ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನನಗೆ ಎಲೆಕ್ಟ್ರಾನಿಕ್‌ ಸಮೂಹ-ಮಾಧ್ಯಮದ ಗೀಳು ಹತ್ತಿದೆಯೋ?

ನನಗೆ ಎಲೆಕ್ಟ್ರಾನಿಕ್‌ ಸಮೂಹ-ಮಾಧ್ಯಮದ ಗೀಳು ಹತ್ತಿದೆಯೋ?

ಯುವಜನರ ಪ್ರಶ್ನೆ

ನನಗೆ ಎಲೆಕ್ಟ್ರಾನಿಕ್‌ ಸಮೂಹ-ಮಾಧ್ಯಮದ ಗೀಳು ಹತ್ತಿದೆಯೋ?

ಇವರಲ್ಲಿ ಸಾಮಾನ್ಯವಾಗಿರುವ ವಿಷಯ ಯಾವುದು?

“ಮೆಸೆಜ್‌ ಮಾಡುವುದೆಂದರೆ ನನಗೆ ತುಂಬ ತುಂಬ ತುಂಬಾ ಇಷ್ಟ! ಇದಕ್ಕಿಂತ ಒಳ್ಳೇದು ಈ ಲೋಕದಲ್ಲಿ ಬೇರೇನೂ ಇಲ್ಲ. ಅದು ನನ್ನ ಲೈಫನ್ನೇ ಆವರಿಸಿಬಿಟ್ಟಿದೆ ಅಂತಾನೂ ಹೇಳಬಹುದು.”—ಅನಂತ್‌. *

“ಅಮ್ಮ ನನ್ನ ರೂಮಿಗೆಂದು ಟಿವಿ ತಂದಾಗ ನಾನು ಸಂತೋಷದಿಂದ ಕುಣಿದು ಕುಪ್ಪಳಿಸಿದೆ! ರಾತ್ರಿ ನಿದ್ದೆ ಬಿಟ್ಟು ತುಂಬ ಹೊತ್ತಿನ ವರೆಗೆ ಟಿವಿ ನೋಡುತ್ತಿದ್ದೆ. ಕುಟುಂಬದವರು, ಸ್ನೇಹಿತರ ಜೊತೆ ಸಮಯ ಕಳೆಯುವುದಕ್ಕಿಂತ ಟಿವಿ ನೋಡಲು ಇಷ್ಟಪಡುತ್ತಿದ್ದೆ.”—ತಾರುಣ್ಯ.

“ನಾನು ಎಲ್ಲೇ ಹೋಗಲಿ ಏನೇ ಮಾಡಲಿ ನನ್ನ ವೆಬ್‌ ಪೇಜಿಗೆ ಯಾರಾದರೂ ಏನಾದರೂ ಹಾಕಿರಬಹುದಾ ಎಂಬ ವಿಚಾರವೇ ಸ್ವಲ್ಪ ಸಮಯದ ವರೆಗೆ ತಲೆಯಲ್ಲಿ ತಿರುಗುತ್ತಾ ಇತ್ತು. ಮಧ್ಯರಾತ್ರಿ ಎಚ್ಚರವಾದರೆ ಆನ್‌ಲೈನ್‌ ಹೋಗಲೇ ಬೇಕಿತ್ತು. ಬ್ಲಾಗನ್ನು ಅಪ್‌ಡೇಟ್‌ ಮಾಡಲು ಎಲ್ಲಾದರೂ ಚಾನ್ಸ್‌ ಸಿಕ್ಕಿದರೆ ಬಿಡುತ್ತಿರಲಿಲ್ಲ.”—ಅಂಜಲಿ.

ಈ ಮೂವರು ಯುವಜನರಲ್ಲಿ ಯಾರಿಗೆ ಎಲೆಕ್ಟ್ರಾನಿಕ್‌ ಸಮೂಹ-ಮಾಧ್ಯಮದ ಗೀಳು ಹಿಡಿದಿದೆ ಎಂದು ನಿಮ್ಮ ಅಭಿಪ್ರಾಯ?

ಅನಂತ್‌ತಾರುಣ್ಯಅಂಜಲಿ

ನಿಮ್ಮ ಹೆತ್ತವರು ನಿಮ್ಮಂತೆ ಹದಿಪ್ರಾಯದವರಾಗಿದ್ದಾಗ ಅವರಿಗೆ ಗೊತ್ತಿದ್ದ ಎಲೆಕ್ಟ್ರಾನಿಕ್‌ ಸಮೂಹ ಮಾಧ್ಯಮವೆಂದರೆ ರೇಡಿಯೋ ಮಾತ್ರ. ಇನ್ನು ಫೋನ್‌ ಅಂತೂ ಬರೇ ಧ್ವನಿಗಳನ್ನು ರವಾನಿಸುತ್ತಿದ್ದ ಒಂದು ಮಾಧ್ಯಮವಾಗಿತ್ತು ಅಷ್ಟೆ. ಅದನ್ನು ಒಂದೇ ಕಡೆಯಲ್ಲಿ ಇಡಬೇಕಾಗಿತ್ತು. ಇದೆಲ್ಲ ಓಬೀರಾಯನ ಕಾಲದ ವಸ್ತುಗಳೆಂದು ಅನಿಸುತ್ತದಾ? ಅಂಜಲಿ ಎನ್ನುವ ಹುಡುಗಿಗೆ ಹಾಗೇ ಅನಿಸಿತ್ತು. “ಆಧುನಿಕ ತಂತ್ರಜ್ಞಾನ ಜನ್ಮತಳೆದಿರದ ಹಳೇಕಾಲದಲ್ಲಿ ನಮ್ಮಪ್ಪಮ್ಮ ಬೆಳೆದು ದೊಡ್ಡವರಾದರು. ಸೆಲ್‌ ಫೋನಿನ ಕೆಲವೊಂದು ಫೀಚರುಗಳನ್ನು ಹೇಗೆ ಬಳಸುವುದು ಅಂತ ಈಗ ಕಲಿಯುತ್ತಿದ್ದಾರಷ್ಟೆ!” ಎನ್ನುತ್ತಾಳವಳು.

ಇವತ್ತಿನ ಆಧುನಿಕ ಯುಗದಲ್ಲಿ ಕಾಲ್‌ ಮಾಡಲಿಕ್ಕೆ, ಸಂಗೀತ ಕೇಳಲಿಕ್ಕೆ, ಯಾವುದಾದರೂ ಶೋ ನೋಡಲಿಕ್ಕೆ, ಆಟ ಆಡಲಿಕ್ಕೆ, ಫ್ರೆಂಡ್ಸ್‌ಗೆ ಈ-ಮೇಲ್‌ ಮಾಡಲಿಕ್ಕೆ, ಫೋಟೋ ತೆಗೆಯಲಿಕ್ಕೆ, ಇಂಟರ್‌ನೆಟ್‌ ಬಳಸಲಿಕ್ಕೆ ಒಂದೇ ಒಂದು ಪರಿಕರ ಇದ್ದರೆ ಸಾಕು. ಅದನ್ನು ಜೇಬಿನಲ್ಲಿಟ್ಟೂ ಎಲ್ಲಿ ಬೇಕೆಂದಲ್ಲಿ ಒಯ್ಯಬಹುದು. ಕಂಪ್ಯೂಟರ್‌, ಸೆಲ್‌ ಫೋನ್‌, ಟಿವಿ, ಇಂಟರ್‌ನೆಟ್‌ಗಳನ್ನು ನೋಡಿ ಬೆಳೆದವರು ನೀವು. ಹಾಗಾಗಿ ಇಡೀ ದಿನ ಅದರಲ್ಲೇ ಕಾಲಕಳೆದರೂ ನಿಮಗೇನೂ ಅನಿಸಲಿಕ್ಕಿಲ್ಲ. ಆದರೆ ನಿಮ್ಮ ಹೆತ್ತವರು ನೀವು ಆ ಸಾಧನಗಳ ಗುಲಾಮರಾಗಿದ್ದಿರೇನೋ ಎಂದು ಕಳವಳಪಡಬಹುದು. ಅದನ್ನವರು ವ್ಯಕ್ತಪಡಿಸುವಾಗ ‘ಅಪ್ಪಅಮ್ಮಗೇನೂ ಗೊತ್ತಿಲ್ಲ ಏನೇನೋ ಮಾತಾಡುತ್ತಾರೆ’ ಎಂದು ನೆನಸಿ ಅಲಕ್ಷಿಸಬೇಡಿ. “ಗಮನಿಸದೆ ಉತ್ತರಕೊಡುವವನು ಮೂರ್ಖನೆಂಬ ಅವಮಾನಕ್ಕೆ ಗುರಿಯಾಗುವನು” ಎಂದನು ಬುದ್ಧಿವಂತ ರಾಜ ಸೊಲೊಮೋನ.—ಜ್ಞಾನೋಕ್ತಿ 18:13.

ನಿಮ್ಮ ಹೆತ್ತವರು ಹಾಗೆ ಚಿಂತಿಸಲು ಕಾರಣ ಏನೆಂದು ತಲೆಕೆರೆದುಕೊಳ್ಳುತ್ತಿದ್ದೀರಾ? ನಿಮಗೆ ಎಲೆಕ್ಟ್ರಾನಿಕ್‌ ಸಮೂಹ-ಮಾಧ್ಯಮದ ಗೀಳು ಹತ್ತಿದೆಯೋ ಎಂಬದನ್ನು ತಿಳಿದುಕೊಳ್ಳಲು ನೀವೇ ಈ ಕೆಳಕಂಡ ಪರೀಕ್ಷೆ ಮಾಡಿ ನೋಡಬಾರದೇಕೆ?

‘ನನಗೆ ಗೀಳು ಹತ್ತಿದೆಯಾ?’

ಒಂದು ಅರ್ಥಕೋಶಕ್ಕನುಸಾರ ಗೀಳು ಹತ್ತುವುದು ಅಂದರೆ “ಮಿತಿಮೀರಿದ ವರ್ತನೆಯನ್ನು ರೂಢಿಯಾಗಿ ಪುನರಾವರ್ತಿಸುವುದು. ಹಾನಿಯಾಗುತ್ತದೆಂದು ತಿಳಿದಿದ್ದರೂ ವ್ಯಕ್ತಿಯೊಬ್ಬನು ಆ ರೂಢಿಯನ್ನು ನಿಲ್ಲಿಸಲು ಅಶಕ್ತನಾಗಿರುತ್ತಾನೆ ಇಲ್ಲವೆ ಮನಸ್ಸಿಲ್ಲದವನಾಗಿರುತ್ತಾನೆ.” ಈ ಅರ್ಥವಿವರಣೆಗನುಸಾರ ಈ ಲೇಖನದ ಆರಂಭದಲ್ಲಿ ಹೇಳಿಕೆಗಳನ್ನು ನೀಡಿದ ಮೂವರೂ ಎಲೆಕ್ಟ್ರಾನಿಕ್‌ ಸಮೂಹ-ಮಾಧ್ಯಮದ ಗೀಳು ಹಿಡಿದವರೇ. ನಿಮ್ಮ ಬಗ್ಗೆ ಏನು? ಮೇಲಿನ ಅರ್ಥವಿವರಣೆಯನ್ನು ಬಿಡಿಬಿಡಿಯಾಗಿ ಕೆಳಗೆ ಕೊಡಲಾಗಿದೆ. ಅಲ್ಲಿರುವ ಹೇಳಿಕೆಗಳನ್ನು ಓದಿ. ನೀವೂ ಹಾಗೆ ಹೇಳಿದ್ದೀರಾ, ಹಾಗೇ ಮಾಡಿದ್ದೀರಾ ಎಂದು ಯೋಚಿಸಿ. ಆಮೇಲೆ ನಿಮ್ಮ ಉತ್ತರಗಳನ್ನು ಬರೆಯಿರಿ.

ಮಿತಿಮೀರಿದ ವರ್ತನೆ. “ನಾನು ಎಲೆಕ್ಟ್ರಾನಿಕ್‌ ಗೇಮ್ಸನ್ನು ಗಂಟೆಗಟ್ಟಲೆ ಆಡುತ್ತಿದ್ದೆ. ನಿದ್ದೆ ಬಿಟ್ಟು ಆಡುತ್ತಿದ್ದೆ. ಯಾವಾಗಲೂ ಬೇರೆಯವರೊಂದಿಗೆ ಅದರದ್ದೇ ಮಾತು. ಮನೆಯವರ ಜೊತೆ ಬೆರೆಯುತ್ತಿರಲಿಲ್ಲ. ಆ ಗೇಮ್ಸ್‌ಗಳ ಕಲ್ಪನಾಲೋಕದಲ್ಲೇ ವಿಹರಿಸುತ್ತಿದ್ದೆ.”—ಅಭಿಜಿತ್‌.

ನಿಮ್ಮ ಎಣಿಕೆಯಲ್ಲಿ ಎಲೆಕ್ಟ್ರಾನಿಕ್‌ ಸಮೂಹ-ಮಾಧ್ಯಮವನ್ನು ಬಳಸುವುದರಲ್ಲಿ ದಿನವೊಂದಕ್ಕೆ ಎಷ್ಟು ಸಮಯ ಕಳೆಯಬಹುದು? ______

ನೀವು ಎಷ್ಟು ಸಮಯ ಕಳೆಯಬೇಕೆಂದು ಹೆತ್ತವರು ಹೇಳುತ್ತಾರೆ? ______

ಮೆಸೆಜ್‌ ಟೈಪ್‌ ಮಾಡುವುದು, ಟಿವಿ ನೋಡುವುದು, ವೆಬ್‌ಸೈಟಿಗೆ ಪಿಚ್ಚರ್‌ಗಳನ್ನು ಮತ್ತು ಹೇಳಿಕೆಗಳನ್ನು ಹಾಕುವುದು, ಎಲೆಕ್ಟ್ರಾನಿಕ್‌ ಗೇಮ್ಸ್‌ ಆಡುವುದು ಮುಂತಾದವುಗಳಲ್ಲಿ ನೀವು ದಿನವೊಂದಕ್ಕೆ ಒಟ್ಟು ಎಷ್ಟು ತಾಸುಗಳನ್ನು ಕಳೆಯುತ್ತೀರಿ? ______

ಮೇಲೆ ಬರೆದ ಉತ್ತರಗಳನ್ನು ನೋಡಿ ಈಗ ಹೇಳಿ: ನೀವು ಎಲೆಕ್ಟ್ರಾನಿಕ್‌ ಸಮೂಹ-ಮಾಧ್ಯಮವನ್ನು ಮಿತಿಮೀರಿ ಬಳಸುತ್ತಿದ್ದೀರೋ?

❑ ಹೌದು ❑ ಇಲ್ಲ

ನಿಲ್ಲಿಸಲು ಅಶಕ್ತರು ಇಲ್ಲವೆ ಮನಸ್ಸಿಲ್ಲದವರು. “ನಾನು ಯಾವಾಗಲೂ ಮೆಸೆಜ್‌ ಮಾಡುತ್ತಿರುವುದನ್ನು ನೋಡಿ ‘ಇದು ಅತಿಯಾಯಿತಪ್ಪಾ’ ಎನ್ನುತ್ತಾರೆ ಅಪ್ಪಅಮ್ಮ. ನನ್ನ ಪ್ರಾಯದವರಿಗೆ ಹೋಲಿಸಿದರೆ ನಾನು ಮಾಡುವುದು ಕಡಿಮೆಯೇ. ಅಪ್ಪಅಮ್ಮಗೆ ಹೋಲಿಸಿದರೆ ಜಾಸ್ತಿ ಹೌದು. ಆದರೆ ಇದು ಸೇಬು ಹಣ್ಣಿಗೆ ಕಿತ್ತಳೆಯನ್ನು ಹೋಲಿಸಿದಂತಾಗುತ್ತದೆ ಅಲ್ವಾ? ಅಪ್ಪಅಮ್ಮನ 40 ವಯಸ್ಸೆಲ್ಲಿ, ನನ್ನ 15 ವಯಸ್ಸೆಲ್ಲಿ.”—ಅನಂತ್‌.

ಎಲೆಕ್ಟ್ರಾನಿಕ್‌ ಸಮೂಹ-ಮಾಧ್ಯಮದ ಹಿಂದೆಯೇ ತುಂಬ ಸಮಯ ಕಳೆಯುತ್ತಿದ್ದೀರೆಂದು ನಿಮ್ಮ ಹೆತ್ತವರು ಅಥವಾ ಸ್ನೇಹಿತರು ಹೇಳಿದ್ದಾರೋ?

❑ ಹೌದು ❑ ಇಲ್ಲ

ಅದರ ಬಳಕೆಯನ್ನು ನಿಯಂತ್ರಿಸಲು ಅಶಕ್ತರಾಗಿದ್ದೀರೋ ಇಲ್ಲವೆ ಮನಸ್ಸಿಲ್ಲದವರಾಗಿದ್ದೀರೊ?

❑ ಹೌದು ❑ ಇಲ್ಲ

ಹಾನಿ. “ನನ್ನ ಫ್ರೆಂಡ್ಸ್‌ ಮೂರು ಹೊತ್ತೂ ಮೆಸೆಜ್‌ ಮಾಡುತ್ತಾ ಇರುತ್ತಾರೆ, ಗಾಡಿ ಓಡಿಸುವಾಗಲೂ ಮಾಡುತ್ತಾರೆ. ಇದರಿಂದ ಪ್ರಾಣಕ್ಕೆ ಅಪಾಯ ಖಂಡಿತ.”—ಜೂಲಿ.

“ನನ್ನ ಕೈಗೂ ಸೆಲ್‌ ಬಂದಾಗ ಫೋನ್‌ ಮಾಡುವುದು, ಮೆಸೆಜ್‌ ಮಾಡುವುದೇ ನನ್ನ ಕೆಲಸವಾಗಿತ್ತು. ಬೇರೇನೂ ಮಾಡುತ್ತಿರಲಿಲ್ಲ. ಇದರಿಂದ ನನ್ನ ಕುಟುಂಬದವರೊಂದಿಗೆ, ಕೆಲವು ಫ್ರೆಂಡ್ಸ್‌ ಜೊತೆಗೂ ಸಂಬಂಧ ಹಾಳಾಯಿತು. ಈಗ ನಾನು ಫ್ರೆಂಡ್ಸ್‌ ಜೊತೆಗಿದ್ದು ಮಾತಾಡುತ್ತಿರುವಾಗ ಅವರು ಮಧ್ಯೆ ಮಧ್ಯೆ ‘ಒಂದ್ನಿಮಿಷ, ಒಂದು ಮೆಸೆಜ್‌ ಮಾಡಿಬಿಡುತ್ತೇನೆ’ ಎನ್ನುವುದನ್ನು ಗಮನಿಸುತ್ತೇನೆ. ಇದು ನನಗಿಷ್ಟ ಆಗಲ್ಲ, ಆದ್ದರಿಂದ ನಾನು ಆ ಫ್ರೆಂಡ್ಸ್‌ ಜೊತೆ ಅಷ್ಟು ಕ್ಲೋಸ್‌ ಆಗಿರಲ್ಲ.”—ಶಾಲಿನಿ.

ಡ್ರೈವ್‌ ಮಾಡುವಾಗ ಅಥವಾ ಕ್ಲಾಸ್‌ ನಡೆಯುತ್ತಿರುವಾಗ ಮೆಸೆಜ್‌ ಓದುತ್ತೀರೋ ಅಥವಾ ಮೆಸೆಜ್‌ ಕಳುಹಿಸುತ್ತೀರೋ?

❑ ಹೌದು ❑ ಇಲ್ಲ

ಕುಟುಂಬದವರೊಂದಿಗೆ ಅಥವಾ ಫ್ರೆಂಡ್ಸ್‌ ಜೊತೆ ಮಾತಾಡುತ್ತಿರುವಾಗ ಬಂದ ಈ-ಮೇಲ್‌, ಫೋನ್‌, ಮೆಸೆಜ್‌ಗಳಿಗೆ ಮರುತ್ತರಿಸುತ್ತಾ ಇರುತ್ತೀರೋ?

❑ ಹೌದು ❑ ಇಲ್ಲ

ಎಲೆಕ್ಟ್ರಾನಿಕ್‌ ಸಮೂಹ-ಮಾಧ್ಯಮದ ಬಳಕೆ ನಿಮ್ಮ ನಿದ್ದೆಗೆ, ಓದಿಗೆ ತಡೆಯಾಗಿದೆಯೇ?

❑ ಹೌದು ❑ ಇಲ್ಲ

ಹಿತಮಿತ ಬಳಕೆ ಹೇಗೆ?

ಕಂಪ್ಯೂಟರ್‌, ಸೆಲ್‌ ಫೋನ್‌ ಹೀಗೆ ಯಾವುದೇ ಎಲೆಕ್ಟ್ರಾನಿಕ್‌ ಸಮೂಹ-ಮಾಧ್ಯಮವನ್ನು ನೀವು ಬಳಸುತ್ತಿರಲಿ ಈ ಕೆಳಗಿನ 4 ಪ್ರಶ್ನೆಗಳನ್ನು ಕೇಳಿಕೊಳ್ಳಿ. ಕೊಡಲಾಗಿರುವ ಬೈಬಲ್‌ ಆಧಾರಿತ ಸಲಹೆಗಳನ್ನೂ ಸರಳ ಮಾರ್ಗದರ್ಶನವನ್ನೂ ಪಾಲಿಸಿದರೆ ಅದರ ಹಿತಮಿತ ಬಳಕೆ ನಿಮ್ಮಿಂದ ಸಾಧ್ಯ.

1. ಅದರಲ್ಲಿ ಯಾವ ರೀತಿಯ ವಿಷಯಗಳಿವೆ? “ನಿಮ್ಮ ಮನಸ್ಸನ್ನು ಒಳ್ಳೇ ವಿಷಯಗಳಿಂದ, ಸ್ತುತ್ಯಾರ್ಹ ವಿಷಯಗಳಿಂದ, ಸತ್ಯವೂ ಮಾನ್ಯವೂ ಯೋಗ್ಯವೂ ಶುದ್ಧವೂ ಪ್ರಿಯವೂ ಗೌರವಾರ್ಹವೂ ಆದ ವಿಷಯಗಳಿಂದ ತುಂಬಿಸಿರಿ.”—ಫಿಲಿಪ್ಪಿ 4:8, ಟುಡೇಸ್‌ ಇಂಗ್ಲಿಷ್‌ ವರ್ಷನ್‌.

ಮಾಡಿ: ಕುಟುಂಬದವರೊಂದಿಗೆ ಮತ್ತು ಸ್ನೇಹಿತರೊಂದಿಗೆ ಸಂಪರ್ಕವಿಡಿ. ಪ್ರೋತ್ಸಾಹನೀಯ ಸುದ್ದಿಗಳನ್ನು, ಅಭಿಪ್ರಾಯಗಳನ್ನು ಹಂಚಿಕೊಳ್ಳಿ.—ಜ್ಞಾನೋಕ್ತಿ 25:25; ಎಫೆಸ 4:29.

ಮಾಡಬೇಡಿ: ಹಾಳು ಹರಟೆ, ಅಶ್ಲೀಲವಾದ ಮೆಸೆಜ್‌ ಅಥವಾ ಪಿಚ್ಚರ್‌ಗಳನ್ನು ಕಳುಹಿಸುವುದು, ನೈತಿಕವಾಗಿ ಕೀಳುಮಟ್ಟದ ವಿಡಿಯೋ ತುಣುಕುಗಳನ್ನು ಅಥವಾ ಕಾರ್ಯಕ್ರಮಗಳನ್ನು ನೋಡುವುದು—ಇದೆಲ್ಲ ಬೇಡ.—ಕೊಲೊಸ್ಸೆ 3:5; 1 ಪೇತ್ರ 4:15.

2. ಯಾವಾಗೆಲ್ಲ ಬಳಸುತ್ತೇನೆ? “ಪ್ರತಿಯೊಂದು ಕಾರ್ಯಕ್ಕೂ . . . ತಕ್ಕ ಸಮಯವುಂಟು.”—ಪ್ರಸಂಗಿ 3:1.

ಮಾಡಿ: ಫೋನ್‌ ಅಥವಾ ಮೆಸೆಜ್‌ ಮಾಡಲು, ಬಂದದ್ದನ್ನು ರಿಸೀವ್‌ ಮಾಡಲು, ಕಾರ್ಯಕ್ರಮಗಳ ವೀಕ್ಷಣೆಗಾಗಿ, ಗೇಮ್ಸ್‌ ಆಡಲು ಎಷ್ಟು ಸಮಯ ಕಳೆಯಬೇಕೆಂದು ನೀವೇ ಮಿತಿ ಇಡಿ. ಆರಾಧನಾ ಕೂಟಗಳಂಥ ಮುಖ್ಯ ಸಂದರ್ಭಗಳಲ್ಲಿ ಗೌರವ ತೋರಿಸುವ ಸಲುವಾಗಿ ಮೊಬೈಲನ್ನು ಆಫ್‌ ಮಾಡಿ. ಬಂದ ಮೆಸೆಜ್‌ಗಳನ್ನೆಲ್ಲ ಆಮೇಲೆ ನೋಡಿದರಾಯಿತು.

ಮಾಡಬೇಡಿ: ಸ್ನೇಹಿತರೊಂದಿಗೊ ಮನೆಮಂದಿಯೊಂದಿಗೊ ಕಳೆಯಲು, ಅಧ್ಯಯನಕ್ಕಾಗಿ, ಆಧ್ಯಾತ್ಮಿಕ ಚಟುವಟಿಕೆಗಾಗಿ ಬದಿಗಿರಿಸಿದ ಅಮೂಲ್ಯ ಸಮಯವನ್ನು ಎಲೆಕ್ಟ್ರಾನಿಕ್‌ ಸಮೂಹ-ಮಾಧ್ಯಮದ ನಿಮ್ಮ ಬಳಕೆ ಕಬಳಿಸದಂತೆ ನೋಡಿಕೊಳ್ಳಿ.—ಎಫೆಸ 5:15-17; ಫಿಲಿಪ್ಪಿ 2:4.

3. ಯಾರ ಸಹವಾಸ ಮಾಡುತ್ತಿದ್ದೇನೆ? “ಮೋಸಹೋಗಬೇಡಿರಿ. ದುಸ್ಸಹವಾಸಗಳು ಸದಾಚಾರಗಳನ್ನು ಕೆಡಿಸುತ್ತವೆ.”—1 ಕೊರಿಂಥ 15:33.

ಮಾಡಿ: ಒಳ್ಳೇ ಅಭ್ಯಾಸಗಳನ್ನು ಬೆಳೆಸಿಕೊಳ್ಳಲು ಪ್ರೋತ್ಸಾಹ ನೀಡುವಂಥ ಜನರೊಂದಿಗಿನ ಮಿತ್ರತ್ವ ಬಲಗೊಳಿಸಲು ನಿಮ್ಮ ಎಲೆಕ್ಟ್ರಾನಿಕ್‌ ಸಮೂಹ-ಮಾಧ್ಯಮವನ್ನು ಬಳಸಿ.—ಜ್ಞಾನೋಕ್ತಿ 22:17.

ಮಾಡಬೇಡಿ: ಈ-ಮೇಲ್‌, ಮೆಸೆಜ್‌, ಟಿವಿ, ವಿಡಿಯೋ, ಇಂಟರ್‌ನೆಟ್‌ ಮೂಲಕ ಯಾರೊಂದಿಗೆ ಸಂಪರ್ಕ ಇಡುತ್ತೀರೋ ಅಂಥವರ ಮಟ್ಟಗಳು, ಭಾಷೆ, ಆಲೋಚಿಸುವ ರೀತಿಯನ್ನೇ ನೀವೂ ಅಳವಡಿಸಿಕೊಳ್ಳುವಿರಿ. ಹಾಗಾಗಲಿಕ್ಕಿಲ್ಲ ಅಂದುಕೊಂಡು ನಿಮ್ಮನ್ನೇ ವಂಚಿಸಿಕೊಳ್ಳಬೇಡಿ.—ಜ್ಞಾನೋಕ್ತಿ 13:20.

4. ಎಷ್ಟು ಸಮಯ ವ್ಯಯಿಸುತ್ತಿದ್ದೇನೆ? ‘ಹೆಚ್ಚು ಪ್ರಮುಖವಾದ ವಿಷಯಗಳನ್ನು ಖಚಿತಪಡಿಸಿಕೊಳ್ಳಿ.’—ಫಿಲಿಪ್ಪಿ 1:10.

ಮಾಡಿ: ಎಲೆಕ್ಟ್ರಾನಿಕ್‌ ಸಮೂಹ-ಮಾಧ್ಯಮದ ಹಿಂದೆ ನೀವು ಎಷ್ಟೆಷ್ಟು ಸಮಯ ಕಳೆಯುತ್ತಿದ್ದೀರೆಂದು ಬರೆದಿಡಿ.

ಮಾಡಬೇಡಿ: ಎಲೆಕ್ಟ್ರಾನಿಕ್‌ ಸಮೂಹ-ಮಾಧ್ಯಮದ ಹಿಂದೆ ತುಂಬ ಸಮಯ ಕಳೆಯುತ್ತಿದ್ದೀರೆಂದು ನಿಮ್ಮ ಫ್ರೆಂಡ್ಸ್‌ ಹೇಳುವ ಮಾತನ್ನಾಗಲಿ ಹೆತ್ತವರು ಆ ವಿಷಯದಲ್ಲಿ ಕೊಡುವ ಸಲಹೆಯನ್ನಾಗಲಿ ಅಲಕ್ಷಿಸಬೇಡಿ.—ಜ್ಞಾನೋಕ್ತಿ 26:12.

ಈ ಹಿಂದೆ ತಿಳಿಸಿದ ಅಭಿಜಿತ್‌ ಎಲೆಕ್ಟ್ರಾನಿಕ್‌ ಸಮೂಹ-ಮಾಧ್ಯಮದ ಹಿತಮಿತ ಬಳಕೆಯ ಬಗ್ಗೆ ಹೀಗೆ ಸಾರಾಂಶಿಸುತ್ತಾನೆ: “ಅವುಗಳನ್ನು ಬಳಸಲು ಖುಷಿಯಾಗುತ್ತದೇನೋ ನಿಜ, ಆದರೆ ಸ್ವಲ್ಪ ಸಮಯಕ್ಕೆ ಮಾತ್ರ. ತಂತ್ರಜ್ಞಾನ ನನ್ನ ಮತ್ತು ನನ್ನ ಕುಟುಂಬ ಹಾಗೂ ಸ್ನೇಹಿತರ ಮಧ್ಯೆ ಗೋಡೆಯಾಗುವಂತೆ ಬಿಡಬಾರದೆಂಬ ಪಾಠ ಕಲಿತಿದ್ದೇನೆ.” (g11-E 01)

“ಯುವಜನರ ಪ್ರಶ್ನೆ” ಲೇಖನಮಾಲೆಯ ಹೆಚ್ಚಿನ ಲೇಖನಗಳು www.watchtower.org/ype ವೆಬ್‌ಸೈಟ್‌ನಲ್ಲಿವೆ

[ಪಾದಟಿಪ್ಪಣಿ]

^ ಕೆಲವು ಹೆಸರುಗಳನ್ನು ಬದಲಿಸಲಾಗಿದೆ.

[ಪುಟ 17ರಲ್ಲಿರುವ ಚೌಕ/ಚಿತ್ರಗಳು]

ನಿಮ್ಮ ಸಮಪ್ರಾಯದವರು ಏನನ್ನುತ್ತಾರೆ?

“ಅಪ್ಪಅಮ್ಮ ಯಾವಾಗಲೂ ‘ಸೆಲ್‌ ಫೋನನ್ನು ನೀನು ಎಷ್ಟೊಂದು ಬಳಸುತ್ತಿಯಾ. ಅದನ್ನು ನಿನ್ನ ಕೈಗೆ ಅಂಟಿಸಿಬಿಟ್ಟರೆ ಒಳ್ಳೇದು!’ ಎನ್ನುತ್ತಿದ್ದರು. ಮೊದಮೊದಲು ಅವರು ತಮಾಷೆ ಮಾಡುತ್ತಿದ್ದಾರೆಂದು ನೆನಸಿದ್ದೆ, ಆದರೆ ಅವರು ಸೀರಿಯಸ್ಸಾಗೆ ಹೇಳಿದ್ದರೆಂದು ಆಮೇಲೆ ಗೊತ್ತಾಯಿತು. ಈಗ ಮೆಸೆಜ್‌ ಮಾಡುವುದನ್ನು ತುಂಬ ಕಡಿಮೆಮಾಡಿದ್ದೇನೆ. ಸಂತೋಷವಾಗಿಯೂ ಇದ್ದೇನೆ!”

“ಸಾಧ್ಯವಿದ್ದಾಗಲೆಲ್ಲ ಇಂಟರ್‌ನೆಟ್‌ನಲ್ಲಿ ಈ-ಮೇಲ್‌ ಚೆಕ್‌ ಮಾಡುತ್ತಾ ಇರುತ್ತಿದ್ದೆ. ಹೋಮ್‌ವರ್ಕ್‌, ಶಾಲಾಕೆಲಸಗಳನ್ನೆಲ್ಲ ಗಾಳಿಗೆ ತೂರಿಬಿಟ್ಟಿದ್ದೆ. ಆದರೀಗ ಅದನ್ನೆಲ್ಲ ಕಡಿಮೆಮಾಡಿದ್ದೇನೆ. ನನ್ನ ಹೆಗಲಮೇಲಿದ್ದ ದೊಡ್ಡ ಭಾರ ಇಳಿಸಿದಂತಾಗಿದೆ. ಹಿತಮಿತ ಬಳಕೆಯೇ ಮುಖ್ಯ.”

[ಚಿತ್ರಗಳು]

ಜೊವಾರ್ನಿ

ಮರಿಯ

[ಪುಟ 18ರಲ್ಲಿರುವ ಚೌಕ]

“ನನಗೆ ಸೋಶಿಯಲ್‌ ನೆಟ್‌ವರ್ಕಿಂಗ್‌ ಸೈಟ್‌ನ ಗೀಳು ಹಿಡಿದಿತ್ತು”

“ಕೆಲವು ವರ್ಷಗಳ ಹಿಂದೆ ನಮ್ಮ ಕುಟುಂಬ ಬೇರೊಂದು ಊರಿಗೆ ಹೋಗಿ ನೆಲೆಸಿತು. ಹಳೇ ಫ್ರೆಂಡ್ಸ್‌ಗಳ ಸ್ನೇಹ ಉಳಿಸಿಕೊಳ್ಳಬೇಕೆಂದು ನನಗೆ ತುಂಬ ಮನಸ್ಸಿತ್ತು. ಅವರೂ ನನಗೆ ಫೋಟೋ ವಿನಿಮಯ ಮಾಡಿಕೊಳ್ಳಬಹುದಾದ ಒಂದು ಸೈಟ್‌ಗೆ ಸೇರಿಕೊಳ್ಳಲು ಹೇಳಿದರು. ಇದು ಸಂಪರ್ಕವಿಡುವ ಒಳ್ಳೇ ಉಪಾಯವೆಂದು ನನಗೂ ತೋರಿತು. ಇಷ್ಟಕ್ಕೂ ನಾನು ನನ್ನ ಪರಿಚಿತರೊಂದಿಗೆ ಮಾತ್ರ ಸಂಪರ್ಕವಿಡುತ್ತಿದ್ದೇನೆ. ಅಪರಿಚಿತರೊಂದಿಗೆ ಅಲ್ಲವಲ್ಲಾ. ಹಾಗಿರುವಾಗ ಏನೂ ಅವಾಂತರ ಆಗುವುದಿಲ್ಲ ಎಂದೇ ನಂಬಿದ್ದೆ.

“ಮೊದಮೊದಲು ಎಲ್ಲ ಚೆನ್ನಾಗೇ ಇತ್ತು. ವಾರಕ್ಕೊಮ್ಮೆ ಆನ್‌ಲೈನ್‌ ಹೋಗಿ ನನ್ನ ಫ್ರೆಂಡ್ಸ್‌ಗಳ ಫೋಟೋಗಳನ್ನು ನೋಡಿ ನನ್ನ ಹೇಳಿಕೆಗಳನ್ನು ಹಾಕುತ್ತಿದ್ದೆ, ನನ್ನ ಫೋಟೋಗಳ ಬಗ್ಗೆ ಅವರು ಬರೆದದ್ದನ್ನು ಓದುತ್ತಿದ್ದೆ. ಸ್ವಲ್ಪದರಲ್ಲೇ ನನಗದರ ಗೀಳು ಹಿಡಿಯಿತು. ಇಡೀ ದಿನ ಆ ಸೈಟ್‌ನಲ್ಲೇ ಇರುತ್ತಿದ್ದೆ. ನಾನು ಯಾವಾಗಲೂ ಆನ್‌ಲೈನ್‌ನಲ್ಲಿ ಇರುವುದನ್ನು ನೋಡಿದ ನನ್ನ ಸ್ನೇಹಿತರ ಸ್ನೇಹಿತರು ‘ನಮ್ಮ ಜೊತೆ ಫ್ರೆಂಡ್‌ ಆಗುತ್ತೀಯಾ’ ಎಂದು ಕೇಳಿದರು. ಇದು ಹೇಗೆ ಆಗುತ್ತೆ ಅಂತ ನಿಮಗೆ ಗೊತ್ತೇ ಇದೆ. ನಿಮ್ಮ ಫ್ರೆಂಡ್‌ ಯಾರಿಗಾದರೂ ನಿಮ್ಮ ಬಗ್ಗೆ ‘ಇವಳು ತುಂಬ ಒಳ್ಳೆಯವಳು’ ಎಂದರೆ ಅವರು ನಿಮ್ಮನ್ನು ಫ್ರೆಂಡ್‌ ಮಾಡಿಕೊಳ್ಳುತ್ತಾರಲ್ವಾ? ಚಿಟಿಕೆ ಹೊಡೆಯುವಷ್ಟರಲ್ಲಿ ನಿಮಗೆ 50 ಆನ್‌ಲೈನ್‌ ಸ್ನೇಹಿತರು ಸಿಗುತ್ತಾರೆ.”

“ಕೂತರೂ ನಿಂತರೂ ಯಾವಾಗಲೂ ಆನ್‌ಲೈನ್‌ ಹೋಗುವುದರ ಬಗ್ಗೆಯೇ ಧ್ಯಾನಿಸುತ್ತಿದ್ದೆ. ವೆಬ್‌ಸೈಟಿನಲ್ಲಿರುವಾಗಲೂ ನಾನು ಪುನಃ ಯಾವಾಗ ಆ ಸೈಟಿಗೆ ಬರಲಿಕ್ಕಾಗುತ್ತೆ, ಹೊಸ ಪಿಚ್ಚರುಗಳನ್ನು ಹಾಕಲಿಕ್ಕಿದೆ ಎಂದು ಲೆಕ್ಕ ಹಾಕುತ್ತಿದ್ದೆ. ಒಂದು ಕಡೆ ನಾನು ಟಿಪ್ಪಣಿ ಓದುತ್ತಿದ್ದೆ, ಇನ್ನೊಂದು ಕಡೆ ವಿಡಿಯೋ ತುಣುಕೊಂದನ್ನು ಜೋಡಿಸುತ್ತಿದ್ದೆ, ಹೀಗೆ ಎಷ್ಟೋ ತಾಸುಗಳು ಹಾರಿಹೋಗುತ್ತಿದ್ದವು.

“ನಾನು ಇಂಟರ್‌ನೆಟ್‌ಗೆ ಗುಲಾಮಳಾಗಿ ಹೋಗಿದ್ದು ನನ್ನ ಅರಿವಿಗೆ ಬರಲು ಒಂದೂವರೆ ವರ್ಷ ಹಿಡಿಯಿತು. ಆದರೆ ನಾನೀಗ ಇಂಟರ್‌ನೆಟ್‌ ಬಳಕೆಯನ್ನು ಕಡಿಮೆಗೊಳಿಸಿದ್ದೇನೆ. ನನ್ನ ನೈತಿಕ ಮಟ್ಟಗಳನ್ನು ಮಾನ್ಯಮಾಡುವಂಥ ಜನರನ್ನು ಮುಖಾಮುಖಿ ಭೇಟಿಯಾಗಿ ಸ್ನೇಹ ಬೆಳೆಸುತ್ತೇನೆ. ನನ್ನ ಕೆಲವು ಫ್ರೆಂಡ್ಸ್‌ಗೆ ನಾನು ಹೀಗೇಕೆ ಮಾಡುತ್ತೇನೆಂದು ಅರ್ಥವಾಗುವುದಿಲ್ಲ. ನಾನಂತೂ ಪಾಠ ಕಲಿತಿದ್ದೇನೆ.”—ಇಶಾ, 18.

[ಪುಟ 18ರಲ್ಲಿರುವ ಚೌಕ]

ನಿಮ್ಮ ಹೆತ್ತವರನ್ನೇಕೆ ಕೇಳಬಾರದು?

ಹೆತ್ತವರೊಂದಿಗೆ ಮನರಂಜನೆಯ ಬಗ್ಗೆ ಮಾತಾಡುವಾಗ ಅವರ ಮಾತುಗಳು ಕೆಲವೊಮ್ಮೆ ನಿಮ್ಮನ್ನು ಬೆರಗಾಗಿಸಬಹುದು. “ನನ್ನ ಮ್ಯೂಸಿಕ್‌ ಸಿ.ಡಿ.ಯೊಂದರಲ್ಲಿ ಕೆಟ್ಟವಿಷಯಗಳಿವೆ ಎಂದು ಡ್ಯಾಡಿ ಸಂಶಯಪಟ್ಟರು. ಆಗ ನಾನು ಅವರಿಗೆ ನಾವಿಬ್ಬರೂ ಕೂತು ಅದನ್ನೊಮ್ಮೆ ಕೇಳೋಣ ಎಂದು ಹೇಳಿದೆ. ಅದಕ್ಕವರು ಒಪ್ಪಿದರು. ಇಡೀ ಸಿ.ಡಿ. ಕೇಳಿದ ಮೇಲೆ ಇದರಲ್ಲಿ ಕೆಟ್ಟದ್ದೇನೂ ಇಲ್ಲ ಎಂದವರು ಹೇಳಿದರು!” ಎನ್ನುತ್ತಾಳೆ ಚೈತ್ರ.

ಎಲೆಕ್ಟ್ರಾನಿಕ್‌ ಸಮೂಹ-ಮಾಧ್ಯಮದ ಬಗ್ಗೆ ನಿಮ್ಮ ಹೆತ್ತವರಿಗೆ ನೀವು ಕೇಳಬೇಕೆಂದಿರುವ ಪ್ರಶ್ನೆಯೊಂದನ್ನು ಕೆಳಗೆ ಬರೆಯಿರಿ.

[ಪುಟ 19ರಲ್ಲಿರುವ ಚೌಕ]

ಹೆತ್ತವರಿಗೊಂದು ಕಿವಿಮಾತು

ನಿಮ್ಮ ಹದಿಹರೆಯದ ಮಗ * ಆನ್‌ಲೈನ್‌ನಲ್ಲಿ ತುಂಬ ಸಮಯ ಕಳೆಯುತ್ತಾನೋ? ಯಾವಾಗ ನೋಡಿದರೂ ಮೆಸೆಜ್‌ ಕಳುಹಿಸುತ್ತಾ ಪಡೆಯುತ್ತಾ ಇರುತ್ತಾನೋ? ನಿಮಗಿಂತ ತನ್ನ ಎಮ್‌ಪಿ3 ಜೊತೆ ಹೆಚ್ಚು ಸಮಯ ಕಳೆಯುತ್ತಾನೋ? ಈ ವಿಷಯದಲ್ಲಿ ನೀವೇನು ಮಾಡಬಹುದು?

ಅವನ ಕೈಯಿಂದ ಆ ಸಾಧನವನ್ನು ಕಿತ್ತುಕೊಂಡರೆ ಒಳ್ಳೇದೆಂದು ನಿಮಗನಿಸಬಹುದು. ಆದರೆ ಈಗ ಇರುವ ಎಲೆಕ್ಟ್ರಾನಿಕ್‌ ಸಮೂಹ-ಮಾಧ್ಯಮದ ಎಲ್ಲ ಸಾಧನಗಳು ಕೆಟ್ಟದ್ದು ಅಂತ ನೆನಸಬೇಡಿ. ನಿಮ್ಮ ಹೆತ್ತವರ ಕಾಲದಲ್ಲಿ ಇಲ್ಲದಿದ್ದ ಎಲೆಕ್ಟ್ರಾನಿಕ್‌ ಸಾಧನಗಳನ್ನು ನೀವೀಗ ಬಳಸುತ್ತೀರಲ್ಲವೇ? ಆದ್ದರಿಂದ ಬಲವಾದ ಕಾರಣವಿಲ್ಲದೆ ನಿಮ್ಮ ಮಗನಿಂದ ಆ ಸಾಧನವನ್ನು ಕಸಿದುಕೊಳ್ಳುವ ಬದಲು ಅದನ್ನು ಹಿತಮಿತವಾಗಿ ಬಳಸುವುದರ ಬಗ್ಗೆ ಅವನಿಗೆ ತರಬೇತಿ ಕೊಡಬಾರದೇಕೆ? ಅದನ್ನು ಹೇಗೆ ಕೊಡಬಹುದು?

ನಿಮ್ಮ ಹದಿಹರೆಯದ ಮಗನೊಂದಿಗೆ ಅದರ ಬಗ್ಗೆ ಕುಳಿತು ಮಾತಾಡಿ. ಮೊದಲಾಗಿ, ಎಲೆಕ್ಟ್ರಾನಿಕ್‌ ಸಾಧನಗಳನ್ನು ಅವನು ಬಳಸುವ ರೀತಿಯ ಬಗ್ಗೆ ನಿಮಗೇಕೆ ಚಿಂತೆಯಿದೆ ಎಂದು ಹೇಳಿ. ಎರಡನೆಯದಾಗಿ, ಮಗನ ಮಾತುಗಳನ್ನು ಗಮನಕೊಟ್ಟು ಕೇಳಿ. (ಜ್ಞಾನೋಕ್ತಿ 18:13) ಮೂರನೆಯದಾಗಿ, ಪ್ರಾಯೋಗಿಕ ಪರಿಹಾರಗಳನ್ನು ಇಬ್ಬರೂ ಸೇರಿ ಯೋಚಿಸಿರಿ. ಕಟ್ಟುನಿಟ್ಟುಗಳನ್ನು ಇಡಬೇಕಾದರೆ ಹಿಂಜರಿಯಬೇಡಿ, ಆದರೆ ಅವು ಹಿತಮಿತವಾಗಿರಲಿ. (ಫಿಲಿಪ್ಪಿ 4:5) “ನಾನು ಯಾವಾಗಲೂ ಮೆಸೆಜ್‌ ಮಾಡುತ್ತಾ ಇರುವುದನ್ನು ನೋಡಿ ಅಪ್ಪಅಮ್ಮ ನನ್ನ ಫೋನನ್ನು ಕಿತ್ತುಕೊಳ್ಳಲಿಲ್ಲ, ಬದಲಿಗೆ ಕೆಲವು ನಿಯಮಗಳನ್ನಿಟ್ಟರು. ನನ್ನ ಈ ಸಮಸ್ಯೆಯನ್ನು ಅವರು ನಿರ್ವಹಿಸಿದ ರೀತಿಯಿಂದ ಅವರು ಇಲ್ಲದಿರುವಾಗಲೂ ಮೆಸೆಜ್‌ ಮಾಡುವ ವಿಷಯದಲ್ಲಿ ಸಮತೋಲನದಿಂದಿರಲು ಸಾಧ್ಯವಾಗಿದೆ” ಎನ್ನುತ್ತಾಳೆ ಈ ಹಿಂದೆ ತಿಳಿಸಲಾದ ಇಶಾ.

ನಿಮ್ಮ ಮಗನು ತನ್ನನ್ನೇ ಸಮರ್ಥಿಸಿಕೊಂಡರೆ ಆಗೇನು? ನೀವು ಕೊಟ್ಟಿರುವ ಸಲಹೆಗಳು ‘ಗೋರ್ಕಲ್ಲ ಮೇಲೆ ನೀರು ಸುರಿದ’ ಹಾಗಾಯಿತೆಂದು ನೊಂದುಕೊಳ್ಳಬೇಡಿ. ತಾಳ್ಮೆಯಿಂದಿರಿ. ಅದರ ಬಗ್ಗೆ ಆಲೋಚಿಸುವಂತೆ ಅವನಿಗೆ ಸ್ವಲ್ಪ ಸಮಯ ಕೊಡಿ. ಅವನು ಈಗಾಗಲೇ ನಿಮ್ಮ ಮಾತನ್ನು ಮನಸ್ಸಿನಲ್ಲಿ ಒಪ್ಪಿಕೊಂಡಿರಬಹುದು. ಮುಂದೆ ಬದಲಾವಣೆಗಳನ್ನೂ ಮಾಡಬಹುದು. ಅನೇಕ ಯುವಜನರು ಹರಿಣಿ ಎಂಬ ಹದಿವಯಸ್ಕಳಂತೆ ಇರಬಹುದು. ಅವಳನ್ನುವುದು: “ನನಗೆ ಕಂಪ್ಯೂಟರ್‌ ಗೀಳು ಹತ್ತಿದೆ ಎಂದು ಹೆತ್ತವರು ಹೇಳಿದಾಗ ತುಂಬ ನೋವಾಯಿತು. ಆದರೆ ಆಮೇಲೆ ನಾನು ತುಂಬ ಯೋಚಿಸಿದಾಗ ಅವರು ಹೇಳಿದ್ದು ಸರಿಯೆಂದು ಗೊತ್ತಾಯಿತು.”

[ಪಾದಟಿಪ್ಪಣಿ]

^ ಮಗಳಿಗೂ ಅನ್ವಯವಾಗುತ್ತದೆ.

[ಪುಟ 19ರಲ್ಲಿರುವ ಚಿತ್ರ]

ಎಲೆಕ್ಟ್ರಾನಿಕ್‌ ಸಾಧನಗಳು ನಿಮ್ಮ ಗುಲಾಮ ಆಗಿವೆಯೋ ನೀವು ಅವುಗಳ ಗುಲಾಮರಾಗಿದ್ದೀರೋ?