ಆದಿಕಾಂಡ 19:1-38

  • ದೇವದೂತರು ಮತ್ತು ಲೋಟನ ಭೇಟಿ (1-11)

  • ಪಟ್ಟಣ ಬಿಟ್ಟುಹೋಗಲು ಸೂಚನೆ (12-22)

  • ಸೊದೋಮ್‌ ಗೊಮೋರದ ನಾಶ (23-29)

    • ಲೋಟನ ಹೆಂಡತಿ ಉಪ್ಪಿನ ಕಂಬ (26)

  • ಲೋಟ ಮತ್ತು ಅವನ ಹೆಣ್ಣುಮಕ್ಕಳು (30-38)

    • ಮೋವಾಬ್ಯರ ಮತ್ತು ಅಮ್ಮೋನಿಯರ ಹುಟ್ಟು (37, 38)

19  ಆ ಇಬ್ಬರು ದೇವದೂತರು ಸಂಜೆ ಸೊದೋಮಿಗೆ ಬಂದ್ರು. ಲೋಟ ಸೊದೋಮ್‌ ಪಟ್ಟಣದ ಬಾಗಿಲ ಹತ್ರ ಕೂತಿದ್ದ. ಲೋಟ ಅವರನ್ನ ನೋಡಿದಾಗ ಎದ್ದು ಹತ್ರ ಹೋಗಿ ನೆಲದ ತನಕ ಬಗ್ಗಿ ನಮಸ್ಕಾರ ಮಾಡಿದ.+  ಅವನು “ಸ್ವಾಮಿ, ದಯವಿಟ್ಟು ನಿಮ್ಮ ಸೇವಕನ ಮನೆಗೆ ಬನ್ನಿ. ನಿಮ್ಮ ಕಾಲು ತೊಳೆಯೋ ಅವಕಾಶ ಕೊಡಿ. ರಾತ್ರಿ ನಮ್ಮ ಮನೆಲೇ ಉಳ್ಕೊಂಡು ಬೆಳಿಗ್ಗೆ ಬೇಗ ಎದ್ದು ಪ್ರಯಾಣ ಮಾಡಬಹುದು” ಅಂದ. ಅವರು “ಇಲ್ಲ, ನಾವು ಪಟ್ಟಣದ ಮುಖ್ಯಸ್ಥಳದಲ್ಲೇ* ರಾತ್ರಿ ಕಳಿತೀವಿ” ಅಂದ್ರು.  ಆದ್ರೆ ಲೋಟ ತುಂಬ ಒತ್ತಾಯ ಮಾಡಿದ್ದಕ್ಕೆ ಅವನ ಜೊತೆ ಮನೆಗೆ ಹೋದ್ರು. ಅವನು ಅವರಿಗಾಗಿ ಅಡುಗೆ ಮಾಡಿಸಿ ಹುಳಿಯಿಲ್ಲದ ರೊಟ್ಟಿಗಳನ್ನ ಸುಟ್ಟು ಕೊಟ್ಟ. ಅವರು ತಿಂದ್ರು.  ಅವರು ಮಲಗೋದಕ್ಕಿಂತ ಮುಂಚೆ ಸೊದೋಮ್‌ ಪಟ್ಟಣದ ಎಲ್ಲ ಗಂಡಸರು ಅಂದ್ರೆ ಹುಡುಗರಿಂದ ಮುದುಕರ ತನಕ ಎಲ್ಲರೂ ಗುಂಪು ಕಟ್ಟಿಕೊಂಡು ಮನೆಯನ್ನ ಸುತ್ತುವರಿದ್ರು.  ಅವರು ಲೋಟನನ್ನ ಕರೀತಾ “ಇವತ್ತು ರಾತ್ರಿ ನಿನ್ನ ಮನೆಗೆ ಬಂದ ಗಂಡಸರು ಎಲ್ಲಿ? ಅವರನ್ನ ಹೊರಗೆ ಕರ್ಕೊಂಡು ಬಾ. ನಾವು ಅವರ ಜೊತೆ ಸಂಭೋಗ ಮಾಡಬೇಕು”+ ಅಂದ್ರು.  ಆಗ ಲೋಟ ಮನೆ ಹೊರಗೆ ಬಂದು ಬಾಗಿಲು ಮುಚ್ಚಿದ.  ಅವನು “ಅಣ್ಣತಮ್ಮಂದಿರೇ, ದಯವಿಟ್ಟು ಇಂಥ ಕೆಟ್ಟ ಕೆಲಸ ಮಾಡಬೇಡಿ.  ದಯವಿಟ್ಟು ನಾ ಹೇಳೋದನ್ನ ಕೇಳಿ. ನನಗೆ ಕನ್ಯೆಯರಾದ ಇಬ್ರು ಹೆಣ್ಣುಮಕ್ಕಳು ಇದ್ದಾರೆ. ಅವರನ್ನ ಬೇಕಾದ್ರೆ ನಿಮಗೆ ಕೊಡ್ತೀನಿ. ನಿಮ್ಮ ಮನಸ್ಸಿಗೆ ಬಂದ ಹಾಗೆ ಮಾಡಿ. ಆದ್ರೆ ಇವರನ್ನ ಮಾತ್ರ ದಯವಿಟ್ಟು ಬಿಟ್ಟುಬಿಡಿ. ಯಾಕಂದ್ರೆ ಇವರು ನನ್ನ ಸಂರಕ್ಷಣೆಯಲ್ಲಿರೋ ಅತಿಥಿಗಳು”+ ಅಂದ.  ಆಗ “ದಾರಿಬಿಡು” ಅಂತ ಹೇಳಿ “ಗತಿಯಿಲ್ಲದ ಈ ವಿದೇಶಿ ಬದುಕಕ್ಕೆ ನಮ್ಮೂರಿಗೆ ಬಂದು ನಮಗೇ ನ್ಯಾಯ ಹೇಳ್ತಾನೆ. ಎಷ್ಟು ಧೈರ್ಯ ಇವನಿಗೆ! ಅವರಿಗಿಂತ ಮೊದಲು ನಿನಗೇ ಒಂದು ಗತಿ ಕಾಣಿಸ್ತೀವಿ” ಅಂದ್ರು. ಆಮೇಲೆ ಅವರು ಲೋಟನನ್ನ ಅದುಮಿ ತಳ್ಳಿ ಬಾಗಿಲನ್ನ ಮುರಿಯೋಕೆ ಮುಂದೆ ಬಂದ್ರು. 10  ಆಗ ಮನೆಯೊಳಗಿದ್ದ ಪುರುಷರು ಕೈಚಾಚಿ ಲೋಟನನ್ನ ಒಳಗೆ ಎಳೆದು ಬಾಗಿಲು ಮುಚ್ಚಿದ್ರು. 11  ಆಮೇಲೆ ಮನೆ ಬಾಗಿಲ ಮುಂದಿದ್ದ ಗಂಡಸರೆಲ್ಲರ ಅಂದ್ರೆ ಚಿಕ್ಕವರಿಂದ ದೊಡ್ಡವರ ತನಕ ಎಲ್ಲರ ಕಣ್ಣು ಕುರುಡು ಮಾಡಿದ್ರು. ಆಗ ಆ ಜನ್ರಿಗೆ ಬಾಗಿಲು ಎಲ್ಲಿದೆ ಅಂತ ಗೊತ್ತಾಗದೆ ಹುಡುಕಿ ಸುಸ್ತಾದ್ರು. 12  ಆ ಪುರುಷರು ಲೋಟನಿಗೆ “ಇಲ್ಲಿ ನಿನ್ನವರು ಬೇರೆ ಯಾರಾದ್ರೂ ಇದ್ದಾರಾ? ನಿನ್ನ ಅಳಿಯಂದಿರು, ಗಂಡುಹೆಣ್ಣು ಮಕ್ಕಳು, ಬೇರೆ ಯಾರೆಲ್ಲ ಇದ್ದಾರೋ ಅವರನ್ನೆಲ್ಲ ಈ ಪಟ್ಟಣದ ಹೊರಗೆ ಕರ್ಕೊಂಡು ಹೋಗು. 13  ನಾವು ಈ ಪಟ್ಟಣ ನಾಶ ಮಾಡ್ತೀವಿ. ಯಾಕಂದ್ರೆ ಇಲ್ಲಿಯವರ ಬಗ್ಗೆ ದೂರು ಹೇಳೋ ಜನ್ರ ಗೋಳಾಟವನ್ನ ಯೆಹೋವ ಕೇಳಿಸ್ಕೊಂಡಿದ್ದಾನೆ.+ ಹಾಗಾಗಿ ಈ ಪಟ್ಟಣ ನಾಶಮಾಡೋಕೆ ಯೆಹೋವ ನಮ್ಮನ್ನ ಕಳಿಸಿದ್ದಾನೆ” ಅಂದ್ರು. 14  ಆಗ ಲೋಟ ಹೋಗಿ ತನ್ನ ಹೆಣ್ಣುಮಕ್ಕಳನ್ನ ಮದುವೆ ಆಗಲಿದ್ದ ಅಳಿಯಂದಿರಿಗೆ ಈ ವಿಷ್ಯ ತಿಳಿಸಿ “ಬೇಗ ಈ ಸ್ಥಳ ಬಿಟ್ಟು ಹೋಗಿ! ಯೆಹೋವ ಈ ಪಟ್ಟಣವನ್ನ ನಾಶಮಾಡ್ತಾನೆ!” ಅಂದನು. ಲೋಟ ತಮಾಷೆ ಮಾಡ್ತಿದ್ದಾನೆ ಅಂತ ಆ ಅಳಿಯಂದಿರು ಅಂದ್ಕೊಂಡ್ರು.+ 15  ಸೂರ್ಯ ಹುಟ್ಟೋ ಮುಂಚೆನೇ ದೇವದೂತರು ಲೋಟನಿಗೆ “ಬೇಗ ಇಲ್ಲಿಂದ ಹೋಗು. ಈ ಪಟ್ಟಣದವರ ಪಾಪಕ್ಕೆ ತಕ್ಕ ಶಿಕ್ಷೆ ಆಗುತ್ತೆ. ನೀವು ನಾಶ ಆಗಬಾರದು ಅಂದ್ರೆ ನೀನು ನಿನ್ನ ಹೆಂಡತಿನ, ಇಬ್ರು ಹೆಣ್ಣುಮಕ್ಕಳನ್ನ ಕರ್ಕೊಂಡು ಬೇಗ ಇಲ್ಲಿಂದ ಹೋಗು”+ ಅಂತ ಅವಸರ ಮಾಡಿದ್ರು. 16  ಆದ್ರೆ ಲೋಟ ತಡಮಾಡ್ತಾ ಇದ್ದ. ಹಾಗಿದ್ರೂ ಯೆಹೋವ ಅವನಿಗೆ ದಯೆ ತೋರಿಸಿದ್ರಿಂದ+ ಆ ಪುರುಷರು ತಟ್ಟನೆ ಅವನ ಕೈಯನ್ನ, ಅವನ ಹೆಂಡತಿ, ಹೆಣ್ಣುಮಕ್ಕಳ ಕೈ ಹಿಡಿದು ಕರ್ಕೊಂಡು ಹೋಗಿ ಪಟ್ಟಣದ ಹೊರಗೆ ಬಿಟ್ರು.+ 17  ಅವರನ್ನ ಪಟ್ಟಣದ ಹೊರಗೆ ಕರ್ಕೊಂಡು ಬಂದ ತಕ್ಷಣ ಆ ಪುರುಷರಲ್ಲಿ ಒಬ್ಬ “ಇಲ್ಲಿಂದ ಓಡಿಹೋಗಿ! ನಿಮ್ಮ ಜೀವ ಉಳಿಸ್ಕೊಳ್ಳಿ. ಹಿಂದೆ ತಿರುಗಿ ನೋಡಬೇಡಿ!+ ಈ ಪ್ರದೇಶದಲ್ಲಿ ಎಲ್ಲೂ ನಿಲ್ಲಬೇಡಿ!+ ಆ ಬೆಟ್ಟದ ಪ್ರದೇಶಕ್ಕೆ ಓಡಿಹೋಗಿ, ಇಲ್ಲದಿದ್ರೆ ನೀವು ಸಹ ನಾಶ ಆಗ್ತೀರ” ಅಂದ. 18  ಆಗ ಲೋಟ ಅವರಿಗೆ “ಯೆಹೋವನೇ,* ದಯವಿಟ್ಟು ಅಲ್ಲಿಗೆ ಹೋಗೋಕೆ ಹೇಳಬೇಡ! 19  ನೀನು ನಿನ್ನ ಸೇವಕನಿಗೆ ದಯೆ ತೋರಿಸಿದೆ, ನನ್ನ ಪ್ರಾಣ ಉಳಿಸಿ ತುಂಬ ಪ್ರೀತಿ* ತೋರಿಸಿದೆ.+ ಆದ್ರೆ ಬೆಟ್ಟದ ಪ್ರದೇಶಕ್ಕೆ ಓಡಿಹೋಗೋಕೆ ನನ್ನಿಂದ ಆಗಲ್ಲ. ಏನಾದ್ರೂ ಆಪತ್ತಲ್ಲಿ ಸಿಕ್ಕಿ ಹಾಕೊಂಡು ಸತ್ತು ಹೋಗ್ತಿನೋ ಅಂತ ಭಯ ಆಗ್ತಿದೆ.+ 20  ನೋಡು, ಇಲ್ಲೇ ಪಕ್ಕದಲ್ಲಿ ಒಂದು ಊರು ಇದೆ. ನಾನು ಅಲ್ಲಿಗೆ ಓಡಿಹೋಗ್ತಿನಿ. ಅದು ಚಿಕ್ಕ ಸ್ಥಳ. ದಯವಿಟ್ಟು ಅಲ್ಲಿಗೆ ಹೋಗೋಕೆ ಅನುಮತಿ ಕೊಡು. ಆಗ ನನ್ನ ಜೀವ ಉಳಿಯುತ್ತೆ. ಅದು ಚಿಕ್ಕ ಸ್ಥಳ ಅಲ್ಲವಾ?” ಅಂದ. 21  ಅದಕ್ಕೆ ಆ ದೇವದೂತ “ಸರಿ, ನಾನು ನಿನಗೆ ಈ ವಿಷ್ಯದಲ್ಲೂ ದಯೆ ತೋರಿಸ್ತೀನಿ.+ ನೀನು ಹೇಳಿದ ಆ ಊರನ್ನ ನಾಶ ಮಾಡೋದಿಲ್ಲ.+ 22  ಬೇಗ ಅಲ್ಲಿಗೆ ಹೋಗು! ಯಾಕಂದ್ರೆ ನೀನು ಅಲ್ಲಿ ಮುಟ್ಟೋ ತನಕ ನನಗೆ ಏನೂ ಮಾಡಕ್ಕಾಗಲ್ಲ”+ ಅಂದನು. ಹಾಗಾಗಿ ಆ ಊರಿಗೆ ಚೋಗರ್‌*+ ಅನ್ನೋ ಹೆಸರು ಬಂತು. 23  ಲೋಟ ಚೋಗರಿಗೆ ಬಂದು ತಲುಪಿದಾಗ ಸೂರ್ಯ ಹುಟ್ತಿದ್ದ. 24  ಆಗ ಯೆಹೋವ ಸೊದೋಮ್‌ ಮತ್ತು ಗೊಮೋರದ ಮೇಲೆ ಬೆಂಕಿ ಗಂಧಕ ಸುರಿಸಿದನು. ಹೌದು, ಆಕಾಶದಿಂದ ಯೆಹೋವ ದೇವರೇ ಅದನ್ನ ಸುರಿಸಿದನು.+ 25  ಹೀಗೆ ಆತನು ಆ ಪಟ್ಟಣಗಳನ್ನ, ಆ ಇಡೀ ಪ್ರದೇಶವನ್ನ ನಾಶಮಾಡಿದನು. ಅಲ್ಲಿದ್ದ ಎಲ್ಲ ಜನರನ್ನ ಎಲ್ಲ ಬೆಳೆ ನಾಶ ಮಾಡಿದನು.+ 26  ಲೋಟನ ಹಿಂದೆ ಬರ್ತಿದ್ದ ಅವನ ಹೆಂಡತಿ ಹಿಂದೆ ತಿರುಗಿ ನೋಡಿದ್ರಿಂದಉಪ್ಪಿನ ಕಂಬ ಆದಳು.+ 27  ಅಬ್ರಹಾಮ ಬೆಳಿಗ್ಗೆ ಬೇಗ ಎದ್ದು ಈ ಮುಂಚೆ ತಾನು ಯೆಹೋವನ ಮುಂದೆ ನಿಂತು ಮಾತಾಡಿದ್ದ ಸ್ಥಳಕ್ಕೆ ಹೋದ.+ 28  ಅವನು ಸೊದೋಮ್‌, ಗೊಮೋರ ಮತ್ತು ಇಡೀ ಪ್ರದೇಶ ನೋಡಿದಾಗ ಅಲ್ಲಿಂದ ದೊಡ್ಡ ಕುಲುಮೆಯಿಂದ* ಬರೋ ಹೊಗೆ ತರ ದಟ್ಟ ಹೊಗೆ ಮೇಲೆ ಹೋಗೋದನ್ನ ನೋಡಿದ.+ 29  ಆ ಪ್ರದೇಶದಲ್ಲಿದ್ದ ಪಟ್ಟಣಗಳನ್ನ ನಾಶಮಾಡುವಾಗ ದೇವರು ಅಬ್ರಹಾಮನನ್ನ ಮನಸ್ಸಲ್ಲಿಟ್ಟು ಲೋಟನನ್ನ ಅವನು ವಾಸಿಸ್ತಿದ್ದ ಜಾಗದಿಂದ ಹೊರಗೆ ಕಳಿಸಿದನು.+ 30  ಲೋಟ ಚೋಗರಿನಲ್ಲಿ ವಾಸ ಮಾಡೋಕೆ ಭಯಪಟ್ಟ.+ ಹಾಗಾಗಿ ತನ್ನ ಇಬ್ರು ಹೆಣ್ಣುಮಕ್ಕಳನ್ನ ಚೋಗರಿನಿಂದ ಕರ್ಕೊಂಡು ಬೆಟ್ಟಕ್ಕೆ ಹೋದ.+ ಅಲ್ಲಿ ತನ್ನ ಇಬ್ರು ಹೆಣ್ಣುಮಕ್ಕಳ ಜೊತೆ ಒಂದು ಗವಿಯಲ್ಲಿ ವಾಸಿಸಿದ. 31  ಲೋಟನ ದೊಡ್ಡ ಮಗಳು ಚಿಕ್ಕವಳಿಗೆ “ಅಪ್ಪಗೆ ವಯಸ್ಸಾಗಿದೆ. ಎಲ್ಲರ ಹಾಗೆ ನಮಗೆ ಮದುವೆ ಆಗಕ್ಕೆ ಈ ಪ್ರದೇಶದಲ್ಲಿ ಒಂದು ಗಂಡೂ ಇಲ್ಲ. 32  ಹಾಗಾಗಿ ಅಪ್ಪಗೆ ದ್ರಾಕ್ಷಾಮದ್ಯ ಕುಡಿಯೋಕೆ ಕೊಡೋಣ. ಆಮೇಲೆ ಆತನ ಜೊತೆ ಮಲ್ಕೊಂಡು ನಮ್ಮ ಅಪ್ಪನ ವಂಶ ಉಳಿಸೋಣ” ಅಂದಳು. 33  ಆ ರಾತ್ರಿ ಅವರು ತಮ್ಮ ತಂದೆಗೆ ತುಂಬ ದ್ರಾಕ್ಷಾಮದ್ಯ ಕುಡಿಯೋಕೆ ಕೊಟ್ರು. ಆಮೇಲೆ ಮೊದಲನೇ ಮಗಳು ಹೋಗಿ ತಂದೆ ಜೊತೆ ಮಲ್ಕೊಂಡಳು. ಅವಳು ಯಾವಾಗ ಮಲಗಿ ಎದ್ದು ಹೋದಳೋ ಅವನಿಗೆ ಗೊತ್ತಾಗ್ಲೇ ಇಲ್ಲ. 34  ಮಾರನೇ ದಿನ ದೊಡ್ಡ ಮಗಳು ಚಿಕ್ಕವಳಿಗೆ “ನಿನ್ನೆ ರಾತ್ರಿ ನಾನು ಅಪ್ಪ ಜೊತೆ ಮಲ್ಕೊಂಡೆ. ಈ ರಾತ್ರಿನೂ ಆತನಿಗೆ ದ್ರಾಕ್ಷಾಮದ್ಯ ಕುಡಿಯೋಕೆ ಕೊಡೋಣ. ಆಮೇಲೆ ನೀನು ಹೋಗಿ ಆತನ ಜೊತೆ ಮಲ್ಕೊ. ಹೀಗೆ ನಾವು ಅಪ್ಪನಿಂದ ಮಕ್ಕಳನ್ನ ಪಡೆದು ಆತನ ವಂಶ ಬೆಳೆಸೋಣ” ಅಂದಳು. 35  ಆ ರಾತ್ರಿನೂ ಅವರು ತಮ್ಮ ತಂದೆಗೆ ಮತ್ತೇರುವಷ್ಟು ದ್ರಾಕ್ಷಾಮದ್ಯ ಕುಡಿಸಿದ್ರು. ಈ ಸಾರಿ ಚಿಕ್ಕ ಮಗಳು ಅವನ ಜೊತೆ ಮಲ್ಕೊಂಡಳು. ಅವಳು ಯಾವಾಗ ಮಲಗಿ ಎದ್ದು ಹೋದಳೋ ಅವನಿಗೆ ಗೊತ್ತಾಗ್ಲೇ ಇಲ್ಲ. 36  ಹೀಗೆ ಲೋಟನ ಇಬ್ಬರೂ ಹೆಣ್ಣುಮಕ್ಕಳು ತಂದೆಯಿಂದ ಗರ್ಭಿಣಿ ಆದ್ರು. 37  ಮೊದಲನೇ ಮಗಳು ಗಂಡುಮಗು ಹೆತ್ತು ಮೋವಾಬ್‌ ಅಂತ ಹೆಸರಿಟ್ಟಳು.+ ಇವತ್ತಿರೋ ಮೋವಾಬ್ಯರಿಗೆ ಇವನೇ ಮೂಲತಂದೆ.+ 38  ಚಿಕ್ಕ ಮಗಳು ಸಹ ಗಂಡುಮಗು ಹೆತ್ತು ಬೆನಮ್ಮಿ ಅಂತ ಹೆಸರಿಟ್ಟಳು. ಇವತ್ತಿರೋ ಅಮ್ಮೋನಿಯರಿಗೆ+ ಇವನೇ ಮೂಲತಂದೆ.

ಪಾದಟಿಪ್ಪಣಿ

ಇಲ್ಲಿ ಲೋಟ ನೇರವಾಗಿ ಯೆಹೋವನ ಜೊತೆ ಮಾತಾಡ್ತಿರೋ ಹಾಗೆ ದೇವದೂತರ ಜೊತೆ ಮಾತಾಡಿದ.
ಅಥವಾ “ಶಾಶ್ವತ ಪ್ರೀತಿ.” ಪದವಿವರಣೆ ನೋಡಿ.
ಅರ್ಥ “ಚಿಕ್ಕದು.”
ಇದು ಇಟ್ಟಿಗೆಗಳನ್ನ, ಮಣ್ಣಿನ ಪಾತ್ರೆಗಳನ್ನ ಸುಡೋ ಗೂಡು.