ತೀತನಿಗೆ ಬರೆದ ಪತ್ರ 2:1-15

  • ದೊಡ್ಡವ್ರಿಗೂ ಚಿಕ್ಕವ್ರಿಗೂ ಬುದ್ಧಿಮಾತು (1-15)

    • ದೇವರಿಗೆ ಇಷ್ಟ ಇಲ್ಲದ ನಡತೆಯನ್ನ ಬಿಟ್ಟುಬಿಡಬೇಕು (12)

    • ಒಳ್ಳೇ ಕೆಲಸಗಳಿಗೆ ಹುರುಪು (14)

2  ಆದ್ರೆ ನೀನು ಯಾವಾಗ್ಲೂ ಒಳ್ಳೇ* ಬೋಧನೆ ಪ್ರಕಾರ ಕಲಿಸ್ತಾ ಇರು.+  ವಯಸ್ಸಾದ ಗಂಡಸ್ರಿಗೆ ಎಲ್ಲ ವಿಷ್ಯಗಳಲ್ಲಿ ಇತಿಮಿತಿ ಇರಬೇಕು. ಜವಾಬ್ದಾರಿಯಿಂದ ನಡ್ಕೊಬೇಕು. ತಿಳುವಳಿಕೆ, ದೃಢ ನಂಬಿಕೆ, ಅಪ್ಪಟ ಪ್ರೀತಿ ಅವ್ರಲ್ಲಿ ಇರಬೇಕು. ಕಷ್ಟಗಳನ್ನ ತಾಳ್ಕೊಬೇಕು.  ವಯಸ್ಸಾದ ಸ್ತ್ರೀಯರೂ ಭಯಭಕ್ತಿಯಿಂದ ನಡ್ಕೊಬೇಕು, ಸುಳ್ಳು ಹಬ್ಬಿಸಿ ಬೇರೆಯವ್ರ ಹೆಸ್ರು ಹಾಳು ಮಾಡಬಾರದು, ದ್ರಾಕ್ಷಾಮದ್ಯದ ಚಟ ಇರಬಾರದು, ಒಳ್ಳೇದನ್ನ ಕಲಿಸಬೇಕು.  ಆಗ ಅವರು ಯುವತಿಯರಿಗೆ ಗಂಡ ಮತ್ತು ಮಕ್ಕಳನ್ನ ಪ್ರೀತಿಸಬೇಕು,  ತಿಳುವಳಿಕೆಯಿಂದ ನಡಿಬೇಕು, ನೈತಿಕವಾಗಿ ಶುದ್ಧವಾಗಿ ಇರಬೇಕು, ಮನೆ ಕೆಲಸಗಳನ್ನ ಮಾಡಬೇಕು,* ಗಂಡನ ಮಾತು ಕೇಳಬೇಕು,+ ಒಳ್ಳೆಯವರಾಗಿ ಇರಬೇಕು ಅಂತ ಬುದ್ಧಿ ಹೇಳೋಕೆ* ಆಗುತ್ತೆ. ಹಾಗೆ ಮಾಡಿದ್ರೆ ದೇವರ ಸಂದೇಶಕ್ಕೆ ಕೆಟ್ಟ ಹೆಸ್ರು ಬರಲ್ಲ.  ಅದೇ ತರ ಯುವಕರಿಗೂ ತಿಳುವಳಿಕೆಯಿಂದ ನಡ್ಕೊಳ್ಳೋಕೆ ಪ್ರೋತ್ಸಾಹಿಸ್ತಾ ಇರು.+  ಎಲ್ಲ ವಿಧದಲ್ಲೂ ಒಳ್ಳೇದನ್ನ ಮಾಡ್ತಾ ಮಾದರಿಯಾಗಿರು. ಶ್ರದ್ಧೆಯಿಂದ ಸತ್ಯವನ್ನ* ಕಲಿಸು.+  ಹಾಗೆ ಕಲಿಸುವಾಗ ಯಾರೂ ಟೀಕಿಸದ ಹಾಗೆ ಒಳ್ಳೇ* ಮಾತುಗಳನ್ನ ಹೇಳು.+ ಆಗ ವಿರೋಧಿಗಳಿಗೆ ನಮ್ಮ ಬಗ್ಗೆ ಕೆಟ್ಟದಾಗಿ ಮಾತಾಡೋಕೆ ಅವಕಾಶ ಸಿಗದೆ ಅವ್ರಿಗೇ ಅವಮಾನ ಆಗುತ್ತೆ.+  ಆಳುಗಳು ತಮ್ಮ ಯಜಮಾನರಿಗೆ ಎಲ್ಲ ವಿಷ್ಯದಲ್ಲೂ ಅಧೀನರಾಗಿರಬೇಕು,+ ಅವ್ರನ್ನ ಮೆಚ್ಚಿಸೋಕೆ ಪ್ರಯತ್ನಿಸಬೇಕು, ಎದುರು ಮಾತಾಡಬಾರದು, 10  ಯಜಮಾನರಿಗೆ ಸೇರಿದ್ದನ್ನ ಕದಿಬಾರದು,+ ಯಾವಾಗ್ಲೂ ನಂಬಿಗಸ್ತರು ಅಂತ ತೋರಿಸಬೇಕು. ಆಗ ನಮ್ಮ ರಕ್ಷಕನಾದ ದೇವರ ಬೋಧನೆಯ ಅಂದವನ್ನ ಎಲ್ಲ ರೀತಿಯಲ್ಲೂ ಹೆಚ್ಚಿಸೋಕೆ ಆಗುತ್ತೆ.+ 11  ಎಲ್ಲ ತರದ ಜನ್ರಿಗೆ ರಕ್ಷಣೆ ತರೋ ಮೂಲಕ ದೇವರು ತನ್ನ ಅಪಾರ ಕೃಪೆ ತೋರಿಸಿದ್ದಾನೆ.+ 12  ಆ ಕೃಪೆ ದೇವರಿಗೆ ಇಷ್ಟ ಇಲ್ಲದ ನಡತೆಯನ್ನ ಲೋಕದ ಆಸೆಗಳನ್ನ ಬಿಟ್ಟುಬಿಡೋಕೆ ನಮಗೆ ತರಬೇತಿ ಕೊಡುತ್ತೆ.+ ಈ ಲೋಕದ* ಜನ್ರ ಮಧ್ಯ ತಿಳುವಳಿಕೆ, ನೀತಿ, ದೇವಭಕ್ತಿಯಿಂದ ಜೀವಿಸೋಕೆ ಕಲಿಸುತ್ತೆ.+ 13  ನಾವು ಆ ರೀತಿ ಜೀವಿಸಬೇಕು, ಯಾಕಂದ್ರೆ ಅದ್ಭುತ ನಿರೀಕ್ಷೆ ನಿಜ ಆಗೋದಕ್ಕೆ,+ ನಮ್ಮ ಮಹಾನ್‌ ದೇವರು ಮತ್ತು ನಮ್ಮ ರಕ್ಷಕ ಯೇಸು ಕ್ರಿಸ್ತ ಮಹಿಮೆಯಿಂದ ಕಾಣಿಸ್ಕೊಳ್ಳೋ ದಿನಕ್ಕೆ ನಾವು ಕಾಯ್ತಾ ಇದ್ದೀವಿ. 14  ಕ್ರಿಸ್ತ ನಮಗಾಗಿ ತನ್ನ ಜೀವವನ್ನೇ ಕೊಟ್ಟನು.+ ಹೀಗೆ ನಮ್ಮನ್ನ ಎಲ್ಲ ತರದ ಕೆಟ್ಟತನದಿಂದ ಬಿಡಿಸಿದನು.*+ ನಾವು ಆತನಿಗೆ ಸೇರಿದ ವಿಶೇಷ ಸೊತ್ತಾಗೋಕೆ ಮತ್ತು ಒಳ್ಳೇ ಕೆಲಸಗಳನ್ನ ಹುರುಪಿಂದ ಮಾಡೋ ಜನ್ರಾಗೋಕೆ ನಮ್ಮನ್ನ ಶುದ್ಧಮಾಡಿದನು.+ 15  ನಿನಗೆ ಅಧಿಕಾರ ಇರೋದ್ರಿಂದ ಈ ವಿಷ್ಯಗಳನ್ನ ಬೇರೆಯವ್ರಿಗೆ ಕಲಿಸ್ತಾ, ಬುದ್ಧಿ ಹೇಳ್ತಾ,* ತಿದ್ದುತ್ತಾ ಇರು.+ ಯಾರೂ ನಿನ್ನ ಕಡೆ ಬೆರಳು ತೋರಿಸದ ಹಾಗೆ ನಡ್ಕೊ.

ಪಾದಟಿಪ್ಪಣಿ

ಅಥವಾ “ಪ್ರಯೋಜನಕರ.”
ಅಥವಾ “ಮನೆ ನೋಡ್ಕೊಳ್ಳಬೇಕು.”
ಅಥವಾ “ಕಲಿಸೋಕೆ.”
ಬಹುಶಃ, “ಒಳ್ಳೇ ಉದ್ದೇಶದಿಂದ.”
ಅಥವಾ “ಪ್ರಯೋಜನಕರ.”
ಅಥವಾ “ಈಗಿನ ಕಾಲದಲ್ಲಿ.” ಪದವಿವರಣೆಯಲ್ಲಿ “ಲೋಕದ ವ್ಯವಸ್ಥೆ” ನೋಡಿ.
ಅಕ್ಷ. “ನಮಗೋಸ್ಕರ ಬಿಡುಗಡೆ ಬೆಲೆ ಕೊಟ್ಟ.”
ಅಥವಾ “ಪ್ರೋತ್ಸಾಹಿಸ್ತಾ.”