ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ಬಲದಲ್ಲಿ ಸಾಂತ್ವನವನ್ನು ಕಂಡುಕೊಳ್ಳಿರಿ

ಯೆಹೋವನ ಬಲದಲ್ಲಿ ಸಾಂತ್ವನವನ್ನು ಕಂಡುಕೊಳ್ಳಿರಿ

ಯೆಹೋವನ ಬಲದಲ್ಲಿ ಸಾಂತ್ವನವನ್ನು ಕಂಡುಕೊಳ್ಳಿರಿ

“ನನ್ನಲ್ಲಿ ಅನೇಕ ಚಿಂತೆಗಳಿರುವಾಗ ನಿನ್ನ ಸಂತೈಸುವಿಕೆಯಿಂದಲೇ ನನ್ನ ಪ್ರಾಣಕ್ಕೆ ಸಂತೋಷವುಂಟಾಗುತ್ತದೆ.”—ಕೀರ್ತನೆ 94:19.

ಸಂತೈಸುವಿಕೆಗಾಗಿ ಹಾತೊರೆಯುವ ಎಲ್ಲರಿಗೂ ಬೈಬಲಿನಲ್ಲಿ ಸಾಂತ್ವನದ ಮಾತುಗಳು ಇವೆ. “ಅಸಂಖ್ಯಾತ ಜನರು ಸಂಕಷ್ಟ ಮತ್ತು ಅನಿಶ್ಚಿತತೆಯ ಸಮಯಗಳಲ್ಲಿ ಸಾಂತ್ವನ, ನಿರೀಕ್ಷೆ ಮತ್ತು ಮಾರ್ಗದರ್ಶನಕ್ಕಾಗಿ ಬೈಬಲಿನ ಕಡೆಗೆ ತಿರುಗಿದ್ದಾರೆ” ಎಂದು ದ ವರ್ಲ್ಡ್‌ ಬುಕ್‌ ಎನ್‌ಸೈಕ್ಲೊಪೀಡಿಯ ಹೇಳುವುದರಲ್ಲಿ ಯಾವ ಆಶ್ಚರ್ಯವೂ ಇಲ್ಲ. ಏಕೆ?

ಏಕೆಂದರೆ ಬೈಬಲು ನಮ್ಮ ಪ್ರೀತಿಯ ಸೃಷ್ಟಿಕರ್ತನಿಂದ ಪ್ರೇರಿಸಲಾಗಿದೆ. ಆತನು “ಸಕಲವಿಧವಾಗಿ ಸಂತೈಸುವ ದೇವರೂ ಆಗಿದ್ದು ನಮಗೆ ಸಂಭವಿಸುವ ಎಲ್ಲಾ ಸಂಕಟಗಳಲ್ಲಿ ನಮ್ಮನ್ನು ಸಂತೈಸುತ್ತಾನೆ.” (2 ಕೊರಿಂಥ 1:3, 4) ಆತನು ‘ಆದರಣೆಯನ್ನು ಕೊಡುವ ದೇವರು’ ಆಗಿದ್ದಾನೆ. (ರೋಮಾಪುರ 15:5) ಯೆಹೋವನು ನಮಗೆಲ್ಲರಿಗೆ ಉಪಶಮನದ ದಾರಿಯನ್ನು ಒದಗಿಸುವುದರ ಮೂಲಕ ಮಾದರಿಯನ್ನು ಒದಗಿಸಿದ್ದಾನೆ. ಆತನು ನಮಗೆ ನಿರೀಕ್ಷೆ ಮತ್ತು ಸಾಂತ್ವನವನ್ನು ಕೊಡಲು ತನ್ನ ಏಕಜಾತ ಪುತ್ರನಾದ ಯೇಸು ಕ್ರಿಸ್ತನನ್ನು ಭೂಮಿಗೆ ಕಳುಹಿಸಿದನು. ಯೇಸು ಕಲಿಸಿದ್ದು: “ದೇವರು ಲೋಕದ ಮೇಲೆ ಎಷ್ಟೋ ಪ್ರೀತಿಯನ್ನಿಟ್ಟು ತನ್ನ ಒಬ್ಬನೇ ಮಗನನ್ನು ಕೊಟ್ಟನು; ಆತನನ್ನು ನಂಬುವ ಒಬ್ಬನಾದರೂ ನಾಶವಾಗದೆ ಎಲ್ಲರೂ ನಿತ್ಯಜೀವವನ್ನು ಪಡೆಯಬೇಕೆಂದು ಆತನನ್ನು ಕೊಟ್ಟನು.” (ಯೋಹಾನ 3:16) ಬೈಬಲು ಯೆಹೋವನನ್ನು “ಅನುದಿನವೂ ನಮ್ಮ ಭಾರವನ್ನು ಹೊರುವ ನಮ್ಮ ರಕ್ಷಣೆಯ ಸತ್ಯ ದೇವರು” ಎಂಬುದಾಗಿ ವರ್ಣಿಸುತ್ತದೆ. (ಕೀರ್ತನೆ 68:19, NW) ದೇವರಿಗೆ ಭಯಪಡುವ ಮಾನವರು, ದೃಢವಿಶ್ವಾಸದಿಂದ ಹೀಗೆ ಹೇಳಸಾಧ್ಯವಿದೆ: “ನಾನು ಯೆಹೋವನನ್ನು ಯಾವಾಗಲೂ ನನ್ನೆದುರಿಗೇ ಇಟ್ಟುಕೊಂಡಿದ್ದೇನೆ; ಆತನು ನನ್ನ ಬಲಗಡೆಯಲ್ಲಿ ಇರುವದರಿಂದ ನಾನು ಎಂದಿಗೂ ಕದಲುವದಿಲ್ಲ.”—ಕೀರ್ತನೆ 16:8.

ಇಂತಹ ಬೈಬಲ್‌ ವಚನಗಳು, ಮಾನವರಾದ ನಮ್ಮ ಕಡೆಗೆ ಯೆಹೋವ ದೇವರಿಗೆ ಆಳವಾದ ಪ್ರೀತಿಯಿದೆಯೆಂಬುದನ್ನು ತೋರಿಸುತ್ತವೆ. ಸಂಕಷ್ಟದ ಸಮಯದಲ್ಲಿ ನಮ್ಮ ನೋವನ್ನು ಹಗುರಗೊಳಿಸಲು ಸಾಧ್ಯವಾಗುವಂತೆ ಮಾಡುವ ಮತ್ತು ಬಹಳಷ್ಟು ಸಾಂತ್ವನವನ್ನು ಒದಗಿಸುವ ಹೃದಯದಾಳದ ಆಕಾಂಕ್ಷೆ ಆತನಿಗಿದೆ ಮಾತ್ರವಲ್ಲ, ಅದನ್ನು ಒದಗಿಸುವ ಸಾಮರ್ಥ್ಯವೂ ಇದೆ ಎಂಬುದು ಸ್ಪಷ್ಟ. “ಸೋತವನಿಗೆ ತ್ರಾಣವನ್ನು ಅನುಗ್ರಹಿಸಿ ನಿರ್ಬಲನಿಗೆ ಬಹು ಬಲವನ್ನು ದಯಪಾಲಿಸುತ್ತಾನೆ.” (ಯೆಶಾಯ 40:29) ಹಾಗಾದರೆ, ನಾವು ಯೆಹೋವನ ಬಲದಲ್ಲಿ ಸಾಂತ್ವನವನ್ನು ಹೇಗೆ ಕಂಡುಕೊಳ್ಳಬಲ್ಲೆವು?

ಯೆಹೋವನ ಪರಾಮರಿಕೆಯಿಂದಾಗುವ ಸಮಾಧಾನಕರವಾದ ಪರಿಣಾಮ

ಕೀರ್ತನೆಗಾರನು ಬರೆದದ್ದು: “ನಿನ್ನ ಚಿಂತಾಭಾರವನ್ನು ಯೆಹೋವನ ಮೇಲೆ ಹಾಕು; ಆತನು ನಿನ್ನನ್ನು ಉದ್ಧಾರಮಾಡುವನು. ನೀತಿವಂತನನ್ನು ಎಂದಿಗೂ ಕದಲಗೊಡಿಸನು.” (ಕೀರ್ತನೆ 55:22) ಹೌದು, ಯೆಹೋವ ದೇವರಿಗೆ ಮಾನವ ಕುಟುಂಬದಲ್ಲಿ ಆಸಕ್ತಿಯಿದೆ. ಅಪೊಸ್ತಲ ಪೇತ್ರನು ಪ್ರಥಮ ಶತಮಾನದ ಕ್ರೈಸ್ತರಿಗೆ ಪುನರಾಶ್ವಾಸನೆಯನ್ನು ಕೊಟ್ಟಿದ್ದನು: “ಆತನು ನಿಮಗೋಸ್ಕರ ಚಿಂತಿಸುತ್ತಾನೆ.” (1 ಪೇತ್ರ 5:7) ದೇವರು ಮಾನವರನ್ನು ಎಷ್ಟು ಅಮೂಲ್ಯರಾಗಿ ಎಣಿಸುತ್ತಾನೆಂಬುದನ್ನು ಒತ್ತಿಹೇಳುತ್ತಾ, ಯೇಸು ಕ್ರಿಸ್ತನು ಹೀಗೆ ಹೇಳಿದನು: “ಐದು ಗುಬ್ಬಿಗಳನ್ನು ಎರಡು ದುಡ್ಡಿಗೆ ಮಾರುತ್ತಾರಲ್ಲಾ? ಆದಾಗ್ಯೂ ಅವುಗಳಲ್ಲಿ ಒಂದಾದರೂ ದೇವರಿಗೆ ಮರೆತುಹೋಗುವದಿಲ್ಲ. ನಿಮ್ಮ ತಲೇಕೂದಲುಗಳು ಸಹ ಎಲ್ಲವೂ ಎಣಿಕೆಯಾಗಿವೆ. ಹೆದರಬೇಡಿರಿ; ಬಹಳ ಗುಬ್ಬಿಗಳಿಗಿಂತ ನೀವು ಹೆಚ್ಚಿನವರು.” (ಲೂಕ 12:6, 7) ನಾವು ದೇವರಿಗೆ ಅದೆಷ್ಟು ಹೆಚ್ಚು ಮೌಲ್ಯವುಳ್ಳವರಾಗಿದ್ದೇವೆಂದರೆ ಆತನು ನಮ್ಮ ಕುರಿತಾದ ಚಿಕ್ಕಪುಟ್ಟ ಮಾಹಿತಿಗಳನ್ನು ಸಹ ಗಮನಕ್ಕೆ ತೆಗೆದುಕೊಳ್ಳುತ್ತಾನೆ. ನಮಗೆ ನಮ್ಮ ಕುರಿತು ತಿಳಿಯದೇ ಇರುವ ಅನೇಕ ವಿಷಯಗಳು ಆತನಿಗೆ ತಿಳಿದಿವೆ, ಯಾಕೆಂದರೆ ಆತನು ನಮ್ಮಲ್ಲಿರುವ ಪ್ರತಿಯೊಬ್ಬರ ಕಡೆಗೆ ಆಳವಾದ ಆಸಕ್ತಿಯನ್ನು ವಹಿಸುತ್ತಾನೆ.

ನಮ್ಮ ಹಿಂದಿನ ಲೇಖನದಲ್ಲಿ ತಿಳಿಸಲಾದ ಯುವ ವೇಶ್ಯೆಯಾಗಿದ್ದ ಸ್ವೆಟ್‌ಲಾನಾಳಿಗೆ ಯೆಹೋವನು ತೆಗೆದುಕೊಳ್ಳುವ ವೈಯಕ್ತಿಕ ಆಸಕ್ತಿಯನ್ನು ಗ್ರಹಿಸಿಕೊಳ್ಳುವುದು ತಾನೇ ಬಹಳ ಸಾಂತ್ವನದಾಯಕವಾಗಿ ರುಜುವಾಯಿತು. ಇವಳು ಆತ್ಮಹತ್ಯೆಯನ್ನು ಮಾಡಿಕೊಳ್ಳಬೇಕೆಂದಿದ್ದಾಗ, ಯೆಹೋವನ ಸಾಕ್ಷಿಗಳ ಸಂಪರ್ಕಕ್ಕೆ ಬಂದಳು. ಬಳಿಕ ಅವಳು ಒಂದು ಬೈಬಲ್‌ ಅಭ್ಯಾಸವನ್ನು ಸ್ವೀಕರಿಸಿದಳು ಮತ್ತು ಇದರಿಂದ ತನ್ನ ಹಿತಾಸಕ್ತಿಯ ಕುರಿತು ಆಸಕ್ತನಾಗಿರುವ ನೈಜ ವ್ಯಕ್ತಿಯಾದ ಯೆಹೋವನ ಪರಿಚಯವನ್ನು ಮಾಡಿಕೊಳ್ಳಲು ಅವಳಿಗೆ ಸಹಾಯಸಿಕ್ಕಿತು. ಇದು ಅವಳ ಹೃದಯವನ್ನು ಸ್ಪರ್ಶಿಸಿತು, ತನ್ನ ಜೀವನ ಮಾರ್ಗವನ್ನು ಬದಲಾಯಿಸಿಕೊಳ್ಳಲು ಇದು ಅವಳನ್ನು ಪ್ರಚೋದಿಸಿತು ಮತ್ತು ತನ್ನನ್ನು ದೇವರಿಗೆ ಸಮರ್ಪಿಸಿಕೊಳ್ಳಲು ಅವಳು ಬಯಸಿದಳು. ಸಮಸ್ಯೆಗಳ ಮಧ್ಯೆಯೂ ಪಟ್ಟುಹಿಡಿಯುತ್ತಾ ಮುಂದುವರಿಯಲು ಮತ್ತು ಜೀವನದಲ್ಲಿ ಸಕಾರಾತ್ಮಕ ಹೊರನೋಟವನ್ನು ಪಡೆದುಕೊಳ್ಳಲು ಅವಶ್ಯವಾಗಿರುವ ಸ್ವಲ್ಪಮಟ್ಟಿಗಿನ ಸ್ವ-ಗೌರವವನ್ನು ಸಹ ಸ್ವೆಟ್‌ಲಾನಾಳಿಗೆ ಇದು ಕೊಟ್ಟಿತು. ಅವಳೀಗ ಹೇಳುವುದು: “ಯೆಹೋವನು ನನ್ನನ್ನು ಎಂದೂ ತ್ಯಜಿಸಲಾರನು ಎಂಬುದರ ಕುರಿತು ನಾನು ಮನಗಾಣಿಸಲ್ಪಟ್ಟಿದ್ದೇನೆ. 1 ಪೇತ್ರ 5:7ರಲ್ಲಿ ಬರೆಯಲಾಗಿರುವ ವಿಷಯವು ಸತ್ಯವಾಗಿದೆ ಎಂಬುದನ್ನು ನಾನು ಕಂಡುಕೊಂಡಿದ್ದೇನೆ. ಅದು ಹೇಳುವುದು: ‘ನಿಮ್ಮ ಚಿಂತೆಯನ್ನೆಲ್ಲಾ ಆತನ [ಯೆಹೋವನ] ಮೇಲೆ ಹಾಕಿರಿ, ಆತನು ನಿಮಗೋಸ್ಕರ ಚಿಂತಿಸುತ್ತಾನೆ.’”—1 ಪೇತ್ರ 5:7.

ಬೈಬಲಾಧಾರಿತ ನಿರೀಕ್ಷೆಯು ಸಾಂತ್ವನವನ್ನು ಕೊಡುತ್ತದೆ

ಸಾಂತ್ವನವನ್ನು ಒದಗಿಸಲು ದೇವರು ಉಪಯೋಗಿಸುವ ಒಂದು ನಿರ್ದಿಷ್ಟ ಮಾರ್ಗವು ಯಾವುದೆಂದರೆ, ಭವಿಷ್ಯತ್ತಿಗಾಗಿ ಅದ್ಭುತಕರವಾದ ನಿರೀಕ್ಷೆಯನ್ನು ಒಳಗೊಂಡಿರುವ ತನ್ನ ಲಿಖಿತ ವಾಕ್ಯದ ಮೂಲಕ ಸಂತೈಸುವುದು. ಅಪೊಸ್ತಲ ಪೌಲನು ಬರೆದದ್ದು: “ಪೂರ್ವದಲ್ಲಿ ಬರೆದದ್ದೆಲ್ಲಾ ನಮ್ಮನ್ನು ಉಪದೇಶಿಸುವದಕ್ಕಾಗಿ ಬರೆಯಲ್ಪಟ್ಟಿತು. ನಾವು ಓದಿ ಸ್ಥಿರಚಿತ್ತವನ್ನೂ ಆದರಣೆಯನ್ನೂ ಹೊಂದಿ ರಕ್ಷಣೆಯ ನಿರೀಕ್ಷೆಯುಳ್ಳವರಾಗಿರುವಂತೆ ಆ ಗ್ರಂಥಗಳು ಬರೆಯಲ್ಪಟ್ಟವು.” (ರೋಮಾಪುರ 15:4) ನಿಜ ನಿರೀಕ್ಷೆ ಮತ್ತು ಸಾಂತ್ವನದ ಮಧ್ಯೆ ಇರುವ ಸಂಬಂಧವನ್ನು ಪೌಲನು ಹೀಗೆ ಬರೆದಾಗ ಸ್ಪಷ್ಟೀಕರಿಸಿದನು: “ನಮ್ಮನ್ನು ಪ್ರೀತಿಸಿ ನಮಗೆ ನಿತ್ಯವಾದ ಆದರಣೆಯನ್ನೂ ಉತ್ತಮವಾದ ನಿರೀಕ್ಷೆಯನ್ನೂ ಕೃಪೆಯಿಂದ ಅನುಗ್ರಹಿಸಿದ ನಮ್ಮ ತಂದೆಯಾದ ದೇವರೂ . . . ನಿಮ್ಮ ಹೃದಯಗಳನ್ನು ಸಂತೈಸಿ ಸಕಲ ಸತ್ಕಾರ್ಯದಲ್ಲಿಯೂ ಸದ್ವಾಕ್ಯದಲ್ಲಿಯೂ ದೃಢಪಡಿಸಲಿ.” (2 ಥೆಸಲೊನೀಕ 2:16, 17) ಪರದೈಸ ಭೂಮಿಯಲ್ಲಿ ಪರಿಪೂರ್ಣ, ಸಂತೋಷದ ಮತ್ತು ಅಂತ್ಯವಿಲ್ಲದ ಜೀವನದ ಪ್ರತೀಕ್ಷೆಯು ಈ “ಉತ್ತಮವಾದ ನಿರೀಕ್ಷೆ”ಯಲ್ಲಿ ಒಳಗೊಂಡಿದೆ.—2 ಪೇತ್ರ 3:13.

ಇಂತಹ ನಿಶ್ಚಿತ ಮತ್ತು ಉಜ್ವಲವಾದ ನಿರೀಕ್ಷೆಯು, ನಮ್ಮ ಹಿಂದಿನ ಲೇಖನದಲ್ಲಿ ತಿಳಿಸಲಾದ, ಮದ್ಯವ್ಯಸನಿ ಹಾಗೂ ಪಾರ್ಶ್ವವಾಯು ರೋಗಿಯಾಗಿದ್ದ ಲೈಮಿನಸ್‌ನನ್ನು ಉತ್ತೇಜಿಸಿತು. ಯೆಹೋವನ ಸಾಕ್ಷಿಗಳ ಬೈಬಲ್‌ ಆಧಾರಿತ ಸಾಹಿತ್ಯವನ್ನು ಓದುವುದರಿಂದ, ಅವನು ತನ್ನ ಆರೋಗ್ಯವು ಸಂಪೂರ್ಣವಾಗಿ ಪುನಃಸ್ಥಾಪಿಸಲ್ಪಡಲು ಸಾಧ್ಯವಿರುವ ದೇವರ ರಾಜ್ಯದ ಕೆಳಗಿನ ಆ ಹೊಸ ಲೋಕದ ಕುರಿತು ಕಲಿಯುವುದರಲ್ಲಿ ಸಂತೋಷಿಸಿದನು. ಬೈಬಲಿನಲ್ಲಿ, ಅವನು ಅದ್ಭುತಕರವಾದ ವಾಸಿಮಾಡುವಿಕೆಯ ಕುರಿತಾದ ಈ ಕೆಳಗಿನ ಭರವಸಪೂರ್ಣ ವಾಗ್ದಾನವನ್ನು ಓದಿದನು: “ಆಗ ಕುರುಡರ ಕಣ್ಣು ಕಾಣುವದು, ಕಿವುಡರ ಕಿವಿ ಕೇಳುವದು, ಕುಂಟನು ಜಿಂಕೆಯಂತೆ ಹಾರುವನು, ಮೂಕನ ನಾಲಿಗೆಯು ಹರ್ಷಧ್ವನಿಗೈಯುವದು.” (ಯೆಶಾಯ 35:5, 6) ಆ ಪರದೈಸದಲ್ಲಿ ಜೀವಿಸುವುದಕ್ಕಾಗಿ ಅರ್ಹನಾಗಲು, ಲೈಮಿನಸ್‌ ತನ್ನ ಜೀವನದಲ್ಲಿ ಬಹಳಷ್ಟು ಬದಲಾವಣೆಗಳನ್ನು ಮಾಡಿದನು. ಅವನು ಮದ್ಯಪಾನವನ್ನು ಬಿಟ್ಟುಬಿಟ್ಟನು ಮತ್ತುಅವನ ಈ ಬದಲಾವಣೆಯು ಅವನ ನೆರೆಹೊರೆಯವರಿಂದ ಮತ್ತು ಪರಿಚಯಸ್ಥರಿಂದ ಗಮನಿಸಲ್ಪಡದೆ ಹೋಗಲಿಲ್ಲ. ಅವನು ಈಗ ಅನೇಕ ಬೈಬಲ್‌ ಅಭ್ಯಾಸಗಳನ್ನು ನಡೆಸುವುದರ ಮೂಲಕ ಇತರರಿಗೆ ಬೈಬಲ್‌ ಆಧಾರಿತ ನಿರೀಕ್ಷೆಯು ಒದಗಿಸುವ ಸಾಂತ್ವನವನ್ನು ಹಂಚುತ್ತಿದ್ದಾನೆ.

ಪ್ರಾರ್ಥನೆಯ ಪಾತ್ರ

ನಮ್ಮ ಹೃದಯವು ಯಾವುದೋ ಕಾರಣಕ್ಕಾಗಿ ನೋವಿನಲ್ಲಿರುವಾಗ, ಯೆಹೋವನಿಗೆ ಪ್ರಾರ್ಥಿಸುವುದರ ಮೂಲಕ ನಾವು ಸಾಂತ್ವನವನ್ನು ಕಂಡುಕೊಳ್ಳಬಹುದು. ಅದು ನಮ್ಮ ಹೊರೆಯನ್ನು ತೆಗೆದುಹಾಕಬಲ್ಲದು. ನಾವು ವಿಜ್ಞಾಪನೆಗಳನ್ನು ಮಾಡುವಾಗ, ದೇವರ ವಾಕ್ಯದಲ್ಲಿ ಹೇಳಿರುವ ವಿಷಯಗಳನ್ನು ನೆನಪಿಸಿಕೊಳ್ಳುವ ಮೂಲಕ ಸಾಂತ್ವನವನ್ನು ಪಡೆದುಕೊಳ್ಳಬಹುದು. ಬೈಬಲಿನಲ್ಲಿರುವ ಅತಿ ದೊಡ್ಡ ಕೀರ್ತನೆಯು ಒಂದು ಸುಂದರವಾದ ಪ್ರಾರ್ಥನೆಯಂತಿದೆ. ಅದರ ರಚನಕಾರನು ಹಾಡಿದ್ದು: “ಯೆಹೋವನೇ, ನಿನ್ನ ಪುರಾತನ ವಿಧಿಗಳನ್ನು ನೆನಪುಮಾಡಿಕೊಂಡು ನನ್ನನ್ನು ಸಂತೈಸಿಕೊಂಡಿದ್ದೇನೆ.” (ಕೀರ್ತನೆ 119:52) ವಿಪರೀತವಾದ ಕಠಿನ ಸನ್ನಿವೇಶಗಳಲ್ಲಿ, ಅದರಲ್ಲೂ ಮುಖ್ಯವಾಗಿ ಆರೋಗ್ಯಕ್ಕೆ ಅಪಾಯವಿರುವ ಸಂಗತಿಗಳಲ್ಲಿ, ಯಾವುದೇ ಪ್ರತ್ಯೇಕವಾದ ಇಲ್ಲವೆ ಸಮಸ್ಯೆಯನ್ನು ಪೂರ್ಣವಾಗಿ ನಿಭಾಯಿಸುವ ಉತ್ತರಗಳು ನಮ್ಮಲ್ಲಿರಲಿಕ್ಕಿಲ್ಲ. ನಮ್ಮ ಸ್ವಂತ ಬಲದಿಂದ, ಮಾರ್ಗದರ್ಶನಕ್ಕಾಗಿ ನಾವೆಲ್ಲಿಗೆ ತಿರುಗಬೇಕೆಂದು ನಮಗೆ ತಿಳಿದಿರಲಿಕ್ಕಿಲ್ಲ. ತಮ್ಮಿಂದ ಸಾಧ್ಯವಿರುವುದೆಲ್ಲವನ್ನು ತಾವು ಮಾಡಿದ್ದೇವೆಂದು ಅನೇಕರು ಕಂಡುಕೊಳ್ಳುವಾಗ, ಪ್ರಾರ್ಥನೆಯಲ್ಲಿ ದೇವರ ಕಡೆಗೆ ತಿರುಗಿಕೊಳ್ಳುವುದು ಮಹಾ ಸಾಂತ್ವನದಲ್ಲಿ ಫಲಿಸಿದೆ ಮತ್ತು ಕೆಲವೊಮ್ಮೆ ಮುಂಗಾಣದ ಪರಿಹಾರಗಳಲ್ಲಿಯೂ ಅದು ಫಲಿಸಿದೆ.—1 ಕೊರಿಂಥ 10:13.

ಆಸ್ಪತ್ರೆಯ ತುರ್ತುವಿಭಾಗದ ಕೋಣೆಗೆ ಸಾಗಿಸಲ್ಪಟ್ಟ ಪ್ಯಾಟ್‌, ಪ್ರಾರ್ಥನೆಯ ಈ ಹಿತಕರ ಪರಿಣಾಮವನ್ನು ಅನುಭವಿಸಿದಳು. ಅವಳು ಗುಣವಾದ ಮೇಲೆ ಹೀಗೆ ಹೇಳಿದಳು: “ನಾನು ಯೆಹೋವನಿಗೆ ಪ್ರಾರ್ಥಿಸಿದೆ ಮತ್ತು ದೇವರು ತನ್ನ ಚಿತ್ತದಂತೆಯೇ ಮಾಡಲಿ ಎಂಬ ಭರವಸೆಯಿಂದ ನನ್ನ ಜೀವನವನ್ನು ಆತನ ವಶಕ್ಕೆ ಬಿಟ್ಟುಬಿಡಲು ನಾನು ನಿಜವಾಗಿಯೂ ಅರಿತುಕೊಂಡೆ. ಈ ಎಲ್ಲ ಸಮಯಗಳಲ್ಲಿ, ನನಗೆ ಶಾಂತಿಯ ಅನಿಸಿಕೆಯಾಯಿತು. ನಾನು ಫಿಲಿಪ್ಪಿಯವರಿಗೆ 4:6, 7ರಲ್ಲಿ ತಿಳಿಸಲಾದ ದೇವಶಾಂತಿಯನ್ನು ಅನುಭವಿಸುತ್ತಿದ್ದೆನು.” ಈ ವಚನಗಳು ನಮಗೆಲ್ಲರಿಗೆ ಎಷ್ಟೊಂದು ಸಾಂತ್ವನವನ್ನು ಕೊಡುತ್ತವೆ! ಅಲ್ಲಿ ಪೌಲನು ನಮಗೆ ಹೀಗೆ ತಿಳಿಸುತ್ತಾನೆ: “ಯಾವ ಸಂಬಂಧವಾಗಿಯೂ ಚಿಂತೆಮಾಡದೆ ಸರ್ವವಿಷಯದಲ್ಲಿ ದೇವರ ಮುಂದೆ ಕೃತಜ್ಞತಾಸ್ತುತಿಯನ್ನೂ ಪ್ರಾರ್ಥನೆವಿಜ್ಞಾಪನೆಗಳನ್ನೂ ಮಾಡುತ್ತಾ ನಿಮಗೆ ಬೇಕಾದದ್ದನ್ನು ತಿಳಿಯಪಡಿಸಿರಿ. ಆಗ ಎಲ್ಲಾ ಗ್ರಹಿಕೆಯನ್ನು ಮೀರುವ ದೇವಶಾಂತಿಯು ನಿಮ್ಮ ಹೃದಯಗಳನ್ನೂ ಯೋಚನೆಗಳನ್ನೂ ಕ್ರಿಸ್ತ ಯೇಸುವಿನಲ್ಲಿ ಕಾಯುವದು.”

ಪವಿತ್ರಾತ್ಮವು ಸಾಂತ್ವನಕೊಡುವ ಕಾರ್ಯವನ್ನು ಮಾಡುತ್ತದೆ

ತನ್ನ ಮರಣದ ಮುಂಚಿನ ರಾತ್ರಿಯಂದು, ತಾನು ಅವರನ್ನು ಬೇಗನೇ ಬಿಟ್ಟುಹೋಗಲಿದ್ದೇನೆಂಬುದನ್ನು ಯೇಸು ತನ್ನ ಅಪೊಸ್ತಲರಿಗೆ ಸ್ಪಷ್ಟಪಡಿಸಿದನು. ಇದು ಅವರಿಗೆ ಕಳವಳವನ್ನು ಮತ್ತು ವ್ಯಥೆಯನ್ನು ಉಂಟುಮಾಡಿತು. (ಯೋಹಾನ 13:33, 36; 14:27-31) ಅವರಿಗೆ ಸತತವಾದ ಸಾಂತ್ವನದ ಅಗತ್ಯವಿದ್ದುದ್ದನ್ನು ಯೇಸು ಮನಗಂಡಿದ್ದರಿಂದ, ಅವರಿಗೆ ಅವನು ಭರವಸೆಯನ್ನು ಕೊಟ್ಟದ್ದು: “ನಾನು ತಂದೆಯನ್ನು ಕೇಳಿಕೊಳ್ಳುವೆನು; ಆತನು ನಿಮಗೆ ಬೇರೊಬ್ಬ ಸಹಾಯಕನನ್ನು [ಅಥವಾ ಸಂತೈಸುವವನನ್ನು] ಸದಾಕಾಲ ನಿಮ್ಮ ಸಂಗಡ ಇರುವದಕ್ಕೆ ಕೊಡುವನು.” (ಯೋಹಾನ 14:16; NW, ಪಾದಟಿಪ್ಪಣಿ.) ಯೇಸು ಇಲ್ಲಿ ದೇವರ ಪವಿತ್ರಾತ್ಮವನ್ನು ಉಲ್ಲೇಖಿಸಿ ಮಾತಾಡಿದನು. ಬೇರೆ ವಿಷಯಗಳ ಜೊತೆಗೆ, ದೇವರ ಆತ್ಮವು ಅಪೊಸ್ತಲರಿಗೆ ತಮ್ಮ ಸಂಕಷ್ಟಗಳ ಸಮಯದಲ್ಲಿ ಸಾಂತ್ವನವನ್ನು ನೀಡಿತು ಮತ್ತು ದೇವರ ಚಿತ್ತವನ್ನು ಮಾಡುತ್ತಾ ಮುಂದುವರಿಯುವುದರಲ್ಲಿ ಅದು ಅವರನ್ನು ಬಲಪಡಿಸಿತು.—ಅ. ಕೃತ್ಯಗಳು 4:31.

ಮಾರಕ ಅಪಘಾತದ ಬಳಿಕ ತನ್ನ ಗಂಡನು ಮರಣಕ್ಕೆ ಹತ್ತಿರವಾಗಿದ್ದರೂ, ಈ ಸನ್ನಿವೇಶವು ತನ್ನ ಮೇಲೆ ತಂದಿರುವ ಎಲ್ಲ ಸಂಕಷ್ಟ ಮತ್ತು ನೋವನ್ನು ಯಶಸ್ವಿಕರವಾಗಿ ನಿಭಾಯಿಸಲು ಆ್ಯಂಜಿಗೆ ಸಹಾಯಸಿಕ್ಕಿತು. ಯಾವುದರ ಸಹಾಯವು ಅವಳಿಗೆ ಸಿಕ್ಕಿತು? ಅವಳು ಹೇಳುವುದು: “ಯೆಹೋವನ ಪವಿತ್ರಾತ್ಮದ ಬೆಂಬಲವಿಲ್ಲದೆ, ನಾವು ಅನುಭವಿಸಿದವುಗಳಿಂದ ಹೊರಬರಲು ಮತ್ತು ದೃಢವಾಗಿ ಉಳಿಯಲು ನಮಗೆ ಸಾಧ್ಯವಾಗುತ್ತಿರಲಿಲ್ಲ. ನಿಶ್ಚಯವಾಗಿಯೂ, ನಮ್ಮ ಬಲಹೀನತೆಗಳ ಮೂಲಕ ಯೆಹೋವನ ಬಲವು ವ್ಯಕ್ತವಾಗಿದೆ ಮತ್ತು ನಮ್ಮ ಸಂಕಷ್ಟದ ಸಮಯದಲ್ಲಿ ಆತನು ನಮಗೆ ಬಲವಾದ ಕೋಟೆಯಾಗಿ ರುಜುವಾಗಿದ್ದಾನೆ.”

ಸಾಂತ್ವನವನ್ನು ಕೊಡುವ ಸಹೋದರತ್ವ

ಜೀವನದಲ್ಲಿ ಒಬ್ಬ ವ್ಯಕ್ತಿಯ ಸನ್ನಿವೇಶವು ಏನೇ ಆಗಿರಲಿ, ಯಾವುದೇ ನೋವುಭರಿತ ಪರಿಸ್ಥಿತಿಯೇ ಅವನನ್ನು ಸುತ್ತಿಕೊಂಡಿರಲಿ, ಅವನು ಯೆಹೋವನ ಸಭೆಯಲ್ಲಿರುವ ಸಹೋದರತ್ವದಲ್ಲಿ ಸಾಂತ್ವನವನ್ನು ಕಂಡುಕೊಳ್ಳಲು ಶಕ್ತನಾಗಿರಬೇಕು. ಈ ಸಹೋದರತ್ವವು ಆತ್ಮಿಕ ಬೆಂಬಲವನ್ನು ಮತ್ತು ಸಭೆಯೊಂದಿಗೆ ಸಹವಾಸಿಸುವವರಿಗೆ ಸಹಾಯವನ್ನು ಒದಗಿಸುತ್ತದೆ. ಅಲ್ಲಿ ಪ್ರೀತಿಯುಳ್ಳ, ಇತರರ ಕುರಿತು ಚಿಂತಿಸುವ ಮತ್ತು ಸಂತೈಸುವ ಮಿತ್ರರ ಗುಂಪೊಂದನ್ನು ಒಬ್ಬನು ಕಂಡುಕೊಳ್ಳಬಹುದು. ಇವರು ಸಂಕಷ್ಟದ ಸಮಯದಲ್ಲಿ ಇತರರಿಗೆ ಸಹಾಯಮಾಡಲು ಮತ್ತು ಅವರಿಗೆ ಸಾಂತ್ವನವನ್ನು ನೀಡಲು ಸದಾ ಇಚ್ಛಿಸುವವರೂ ಸಿದ್ಧರಾಗಿರುವವರೂ ಆಗಿರುತ್ತಾರೆ.—2 ಕೊರಿಂಥ 7:5-7.

ಕ್ರೈಸ್ತ ಸಭೆಯ ಸದಸ್ಯರು ‘ಎಲ್ಲರಿಗೆ ಒಳ್ಳೇದನ್ನು ಮಾಡಲು, ಮುಖ್ಯವಾಗಿ ಒಂದೇ ಮನೆಯವರಂತಿರುವ ಕ್ರಿಸ್ತನಂಬಿಕೆಯುಳ್ಳವರಿಗೆ’ ಹಾಗೆ ಮಾಡಲು ಕಲಿಸಲ್ಪಟ್ಟಿದ್ದಾರೆ. (ಗಲಾತ್ಯ 6:10) ಅವರು ಪಡೆದುಕೊಳ್ಳುವ ಬೈಬಲ್‌ ಆಧಾರಿತ ಶಿಕ್ಷಣವು ಸಹೋದರ ಪ್ರೀತಿಯನ್ನು ತೋರಿಸಲು ಮತ್ತು ಒಬ್ಬರಿಗೊಬ್ಬರು ಆಪ್ತ ಕನಿಕರವನ್ನು ತೋರಿಸಲು ಅವರನ್ನು ಪ್ರೇರಿಸುತ್ತದೆ. (ರೋಮಾಪುರ 12:10; 1 ಪೇತ್ರ 3:8) ಸಭೆಯಲ್ಲಿರುವ ಆತ್ಮಿಕ ಸಹೋದರರು ಮತ್ತು ಸಹೋದರಿಯರು ಕನಿಕರವುಳ್ಳವರು, ಸಾಂತ್ವನವನ್ನು ನೀಡುವವರು ಮತ್ತು ಸಹಾನುಭೂತಿಯುಳ್ಳವರೂ ಆಗಿರುವಂತೆ ಪ್ರೇರಿಸಲ್ಪಟ್ಟಿದ್ದಾರೆ.—ಎಫೆಸ 4:32.

ಮರಣದಲ್ಲಿ ತಮ್ಮ ಮಗನನ್ನು ದುರಂತಮಯವಾಗಿ ಕಳೆದುಕೊಂಡ ಜೋ ಮತ್ತು ರಿಬೆಕ್ಕರವರು, ಕ್ರೈಸ್ತ ಸಭೆಯ ಸದಸ್ಯರಿಂದ ಸಾಂತ್ವನದಾಯಕ ಬೆಂಬಲವನ್ನು ಪಡೆದುಕೊಂಡರು. ಅವರು ಹೇಳುವುದು: “ಯೆಹೋವನು ಮತ್ತು ಆತನ ಪ್ರೀತಿಯ ಸಭೆಯು, ನಮ್ಮ ದುಃಖಕರ ಸಮಯದಲ್ಲಿ ಸಂಕಷ್ಟಗಳನ್ನು ನಿಭಾಯಿಸಿಕೊಂಡು ಹೋಗಲು ನಮಗೆ ಸಹಾಯಮಾಡಿತು. ನೂರಾರು ಕಾರ್ಡುಗಳು, ಪತ್ರಗಳು ಮತ್ತು ಟೆಲಿಫೋನ್‌ ಕರೆಗಳನ್ನು ನಾವು ಪಡೆದುಕೊಂಡೆವು. ನಮ್ಮ ಸಹೋದರತ್ವವು ಎಷ್ಟು ಅಮೂಲ್ಯವಾಗಿದೆ ಎಂಬುದನ್ನು ಗಣ್ಯಮಾಡಲು ಇದರಿಂದ ಸಹಾಯವಾಯಿತು. ನಾವು ದುರಂತದಿಂದ ದಿಗ್ಭ್ರಮೆಗೊಳಿಸಲ್ಪಟ್ಟಾಗಲೂ, ಸ್ಥಳಿಕ ಸಭೆಯಿಂದ ಅನೇಕರು ನಮ್ಮ ಸಹಾಯಕ್ಕೆ ಬಂದರು, ಆಹಾರವನ್ನು ಒದಗಿಸಿದರು ಮತ್ತು ಮನೆಯನ್ನು ಶುಚಿಗೊಳಿಸಿದರು.”

ಸಾಂತ್ವನವನ್ನು ಕಂಡುಕೊಳ್ಳಿರಿ!

ವಿಪತ್ತಿನ ರಭಸವಾದ ಬಿರುಗಾಳಿಯು ಬೀಸಲಾರಂಭಿಸುವಾಗ, ಮತ್ತು ಆಪತ್ತಿನ ಎಡೆಬಿಡದ ಮಳೆ ಮತ್ತು ಕಲ್ಮಳೆಯು ಸುರಿಯುವಾಗ, ದೇವರು ನಮಗೆ ಉಪಶಮನಕಾರಿ ಸಂರಕ್ಷಣೆಯನ್ನು ಕೊಡಲು ಸಿದ್ಧನಾಗಿರುತ್ತಾನೆ. ಕೀರ್ತನೆಗಳಲ್ಲೊಂದು ಭಾಗವು ಆತನನ್ನು ಉಪಶಮನಕಾರಿ ಆಶ್ರಯವನ್ನು ಒದಗಿಸುವವನಾಗಿ ಹೀಗೆ ವರ್ಣಿಸುತ್ತದೆ: “ಆತನು ನಿನ್ನನ್ನು ತನ್ನ ರೆಕ್ಕೆಗಳಿಂದ ಹೊದಗಿಸುವನು; ಆತನ ಪಕ್ಕಗಳ ಮರೆಯನ್ನು ಆಶ್ರಯಿಸಿಕೊಳ್ಳುವಿ.” (ಕೀರ್ತನೆ 91:4) ಇಲ್ಲಿ ಕೊಡಲಾದ ಚಿತ್ರಣವು ಒಂದು ಹದ್ದಿನದ್ದಾಗಿರಬಹುದು. ಅಪಾಯವನ್ನು ದೂರದಿಂದಲೇ ಗ್ರಹಿಸುವ ಮತ್ತು ಅನಂತರ ಸಂರಕ್ಷಣೆಗಾಗಿ ತನ್ನ ರೆಕ್ಕೆಗಳನ್ನು ತನ್ನ ಮರಿಗಳ ಮೇಲೆ ಹೊದಿಸಿ ಅವುಗಳನ್ನು ಕಾಪಾಡುವ ಪಕ್ಷಿ ಇದಾಗಿರುತ್ತದೆ. ಇನ್ನೂ ವಿಶಾಲ ಅರ್ಥದಲ್ಲಿ, ಯೆಹೋವನು ಸಹ ತನ್ನಲ್ಲಿ ಆಶ್ರಯವನ್ನು ಕಂಡುಕೊಳ್ಳಲು ಬಯಸುವವರೆಲ್ಲರಿಗೂ ನಿಜವಾದ ಸಂರಕ್ಷಕನಾಗಿರುತ್ತಾನೆ.—ಕೀರ್ತನೆ 7:1.

ನೀವು ದೇವರ ಕುರಿತು, ಆತನ ವ್ಯಕ್ತಿತ್ವದ ಕುರಿತು, ಆತನ ಉದ್ದೇಶಗಳ ಕುರಿತು ಮತ್ತು ಸಾಂತ್ವನವನ್ನು ಒದಗಿಸುವ ಆತನ ಸಾಮರ್ಥ್ಯದ ಕುರಿತು ಕಲಿಯಲು ಬಯಸುವುದಾದರೆ, ಆತನ ವಾಕ್ಯವನ್ನು ಅಭ್ಯಾಸಿಸಲು ನಾವು ನಿಮ್ಮನ್ನು ಆಮಂತ್ರಿಸುತ್ತೇವೆ. ಈ ಪ್ರಯತ್ನದಲ್ಲಿ ನಿಮಗೆ ಸಹಾಯಮಾಡಲು ಯೆಹೋವನ ಸಾಕ್ಷಿಗಳು ಸಂತೋಷಿಸುತ್ತಾರೆ. ಹೌದು, ನೀವು ಕೂಡ ಯೆಹೋವನ ಬಲದಲ್ಲಿ ಸಾಂತ್ವನವನ್ನು ಕಂಡುಕೊಳ್ಳಬಲ್ಲಿರಿ!

[ಪುಟ 7ರಲ್ಲಿರುವ ಚಿತ್ರಗಳು]

ಭವಿಷ್ಯತ್ತಿಗಾಗಿರುವ ಬೈಬಲ್‌ ಆಧಾರಿತ ನಿರೀಕ್ಷೆಯು ಸಾಂತ್ವನವನ್ನು ಒದಗಿಸಸಾಧ್ಯವಿದೆ