯು ಖಂಡಿತವಾಗಿಯೂ ಕಾರ್ಯಸಾಧಕವಾಗಿದೆ ಮಾತ್ರವಲ್ಲ ಅದು ತುಂಬ ವ್ಯಾವಹಾರಿಕವೂ ಆಗಿದೆ.”​—⁠ಫಿಲಿಪ್ಪಿ 4:​6, 7.

ಗಂಡಹೆಂಡತಿಯರ ನಡುವೆ ಭಿನ್ನಾಭಿಪ್ರಾಯವಿರುವಾಗ, ಇಬ್ಬರೂ ‘ಕಿವಿಗೊಡುವದರಲ್ಲಿ ತೀವ್ರರೂ ಮತ್ತು ಮಾತಾಡುವದರಲ್ಲಿ ನಿಧಾನಿಗಳೂ’ ಆಗಿರಬೇಕು. (ಯಾಕೋಬ 1:19) ಈ ಸಲಹೆಯನ್ನು ಅನ್ವಯಿಸುವುದರಿಂದ ಸಂವಾದವು ಉತ್ತಮಗೊಳ್ಳುತ್ತದೆ. ಜಾರ್ಜ್‌ ಕೂಡಿಸಿ ಹೇಳಿದ್ದು: “ನನ್ನ ಹೆಂಡತಿಯನ್ನು ನನ್ನಂತೆಯೇ ಪ್ರೀತಿಸಿ, ಉಪಚರಿಸಬೇಕೆಂಬ ಸಲಹೆಯನ್ನು ನಾನು ಅನ್ವಯಿಸಿಕೊಳ್ಳುವಾಗ, ನಾನು ತತ್‌ಕ್ಷಣವೇ ಅದರ ಫಲಿತಾಂಶಗಳನ್ನು ನೋಡಬಲ್ಲೆ. ಆಗ ನನ್ನನ್ನು ಗೌರವಿಸಲು ಅವಳಿಗೆ ಹೆಚ್ಚು ಸುಲಭವಾಗುತ್ತದೆ.” (ಎಫೆಸ 5:​28-33) ಹೌದು, ನಾವು ನಮ್ಮ ಸ್ವಂತ ಅಪರಿಪೂರ್ಣತೆಗಳನ್ನು ಒಪ್ಪಿಕೊಂಡು, ಅವುಗಳೊಂದಿಗೆ ವ್ಯವಹರಿಸುವಂತೆ ಮತ್ತು ಇತರರ ಅಪರಿಪೂರ್ಣತೆಗಳನ್ನೂ ಯಶಸ್ವಿಪೂರ್ವಕವಾಗಿ ಹೇಗೆ ನಿಭಾಯಿಸಬಹುದೆಂಬುದನ್ನು ಬೈಬಲ್‌ ಕಲಿಸುತ್ತದೆ.

ಸದಾ ಬಾಳುವಂಥ ಸಲಹೆ

ವಿವೇಕಿ ರಾಜನಾದ ಸೊಲೊಮೋನನು ಹೇಳಿದ್ದು: “ಸ್ವಬುದ್ಧಿಯನ್ನೇ ಆಧಾರಮಾಡಿಕೊಳ್ಳದೆ ಪೂರ್ಣಮನಸ್ಸಿನಿಂದ ಯೆಹೋವನಲ್ಲಿ ಭರವಿಸವಿಡು. ನಿನ್ನ ಎಲ್ಲಾ ನಡವಳಿಯಲ್ಲಿ ಆತನ ಚಿತ್ತಕ್ಕೆ ವಿಧೇಯನಾಗಿರು; ಆತನೇ ನಿನ್ನ ಮಾರ್ಗಗಳನ್ನು ಸರಾಗಮಾಡುವನು.” (ಜ್ಞಾನೋಕ್ತಿ 3:5, 6) ಈ ಮಾತುಗಳಲ್ಲಿ ಗಾಢಾರ್ಥವಿದ್ದರೂ, ಅವು ಎಷ್ಟು ಸರಳವಾಗಿವೆ!

ಒಳ್ಳೆಯದನ್ನು ಮಾಡುವ ಶಕ್ತಿ ಬೈಬಲಿಗಿದೆ. ದೇವರನ್ನು ಪ್ರೀತಿಸುವವರು, ತಮ್ಮ ಜೀವಿತವನ್ನು ಆತನ ಚಿತ್ತಕ್ಕೆ ಹೊಂದಿಕೆಯಲ್ಲಿ ತಂದು, ‘ಯೆಹೋವನ ಧರ್ಮಶಾಸ್ತ್ರವನ್ನು ಅನುಸರಿಸಿ ನಡೆಯುವುದರಲ್ಲಿ’ ಸಂತೋಷವನ್ನು ಕಂಡುಕೊಳ್ಳುವಂತೆ ಅದು ಸಾಧ್ಯಮಾಡುತ್ತದೆ. (ಕೀರ್ತನೆ 119:⁠1) ನಮ್ಮ ಪರಿಸ್ಥಿತಿಗಳು ಏನೇ ಆಗಿರಲಿ, ಬೈಬಲಿನಲ್ಲಿ ನಮಗೆ ಬೇಕಾದಂತಹ ಎಲ್ಲ ಮಾರ್ಗದರ್ಶನಗಳು ಮತ್ತು ಸಲಹೆಗಳು ಇವೆ. (ಯೆಶಾಯ 48:​17, 18) ಅದನ್ನು ದಿನಾಲೂ ಓದಿರಿ. ಓದಿದ ವಿಷಯದ ಕುರಿತು ಮನನ ಮಾಡಿರಿ ಮತ್ತು ಅದನ್ನು ಜೀವನದಲ್ಲಿ ಅನ್ವಯಿಸಿಕೊಳ್ಳಿರಿ. ಆಗ ನಿಮ್ಮ ಮನಸ್ಸು ನಿರಾಳವಾಗಿರುವುದು ಮತ್ತು ಶುದ್ಧವೂ, ಹಿತಕರವೂ ಆದ ಸಂಗತಿಗಳ ಮೇಲೆ ಕೇಂದ್ರಿಕೃತವಾಗಿರುವುದು. (ಫಿಲಿಪ್ಪಿ 4:​8, 9) ಜೀವಿಸುವುದು ಹೇಗೆ ಮತ್ತು ಜೀವನವನ್ನು ಆನಂದಿಸುವುದು ಹೇಗೆಂಬುದನ್ನು ನೀವು ಕಲಿತುಕೊಳ್ಳುವಿರಿ ಮಾತ್ರವಲ್ಲ, ಜೀವದಾತನನ್ನು ಪ್ರೀತಿಸುವುದು ಹೇಗೆಂಬುದನ್ನೂ ನೀವು ಕಲಿತುಕೊಳ್ಳುವಿರಿ.

ಹೀಗೆ ಮಾಡುವುದರಿಂದ, ಬೈಬಲ್‌ ನಿಮಗೆ ಕೇವಲ ಒಂದು ಒಳ್ಳೆಯ ಪುಸ್ತಕವಾಗಿರುವುದಿಲ್ಲ. ಬದಲಾಗಿ ಇತರರು ಅನುಭವಿಸಿ ನೋಡಿರುವಂತೆ ಅದು ನಿಜವಾಗಿಯೂ ಬದುಕಿನ ಪಠ್ಯಪುಸ್ತಕವಾಗಿ ರುಜುವಾಗುವುದು!

[ಪುಟ 6ರಲ್ಲಿರುವ ಚಿತ್ರ]

ಹಾನಿಕಾರಿ ಚಾಳಿಗಳನ್ನು ಬಿಟ್ಟುಬಿಡುವ ನಿಮ್ಮ ದೃಢಸಂಕಲ್ಪವನ್ನು ಬೈಬಲ್‌ ಬಲಪಡಿಸಬಲ್ಲದು

[ಪುಟ 7ರಲ್ಲಿರುವ ಚಿತ್ರ]

ದೇವರಿಗೆ ನಿಕಟರಾಗುವುದು ಹೇಗೆಂಬುದನ್ನು ಬೈಬಲ್‌ ಕಲಿಸುತ್ತದೆ