ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

ರಾಹೇಲಳು ತನ್ನ ಮಕ್ಕಳಿಗೋಸ್ಕರ ಅಳುತ್ತಿದ್ದಾಳೆಂದು ಯೆರೆಮೀಯನು ಹೇಳಿದ ಮಾತಿನ ಅರ್ಥವೇನು?

“ಯೆಹೋವನು ಇಂತೆನ್ನುತ್ತಾನೆ—‘ರಾಮದಲ್ಲಿ ಬೊಬ್ಬೆಯು ಕೇಳಿಸುತ್ತದೆ, ಗೋಳಾಟವೂ ಘೋರರೋದನವೂ ಉಂಟಾಗಿವೆ; ರಾಹೇಲಳು ತನ್ನ ಮಕ್ಕಳಿಗೋಸ್ಕರ ಅತ್ತತ್ತು ಅವರು ಇಲ್ಲದೆಹೋದದ್ದಕ್ಕಾಗಿ ಸಮಾಧಾನಹೊಂದಲೊಲ್ಲದೆ ಇದ್ದಾಳೆ’” ಎಂದು ಯೆರೆಮೀಯ 31:15ರಲ್ಲಿ ತಿಳಿಸಲಾಗಿದೆ.

ರಾಹೇಲಳು ತನ್ನ ಮಕ್ಕಳು ಸಾಯುವುದಕ್ಕೂ ಮೊದಲೇ ತೀರಿಹೋಗಿದ್ದಳು. ಮಾತ್ರವಲ್ಲ, ಅವಳು ಸತ್ತು 1,000 ವರ್ಷಗಳಾದ ನಂತರ ಯೆರೆಮೀಯನು ಈ ವಿಷಯವನ್ನು ಬರೆದನು. ಆದ್ದರಿಂದ ಇದು ನಿಖರವಲ್ಲ ಎಂದು ನಮಗನಿಸಬಹುದು.

ರಾಹೇಲಳ ಹಿರಿಯ ಮಗ ಯೋಸೇಫ. (ಆದಿ. 30:22-24) ಎರಡನೆಯವನು ಬೆನ್ಯಾಮೀನ್‌. ಇವನು ಹುಟ್ಟಿದ ತಕ್ಷಣವೇ ರಾಹೇಲಳು ಸತ್ತಿದ್ದಳು. ಹಾಗಾದರೆ, ಯೆರೆಮೀಯ 31:15ರಲ್ಲಿ, ರಾಹೇಲಳು ತನ್ನ ಮಕ್ಕಳು “ಇಲ್ಲದೆಹೋದದ್ದಕ್ಕಾಗಿ” ಅಳುತ್ತಿದ್ದಾಳೆ ಎಂದು ಏಕೆ ತಿಳಿಸಲಾಗಿದೆ?

ರಾಹೇಲಳ ಮಗ ಯೋಸೇಫನಿಗೆ ಸಮಯಾನಂತರ ಮನಸ್ಸೆ ಮತ್ತು ಎಫ್ರಾಯಿಮ್‌ ಎಂಬ ಮಕ್ಕಳು ಹುಟ್ಟಿದರು ಎನ್ನುವುದನ್ನು ಮನಸ್ಸಿನಲ್ಲಿಟ್ಟುಕೊಳ್ಳಿ. (ಆದಿ. 41:50-52; 48:13-20) ಕಾಲಕ್ರಮೇಣ ಉತ್ತರದ ಇಸ್ರಾಯೇಲ್‌ ರಾಜ್ಯದಲ್ಲಿ ಎಫ್ರಾಯಿಮನಿಂದ ಬಂದ ಕುಲ ಹೆಸರುವಾಸಿಯಾಯಿತು, ಅಲ್ಲಿನ ಇತರ ಕುಲಗಳಿಗಿಂತ ಪ್ರಭಾವಶಾಲಿಯಾಯಿತು. ಆದ್ದರಿಂದ ಎಫ್ರಾಯಿಮ್‌ ಉತ್ತರದ ಹತ್ತು ಕುಲಗಳನ್ನು ಪ್ರತಿನಿಧಿಸಿತು. ರಾಹೇಲಳ ಎರಡನೇ ಮಗನಾದ ಬೆನ್ಯಾಮೀನನ ಕುಲ ಮತ್ತು ಯೆಹೂದ ಕುಲ ಸೇರಿ ದಕ್ಷಿಣದ ಇಸ್ರಾಯೇಲ್‌ ರಾಜ್ಯವನ್ನು ಪ್ರತಿನಿಧಿಸಿದವು. ಆದ್ದರಿಂದ ರಾಹೇಲಳನ್ನು ಉತ್ತರ ಮತ್ತು ದಕ್ಷಿಣ ಇಸ್ರಾಯೇಲ್‌ ರಾಜ್ಯಗಳಲ್ಲಿದ್ದ ಎಲ್ಲಾ ತಾಯಂದಿರಿಗೆ ಹೋಲಿಸಬಹುದು.

ಯೆರೆಮೀಯನ ಪುಸ್ತಕ ಬರೆದು ಮುಗಿಯುವ ಮೊದಲೇ ಅಶ್ಶೂರ್ಯರು ಉತ್ತರದ ಹತ್ತು ಕುಲಗಳ ರಾಜ್ಯವನ್ನು ನಾಶಮಾಡಿದ್ದರು. ಅಲ್ಲಿದ್ದ ಅನೇಕರನ್ನು ಸೆರೆ ಒಯ್ಯಲಾಗಿತ್ತು. ಆ ಸಂದರ್ಭದಲ್ಲಿ ಎಫ್ರಾಯಿಮ್‌ ಕುಲದ ಕೆಲವರು ಯೆಹೂದಕ್ಕೆ ಓಡಿ ಹೋಗಿದ್ದಿರಬಹುದು. ಕ್ರಿ.ಪೂ. 607ರಲ್ಲಿ ಬಾಬೆಲಿನವರು ಯೆಹೂದದ ಎರಡು ಕುಲಗಳ ದಕ್ಷಿಣದ ರಾಜ್ಯವನ್ನು ಜಯಿಸಿದರು. ಯೆರೂಸಲೇಮಿನ ಉತ್ತರ ದಿಕ್ಕಿನಲ್ಲಿದ್ದ ರಾಮದಲ್ಲಿ ಸೆರೆಯಾದವರನ್ನು ಒಟ್ಟು ಸೇರಿಸಲಾಗಿತ್ತು. ಇದು ಯೆರೂಸಲೇಮಿನಿಂದ ಸುಮಾರು ಐದು ಮೈಲಿ (8 ಕಿ.ಮೀ.) ದೂರದಲ್ಲಿತ್ತು. (ಯೆರೆ. 40:1) ರಾಹೇಲಳನ್ನು ಸಮಾಧಿ ಮಾಡಲಾದ ಬೆನ್ಯಾಮೀನ್ಯರ ಕ್ಷೇತ್ರದಲ್ಲಿ ಇನ್ನು ಕೆಲವರನ್ನು ವಧಿಸಲಾಯಿತು. (1 ಸಮು. 10:2) ರಾಹೇಲಳು ತನ್ನ ಮಕ್ಕಳಿಗಾಗಿ ಅತ್ತದ್ದು ಸಾಂಕೇತಿಕ ಅರ್ಥದಲ್ಲಿ ಅವಳು ಬೆನ್ಯಾಮೀನ್ಯರಿಗೋಸ್ಕರ ಅಥವಾ ರಾಮದಲ್ಲಿ ಸೆರೆಯಾಗಿದ್ದವರಿಗೋಸ್ಕರ ದುಃಖಿಸುವುದನ್ನು ಸೂಚಿಸುತ್ತದೆ. ಇನ್ನೊಂದರ್ಥದಲ್ಲಿ ಈ ಮಾತು ತಮ್ಮ ಮಕ್ಕಳು ಸತ್ತಾಗ ಅಥವಾ ಸೆರೆ ಒಯ್ಯಲ್ಪಟ್ಟಾಗ ಅತ್ತ ಇಸ್ರಾಯೇಲ್ಯ ತಾಯಂದಿರನ್ನು ಸೂಚಿಸಬಹುದು.

ರಾಹೇಲಳು ಅಳುವುದರ ಕುರಿತು ಯೆರೆಮೀಯನು ಹೇಳಿದ ವಿಷಯ ಒಂದು ಪ್ರವಾದನೆ ಸಹ ಆಗಿದೆ. ಈ ಪ್ರವಾದನೆ ಪುಟ್ಟ ಮಗು ಯೇಸುವಿನ ಪ್ರಾಣಕ್ಕೆ ಅಪಾಯ ಬಂದ ಸಂದರ್ಭದಲ್ಲಿ ನೆರವೇರಿತು. ದಕ್ಷಿಣ ಯೆರೂಸಲೇಮಿನ ಬೇತ್ಲೆಹೇಮ್‌ ಊರಿನಲ್ಲಿರುವ 2 ವರ್ಷ ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನ ಗಂಡು ಮಕ್ಕಳನ್ನು ಕೊಲ್ಲುವಂತೆ ಅರಸ ಹೆರೋದನು ಆಜ್ಞೆ ಹೊರಡಿಸಿದನು. ಪರಿಣಾಮವಾಗಿ ಆ ವಯಸ್ಸಿನ ಗಂಡು ಮಕ್ಕಳನ್ನೆಲ್ಲಾ ಸಾಯಿಸಿದರು. ಆಗ ಆ ಮಕ್ಕಳ ತಾಯಂದಿರು ಎಷ್ಟು ಅತ್ತಿರಬಹುದೆಂದು ಸ್ಪಲ್ಪ ಯೋಚಿಸಿ. ಅವರ ಅಳು ಉತ್ತರ ಯೆರೂಸಲೇಮಿನ ರಾಮವನ್ನು ಮುಟ್ಟುವಷ್ಟಿತ್ತು.—ಮತ್ತಾ. 2:16-18.

ರಾಹೇಲಳು ತನ್ನ ಮಕ್ಕಳಿಗೋಸ್ಕರ ಅಳುತ್ತಿದ್ದಾಳೆ ಎಂದು ಯೆರೆಮೀಯನು ಬರೆದ ವಿಷಯ ಸೂಕ್ತವಾಗಿಯೇ ಎರಡು ಸಂದರ್ಭಗಳಿಗೆ ಸೂಚಿಸುತ್ತದೆ. ಒಂದು ಯೆರೆಮೀಯನ ಸಮಯದಲ್ಲಿ, ಇನ್ನೊಂದು ಪ್ರಥಮ ಶತಮಾನದಲ್ಲಿ. ಈ ಎರಡೂ ಸಂದರ್ಭದಲ್ಲಿ ಯೆಹೂದಿ ತಾಯಂದಿರು ತಮ್ಮ ಮಕ್ಕಳು ಹತರಾಗಿದ್ದಕ್ಕಾಗಿ ಅಳುವುದನ್ನು ಸೂಚಿಸುತ್ತದೆ. ಆದರೆ ಯಾರು ಸತ್ತಿದ್ದಾರೋ ಅವರು ‘ಶತ್ರುವಿನ ದೇಶಕ್ಕೆ’ ಹೋದಂತಿದ್ದಾರೆ. ಪುನರುತ್ಥಾನವಾಗುವಾಗ ಮರಣವೆಂಬ ಆ ಶತ್ರುವಿನ ಹಿಡಿತದಿಂದ ಅವರು ತಪ್ಪಿಸಿಕೊಳ್ಳುವರು.—ಯೆರೆ. 31:16; 1 ಕೊರಿಂ. 15:26.