ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಜನರ ಮಧ್ಯೆ ಇರುವ ವ್ಯತ್ಯಾಸವನ್ನು ನೋಡಿ

ಜನರ ಮಧ್ಯೆ ಇರುವ ವ್ಯತ್ಯಾಸವನ್ನು ನೋಡಿ

“ಶಿಷ್ಟರಿಗೂ ದುಷ್ಟರಿಗೂ . . . ಇರುವ ತಾರತಮ್ಯವನ್ನು . . . ಕಾಣುವಿರಿ.”—ಮಲಾ. 3:18.

ಗೀತೆಗಳು: 61, 53

1, 2. ಇಂದು ಯೆಹೋವನ ಸೇವಕರು ಯಾವ ವಿಷಯದಲ್ಲಿ ಜಾಗ್ರತೆ ವಹಿಸಬೇಕು? (ಲೇಖನದ ಆರಂಭದ ಚಿತ್ರಗಳನ್ನು ನೋಡಿ.)

ಅನೇಕ ಡಾಕ್ಟರ್‌ಗಳು ಮತ್ತು ನರ್ಸ್‌ಗಳು ಸಾಂಕ್ರಾಮಿಕ ರೋಗದಿಂದ ಬಳಲುತ್ತಿರುವವರಿಗೆ ಚಿಕಿತ್ಸೆ ಕೊಡುತ್ತಾರೆ. ರೋಗಿಗಳಿಗೆ ಸಹಾಯ ಮಾಡುವ ಉದ್ದೇಶದಿಂದ ಅವರು ಶುಶ್ರೂಷೆ ಮಾಡುತ್ತಾರೆ. ಇದೆಲ್ಲ ಮಾಡುವಾಗ ಅವರು ತಮ್ಮ ಆರೋಗ್ಯದ ಬಗ್ಗೆ ಜಾಗ್ರತೆ ವಹಿಸಬೇಕು. ಏಕೆಂದರೆ ಯಾವ ಕಾಯಿಲೆಗಳನ್ನು ವಾಸಿಮಾಡಲು ಅವರು ಶ್ರಮಿಸುತ್ತಿದ್ದಾರೋ ಆ ಕಾಯಿಲೆಗಳು ಅವರಿಗೇ ಬಂದುಬಿಡುವ ಸಾಧ್ಯತೆ ಇದೆ. ಯೆಹೋವನ ಸೇವಕರಾದ ನಾವು ಇಂಥದ್ದೇ ಸನ್ನಿವೇಶದಲ್ಲಿದ್ದೇವೆ. ಯಾಕೆಂದರೆ ದೇವರ ಗುಣಗಳಿಗಿಂತ ಸಂಪೂರ್ಣ ಭಿನ್ನವಾಗಿರುವಂಥ ಗುಣಲಕ್ಷಣಗಳಿರುವ ಜನರ ಮಧ್ಯೆ ನಮ್ಮಲ್ಲಿ ಅನೇಕರು ವಾಸಿಸುತ್ತೇವೆ ಮತ್ತು ಕೆಲಸಮಾಡುತ್ತೇವೆ. ನಾವು ಜಾಗ್ರತೆ ವಹಿಸದಿದ್ದರೆ ನಾವೂ ಅವರಂತೆ ಆಗಿಬಿಡುವ ಸಾಧ್ಯತೆ ಇದೆ.

2 ಕಡೇ ದಿವಸಗಳಲ್ಲಿ ದೇವರನ್ನು ಪ್ರೀತಿಸದ ಜನರು ಆತನಿಟ್ಟಿರುವ ಸರಿತಪ್ಪಿನ ಮಟ್ಟಗಳನ್ನು ಅಲಕ್ಷಿಸುತ್ತಾರೆ. ಅಂಥ ಜನರಲ್ಲಿರುವ ಕೆಟ್ಟ ಗುಣಗಳ ಬಗ್ಗೆ ಅಪೊಸ್ತಲ ಪೌಲನು ತಿಮೊಥೆಯನಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾನೆ. ಈ ಕೆಟ್ಟ ಗುಣಗಳು ಲೋಕದ ಅಂತ್ಯ ಹತ್ತಿರಹತ್ತಿರ ಬರುತ್ತಿದ್ದಂತೆ ಜನರಲ್ಲಿ ಹೆಚ್ಚಾಗುತ್ತಾ ಹೋಗುತ್ತದೆ ಎಂದು ಪೌಲ ಹೇಳಿದನು. (2 ತಿಮೊಥೆಯ 3:1-5, 13 ಓದಿ.) ಜನರಲ್ಲಿ ಇಂಥ ಗುಣಗಳನ್ನು ನೋಡಿ ನಮಗೆ ಆಘಾತ ಆಗಬಹುದಾದರೂ ಅವರು ಯೋಚನೆ ಮಾಡುವ, ಮಾತಾಡುವ, ನಡಕೊಳ್ಳುವ ರೀತಿ ನಮ್ಮನ್ನೂ ಪ್ರಭಾವಿಸಬಲ್ಲದು. (ಜ್ಞಾನೋ. 13:20) ಈ ಲೇಖನದಲ್ಲಿ, ಈ ಕೆಟ್ಟ ಗುಣಗಳು ದೇವಜನರಲ್ಲಿರುವ ಗುಣಗಳಿಗಿಂತ ಹೇಗೆ ಭಿನ್ನವಾಗಿದೆ ಎಂದು ಚರ್ಚಿಸಲಿದ್ದೇವೆ. ಯೆಹೋವನ ಬಗ್ಗೆ ಬೇರೆಯವರಿಗೆ ಕಲಿಸುವುದು ನಮ್ಮ ಜವಾಬ್ದಾರಿಯಾದರೂ ಜನರಲ್ಲಿರುವ ಕೆಟ್ಟ ಗುಣಗಳು ನಮಗೆ ಬರದಂತೆ ಹೇಗೆ ಜಾಗ್ರತೆ ವಹಿಸಬಹುದೆಂದೂ ಕಲಿಯಲಿದ್ದೇವೆ.

3. ಯಾವ ರೀತಿಯ ಜನರ ಬಗ್ಗೆ 2 ತಿಮೊಥೆಯ 3:2-5​ರಲ್ಲಿ ತಿಳಿಸಲಾಗಿದೆ?

3 ಕಡೇ ದಿವಸಗಳಲ್ಲಿ “ನಿಭಾಯಿಸಲು ಕಷ್ಟಕರವಾದ ಕಠಿನಕಾಲಗಳು” ಬರುತ್ತವೆ ಎಂದು ಪೌಲ ಬರೆದನು. ನಂತರ ಈಗ ಜನರಲ್ಲಿ ಸರ್ವಸಾಮಾನ್ಯವಾಗಿರುವ 19 ಕೆಟ್ಟ ಗುಣಗಳನ್ನು ಪಟ್ಟಿಮಾಡಿದನು. ಈ ಗುಣಗಳು ರೋಮನ್ನರಿಗೆ 1:29-31​ರಲ್ಲಿ ತಿಳಿಸಲಾಗಿರುವ ಕೆಟ್ಟ ಗುಣಗಳ ತರನೇ ಇದೆ. ಆದರೆ ಪೌಲನು ತಿಮೊಥೆಯನಿಗೆ ಬರೆದ ಪತ್ರದಲ್ಲಿ ಬಳಸಿರುವ ಪದಗಳು ಕ್ರೈಸ್ತ ಗ್ರೀಕ್‌ ಶಾಸ್ತ್ರಗ್ರಂಥದಲ್ಲಿ ಬೇರೆಲ್ಲೂ ಸಿಗಲ್ಲ. ಅವನು ತನ್ನ ಮಾತುಗಳನ್ನು “ಜನರು” ಎಂದು ಆರಂಭಿಸಿದನು. ಆದರೆ ಅವನು ತಿಳಿಸಿರುವ ಕೆಟ್ಟ ಗುಣಗಳು ಎಲ್ಲ ಮನುಷ್ಯರಲ್ಲಿಲ್ಲ. ನಿಜ ಕ್ರೈಸ್ತರಲ್ಲಿ ಒಳ್ಳೇ ಗುಣಗಳಿವೆ.ಮಲಾಕಿಯ 3:18 ಓದಿ.

ನಮ್ಮ ಬಗ್ಗೆ ನಮಗಿರುವ ದೃಷ್ಟಿಕೋನ

4. ಹೆಮ್ಮೆಯಿಂದ ಉಬ್ಬಿಕೊಳ್ಳುವುದು ಅಂದರೇನು?

4 ಕಡೇ ದಿವಸಗಳಲ್ಲಿ ಅನೇಕರು ಸ್ವಪ್ರೇಮಿಗಳೂ ಹಣಪ್ರೇಮಿಗಳೂ ಆಗಿರುತ್ತಾರೆ ಎಂದು ಹೇಳಿದ ಮೇಲೆ ಪೌಲನು ಸ್ವಪ್ರತಿಷ್ಠೆಯುಳ್ಳವರು, ಅಹಂಕಾರಿಗಳು, ಹೆಮ್ಮೆಯಿಂದ ಉಬ್ಬಿಕೊಳ್ಳುವವರು ಇರುತ್ತಾರೆ ಎಂದು ಹೇಳಿದನು. ಈ ಗುಣಗಳಿರುವ ಜನರು ಅವರಲ್ಲಿರುವ ಸೌಂದರ್ಯ, ಸಾಮರ್ಥ್ಯ, ಸಂಪತ್ತು, ಸ್ಥಾನಮಾನದಿಂದಾಗಿ ತಾವು ಬೇರೆಯವರಿಗಿಂತ ಶ್ರೇಷ್ಠರು ಎಂದು ಹೆಚ್ಚಾಗಿ ನೆನಸುತ್ತಾರೆ. ಇಂಥವರು ಜನರ ಮೆಚ್ಚಿಕೆ, ಹೊಗಳಿಕೆಗಾಗಿ ಕಾಯುತ್ತಾ ಇರುತ್ತಾರೆ. ಈ ರೀತಿಯ ಜನರ ಬಗ್ಗೆ ಒಬ್ಬ ವಿದ್ವಾಂಸ ಹೀಗೆ ಬರೆದನು: “ಇಂಥ ಒಬ್ಬ ವ್ಯಕ್ತಿ ತನ್ನ ಹೃದಯದಲ್ಲಿ ಒಂದು ಚಿಕ್ಕ ಯಜ್ಞವೇದಿ ಕಟ್ಟಿಕೊಂಡು ತನ್ನನ್ನು ತಾನೇ ಆರಾಧಿಸುತ್ತಾನೆ.” ಇನ್ನು ಕೆಲವರು ಹೇಳುವಂತೆ, ಹೆಮ್ಮೆ ಎನ್ನುವುದು ಎಂಥ ಅಸಹ್ಯವಾದ ಗುಣವೆಂದರೆ ಹೆಮ್ಮೆಯಿರುವ ವ್ಯಕ್ತಿಗೇ ಅದನ್ನು ಬೇರೆಯವರಲ್ಲಿ ನೋಡಿದಾಗ ಸಹಿಸಕ್ಕಾಗಲ್ಲ.

5. ಯೆಹೋವನಿಗೆ ನಂಬಿಗಸ್ತರಾಗಿದ್ದ ಆತನ ಸೇವಕರು ಕೂಡ ಹೇಗೆ ಅಹಂಕಾರಿಗಳಾದರು?

5 ಯೆಹೋವನು ಹೆಮ್ಮೆ ಎನ್ನುವ ಗುಣವನ್ನು ದ್ವೇಷಿಸುತ್ತಾನೆ. ‘ಹೆಮ್ಮೆಯ ಕಣ್ಣುಗಳನ್ನು’ ಹಗೆಮಾಡುತ್ತಾನೆ. (ಜ್ಞಾನೋ. 6:16, 17) ನಿಜವೇನೆಂದರೆ, ಹೆಮ್ಮೆ ಒಬ್ಬ ವ್ಯಕ್ತಿಯನ್ನು ದೇವರಿಂದ ದೂರಮಾಡುತ್ತದೆ. (ಕೀರ್ತ. 10:4) ಹೆಮ್ಮೆ ಪಿಶಾಚನ ಗುಣ. (1 ತಿಮೊ. 3:6) ದುಃಖದ ಸಂಗತಿಯೇನಂದರೆ, ಈ ಕೆಟ್ಟ ಗುಣ ಯೆಹೋವನ ಕೆಲವು ನಿಷ್ಠಾವಂತ ಸೇವಕರಿಗೂ ಬಂದಿತ್ತು. ಉದಾಹರಣೆಗೆ, ಯೆಹೂದದ ರಾಜನಾದ ಉಜ್ಜೀಯನು ಅನೇಕ ವರ್ಷಗಳ ವರೆಗೆ ನಂಬಿಗಸ್ತನಾಗಿದ್ದನು. ಆದರೆ “ಅವನು ಬಲಿಷ್ಠನಾದ ಮೇಲೆ ಗರ್ವಿಷ್ಠನಾಗಿ ಭ್ರಷ್ಟನಾದನು; ತನ್ನ ದೇವರಾದ ಯೆಹೋವನಿಗೆ ದ್ರೋಹಿ” ಆದನು ಎಂದು ಬೈಬಲ್‌ ಹೇಳುತ್ತದೆ. ಎಷ್ಟರ ಮಟ್ಟಿಗೆಂದರೆ, ಅವನು ದೇವಾಲಯಕ್ಕೆ ಹೋಗಿ ಧೂಪಹಾಕಲು ಮುಂದಾದನು. ಇದನ್ನು ಮಾಡುವ ಅಧಿಕಾರ ಅವನಿಗಿರಲಿಲ್ಲ. ನಂತರ, ನಂಬಿಗಸ್ತನಾದ ರಾಜ ಹಿಜ್ಕೀಯನು ಕೂಡ ಸ್ವಲ್ಪ ಸಮಯಕ್ಕೆ ಅಹಂಕಾರಿ ಆಗಿಬಿಟ್ಟಿದ್ದನು.—2 ಪೂರ್ವ. 26:16; 32:25, 26.

6. (ಎ) ದಾವೀದನು ಅಹಂಕಾರಿಯಾಗಬಹುದಿತ್ತು ಯಾಕೆ? (ಬಿ) ಆದರೂ ಅವನು ಯಾಕೆ ದೀನನಾಗಿದ್ದನು?

6 ಕೆಲವರು ತಮಗೆ ಸೌಂದರ್ಯ, ಪ್ರಖ್ಯಾತಿ, ಸಂಗೀತ ಕಲೆ, ಕಟ್ಟುಮಸ್ತಿನ ದೇಹ ಅಥವಾ ಒಳ್ಳೇ ಸ್ಥಾನಮಾನ ಇರುವುದರಿಂದ ಅಹಂಕಾರಿಗಳು ಆಗಿಬಿಡುತ್ತಾರೆ. ದಾವೀದನಿಗೆ ಇದೆಲ್ಲ ಇತ್ತಾದರೂ ಜೀವಮಾನವಿಡೀ ದೀನನಾಗಿದ್ದನು. ಉದಾಹರಣೆಗೆ, ಗೊಲ್ಯಾತನನ್ನು ಕೊಂದ ಮೇಲೆ ಅವನಿಗೆ ರಾಜ ಸೌಲನು ತನ್ನ ಮಗಳನ್ನು ಮದುವೆ ಮಾಡಿಕೊಡುತ್ತೇನೆಂದು ಹೇಳಿದನು. ಅದಕ್ಕೆ ದಾವೀದನು “ಅರಸನ ಅಳಿಯನಾಗುವದಕ್ಕೆ ನಾನೆಷ್ಟರವನು? ಇಸ್ರಾಯೇಲ್ಯರಲ್ಲಿ ನನ್ನ ಕುಲವೂ ಕುಟುಂಬವೂ ಎಷ್ಟರವು” ಎಂದನು. (1 ಸಮು. 18:18) ದೀನತೆ ತೋರಿಸಲು ಅವನಿಗೆ ಯಾವುದು ಸಹಾಯ ಮಾಡಿತು? ಯೆಹೋವನು ದೀನನಾಗಿದ್ದು ತನಗೆ ಗಮನ ಕೊಟ್ಟದ್ದರಿಂದಲೇ ತನ್ನಲ್ಲಿ ಒಳ್ಳೇ ಗುಣಗಳು, ಸಾಮರ್ಥ್ಯಗಳು ಬಂದವು ಮತ್ತು ದೊಡ್ಡ ಸುಯೋಗಗಳು ಸಿಕ್ಕಿದವು ಎಂದು ದಾವೀದನಿಗೆ ಅನಿಸಿತು. (ಕೀರ್ತ. 113:5-8) ತನ್ನಲ್ಲಿರುವ ಪ್ರತಿಯೊಂದನ್ನೂ ಯೆಹೋವನೇ ಕೊಟ್ಟಿರುವುದು ಎಂದು ಅವನು ಅರ್ಥಮಾಡಿಕೊಂಡನು.—1 ಕೊರಿಂಥ 4:7​ನ್ನು ಹೋಲಿಸಿ.

7. ನಾವು ದೀನರಾಗಿರಲು ಯಾವುದು ಸಹಾಯ ಮಾಡುತ್ತದೆ?

7 ಇಂದು ಯೆಹೋವನ ಜನರು ದಾವೀದನಂತೆ ದೀನರಾಗಿರಲು ಶ್ರಮಿಸುತ್ತಾರೆ. ಸರ್ವೋನ್ನತನಾದ ಯೆಹೋವನೇ “ದೀನತೆ” ತೋರಿಸುತ್ತಾನೆ ಎನ್ನುವ ವಿಷಯ ನಮ್ಮ ಮನಸ್ಪರ್ಶಿಸುತ್ತದೆ. (ಕೀರ್ತ. 18:35, ನೂತನ ಲೋಕ ಭಾಷಾಂತರ) ಆದ್ದರಿಂದ “ಸಹಾನುಭೂತಿಯ ಕೋಮಲ ಮಮತೆಯನ್ನೂ ದಯೆಯನ್ನೂ ದೀನಮನಸ್ಸನ್ನೂ ಸೌಮ್ಯಭಾವವನ್ನೂ ದೀರ್ಘ ಸಹನೆಯನ್ನೂ ಧರಿಸಿಕೊಳ್ಳಿರಿ” ಎಂಬ ಬುದ್ಧಿವಾದವನ್ನು ಪಾಲಿಸಲು ಬಯಸುತ್ತೇವೆ. (ಕೊಲೊ. 3:12) ಪ್ರೀತಿ “ಜಂಬಕೊಚ್ಚಿಕೊಳ್ಳುವುದಿಲ್ಲ, ಉಬ್ಬಿಕೊಳ್ಳುವುದಿಲ್ಲ” ಎಂದೂ ನಮಗೆ ಗೊತ್ತು. (1 ಕೊರಿಂ. 13:4) ನಾವು ದೀನರಾಗಿರುವುದನ್ನು ಜನರು ನೋಡುವಾಗ ಯೆಹೋವನ ಬಗ್ಗೆ ತಿಳಿದುಕೊಳ್ಳಲು ಮನಸ್ಸುಮಾಡುತ್ತಾರೆ. ಸತ್ಯದಲ್ಲಿಲ್ಲದ ಗಂಡನೊಬ್ಬ ಪತ್ನಿಯ ಒಳ್ಳೇ ನಡತೆ ನೋಡಿ ಯೆಹೋವನ ಕಡೆ ಆಕರ್ಷಿತನಾಗುವಂತೆಯೇ ಜನರು ನಮ್ಮ ದೀನತೆ ನೋಡಿ ದೇವರ ಕಡೆಗೆ ಆಕರ್ಷಿತರಾಗಬಹುದು.—1 ಪೇತ್ರ 3:1, 2.

ಬೇರೆಯವರೊಂದಿಗೆ ನಾವು ನಡಕೊಳ್ಳುವ ರೀತಿ

8. (ಎ) ಮಕ್ಕಳು ಹೆತ್ತವರ ಮಾತು ಕೇಳದೇ ಇರುವುದರ ಬಗ್ಗೆ ಕೆಲವರ ಅಭಿಪ್ರಾಯ ಏನು? (ಬಿ) ಮಕ್ಕಳು ಏನು ಮಾಡಬೇಕೆಂದು ಬೈಬಲ್‌ ಹೇಳುತ್ತದೆ?

8 ಕಡೇ ದಿವಸಗಳಲ್ಲಿ ಜನರು ಬೇರೆಯವರ ಜೊತೆ ಹೇಗೆ ನಡಕೊಳ್ಳುತ್ತಾರೆ ಎಂದು ಪೌಲ ವಿವರಿಸಿದನು. ಮಕ್ಕಳು ಹೆತ್ತವರಿಗೆ ಅವಿಧೇಯರು ಆಗಿರುತ್ತಾರೆ ಎಂದು ಬರೆದನು. ಮಕ್ಕಳು ತಮ್ಮ ಹೆತ್ತವರ ಮಾತು ಕೇಳದಿರುವುದು ಸಹಜವಾದ ವಿಷಯ, ಅದರಲ್ಲೇನು ತಪ್ಪಿಲ್ಲ ಎಂದು ತೋರುವಂತೆ ಇಂದಿರುವ ಅನೇಕ ಪುಸ್ತಕಗಳು, ಚಲನಚಿತ್ರಗಳು, ಟೀವಿ ಕಾರ್ಯಕ್ರಮಗಳು ಮಾಡುತ್ತವೆ. ಆದರೆ ಸತ್ಯ ಏನೆಂದರೆ, ಬಲವಾದ ಸಮಾಜಕ್ಕೆ ಕುಟುಂಬಗಳು ಬುನಾದಿಯಾಗಿವೆ. ಆದರೆ ಮಕ್ಕಳ ಅವಿಧೇಯತೆ ಈ ಬುನಾದಿಯನ್ನೇ ಅಲುಗಾಡಿಸುತ್ತಿದೆ. ಈ ಸತ್ಯ ಎಷ್ಟೋ ವರ್ಷಗಳಿಂದ ಜನರಿಗೆ ಗೊತ್ತು. ಉದಾಹರಣೆಗೆ, ಪ್ರಾಚೀನ ಗ್ರೀಸ್‌ನಲ್ಲಿ, ಹೆತ್ತವರ ಮೇಲೆ ಕೈಮಾಡಿದ ವ್ಯಕ್ತಿ ಸಮಾಜದಲ್ಲಿ ಅವನ ಹಕ್ಕುಗಳನ್ನು ಕಳೆದುಕೊಳ್ಳುತ್ತಿದ್ದನು. ರೋಮಿನ ಕಾನೂನಿನ ಪ್ರಕಾರ, ತಂದೆಯನ್ನು ಹೊಡೆಯುವವನಿಗೆ ಕೊಲೆಗಾರನಿಗೆ ಸಿಗುವ ಶಿಕ್ಷೆಯನ್ನು ಕೊಡುವ ಸಾಧ್ಯತೆ ಇತ್ತು. ಹೀಬ್ರು ಮತ್ತು ಗ್ರೀಕ್‌ ಶಾಸ್ತ್ರಗ್ರಂಥದಲ್ಲಿ ಮಕ್ಕಳು ತಂದೆತಾಯಿಯನ್ನು ಸನ್ಮಾನಿಸಬೇಕು ಎಂಬ ಆಜ್ಞೆಯೇ ಇದೆ.—ವಿಮೋ. 20:12; ಎಫೆ. 6:1-3.

9. ಹೆತ್ತವರಿಗೆ ವಿಧೇಯರಾಗಲು ಮಕ್ಕಳಿಗೆ ಯಾವುದು ಸಹಾಯ ಮಾಡುತ್ತದೆ?

9 ಹೆತ್ತವರಿಗೆ ಅವಿಧೇಯತೆ ತೋರಿಸುವ ಲೋಕದ ಮನೋಭಾವ ತಮ್ಮನ್ನು ಪ್ರಭಾವಿಸದಿರಲು ಮಕ್ಕಳು ಏನು ಮಾಡಬಹುದು? ಹೆತ್ತವರು ತಮಗೋಸ್ಕರ ಮಾಡಿರುವ ಎಲ್ಲ ಒಳ್ಳೇ ವಿಷಯಗಳ ಬಗ್ಗೆ ಮಕ್ಕಳು ಯೋಚಿಸಬೇಕು. ಆಗ ಅವರಲ್ಲಿ ಕೃತಜ್ಞತಾಭಾವ ಮೂಡಿ ಹೆತ್ತವರ ಮಾತು ಕೇಳಬೇಕು ಎಂಬ ಮನಸ್ಸು ಬರುತ್ತದೆ. ಹೆತ್ತವರಿಗೆ ಮಕ್ಕಳು ವಿಧೇಯರಾಗಬೇಕು ಎಂದು ನಮ್ಮೆಲ್ಲರ ತಂದೆಯಾದ ದೇವರು ಕೂಡ ಬಯಸುತ್ತಾನೆ ಎಂದು ಅವರು ಅರ್ಥಮಾಡಿಕೊಳ್ಳಬೇಕು. ಸ್ನೇಹಿತರ ಹತ್ತಿರ ಹೆತ್ತವರ ಬಗ್ಗೆ ಒಳ್ಳೇ ವಿಷಯಗಳನ್ನು ಮಾತಾಡಬೇಕು. ಇದರಿಂದ ಆ ಸ್ನೇಹಿತರು ಅವರ ಹೆತ್ತವರಿಗೆ ಹೆಚ್ಚು ಗೌರವ ತೋರಿಸಲು ಸಹಾಯ ಆಗಬಹುದು. ಆದರೆ ಮಕ್ಕಳ ಮೇಲೆ ಹೆತ್ತವರಿಗೆ ಸ್ವಾಭಾವಿಕ ಮಮತೆ ಇಲ್ಲದಿದ್ದರೆ ವಿಧೇಯತೆ ತೋರಿಸಲು ತುಂಬ ಕಷ್ಟವಾಗಬಹುದು. ಆದರೆ ಅಪ್ಪಅಮ್ಮ ತಮ್ಮನ್ನು ನಿಜವಾಗಲೂ ಪ್ರೀತಿಸುತ್ತಾರೆ ಎಂದು ಮಕ್ಕಳಿಗೆ ತಿಳಿದಾಗ ಕಷ್ಟವಾದರೂ ವಿಧೇಯತೆ ತೋರಿಸಲು ಸುಲಭವಾಗುತ್ತದೆ. ಆಸ್ಟನ್‌ ಎಂಬ ಯುವ ಸಹೋದರ ಹೇಳುತ್ತಾನೆ: “ಯಾವುದನ್ನು ಮಾಡಬಾರದು ಎಂದು ಅಪ್ಪಅಮ್ಮ ಹೇಳುತ್ತಿದ್ದರೋ ಅದನ್ನು ಮಾಡಲು ನನಗೆ ಮನಸ್ಸಾಗುತ್ತಿತ್ತು. ಆದರೆ ಅವರು ನನ್ನಿಂದ ಮಾಡಲಿಕ್ಕಾಗದ ವಿಷಯಗಳನ್ನು ಕೇಳುತ್ತಿರಲಿಲ್ಲ ಮತ್ತು ಅದರ ಹಿಂದಿರುವ ಕಾರಣಗಳನ್ನು ವಿವರಿಸುತ್ತಿದ್ದರು. ನನಗೇನೇ ಹೇಳಲಿಕ್ಕಿದ್ದರೂ ಅದನ್ನು ಧೈರ್ಯವಾಗಿ ಮಾತಾಡಲು ದಾರಿ ಮಾಡಿಕೊಡುತ್ತಿದ್ದರು. ವಿಧೇಯತೆ ತೋರಿಸಲು ಇದೆಲ್ಲ ನನಗೆ ಸಹಾಯ ಮಾಡಿತು. ಅವರಿಗೆ ನನ್ನ ಮೇಲೆ ಇದ್ದ ಕಾಳಜಿಯನ್ನು ನೋಡಿದೆ. ಹಾಗಾಗಿ ಅವರಿಗೆ ನೋವಾಗದ ರೀತಿಯಲ್ಲಿ ನಡಕೊಳ್ಳಲು ಮನಸ್ಸಾಯಿತು.”

10, 11. (ಎ) ಜನರಿಗೆ ಒಬ್ಬರ ಮೇಲೊಬ್ಬರಿಗೆ ಪ್ರೀತಿ ಇಲ್ಲ ಎಂದು ಯಾವ ಗುಣಗಳು ತೋರಿಸುತ್ತವೆ? (ಬಿ) ನಿಜ ಕ್ರೈಸ್ತರು ಬೇರೆಯವರನ್ನು ಎಷ್ಟರ ಮಟ್ಟಿಗೆ ಪ್ರೀತಿಸುತ್ತಾರೆ?

10 ಜನರಲ್ಲಿ ಒಬ್ಬರ ಮೇಲೊಬ್ಬರಿಗೆ ಪ್ರೀತಿ ಇಲ್ಲ ಎಂದು ತೋರಿಸುವಂಥ ಬೇರೆ ಗುಣಗಳ ಬಗ್ಗೆಯೂ ಪೌಲ ಹೇಳಿದ್ದಾನೆ. ‘ಹೆತ್ತವರಿಗೆ ಅವಿಧೇಯತೆ’ ತೋರಿಸುವವರು ಇರುತ್ತಾರೆ ಎಂದು ಹೇಳಿದ ನಂತರ ಕೃತಜ್ಞತೆಯಿಲ್ಲದವರು ಇರುತ್ತಾರೆ ಎಂದು ಹೇಳಿದನು. ಇವನ್ನು ಒಂದಾದ ಮೇಲೆ ಒಂದು ಪಟ್ಟಿಮಾಡಿರುವುದು ಸರಿಯಾಗಿದೆ. ಯಾಕೆಂದರೆ ಕೃತಜ್ಞತೆ ಇಲ್ಲದ ಜನರು ಬೇರೆಯವರು ತಮಗಾಗಿ ಮಾಡಿರುವ ವಿಷಯಗಳಿಗೆ ಬೆಲೆ ಕೊಡುವುದಿಲ್ಲ. ನಿಷ್ಠೆಯಿಲ್ಲದ ಜನರೂ ಇರುತ್ತಾರೆ ಎಂದು ಪೌಲ ಹೇಳಿದನು. ಯಾವುದೇ ಒಪ್ಪಂದಕ್ಕೆ ಸಿದ್ಧರಿಲ್ಲದ ಜನರ ಬಗ್ಗೆಯೂ ಹೇಳಿದನು. ಇಂಥ ಜನರು ಬೇರೆಯವರೊಂದಿಗೆ ಮನಸ್ತಾಪಗಳಾದಾಗ ಸಂಬಂಧ ಸರಿಪಡಿಸಿಕೊಳ್ಳಲು ಬಯಸುವುದಿಲ್ಲ. ದೇವದೂಷಕರೂ ದ್ರೋಹಿಗಳೂ ಇರುತ್ತಾರೆ ಎಂದು ಕೂಡ ಹೇಳಿದನು. ಇಂಥ ಜನರು ಬೇರೆಯವರ ಬಗ್ಗೆ, ಅಷ್ಟೇ ಯಾಕೆ ದೇವರ ಬಗ್ಗೆ ಕೂಡ ಕೆಟ್ಟದಾದ ಹೀನವಾದ ವಿಷಯಗಳನ್ನು ಮಾತಾಡುತ್ತಾರೆ. ಮಿಥ್ಯಾಪವಾದಿಗಳೂ ಇರುತ್ತಾರೆ. ಇವರು ಬೇರೆಯವರ ಬಗ್ಗೆ ಇಲ್ಲಸಲ್ಲದ ಸುಳ್ಳುಗಳನ್ನು ಹೇಳಿ ಅವರ ಹೆಸರನ್ನು ಹಾಳುಮಾಡುತ್ತಾರೆ. *

11 ಯೆಹೋವನ ಸೇವಕರು ಬೇರೆಯವರಿಗೆ ನಿಜ ಪ್ರೀತಿ ತೋರಿಸುವುದರಿಂದ ಅವರು ಲೋಕದ ಎಷ್ಟೋ ಜನರಿಗಿಂತ ತುಂಬ ಭಿನ್ನವಾಗಿದ್ದಾರೆ. ಹಿಂದಿನ ಕಾಲದಿಂದಲೂ ಯೆಹೋವನ ಸೇವಕರು ನಿಜ ಪ್ರೀತಿ ತೋರಿಸಿದ್ದಾರೆ. ಮೋಶೆಯ ಧರ್ಮಶಾಸ್ತ್ರದಲ್ಲಿರುವ ಅತಿ ದೊಡ್ಡ ಆಜ್ಞೆಗಳ ಬಗ್ಗೆ ಮಾತಾಡುವಾಗ ಯೇಸು ದೇವರ ಮೇಲಿರುವ ಪ್ರೀತಿಯ ಬಗ್ಗೆ ಹೇಳಿದ ನಂತರ ನೆರೆಯವನಿಗೆ ಪ್ರೀತಿ ತೋರಿಸುವುದು ಅತಿ ಪ್ರಾಮುಖ್ಯ ಎಂದನು. (ಮತ್ತಾ. 22:38, 39) ನಿಜ ಕ್ರೈಸ್ತರು ಒಬ್ಬರಿಗೊಬ್ಬರು ತೋರಿಸುವ ಪ್ರೀತಿಗೆ ಹೆಸರುವಾಸಿ ಆಗುತ್ತಾರೆ ಎಂದೂ ಯೇಸು ಹೇಳಿದನು. (ಯೋಹಾನ 13:34, 35 ಓದಿ.) ನಿಜ ಕ್ರೈಸ್ತರು ವೈರಿಗಳನ್ನೂ ಪ್ರೀತಿಸುತ್ತಾರೆ.—ಮತ್ತಾ. 5:43, 44.

12. ಯೇಸು ಜನರಿಗೆ ಹೇಗೆ ಪ್ರೀತಿ ತೋರಿಸಿದನು?

12 ಯೇಸು ಜನರನ್ನು ನಿಜವಾಗಿಯೂ ಪ್ರೀತಿಸುತ್ತಾನೆ ಎಂದು ತೋರಿಸಿದನು. ಹೇಗೆ? ಅವನು ಪಟ್ಟಣದಿಂದ ಪಟ್ಟಣಕ್ಕೆ ಹೋಗಿ ದೇವರ ರಾಜ್ಯದ ಸುವಾರ್ತೆಯನ್ನು ಸಾರಿದನು. ಅವನು ಕುರುಡರನ್ನು, ಕುಂಟರನ್ನು, ಕುಷ್ಠರೋಗಿಗಳನ್ನು, ಕಿವುಡರನ್ನು ವಾಸಿಮಾಡಿದನು. ಅಷ್ಟೇ ಅಲ್ಲ, ಸತ್ತವರಿಗೆ ಪುನಃ ಜೀವ ಕೊಟ್ಟನು. (ಲೂಕ 7:22) ಅನೇಕರು ಅವನನ್ನು ದ್ವೇಷಿಸಿದರೂ ಮಾನವರನ್ನು ರಕ್ಷಿಸಲಿಕ್ಕಾಗಿ ತನ್ನ ಪ್ರಾಣವನ್ನೇ ಕೊಟ್ಟನು. ಜನರನ್ನು ಪ್ರೀತಿಸುವುದರಲ್ಲಿ ಯೇಸು ತನ್ನ ತಂದೆಯನ್ನು ಪರಿಪೂರ್ಣವಾಗಿ ಅನುಕರಿಸಿದನು. ಅವನಂತೆ ಲೋಕದೆಲ್ಲೆಡೆ ಇರುವ ಯೆಹೋವನ ಸಾಕ್ಷಿಗಳು ಜನರಿಗೆ ಪ್ರೀತಿ ತೋರಿಸುತ್ತಾರೆ.

13. ನಾವು ಬೇರೆಯವರಿಗೆ ಪ್ರೀತಿ ತೋರಿಸುವಾಗ ಅದು ಅವರು ಯೆಹೋವನನ್ನು ತಿಳಿದುಕೊಳ್ಳುವಂತೆ ಹೇಗೆ ಪ್ರೇರಿಸುತ್ತದೆ?

13 ನಾವು ಜನರಿಗೆ ಪ್ರೀತಿ ತೋರಿಸುವಾಗ ಅವರು ನಮ್ಮ ಸ್ವರ್ಗೀಯ ತಂದೆಯಾದ ಯೆಹೋವನ ಬಗ್ಗೆ ತಿಳಿದುಕೊಳ್ಳಲು ಬಯಸಬಹುದು. ಉದಾಹರಣೆಗೆ, ಥಾಯ್‌ಲೆಂಡಿನಲ್ಲಿ ಒಬ್ಬ ವ್ಯಕ್ತಿ ಪ್ರಾದೇಶಿಕ ಅಧಿವೇಶನಕ್ಕೆ ಹೋದನು. ಅಲ್ಲಿ ಸಹೋದರ ಸಹೋದರಿಯರು ಒಬ್ಬರಿಗೊಬ್ಬರು ತೋರಿಸಿದ ಪ್ರೀತಿ ನೋಡಿ ಅವನಿಗೆ ತುಂಬ ಸಂತೋಷವಾಯಿತು. ಅವನು ಮನೆಗೆ ಹಿಂದಿರುಗಿದ ನಂತರ ವಾರಕ್ಕೆ ಎರಡು ಸಾರಿ ತನ್ನೊಂದಿಗೆ ಬೈಬಲ್‌ ಅಧ್ಯಯನ ನಡೆಸಬೇಕೆಂದು ಯೆಹೋವನ ಸಾಕ್ಷಿಗಳನ್ನು ಕೇಳಿಕೊಂಡನು. ತನ್ನೆಲ್ಲ ಸಂಬಂಧಿಕರಿಗೆ ಸುವಾರ್ತೆ ಸಾರಿದನು. ಆರು ತಿಂಗಳಲ್ಲೇ ಕೂಟದಲ್ಲಿ ಬೈಬಲ್‌ ಓದುವಿಕೆ ನೇಮಕ ನಿರ್ವಹಿಸಿದನು. ನಾವು ಬೇರೆಯವರಿಗೆ ಪ್ರೀತಿ ತೋರಿಸುತ್ತೇವಾ? ಇದಕ್ಕಾಗಿ ನಮ್ಮನ್ನೇ ಹೀಗೆ ಕೇಳಿಕೊಳ್ಳೋಣ: ‘ನನ್ನ ಕುಟುಂಬದಲ್ಲಿರುವ, ಸಭೆಯಲ್ಲಿರುವ, ಸೇವಾಕ್ಷೇತ್ರದಲ್ಲಿರುವ ಜನರಿಗೆ ಸಹಾಯ ಮಾಡಲು ನನ್ನಿಂದ ಆಗುವುದನ್ನೆಲ್ಲ ಮಾಡುತ್ತಿದ್ದೇನಾ? ಬೇರೆಯವರ ಬಗ್ಗೆ ಯೆಹೋವನಿಗಿರುವ ದೃಷ್ಟಿಕೋನ ನನಗೂ ಇದೆಯಾ?’

ತೋಳಗಳು ಮತ್ತು ಕುರಿಗಳು

14, 15. (ಎ) ಇಂದು ಅನೇಕರಲ್ಲಿ ಯಾವ ಕೆಟ್ಟ ಗುಣಗಳಿವೆ? (ಬಿ) ಕೆಲವರ ವ್ಯಕ್ತಿತ್ವದಲ್ಲಾಗಿರುವ ಬದಲಾವಣೆ ಏನು?

14 ಕಡೇ ದಿವಸಗಳಲ್ಲಿ ಜನರು ಬೇರೆ ಕೆಲವು ಕೆಟ್ಟ ಗುಣಗಳನ್ನೂ ತೋರಿಸುತ್ತಾರೆ. ಉದಾಹರಣೆಗೆ, ಅನೇಕರು ಒಳ್ಳೇತನವನ್ನು ಪ್ರೀತಿಸುವುದಿಲ್ಲ ದ್ವೇಷಿಸುತ್ತಾರೆ. ಕೆಲವೊಮ್ಮೆ ವಿರೋಧಿಸುತ್ತಾರೆ ಕೂಡ. ಇಂಥ ಜನರು ಸ್ವನಿಯಂತ್ರಣವಿಲ್ಲದವರೂ ಉಗ್ರರೂ ಆಗಿದ್ದಾರೆ. ಕೆಲವರು ಹಟಮಾರಿಗಳೂ ಆಗಿದ್ದಾರೆ. ಮನಸ್ಸಿಗೆ ಬಂದಂತೆ ನಡಕೊಳ್ಳುತ್ತಾರೆ ಮತ್ತು ಅವರ ಕೃತ್ಯಗಳಿಂದ ಬೇರೆಯವರ ಮೇಲೆ ಆಗುವ ಪರಿಣಾಮದ ಬಗ್ಗೆ ಚಿಂತಿಸುವುದಿಲ್ಲ. ನಾವು ಇಂಥ ಎಲ್ಲಾ ಗುಣಗಳನ್ನು ತ್ಯಜಿಸಬೇಕು.

15 ಕ್ರೂರವಾದ ಪ್ರಾಣಿಗಳಂತೆ ವರ್ತಿಸುತ್ತಿದ್ದ ಅನೇಕರು ತಮ್ಮ ವ್ಯಕ್ತಿತ್ವದಲ್ಲಿ ಬದಲಾವಣೆ ಮಾಡಿಕೊಂಡಿದ್ದಾರೆ. ಜನರು ಇಂಥ ದೊಡ್ಡ ಬದಲಾವಣೆ ಮಾಡಿಕೊಳ್ಳುತ್ತಾರೆ ಎಂದು ಬೈಬಲಿನ ಒಂದು ಪ್ರವಾದನೆಯಲ್ಲಿ ತಿಳಿಸಲಾಗಿತ್ತು. (ಯೆಶಾಯ 11:6, 7 ಓದಿ.) ನಾವು ಈ ವಚನಗಳಲ್ಲಿ ತೋಳ ಮತ್ತು ಸಿಂಹದಂಥ ಕಾಡುಪ್ರಾಣಿಗಳು ಕುರಿ ಮತ್ತು ಪಶುವಿನಂಥ ಸಾಕುಪ್ರಾಣಿಗಳೊಂದಿಗೆ ಸಮಾಧಾನವಾಗಿ ಇರುವುದರ ಬಗ್ಗೆ ಓದುತ್ತೇವೆ. ಇವು ಒಂದಕ್ಕೊಂದು ಹಾನಿ ಮಾಡದೆ ಇರಲು ಕಾರಣವೇನು? ‘ಭೂಮಿಯಲ್ಲಿ ಯೆಹೋವನ ಜ್ಞಾನವು ತುಂಬಿಕೊಂಡಿರುವುದರಿಂದ’ ಅವು ಹಾನಿ ಮಾಡಲ್ಲ ಎಂದು ಪ್ರವಾದನೆ ಹೇಳುತ್ತದೆ. (ಯೆಶಾ. 11:9) ಪ್ರಾಣಿಗಳು ಯೆಹೋವನ ಜ್ಞಾನ ಪಡೆಯಲು ಸಾಧ್ಯವಿಲ್ಲ. ಆದ್ದರಿಂದ ಆ ಪ್ರವಾದನೆ ಜನರ ವ್ಯಕ್ತಿತ್ವದಲ್ಲಾಗುವ ಬದಲಾವಣೆಯ ಬಗ್ಗೆ ಸಾಂಕೇತಿಕ ಅರ್ಥದಲ್ಲಿ ಮಾತಾಡುತ್ತಿದೆ.

ಬೈಬಲ್‌ ತತ್ವಗಳು ಜನರ ಬದುಕನ್ನೇ ಬದಲಾಯಿಸುತ್ತದೆ! (ಪ್ಯಾರ 16 ನೋಡಿ)

16. ಜನರು ತಮ್ಮ ವ್ಯಕ್ತಿತ್ವವನ್ನು ಬದಲಾಯಿಸಿಕೊಳ್ಳಲು ಬೈಬಲ್‌ ಹೇಗೆ ಸಹಾಯ ಮಾಡಿದೆ?

16 ನಮ್ಮ ಎಷ್ಟೋ ಸಹೋದರ ಸಹೋದರಿಯರು ಹಿಂದೆ ತೋಳಗಳಂತೆ ಕ್ರೂರವಾಗಿದ್ದರು. ಆದರೆ ಈಗ ಶಾಂತಿ-ಸಮಾಧಾನದಿಂದ ನಡಕೊಳ್ಳುತ್ತಾರೆ. ಇಂಥ ಅನೇಕ ಅನುಭವಗಳನ್ನು jw.orgಯಲ್ಲಿ “ಬದುಕು ಬದಲಾದ ವಿಧ” ಎಂಬ ಸರಣಿ ಲೇಖನದಲ್ಲಿ ಓದಬಹುದು. ಯೆಹೋವನ ಬಗ್ಗೆ ತಿಳಿದುಕೊಂಡು ಆತನ ಸೇವೆ ಮಾಡುತ್ತಿರುವವರು ದೇವಭಕ್ತಿಯ ವೇಷವಿದ್ದು ಅದರ ಶಕ್ತಿಗೆ ವಿರುದ್ಧವಾಗಿ ವರ್ತಿಸುವ ಜನರಂತಿಲ್ಲ. ಇಂಥ ಜನರು ದೇವರ ಮೇಲೆ ಭಕ್ತಿ ಇರುವಂತೆ ನಟಿಸುತ್ತಾರೆ, ಆದರೆ ಅವರ ವರ್ತನೆ ನೋಡಿದರೆ ದೇವರ ಮೇಲೆ ಭಕ್ತಿಯೇ ಇಲ್ಲ ಎಂದು ಗೊತ್ತಾಗುತ್ತದೆ. ಆದರೆ, ಯೆಹೋವನ ಜನರಾಗುವುದಕ್ಕಿಂತ ಮುಂಚೆ ಕ್ರೂರಿಗಳಾಗಿದ್ದ ಅನೇಕರು ಈಗ ‘ದೇವರ ಚಿತ್ತಕ್ಕನುಸಾರ ಸತ್ಯಾನುಗುಣವಾದ ನೀತಿಯಲ್ಲಿಯೂ ನಿಷ್ಠೆಯಲ್ಲಿಯೂ ಸೃಷ್ಟಿಸಲ್ಪಟ್ಟ ಹೊಸ ವ್ಯಕ್ತಿತ್ವವನ್ನು ಧರಿಸಿಕೊಂಡಿದ್ದಾರೆ.’ (ಎಫೆ. 4:23, 24) ಜನರು ದೇವರ ಬಗ್ಗೆ ಕಲಿಯುವಾಗ ಆತನ ಮಟ್ಟಗಳಿಗನುಸಾರ ಜೀವಿಸಬೇಕು ಎಂದು ಅರ್ಥಮಾಡಿಕೊಳ್ಳುತ್ತಾರೆ. ಇದು ಅವರು ನಂಬುವ ವಿಷಯಗಳಲ್ಲಿ, ಯೋಚಿಸುವ ರೀತಿಯಲ್ಲಿ, ತಮ್ಮ ವರ್ತನೆಯಲ್ಲಿ ಬದಲಾವಣೆ ಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಈ ರೀತಿ ಬದಲಾವಣೆ ಮಾಡಿಕೊಳ್ಳುವುದು ಅಷ್ಟು ಸುಲಭವಲ್ಲ. ಆದರೆ ಅವರಿಗೆ ದೇವರನ್ನು ಮೆಚ್ಚಿಸಬೇಕೆಂಬ ಬಯಕೆ ಇದ್ದರೆ ಬದಲಾವಣೆ ಮಾಡಿಕೊಳ್ಳಲು ದೇವರ ಪವಿತ್ರಾತ್ಮ ಸಹಾಯ ಮಾಡುತ್ತದೆ.

‘ಇಂಥವರಿಂದ ದೂರವಿರಿ’

17. ಜನರ ಕೆಟ್ಟ ಗುಣಗಳು ನಮಗೆ ಬರದಂತೆ ನಾವು ಹೇಗೆ ನೋಡಿಕೊಳ್ಳಬಹುದು?

17 ದೇವರ ಸೇವೆ ಮಾಡುವ ಮತ್ತು ಮಾಡದ ಜನರ ಮಧ್ಯೆ ಇರುವ ವ್ಯತ್ಯಾಸ ಈಗೀಗ ಸ್ಪಷ್ಟವಾಗಿ ಕಾಣುತ್ತಿದೆ. ದೇವರ ಸೇವೆ ಮಾಡದ ಜನರ ಕೆಟ್ಟ ಗುಣಗಳು ನಮಗೆ ಬರದಂತೆ ಜಾಗ್ರತೆ ವಹಿಸಬೇಕು. ಅದಕ್ಕಾಗಿ 2 ತಿಮೊಥೆಯ 3:2-5​ರಲ್ಲಿ ತಿಳಿಸಲಾಗಿರುವ ಜನರಿಂದ ದೂರವಿರಬೇಕು. ಆದರೆ ಇಂಥ ಕೆಟ್ಟ ಗುಣಗಳಿರುವ ವ್ಯಕ್ತಿಗಳಿಂದ ನಾವು ಸಂಪೂರ್ಣವಾಗಿ ದೂರವಿರಲು ಆಗುವುದಿಲ್ಲ. ಯಾಕೆಂದರೆ ನಾವು ಅಂಥವರ ಜೊತೆಯಲ್ಲಿ ಕೆಲಸ ಮಾಡಬೇಕಾಗಿರಬಹುದು, ಶಾಲೆಗೆ ಹೋಗಬೇಕಾಗಿರಬಹುದು ಅಥವಾ ಜೀವಿಸಬೇಕಾಗಿರಬಹುದು. ಆದರೆ ನಾವು ಅವರ ತರನೇ ಆಗಿಬಿಡಬೇಕು ಅಂತೇನಿಲ್ಲ. ಅವರ ತರನೇ ಆಗದಿರಲು ನಮಗೆ ಯಾವುದು ಸಹಾಯ ಮಾಡುತ್ತದೆ? ಯೆಹೋವನೊಂದಿಗೆ ನಮಗಿರುವ ಬಲವಾದ ಸಂಬಂಧ ಸಹಾಯ ಮಾಡುತ್ತದೆ. ಈ ಸಂಬಂಧವನ್ನು ಬಲಪಡಿಸಲು ನಾವು ಬೈಬಲನ್ನು ಅಧ್ಯಯನ ಮಾಡಬೇಕು ಮತ್ತು ಯೆಹೋವನನ್ನು ಪ್ರೀತಿಸುವ ಜನರನ್ನು ನಮ್ಮ ಆಪ್ತ ಸ್ನೇಹಿತರಾಗಿ ಮಾಡಿಕೊಳ್ಳಬೇಕು.

18. ನಮ್ಮ ಮಾತು ಮತ್ತು ನಡತೆ ಒಳ್ಳೇದಾಗಿದ್ದರೆ ಬೇರೆಯವರ ಮೇಲೆ ಯಾವ ಪರಿಣಾಮ ಆಗುತ್ತದೆ?

18 ಯೆಹೋವನ ಬಗ್ಗೆ ತಿಳಿದುಕೊಳ್ಳಲು ಬೇರೆಯವರಿಗೂ ನಾವು ಸಹಾಯ ಮಾಡಬೇಕು. ಸಾಕ್ಷಿಕೊಡಲು ಅವಕಾಶಗಳಿಗಾಗಿ ಹುಡುಕಿ. ಸರಿಯಾದ ಸಮಯದಲ್ಲಿ ಸರಿಯಾದ ವಿಷಯಗಳನ್ನು ಮಾತಾಡಲು ಸಹಾಯ ಮಾಡುವಂತೆ ಯೆಹೋವನನ್ನು ಬೇಡಿಕೊಳ್ಳಿ. ನಾವು ಯೆಹೋವನ ಸಾಕ್ಷಿಗಳು ಎಂದು ಬೇರೆಯವರಿಗೆ ಹೇಳಬೇಕು. ಆಗ ನಮ್ಮ ಒಳ್ಳೇ ನಡತೆ ನಮಗಲ್ಲ ದೇವರಿಗೆ ಮಹಿಮೆ ತರುತ್ತದೆ. “ಭಕ್ತಿಹೀನತೆಯನ್ನೂ ಲೌಕಿಕ ಆಶೆಗಳನ್ನೂ ವಿಸರ್ಜಿಸಿ ಈ ಸದ್ಯದ ವಿಷಯಗಳ ವ್ಯವಸ್ಥೆಯಲ್ಲಿ ಸ್ವಸ್ಥಬುದ್ಧಿಯಿಂದಲೂ ನೀತಿಯಿಂದಲೂ ದೇವಭಕ್ತಿಯಿಂದಲೂ” ಜೀವಿಸಲು ಯೆಹೋವನು ನಮಗೆ ಕಲಿಸಿದ್ದಾನೆ. (ತೀತ 2:11-14) ನಾವು ಯೆಹೋವನನ್ನು ಅನುಕರಿಸುತ್ತಾ ಆತನು ನಮ್ಮಿಂದ ಬಯಸುವುದನ್ನು ಮಾಡಿದರೆ ಅದನ್ನು ಜನರು ಖಂಡಿತ ಗಮನಿಸುತ್ತಾರೆ. ಅವರಲ್ಲಿ ಕೆಲವರಂತೂ “ನಾವು ನಿಮ್ಮೊಂದಿಗೆ ಬರುವೆವು, ದೇವರು ನಿಮ್ಮ ಸಂಗಡ ಇದ್ದಾನೆಂಬ ಸುದ್ದಿಯು ನಮ್ಮ ಕಿವಿಗೆ ಬಿದ್ದಿದೆ” ಎಂದು ಹೇಳಬಹುದು.—ಜೆಕ. 8:23.

^ ಪ್ಯಾರ. 10 “ಮಿಥ್ಯಾಪವಾದಿ” ಅಥವಾ “ದೂಷಕ” ಎನ್ನುವುದಕ್ಕಿರುವ ಗ್ರೀಕ್‌ ಪದ ದಿಯಾಬೊಲೊಸ್‌. ಬೈಬಲಲ್ಲಿ ಈ ಪದವನ್ನು ದೇವರ ಹೆಸರನ್ನು ಹಾಳುಮಾಡಲೆಂದು ಇಲ್ಲಸಲ್ಲದ ಸುಳ್ಳುಗಳನ್ನು ಹೇಳಿದ ಸೈತಾನನ ಬಿರುದಾಗಿ ಬಳಸಲಾಗಿದೆ.