ವಿಮೋಚನಕಾಂಡ 14:1-31

  • ಸಮುದ್ರದ ಹತ್ರ ಇಸ್ರಾಯೇಲ್ಯರು (1-4)

  • ಫರೋಹ ಇಸ್ರಾಯೇಲ್ಯರನ್ನ ಅಟ್ಟಿಸ್ಕೊಂಡು ಬಂದ (5-14)

  • ಇಸ್ರಾಯೇಲ್ಯರು ಕೆಂಪು ಸಮುದ್ರ ದಾಟಿದ್ರು (15-25)

  • ಈಜಿಪ್ಟಿನವರು ಸಮುದ್ರದಲ್ಲಿ ಮುಳುಗಿದ್ರು (26-28)

  • ಇಸ್ರಾಯೇಲ್ಯರು ಯೆಹೋವನ ಮೇಲೆ ನಂಬಿಕೆಯಿಟ್ರು (29-31)

14  ಆಮೇಲೆ ಯೆಹೋವ ಮೋಶೆಗೆ  “ವಾಪಸ್‌ ಹೋಗಿ ಮಿಗ್ದೋಲಿಗೂ ಸಮುದ್ರಕ್ಕೂ ಮಧ್ಯ, ಪೀಹಹೀರೋತಿನ ಹತ್ರ ಡೇರೆ ಹಾಕೊಳ್ಳೋಕೆ ಇಸ್ರಾಯೇಲ್ಯರಿಗೆ ಹೇಳು. ಸಮುದ್ರದ ಹತ್ರ ಬಾಳ್ಚೆಫೋನಿನ+ ಮುಂದೆ ನೀವು ಡೇರೆ ಹಾಕೊಳ್ಳಬೇಕು.  ಆಗ ಫರೋಹ ಇಸ್ರಾಯೇಲ್ಯರ ಬಗ್ಗೆ ‘ಅವರು ದಾರಿತಪ್ಪಿ ಅಲ್ಲಿ ಇಲ್ಲಿ ಅಲೆದಾಡ್ತಾ ಕಾಡಲ್ಲಿ ಸಿಕ್ಕಿಹಾಕೊಂಡಿದ್ದಾರೆ’ ಅಂತ ಹೇಳ್ತಾನೆ.  ಫರೋಹನ ಹೃದಯ ಕಲ್ಲಿನ ತರ ಆಗೋಕೆ+ ನಾನು ಬಿಡೋದ್ರಿಂದ ಅವನು ಇಸ್ರಾಯೇಲ್ಯರನ್ನ ಅಟ್ಟಿಸ್ಕೊಂಡು ಬರ್ತಾನೆ. ನಾನು ಫರೋಹನನ್ನ, ಅವನ ಎಲ್ಲ ಸೈನ್ಯವನ್ನ ಸೋಲಿಸಿ ನನ್ನ ಹೆಸರಿಗೆ ಗೌರವ ಬರೋ ತರ ಮಾಡ್ತೀನಿ.+ ಆಗ ಈಜಿಪ್ಟಿನವರಿಗೆ ನಾನೇ ಯೆಹೋವ ಅಂತ ಗೊತ್ತಾಗುತ್ತೆ”+ ಅಂದನು. ಇಸ್ರಾಯೇಲ್ಯರು ದೇವರು ಹೇಳಿದ ಹಾಗೇ ಮಾಡಿದ್ರು.  ಆಮೇಲೆ ಈಜಿಪ್ಟಿನ ರಾಜನಿಗೆ ಇಸ್ರಾಯೇಲ್ಯರು ಓಡಿಹೋದ್ರು ಅನ್ನೋ ಸುದ್ದಿ ಸಿಕ್ತು. ಆಗ ಫರೋಹ ಮತ್ತು ಅವನ ಸೇವಕರು ತಮ್ಮ ಮನಸ್ಸು ಬದಲಾಯಿಸ್ಕೊಂಡು+ “ನಾವು ಎಂಥ ಕೆಲಸ ಮಾಡಿಬಿಟ್ವಿ! ನಮಗೆ ಗುಲಾಮರಾಗಿದ್ದ ಇಸ್ರಾಯೇಲ್ಯರನ್ನ ಯಾಕಾದ್ರೂ ಹೋಗೋಕೆ ಬಿಟ್ವೋ?” ಅಂದ್ರು.  ಅವನು ತನ್ನ ಯುದ್ಧರಥಗಳನ್ನ ಸಿದ್ಧಮಾಡಿ ತನ್ನ ಸೈನಿಕರ ಜೊತೆ ಹೊರಟ.+  ಅವನು 600 ಒಳ್ಳೇ ರಥಗಳನ್ನ, ಈಜಿಪ್ಟಿನ ಬೇರೆಲ್ಲ ರಥಗಳನ್ನ ತಗೊಂಡು ಹೋದ. ಎಲ್ಲ ರಥದಲ್ಲೂ ಸೈನಿಕರು ಇದ್ರು.  ಹೀಗೆ ಈಜಿಪ್ಟಿನ ರಾಜ ಫರೋಹನ ಹೃದಯ ಕಲ್ಲಿನ ತರ ಆಗೋಕೆ ಯೆಹೋವ ಬಿಟ್ಟನು. ಧೈರ್ಯದಿಂದ ಹೋಗ್ತಿದ್ದ ಇಸ್ರಾಯೇಲ್ಯರನ್ನ+ ಫರೋಹ ಅಟ್ಟಿಸ್ಕೊಂಡು ಹೋದ.  ಫರೋಹನ ಎಲ್ಲ ರಥಗಳು, ಕುದುರೆ ಸವಾರರು, ಅವನ ಸೈನಿಕರು ಇಸ್ರಾಯೇಲ್ಯರನ್ನ ಅಟ್ಟಿಸ್ಕೊಂಡು ಬಂದ್ರು.+ ಇಸ್ರಾಯೇಲ್ಯರು ಸಮುದ್ರದ ಹತ್ರ, ಪೀಹಹೀರೋತಿನ ಸಮೀಪ, ಬಾಳ್ಚೆಫೋನಿನ ಮುಂದೆ ಡೇರೆ ಹಾಕೊಂಡಿದ್ರು. ಅವರ ಹಿಂದೆ ಈಜಿಪ್ಟಿನವರು ಬರ್ತಾ ಇದ್ರು. 10  ಫರೋಹ ಮತ್ತು ಈಜಿಪ್ಟಿನ ಸೈನಿಕರು ಅಟ್ಟಿಸ್ಕೊಂಡು ಬರ್ತಾ ಇರೋದು ಇಸ್ರಾಯೇಲ್ಯರಿಗೆ ಕಾಣಿಸ್ತು. ಇಸ್ರಾಯೇಲ್ಯರು ಭಯಬಿದ್ದು ಯೆಹೋವನ ಹತ್ರ ಸಹಾಯಕ್ಕಾಗಿ ಬೇಡ್ಕೊಂಡ್ರು.+ 11  ಅವರು ಮೋಶೆಗೆ “ನಮ್ಮನ್ನ ಈಜಿಪ್ಟಿಂದ ಇಲ್ಲಿಗೆ ಯಾಕೆ ಕರ್ಕೊಂಡು ಬಂದೆ? ಇಲ್ಲಿ ಸಾಯ್ಲಿ ಅಂತಾನಾ?+ ಈಜಿಪ್ಟಲ್ಲಿ ಸಮಾಧಿ ಮಾಡೋಕೆ ಜಾಗ ಇರಲಿಲ್ವಾ? ನೋಡು, ನಿನ್ನಿಂದ ನಮಗೆ ಎಂಥಾ ಪರಿಸ್ಥಿತಿ ಬಂತು. 12  ‘ನಮ್ಮನ್ನ ನಮ್ಮ ಪಾಡಿಗೆ ಬಿಟ್ಟುಬಿಡು. ನಾವು ಈಜಿಪ್ಟಿನವರಿಗೆ ಗುಲಾಮರಾಗೇ ಇರ್ತೀವಿ’ ಅಂತ ಅಲ್ಲಿದ್ದಾಗ್ಲೇ ನಿನಗೆ ಹೇಳಿದ್ವಲ್ಲಾ? ಇಲ್ಲಿ ಸಾಯೋಕ್ಕಿಂತ ಈಜಿಪ್ಟಿನವರಿಗೆ ಗುಲಾಮರಾಗಿ ಇದ್ದಿದ್ರೆ ಎಷ್ಟೋ ಚೆನ್ನಾಗಿತ್ತು” ಅಂದ್ರು.+ 13  ಆಗ ಮೋಶೆ “ಹೆದರಬೇಡಿ.+ ಸುಮ್ಮನೆ ನಿಂತು ಇವತ್ತು ಯೆಹೋವ ನಿಮ್ಮನ್ನ ಹೇಗೆ ಕಾಪಾಡ್ತಾನೆ ಅಂತ ನೋಡಿ.+ ನೀವು ಇವತ್ತು ನೋಡ್ತಿರೋ ಈ ಈಜಿಪ್ಟಿನವರನ್ನ ಇನ್ಮುಂದೆ ಯಾವತ್ತೂ ನೋಡಲ್ಲ.+ 14  ಯೆಹೋವನೇ ನಿಮಗೋಸ್ಕರ ಯುದ್ಧ ಮಾಡ್ತಾನೆ.+ ನೀವು ಸುಮ್ಮನೆ ನಿಂತು ನೋಡ್ತೀರ” ಅಂದ. 15  ಆಗ ಯೆಹೋವ ಮೋಶೆಗೆ ಹೀಗೆ ಹೇಳಿದನು: “ನನ್ನ ಹತ್ರ ಯಾಕೆ ಸಹಾಯ ಕೇಳ್ತಾ ಇದ್ದೀಯಾ? ಇಸ್ರಾಯೇಲ್ಯರಿಗೆ ಡೇರೆ ಕಿತ್ತು ಹೊರಡೋಕೆ ಹೇಳು. 16  ನೀನು ನಿನ್ನ ಕೈಲಿರೋ ಕೋಲನ್ನ ಎತ್ತಿ ಸಮುದ್ರದ ಮೇಲೆ ಚಾಚಿ ಅದನ್ನ ಎರಡು ಭಾಗ ಮಾಡು. ಆಗ ಎಲ್ಲಾ ಇಸ್ರಾಯೇಲ್ಯರು ಸಮುದ್ರದ ಮಧ್ಯ ಒಣನೆಲದ ಮೇಲೆ ನಡ್ಕೊಂಡು ಹೋಗ್ತಾರೆ. 17  ನಾನು ಈಜಿಪ್ಟಿನವರ ಹೃದಯ ಕಲ್ಲಿನ ತರ ಆಗೋಕೆ ಬಿಟ್ಟಿದ್ದೀನಿ. ಅದಕ್ಕೆ ಅವರು ಇಸ್ರಾಯೇಲ್ಯರ ಹಿಂದೆನೇ ಸಮುದ್ರದ ಒಳಗೆ ಹೋಗ್ತಾರೆ. ಆಗ ನಾನು ಫರೋಹನನ್ನ, ಅವನ ಎಲ್ಲ ಸೈನಿಕರನ್ನ, ಯುದ್ಧರಥಗಳನ್ನ, ಕುದುರೆ ಸವಾರರನ್ನ ಸೋಲಿಸಿ ನನ್ನ ಹೆಸರಿಗೆ ಗೌರವ ಬರೋ ತರ ಮಾಡ್ತೀನಿ.+ 18  ಫರೋಹನನ್ನ, ಅವನ ಯುದ್ಧರಥಗಳನ್ನ, ಅವನ ಕುದುರೆ ಸವಾರರನ್ನ ಸೋಲಿಸಿ ನನ್ನ ಹೆಸರಿಗೆ ಗೌರವ ಬರೋ ತರ ಮಾಡಿದಾಗ ಈಜಿಪ್ಟಿನವರಿಗೆ ನಾನೇ ಯೆಹೋವ ಅಂತ ಗೊತ್ತಾಗುತ್ತೆ.”+ 19  ಆಮೇಲೆ ಇಸ್ರಾಯೇಲ್ಯರ ಮುಂದೆ ಹೋಗ್ತಿದ್ದ ಸತ್ಯದೇವರ ದೂತ+ ಆ ಜಾಗ ಬಿಟ್ಟು ಅವರ ಹಿಂದಕ್ಕೆ ಬಂದ. ಅವರ ಮುಂದೆ ಇದ್ದ ಮೋಡ ಅವರ ಹಿಂದೆ ಬಂದು ನಿಂತ್ಕೊಳ್ತು.+ 20  ಹೀಗೆ ಅದು ಈಜಿಪ್ಟಿನವರ ಮತ್ತು ಇಸ್ರಾಯೇಲ್ಯರ ಮಧ್ಯ ಬಂದು ನಿಂತ್ಕೊಳ್ತು.+ ಆ ಮೋಡ ಒಂದು ಕಡೆ ಕತ್ತಲಾಗೋ ತರ ಮಾಡಿ ಇನ್ನೊಂದು ಕಡೆ ರಾತ್ರಿಯಿಡೀ ಬೆಳಕು ಕೊಡ್ತು.+ ಅದಕ್ಕೆ ಈಜಿಪ್ಟಿನವರಿಗೆ ಆ ರಾತ್ರಿಯೆಲ್ಲ ಇಸ್ರಾಯೇಲ್ಯರ ಹತ್ರ ಬರೋಕೆ ಆಗಲಿಲ್ಲ. 21  ಮೋಶೆ ಸಮುದ್ರದ ಮೇಲೆ ಕೈಚಾಚಿದ.+ ಆಗ ಯೆಹೋವ ಆ ರಾತ್ರಿಯಿಡೀ ಪೂರ್ವದಿಂದ ಜೋರಾಗಿ ಗಾಳಿ ಬೀಸೋ ತರ ಮಾಡಿ ನೀರನ್ನ ಹಿಂದಕ್ಕೆ ನೂಕಿದನು. ಸಮುದ್ರ ಎರಡು ಭಾಗ ಆಯ್ತು.+ ಸಮುದ್ರದ ತಳ ಒಣನೆಲ+ ಆಯ್ತು. 22  ಇಸ್ರಾಯೇಲ್ಯರು ಸಮುದ್ರದ ಮಧ್ಯ ಒಣನೆಲದಲ್ಲಿ ನಡ್ಕೊಂಡು ಹೋದ್ರು.+ ಆಗ ಅವರ ಬಲಗಡೆಯಲ್ಲೂ ಎಡಗಡೆಯಲ್ಲೂ ನೀರು ಗೋಡೆ ತರ ನಿಂತಿತ್ತು.+ 23  ಈಜಿಪ್ಟಿನವರು ಅವರನ್ನ ಅಟ್ಟಿಸ್ಕೊಂಡು ಬಂದ್ರು. ಫರೋಹನ ಎಲ್ಲ ಕುದುರೆಗಳು, ಯುದ್ಧರಥಗಳು, ಕುದುರೆ ಸವಾರರು ಇಸ್ರಾಯೇಲ್ಯರ ಹಿಂದೆ ಸಮುದ್ರದ ಮಧ್ಯ ಹೋಗೋಕೆ ಶುರುಮಾಡಿದ್ರು.+ 24  ಬೆಳಗ್ಗಿನ ಜಾವ* ಯೆಹೋವ ಬೆಂಕಿ ಮತ್ತು ಮೋಡದ ಒಳಗಿಂದ+ ಈಜಿಪ್ಟಿನವರನ್ನ ನೋಡಿ ಅವರನ್ನ ಗಲಿಬಿಲಿ ಮಾಡಿದನು. 25  ಅವರ ರಥದ ಚಕ್ರಗಳನ್ನ ತೆಗೆದುಬಿಟ್ಟನು. ಅವರು ರಥಗಳನ್ನ ತುಂಬ ಕಷ್ಟಪಟ್ಟು ಓಡಿಸಿದ್ರು. ಅದೂ ಅಲ್ಲದೆ ಈಜಿಪ್ಟಿನವರು “ಇಲ್ಲಿಂದ ಓಡಿ ಹೋಗೋಣ, ಇಸ್ರಾಯೇಲ್ಯರನ್ನ ಬಿಟ್ಟು ದೂರ ಹೋಗೋಣ. ಅವರ ಪರವಾಗಿ ಯೆಹೋವನೇ ನಮ್ಮ ವಿರುದ್ಧ ಯುದ್ಧ ಮಾಡ್ತಿದ್ದಾನೆ!”+ ಅಂತ ಒಬ್ರಿಗೊಬ್ರು ಹೇಳಿದ್ರು. 26  ಆಮೇಲೆ ಯೆಹೋವ ಮೋಶೆಗೆ “ಸಮುದ್ರದ ಮೇಲೆ ಕೈಚಾಚು. ಆಗ ಸಮುದ್ರದ ನೀರು ಈಜಿಪ್ಟಿನವರ ಮೇಲೆ, ಅವರ ಯುದ್ಧರಥಗಳ, ಕುದುರೆ ಸವಾರರ ಮೇಲೆ ಬಿದ್ದು ಅವರನ್ನ ಮುಳುಗಿಸಿಬಿಡುತ್ತೆ” ಅಂದನು. 27  ಆಗ ಮೋಶೆ ಸಮುದ್ರದ ಮೇಲೆ ಕೈ ಚಾಚಿದ. ಬೆಳಗಾಗ್ತಾ ಇದ್ದ ಹಾಗೆ ಸಮುದ್ರದ ನೀರು ಮೊದಲಿನ ತರ ಆಯ್ತು. ಈಜಿಪ್ಟಿನವರು ಅಲ್ಲಿಂದ ಓಡಿಹೋಗೋಕೆ ಪ್ರಯತ್ನ ಮಾಡ್ತಿದ್ದಾಗ ಯೆಹೋವ ಅವರನ್ನ ಸಮುದ್ರದ ಮಧ್ಯ ಎಸೆದುಬಿಟ್ಟನು.+ 28  ನುಗ್ಗಿ ಬರ್ತಿದ್ದ ನೀರು ಫರೋಹನ ಯುದ್ಧರಥಗಳನ್ನ, ಕುದುರೆ ಸವಾರರನ್ನ, ಅವನ ಎಲ್ಲ ಸೈನಿಕರನ್ನ ಮುಳುಗಿಸಿಬಿಡ್ತು.+ ಇಸ್ರಾಯೇಲ್ಯರನ್ನ ಅಟ್ಟಿಸ್ಕೊಂಡು ಸಮುದ್ರದ ಒಳಗೆ ಬಂದಿದ್ದ ಈಜಿಪ್ಟಿನವರಲ್ಲಿ ಒಬ್ಬನೂ ಉಳಿಲಿಲ್ಲ.+ 29  ಆದ್ರೆ ಇಸ್ರಾಯೇಲ್ಯರು ಒಣಗಿದ್ದ ಸಮುದ್ರತಳದಲ್ಲಿ ನಡ್ಕೊಂಡು ಹೋದ್ರು.+ ಸಮುದ್ರದ ನೀರು ಅವರ ಬಲಗಡೆ ಮತ್ತು ಎಡಗಡೆ ಗೋಡೆ ತರ ನಿಂತಿತ್ತು.+ 30  ಹೀಗೆ ಆ ದಿನ ಯೆಹೋವ ಇಸ್ರಾಯೇಲ್ಯರನ್ನ ಈಜಿಪ್ಟಿನವರ ಕೈಗೆ ಸಿಗದ ಹಾಗೆ ಕಾಪಾಡಿದನು.+ ಸಮುದ್ರತೀರದಲ್ಲಿ ಈಜಿಪ್ಟಿನವರ ಹೆಣಗಳು ಬಿದ್ದಿರೋದನ್ನ ಇಸ್ರಾಯೇಲ್ಯರು ನೋಡಿದ್ರು. 31  ಅವರನ್ನ ಯೆಹೋವ ತನ್ನ ಮಹಾ ಶಕ್ತಿಯಿಂದ* ನಾಶಮಾಡಿದ್ದನ್ನ ಇಸ್ರಾಯೇಲ್ಯರು ಕಣ್ಣಾರೆ ನೋಡಿದ್ರು. ಹಾಗಾಗಿ ಅವರು ಯೆಹೋವನಿಗೆ ಭಯಪಡೋಕೆ, ಯೆಹೋವನಲ್ಲೂ ಆತನ ಸೇವಕನಾದ ಮೋಶೆಯಲ್ಲೂ ನಂಬಿಕೆ ಇಡೋಕೆ ಶುರುಮಾಡಿದ್ರು.+

ಪಾದಟಿಪ್ಪಣಿ

ಅಂದ್ರೆ, ಸುಮಾರು ಬೆಳಿಗ್ಗೆ 2-6 ಗಂಟೆ ತನಕ.
ಅಕ್ಷ. “ಬಲಿಷ್ಠ ಕೈಯಿಂದ.”