ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಆದಾಮಹವ್ವ ಪಾಪ ಮಾಡುವರೆಂದು ದೇವರಿಗೆ ಮೊದಲೇ ಗೊತ್ತಿತ್ತೇ?

ಆದಾಮಹವ್ವ ಪಾಪ ಮಾಡುವರೆಂದು ದೇವರಿಗೆ ಮೊದಲೇ ಗೊತ್ತಿತ್ತೇ?

ಆದಾಮಹವ್ವ ಪಾಪ ಮಾಡುವರೆಂದು ದೇವರಿಗೆ ಮೊದಲೇ ಗೊತ್ತಿತ್ತೇ?

ಅನೇಕರು ಈ ಪ್ರಶ್ನೆಯನ್ನು ಕೇಳುವುದು ಪ್ರಾಮಾಣಿಕತೆಯಿಂದ. ಕೆಟ್ಟತನ ಇರುವಂತೆ ದೇವರು ಯಾಕೆ ಬಿಟ್ಟಿದ್ದಾನೆ ಎಂಬ ಮಾತು ಬಂದಾಗಲೆಲ್ಲ ಮೊದಲು ಮನಃಪಟಲಕ್ಕೆ ಬರುವುದು ಪ್ರಥಮ ಮಾನವ ಜೋಡಿಯಾದ ಆದಾಮಹವ್ವರು ಏದೆನ್‌ ತೋಟದಲ್ಲಿ ಮಾಡಿದ ಪಾಪ. ‘ದೇವರಿಗೆ ಎಲ್ಲ ಗೊತ್ತಿದೆ’ ಎಂಬ ವಿಚಾರವು ಆದಾಮಹವ್ವರು ಅವಿಧೇಯರಾಗುವರೆಂದು ದೇವರಿಗೆ ಮೊದಲೇ ಗೊತ್ತಿದ್ದಿರಬೇಕು ಎಂದು ಕೆಲವರು ನೆನಸುವಂತೆ ಮಾಡಬಹುದು.

ಪರಿಪೂರ್ಣ ಮಾನವರಾಗಿದ್ದ ಆದಾಮಹವ್ವ ಪಾಪ ಮಾಡುವರೆಂದು ದೇವರಿಗೆ ಮೊದಲೇ ಗೊತ್ತಿರುತ್ತಿದ್ದರೆ ಅದರರ್ಥ ಏನಾಗುತ್ತಿತ್ತು? ದೇವರಲ್ಲಿ ಅನೇಕ ನಕಾರಾತ್ಮಕ ಪ್ರವೃತ್ತಿಗಳಿವೆ ಎಂದಾಗುತ್ತಿತ್ತು. ಆತನು ಪ್ರೀತಿರಹಿತ, ನ್ಯಾಯರಹಿತ, ಅಪ್ರಾಮಾಣಿಕ ದೇವರೆಂಬಂತೆ ತೋರಿಬಂದಾನು. ಅಂತ್ಯಫಲ ಕೆಟ್ಟದ್ದಾಗಿರುವುದೆಂಬ ಮುನ್ನರಿವಿದ್ದರೂ ಆದಾಮಹವ್ವರನ್ನು ಆ ಪರಿಸ್ಥಿತಿಗೆ ಒಡ್ಡಿದ್ದು ಕ್ರೂರತನವಲ್ಲದೆ ಇನ್ನೇನು ಎಂದು ಕೆಲವರು ಹೇಳಬಹುದು. ಇತಿಹಾಸದುದ್ದಕ್ಕೂ ನಡೆದ ಎಲ್ಲ ಕೆಟ್ಟತನ, ನರಳಾಟಕ್ಕೆ ದೇವರೇ ಕಾರಣ ಅಥವಾ ಅದರಲ್ಲಿ ಸ್ವಲ್ಪವಾದರೂ ಆತನ ಪಾಲಿದೆ ಎಂದೂ ತೋರಬಹುದು. ಇನ್ನು ಕೆಲವರಿಗೆ ನಮ್ಮೆಲ್ಲರ ನಿರ್ಮಾಣಿಕನು ಅವಿವೇಕಿಯಂತಲೂ ಅನಿಸಬಹುದು.

ಈ ನಕಾರಾತ್ಮಕ ವರ್ಣನೆಗೂ ಬೈಬಲಿನಲ್ಲಿ ಯೆಹೋವ ದೇವರ ಬಗ್ಗೆ ತಿಳಿಸಲಾದ ಸಂಗತಿಗಳಿಗೂ ಏನಾದರೂ ಹೊಂದಿಕೆ ಇದೆಯೋ? ಇದಕ್ಕಾಗಿ ನಾವು ಯೆಹೋವನ ಸೃಷ್ಟಿಕಾರ್ಯಗಳ ಬಗ್ಗೆ ಮತ್ತು ಆತನ ವ್ಯಕ್ತಿತ್ವದ ಬಗ್ಗೆ ಬೈಬಲ್‌ ಏನನ್ನುತ್ತದೆಂದು ಮೊದಲು ಪರಿಗಣಿಸೋಣ.

“ಅದು ಬಹು ಒಳ್ಳೇದಾಗಿತ್ತು”

ಪ್ರಪ್ರಥಮ ಮಾನವರನ್ನೂ ಸೇರಿಸಿ ದೇವರ ಎಲ್ಲ ಸೃಷ್ಟಿಯ ಬಗ್ಗೆ ಆದಿಕಾಂಡ ಪುಸ್ತಕ ಹೀಗನ್ನುತ್ತದೆ: “ದೇವರು ತಾನು ಉಂಟುಮಾಡಿದ್ದನ್ನೆಲ್ಲಾ ನೋಡಲಾಗಿ ಅದು ಬಹು ಒಳ್ಳೇದಾಗಿತ್ತು.” (ಆದಿಕಾಂಡ 1:31) ದೇವರು ಆದಾಮಹವ್ವರನ್ನು ಪರಿಪೂರ್ಣವಾಗಿ ಮತ್ತು ಭೂಮಿಯ ಪರಿಸರಕ್ಕೆ ಒಗ್ಗಿಕೊಳ್ಳುವಂಥ ರೀತಿಯಲ್ಲಿ ನಿರ್ಮಿಸಿದನು. ಅವರ ನಿರ್ಮಾಣದಲ್ಲಿ ಯಾವ ಕುಂದೂ ಇರಲಿಲ್ಲ. ಬಹು ಒಳ್ಳೇದಾಗಿ ಸೃಷ್ಟಿಸಲ್ಪಟ್ಟ ಅವರು ದೇವರು ಅವಶ್ಯಪಡಿಸಿದ ಪ್ರಕಾರ ಒಳ್ಳೇದನ್ನು ಮಾಡಲು ಸಮರ್ಥರಾಗಿದ್ದರು ನಿಶ್ಚಯ. “ದೇವಸ್ವರೂಪದಲ್ಲಿ” ಅವರ ಸೃಷ್ಟಿಯಾಗಿತ್ತು. (ಆದಿಕಾಂಡ 1:27) ಆದ್ದರಿಂದ ವಿವೇಕ, ನಿಷ್ಠೆಯ ಪ್ರೀತಿ, ನ್ಯಾಯ, ಒಳ್ಳೇತನದಂಥ ದೈವಿಕ ಗುಣಗಳನ್ನು ತಕ್ಕಮಟ್ಟಿಗೆ ತೋರಿಸುವ ಸಾಮರ್ಥ್ಯ ಅವರಲ್ಲಿತ್ತು. ಈ ಗುಣಗಳನ್ನು ಬೆಳೆಸಿಕೊಂಡಿದ್ದರೆ ತಮಗೆ ಪ್ರಯೋಜನವನ್ನೂ ಸ್ವರ್ಗದಲ್ಲಿರುವ ತಮ್ಮ ತಂದೆಯಾದ ದೇವರಿಗೆ ಸಂತೋಷವನ್ನೂ ತರುವ ನಿರ್ಣಯಗಳನ್ನು ಮಾಡಸಾಧ್ಯವಿತ್ತು.

ಪರಿಪೂರ್ಣರೂ ಬುದ್ಧಿಶಕ್ತಿಯುಳ್ಳವರೂ ಆಗಿದ್ದ ಆದಾಮಹವ್ವರಿಗೆ ಯೆಹೋವನು ಇಚ್ಛಾಸ್ವಾತಂತ್ರ್ಯ ಕೊಟ್ಟಿದ್ದನು. ಹಾಗಾಗಿ ದೇವರನ್ನು ಸಂತೋಷಪಡಿಸಲಿಕ್ಕಾಗಿ ಮೊದಲೇ ಪ್ರೋಗ್ರ್ಯಾಮ್‌ ಮಾಡಿಡಲ್ಪಟ್ಟ ಯಂತ್ರಮಾನವನಂತೆ ಅವರಿರಲಿಲ್ಲ. ಯೋಚಿಸಿ, ನಿಮಗೆ ಯಾವುದು ಇಷ್ಟ: ಯಂತ್ರದಂತೆ ಭಾವಶೂನ್ಯವಾಗಿ ಕೊಡಲಾದ ಉಡುಗೊರೆಯೋ ಅಥವಾ ಹೃತ್ಪೂರ್ವಕವಾಗಿ ಕೊಡಲಾದ ಉಡುಗೊರೆಯೋ? ಹೃತ್ಪೂರ್ವಕವಾಗಿ ಕೊಡಲಾದ ಉಡುಗೊರೆ ನಿಶ್ಚಯ. ಅಂತೆಯೇ ಆದಾಮಹವ್ವರು ಹೃತ್ಪೂರ್ವಕ ವಿಧೇಯತೆ ತೋರಿಸುವ ಆಯ್ಕೆ ಮಾಡುತ್ತಿದ್ದರೆ ದೇವರು ಅದನ್ನು ಮೆಚ್ಚುತ್ತಿದ್ದನು. ಆದಾಮಹವ್ವರಿಗೆ ಇಚ್ಛಾಸ್ವಾತಂತ್ರ್ಯವಿದ್ದ ಕಾರಣ ಯೆಹೋವನಿಗೆ ಪ್ರೀತಿಯಿಂದ ವಿಧೇಯರಾಗುವ ಸಾಮರ್ಥ್ಯ ಅವರಿಗಿತ್ತು.—ಧರ್ಮೋಪದೇಶಕಾಂಡ 30:19, 20.

ನೀತಿ, ನ್ಯಾಯ, ಒಳ್ಳೇತನ

ಬೈಬಲ್‌ ನಮಗೆ ಯೆಹೋವನ ಗುಣಗಳನ್ನು ತಿಳಿಯಪಡಿಸುತ್ತದೆ. ಈ ಗುಣಗಳಿರುವ ದೇವರು ಯಾವುದೇ ರೀತಿಯ ಪಾಪಕ್ಕೆ ಕಾರಣನಾಗಸಾಧ್ಯವಿಲ್ಲ. ಯೆಹೋವನು “ನೀತಿನ್ಯಾಯಗಳನ್ನು ಪ್ರೀತಿಸುವವನು” ಎನ್ನುತ್ತದೆ ಕೀರ್ತನೆ 33:5. ಆದ್ದರಿಂದ ಯಾಕೋಬ 1:13 ಹೇಳುವಂತೆ “ಕೆಟ್ಟ ಸಂಗತಿಗಳಿಂದ ದೇವರನ್ನು ಪರೀಕ್ಷಿಸಲು ಸಾಧ್ಯವೂ ಇಲ್ಲ, ಆತನು ತಾನೇ ಯಾರನ್ನೂ ಪರೀಕ್ಷಿಸುವುದೂ ಇಲ್ಲ.” ನ್ಯಾಯಪರತೆ, ಕಾಳಜಿಯಿಂದ ದೇವರು ಆದಾಮನಿಗೆ ಎಚ್ಚರಿಸಿದ್ದು: “ನೀನು ತೋಟದಲ್ಲಿರುವ ಎಲ್ಲಾ ಮರಗಳ ಹಣ್ಣುಗಳನ್ನು ಯಥೇಚ್ಛವಾಗಿ ತಿನ್ನಬಹುದು; ಒಳ್ಳೇದರ ಕೆಟ್ಟದ್ದರ ಅರುಹನ್ನು ಹುಟ್ಟಿಸುವ ಮರದ ಹಣ್ಣನ್ನು ಮಾತ್ರ ತಿನ್ನಬಾರದು; ತಿಂದ ದಿನ ಸತ್ತೇ ಹೋಗುವಿ.” (ಆದಿಕಾಂಡ 2:16, 17) ಹೀಗೆ ಶಾಶ್ವತ ಜೀವನ ಇಲ್ಲವೆ ಮರಣ ಎಂಬ ಆಯ್ಕೆಯನ್ನು ದೇವರು ಆದಾಮಹವ್ವರ ಮುಂದಿಟ್ಟನು. ಅಂತ್ಯ ಫಲಿತಾಂಶ ಕೆಟ್ಟದಾಗಿರುವುದೆಂದು ಮೊದಲೇ ತಿಳಿದಿದ್ದರೆ ಒಂದು ನಿರ್ದಿಷ್ಟ ಪಾಪದ ವಿಷಯದಲ್ಲಿ ಎಚ್ಚರಿಕೆ ಕೊಡುವುದು ದೇವರ ವಿಷಯದಲ್ಲಿ ಕಪಟತನವಾಗದೇ? ‘ನೀತಿನ್ಯಾಯಗಳನ್ನು ಪ್ರೀತಿಸುವವನಾದ’ ಯೆಹೋವನು ವಾಸ್ತವದಲ್ಲಿ ಇಲ್ಲದಿದ್ದ ಒಂದು ಆಯ್ಕೆಯನ್ನು ಅವರ ಮುಂದೆ ಇಡುತ್ತಿರಲಿಲ್ಲ.

ಯೆಹೋವನ ಉಪಕಾರಗಳು ಅಪಾರ. (ಕೀರ್ತನೆ 31:19) ಆತನ ಒಳ್ಳೇತನವನ್ನು ವರ್ಣಿಸುತ್ತಾ ಯೇಸುವಂದದ್ದು: “ನಿಮ್ಮಲ್ಲಿ ಯಾವನಾದರೂ ರೊಟ್ಟಿಯನ್ನು ಕೇಳುವ ಮಗನಿಗೆ ಕಲ್ಲನ್ನು ಕೊಡುವನೇ? ಅಥವಾ ಪ್ರಾಯಶಃ ಮೀನನ್ನು ಕೇಳಿದರೆ ಹಾವನ್ನು ಕೊಡುವನೇ? ಆದುದರಿಂದ, ಕೆಟ್ಟವರಾಗಿರುವ ನೀವು ನಿಮ್ಮ ಮಕ್ಕಳಿಗೆ ಒಳ್ಳೆಯ ಉಡುಗೊರೆಗಳನ್ನು ಕೊಡುವುದು ಹೇಗೆಂದು ತಿಳಿದಿರುವಲ್ಲಿ ಸ್ವರ್ಗದಲ್ಲಿರುವ ನಿಮ್ಮ ತಂದೆಯು ತನ್ನನ್ನು ಕೇಳುವವರಿಗೆ ಎಷ್ಟೋ ಹೆಚ್ಚಾಗಿ ಒಳ್ಳೆಯ ವಿಷಯಗಳನ್ನು ಕೊಡುವನಲ್ಲವೆ?” (ಮತ್ತಾಯ 7:9-11) ದೇವರು ತನ್ನ ಸೃಷ್ಟಿಜೀವಿಗಳಿಗೆ ಒಳ್ಳೇ ವಿಷಯಗಳನ್ನೇ ಕೊಡುತ್ತಾನೆ. ಮಾನವರನ್ನು ದೇವರು ಸೃಷ್ಟಿಸಿರುವ ವಿಧ, ಅವರ ವಾಸಕ್ಕಾಗಿ ಆತನು ಮಾಡಿದ ಉದ್ಯಾನದಂಥ ಪರದೈಸ ತಾನೇ ದೇವರ ಒಳ್ಳೇತನಕ್ಕೆ ಸಾಕ್ಷ್ಯ. ಇಂಥ ಒಳ್ಳೇ ಪರಮಾಧಿಕಾರಿ ದೇವರು ಅಂತ್ಯದಲ್ಲಿ ಆ ಪರದೈಸವು ಕಳೆದುಹೋಗುವುದು ಎಂದು ತಿಳಿದೂ ತಿಳಿದೂ ಅದನ್ನು ಒದಗಿಸಿ ಕೊಡುವಷ್ಟು ಕ್ರೂರಿಯಾಗಿರುವನೋ? ಖಂಡಿತ ಇಲ್ಲ. ಮನುಷ್ಯನು ಮಾಡಿದ ತಪ್ಪಿಗಾಗಿ ನೀತಿವಂತನೂ ಒಳ್ಳೆಯವನೂ ಆದ ದೇವರನ್ನು ದೂರುವುದು ನಿಶ್ಚಯವಾಗಿಯೂ ಸರಿಯಲ್ಲ.

ಒಬ್ಬನೇ ವಿವೇಕಿಯಾದ ದೇವರು

ಯೆಹೋವನು ಒಬ್ಬನೇ ವಿವೇಕಿ ಎನ್ನುತ್ತದೆ ಬೈಬಲ್‌. (ರೋಮನ್ನರಿಗೆ 16:27) ಸ್ವರ್ಗದಲ್ಲಿರುವ ದೇವದೂತರು ದೇವರ ಅಪರಿಮಿತ ವಿವೇಕಕ್ಕೆ ಸಾಕ್ಷ್ಯವಾಗಿದ್ದ ಅನೇಕ ಕೆಲಸಗಳನ್ನು ಕಣ್ಣಾರೆ ಕಂಡರು. ಯೆಹೋವನು ತನ್ನ ಭೂ ಸೃಷ್ಟಿಯನ್ನು ಮಾಡಿದಾಗ ಅವರು ಆನಂದಘೋಷಮಾಡುತ್ತಾ ಇದ್ದರು. (ಯೋಬ 38:4-7) ಬುದ್ಧಿಶಕ್ತಿಯುಳ್ಳ ಈ ಆತ್ಮಜೀವಿಗಳು ಏದೆನ್‌ ತೋಟದಲ್ಲಿ ನಡೆಯುತ್ತಿದ್ದ ಪ್ರತಿಯೊಂದು ಘಟನೆಯನ್ನೂ ಆಸಕ್ತಿಯಿಂದ ಕಣ್ಣರಳಿಸಿ ನೋಡುತ್ತಿದ್ದರೆಂಬದಕ್ಕೆ ಸಂಶಯವಿಲ್ಲ. ದಿಗ್ಭ್ರಮೆಗೊಳಿಸುವ ವಿಶ್ವ ಹಾಗೂ ವೈವಿಧ್ಯಭರಿತ ಅದ್ಭುತಕರ ಭೂ ಸೃಷ್ಟಿಯನ್ನು ಉಂಟುಮಾಡಿದಂಥ ವಿವೇಕಿ ದೇವರು, ಪಾಪಮಾಡುವರೆಂದು ಮೊದಲೇ ಗೊತ್ತಿದ್ದ ಪ್ರಥಮ ಮಾನವ ದಂಪತಿಯನ್ನು ಈ ದೇವಪುತ್ರರ ಮುಂದೆ ಸೃಷ್ಟಿಸುತ್ತಿದ್ದನೇ? ಇಂಥ ದುರಂತಮಯ ಸಂಗತಿಯೊಂದನ್ನು ದೇವರೇ ಯೋಜಿಸಿದನೆಂದು ಹೇಳುವುದರಲ್ಲಿ ಯಾವುದೇ ಹುರುಳಿಲ್ಲ ಸ್ಪಷ್ಟ.

ಸರ್ವಜ್ಞಾನಿಯಾದ ದೇವರಿಗೆ ಇವೆಲ್ಲ ತಿಳಿದಿಲ್ಲ ಎಂದರೆ ಹೇಗೆ ಎಂದು ಕೆಲವರು ಆಕ್ಷೇಪಿಸಬಹುದು. “ಆರಂಭದಲ್ಲಿಯೇ ಅಂತ್ಯವನ್ನು” ತಿಳಿದುಕೊಳ್ಳುವ ಸಾಮರ್ಥ್ಯ ದೇವರ ಅಪರಿಮಿತ ವಿವೇಕದ ಒಂದು ಮುಖ ಎಂಬುದು ಒಪ್ಪತಕ್ಕದ್ದೇ. (ಯೆಶಾಯ 46:9, 10) ಆದರೆ ಮುನ್ನರಿವಿನ ಈ ಸಾಮರ್ಥ್ಯವನ್ನು ಆತನು ಎಲ್ಲ ಸಮಯದಲ್ಲಿ ಬಳಸಬೇಕೆಂದಿಲ್ಲ; ಹೇಗೆ ತನ್ನ ಅಪಾರ ಶಕ್ತಿಯನ್ನು ಆತನು ಯಾವಾಗಲೂ ಪೂರ್ಣವಾಗಿ ಬಳಸಬೇಕೆಂದಿಲ್ಲವೊ ಹಾಗೆಯೇ. ಆ ಸಾಮರ್ಥ್ಯವನ್ನು ಯಾವಾಗ ಬಳಸಬೇಕೆಂದು ಆತನು ವಿವೇಕದಿಂದ ಆಯ್ಕೆ ಮಾಡುತ್ತಾನೆ. ಯೋಗ್ಯವಾಗಿರುವಾಗ ಮತ್ತು ಪರಿಸ್ಥಿತಿಗೆ ಸೂಕ್ತವಾಗಿರುವಾಗ ಅದನ್ನು ಬಳಸುತ್ತಾನೆ.

ಮುನ್ನರಿವನ್ನು ಯಾವಾಗಲೂ ಬಳಸದಿರುವ ಆತನ ಆಯ್ಕೆಯನ್ನು ಆಧುನಿಕ ತಂತ್ರಜ್ಞಾನದ ಒಂದು ವೈಶಿಷ್ಟ್ಯದೊಂದಿಗೆ ದೃಷ್ಟಾಂತಿಸಬಹುದು. ಒಂದು ಕ್ರೀಡಾ ಪಂದ್ಯವನ್ನು ರೆಕಾರ್ಡ್‌ ಮಾಡಿಡಲಾಗಿದೆ ಎಂದಿಟ್ಟುಕೊಳ್ಳಿ. ಆ ಪಂದ್ಯದ ಫಲಿತಾಂಶವನ್ನು ತಿಳಿಯಲು ಒಬ್ಬ ವ್ಯಕ್ತಿ ಆ ರೆಕಾರ್ಡಿಂಗ್‌ನ ಕೊನೇ ಭಾಗವನ್ನು ಮೊದಲೇ ವೀಕ್ಷಿಸಬಹುದು. ಆದರೆ ಅವನು ಹಾಗೆಯೇ ಮಾಡಬೇಕೆಂಬ ನಿರ್ಬಂಧವಿಲ್ಲ. ಇಡೀ ಪಂದ್ಯವನ್ನು ಆರಂಭದಿಂದಲೇ ನೋಡಲು ಆತನು ಆಯ್ಕೆ ಮಾಡಿದ್ದಲ್ಲಿ ಅವನನ್ನು ಯಾರಾದರೂ ಟೀಕಿಸುವರೇ? ಖಂಡಿತ ಇಲ್ಲ. ಅಂತೆಯೇ ಅಂತಿಮ ಫಲಿತಾಂಶವನ್ನು ಮುಂದಾಗಿಯೇ ತಿಳಿಯಲು ನಿರ್ಮಾಣಿಕನು ಆಯ್ಕೆ ಮಾಡಲಿಲ್ಲ ಎಂಬುದು ಸ್ಪಷ್ಟ. ಘಟನೆಗಳು ಸಂಭವಿಸುತ್ತಾ ಹೋದಂತೆ ತನ್ನ ಭೂ ಮಕ್ಕಳು ಹೇಗೆ ನಡೆದುಕೊಳ್ಳುವರೆಂದು ಕಾದುನೋಡಲು ಆತನು ಆಯ್ಕೆಮಾಡಿದನು.

ನಾವು ಈ ಮೊದಲೇ ನೋಡಿದಂತೆ ವಿವೇಕಿ ದೇವರಾದ ಯೆಹೋವನು ಆದಾಮಹವ್ವರನ್ನು ನಿರ್ದಿಷ್ಟ ಕೆಲಸಕ್ಕಾಗಿ ಪ್ರೋಗ್ರ್ಯಾಮ್‌ ಮಾಡಿದ ಯಂತ್ರಮಾನವರಾಗಿ ಸೃಷ್ಟಿಸಲಿಲ್ಲ. ಬದಲಾಗಿ ಪ್ರೀತಿಯಿಂದ ಅವರಿಗೆ ಇಚ್ಛಾಸ್ವಾತಂತ್ರ್ಯವನ್ನು ಕೊಟ್ಟನು. ಸರಿಯಾದ ಆಯ್ಕೆ ಮಾಡುವ ಮೂಲಕ ಅವರು ತಮ್ಮ ಪ್ರೀತಿ, ಕೃತಜ್ಞತೆ ಮತ್ತು ವಿಧೇಯತೆಯನ್ನು ತೋರಿಸಸಾಧ್ಯವಿತ್ತು. ಹೀಗೆ ತಮಗೂ ತಮ್ಮ ತಂದೆ ಯೆಹೋವನಿಗೂ ಹೆಚ್ಚಿನ ಸಂತಸ ತರಸಾಧ್ಯವಿತ್ತು.—ಜ್ಞಾನೋಕ್ತಿ 27:11; ಯೆಶಾಯ 48:18.

ಮುನ್ನರಿವಿನ ತನ್ನ ಸಾಮರ್ಥ್ಯವನ್ನು ದೇವರು ಹಲವಾರು ಸಂದರ್ಭಗಳಲ್ಲಿ ಬಳಸದೆ ಇದ್ದದ್ದನ್ನು ಬೈಬಲ್‌ ತಿಳಿಸುತ್ತದೆ. ಉದಾಹರಣೆಗೆ, ನಂಬಿಗಸ್ತ ಮನುಷ್ಯ ಅಬ್ರಹಾಮ ತನ್ನ ಮಗನನ್ನು ಯಜ್ಞವಾಗಿ ಅರ್ಪಿಸುವುದಕ್ಕೆ ಕೈಯೆತ್ತಿದಾಗ ಯೆಹೋವನು ಹೀಗಂದನು: “ನೀನು ದೇವರಿಗೆ ಭಯಪಡುತ್ತೀಯೆಂದು ಈಗ ನಾನು ತಿಳಿದಿದ್ದೇನೆ. ನೀನು ನಿನ್ನ ಒಬ್ಬನೇ ಮಗನನ್ನು ನನಗೆ ಅರ್ಪಿಸುವುದಕ್ಕೆ ಹಿಂಜರಿಯಲಿಲ್ಲ.” (ಆದಿಕಾಂಡ 22:12, NIBV) ಅಷ್ಟೇ ಅಲ್ಲದೆ ನಿರ್ದಿಷ್ಟ ಜನರ ದುರ್ನಡತೆಗಳು ದೇವರ ಮನಸ್ಸನ್ನು ನೋಯಿಸಿದ ಕೆಲವು ಸಂದರ್ಭಗಳೂ ಇದ್ದವು. ಅವರು ಆ ರೀತಿ ಮಾಡುತ್ತಾರೆಂದು ಒಂದುವೇಳೆ ದೇವರಿಗೆ ಮೊದಲೇ ತಿಳಿದಿದ್ದಲ್ಲಿ ಅಂಥ ನೋವನ್ನು ಆತನು ಅನುಭವಿಸುತ್ತಿದ್ದನೋ?—ಕೀರ್ತನೆ 78:40, 41; 1 ಅರಸುಗಳು 11:9, 10.

ಹೀಗೆ ಆದಾಮಹವ್ವರು ಪಾಪ ಮಾಡುವರೋ ಇಲ್ಲವೋ ಎಂದು ಮುಂದಾಗಿ ತಿಳಿಯಲು ತನ್ನ ಮುನ್ನರಿವಿನ ಸಾಮರ್ಥ್ಯವನ್ನು ಸರ್ವಜ್ಞಾನಿಯಾದ ದೇವರು ಬಳಸಿರಲಿಲ್ಲ ಎಂದು ತೀರ್ಮಾನಿಸುವುದು ತೀರ ನ್ಯಾಯಸಮ್ಮತ. ಏನೆಲ್ಲ ನಡೆಯಲಿಕ್ಕಿದೆಯೆಂದು ಮುಂದಾಗಿ ತಿಳಿದುಕೊಂಡು ಆಮೇಲೆ ಆ ತಿಳಿದಿರುವ ವಿಷಯದ ಕುರಿತ ಬರೇ ಮರುಪ್ರದರ್ಶನ ಮಾಡುವ ವಿಕಟ ನಾಟಕದಲ್ಲಿ ತೊಡಗಲು ದೇವರು ಅಷ್ಟೇನು ಅವಿವೇಕಿಯಲ್ಲ.

“ದೇವರು ಪ್ರೀತಿಯಾಗಿದ್ದಾನೆ”

ಏದೆನ್‌ ತೋಟದಲ್ಲಿ ನಡೆದ ದಂಗೆಯನ್ನು ಹುಟ್ಟುಹಾಕಿದವನು ದೇವವೈರಿ ಸೈತಾನ. ಈ ದಂಗೆ ಪಾಪ, ಮರಣ ಸೇರಿದಂತೆ ಇನ್ನೂ ಅನೇಕ ಕೆಟ್ಟ ಪರಿಣಾಮಗಳನ್ನು ತಂದೊಡ್ಡಿತು. ಹೀಗೆ ಅವನೊಬ್ಬ ನರಹಂತಕನಾದನು. ಅಷ್ಟೇ ಅಲ್ಲ “ಅವನು ಸುಳ್ಳುಗಾರನೂ ಸುಳ್ಳಿಗೆ ತಂದೆಯೂ” ಆದನು. (ಯೋಹಾನ 8:44) ಕೆಟ್ಟ ಇರಾದೆಗಳಿರುವುದು ಸೈತಾನನಲ್ಲೇ, ಆದರೆ ನಮ್ಮ ಪ್ರಿಯ ನಿರ್ಮಾಣಿಕನಲ್ಲಿ ಕೆಟ್ಟ ಇರಾದೆಗಳಿವೆ ಎಂದು ತೋರಿಸುವ ಪ್ರಯತ್ನ ಅವನದ್ದು. ಮನುಷ್ಯನ ಪಾಪಗಳಿಗಾಗಿ ದೇವರ ಮೇಲೆ ದೂರು ಹೊರಿಸುವುದೇ ಅವನ ಉದ್ದೇಶ.

ಆದಾಮಹವ್ವ ಪಾಪ ಮಾಡುವರೋ ಇಲ್ಲವೋ ಎಂದು ತಿಳಿಯಲು ಯೆಹೋವನು ತನ್ನ ಮುನ್ನರಿವಿನ ಸಾಮರ್ಥ್ಯವನ್ನು ಬಳಸದಿರಲು ಪ್ರೀತಿಯೇ ಪ್ರಮುಖ ಕಾರಣ. ಪ್ರೀತಿ ಆತನ ಮುಖ್ಯ ಗುಣ. “ದೇವರು ಪ್ರೀತಿಯಾಗಿದ್ದಾನೆ” ಎನ್ನುತ್ತದೆ 1 ಯೋಹಾನ 4:8. ಪ್ರೀತಿ ಸಕಾರಾತ್ಮಕ ಆಗಿದೆ, ನಕಾರಾತ್ಮಕವಲ್ಲ. ಬೇರೆಯವರಲ್ಲಿ ಒಳ್ಳೇದನ್ನು ಹುಡುಕುತ್ತಿರುತ್ತದೆ. ಹೌದು, ಇಂಥ ಪ್ರೀತಿಯಿಂದ ಪ್ರೇರಿತನಾದ ಯೆಹೋವ ದೇವರು ಆದಾಮಹವ್ವರ ಒಳಿತನ್ನೇ ಬಯಸಿದನು.

ಆದಾಮಹವ್ವರಿಗೆ ಅವಿವೇಕದ ನಿರ್ಣಯ ಮಾಡುವ ಆಯ್ಕೆ ಇತ್ತಾದರೂ ನಮ್ಮ ಪ್ರಿಯ ತಂದೆ ಪರಿಪೂರ್ಣ ಜೀವಿಗಳಾದ ಅವರಿಂದ ಕೆಟ್ಟದ್ದನ್ನು ನಿರೀಕ್ಷಿಸಿರಲಿಲ್ಲ ಇಲ್ಲವೆ ಶಂಕಿಸಲೂ ಇಲ್ಲ. ಅವರಿಗೆ ಅಗತ್ಯವಿದ್ದ ಎಲ್ಲವನ್ನೂ ಕೊಟ್ಟು, ತಿಳಿಯಬೇಕಾಗಿದ್ದ ಎಲ್ಲದರ ಪೂರ್ಣ ಮಾಹಿತಿ ನೀಡಿದ್ದನು. ಹೀಗೆ ಅವರಿಂದ ವಿಧೇಯರಾಗುವ ಪ್ರೀತಿಯ ಪ್ರತಿಕ್ರಿಯೆಯನ್ನಲ್ಲದೆ ದಂಗೆಯನ್ನಂತೂ ದೇವರು ನಿರೀಕ್ಷಿಸದೇ ಇದ್ದದ್ದು ತೀರ ಯೋಗ್ಯ. ನಿಷ್ಠೆತೋರಿಸುವ ಸಾಮರ್ಥ್ಯ ಪರಿಪೂರ್ಣರಾಗಿದ್ದ ಆದಾಮಹವ್ವರಿಗಿತ್ತೆಂದು ದೇವರಿಗೆ ತಿಳಿದಿತ್ತು. ಅಪರಿಪೂರ್ಣರಾಗಿದ್ದರೂ ನಿಷ್ಠೆತೋರಿಸಿದ್ದ ಅಬ್ರಹಾಮ, ಯೋಬ, ದಾನಿಯೇಲ ಹಾಗೂ ಇನ್ನೂ ಅನೇಕರಿಂದ ಇದು ತದನಂತರ ರುಜುವಾಯಿತು.

“ದೇವರಿಗೆ ಎಲ್ಲವೂ ಸಾಧ್ಯ” ಎಂದನು ಯೇಸು. (ಮತ್ತಾಯ 19:26) ಇದು ಸಾಂತ್ವನಕರ ವಿಷಯವಲ್ಲವೇ? ಯೆಹೋವನ ಪ್ರೀತಿ ಮತ್ತು ಇನ್ನಿತರ ಪ್ರಮುಖ ಗುಣಗಳಾದ ನ್ಯಾಯ, ವಿವೇಕ, ಶಕ್ತಿಯು ಆತನು ಪಾಪ ಮತ್ತು ಮರಣ ತಂದೊಡ್ಡಿದ ಸಕಲ ದುಷ್ಪರಿಣಾಮಗಳನ್ನು ಸಕಾಲದಲ್ಲಿ ತೆಗೆದುಹಾಕಬಲ್ಲನು, ತೆಗೆದುಹಾಕುವನು ಎಂಬ ಆಶ್ವಾಸನೆ ಕೊಡುತ್ತದೆ.—ಪ್ರಕಟನೆ 21:3-5.

ಆದಾಮಹವ್ವ ಪಾಪ ಮಾಡುವರೆಂದು ಯೆಹೋವನಿಗೆ ಮೊದಲೇ ಗೊತ್ತಿರಲಿಲ್ಲ ಎಂಬುದು ಸ್ಫಟಿಕ ಸ್ಪಷ್ಟ. ಆದಾಮನ ಅವಿಧೇಯತೆಯನ್ನು ಮತ್ತು ಅದು ತಂದ ಸಂಕಷ್ಟಗಳನ್ನು ನೋಡಿ ದೇವರಿಗೆ ನೋವಾಯಿತಾದರೂ ಅದು ತಾತ್ಕಾಲಿಕವೆಂದು ದೇವರಿಗೆ ತಿಳಿದಿತ್ತು. ಏಕೆಂದರೆ ಭೂಮಿಗಾಗಿ ಮತ್ತು ಮಾನವರಿಗಾಗಿ ಆತನ ಶಾಶ್ವತ ಉದ್ದೇಶದ ನೆರವೇರಿಕೆಯನ್ನು ಅದು ತಡೆಹಿಡಿಯುವಂತಿರಲಿಲ್ಲ. ಆ ಉದ್ದೇಶದ ಬಗ್ಗೆ ಹಾಗೂ ಅದರ ಆಶ್ಚರ್ಯಕರ ನೆರವೇರಿಕೆಯಿಂದ ಹೇಗೆ ಪ್ರಯೋಜನ ಪಡೆಯಬಲ್ಲಿರೆಂಬದರ ಬಗ್ಗೆ ಹೆಚ್ಚನ್ನು ತಿಳಿಯಲು ನೀವು ಮನಸ್ಸು ಮಾಡುವಿರೋ? * (w11-E 01/01)

[ಪಾದಟಿಪ್ಪಣಿ]

^ ಪ್ಯಾರ. 23 ಭೂಮಿಗಾಗಿರುವ ದೇವರ ಉದ್ದೇಶದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಪುಸ್ತಕದ ಅಧ್ಯಾಯ 3 ನೋಡಿ. ಇದು ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತ.

[ಪುಟ 12ರಲ್ಲಿರುವ ಸಂಕ್ಷಿಪ್ತ ವಿವರ]

ಯೆಹೋವನು ಆದಾಮಹವ್ವರನ್ನು ನಿರ್ದಿಷ್ಟ ಕೆಲಸಕ್ಕಾಗಿ ಪ್ರೋಗ್ರ್ಯಾಮ್‌ ಮಾಡಿದ ಯಂತ್ರಮಾನವರಾಗಿ ಸೃಷ್ಟಿಸಲಿಲ್ಲ

[ಪುಟ 13ರಲ್ಲಿರುವ ಸಂಕ್ಷಿಪ್ತ ವಿವರ]

ನಿಷ್ಠೆತೋರಿಸುವ ಸಾಮರ್ಥ್ಯ ಪರಿಪೂರ್ಣರಾಗಿದ್ದ ಆದಾಮಹವ್ವರಿಗಿತ್ತೆಂದು ದೇವರಿಗೆ ತಿಳಿದಿತ್ತು