ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೇಸು ಕ್ರಿಸ್ತನು ಯಾರು?

ಯೇಸು ಕ್ರಿಸ್ತನು ಯಾರು?

ದೇವರ ವಾಕ್ಯದಿಂದ ಕಲಿಯಿರಿ

ಯೇಸು ಕ್ರಿಸ್ತನು ಯಾರು?

ನೀವು ಯೋಚಿಸಿರಬಹುದಾದ ಕೆಲವು ಪ್ರಶ್ನೆಗಳನ್ನು ಈ ಲೇಖನದಲ್ಲಿ ಕೊಡಲಾಗಿದೆ ಮಾತ್ರವಲ್ಲ ಅವುಗಳ ಉತ್ತರಗಳನ್ನು ದೇವರ ವಾಕ್ಯವಾದ ಬೈಬಲಿನಲ್ಲಿ ನೀವೆಲ್ಲಿ ಓದಬಹುದೆಂದೂ ತೋರಿಸಲಾಗಿದೆ. ಈ ಉತ್ತರಗಳನ್ನು ನಿಮ್ಮ ಜೊತೆ ಚರ್ಚಿಸಲು ಯೆಹೋವನ ಸಾಕ್ಷಿಗಳು ಸಂತೋಷಪಡುವರು.

1. ಯೇಸು ಕ್ರಿಸ್ತನು ಯಾರು?

ಯೇಸು ಭೂಮಿಯಲ್ಲಿ ಹುಟ್ಟುವ ಮುಂಚೆ ಸ್ವರ್ಗದಲ್ಲಿ ಒಬ್ಬ ಆತ್ಮಜೀವಿಯಾಗಿ ಜೀವಿಸಿದ್ದನು. ಈ ರೀತಿ ಬೇರಾವ ಮನುಷ್ಯನೂ ಜೀವಿಸಿಲ್ಲ. (ಯೋಹಾನ 8:23) ದೇವರ ಮೊಟ್ಟಮೊದಲ ಸೃಷ್ಟಿ ಯೇಸುವೇ. ಬೇರೆಲ್ಲವನ್ನೂ ಸೃಷ್ಟಿಸುವುದರಲ್ಲಿ ಆತನು ದೇವರಿಗೆ ನೆರವಾದನು. ಹೀಗೆ ಯೆಹೋವನಿಂದ ನೇರವಾಗಿ ಸೃಷ್ಟಿಸಲ್ಪಟ್ಟವನು ಈತನೊಬ್ಬನೇ. ಆದ್ದರಿಂದ ಯೇಸುವನ್ನು ದೇವರ “ಏಕೈಕಜಾತ” ಪುತ್ರನೆಂದು ಕರೆಯಲಾಗಿದೆ. ಆತನು ದೇವರ ವಕ್ತಾರನಾಗಿದ್ದನು. ಆದ್ದರಿಂದಲೇ ಆತನನ್ನು “ವಾಕ್ಯ” ಎಂದೂ ಕರೆಯಲಾಗಿದೆ.—ಯೋಹಾನ 1:1-3, 14; ಓದಿ ಜ್ಞಾನೋಕ್ತಿ 8:22, 23, 30; ಕೊಲೊಸ್ಸೆ 1:15, 16.

2. ಯೇಸು ಭೂಮಿಗೆ ಬಂದದ್ದೇಕೆ?

ದೇವರು ಸ್ವರ್ಗದಲ್ಲಿದ್ದ ತನ್ನ ಪುತ್ರನನ್ನು ಭೂಮಿಗೆ ಕಳುಹಿಸಿದ್ದು ಹೇಗೆಂದರೆ, ಮರಿಯಳೆಂಬ ಯೆಹೂದಿ ಕನ್ನಿಕೆಯ ಗರ್ಭಕ್ಕೆ ಆ ಪುತ್ರನ ಜೀವವನ್ನು ಸ್ಥಳಾಂತರಿಸುವ ಮೂಲಕ. ಹಾಗಾಗಿ ಯೇಸುವಿಗೆ ಒಬ್ಬ ಮಾನವ ಪಿತನಿರಲಿಲ್ಲ. (ಲೂಕ 1:30-35) ಯೇಸು ಭೂಮಿಗೆ ಬಂದದ್ದು (1) ದೇವರ ಕುರಿತ ಸತ್ಯ ಕಲಿಸಲಿಕ್ಕೆ, (2) ದೇವರ ಇಚ್ಛೆಯನ್ನು ಪೂರೈಸುವ ವಿಷಯದಲ್ಲಿ ಮಾದರಿಯನ್ನಿಡಲಿಕ್ಕೆ, (3) ತನ್ನ ಪರಿಪೂರ್ಣ ಜೀವವನ್ನು “ವಿಮೋಚನಾ ಮೌಲ್ಯವಾಗಿ” ಕೊಡಲಿಕ್ಕೆ.ಮತ್ತಾಯ 20:28; ಯೋಹಾನ 18:37 ಓದಿ.

3. ವಿಮೋಚನಾ ಮೌಲ್ಯ ನಮಗೇಕೆ ಬೇಕು?

ವಿಮೋಚನಾ ಮೌಲ್ಯವು, ಒಬ್ಬ ವ್ಯಕ್ತಿಯನ್ನು ಬಂಧನದಿಂದ ಬಿಡಿಸಲಿಕ್ಕಾಗಿ ತೆರಲಾಗುವ ಬೆಲೆ ಆಗಿದೆ. ಮರಣ, ವೃದ್ಧಾಪ್ಯ ಇವೆಲ್ಲ ಮಾನವಕುಲಕ್ಕಾಗಿ ದೇವರಿಗಿದ್ದ ಮೂಲ ಉದ್ದೇಶದ ಭಾಗವಾಗಿರಲಿಲ್ಲ. ನಮಗಿದು ಹೇಗೆ ಗೊತ್ತು? ಪ್ರಥಮ ಮನುಷ್ಯ ಆದಾಮನು ಅವಿಧೇಯನಾದರೆ (ಬೈಬಲಿಗನುಸಾರ ಅವಿಧೇಯತೆಯು ಪಾಪವಾಗಿದೆ) ಸಾಯುವನೆಂದು ದೇವರು ಹೇಳಿದ್ದನು. ಆದಾಮನು ಆ ಪಾಪ ಮಾಡಿರದಿದ್ದರೆ ಎಂದೂ ಸಾಯುತ್ತಿರಲಿಲ್ಲ. ಪಾಪ ಮಾಡಿ ಹಲವಾರು ಶತಮಾನಗಳ ನಂತರವೇ ಆದಾಮನು ಮೃತನಾದರೂ, ಅವನು ದೇವರಿಗೆ ಅವಿಧೇಯನಾದ ದಿನದಿಂದಲೇ ಮರಣಾಭಿಮುಖನಾದನು. (ಆದಿಕಾಂಡ 2:16, 17; 5:5) ಆದಾಮನು ತನ್ನೆಲ್ಲ ವಂಶಜರಿಗೆ ಪಾಪ ಮತ್ತು ಪಾಪದ ಶಿಕ್ಷೆಯಾದ ಮರಣವನ್ನು ದಾಟಿಸಿದನು. ಹೀಗೆ, ಆದಾಮನ ಮೂಲಕ ಮರಣವು ಮಾನವಕುಲವೆಂಬ ಜಗತ್ತನ್ನು ಪ್ರವೇಶಿಸಿತು. ಈ ಕಾರಣಕ್ಕಾಗಿಯೇ ನಮಗೆ ವಿಮೋಚನಾ ಮೌಲ್ಯವು ಬೇಕು.ರೋಮನ್ನರಿಗೆ 5:12; 6:23 ಓದಿ.

4. ಯೇಸು ಯಾತಕ್ಕಾಗಿ ಸತ್ತನು?

ಮರಣದಿಂದ ನಮ್ಮನ್ನು ಬಿಡಿಸಲು ವಿಮೋಚನಾ ಮೌಲ್ಯವನ್ನು ಯಾರು ತೆರಸಾಧ್ಯವಿತ್ತು? ನಾವು ಸಾಯುವಾಗ ದಂಡತೆರುವುದು ನಮ್ಮ ಪಾಪಗಳಿಗಾಗಿ ಮಾತ್ರ. ಅಪರಿಪೂರ್ಣನಾದ ಯಾವ ಮನುಷ್ಯನೂ ಇತರರ ಪಾಪಗಳಿಗಾಗಿ ದಂಡತೆರಲಾರನು.—ಕೀರ್ತನೆ 49:7-9 ಓದಿ.

ಯೇಸು ಮಾನವ ಪಿತನಿಂದ ಹುಟ್ಟಿರದಿದ್ದ ಕಾರಣ ಅವನು ಪಾಪವನ್ನು ಬಾಧ್ಯತೆಯಾಗಿ ಪಡೆಯಲಿಲ್ಲ. ಹಾಗಾಗಿ ಆತನು ಸತ್ತದ್ದು ತನ್ನ ಸ್ವಂತ ಪಾಪಗಳಿಗಾಗಿ ಅಲ್ಲ ಬದಲಾಗಿ ಇತರ ಮನುಷ್ಯರ ಪಾಪಗಳಿಗಾಗಿ. ದೇವರು ತನ್ನ ಪುತ್ರನನ್ನು ನಮಗಾಗಿ ಸಾಯುವಂತೆ ಕಳುಹಿಸಿಕೊಟ್ಟದ್ದು ಮಾನವಕುಲದ ಮೇಲಿರುವ ಆತನ ಮಹಾ ಪ್ರೀತಿಯ ದ್ಯೋತಕ. ತನ್ನ ತಂದೆಯಾದ ದೇವರಿಗೆ ವಿಧೇಯನಾಗಿ ನಮ್ಮ ಪಾಪಗಳಿಗಾಗಿ ಪ್ರಾಣತೆರುವ ಮೂಲಕ ಯೇಸು ಸಹ ನಮ್ಮ ಮೇಲೆ ಪ್ರೀತಿ ತೋರಿಸಿದನು.ಯೋಹಾನ 3:16; ರೋಮನ್ನರಿಗೆ 5:18, 19 ಓದಿ.

5. ಯೇಸು ಈಗ ಏನು ಮಾಡುತ್ತಿದ್ದಾನೆ?

ಅಸ್ವಸ್ಥರನ್ನು ಗುಣಪಡಿಸುವ, ಸತ್ತವರಿಗೆ ಪುನಃ ಜೀವ ಕೊಡುವ, ಪಾಪಮರಣದಿಂದ ಜನರನ್ನು ರಕ್ಷಿಸಲು ತನ್ನ ಪ್ರಾಣವನ್ನೇ ಕೊಡುವ ಮೂಲಕ ಯೇಸು ವಿಧೇಯ ಮಾನವಕುಲಕ್ಕಾಗಿ ಭವಿಷ್ಯದಲ್ಲಿ ತಾನೇನು ಮಾಡಲಿರುವೆನೆಂದು ತೋರಿಸಿಕೊಟ್ಟನು. (ಲೂಕ 18:35-42; ಯೋಹಾನ 5:28, 29) ಯೇಸು ಸತ್ತನಂತರ ದೇವರು ಆತನನ್ನು ಒಬ್ಬ ಆತ್ಮಜೀವಿಯಾಗಿ ಜೀವಂತಗೊಳಿಸಿದನು. (1 ಪೇತ್ರ 3:18) ತದನಂತರ, ಭೂಮಿ ಮೇಲೆ ರಾಜನಾಗಿ ಆಳಲು ದೇವರು ಅಧಿಕಾರ ಕೊಡುವ ತನಕ ಆತನು ದೇವರ ಬಲಗಡೆಯಲ್ಲಿ ಕಾದುಕೊಂಡಿದ್ದನು. (ಇಬ್ರಿಯ 10:12, 13) ಈಗ ಯೇಸು ಸ್ವರ್ಗದಲ್ಲಿ ರಾಜನಾಗಿ ಆಳುತ್ತಿದ್ದಾನೆ. ಈ ಶುಭವಾರ್ತೆಯನ್ನು ಭೂಮಿಯಲ್ಲಿರುವ ಆತನ ಹಿಂಬಾಲಕರು ಜಗತ್ತಿನಾದ್ಯಂತ ಪ್ರಕಟಿಸುತ್ತಿದ್ದಾರೆ.ದಾನಿಯೇಲ 7:13, 14; ಮತ್ತಾಯ 24:14 ಓದಿ.

ರಾಜನಾದ ಯೇಸು ಕಷ್ಟಸಂಕಟವನ್ನೂ ಅದಕ್ಕೆ ಕಾರಣರಾಗುವವರೆಲ್ಲರನ್ನೂ ಅಳಿಸಿಹಾಕಲು ತನಗಿರುವ ಈ ಅಧಿಕಾರವನ್ನು ಬಲುಬೇಗನೆ ಬಳಸಲಿದ್ದಾನೆ. ಆತನಲ್ಲಿ ನಂಬಿಕೆಯಿಟ್ಟು, ಆತನಿಗೆ ವಿಧೇಯರಾಗುವ ಲಕ್ಷಾಂತರ ಮಂದಿ ಆಗ ಭೂಮಿಯ ಮೇಲೆ ಸುಂದರ ಉದ್ಯಾನವನವಾದ ಪರದೈಸಿನಲ್ಲಿ ಬದುಕನ್ನು ಆನಂದಿಸುವರು.ಕೀರ್ತನೆ 37:9-11 ಓದಿ. (w11-E 03/01)

ಹೆಚ್ಚಿನ ಮಾಹಿತಿಗಾಗಿ, ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತವಾದ ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಪುಸ್ತಕದ 4ನೇ ಅಧ್ಯಾಯ ನೋಡಿ.

[ಪುಟ 29ರಲ್ಲಿರುವ ಚಿತ್ರ]

ಯೇಸುವಿನಲ್ಲಿ ನಂಬಿಕೆಯಿಟ್ಟು, ಆತನಿಗೆ ವಿಧೇಯರಾಗುವ ಲಕ್ಷಾಂತರ ಮಂದಿ ಭೂಮಿಯ ಮೇಲೆ ಸುಂದರ ಉದ್ಯಾನವನವಾದ ಪರದೈಸಿನಲ್ಲಿ ಬದುಕನ್ನು ಆನಂದಿಸುವರು