ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮೈಗ್ರೇನ್‌ ಏನು ಮಾಡಬಲ್ಲಿರಿ?

ಮೈಗ್ರೇನ್‌ ಏನು ಮಾಡಬಲ್ಲಿರಿ?

ಮೈಗ್ರೇನ್‌ ಏನು ಮಾಡಬಲ್ಲಿರಿ?

ಚುರುಕಾಗಿ ಆಫೀಸ್‌ ಕೆಲಸಮಾಡುವ ಜಾಯ್ಸ್‌ ತನ್ನ ಕೈಯಲ್ಲಿರುವ ಡಾಕ್ಯುಮೆಂಟ್‌ ಮೇಲೆ ಕಣ್ಣಾಡಿಸುತ್ತಾಳೆ. ಆ ಪುಟದ ಕೆಲವೊಂದು ಭಾಗಗಳು ತಟ್ಟನೆ ಮಾಯವಾದಂತೆ ತೋರುತ್ತವೆ. ನಂತರ ಕಣ್ಮುಂದೆ ಬೆಳಕಿನ ಪುಟ್ಟಪುಟ್ಟ ಬಿಂದುಗಳು ಜಿಗಿಮಿಗಿಯೆಂದು ನರ್ತಿಸುತ್ತಿರುವಂತೆ ಅನಿಸುತ್ತದೆ. ಇದು ಹೆಚ್ಚುತ್ತಾ ಹೆಚ್ಚುತ್ತಾ ಅಂಕುಡೊಂಕಾದ ಗೆರೆಗಳು, ಚಿತ್ರವಿಚಿತ್ರ ಜ್ಯಾಮಿತೀಯ ವಿನ್ಯಾಸಗಳ ಒಂದು ಪ್ರದರ್ಶನದಂತೆ ಆಗಿಬಿಡುತ್ತದೆ. ಕೆಲವೇ ನಿಮಿಷಗಳೊಳಗೆ ಆಕೆಗೆ ಎಲ್ಲವೂ ಮಬ್ಬುಮಬ್ಬಾಗುತ್ತದೆ. ತನಗೇನು ಆಗುತ್ತಿದೆಯೆಂದು ಆಕೆಗೆ ಗೊತ್ತಾದದ್ದರಿಂದ ಇಂಥ ತುರ್ತುಪರಿಸ್ಥಿತಿಗೆಂದೇ ಇರುವ ಒಂದು ಚಿಕ್ಕ ಗುಳಿಗೆಯನ್ನು ತಕ್ಷಣ ನುಂಗುತ್ತಾಳೆ.

ಜಾಯ್ಸ್‌ಗೆ ಮೈಗ್ರೇನ್‌ ಇದೆ. ಈ ಕಾಯಿಲೆ ಸಾಮಾನ್ಯ ತಲೆನೋವಿಗಿಂತ ಹಲವಾರು ವಿಧಗಳಲ್ಲಿ ಭಿನ್ನ. ಉದಾಹರಣೆಗೆ ಬೇರೆ ತಲೆನೋವುಗಳು ಎಲ್ಲೊ ಒಮ್ಮೊಮ್ಮೆ ಬಂದರೆ, ಮೈಗ್ರೇನ್‌ ತಲೆನೋವು ಮರುಕಳಿಸುತ್ತಾ ಇರುತ್ತದೆ. ಇದು ಎಷ್ಟು ತೀಕ್ಷ್ಣವಾಗಬಲ್ಲದೆಂದರೆ ರೋಗಿಗೆ ಸಾಧಾರಣ ಕೆಲಸಗಳನ್ನೂ ಮಾಡಲಿಕ್ಕಾಗದೇ ಇರಬಹುದು.

ಮೈಗ್ರೇನ್‌ನ ಲಕ್ಷಣಗಳು? ಸಿಡಿಯುವ ತಲೆನೋವು, ಅದೂ ತಲೆಯ ಒಂದು ಭಾಗದಲ್ಲಿ ಮಾತ್ರ ಇರಬಹುದು. ರೋಗಿಗೆ ವಾಂತಿ ಬಂದಂತಾಗುತ್ತದೆ, ಬೆಳಕನ್ನು ನೋಡಲು ಅಸಾಧ್ಯವಾಗುತ್ತದೆ. ಮೈಗ್ರೇನ್‌ ಅಟ್ಯಾಕ್‌ ಕೆಲವು ತಾಸುಗಳ ಇಲ್ಲವೆ ಕೆಲವು ದಿನಗಳ ವರೆಗೆ ಕಾಡಬಹುದು.

ಟೆನ್ಷನಿಂದಾಗಿ ಬರುವ ತಲೆನೋವಿನಿಂದ ಹೆಚ್ಚಿನವರು ಬಳಲಿದರೆ, ಮೈಗ್ರೇನ್‌ನಿಂದ ನರಳುವವರು 10 ಮಂದಿಯಲ್ಲಿ ಕೇವಲ ಒಬ್ಬರು. ಇವರಲ್ಲಿ ಪುರುಷರಿಗಿಂತ ಸ್ತ್ರೀಯರೇ ಹೆಚ್ಚು. ಕೆಲವರಿಗೆ ಇತರರಿಗಿಂತ ಹೆಚ್ಚು ತೀವ್ರ ಸ್ವರೂಪದ ಮೈಗ್ರೇನ್‌ ಇರುತ್ತದೆ. ಹೆಚ್ಚಿನ ರೋಗಿಗಳಂತೂ ಪ್ರತಿ ವರ್ಷ ಹಲವಾರು ದಿನ ಕೆಲಸಕ್ಕೆ ಗೈರುಹಾಜರಾಗಲೇ ಬೇಕಾಗುತ್ತದೆ. ಮೈಗ್ರೇನ್‌ನಿಂದಾಗಿ ಆದಾಯಕ್ಕೆ ಪೆಟ್ಟುಬೀಳುತ್ತದೆ. ಅಲ್ಲದೆ ಕೌಟುಂಬಿಕ ಹಾಗೂ ಸಾಂಘಿಕ ಜೀವನವೂ ಬಾಧಿತವಾಗುತ್ತದೆ. ಹೀಗಿರುವುದರಿಂದ, ಒಬ್ಬ ವ್ಯಕ್ತಿಯನ್ನು ತಾತ್ಕಾಲಿಕವಾಗಿ ನಿಷ್ಕ್ರಿಯಗೊಳಿಸಬಲ್ಲ 20 ಮುಖ್ಯ ಅಸ್ವಸ್ಥತೆಗಳಲ್ಲಿ ಇದೂ ಒಂದೆಂದು ವಿಶ್ವ ಆರೋಗ್ಯ ಸಂಸ್ಥೆ ಹೇಳುತ್ತದೆ.

ಮೈಗ್ರೇನ್‌ ಆರಂಭವಾಗುವ ಸ್ವಲ್ಪ ಸಮಯ ಮುನ್ನ ಕೆಲವು ರೋಗಿಗಳಲ್ಲಿ, ಕೈಜೋಮು ಹಿಡಿಯುವುದು, ಸುಸ್ತು, ಹಸಿವು, ಮೂಡ್‌ ಬದಲಾಗುವುದು ಮುಂತಾದ ಲಕ್ಷಣಗಳಿರುತ್ತವೆ. ಇನ್ನೇನು ತಲೆನೋವು ಆರಂಭವಾಗಬೇಕು ಎನ್ನುವಾಗ, ತಲೆತಿರುಗುವುದು, ಕಿವಿಗಳಲ್ಲಿ ಗುಂಯ್‌ಗುಡುವ ಶಬ್ದ, ಚುಚ್ಚಿದಂಥ ಅನಿಸಿಕೆ, ಎಲ್ಲವೂ ಎರಡೆರಡಾಗಿ ಕಾಣಿಸುವುದು, ತೊದಲುವುದು ಇಲ್ಲವೇ ಸ್ನಾಯು ದೌರ್ಬಲ್ಯ ಇವೆಲ್ಲ ಇರಬಹುದು.

ಮೈಗ್ರೇನ್‌ಗೆ ನಿರ್ದಿಷ್ಟ ಕಾರಣಗಳೇನೆಂದು ಈವರೆಗೆ ಪೂರ್ತಿಯಾಗಿ ಪತ್ತೆಯಾಗಿಲ್ಲ. ಆದರೆ ಇದು ನರಮಂಡಲಕ್ಕೆ ಸಂಬಂಧಿಸಿದ ಒಂದು ಕಾಯಿಲೆಯಾಗಿದ್ದು, ತಲೆಯಲ್ಲಿನ ರಕ್ತನಾಳಗಳನ್ನು ಬಾಧಿಸುತ್ತದೆಂದು ಎಣಿಸಲಾಗುತ್ತದೆ. ರಕ್ತವು ಒತ್ತಡಕ್ಕೊಳಗಾದ ರಕ್ತನಾಳಗಳ ಮೂಲಕ ಹಾದುಹೋಗುವುದೇ ಸಿಡಿಯುವ ತಲೆನೋವಿಗೆ ಕಾರಣ. ತುರ್ತು ಔಷಧ (ಇಂಗ್ಲಿಷ್‌) ಎಂಬ ಪತ್ರಿಕೆ ಹೀಗನ್ನುತ್ತದೆ: “ಮೈಗ್ರೇನ್‌ ರೋಗಿಗಳು, ಸಾಮಾನ್ಯಕ್ಕಿಂತ ಹೆಚ್ಚು ಸೂಕ್ಷ್ಮತೆಯುಳ್ಳ ನರಮಂಡಲ ವ್ಯವಸ್ಥೆಯನ್ನು ಅನುವಂಶೀಯವಾಗಿ ಪಡೆದಿರುತ್ತಾರೆ. ಅದು ಜೀವನದಲ್ಲಾಗುವ ಭಿನ್ನಭಿನ್ನ ಸಂಗತಿಗಳಿಂದ ಅಂದರೆ ಕಡಿಮೆ ನಿದ್ರೆ, ತೀಕ್ಷ್ಣ ವಾಸನೆ ಇಲ್ಲವೆ ಪರಿಮಳ, ಪ್ರಯಾಣ, ಹಸಿವೆ, ಮಾನಸಿಕ ಒತ್ತಡ, ಹಾರ್ಮೋನುಗಳಲ್ಲಿ ಏರುಪೇರಿನಿಂದ ಕೂಡಲೇ ಬಾಧಿಸಲ್ಪಡುತ್ತದೆ.” ಮೈಗ್ರೇನ್‌ನಿಂದ ನರಳುವವರಲ್ಲಿ ‘ಕರುಳ ಕೆರಳಿಕೆಯ ಲಕ್ಷಣಗಳ’ ವ್ಯಾಧಿ, ಆತಂಕ ಸಂಬಂಧಿತ ತೊಂದರೆಗಳು ಹಾಗೂ ಖಿನ್ನತೆಯೂ ತಲೆದೋರಬಹುದು.

ಮೈಗ್ರೇನ್‌ ಕಡಿಮೆಗೊಳಿಸಲು ನೀವೇನು ಮಾಡಬಹುದು?

ನೀವು ಅನುವಂಶೀಯವಾಗಿ ಪಡೆದಿರುವ ನರಮಂಡಲ ವ್ಯವಸ್ಥೆಯನ್ನಂತೂ ಬದಲಾಯಿಸಲಾರಿರಿ. ಆದರೆ ಮೈಗ್ರೇನ್‌ ತಲೆನೋವು ಬಾರದಂತೆ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬಹುದು. ಕೆಲವರು ತಮಗೆ ಮೈಗ್ರೇನ್‌ ಬಂದ ದಿನ ಯಾವ ಆಹಾರ ಸೇವಿಸಿದ್ದರು, ಯಾವ ಪರಿಸ್ಥಿತಿಯಲ್ಲಿದ್ದರು ಇತ್ಯಾದಿ ವಿವರಗಳನ್ನು ಒಂದು ಡೈರಿಯಲ್ಲಿ ಬರೆದಿಟ್ಟದ್ದರಿಂದ ತಮಗೆ ಯಾವುದು ಮೈಗ್ರೇನ್‌ ತರಿಸುತ್ತಿದೆಯೆಂದು ಪತ್ತೆಹಚ್ಚಲು ಸಾಧ್ಯವಾಗಿದೆ.

ಪ್ರತಿಯೊಬ್ಬ ರೋಗಿಗೆ ಮೈಗ್ರೇನ್‌ ತಲೆನೋವು ಬರಲು ಬೇರೆ ಬೇರೆ ಕಾರಣಗಳಿರುತ್ತವೆ. ಲೊರೇನ್‌ ಎಂಬಾಕೆಗೆ ತನಗೆ ಮೈಗ್ರೇನ್‌ ಆರಂಭವಾಗುತ್ತಿದ್ದದ್ದು ತಿಂಗಳ ನಿರ್ದಿಷ್ಟ ಸಮಯದಲ್ಲಿ ಹಾರ್ಮೋನ್‌ ಮಟ್ಟ ಬದಲಾದಾಗ ಎಂದು ಗೊತ್ತಾಯಿತು. ಆಕೆಯಂದದ್ದು: “ಅಂಡಬಿಡುಗಡೆಯ ಅವಧಿಯಲ್ಲಿ ನಾನು ಏನಾದರೂ ಕಠಿನ ಕೆಲಸ ಮಾಡಿದರೆ, ಸೆಕೆ ಇಲ್ಲವೇ ಚಳಿ ಜಾಸ್ತಿಯಾದರೆ, ಸದ್ದುಗದ್ದಲ ಕಿವಿಗೆಬಿದ್ದರೆ ಅಥವಾ ತುಂಬ ಮಸಾಲೆಯಿರುವ ಆಹಾರ ಸೇವಿಸಿದರೂ ಮೈಗ್ರೇನ್‌ ಶುರುವಾಗುತ್ತಿತ್ತು. ಹೀಗಿರುವುದರಿಂದ ಈ ಅವಧಿಯಲ್ಲಿ ನಾನು ಪ್ರಶಾಂತವಾದ ಸ್ಥಳದಲ್ಲಿರಲು ಮತ್ತು ಮಿತಭಾವ ಕಾಪಾಡಿಕೊಳ್ಳಲು ಪ್ರಯತ್ನಿಸುತ್ತೇನೆ.” 60ಕ್ಕಿಂತಲೂ ಹೆಚ್ಚು ವರ್ಷಗಳಿಂದ ಮೈಗ್ರೇನನ್ನು ಸಹಿಸಿಕೊಂಡಿರುವ ಜಾಯ್ಸ್‌ ಹೇಳುವುದು: “ಕಿತ್ತಳೆ, ಅನಾನಾಸು, ಕೆಂಪು ವೈನ್‌ ಸೇವಿಸಿದ ಕೂಡಲೇ ನನಗೆ ಮೈಗ್ರೇನ್‌ ಆರಂಭವಾಗುತ್ತಿತ್ತೆಂದು ಕಂಡುಹಿಡಿದೆ. ಆದ್ದರಿಂದ ಅದನ್ನೆಲ್ಲ ಬಿಟ್ಟುಬಿಟ್ಟಿದ್ದೇನೆ.”

ನಿಮ್ಮಲ್ಲಿ ಮೈಗ್ರೇನ್‌ ಅಟ್ಯಾಕನ್ನು ಬರಿಸುವಂಥದ್ದೇನೆಂದು ಪತ್ತೆಹಚ್ಚಲು ಸುಲಭವಾಗಲಿಕ್ಕಿಲ್ಲ ಯಾಕಂದರೆ ಸಾಮಾನ್ಯವಾಗಿ ಹಲವಾರು ಅಂಶಗಳು ಒಟ್ಟಾಗಿ ಅದನ್ನು ಕೆರಳಿಸುತ್ತವೆ. ಉದಾಹರಣೆಗೆ ನೀವು ಚಾಕಲೇಟ್‌ ತಿಂದಾಗ ಕೆಲವೊಮ್ಮೆ ಮೈಗ್ರೇನ್‌ ತಲೆನೋವು ಬರಲಿಕ್ಕಿಲ್ಲ, ಇನ್ನೂ ಕೆಲವೊಮ್ಮೆ ತಿಂದಾಗ ಬರಬಹುದು ಏಕೆಂದರೆ ಚಾಕಲೇಟ್‌ ಜತೆಗೆ ಬೇರಾವುದೊ ಅಂಶ ಸೇರಿ ಅದನ್ನು ಕೆರಳಿಸಿರಬಹುದು.

ಯಾವುದರಿಂದ ನಿಮಗೆ ಮೈಗ್ರೇನ್‌ ತಲೆನೋವು ಶುರುವಾಗುತ್ತದೆಂದು ಗುರುತಿಸಲು ಇಲ್ಲವೇ ಆ ಸಂಗತಿಗಳಿಂದ ದೂರವಿರಲು ಸಾಧ್ಯವಾಗದಿರಬಹುದು. ಹಾಗಿದ್ದರೂ ಮೈಗ್ರೇನ್‌ ತಲೆನೋವು ಬರುವುದನ್ನು ತಡೆಯುವ ಬೇರೆ ವಿಧಾನಗಳಿವೆ. ವಾರದ ಏಳೂ ದಿನ ಇಂತಿಷ್ಟೇ ಹೊತ್ತಿಗೆ ಮಲಗಿ ಇಂತಿಷ್ಟೇ ಹೊತ್ತಿಗೆ ಏಳುವ ರೂಢಿಮಾಡಬೇಕೆಂದು ತಜ್ಞರು ಶಿಫಾರಸ್ಸುಮಾಡುತ್ತಾರೆ. ಒಂದುವೇಳೆ ವಾರಾಂತ್ಯದಲ್ಲಿ ಬೆಳಗ್ಗೆ ತಡವಾಗಿ ಏಳಲು ಮನಸ್ಸಾದರೂ ಎಂದಿನಂತೆ ಎದ್ದು ಕೆಲವು ನಿಮಿಷ ಏನಾದರು ಮಾಡಿ ಆಮೇಲೆ ಪುನಃ ಮಲಗಬಹುದೆಂದು ಹೇಳುತ್ತಾರೆ. ಕ್ಯಾಫೇನ್‌ ಸೇವನೆಯಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಮೈಗ್ರೇನ್‌ ಉದ್ಭವಿಸಬಹುದು. ಹೀಗಿರುವುದರಿಂದ ಪ್ರತಿದಿನ ಕಾಫಿ ಕುಡಿಯುತ್ತೀರಾದರೆ ಬರೀ ಎರಡು ಕಪ್‌ ಇಲ್ಲವೆ ಕೋಲಾ ಕುಡಿಯುತ್ತಿರುವಲ್ಲಿ ಎರಡು ಕ್ಯಾನ್‌ ಮಾತ್ರ ಕುಡಿಯಿರಿ. ಹಸಿವೆಯಿಂದಾಗಿಯೂ ಮೈಗ್ರೇನ್‌ ಆರಂಭವಾಗುವುದರಿಂದ ಊಟ ತಪ್ಪಿಸಬೇಡಿ. ಹೆಚ್ಚಾಗಿ ಮೈಗ್ರೇನ್‌ಗೆ ಕಾರಣವಾದ ಮಾನಸಿಕ ಒತ್ತಡದಿಂದ ಸುಲಭವಾಗಿ ತಪ್ಪಿಸಲಾಗದಿದ್ದರೂ, ಮನಸ್ಸನ್ನು ನಿರಾಳಗೊಳಿಸಲು ಮಾರ್ಗಗಳನ್ನು ಹುಡುಕಿರಿ. ಉದಾಹರಣೆಗಾಗಿ ನಿಮ್ಮ ಶೆಡ್ಯೂಲಿನಲ್ಲಿ ಹೊಂದಾಣಿಕೆಗಳನ್ನು ಮಾಡಿ, ಬೈಬಲ್‌ ಓದಿ ಇಲ್ಲವೆ ಲಘು ಸಂಗೀತ ಆಲಿಸಿ.

ಮೈಗ್ರೇನ್‌ಗೆ ಚಿಕಿತ್ಸೆಯೇನು?

ಮೈಗ್ರೇನ್‌ಗಿರುವ ಚಿಕಿತ್ಸೆಗಳು ಒಂದೆರಡಲ್ಲ. * ಉದಾಹರಣೆಗೆ ನಿದ್ದೆ ಅತ್ಯುತ್ತಮವಾದ ಒಂದು ಔಷಧಿ. ಔಷಧಚೀಟಿಯಿಲ್ಲದೆ ಪಡೆಯಬಹುದಾದ ನೋವು ನಿವಾರಕ ಔಷಧಿಗಳನ್ನು ಸೇವಿಸಿ ರೋಗಿಗೆ ನಿದ್ದೆಮಾಡಲಿಕ್ಕಾಗುವಷ್ಟು ಉಪಶಮನ ಸಿಗಬಹುದು.

ವೈದ್ಯರ ಔಷಧಚೀಟಿ ತೋರಿಸಿ ಪಡೆಯಸಾಧ್ಯವಿದ್ದ ಔಷಧಗಳ ಹೊಸ ಶ್ರೇಣಿ ‘ಟ್ರಿಪ್ಟಾನ್ಸ್‌’ ನಿರ್ದಿಷ್ಟವಾಗಿ ಮೈಗ್ರೇನ್‌ ಚಿಕಿತ್ಸೆಗೆಂದು 1993ರಲ್ಲಿ ಲಭ್ಯವಾಗತೊಡಗಿತು. ದ ಮೆಡಿಕಲ್‌ ಜರ್ನಲ್‌ ಆಫ್‌ ಆಸ್ಟ್ರೇಲಿಯ ಇದನ್ನು “ಚಿಕಿತ್ಸೆಯ ಕ್ಷೇತ್ರದಲ್ಲಿ ಒಂದು ದೊಡ್ಡ ಮುನ್ನಡೆ” ಎಂದು ಕರೆಯುತ್ತಾ ಮುಂದುವರಿಸಿದ್ದು: “ಬ್ಯಾಕ್ಟೀರಿಯ ಸೋಂಕುಗಳಿಗೆ ಪೆನ್ಸಿಲಿನ್‌ ಹೇಗೊ . . . ಹಾಗೆ ಮೈಗ್ರೇನ್‌ ಮತ್ತು ಇತರ ತಲೆನೋವುಗಳಿಗೆ ಟ್ರಿಪ್ಟಾನ್ಸ್‌ ಅತಿ ಸೂಕ್ತವಾದ ಔಷಧ!”

ಮೈಗ್ರೇನ್‌ಗೆಂದು ಕಂಡುಹಿಡಿಯಲಾಗಿರುವ ಔಷಧವು ಸೋಂಕಿಗೆ ಕಂಡುಹಿಡಿಯಲಾದ ಔಷಧದಂತೆ ಜೀವ ಉಳಿಸುವಂಥದ್ದೇನಲ್ಲ. ಏಕೆಂದರೆ ಮೈಗ್ರೇನ್‌ನಿಂದ ಜೀವಕ್ಕೇನೂ ಹಾನಿಯಿಲ್ಲ. ಆದರೆ ಹಲವಾರು ವರ್ಷಗಳಿಂದ ಮೈಗ್ರೇನ್‌ನ ನಿಮಿತ್ತ ನಿಯತವಾಗಿ ನಿಷ್ಕ್ರಿಯರಾಗುತ್ತಿದ್ದವರಿಗೆ ಅವು ತುಂಬ ಉಪಶಮನ ತಂದಿವೆ. ಈ ಹಿಂದೆ ತಿಳಿಸಲಾದಂಥ ಬದಲಾವಣೆಗಳನ್ನಂತೂ ರೋಗಿಗಳು ಮಾಡಲೇಬೇಕು. ಹಾಗಿದ್ದರೂ ಮೈಗ್ರೇನ್‌ ಪೀಡಿತರು ಟ್ರಿಪ್ಟಾನ್ಸ್‌ ಅನ್ನು ‘ಚಮತ್ಕಾರದ ಔಷಧ’ ಎಂದು ಕರೆಯುತ್ತಾರೆ.

ಎಲ್ಲ ಔಷಧಗಳಿಗೂ ಸಾಧಕಬಾಧಕಗಳು ಇದ್ದೇ ಇರುತ್ತವೆ. ಟ್ರಿಪ್ಟಾನ್ಸ್‌ನ ಬಾಧಕಗಳೇನು? ಅದರ ಒಂದು ಗುಳಿಗೆಯ ಬೆಲೆ ದೊಡ್ಡ ಹೋಟೆಲೊಂದರ ಒಂದು ಊಟದ ಬೆಲೆಗೆ ಸಮಾನ! ಹೀಗಿರುವುದರಿಂದ ವೈದ್ಯರು ಅವನ್ನು, ಅತಿ ಹೆಚ್ಚೂ ಅತಿ ಕಡಿಮೆಯೂ ಆಗಿರದ ಮೈಗ್ರೇನ್‌ ಮತ್ತು ತೀಕ್ಷ್ಣ ಮೈಗ್ರೇನ್‌ ಉಳ್ಳವರಿಗಾಗಿ ಮಾತ್ರ ಸೂಚಿಸುತ್ತಾರೆ. ಅಲ್ಲದೆ ಈ ಔಷಧ ಎಲ್ಲ ರೋಗಿಗಳಿಗೂ ಪರಿಣಾಮಕಾರಿ ಆಗಿರುವುದಿಲ್ಲ. ಇನ್ನೂ ಕೆಲವರ ಆರೋಗ್ಯ ಸ್ಥಿತಿಯಿಂದಾಗಿ ಅವರದನ್ನು ಸೇವಿಸದಿರುವುದೇ ಉತ್ತಮ. ಮೈಗ್ರೇನ್‌ನಿಂದ ನರಳುತ್ತಿರುವವರು ಅನುವಂಶೀಯವಾಗಿ ಪಡೆದಿರುವ ಶಾರೀರಿಕ ಸ್ಥಿತಿಗೆ ಈ ವರೆಗೂ ಯಾವುದೇ ವಾಸಿ ಇಲ್ಲದಿದ್ದರೂ “ಮೈಗ್ರೇನ್‌ಗಾಗಿ ಹೊಸ, ಸುಧಾರಿತ ಔಷಧಗಳು ಲಭ್ಯವಿರುವುದರಿಂದ ರೋಗಿಗಳು ಈಗ ಮುಂಚಿನಂತೆ ನರಳಬೇಕಾಗಿಲ್ಲ” ಎನ್ನುತ್ತಾ ತುರ್ತು ಔಷಧ ಪತ್ರಿಕೆ ಕೊನೆಗೊಳ್ಳುತ್ತದೆ. (g11-E 01)

[ಪಾದಟಿಪ್ಪಣಿ]

^ ಎಚ್ಚರ! ಪತ್ರಿಕೆಯು ಯಾವುದೇ ಚಿಕಿತ್ಸೆಯನ್ನು ಶಿಫಾರಸ್ಸು ಮಾಡುವುದಿಲ್ಲ. ಯಾವುದೇ ನಿರ್ಣಯ ತೆಗೆದುಕೊಳ್ಳುವ ಮುಂಚೆ ಒಬ್ಬ ವ್ಯಕ್ತಿ ಬೇರೆ ಬೇರೆ ಚಿಕಿತ್ಸೆಗಳನ್ನು ಜಾಗ್ರತೆಯಿಂದ ಪರಿಶೀಲಿಸಬೇಕು.

[ಪುಟ 25ರಲ್ಲಿರುವ ಚಿತ್ರ]

ಡೈರಿ ಬರೆದಿಡುವ ಮೂಲಕ ತಮಗೆ ಯಾವುದು ಮೈಗ್ರೇನ್‌ ತರಿಸುತ್ತಿದೆಯೆಂದು ಪತ್ತೆಹಚ್ಚಲು ಕೆಲವರಿಗೆ ಸಾಧ್ಯವಾಗಿದೆ

[ಪುಟ 25ರಲ್ಲಿರುವ ಚಿತ್ರ]

ಹೆಚ್ಚಾಗಿ ಮೈಗ್ರೇನ್‌ಗೆ ಕಾರಣವಾದ ಮಾನಸಿಕ ಒತ್ತಡವನ್ನು ತಗ್ಗಿಸಲು ಲಘು ಸಂಗೀತ ಸಹಾಯಕಾರಿ

[ಪುಟ 25ರಲ್ಲಿರುವ ಚಿತ್ರ]

ಮೈಗ್ರೇನ್‌ ಅನುವಂಶೀಯವಾಗಿ ಬರುವ ಕಾಯಿಲೆಯಾಗಿದ್ದರೂ ಅನೇಕವೇಳೆ ವೈದ್ಯರು ಉತ್ತಮ ಚಿಕಿತ್ಸೆ ಕೊಡಶಕ್ತರು