ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೇವರಾತ್ಮವು ನಿಮ್ಮನ್ನು ನಡಿಸುವಂತೆ ಬಿಡುತ್ತೀರೋ?

ದೇವರಾತ್ಮವು ನಿಮ್ಮನ್ನು ನಡಿಸುವಂತೆ ಬಿಡುತ್ತೀರೋ?

ದೇವರಾತ್ಮವು ನಿಮ್ಮನ್ನು ನಡಿಸುವಂತೆ ಬಿಡುತ್ತೀರೋ?

‘ಶುಭಕಾರಿಯಾಗಿರುವ ನಿನ್ನ ಆತ್ಮವು ನನ್ನನ್ನು ಮಟ್ಟನೆಲದಲ್ಲಿ ನಡಿಸಲಿ.’—ಕೀರ್ತ. 143:10.

1, 2. (ಎ) ಯೆಹೋವನು ತನ್ನ ಸೇವಕರ ಪರವಾಗಿ ಪವಿತ್ರಾತ್ಮವನ್ನು ಉಪಯೋಗಿಸಿರುವ ಕೆಲವು ಉದಾಹರಣೆಗಳನ್ನು ಕೊಡಿ. (ಬಿ) ಪವಿತ್ರಾತ್ಮ ಕೆಲವು ವಿಶೇಷ ವಿಧಗಳಲ್ಲಿ ಮಾತ್ರ ಕೆಲಸಮಾಡುತ್ತದೋ? ವಿವರಿಸಿ.

ಪವಿತ್ರಾತ್ಮ ಹೇಗೆ ಕೆಲಸಮಾಡುತ್ತದೆ ಎಂದ ಕೂಡಲೆ ನಿಮ್ಮ ಮನಸ್ಸಿಗೆ ಯಾವ ವಿಷಯ ಬರುತ್ತದೆ? ಗಿದ್ಯೋನ-ಸಂಸೋನರು ಮಾಡಿದ ಪರಾಕ್ರಮಗಳು ನಿಮ್ಮ ನೆನಪಿಗೆ ಬರುತ್ತವೋ? (ನ್ಯಾಯ. 6:33, 34; 15:14, 15) ನೀವು ಪ್ರಾಯಶಃ ಆದಿ ಕ್ರೈಸ್ತರ ಧೈರ್ಯದ ಕುರಿತು ಅಥವಾ ಹಿರೀಸಭೆಯ ಮುಂದೆ ನಿಂತಾಗ ಸ್ತೆಫನನ ಮುಖದಲ್ಲಿದ್ದ ಪ್ರಶಾಂತತೆಯ ಕುರಿತು ಆಲೋಚಿಸಬಹುದು. (ಅ. ಕಾ. 4:31; 6:15) ಆಧುನಿಕ ದಿನಗಳಲ್ಲಿ ನಮ್ಮ ಅಂತಾರಾಷ್ಟ್ರೀಯ ಅಧಿವೇಶನಗಳಲ್ಲಿ ನಾವು ಸವಿಯುವ ಮಹದಾನಂದ, ತಾಟಸ್ಥ್ಯವನ್ನು ಕಾಪಾಡಿಕೊಂಡದಕ್ಕಾಗಿ ಸೆರೆಗೆ ಹಾಕಲ್ಪಟ್ಟಿರುವ ನಮ್ಮ ಸಹೋದರರ ಸಮಗ್ರತೆ, ಸಾರುವ ಕೆಲಸದ ನಂಬಲಸಾಧ್ಯವಾದ ಪ್ರಗತಿ ಇವೆಲ್ಲವನ್ನು ಸಹ ಮರೆಯುವಂತಿಲ್ಲ ಅಲ್ಲವೆ? ಈ ಎಲ್ಲ ಉದಾಹರಣೆಗಳು ಪವಿತ್ರಾತ್ಮ ಕೆಲಸಮಾಡುತ್ತಿದೆ ಎಂಬುದಕ್ಕೆ ಪುರಾವೆ.

2 ಹಾಗಾದರೆ ಪವಿತ್ರಾತ್ಮ ಇಂಥ ವಿಶೇಷ ವಿಧಗಳಲ್ಲಿ ಮಾತ್ರ ಕೆಲಸಮಾಡುತ್ತದೋ? ಇಲ್ಲ. ಕ್ರೈಸ್ತರು ‘ಪವಿತ್ರಾತ್ಮವನ್ನು ಅನುಸರಿಸಿ ನಡೆಯುವುದರ’ ಬಗ್ಗೆ, ‘ಪವಿತ್ರಾತ್ಮದಿಂದ ನಡೆಸಲ್ಪಡುವುದರ’ ಬಗ್ಗೆ ಮತ್ತು ‘ಪವಿತ್ರಾತ್ಮದಿಂದ ಜೀವಿಸುತ್ತಿರುವುದರ’ ಬಗ್ಗೆ ಬೈಬಲ್‌ ಮಾತಾಡುತ್ತದೆ. (ಗಲಾ. 5:16, 18, 25) ನಾವು ಎಲ್ಲ ಸಮಯದಲ್ಲೂ ಪವಿತ್ರಾತ್ಮದಿಂದ ನಡೆಸಲ್ಪಡಸಾಧ್ಯವೆಂದು ಈ ವಚನಗಳು ತೋರಿಸುತ್ತವೆ. ಆದ್ದರಿಂದ ಯೆಹೋವನು ತನ್ನಾತ್ಮದ ಮೂಲಕ ನಮ್ಮ ಆಲೋಚನೆ, ಮಾತು ಮತ್ತು ಕ್ರಿಯೆಗಳನ್ನು ಮಾರ್ಗದರ್ಶಿಸುವಂತೆ ನಾವು ಪ್ರತಿ ದಿನವೂ ಬೇಡಿಕೊಳ್ಳಬೇಕು. (ಕೀರ್ತನೆ 143:10 ಓದಿ.) ಪವಿತ್ರಾತ್ಮ ನಮ್ಮ ಮೇಲೆ ಸರಾಗವಾಗಿ ಹರಿಯುವಂತೆ ಬಿಡುವಾಗ ಅದು ನಮ್ಮಲ್ಲಿ ಮನಮೆಚ್ಚುವ ಗುಣಗಳು ಬೆಳೆಯುವಂತೆ ಮಾಡುವುದು. ಇದರಿಂದಾಗಿ ಬೇರೆಯವರಿಗೆ ಚೈತನ್ಯ ಸಿಗುತ್ತದೆ ಮತ್ತು ಯೆಹೋವನಿಗೆ ಕೀರ್ತಿ ಸಲ್ಲುತ್ತದೆ.

3. (ಎ) ನಾವು ಪವಿತ್ರಾತ್ಮದಿಂದ ನಡೆಸಲ್ಪಡುವುದು ಏಕೆ ಪ್ರಾಮುಖ್ಯ? (ಬಿ) ನಾವು ಯಾವ ಪ್ರಶ್ನೆಗಳನ್ನು ಪರಿಗಣಿಸಲಿದ್ದೇವೆ?

3 ನಾವು ಪವಿತ್ರಾತ್ಮದಿಂದ ನಡೆಸಲ್ಪಡುವುದು ಏಕೆ ಪ್ರಾಮುಖ್ಯ ಗೊತ್ತೇ? ಏಕೆಂದರೆ ಪವಿತ್ರಾತ್ಮದ ಪ್ರಭಾವವನ್ನು ದೂರಮಾಡಿ ನಮ್ಮನ್ನು ತನ್ನ ಹತೋಟಿಗೆ ತೆಗೆದುಕೊಳ್ಳಲು ಮತ್ತೊಂದು ಶಕ್ತಿ ಹಾತೊರೆಯುತ್ತದೆ. ಆ ಶಕ್ತಿಯನ್ನು ಬೈಬಲ್‌ “ಶರೀರಭಾವ” ಎಂದು ಕರೆಯುತ್ತದೆ. ಇದು ಪಾಪಪ್ರವೃತ್ತಿಗಳಿಗೆ ಬಲಿಬಿದ್ದಿರುವ ನಮ್ಮ ಶರೀರಕ್ಕೆ ಸೂಚಿಸುತ್ತದೆ. ಆದಾಮನ ಸಂತತಿಯವರಾಗಿ ನಮಗೆ ಪಿತ್ರಾರ್ಜಿತವಾಗಿ ಸಿಕ್ಕಿರುವ ಅಪರಿಪೂರ್ಣತೆಯೆಂಬ ಆಸ್ತಿ ಅದು. (ಗಲಾತ್ಯ 5:17 ಓದಿ.) ಹಾಗಾದರೆ ದೇವರಾತ್ಮದಿಂದ ನಡೆಸಲ್ಪಡುವಂತೆ ಬಿಡುವುದರಲ್ಲಿ ಏನು ಒಳಗೂಡಿದೆ? ಪಾಪಭರಿತ ಶರೀರದ ಸೆಳೆತವನ್ನು ಪ್ರತಿರೋಧಿಸಲು ನಾವು ವ್ಯಾವಹಾರಿಕವಾಗಿ ಏನಾದರೂ ಮಾಡಸಾಧ್ಯವಿದೆಯೋ? ನಾವು ‘ಪವಿತ್ರಾತ್ಮದಿಂದ ಉಂಟಾಗುವ ಫಲದ’ ಉಳಿದ ಆರು ಅಂಶಗಳಾದ ‘ದೀರ್ಘ ಸಹನೆ, ದಯೆ, ಒಳ್ಳೇತನ, ನಂಬಿಕೆ, ಸೌಮ್ಯಭಾವ, ಸ್ವನಿಯಂತ್ರಣದ’ ಕುರಿತು ಚರ್ಚಿಸುವಾಗ ಈ ಪ್ರಶ್ನೆಗಳನ್ನು ಪರಿಗಣಿಸೋಣ.—ಗಲಾ. 5:22, 23.

ಸೌಮ್ಯಭಾವ ಮತ್ತು ದೀರ್ಘ ಸಹನೆಯಿಂದ ಸಭೆಯಲ್ಲಿ ಶಾಂತಿ

4. ಸೌಮ್ಯಭಾವ ಮತ್ತು ದೀರ್ಘ ಸಹನೆಯನ್ನು ತೋರಿಸುವಾಗ ಸಭೆಯಲ್ಲಿ ಶಾಂತಿಯನ್ನು ಕಾಪಾಡಿಕೊಳ್ಳಲು ಹೇಗೆ ಸಾಧ್ಯವಾಗುತ್ತದೆ?

4ಕೊಲೊಸ್ಸೆ 3:12, 13 ಓದಿ. ನಾವು ಸೌಮ್ಯಭಾವ ಮತ್ತು ದೀರ್ಘ ಸಹನೆಯನ್ನು ತೋರಿಸುವಾಗ ಸಭೆಯಲ್ಲಿ ಶಾಂತಿಯನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ. ಪವಿತ್ರಾತ್ಮದ ಫಲದ ಭಾಗವಾಗಿರುವ ಈ ಎರಡು ಗುಣಗಳು ಇತರರೊಂದಿಗೆ ದಯೆಯಿಂದ ವರ್ತಿಸಲು, ಯಾರಾದರೂ ಕೆಣಕುವಾಗ ತಾಳ್ಮೆಯಿಂದಿರಲು ಮತ್ತು ಇತರರು ಮನನೋಯಿಸುವಂಥ ಮಾತನ್ನು ಹೇಳುವಾಗ ಇಲ್ಲವೆ ನಿರ್ದಯರಾಗಿ ವರ್ತಿಸುವಾಗ ಸೇಡುತೀರಿಸದಿರಲು ನಮಗೆ ಸಹಾಯಮಾಡುತ್ತವೆ. ನಮಗೆ ಒಬ್ಬ ಸಹೋದರನ ಮೇಲೆ ಬೇಸರವಾಗಿದ್ದರೆ ದೀರ್ಘ ಸಹನೆ ಅಥವಾ ತಾಳ್ಮೆ ತೋರಿಸುವುದು ಅವಶ್ಯ. ತಾಳ್ಮೆ ತೋರಿಸುವಲ್ಲಿ ನಾವಿನ್ನು ಅವರ ಸಹವಾಸವೇ ಬೇಡ ಎಂದು ಬಿಟ್ಟುಬಿಡುವುದಿಲ್ಲ, ಬದಲಿಗೆ ಅವರೊಂದಿಗೆ ಸ್ನೇಹ ಸಂಬಂಧ ಸ್ಥಾಪಿಸಲು ಪ್ರಯತ್ನಿಸುತ್ತೇವೆ. ಹಾಗಾದರೆ ಸೌಮ್ಯಭಾವ ಮತ್ತು ದೀರ್ಘ ಸಹನೆಯನ್ನು ಸಭೆಯಲ್ಲಿ ತೋರಿಸುವ ಅವಶ್ಯಕತೆಯಿದೆಯೋ? ಖಂಡಿತ, ಏಕೆಂದರೆ ನಾವೆಲ್ಲರೂ ಅಪರಿಪೂರ್ಣರು.

5. ಪೌಲ ಮತ್ತು ಬಾರ್ನಬರ ಮಧ್ಯೆ ಏನು ನಡೆಯಿತು? ಇದರಿಂದ ನಮಗೇನು ತಿಳಿಯುತ್ತದೆ?

5 ಪೌಲ ಮತ್ತು ಬಾರ್ನಬರ ಮಧ್ಯೆ ನಡೆದ ಸಂಗತಿಯನ್ನು ಪರಿಗಣಿಸಿ. ಅವರು ಸುವಾರ್ತೆ ಸಾರುವ ಕೆಲಸದಲ್ಲಿ ಹಲವಾರು ವರ್ಷ ಜೊತೆ ಜೊತೆಯಾಗಿ ಕೆಲಸಮಾಡಿದ್ದರು. ಇಬ್ಬರಲ್ಲಿಯೂ ಮೆಚ್ಚತಕ್ಕ ಗುಣಗಳಿದ್ದವು. ಆದರೆ ಒಂದು ಸಂದರ್ಭದಲ್ಲಿ ಅವರ ಮಧ್ಯೆ “ತೀಕ್ಷ್ಣ ವಾಗ್ವಾದವುಂಟಾಗಿ ಒಬ್ಬರನ್ನೊಬ್ಬರು ಅಗಲಿದರು.” (ಅ. ಕಾ. 15:36-39) ಇದರಿಂದ ನಮಗೇನು ತಿಳಿಯುತ್ತದೆ? ದೇವರಿಗೆ ಶ್ರದ್ಧಾಪೂರ್ವಕ ಸೇವೆಯನ್ನು ಸಲ್ಲಿಸುವ ವ್ಯಕ್ತಿಗಳ ಮಧ್ಯೆ ಕೂಡ ಕೆಲವೊಮ್ಮೆ ಭಿನ್ನಾಭಿಪ್ರಾಯಗಳು ಏಳಬಹುದು. ನಮಗೆ ಒಬ್ಬ ಸಹೋದರನೊಂದಿಗೆ ಏನೋ ವೈಮನಸ್ಯ ಇದೆ ಎಂದಿಟ್ಟುಕೊಳ್ಳೋಣ. ಈ ಸಮಸ್ಯೆಯಿಂದ ದೊಡ್ಡ ವಾಗ್ವಾದ ಉಂಟಾಗಿ ನಮ್ಮ ಸಂಬಂಧದಲ್ಲಿ ದೊಡ್ಡ ಬಿರುಕನ್ನು ತರದಂತೆ ನಾವು ಏನು ಮಾಡಬಲ್ಲೆವು?

6, 7. (ಎ) ಒಬ್ಬ ಸಹೋದರನೊಂದಿಗೆ ಮಾತಾಡುತ್ತಿರುವಾಗ ನಮಗೆ ಸಿಟ್ಟುಬರುತ್ತಿದೆ ಎಂದು ತಿಳಿಯುವಲ್ಲಿ ಯಾವ ಬೈಬಲ್‌ ಸಲಹೆಯನ್ನು ಅನ್ವಯಿಸಬೇಕು? (ಬಿ) “ಕಿವಿಗೊಡುವುದರಲ್ಲಿ ಶೀಘ್ರನೂ ಮಾತಾಡುವುದರಲ್ಲಿ ದುಡುಕದವನೂ ಕೋಪಿಸುವುದರಲ್ಲಿ ನಿಧಾನಿಯೂ” ಆಗಿರುವುದರಿಂದ ಏನು ಪ್ರಯೋಜನ?

6 ಪೌಲ-ಬಾರ್ನಬರ ಮಧ್ಯೆ “ತೀಕ್ಷ್ಣ ವಾಗ್ವಾದ” ಉಂಟಾದದ್ದು ಆಕಸ್ಮಿಕವಾಗಿ. ಯಾವುದೋ ವಿಷಯದ ಕುರಿತು ಮಾತಾಡುತ್ತಿರುವಾಗ ನಮಗೆ ಸಿಟ್ಟುಬರುತ್ತಿದೆ ಎಂದು ತಿಳಿದ ಕೂಡಲೆ ನಾವೇನು ಮಾಡಬೇಕು? ಯಾಕೋಬ 1:19, 20ರಲ್ಲಿರುವ ಸಲಹೆಯನ್ನು ಪಾಲಿಸಬೇಕು. “ಪ್ರತಿಯೊಬ್ಬನು ಕಿವಿಗೊಡುವುದರಲ್ಲಿ ಶೀಘ್ರನೂ ಮಾತಾಡುವುದರಲ್ಲಿ ದುಡುಕದವನೂ ಕೋಪಿಸುವುದರಲ್ಲಿ ನಿಧಾನಿಯೂ ಆಗಿರಬೇಕು; ಏಕೆಂದರೆ ಮನುಷ್ಯನ ಕೋಪವು ದೇವರ ನೀತಿಯನ್ನು ಸಾಧಿಸುವುದಿಲ್ಲ” ಎಂದು ಅಲ್ಲಿ ಹೇಳಲಾಗಿದೆ. ಸನ್ನಿವೇಶವನ್ನು ನೋಡಿಕೊಂಡು ನಾವು ಬೇರೆ ವಿಷಯದ ಕುರಿತು ಮಾತಾಡಲು ಪ್ರಯತ್ನಿಸಬಹುದು ಅಥವಾ ಸದ್ಯಕ್ಕೆ ಈ ವಿಷಯದ ಕುರಿತು ಮಾತಾಡುವುದು ಬೇಡವೆಂದು ಹೇಳಬಹುದು ಇಲ್ಲವೆ ಕೋಪ ಮೂಗಿನ ತುದಿಗೆ ಬರುವ ಮುಂಚೆಯೇ ಜಾಗ ಖಾಲಿಮಾಡಬಹುದು.—ಜ್ಞಾನೋ. 12:16; 17:14; 29:11.

7 ಈ ಸಲಹೆಯನ್ನು ಪಾಲಿಸುವುದರಿಂದ ಏನು ಪ್ರಯೋಜನ? ಸ್ವಲ್ಪ ತಣ್ಣಗಾಗಲು, ಆ ವಿಷಯದ ಕುರಿತು ಪ್ರಾರ್ಥಿಸಲು ಮತ್ತು ಯಾರಿಗೂ ನೋವಾಗದ ರೀತಿಯಲ್ಲಿ ಹೇಗೆ ಮಾತಾಡುವುದು ಎಂದು ಯೋಚಿಸಲು ಸಮಯ ತೆಗೆದುಕೊಳ್ಳುವ ಮೂಲಕ ಕ್ರೈಸ್ತರಾದ ನಾವು ದೇವರಾತ್ಮದಿಂದ ನಡೆಸಲ್ಪಡಲು ಬಿಟ್ಟುಕೊಡುತ್ತೇವೆ. (ಜ್ಞಾನೋ. 15:1, 28) ಪವಿತ್ರಾತ್ಮ ನಮ್ಮ ಮೇಲೆ ಕೆಲಸಮಾಡುವಾಗ ನಾವು ಸೌಮ್ಯಭಾವ ಮತ್ತು ದೀರ್ಘ ಸಹನೆ ತೋರಿಸುವೆವು. ಹೀಗೆ ಮಾಡುವಾಗ ನಮಗೆ ಎಫೆಸ 4:26, 29ರಲ್ಲಿರುವ ಸಲಹೆಯನ್ನೂ ಅನ್ವಯಿಸಲು ಸಾಧ್ಯವಾಗುವುದು. ಅಲ್ಲಿ “ನೀವು ಕೋಪಗೊಂಡರೂ ಪಾಪಮಾಡಬೇಡಿರಿ . . . ನಿಮ್ಮ ಬಾಯಿಂದ ಯಾವ ಹೊಲಸು ಮಾತೂ ಹೊರಡದಿರಲಿ; ಆದರೆ ಅಗತ್ಯಕ್ಕನುಸಾರ ಭಕ್ತಿವೃದ್ಧಿಮಾಡಲು ಯೋಗ್ಯವಾಗಿರುವ ಮಾತನ್ನು ಆಡಿರಿ; ಇದು ಕೇಳುವವರಿಗೆ ಪ್ರಯೋಜನವನ್ನು ಉಂಟುಮಾಡಬಹುದು” ಎಂದು ತಿಳಿಸಲಾಗಿದೆ. ನಾವು ಸೌಮ್ಯಭಾವ ಮತ್ತು ದೀರ್ಘ ಸಹನೆಯನ್ನು ಎಲ್ಲ ಸಮಯದಲ್ಲೂ ತೋರಿಸುವಾಗ ಸಭೆಯಲ್ಲಿ ಶಾಂತಿ ಮತ್ತು ಐಕ್ಯ ನೆಲೆಸಲು ಸಹಾಯಮಾಡುತ್ತೇವೆ.

ದಯೆ ಮತ್ತು ಒಳ್ಳೇತನದಿಂದ ನಿಮ್ಮ ಕುಟುಂಬವನ್ನು ಚೈತನ್ಯಗೊಳಿಸಿ

8, 9. ದಯೆ ಮತ್ತು ಒಳ್ಳೇತನ ಎಂದರೆ ಏನು? ಇವು ಮನೆಯಲ್ಲಿ ಎಂಥ ವಾತಾವರಣ ಸೃಷ್ಟಿಯಾಗಲು ಸಹಾಯಮಾಡುತ್ತವೆ?

8ಎಫೆಸ 4:31, 32; 5:8, 9 ಓದಿ. ದಯೆಯು ಬೇಸಗೆ ಕಾಲದಲ್ಲಿ ಬೀಸುವ ತಂಗಾಳಿಯಂತೆ ಚೈತನ್ಯಕಾರಿ. ಒಳ್ಳೇತನವು ಬಿಸಿಲಿನ ಬೇಗೆಯಲ್ಲಿ ಬೆಂದವರಿಗೆ ಸಿಗುವ ತಂಪು ಪಾನೀಯದಂತೆ ಚೇತೋಹಾರಿ. ಒಂದು ಕುಟುಂಬದಲ್ಲಿ ದಯೆ ಮತ್ತು ಒಳ್ಳೇತನ ಇದ್ದುಬಿಟ್ಟರೆ ಮನೆ ನಿಜವಾಗಿಯೂ ಉಲ್ಲಾಸದ ಅರಮನೆ. ದಯೆ ತುಂಬ ಆಕರ್ಷಕ ಗುಣ. ಬೇರೆಯವರಲ್ಲಿ ನಿಜವಾದ ಆಸಕ್ತಿ ತೋರಿಸುವುದರಿಂದ ಇದು ಹೊರಹೊಮ್ಮುತ್ತದೆ ಮತ್ತು ಸಹಾಯಕರ ಕ್ರಿಯೆಗಳಲ್ಲಿಯೂ ದಾಕ್ಷಿಣ್ಯಪರ ಮಾತುಗಳಲ್ಲಿಯೂ ತೋರಿಬರುತ್ತದೆ. ಒಳ್ಳೇತನ ಸಹ ದಯೆಯಂತೆಯೇ ಒಂದು ಸಕಾರಾತ್ಮಕ ಗುಣ. ಇದು ಇತರರಿಗೆ ಪ್ರಯೋಜನ ತರುವ ಕ್ರಿಯೆಗಳಲ್ಲಿ ವ್ಯಕ್ತವಾಗುತ್ತದೆ. ಇದರಲ್ಲಿ ಉದಾರಭಾವವು ಹೆಚ್ಚಾಗಿ ಎದ್ದುಕಾಣುತ್ತದೆ. (ಅ. ಕಾ. 9:36, 39; 16:14, 15) ಆದರೆ ಒಳ್ಳೇತನದಲ್ಲಿ ಇದಕ್ಕಿಂತ ಹೆಚ್ಚು ಒಳಗೂಡಿದೆ.

9 ಒಳ್ಳೇತನದಲ್ಲಿ ಉತ್ಕೃಷ್ಟ ನೈತಿಕತೆಯಿರುತ್ತದೆ. ಇದರಲ್ಲಿ ನಾವು ಏನು ಮಾಡುತ್ತೇವೆ ಎಂಬುದಕ್ಕಿಂತ ನಾವು ಏನಾಗಿದ್ದೇವೆ ಎಂಬುದು ಪ್ರಾಮುಖ್ಯ. ಇದನ್ನು ಪೂರ್ತಿ ಮಾಗಿರುವ ಮತ್ತು ಯಾವುದೇ ಹುಳುಕಿಲ್ಲದ ಒಂದು ಹಣ್ಣಿಗೆ ಹೋಲಿಸಬಹುದು. ಅದರಂತೆಯೇ ಪವಿತ್ರಾತ್ಮದಿಂದ ಉಂಟಾಗುವ ಒಳ್ಳೇತನ ಕ್ರೈಸ್ತನೊಬ್ಬನ ಇಡೀ ಜೀವನ ರೀತಿಯಲ್ಲಿ ತೋರಿಬರುತ್ತದೆ.

10. ಕುಟುಂಬ ಸದಸ್ಯರು ಪವಿತ್ರಾತ್ಮದ ಫಲವನ್ನು ಬೆಳೆಸಿಕೊಳ್ಳಲು ನೀವು ಹೇಗೆ ಸಹಾಯಮಾಡಬಲ್ಲಿರಿ?

10 ಕ್ರೈಸ್ತ ಕುಟುಂಬದಲ್ಲಿ ಒಬ್ಬರಿಗೊಬ್ಬರು ದಯೆ ಮತ್ತು ಒಳ್ಳೇತನವನ್ನು ತೋರಿಸಲು ಯಾವುದು ಸಹಾಯಮಾಡುವುದು? ಮುಖ್ಯವಾಗಿ ಕುಟುಂಬ ಸದಸ್ಯರಿಗೆ ದೇವರ ವಾಕ್ಯದ ನಿಷ್ಕೃಷ್ಟ ಜ್ಞಾನವಿರಬೇಕು. (ಕೊಲೊ. 3:9, 10) ಕೆಲವು ಕುಟುಂಬದ ತಲೆಗಳು ಏನು ಮಾಡುತ್ತಾರೆ ಗೊತ್ತೆ? ತಮ್ಮ ಕುಟುಂಬ ಆರಾಧನೆಯಲ್ಲಿ ಪವಿತ್ರಾತ್ಮದ ಫಲದ ಅಂಶಗಳನ್ನು ಚರ್ಚಿಸುತ್ತಾರೆ. ನೀವು ಸಹ ಹೀಗೆ ಮಾಡಬಹುದು. ಅದೇನು ಕಷ್ಟಕರವಾದ ಕೆಲಸವಲ್ಲ. ನಿಮ್ಮ ಭಾಷೆಯಲ್ಲಿರುವ ಸಂಶೋಧನಾ ಸಾಧನಗಳನ್ನು ಉಪಯೋಗಿಸಿ ಪ್ರತಿಯೊಂದು ಗುಣದ ಕುರಿತು ಲಭ್ಯವಿರುವ ಮಾಹಿತಿಯನ್ನು ಕಲೆಹಾಕಿ. ಒಂದು ಗುಣದ ಕುರಿತು ನೀವು ಅನೇಕ ವಾರಗಳ ವರೆಗೆ ಅಧ್ಯಯನ ಮಾಡಬಹುದು. ಪ್ರತಿ ವಾರ ಕೆಲವೇ ಪ್ಯಾರಗಳನ್ನು ಪರಿಗಣಿಸಿ. ಉದ್ಧರಿಸಲಾಗಿರುವ ವಚನಗಳನ್ನು ಓದಿ ಚರ್ಚಿಸಿ. ಕಲಿತ ವಿಷಯಗಳನ್ನು ಅನ್ವಯಿಸಲು ಪ್ರಯತ್ನಿಸಿ ಹಾಗೂ ನಿಮ್ಮ ಪ್ರಯತ್ನಗಳ ಮೇಲೆ ಯೆಹೋವನ ಆಶೀರ್ವಾದವನ್ನು ಕೇಳಿರಿ. (1 ತಿಮೊ. 4:15; 1 ಯೋಹಾ. 5:14, 15) ‘ಹೀಗೆ ಮಾಡಿದರೆ ನನ್ನ ಕುಟುಂಬಕ್ಕೆ ಪ್ರಯೋಜನವಾಗುವುದೋ? ನನ್ನ ಮನೆಮಂದಿ ಒಬ್ಬರೊಂದಿಗೊಬ್ಬರು ಒಳ್ಳೇದಾಗಿ ವರ್ತಿಸಲು ಇದು ಸಹಾಯಮಾಡುವುದೋ?’ ಎಂದು ನೀವು ಕೇಳಬಹುದು. ಮುಂದಿನ ಪ್ಯಾರಗಳಲ್ಲಿರುವ ಅನುಭವಗಳಿಗೆ ಗಮನಕೊಡಿ.

11, 12. ಎರಡು ಕುಟುಂಬಗಳು ದಯೆಯ ಕುರಿತು ಅಧ್ಯಯನ ಮಾಡಿ ಯಾವ ಪ್ರಯೋಜನ ಪಡೆದವು?

11 ತಮ್ಮ ವಿವಾಹ ಜೀವನ ಸಫಲವಾಗಬೇಕೆಂದು ಬಯಸುವ ಒಬ್ಬ ಯುವ ದಂಪತಿ ಪವಿತ್ರಾತ್ಮದ ಫಲದ ಆಳವಾದ ಅಧ್ಯಯನ ಮಾಡಬೇಕೆಂಬ ನಿರ್ಣಯಕ್ಕೆ ಬಂದರು. ಅಧ್ಯಯನ ಮಾಡಿದರು ಸಹ. ಅವರಿಗೆ ಯಾವ ಫಲಿತಾಂಶ ಸಿಕ್ಕಿತು? ಅದನ್ನು ಆ ಯುವ ಪತ್ನಿಯ ಮಾತುಗಳಿಂದಲೇ ತಿಳಿಯೋಣ. ಆಕೆ ಹೇಳುವುದು: “ದಯೆಯಲ್ಲಿ ನಿಷ್ಠೆಯೂ ಸೇರಿದೆ ಎಂದು ತಿಳಿದ ಮೇಲೆ ನಾವು ಒಬ್ಬರೊಂದಿಗೊಬ್ಬರು ವ್ಯವಹರಿಸುವ ರೀತಿಯೇ ಬದಲಾಯಿತು. ಇವತ್ತಿನ ವರೆಗೂ ನಾವು ಒಬ್ಬರಿಗೊಬ್ಬರು ಮಣಿಯುವಂತೆ, ಒಬ್ಬರನ್ನೊಬ್ಬರು ಕ್ಷಮಿಸುವಂತೆ ಹಾಗೂ ಅಗತ್ಯವಿರುವಾಗ ‘ಥ್ಯಾಂಕ್ಸ್‌’ ಹಾಗೂ ‘ಕ್ಷಮಿಸಿ’ ಎಂಬಂಥ ಮಾತುಗಳನ್ನು ಬಳಸುವಂತೆ ಇದು ಸಹಾಯಮಾಡಿದೆ.”

12 ಇನ್ನೊಬ್ಬ ಕ್ರೈಸ್ತ ದಂಪತಿಗೆ ತಮ್ಮ ವಿವಾಹ ಜೀವನದಲ್ಲಿ ಸಮಸ್ಯೆಗಳಿದ್ದವು. ಇದಕ್ಕೆ ಕಾರಣ ತಮ್ಮ ಮಧ್ಯೆ ದಯೆಯ ಗುಣ ಇಲ್ಲದಿದ್ದದ್ದೇ ಎಂದು ಅರಿತ ಅವರು ಆ ಗುಣದ ಕುರಿತು ಇಬ್ಬರೂ ಒಟ್ಟಿಗೆ ಅಧ್ಯಯನ ಮಾಡಲು ತೊಡಗಿದರು. ಅದರಿಂದ ಯಾವ ಫಲಿತಾಂಶ ಸಿಕ್ಕಿತು? ಪತಿಯು ಹೇಳುವುದು: “ದಯೆಯ ಕುರಿತು ಅಧ್ಯಯನ ಮಾಡಿದ್ದು ನಮಗೆ ತುಂಬ ಸಹಾಯಮಾಡಿತು. ನಾವು ಒಬ್ಬರ ಮೇಲೊಬ್ಬರು ಭರವಸೆಯಿಡಬೇಕೆಂದು ನಮಗೆ ತಿಳಿಯಿತು. ಒಬ್ಬರಲ್ಲೊಬ್ಬರು ತಪ್ಪು ಹುಡುಕುವುದನ್ನು ಬಿಟ್ಟುಬಿಟ್ಟು ಒಳ್ಳೇದನ್ನು ಹುಡುಕಲು ಸಾಧ್ಯವಾಯಿತು. ನನಗೆ ನನ್ನ ಪತ್ನಿಯ ಅಗತ್ಯಗಳು ಮುಖ್ಯವೆಂದು ಕಂಡವು. ಅವಳು ಸಹ ನನ್ನ ಅಗತ್ಯಗಳ ಕಡೆಗೆ ಗಮನಕೊಟ್ಟಳು. ನನ್ನ ಪತ್ನಿ ಹೇಳಿದ ಪ್ರತಿಯೊಂದು ವಿಷಯಕ್ಕೆ ಅಸಮಾಧಾನಗೊಳ್ಳುವ ಬದಲು ಅವಳ ಮನಸ್ಸಲ್ಲೇನಿದೆ ಎಂದು ಧೈರ್ಯದಿಂದ ಹೇಳುವಂತೆ ಆಕೆಯನ್ನು ಪ್ರೋತ್ಸಾಹಿಸಲು ದಯೆ ಸಹಾಯಮಾಡಿತು. ಹೀಗೆ ಮಾಡಬೇಕಾದರೆ ನಾನು ನನ್ನ ಜಂಬವನ್ನು ಕೈಬಿಡಬೇಕಾಯಿತು. ಇಬ್ಬರೂ ದಯೆ ತೋರಿಸುವುದನ್ನು ಕಲಿತಂತೆ ನಾನು ಮಾಡಿದ್ದೇ ಸರಿ ಎಂದು ವಾದಿಸುವುದು ಕಡಿಮೆಯಾಯಿತು. ನಮಗೇನೋ ಹೊಸ ಸ್ವಾತಂತ್ರ್ಯ ಸಿಕ್ಕಿದಂತೆ ಅನಿಸಿತು.” ಈಗ ನೀವೇ ಹೇಳಿ, ಪವಿತ್ರಾತ್ಮದ ಫಲದ ಕುರಿತು ಅಧ್ಯಯನ ಮಾಡುವುದರಿಂದ ನಿಮ್ಮ ಕುಟುಂಬಕ್ಕೂ ಪ್ರಯೋಜನವಾಗುವುದೋ ಇಲ್ಲವೋ?

ಒಬ್ಬರೇ ಇರುವಾಗಲೂ ನಂಬಿಕೆ ತೋರಿಸಿ

13. ಯೆಹೋವನೊಂದಿಗಿನ ನಮ್ಮ ಸಂಬಂಧವನ್ನು ಹಾಳುಮಾಡಬಲ್ಲ ಯಾವ ವಿಷಯಗಳ ಕುರಿತು ನಾವು ಜಾಗ್ರತೆ ವಹಿಸಬೇಕು?

13 ಕ್ರೈಸ್ತರು ಒಬ್ಬರೇ ಇರಲಿ ಜನರ ಮಧ್ಯೆಯೇ ಇರಲಿ ದೇವರಾತ್ಮವು ತಮ್ಮನ್ನು ನಡೆಸುವಂತೆ ಬಿಟ್ಟುಕೊಡುವುದು ಅಗತ್ಯ. ಏಕೆಂದರೆ ಇಂದು ಸೈತಾನನ ಲೋಕದಲ್ಲಿ ಅಸಭ್ಯ ಚಿತ್ರಗಳು, ಕಳಪೆ ಮನೋರಂಜನೆ ಎಲ್ಲೆಡೆಯೂ ತುಂಬಿಕೊಂಡಿದೆ. ನಾವು ಜಾಗ್ರತೆ ವಹಿಸದಿದ್ದರೆ ಇವು ಯೆಹೋವನೊಂದಿಗಿನ ನಮ್ಮ ಸಂಬಂಧವನ್ನೇ ಹಾಳುಮಾಡಬಲ್ಲವು. ಹೀಗಾಗದಿರಲು ನಾವೇನು ಮಾಡಬೇಕು? “ಎಲ್ಲ ಕಶ್ಮಲತೆಯನ್ನು ಮತ್ತು ಅಧಿಕವಾದ ಕೆಟ್ಟತನವನ್ನು ತೆಗೆದುಹಾಕಿ ನಿಮ್ಮ ಪ್ರಾಣಗಳನ್ನು ರಕ್ಷಿಸಲು ಶಕ್ತವಾಗಿರುವ ವಾಕ್ಯದ ನೆಡುವಿಕೆಯನ್ನು ಸೌಮ್ಯಭಾವದಿಂದ ಸ್ವೀಕರಿಸಿರಿ” ಎಂದು ದೇವರ ವಾಕ್ಯವು ಹೇಳುತ್ತದೆ. (ಯಾಕೋ. 1:21) ನಾವು ಈ ಬುದ್ಧಿವಾದವನ್ನು ಪಾಲಿಸಿ ಯೆಹೋವನ ದೃಷ್ಟಿಯಲ್ಲಿ ಶುದ್ಧರಾಗಿ ಉಳಿಯಲು ಪವಿತ್ರಾತ್ಮದ ಫಲದ ಇನ್ನೊಂದು ಅಂಶವಾದ ನಂಬಿಕೆ ಹೇಗೆ ಸಹಾಯಮಾಡುತ್ತದೆ ಎಂದು ತಿಳಿಯೋಣ.

14. ನಂಬಿಕೆಯ ಕೊರತೆ ನಮ್ಮನ್ನು ಹೇಗೆ ಕೆಟ್ಟದ್ದಕ್ಕೆ ನಡಿಸಬಲ್ಲದು?

14 ನಂಬಿಕೆ ಅಂದರೆ ಮೂಲತಃ ಇಷ್ಟೇ, ದೇವರು ಒಬ್ಬ ನೈಜ ವ್ಯಕ್ತಿ ಎಂದು ನಂಬುವುದು. ನಾವು ದೇವರನ್ನು ಒಬ್ಬ ನಿಜ ವ್ಯಕ್ತಿಯೆಂದು ಪರಿಗಣಿಸಲಿಲ್ಲವಾದರೆ ತಪ್ಪು ಕೆಲಸ ಮಾಡಲು ತುಂಬ ಹೊತ್ತು ಹಿಡಿಯುವುದಿಲ್ಲ. ಇದನ್ನು ಅರ್ಥಮಾಡಿಕೊಳ್ಳಲು ಪ್ರಾಚೀನ ಕಾಲದ ಇಸ್ರಾಯೇಲ್ಯರ ಕುರಿತು ಯೋಚಿಸಿ. ಆ ಜನರು ಒಬ್ಬರೇ ಇರುವಾಗ ಏನೆಲ್ಲ ಅಸಹ್ಯ ಕೃತ್ಯಗಳನ್ನು ಮಾಡುತ್ತಿದ್ದಾರೆಂದು ಯೆಹೋವನು ಯೆಹೆಜ್ಕೇಲನಿಗೆ ತೋರಿಸಿದ ಬಳಿಕ ಹೇಳಿದ್ದು: “ನರಪುತ್ರನೇ, ಇಸ್ರಾಯೇಲ್‌ ವಂಶದ ಹಿರಿಯರೆಲ್ಲರೂ ನಾನಾ ರೂಪಗಳಿಂದ ಚಿತ್ರಿಸಲ್ಪಟ್ಟ ತಮ್ಮ ತಮ್ಮ ಕೋಣೆಗಳೊಳಗೆ ಕತ್ತಲೆಯಲ್ಲಿ ನಡಿಸುವ ಕೆಲಸವನ್ನು ನೋಡಿದಿಯಾ? ಯೆಹೋವನು ನಮ್ಮನ್ನು ನೋಡನು, ಯೆಹೋವನು ದೇಶವನ್ನು ತೊರೆದುಬಿಟ್ಟಿದ್ದಾನೆ ಎಂದು ಮಾತಾಡಿಕೊಳ್ಳುತ್ತಾರಷ್ಟೆ.” (ಯೆಹೆ. 8:12) ಅವರ ಸಮಸ್ಯೆ ಏನೆಂದು ತಿಳಿಯಿತೋ? ತಮ್ಮ ಕುಕೃತ್ಯಗಳನ್ನು ಯೆಹೋವನು ನೋಡುತ್ತಿಲ್ಲ ಎಂದವರು ನೆನಸಿದರು. ಏಕೆಂದರೆ ಯೆಹೋವನು ಅವರಿಗೆ ನಿಜ ವ್ಯಕ್ತಿಯಾಗಿರಲಿಲ್ಲ.

15. ಯೆಹೋವನಲ್ಲಿ ಬಲವಾದ ನಂಬಿಕೆ ನಮಗೊಂದು ರಕ್ಷಣೆ ಹೇಗೆ?

15 ಆದರೆ ಯೋಸೇಫನು ಎಷ್ಟು ಭಿನ್ನನಾಗಿದ್ದನು! ತನ್ನ ಕುಟುಂಬ ಮತ್ತು ಊರಿಂದ ಸಾವಿರಾರು ಮೈಲಿ ದೂರದಲ್ಲಿದ್ದರೂ ಪೋಟೀಫರನ ಹೆಂಡತಿಯೊಂದಿಗೆ ವ್ಯಭಿಚಾರ ಮಾಡಲು ಅವನು ಒಪ್ಪಲಿಲ್ಲ. ಏಕೆ? “ನಾನು ಇಂಥಾ ಮಹಾ ದುಷ್ಕೃತ್ಯವನ್ನು ನಡಿಸಿ ದೇವರಿಗೆ ವಿರುದ್ಧವಾಗಿ ಹೇಗೆ ಪಾಪಮಾಡಲಿ” ಎಂದನವನು. (ಆದಿ. 39:7-9) ಅವನು ಹೀಗೆ ಹೇಳಲು ಕಾರಣ, ಯೆಹೋವನು ಅವನಿಗೆ ನಿಜ ವ್ಯಕ್ತಿಯಾಗಿದ್ದದರಿಂದಲೇ. ತದ್ರೀತಿಯಲ್ಲಿ ಯೆಹೋವನು ನಮಗೆ ನಿಜ ವ್ಯಕ್ತಿಯಾಗಿರುವಲ್ಲಿ ನಾವು ಅಸಭ್ಯ ಮನೋರಂಜನೆಯನ್ನು ವೀಕ್ಷಿಸುವುದಿಲ್ಲ ಅಥವಾ ಯೆಹೋವನನ್ನು ಅಪ್ರಸನ್ನಗೊಳಿಸುತ್ತದೆಂದು ತಿಳಿದಿರುವ ಯಾವುದೇ ವಿಷಯವನ್ನು ಒಬ್ಬರೇ ಇರುವಾಗಲೂ ಮಾಡುವುದಿಲ್ಲ. ನಮ್ಮ ದೃಢಸಂಕಲ್ಪ ಕೀರ್ತನೆಗಾರನಂತಿರುವುದು: “ಮನೆಯೊಳಗೂ ಯಥಾರ್ಥಹೃದಯದಿಂದಲೇ ಪ್ರವರ್ತಿಸುವೆನು. ಯಾವ ನೀಚವಾದ ಕಾರ್ಯವನ್ನೂ ದೃಷ್ಟಿಸುವದಿಲ್ಲ.”—ಕೀರ್ತ. 101:2, 3.

ಸ್ವನಿಯಂತ್ರಣದ ಮೂಲಕ ನಿಮ್ಮ ಹೃದಯವನ್ನು ಕಾಪಾಡಿಕೊಳ್ಳಿ

16, 17. (ಎ) ಜ್ಞಾನೋಕ್ತಿ ಪುಸ್ತಕದಲ್ಲಿ ತಿಳಿಸಲ್ಪಟ್ಟಿರುವ “ಜ್ಞಾನಹೀನನಾದ ಒಬ್ಬ ಯೌವನಸ್ಥನು” ಹೇಗೆ ಪಾಶದಲ್ಲಿ ಸಿಕ್ಕಿಬೀಳುತ್ತಾನೆ? (ಬಿ) ಒಬ್ಬನ ವಯಸ್ಸು ಎಷ್ಟೇ ಆಗಿರಲಿ ಪುಟ 26ರಲ್ಲಿ ಚಿತ್ರಿಸಲ್ಪಟ್ಟಿರುವಂಥ ವಿಷಯಕ್ಕೆ ಅವನು ಹೇಗೆ ಬಲಿಬೀಳಬಲ್ಲನು?

16 ಪವಿತ್ರಾತ್ಮದ ಫಲದ ಕೊನೆಯ ಅಂಶ ಸ್ವನಿಯಂತ್ರಣ. ದೇವರು ಖಂಡಿಸುವಂಥ ವಿಷಯಗಳನ್ನು ತಳ್ಳಿಹಾಕಲು ಇದು ಶಕ್ತಿಕೊಡುತ್ತದೆ. ನಮ್ಮ ಹೃದಯವನ್ನು ಕಾಪಾಡಿಕೊಳ್ಳಲು ಇದು ಸಹಾಯಮಾಡಬಲ್ಲದು. (ಜ್ಞಾನೋ. 4:23) ಜ್ಞಾನೋಕ್ತಿ 7:6-23ರಲ್ಲಿ ದಾಖಲಾಗಿರುವ ಸನ್ನಿವೇಶವನ್ನು ಚಿತ್ರಿಸಿಕೊಳ್ಳಿ. ಅಲ್ಲಿ “ಜ್ಞಾನಹೀನನಾದ ಒಬ್ಬ ಯೌವನಸ್ಥನು” ವೇಶ್ಯೆಯೊಬ್ಬಳು ಬೀಸಿದ ಬಲೆಗೆ ಸಿಕ್ಕಿಬೀಳುವುದರ ಕುರಿತು ಬರೆಯಲಾಗಿದೆ. ಈ ಯೌವನಸ್ಥನು ‘ಅವಳ ಮನೆಯ ಮೂಲೆಯ ಹತ್ತಿರ ಬೀದಿಯಲ್ಲಿ ಹಾದುಹೋಗುತ್ತಾನೆ.’ ಆಗಲೇ ಅವನು ಆಕೆಯ ಪಾಶಕ್ಕೆ ಒಳಗಾಗುತ್ತಾನೆ. ಅಲ್ಲಿ ಏನು ನಡೆಯುತ್ತಿದೆ ನೋಡೋಣ ಎಂಬ ಕುತೂಹಲವೇ ಅವನನ್ನು ಅಲ್ಲಿಗೆ ಎಳೆದು ತಂದಿರಬೇಕು. ಆದರೆ ‘ತನ್ನ ಪ್ರಾಣಕ್ಕೇ ಅಪಾಯ’ ತರುವ ಗುಂಡಿಗೆ ತಾನು ಕಾಲಿಡುತ್ತಿದ್ದೇನೆಂದು ಅವನಿಗೆ ತಿಳಿಯಲೇ ಇಲ್ಲ.

17 ಆ ಯೌವನಸ್ಥನು ಈ ಗಂಡಾಂತರದಿಂದ ಹೇಗೆ ತಪ್ಪಿಸಿಕೊಳ್ಳಬಹುದಿತ್ತು? “ತಪ್ಪಿಹೋಗಿ ಅವಳ ಮಾರ್ಗದಲ್ಲಿ ನಡೆಯಬೇಡ” ಎಂಬ ಸಲಹೆಯನ್ನು ಪಾಲಿಸಿದ್ದರೆ ಸಾಕಾಗುತ್ತಿತ್ತು. (ಜ್ಞಾನೋ. 7:25) ಇದರಲ್ಲಿ ನಮಗೊಂದು ಪಾಠವಿದೆ: ದೇವರಾತ್ಮವು ನಮ್ಮನ್ನು ನಡೆಸಬೇಕೆಂದು ನಾವು ಬಯಸುವಲ್ಲಿ ಪ್ರಲೋಭನೆಗೆ ನಡೆಸಬಹುದಾದ ಸನ್ನಿವೇಶಗಳಿಂದ ದೂರವಿರಬೇಕು. ಒಬ್ಬ ವ್ಯಕ್ತಿ ಅನಾವಶ್ಯಕವಾಗಿ ಟಿವಿ ಚಾನಲ್‌ಗಳನ್ನು ಬದಲಾಯಿಸುತ್ತಾ ಇರುವ ಮೂಲಕ ಅಥವಾ ಸುಮ್ಮನೆ ಇಂಟರ್‌ನೆಟ್‌ ಮುಂದೆ ಕೂತು ಕಾಲಹರಣ ಮಾಡುವ ಮೂಲಕ ‘ಜ್ಞಾನಹೀನನಾದ ಆ ಯೌವನಸ್ಥನು ಮಾಡಿದ’ ಮೂರ್ಖ ಕೃತ್ಯವನ್ನೇ ಮಾಡುತ್ತಾನೆ. ತಿಳಿದೋ ತಿಳಿಯದೆಯೋ ಅವನ ಕಣ್ಣ ಮುಂದೆ ಲೈಂಗಿಕವಾಗಿ ಪ್ರಚೋದಿಸುವ ಚಿತ್ರಗಳು ಕಾಣಿಸಿಕೊಳ್ಳಬಹುದು. ಇದರಿಂದ ಅವನು ಮೆಲ್ಲಮೆಲ್ಲನೆ ಕಾಮಪ್ರಚೋದಕ ಸಾಹಿತ್ಯವನ್ನು ನೋಡುವ ಅಶುದ್ಧ ರೂಢಿಯನ್ನು ಬೆಳೆಸಿಕೊಳ್ಳಬಹುದು. ಹೀಗೆ ಅವನ ಮನಸ್ಸಾಕ್ಷಿ ಘಾಸಿಗೊಳ್ಳುವುದು ಮಾತ್ರವಲ್ಲ ದೇವರೊಂದಿಗಿನ ಸಂಬಂಧ ಸಹ ಹಾಳಾಗಬಲ್ಲದು. ಇದು ಅವನ ಪ್ರಾಣಕ್ಕೇ ಅಪಾಯ ತರಬಲ್ಲದು.—ರೋಮನ್ನರಿಗೆ 8:5-8 ಓದಿ.

18. ಒಬ್ಬ ಕ್ರೈಸ್ತನು ತನ್ನ ಹೃದಯವನ್ನು ಕಾಪಾಡಲು ಏನು ಮಾಡಬಲ್ಲನು? ಹೀಗೆ ಮಾಡಲು ಏಕೆ ಸ್ವನಿಯಂತ್ರಣ ಬೇಕು?

18 ನಮ್ಮ ಕಣ್ಣ ಮುಂದೆ ಕಾಮಪ್ರಚೋದಕ ಚಿತ್ರವು ಬರುವುದಾದರೆ ನಾವು ಸ್ವನಿಯಂತ್ರಣವನ್ನು ತೋರಿಸಿ ಅದನ್ನು ದೃಷ್ಟಿಸದಂತೆ ತಕ್ಷಣ ಕ್ರಿಯೆಗೈಯಸಾಧ್ಯ ಮತ್ತು ಕ್ರಿಯೆಗೈಯಬೇಕು. ಆದರೂ ಅಂಥ ಸನ್ನಿವೇಶವೇ ನಮಗೆ ಎದುರಾಗದಂತೆ ನಾವು ಜಾಗ್ರತೆ ವಹಿಸುವುದಾದರೆ ಅದೆಷ್ಟು ಉತ್ತಮ! (ಜ್ಞಾನೋ. 22:3) ಸ್ವನಿಯಂತ್ರಣ ತೋರಿಸುವುದರಲ್ಲಿ ಅಂಥ ವಿಷಯಗಳಲ್ಲಿ ತೊಡಗದಂತೆ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವುದು ಸೇರಿದೆ. ನಾವು ಹೀಗೆ ಮಾಡಬಹುದು: ಕಂಪ್ಯೂಟರನ್ನು ಎಲ್ಲರಿಗೆ ಕಾಣುವ ಜಾಗದಲ್ಲಿ ಇಡಬಹುದು ಅಥವಾ ಕೆಲವರು ಮಾಡುವಂತೆ ಮನೆಯಲ್ಲಿ ಇತರರು ಇರುವಾಗ ಮಾತ್ರ ಕಂಪ್ಯೂಟರನ್ನು ಅಥವಾ ಟಿವಿಯನ್ನು ಉಪಯೋಗಿಸಬಹುದು. ಇನ್ನು ಕೆಲವರು ಇಂಟರ್‌ನೆಟ್‌ ಅನ್ನು ಬಳಸುವ ಗೋಜಿಗೇ ಹೋಗುವುದಿಲ್ಲ. (ಮತ್ತಾಯ 5:27-30 ಓದಿ.) ಹೀಗೆ ಯಾವುದೇ ವಿಧದಲ್ಲಿಯಾದರೂ ನಾವು ನಮ್ಮನ್ನೂ ನಮ್ಮ ಕುಟುಂಬವನ್ನೂ ಆಧ್ಯಾತ್ಮಿಕವಾಗಿ ಕಾಪಾಡುತ್ತೇವೆ. ಹೀಗೆ ಮಾಡುವುದರಿಂದ ನಾವು ಯೆಹೋವನನ್ನು “ಶುದ್ಧವಾದ ಹೃದಯದಿಂದಲೂ ಒಳ್ಳೇ ಮನಸ್ಸಾಕ್ಷಿಯಿಂದಲೂ ನಿಷ್ಕಪಟವಾದ ನಂಬಿಕೆಯಿಂದಲೂ” ಆರಾಧಿಸಲು ಶಕ್ತರಾಗುವೆವು.—1 ತಿಮೊ. 1:5.

19. ಪವಿತ್ರಾತ್ಮವು ನಮ್ಮನ್ನು ನಡಿಸುವಂತೆ ಬಿಡುವ ಮೂಲಕ ನಮಗೆ ಯಾವ ಪ್ರಯೋಜನಗಳು ಸಿಗುತ್ತವೆ?

19 ಪವಿತ್ರಾತ್ಮವು ನಮ್ಮಲ್ಲಿ ಉಂಟುಮಾಡುವ ಫಲವು ಅನೇಕ ಪ್ರಯೋಜನಗಳನ್ನು ತರುತ್ತದೆ. ಸೌಮ್ಯಭಾವ ಮತ್ತು ದೀರ್ಘ ಸಹನೆಯು ಸಭೆಯಲ್ಲಿ ಶಾಂತಿಯನ್ನು ಹೆಚ್ಚಿಸುತ್ತದೆ. ದಯೆ ಹಾಗೂ ಒಳ್ಳೇತನವು ಕುಟುಂಬದಲ್ಲಿ ಸಂತೋಷವನ್ನು ಹೆಚ್ಚಿಸುತ್ತದೆ. ನಂಬಿಕೆ ಮತ್ತು ಸ್ವನಿಯಂತ್ರಣವು ನಾವು ಯೆಹೋವನಿಗೆ ಆಪ್ತರಾಗಿರುವಂತೆಯೂ ಆತನ ದೃಷ್ಟಿಯಲ್ಲಿ ಶುದ್ಧರಾಗಿರುವಂತೆಯೂ ಸಹಾಯಮಾಡುತ್ತದೆ. ಮಾತ್ರವಲ್ಲ ಗಲಾತ್ಯ 6:8 ಹೇಳುವಂತೆ, “ಪವಿತ್ರಾತ್ಮಕ್ಕೆ ಅನುಸಾರವಾಗಿ ಬಿತ್ತುತ್ತಿರುವವನು ಪವಿತ್ರಾತ್ಮದಿಂದ ನಿತ್ಯಜೀವವನ್ನು ಕೊಯ್ಯುವನು.” ಅಂದರೆ ಯಾರು ಪವಿತ್ರಾತ್ಮವು ತಮ್ಮನ್ನು ನಡಿಸುವಂತೆ ಬಿಡುತ್ತಾರೋ ಅವರಿಗೆ ಯೆಹೋವ ದೇವರು ತನ್ನ ಪವಿತ್ರಾತ್ಮದ ಮೂಲಕ ಕ್ರಿಸ್ತನ ವಿಮೋಚನಾ ಮೌಲ್ಯ ಯಜ್ಞದ ಆಧಾರದ ಮೇಲೆ ನಿತ್ಯಜೀವವನ್ನು ದಯಪಾಲಿಸುವನು.

ನಿಮ್ಮ ಉತ್ತರವೇನು?

• ಸೌಮ್ಯಭಾವ ಹಾಗೂ ದೀರ್ಘ ಸಹನೆಯು ಸಭೆಯಲ್ಲಿ ಶಾಂತಿಯನ್ನು ಹೆಚ್ಚಿಸುವುದು ಹೇಗೆ?

• ಮನೆಯಲ್ಲಿ ದಯೆ ಹಾಗೂ ಒಳ್ಳೇತನವನ್ನು ತೋರಿಸಲು ಕ್ರೈಸ್ತರಿಗೆ ಯಾವುದು ಸಹಾಯಮಾಡುವುದು?

• ನಂಬಿಕೆ ಹಾಗೂ ಸ್ವನಿಯಂತ್ರಣವು ಕ್ರೈಸ್ತನೊಬ್ಬನು ತನ್ನ ಹೃದಯವನ್ನು ಕಾಪಾಡಲು ಹೇಗೆ ಸಹಾಯಮಾಡುವುದು?

[ಅಧ್ಯಯನ ಪ್ರಶ್ನೆಗಳು]

[ಪುಟ 24ರಲ್ಲಿರುವ ಚಿತ್ರ]

ಒಂದು ಮಾತುಕತೆ ವಾಗ್ದಾಳಿಯಾಗದಂತೆ ನೀವು ಹೇಗೆ ತಡೆಯಬಲ್ಲಿರಿ?

[ಪುಟ 25ರಲ್ಲಿರುವ ಚಿತ್ರ]

ಪವಿತ್ರಾತ್ಮದಿಂದ ಉಂಟಾಗುವ ಫಲದ ಅಧ್ಯಯನ ನಿಮ್ಮ ಕುಟುಂಬಕ್ಕೆ ಪ್ರಯೋಜನಕರ

[ಪುಟ 26ರಲ್ಲಿರುವ ಚಿತ್ರ]

ನಂಬಿಕೆ ಹಾಗೂ ಸ್ವನಿಯಂತ್ರಣವನ್ನು ತೋರಿಸುವುದರಿಂದ ಯಾವ ಅಪಾಯಗಳಿಂದ ತಪ್ಪಿಸಿಕೊಳ್ಳುತ್ತೇವೆ?