ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಈ ಹಳೇ ಲೋಕದ ಅಂತ್ಯವನ್ನು ಜೊತೆಜೊತೆಯಾಗಿ ಎದುರಿಸೋಣ!

ಈ ಹಳೇ ಲೋಕದ ಅಂತ್ಯವನ್ನು ಜೊತೆಜೊತೆಯಾಗಿ ಎದುರಿಸೋಣ!

“ನಾವು ಒಬ್ಬರಿಗೊಬ್ಬರು ಸೇರಿರುವ ಅಂಗಗಳಾಗಿದ್ದೇವೆ.”—ಎಫೆ. 4:25.

1, 2. ಯುವಜನರು, ವಯಸ್ಸಾದವರು ಎನ್ನದೆ ದೇವರು ತನ್ನೆಲ್ಲ ಆರಾಧಕರಿಂದ ಏನನ್ನು ಬಯಸುತ್ತಾನೆ?

ನೀವೊಬ್ಬ ಯುವ ವ್ಯಕ್ತಿಯೊ? ಹಾಗಿದ್ದರೆ ಯೆಹೋವನ ಜಗದ್ವಾ್ಯಪಕ ಸಭೆಯ ಭಾಗವಾಗಿರುವ ನಿಮ್ಮನ್ನು ತುಂಬ ಮೆಚ್ಚುತ್ತೇವೆ. ಅನೇಕ ದೇಶಗಳಲ್ಲಿ ದೀಕ್ಷಾಸ್ನಾನ ಪಡೆಯುವವರಲ್ಲಿ ಯುವ ಜನರೇ ಹೆಚ್ಚು. ಯೆಹೋವನ ಸೇವೆಮಾಡುವ ನಿರ್ಣಯ ತೆಗೆದುಕೊಂಡವರೊಂದಿಗೆ ಇವರು ಸೇರುವುದನ್ನು ನೋಡಿ ಮನಸ್ಸು ಸಂತೋಷದಿಂದ ಉಬ್ಬುತ್ತದೆ!

2 ಯುವಪ್ರಾಯದವರಾದ ನಿಮಗೆ ಬೇರೆ ಯುವ ಜನರೊಂದಿಗೆ ಇರುವುದೆಂದರೆ ತುಂಬ ಇಷ್ಟ ಅಲ್ವಾ? ನಮ್ಮ ಪ್ರಾಯದವರೊಂದಿಗೆ ಸಂತೋಷದಿಂದ ಕಾಲಕಳೆಯುವುದು ಖುಷಿ ತರುತ್ತದೆ. ಆದರೆ ನಾವು ಯುವಜನರಾಗಿರಲಿ, ವಯಸ್ಸಾದವರಾಗಿರಲಿ ಅಥವಾ ಯಾವುದೇ ಹಿನ್ನೆಲೆಯವರಾಗಿರಲಿ ದೇವರ ಆರಾಧನೆಯಲ್ಲಿ ಎಲ್ಲರೂ ಐಕ್ಯರಾಗಿರಬೇಕು ಎನ್ನುವುದು ಆತನ ಇಚ್ಛೆ. “ಎಲ್ಲ ರೀತಿಯ ಜನರು ರಕ್ಷಣೆಯನ್ನು ಹೊಂದಬೇಕು ಮತ್ತು ಸತ್ಯದ ನಿಷ್ಕೃಷ್ಟ ಜ್ಞಾನವನ್ನು ಪಡೆದುಕೊಳ್ಳಬೇಕು” ಎನ್ನುವುದು ದೇವರ ಚಿತ್ತವೆಂದು ಅಪೊಸ್ತಲ ಪೌಲನು ಬರೆದನು. (1 ತಿಮೊ. 2:3, 4) ಅಲ್ಲದೆ “ಎಲ್ಲ ಜನಾಂಗಗಳಿಂದಲೂ ಕುಲಗಳಿಂದಲೂ ಪ್ರಜೆಗಳಿಂದಲೂ ಭಾಷೆಗಳಿಂದಲೂ” ಬಂದಿರುವ ದೇವರ ಆರಾಧಕರ ವರ್ಣನೆ ಪ್ರಕಟನೆ 7:9ರಲ್ಲಿದೆ.

3, 4. (ಎ) ಇಂದಿನ ಯುವಜನರಲ್ಲಿ ಯಾವ ಪ್ರವೃತ್ತಿಯಿದೆ? (ಬಿ) ಯಾವ ಮನೋಭಾವ ಎಫೆಸ 4:25ಕ್ಕೆ ಹೊಂದಿಕೆಯಲ್ಲಿದೆ?

3 ಯೆಹೋವನ ಯುವ ಸೇವಕರ ಹಾಗೂ ಲೋಕದ ಯುವಜನರ ನಡುವೆ ಹಗಲಿರುಳಷ್ಟು ವ್ಯತ್ಯಾಸವಿದೆ! ಯೆಹೋವನನ್ನು ಆರಾಧಿಸದ ಅನೇಕ ಯುವಜನರಿಗೆ ಬರೀ ತಮ್ಮ ಬಗ್ಗೆಯೇ ಯೋಚನೆ. ತಮಗೇನು ಬೇಕೊ ಅದನ್ನು ಪಡೆಯುವುದರ ಮೇಲೆಯೇ ಗಮನ. ಕೆಲವು ಸಂಶೋಧಕರು ಈ ಪೀಳಿಗೆಯವರನ್ನು ಸ್ವಾರ್ಥಿಗಳೆಂದು ಕರೆಯುತ್ತಾರೆ. ಯುವಜನರು ತಮ್ಮ ಮಾತಿನ ಶೈಲಿ ಹಾಗೂ ಬಟ್ಟೆಬರೆಯ ಮೂಲಕ ವೃದ್ಧ ತಲೆಮಾರಿನವರ ಕಡೆಗೆ ತಾತ್ಸಾರ ತೋರಿಸುತ್ತಾರೆ.

4 ಇಂಥ ಮನೋಭಾವ ನಮ್ಮ ಸುತ್ತಲೂ ಇದೆ. ಹಾಗಾಗಿ ಇದರಿಂದ ದೂರವಿದ್ದು ದೇವರ ನೋಟದ ಪ್ರಕಾರ ನಡೆಯಲು ಯೆಹೋವನ ಯುವ ಸೇವಕರು ತುಂಬ ಪ್ರಯತ್ನ ಹಾಕಬೇಕಾಗುತ್ತದೆ. ಪ್ರಥಮ ಶತಮಾನದಲ್ಲೂ ಪೌಲನು ಜೊತೆ ವಿಶ್ವಾಸಿಗಳಿಗೆ ‘ಪೂರ್ವದಲ್ಲಿ ನಡೆದಂಥ’ ರೀತಿಯಲ್ಲಿ ನಡೆಯದಂತೆ ಅಂದರೆ ‘ಅವಿಧೇಯತೆಯ ಪುತ್ರರಲ್ಲಿ ಕಾರ್ಯನಡೆಸುತ್ತಿರುವ ಮಾನಸಿಕ ಪ್ರವೃತ್ತಿ’ಯಿಂದ ದೂರವಿರುವಂತೆ ಪ್ರೇರಿಸಬೇಕಾಯಿತು. (ಎಫೆಸ 2:1-3 ಓದಿ.) ಈ ಪ್ರವೃತ್ತಿಯಿಂದ ದೂರವಿರುವ ಅಗತ್ಯವನ್ನು ಮನಗಂಡು ತಮ್ಮೆಲ್ಲ ಸಹೋದರರೊಂದಿಗೆ ಐಕ್ಯವಾಗಿ ಕೆಲಸಮಾಡುವ ಯುವಜನರಿಗೆ ‘ಶಹಬ್ಬಾಸ್‌!’ ಎನ್ನುತ್ತೇವೆ. ಇವರ ಈ ಮನೋಭಾವ “ನಾವು ಒಬ್ಬರಿಗೊಬ್ಬರು ಸೇರಿರುವ ಅಂಗಗಳಾಗಿದ್ದೇವೆ” ಎಂದು ಪೌಲನು ಹೇಳಿದ ಮಾತಿಗೆ ಹೊಂದಿಕೆಯಲ್ಲಿದೆ. (ಎಫೆ. 4:25) ಈ ಹಳೇ ಲೋಕದ ಅಂತ್ಯ ಹತ್ತಿರ ಬರುತ್ತಿದ್ದಂತೆ ನಾವೆಲ್ಲರೂ ಐಕ್ಯರಾಗಿ ಕೆಲಸಮಾಡುವ ಮಹತ್ವ ಹೆಚ್ಚೆಚ್ಚಾಗುತ್ತಾ ಹೋಗುವುದು. ಹಾಗಾಗಿ ನಾವೆಲ್ಲರೂ ಜೊತೆಜೊತೆಯಾಗಿದ್ದು, ಐಕ್ಯರಾಗಿರುವುದು ಅಗತ್ಯ ಎಂಬದನ್ನು ಮನದಟ್ಟು ಮಾಡಿಸುವ ಕೆಲವು ಬೈಬಲ್‌ ಉದಾಹರಣೆಗಳನ್ನು ಈಗ ಚರ್ಚಿಸೋಣ.

ಜೊತೆಜೊತೆ ಇದ್ದವರು

5, 6. ಲೋಟ ಮತ್ತವನ ಪುತ್ರಿಯರಿಂದ ನಾವು ಯಾವ ಪಾಠ ಕಲಿಯಬಹುದು?

5 ಗತಕಾಲದಲ್ಲಿ ಯೆಹೋವನ ಜನರು ಕಷ್ಟದ ಸಮಯಗಳಲ್ಲಿ ಪರಸ್ಪರರಿಗೆ ನೆರವಾಗುತ್ತಾ ಐಕ್ಯರಾಗಿದ್ದಾಗೆಲ್ಲ ಆತನು ಅವರನ್ನು ಸಂತೋಷದಿಂದ ಸಂರಕ್ಷಿಸಿದನು. ಆಧುನಿಕ ಸಮಯದಲ್ಲಿ ದೇವರ ಸೇವಕರು ಯುವಜನರಾಗಿರಲಿ ವೃದ್ಧರಾಗಿರಲಿ ಬೈಬಲಿನ ಉದಾಹರಣೆಗಳಿಂದ ಪಾಠ ಕಲಿಯಬಲ್ಲರು. ಒಂದು ಉದಾಹರಣೆ ಲೋಟನದ್ದು.

6 ಲೋಟ ಮತ್ತವನ ಕುಟುಂಬ ವಾಸವಾಗಿದ್ದ ಸೊದೋಮ್‌ ಪಟ್ಟಣದ ಮೇಲೆ ನಾಶನ ಬರಲಿತ್ತು. ಸನ್ನಿವೇಶ ಅಪಾಯಕಾರಿಯಾಗಿತ್ತು. ದೇವದೂತರು ಲೋಟನಿಗೆ ಅಲ್ಲಿಂದ ಹೊರಟು, ಜೀವಉಳಿಸಿಕೊಳ್ಳಲು ಪರ್ವತ ಪ್ರದೇಶಕ್ಕೆ ಹೋಗುವಂತೆ ಉತ್ತೇಜಿಸುತ್ತಾ, “ಅಲ್ಲಿಗೆ ಹೋಗಿ ತಪ್ಪಿಸಿಕೋ” ಎಂದರು. (ಆದಿ. 19:12-22) ಲೋಟನು ವಿಧೇಯನಾದನು. ಅವನ ಇಬ್ಬರು ಪುತ್ರಿಯರೂ ಅವನೊಟ್ಟಿಗೆ ಸಹಕರಿಸಿ ಆ ಪಟ್ಟಣ ಬಿಟ್ಟುಹೋದರು. ಆದರೆ ಅವರ ಇತರ ಆಪ್ತ ಬಂಧುಗಳು ಹಾಗೆ ಮಾಡಲಿಲ್ಲ ಎನ್ನುವುದು ದುಃಖದ ಸಂಗತಿ. ತನ್ನ ಪುತ್ರಿಯರಿಗೆ ನಿಶ್ಚಯವಾಗಿದ್ದ ಪುರುಷರಿಗೆ ಲೋಟನು ವಿಷಯ ತಿಳಿಸಿದಾಗ ಅವರಿಗೆ ಅವನು “ಗೇಲಿಮಾಡುವವನಾಗಿ ಕಾಣಿಸಿದನು.” ಅವನ ಮಾತನ್ನು ಉಡಾಫೆಯಾಗಿ ತೆಗೆದುಕೊಂಡದ್ದರಿಂದ ಅವರು ಜೀವ ಕಳಕೊಂಡರು. (ಆದಿ. 19:14) ಆದರೆ ಲೋಟ ಮತ್ತವನ ಜೊತೆಯೇ ಉಳಿದ ಪುತ್ರಿಯರ ಜೀವ ಉಳಿಯಿತು.

7. ಇಸ್ರಾಯೇಲ್ಯರು ಐಗುಪ್ತದಿಂದ ಹೊರಟಾಗ ಐಕ್ಯರಾಗಿದ್ದವರಿಗೆ ಯೆಹೋವನು ಹೇಗೆ ಸಹಾಯಮಾಡಿದನು?

7 ಇನ್ನೊಂದು ಉದಾಹರಣೆ ನೋಡಿ. ಇಸ್ರಾಯೇಲ್ಯರು ಐಗುಪ್ತವನ್ನು ಬಿಟ್ಟುಹೋದಾಗ ಬೇರೆಬೇರೆ ಗುಂಪು ಮಾಡಿಕೊಂಡು, ಅವರವರಿಗೆ ಬೇಕಾದ ಮಾರ್ಗ ಹಿಡಿದು ಹೋಗಲಿಲ್ಲ. ಮುಂದೆ, ಮೋಶೆ “ಸಮುದ್ರದ ಮೇಲೆ ಕೈ ಚಾಚಿದಾಗ” ಯೆಹೋವನು ಅದನ್ನು ಇಬ್ಭಾಗಮಾಡಿದನು. ಆಗ ಮೋಶೆ ತನ್ನ ಪಾಡಿಗೆ ಒಬ್ಬನೇ ಸಮುದ್ರ ದಾಟಲಿಲ್ಲ ಇಲ್ಲವೇ ಬರೀ ಕೆಲವು ಇಸ್ರಾಯೇಲ್ಯರೊಂದಿಗೆ ದಾಟಲಿಲ್ಲ. ಬದಲಾಗಿ ಯೆಹೋವನ ಸಂರಕ್ಷಣೆಯಿಂದಾಗಿ ಇಡೀ ಸಭೆ ದಾಟಿತು. (ವಿಮೋ. 14:21, 22, 29, 30) ಅವರಲ್ಲಿ ಒಗ್ಗಟ್ಟಿತ್ತು. ಅವರ ಜೊತೆ “ಬಹು ಮಂದಿ ಅನ್ಯರೂ” ಅಂದರೆ ಅವರ ಪಕ್ಷವಹಿಸಿದ್ದ ಇಸ್ರಾಯೇಲ್ಯರಲ್ಲದವರೂ ಇದ್ದರು. (ವಿಮೋ. 12:38) ಕೆಲವರು, ಬಹುಶಃ ಯುವ ಜನರು ತಮ್ಮದೇ ಆದ ಗುಂಪು ಕಟ್ಟಿಕೊಂಡು ತಮಗಿಷ್ಟವಾದ ಮಾರ್ಗ ಹಿಡಿದು ಹೋದದ್ದನ್ನು ಊಹಿಸಲಿಕ್ಕೂ ಆಗುವುದಿಲ್ಲ ಅಲ್ಲವೇ? ಹಾಗೆ ಮಾಡಿರುತ್ತಿದ್ದರೆ ಅದು ಮೂರ್ಖತನ ಆಗಿರುತ್ತಿತ್ತು. ಅವರಿಗೆ ಯೆಹೋವನ ಸಂರಕ್ಷಣೆ ಇರುತ್ತಿರಲಿಲ್ಲ.—1 ಕೊರಿಂ. 10:1.

8. ಯೆಹೋಷಾಫಾಟನ ದಿನಗಳಲ್ಲಿ ದೇವಜನರು ಹೇಗೆ ಐಕ್ಯತೆ ತೋರಿಸಿದರು?

8 ರಾಜ ಯೆಹೋಷಾಫಾಟನ ದಿನದಲ್ಲಿ ದೇವಜನರನ್ನು ಒಂದು ಬಲಶಾಲಿ ಶತ್ರು ಎದುರುಹಾಕಿಕೊಂಡಿತು. ಈ ಶತ್ರು ಸುತ್ತಲಿನ ಕ್ಷೇತ್ರಗಳಿಂದ ಬಂದ “ಮಹಾಸಮೂಹ” ಅಥವಾ ಒಂದು ದೊಡ್ಡ ಗುಂಪಾಗಿತ್ತು. (2 ಪೂರ್ವ. 20:1, 2) ಆದರೆ ಇವರನ್ನು ದೇವರ ಸೇವಕರು ತಮ್ಮ ಸ್ವಂತ ಶಕ್ತಿಯಿಂದ ಸೋಲಿಸಲು ಪ್ರಯತ್ನಿಸಲಿಲ್ಲ. ಬದಲಿಗೆ ಯೆಹೋವನ ಸಹಾಯ ಕೋರಿದರು. (2 ಪೂರ್ವಕಾಲವೃತ್ತಾಂತ 20:3, 4 ಓದಿ.) ಒಬ್ಬೊಬ್ಬರೂ ತಮಗೆ ಮನಸ್ಸು ಬಂದಂತೆ, ತಮಗೆ ಸರಿಯನಿಸಿದ ವಿಧದಲ್ಲಿ ಪರಿಹಾರ ಕಂಡುಹಿಡಿಯಲು ಪ್ರಯತ್ನಿಸಲಿಲ್ಲ. ಬೈಬಲ್‌ ದಾಖಲೆ ಹೀಗನ್ನುತ್ತದೆ: “ಎಲ್ಲಾ ಯೆಹೂದ್ಯರೂ ಅವರ ಹೆಂಡತಿಮಕ್ಕಳೂ ಯೆಹೋವನ ಸನ್ನಿಧಿಯಲ್ಲಿ ನಿಂತಿದ್ದರು.” (2 ಪೂರ್ವ. 20:13) ಆಬಾಲವೃದ್ಧರೆನ್ನದೆ ಎಲ್ಲರೂ ಜೊತೆಯಾಗಿ ಯೆಹೋವನ ನಿರ್ದೇಶನವನ್ನು ನಂಬಿಕೆಯಿಂದ ಪಾಲಿಸಿದರು. ಯೆಹೋವನು ಅವರನ್ನು ಶತ್ರುಗಳಿಂದ ರಕ್ಷಿಸಿದನು. (2 ಪೂರ್ವ. 20:20-27) ದೇವರ ಜನರಾಗಿ ನಮಗೆ ಬರುವ ಸವಾಲುಗಳನ್ನು ಹೇಗೆ ಎದುರಿಸಬೇಕು ಎಂಬ ವಿಷಯದಲ್ಲಿ ಇದೊಂದು ಉತ್ತಮ ಮಾದರಿಯಲ್ಲವೇ?

9. ಆರಂಭದ ಕ್ರೈಸ್ತರ ಕ್ರಿಯೆಗಳು ಮತ್ತು ಮನೋಭಾವದಿಂದ ಐಕ್ಯತೆಯ ಬಗ್ಗೆ ನಾವೇನು ಕಲಿಯಬಹುದು?

9 ಆರಂಭದ ಕ್ರೈಸ್ತರು ಸಹ ಒಗ್ಗಟ್ಟಿನಿಂದ ಕೆಲಸಮಾಡುವುದಕ್ಕೆ ಪ್ರಸಿದ್ಧರಾಗಿದ್ದರು. ಒಂದು ಸಂದರ್ಭದಲ್ಲಿ ಅನೇಕ ಮಂದಿ ಯೆಹೂದ್ಯರು ಹಾಗೂ ಯೆಹೂದಿ ಮತಾವಲಂಬಿಗಳು ಕ್ರೈಸ್ತರಾದಾಗ ಏನಾಯಿತೆಂದು ಗಮನಿಸಿ. ಆಗ ಅವರೆಲ್ಲರೂ ಒಟ್ಟಿಗೆ ಸಮಯ ಕಳೆದರು, ಊಟ ಮಾಡಿದರು ಮತ್ತು ಪ್ರಾರ್ಥನೆ ಮಾಡಿದರು. (ಅ. ಕಾ. 2:42) ವಿಶೇಷವಾಗಿ ಹಿಂಸೆಯ ಸಮಯದಲ್ಲಿ ಅವರಿಗೆ ಪರಸ್ಪರರ ಸಹಾಯ ತುಂಬ ಅಗತ್ಯವಿದ್ದಾಗ ಈ ಐಕ್ಯತೆ ತೋರಿಬಂತು. (ಅ. ಕಾ. 4:23, 24) ಕಷ್ಟಕರ ಸಮಯದಲ್ಲಿ ಜೊತೆಯಾಗಿ ಕೆಲಸಮಾಡುವುದು ಅತ್ಯಗತ್ಯವೆಂದು ನೀವು ಒಪ್ಪುವುದಿಲ್ಲವೇ?

ಯೆಹೋವನ ದಿನ ಹತ್ತಿರ ಬರುತ್ತಿದೆ—ಐಕ್ಯರಾಗಿರಿ

10. ಯಾವ ಸಮಯದಲ್ಲಿ ಐಕ್ಯತೆ ವಿಶೇಷವಾಗಿ ಮಹತ್ವದ್ದಾಗಿರುವುದು?

10 ಮಾನವ ಇತಿಹಾಸದಲ್ಲೇ ಅತ್ಯಂತ ಕರಾಳ ಅವಧಿ ಹತ್ತಿರ ಬರುತ್ತಿದೆ. ಪ್ರವಾದಿ ಯೋವೇಲ ಅದನ್ನು “ಕತ್ತಲಿನ ಮೊಬ್ಬಿನ ದಿನ, ಕಾರ್ಮುಗಿಲ ಕಗ್ಗತ್ತಲ ದಿನ” ಎಂದು ವರ್ಣಿಸುತ್ತಾನೆ. (ಯೋವೇ. 2:1, 2; ಚೆಫ. 1:14) ದೇವಜನರು ಐಕ್ಯರಾಗಿ ಇರಬೇಕಾದ ಸಮಯವದು. ಯೇಸುವಿನ ಮಾತನ್ನು ಜ್ಞಾಪಿಸಿಕೊಳ್ಳಿ: “ತನ್ನೊಳಗೆ ಒಡೆದು ವಿಭಾಗವಾಗಿರುವ ಪ್ರತಿಯೊಂದು ರಾಜ್ಯವು ಹಾಳಾಗುವುದು.”—ಮತ್ತಾ. 12:25.

11. ಕೀರ್ತನೆ 122:3, 4ರಲ್ಲಿರುವ ಯಾವ ವಿಷಯ ಇಂದು ದೇವಜನರಿಗೆ ಅನ್ವಯವಾಗುತ್ತದೆ? (ಶೀರ್ಷಿಕೆ ಚಿತ್ರ ನೋಡಿ.)

11 ಈ ವ್ಯವಸ್ಥೆಯ ಮೇಲೆ ಬರಲಿರುವ ಆಪತ್ತಿನ ಸಮಯದಲ್ಲಿ ನಾವು ನಿಜವಾಗಿ ಐಕ್ಯರಾಗಿರಬೇಕು. ಆಗ ನಮ್ಮ ಮಧ್ಯೆ ಇರಬೇಕಾದ ಆಧ್ಯಾತ್ಮಿಕ ಐಕ್ಯವನ್ನು ಪ್ರಾಚೀನ ಯೆರೂಸಲೇಮಿನಲ್ಲಿದ್ದ ಮನೆಗಳ ನಡುವಿನ ಅಂತರಕ್ಕೆ ಹೋಲಿಸಬಹುದು. ಅಲ್ಲಿನ ಮನೆಗಳು ಎಷ್ಟು ಹತ್ತಿರ ಇರುತ್ತಿದ್ದವೆಂದರೆ ಯೆರೂಸಲೇಮನ್ನು “ಸರಿಯಾದ ಹೊಂದಿಕೆಯಿಂದ ಕಟ್ಟಲ್ಪಟ್ಟ ನಗರ” ಇಲ್ಲವೆ ಒಂದಾಗಿ ಜೋಡಿಸಲಾದ ಪಟ್ಟಣ ಎಂದು ಕೀರ್ತನೆಗಾರ ವರ್ಣಿಸಿದನು. ಹೀಗೆ ಅಲ್ಲಿನ ನಿವಾಸಿಗಳು ಒಬ್ಬರಿಗೊಬ್ಬರು ಸಹಾಯ, ಸಂರಕ್ಷಣೆ ಕೊಡಲು ಸಾಧ್ಯವಾಗುತ್ತಿತ್ತು. ಜೊತೆಗೆ “ಯಾಹುವಿನ ಕುಲ”ದವರೆಲ್ಲರೂ ಆರಾಧನೆಗಾಗಿ ಕೂಡಿಬಂದಾಗ ಕಂಡುಬರುತ್ತಿದ್ದ ಆ ಇಡೀ ಜನಾಂಗದ ಆಧ್ಯಾತ್ಮಿಕ ಐಕ್ಯತೆಯನ್ನೂ ಅದು ಸೂಚಿಸುತ್ತಿತ್ತು. (ಕೀರ್ತನೆ 122:3, 4 ಓದಿ.) ಇಂದು ಮತ್ತು ಬರಲಿರುವ ಕಷ್ಟಕರ ದಿನಗಳಲ್ಲಿ ನಾವೂ ಹಾಗೆಯೇ ಒಂದಾಗಿ ಜೋಡಿಸಲ್ಪಟ್ಟಿದ್ದೇವೊ ಎಂಬಂತೆ ಐಕ್ಯರಾಗಿರಬೇಕು.

12. ದೇವಜನರ ಮೇಲೆ ಆಗಲಿರುವ ಆಕ್ರಮಣವನ್ನು ಪಾರಾಗಲು ಯಾವುದು ಸಹಾಯಮಾಡುವುದು?

12 ಆ ಸಮಯದಲ್ಲಿ ನಾವು ಒಂದಾಗಿರುವುದು ಏಕೆ ತುಂಬ ಮಹತ್ವದ್ದು? ಯೆಹೆಜ್ಕೇಲ ಅಧ್ಯಾಯ 38 ‘ಮಾಗೋಗ್‌ ದೇಶದ ಗೋಗನು’ ದೇವಜನರ ಮೇಲೆ ಮಾಡುವ ಆಕ್ರಮಣದ ಬಗ್ಗೆ ಪ್ರವಾದಿಸುತ್ತದೆ. ಆ ಸಮಯದಲ್ಲಿ ಯಾವುದೇ ವಿಷಯ ನಮ್ಮ ಮಧ್ಯೆ ಒಡಕನ್ನು ಹುಟ್ಟಿಸುವಂತೆ ಬಿಡಬಾರದು. ಸಹಾಯಕ್ಕಾಗಿ ನಾವು ಲೋಕದ ಮುಂದೆಯಂತೂ ಕೈಚಾಚಲೇಬಾರದು. ಬದಲಿಗೆ ನಮ್ಮ ಸಹೋದರರಿಗೆ ಹತ್ತಿರವಾಗಿ ಅಂಟಿಕೊಂಡಿರಬೇಕು. ಈ ಗುಂಪಿನ ಭಾಗವಾಗಿದ್ದೇವೆಂಬ ಮಾತ್ರಕ್ಕೆ ನಾವು ಪಾರಾಗುತ್ತೇವೆಂದೇನಲ್ಲ. ಯೆಹೋವನ ಹೆಸರನ್ನು ಹೇಳಿಕೊಳ್ಳುವವರನ್ನು ಮಾತ್ರ ಆತನು ಮತ್ತು ಯೇಸು ಆ ಅಪಾಯಕಾರಿ ಸಮಯದಲ್ಲಿ ಸುರಕ್ಷಿತವಾಗಿಡುವರು. (ಯೋವೇ. 2:32; ಮತ್ತಾ. 28:20) ಆದರೆ ದೇವರ ಜನರೊಟ್ಟಿಗೂ ನಾವು ಐಕ್ಯರಾಗಿ ಉಳಿಯಬೇಕು. ಅವರಿಂದ ಪ್ರತ್ಯೇಕಗೊಂಡು ತಮ್ಮದೇ ಆದ ದಾರಿ ಹಿಡಿಯುವವರನ್ನು ಯೆಹೋವನು ರಕ್ಷಿಸುವನೆಂದು ನೆನಸುತ್ತೀರಾ?—ಮಿಾಕ 2:12.

13. ಇಲ್ಲಿವರೆಗಿನ ಚರ್ಚೆಯಿಂದ ದೇವಭಯವುಳ್ಳ ಯುವಜನರು ಯಾವ ಪಾಠಗಳನ್ನು ಕಲಿಯಬಲ್ಲರು?

13 ಹಾಗಾದರೆ, ತಮ್ಮದೇ ಆದ ಗುಂಪು ಕಟ್ಟಿಕೊಂಡು ಪ್ರತ್ಯೇಕವಾಗಿರುವ ಯುವಜನರಂತೆ ನಡೆದುಕೊಳ್ಳುವುದು ಅವಿವೇಕತನ ಎಂಬುದು ಸ್ಪಷ್ಟವಲ್ಲವೇ? ಪರಸ್ಪರರ ಸಹಾಯ ತುಂಬ ಅಗತ್ಯವಿರುವ ಸಮಯ ಹತ್ತಿರ ಬರುತ್ತಾ ಇದೆ. ಪರಸ್ಪರ ಎನ್ನುವಾಗ ಎಲ್ಲರೂ ಅಂದರೆ ಯುವಪ್ರಾಯದವರು, ವಯಸ್ಸಾದವರು ಎಂದರ್ಥ. ನಾವೆಲ್ಲರೂ ಈಗಲೇ ಜೊತೆಜೊತೆಯಾಗಿ ಕೆಲಸಮಾಡಲು ಕಲಿಯಬೇಕು. ಆಗ ಐಕ್ಯತೆಯನ್ನು ಬೆಳೆಸಿಕೊಳ್ಳಲು ಸಾಧ್ಯವಾಗುವುದು. ಈ ಐಕ್ಯತೆ ಮುಂದಿನ ದಿನಗಳಲ್ಲಿ ತುಂಬ ಬೇಕಾಗುವುದು.

‘ನಾವು ಒಬ್ಬರಿಗೊಬ್ಬರು ಸೇರಿರುವ ಅಂಗಗಳು’

14, 15. (ಎ) ಏನನ್ನು ಮನಸ್ಸಿನಲ್ಲಿಟ್ಟು ಯೆಹೋವನು ಇಂದು ಆಬಾಲವೃದ್ಧರನ್ನು ತರಬೇತುಗೊಳಿಸುತ್ತಿದ್ದಾನೆ? (ಬಿ) ನಾವು ಐಕ್ಯರಾಗಿರುವಂತೆ ಪ್ರೋತ್ಸಾಹಿಸುವ ಯಾವ ಸಲಹೆಯನ್ನು ಯೆಹೋವನು ಕೊಡುತ್ತಾನೆ?

14 ‘ಒಂದೇ ಮನಸ್ಸಿನಿಂದ ಅವನನ್ನು ಸೇವಿಸಲು’ ಯೆಹೋವನು ನಮಗೆಲ್ಲರಿಗೆ ಸಹಾಯಮಾಡುತ್ತಿದ್ದಾನೆ. (ಚೆಫ. 3:8, 9) ನಾವಾತನ ನಿತ್ಯ ಉದ್ದೇಶಕ್ಕೆ ಹೊಂದಿಕೊಳ್ಳುವಂತೆ ತರಬೇತಿ ಕೊಡುತ್ತಿದ್ದಾನೆ. ಆ ಉದ್ದೇಶ ಯಾವುದು? “ಸಮಸ್ತವನ್ನು ಕ್ರಿಸ್ತನಲ್ಲಿ ಪುನಃ ಒಂದುಗೂಡಿಸುವುದೇ.” (ಎಫೆಸ 1:9, 10 ಓದಿ.) ತನ್ನನ್ನು ಆರಾಧಿಸುವ ಒಂದೇ ಕುಟುಂಬವಾಗಿ ಸ್ವರ್ಗದಲ್ಲಿರುವವರನ್ನು, ಭೂಮಿಯಲ್ಲಿರುವವರನ್ನು ಐಕ್ಯಗೊಳಿಸುವುದೇ ಯೆಹೋವನ ಇಚ್ಛೆ. ಇದನ್ನು ಆತನು ಖಂಡಿತ ಪೂರೈಸಲಿದ್ದಾನೆ. ಒಬ್ಬ ಯುವ ವ್ಯಕ್ತಿಯಾಗಿ ನೀವು ಯೆಹೋವನ ಸಂಘಟನೆಯೊಟ್ಟಿಗೆ ಐಕ್ಯವಾಗಿ ಕೆಲಸಮಾಡುವುದು ಅಗತ್ಯ ಎಂಬದನ್ನು ಈ ಸಂಗತಿ ಮನದಟ್ಟು ಮಾಡಿಸುತ್ತದಾ?

15 ನಾವು ಐಕ್ಯರಾಗಿರುವಂತೆ ಯೆಹೋವನು ಈಗ ಬೋಧಿಸುತ್ತಿರುವುದು ನಾವು ಮುಂದೆ ಸದಾಕಾಲಕ್ಕೂ ಐಕ್ಯರಾಗಿರಬೇಕೆನ್ನುವ ಕಾರಣಕ್ಕಾಗಿಯೇ. “ಪರಸ್ಪರ ಹಿತವನ್ನು ಚಿಂತಿಸುವಂತೆ,” “ಒಬ್ಬರಿಗೊಬ್ಬರು ಕೋಮಲ ಮಮತೆ” ತೋರಿಸುವಂತೆ, “ಒಬ್ಬರನ್ನೊಬ್ಬರು ಸಾಂತ್ವನಗೊಳಿಸುತ್ತಾ” “ಪರಸ್ಪರ ಭಕ್ತಿವೃದ್ಧಿಮಾಡುತ್ತಾ” ಇರುವಂತೆ ಬೈಬಲ್‌ ಆಗಾಗ್ಗೆ ನಮಗೆ ಹೇಳುತ್ತದೆ. (1 ಕೊರಿಂ. 12:25; ರೋಮ. 12:10; 1 ಥೆಸ. 4:18; 5:11) ನಾವೆಲ್ಲರು ಅಪರಿಪೂರ್ಣರು ಆಗಿರುವುದರಿಂದ ಐಕ್ಯರಾಗಿರುವುದು ಸವಾಲಾಗಿರಬಲ್ಲದೆಂದು ಯೆಹೋವನಿಗೆ ಗೊತ್ತು. ಹಾಗಾಗಿ ‘ಒಬ್ಬರನ್ನೊಬ್ಬರು ಉದಾರವಾಗಿ ಕ್ಷಮಿಸುವ’ ವಿಷಯದಲ್ಲಿ ನಾವು ವಿಶೇಷ ಪ್ರಯತ್ನ ಮಾಡಬೇಕು. —ಎಫೆ. 4:32.

16, 17. (ಎ) ಕ್ರೈಸ್ತ ಕೂಟಗಳ ಒಂದು ಉದ್ದೇಶವೇನು? (ಬಿ) ಯುವಕನಾಗಿದ್ದಾಗ ಯೇಸುವಿಟ್ಟ ಮಾದರಿಯಿಂದ ಯುವಜನರು ಏನು ಕಲಿಯಬಲ್ಲರು?

16 ನಾವು ಐಕ್ಯರಾಗಿರುವುದನ್ನು ಕಲಿಸಲು ಯೆಹೋವನು ಕ್ರೈಸ್ತ ಕೂಟಗಳನ್ನೂ ಕೊಟ್ಟಿದ್ದಾನೆ. ಇಬ್ರಿಯ 10:24, 25ರಲ್ಲಿ ಕೊಡಲಾಗಿರುವ ಪ್ರೋತ್ಸಾಹದ ಮಾತುಗಳನ್ನು ನಾವು ಎಷ್ಟೋ ಸಲ ಓದಿದ್ದೇವೆ. ಈ ಕೂಟಗಳ ಒಂದು ಉದ್ದೇಶ ನಾವು “ಪ್ರೀತಿಸುವಂತೆಯೂ ಸತ್ಕಾರ್ಯಗಳನ್ನು ಮಾಡುವಂತೆಯೂ ಒಬ್ಬರನ್ನೊಬ್ಬರು ಪ್ರೇರೇಪಿ”ಸುವುದೇ ಆಗಿದೆ. ನಾವು ಒಬ್ಬರನ್ನೊಬ್ಬರು ‘ಪ್ರೋತ್ಸಾಹಿಸುತ್ತಾ ಇರಲಿಕ್ಕಾಗಿ’ ಕೂಟಗಳನ್ನು ಏರ್ಪಡಿಸಲಾಗಿದೆ. ‘ಆ ದಿನವು ಸಮೀಪಿಸುತ್ತಾ ಇದೆ ಎಂಬುದನ್ನು ನೋಡುವಾಗ’ ಕೂಟಗಳಿಗೆ ಹಾಜರಾಗುವುದನ್ನು ‘ನಾವು ಇನ್ನಷ್ಟು ಹೆಚ್ಚು ಮಾಡಬೇಕು.’

17 ಯುವ ಪ್ರಾಯದಲ್ಲೇ ಯೇಸು ಯೆಹೋವನ ಇಂಥ ಏರ್ಪಾಡುಗಳಿಗೆ ಕೃತಜ್ಞತೆ ತೋರಿಸುವುದರಲ್ಲಿ ಒಳ್ಳೇ ಮಾದರಿಯಾಗಿದ್ದನು. 12 ವರ್ಷದ ಯೇಸು ಅಪ್ಪಅಮ್ಮನ ಜೊತೆಗೆ ಒಂದು ದೊಡ್ಡ ಆಧ್ಯಾತ್ಮಿಕ ಕೂಟಕ್ಕೆ ಹೋಗಿದ್ದಾಗ ಒಂದು ಸಮಯದಲ್ಲಿ ಅವನು ಅವರೊಟ್ಟಿಗೆ ಇರಲಿಲ್ಲ, ಕಾಣೆಯಾಗಿದ್ದ. ಅವನು ಬೇರೆ ಯುವಕರ ಜೊತೆ ಇದ್ದನಾ? ಇಲ್ಲ. ಹೆತ್ತವರು ಅವನನ್ನು ಹುಡುಕುತ್ತಾ ಬಂದಾಗ ಅವನು ಆಲಯದಲ್ಲಿದ್ದ ಬೋಧಕರೊಂದಿಗೆ ಆಧ್ಯಾತ್ಮಿಕ ಚರ್ಚೆಯಲ್ಲಿ ತೊಡಗಿದ್ದನ್ನು ಕಂಡರು.—ಲೂಕ 2:45-47.

18. ನಮ್ಮ ಪ್ರಾರ್ಥನೆಗಳು ಹೇಗೆ ಐಕ್ಯವನ್ನು ಹೆಚ್ಚಿಸಬಲ್ಲವು?

18 ನಮ್ಮ ಐಕ್ಯದ ಬಂಧವನ್ನು ಬಲಪಡಿಸಲಿಕ್ಕಾಗಿ ನಾವು ಪರಸ್ಪರ ಪ್ರೀತಿ ಬೆಳೆಸಿಕೊಳ್ಳಬೇಕು ಮತ್ತು ಕ್ರೈಸ್ತ ಕೂಟಗಳಲ್ಲಿ ಎಲ್ಲರ ಜೊತೆ ಸಹವಾಸ ಮಾಡಬೇಕು. ಜೊತೆಗೆ ಸಹೋದರರಿಗಾಗಿ ಪ್ರಾರ್ಥಿಸಲೂ ಬೇಕು. ಅವರಿಗಾಗಿ ಪ್ರಾರ್ಥನೆಯಲ್ಲಿ ನಿರ್ದಿಷ್ಟ ವಿನಂತಿಗಳನ್ನು ಮಾಡುವ ಮೂಲಕ ಅವರ ಕಡೆಗಿನ ನಮ್ಮ ಕಳಕಳಿ ಹೆಚ್ಚುತ್ತದೆ. ‘ಇದೆಲ್ಲ ವಯಸ್ಕ ಕ್ರೈಸ್ತರಿಂದ ಮಾತ್ರ ಮಾಡಲಿಕ್ಕಾಗುತ್ತದೆ, ಅವರೇ ಮಾಡಬೇಕು’ ಎಂದೇನಿಲ್ಲ. ಯುವ ಪ್ರಾಯದವರಾದ ನೀವೂ ಮಾಡಬಹುದು. ಹೀಗೆ ನಿಮ್ಮ ಆಧ್ಯಾತ್ಮಿಕ ಕುಟುಂಬದೊಂದಿಗೆ ಆಪ್ತ ಬಂಧವನ್ನು ಬೆಳೆಸಿಕೊಳ್ಳಬಹುದು. ಹೀಗೆ ಮಾಡಿದರೆ ಈ ಹಳೇ ಲೋಕ ಅಂತ್ಯಗೊಳ್ಳುವ ಸಮಯ ಬಂದಾಗ ನಿಮಗೆ ಅದರೊಟ್ಟಿಗೆ ಯಾವುದೇ ನಂಟಿರುವುದಿಲ್ಲ.

ನಾವೆಲ್ಲರೂ ನಮ್ಮ ಸಹೋದರರಿಗಾಗಿ ಪ್ರಾರ್ಥಿಸಬೇಕು (ಪ್ಯಾರ 18 ನೋಡಿ)

‘ಒಬ್ಬರಿಗೊಬ್ಬರು ಪರಸ್ಪರ ಅಂಗಗಳು’ ಎಂದು ತೋರಿಸಿಕೊಳ್ಳೋಣ

19-21. (ಎ) ನಾವು ‘ಒಬ್ಬರಿಗೊಬ್ಬರು ಪರಸ್ಪರ ಅಂಗಗಳು’ ಆಗಿದ್ದೇವೆಂದು ಯಾವ ವಿಶೇಷ ರೀತಿಯಲ್ಲಿ ತೋರಿಸಬಹುದು? ಉದಾಹರಣೆಗಳನ್ನು ಕೊಡಿ. (ಬಿ) ವಿಪತ್ತುಗಳ ಸಮಯದಲ್ಲಿ ಸಹೋದರರು ತೋರಿಸಿದ ಪ್ರತಿಕ್ರಿಯೆಯಿಂದ ಯಾವ ಪಾಠ ಕಲಿಯುತ್ತೀರಿ?

19 “ನಾವು . . . ಒಬ್ಬರಿಗೊಬ್ಬರು ಪರಸ್ಪರ ಅಂಗಗಳಾಗಿದ್ದೇವೆ” ಎನ್ನುತ್ತದೆ ರೋಮನ್ನರಿಗೆ 12:5. ಯೆಹೋವನ ಜನರು ಈಗಾಗಲೇ ಈ ತತ್ವಕ್ಕೆ ಹೊಂದಿಕೆಯಲ್ಲಿ ಜೀವಿಸುತ್ತಿದ್ದಾರೆ. ಇದರ ರುಜುವಾತು ವಿಪತ್ತುಗಳ ಸಮಯದಲ್ಲಿ ಕಂಡುಬರುತ್ತದೆ. 2011ರ ಡಿಸೆಂಬರ್‌ ತಿಂಗಳಲ್ಲಿ ಬಿರುಗಾಳಿಯಿಂದಾಗಿ ಫಿಲಿಪೀನ್ಸ್‌ ದೇಶದ ಮಿಂಡಾನೌ ದ್ವೀಪ ನೆರೆಹಾವಳಿಗೆ ತುತ್ತಾಯಿತು. ಒಂದೇ ರಾತ್ರಿಯಲ್ಲಿ 40,000 ಮನೆಗಳು ಮುಳುಗಿಹೋದವು. ನಮ್ಮ ಸಹೋದರರ ಮನೆಗಳೂ ಇದರಲ್ಲಿ ಸೇರಿದ್ದವು. ಆದರೆ “ನಮ್ಮ ಪರಿಹಾರಕಾರ್ಯ ಸಮಿತಿಗಳ ಕಾರ್ಯಾಚರಣೆ ಆರಂಭವಾಗುವ ಮುಂಚೆಯೇ ಇತರ ಕ್ಷೇತ್ರಗಳಿಂದ ಸಹೋದರರು ನೆರವನ್ನು ಕಳುಹಿಸಲು ಆರಂಭಿಸಿದರು” ಎನ್ನುತ್ತದೆ ಅಲ್ಲಿನ ಬ್ರಾಂಚ್‌ ಆಫೀಸ್‌ ವರದಿ.

20 ಹಾಗೆಯೇ, ಬೃಹತ್‌ ಭೂಕಂಪದಿಂದಾಗಿ ಉಂಟಾದ ಸುನಾಮಿ ಜಪಾನಿನ ಪೂರ್ವಭಾಗಕ್ಕೆ ಅಪ್ಪಳಿಸಿದಾಗ ಅನೇಕ ಸಹೋದರ ಸಹೋದರಿಯರಿಗೆ ಭಾರೀ ಪ್ರಮಾಣದ ನಷ್ಟವಾಯಿತು. ಕೆಲವರಂತೂ ಎಲ್ಲವನ್ನೂ ಕಳಕೊಂಡರು. ಯೋಶೀಕೊ ಎಂಬ ಸಹೋದರಿ ತಮ್ಮ ಮನೆ ಕಳಕೊಂಡರು. ಅವರು ಇದದ್ದು ರಾಜ್ಯ ಸಭಾಗೃಹದಿಂದ 40 ಕಿ.ಮೀ. ದೂರದಲ್ಲಿ. ಅವರನ್ನುವುದು: “ಭೂಕಂಪವಾದ ಮರುದಿನವೇ ಸರ್ಕಿಟ್‌ ಮೇಲ್ವಿಚಾರಕ ಮತ್ತು ಇನ್ನೊಬ್ಬ ಸಹೋದರ ನಮಗಾಗಿ ಹುಡುಕಿಕೊಂಡು ಬಂದಿದ್ದರೆಂದು ನಂತರ ನಮಗೆ ಗೊತ್ತಾಯಿತು.” ದೊಡ್ಡ ನಸುನಗೆಯೊಂದಿಗೆ ಆ ಸಹೋದರಿ ಕೂಡಿಸಿ ಹೇಳಿದ್ದು: “ಸಭೆಯ ಮೂಲಕ ನಮ್ಮ ಆಧ್ಯಾತ್ಮಿಕ ಅಗತ್ಯಗಳನ್ನು ಸಮೃದ್ಧವಾಗಿ ಪೂರೈಸಲಾಯಿತು. ಇದಕ್ಕಾಗಿ ನಾವು ನಿಜವಾಗಿಯೂ ಆಭಾರಿಗಳು. ನಮಗೆ ಕೋಟುಗಳು (ಮೇಲಂಗಿ), ಪಾದರಕ್ಷೆಗಳು, ಬ್ಯಾಗ್‌ಗಳು ಮತ್ತು ಮನೆಬಟ್ಟೆಯನ್ನೂ ಕೊಡಲಾಯಿತು.” ಪರಿಹಾರ ಕಾರ್ಯ ಸಮಿತಿಯ ಸದಸ್ಯರೊಬ್ಬರು ಹೇಳಿದ್ದು: “ಇಡೀ ಜಪಾನಿನ ಸಹೋದರರೆಲ್ಲರೂ ಒಗ್ಗಟ್ಟಿನಿಂದ ಕೆಲಸಮಾಡಿದರು. ಒಬ್ಬರಿಗೊಬ್ಬರು ಸಹಾಯಮಾಡಿದರು. ಸಹೋದರರು ಅಮೆರಿಕದಿಂದಲೂ ಬಂದರು. ಯಾಕಿಷ್ಟು ದೂರ ಪ್ರಯಾಣಿಸಿ ಬಂದಿರಿ ಎಂದು ಅವರನ್ನು ಕೇಳಿದಾಗ ‘ಜಪಾನಿನಲ್ಲಿರುವ ನಮ್ಮ ಸಹೋದರರೊಂದಿಗೆ ಐಕ್ಯರಾಗಿದ್ದೇವೆ. ಅವರಿಗೆ ಸಹಾಯದ ಅಗತ್ಯವಿದೆ, ಅದಕ್ಕೆ ಬಂದಿದ್ದೇವೆ’ ಎಂದರು.” ಪರಸ್ಪರರಿಗಾಗಿ ನಿಜ ಪ್ರೀತಿ ಇರುವಂಥ ಈ ಸಂಘಟನೆಯ ಭಾಗವಾಗಿರಲು ನಿಮಗೆ ಹೆಮ್ಮೆ ಆಗುವುದಿಲ್ಲವೇ? ಇಂಥ ಐಕ್ಯತೆ ನೋಡಿ ಯೆಹೋವನಿಗೆ ಖಂಡಿತ ತುಂಬ ಸಂತೋಷ ಆಗಿರಬೇಕು!

21 ಇಂಥ ಐಕ್ಯ ಮನೋಭಾವ ಈ ಹಳೇ ವ್ಯವಸ್ಥೆ ಕುಸಿಯುವಾಗ ಬರಲಿರುವ ಕಷ್ಟಗಳನ್ನು ಎದುರಿಸಲು ಐಕ್ಯರಾಗಿರುವಂತೆ ನಮಗೀಗಲೇ ತರಬೇತಿ ಕೊಡುತ್ತಿದೆ. ಬರಲಿರುವ ಆ ಕಷ್ಟದ ಸಮಯದಲ್ಲಿ ಲೋಕದ ಬೇರೆಡೆ ಇರುವ ಸಹೋದರರೊಂದಿಗೆ ಸಂಪರ್ಕ ಕಡಿದುಹೋದರೂ ಸ್ಥಳೀಯ ಸಹೋದರರೊಂದಿಗೆ ಒಗ್ಗಟ್ಟಿನಿಂದ ಎದುರಿಸಲು ಸಾಧ್ಯವಾಗುವುದು. ಜಪಾನಿನಲ್ಲಿ ಒಂದು ಚಂಡಮಾರುತದಿಂದ ಪಾರಾದ ಫ್ಯೂಮಿಕೊ ಎಂಬ ಸಹೋದರಿ ಹೇಳುವುದು: “ಅಂತ್ಯ ತುಂಬ ಹತ್ತಿರವಿದೆ. ಯಾವುದೇ ವಿಪತ್ತುಗಳು ಇಲ್ಲದಿರುವ ಸಮಯ ಬರುವವರೆಗೂ ನಾವು ನಮ್ಮ ಜೊತೆವಿಶ್ವಾಸಿಗಳಿಗೆ ನೆರವು ನೀಡುತ್ತಾ ಇರಬೇಕು.”

22. ಕ್ರೈಸ್ತ ಐಕ್ಯತೆಯಿಂದ ಮುಂದೆ ಸಿಗಬಹುದಾದ ಪ್ರಯೋಜನವೇನು?

22 ಐಕ್ಯದಿಂದಿರಲು ಈಗ ಪ್ರಯತ್ನ ಮಾಡುತ್ತಿರುವ ಆಬಾಲವೃದ್ಧರು ನಿಜವಾಗಿ ಈ ದುಷ್ಟ, ವಿಭಜಿತ ಲೋಕದ ಅಂತ್ಯವನ್ನು ಪಾರಾಗಲು ಸಿದ್ಧರಾಗುತ್ತಿದ್ದಾರೆ. ನಮ್ಮ ದೇವರು ಗತಕಾಲದಲ್ಲಿ ಮಾಡಿರುವಂತೆ ಈಗಲೂ ತನ್ನ ಜನರನ್ನು ಪಾರುಗೊಳಿಸುವನು. (ಯೆಶಾ. 52:9, 10) ದೇವರ ಐಕ್ಯ ಜನರ ಭಾಗವಾಗಿರಲು ನೀವು ಪ್ರಯತ್ನ ಮಾಡುತ್ತಾ ಇದ್ದರೆ ರಕ್ಷಿಸಲ್ಪಡುವಿರಿ ಎಂಬ ಮಾತನ್ನು ಯಾವಾಗಲೂ ಮನಸ್ಸಿನಲ್ಲಿಡಿ. ಅಂತ್ಯವನ್ನು ಪಾರಾಗಲು ಸಹಾಯಮಾಡುವ ಇನ್ನೊಂದು ಸಂಗತಿಯೇನೆಂದರೆ ನಾವು ಈಗಾಗಲೇ ಏನನ್ನು ಪಡೆದಿದ್ದೇವೊ ಅದಕ್ಕೆ ಬೆಲೆಕೊಡುವುದೇ. ಇದು ನಮ್ಮ ಮುಂದಿನ ಲೇಖನದ ವಿಷಯವಾಗಿದೆ.