ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಆಯ್ಕೆಯನ್ನು ಮಾಡುವ ಸ್ವಾತಂತ್ರ್ಯವನ್ನು ನಾವು ಹೇಗೆ ಉಪಯೋಗಿಸಬೇಕು?

ಆಯ್ಕೆಯನ್ನು ಮಾಡುವ ಸ್ವಾತಂತ್ರ್ಯವನ್ನು ನಾವು ಹೇಗೆ ಉಪಯೋಗಿಸಬೇಕು?

ಬೈಬಲಿನ ದೃಷ್ಟಿಕೋನ

ಆಯ್ಕೆಯನ್ನು ಮಾಡುವ ಸ್ವಾತಂತ್ರ್ಯವನ್ನು ನಾವು ಹೇಗೆ ಉಪಯೋಗಿಸಬೇಕು?

ದೇವರು ಪ್ರಥಮ ಮಾನವರಾದ ಆದಾಮಹವ್ವರಿಗೆ ತಮ್ಮ ಸ್ವಂತ ಆಯ್ಕೆಗಳನ್ನು ಮಾಡುವ ಸಾಮರ್ಥ್ಯವನ್ನು ಕೊಟ್ಟನು. ಏದೆನ್‌ ತೋಟವನ್ನು ದೇವರು ಆದಾಮನ ಹತೋಟಿಗೆ ಕೊಟ್ಟನು. ಮತ್ತು ಪ್ರಾಣಿಗಳಿಗೆ ಹೆಸರುಗಳನ್ನು ಆಯ್ಕೆಮಾಡುವುದು ಆದಾಮನಿಗೊಪ್ಪಿಸಲ್ಪಟ್ಟ ಕರ್ತವ್ಯಗಳಲ್ಲಿ ಒಂದಾಗಿತ್ತು. (ಆದಿಕಾಂಡ 2:15, 19) ಎಲ್ಲಕ್ಕಿಂತಲೂ ಮುಖ್ಯವಾಗಿ, ತಾವು ದೇವರಿಗೆ ಅಧೀನರಾಗಿರುವೆವೋ ಇಲ್ಲವೋ ಎಂಬ ವಿಷಯವನ್ನು ತೀರ್ಮಾನಿಸುವ ಸಾಮರ್ಥ್ಯ ಆದಾಮಹವ್ವರಿಗಿತ್ತು.​—⁠ಆದಿಕಾಂಡ 2:17, 18.

ಅಂದಿನಿಂದಲೂ ಜನರು ಲಕ್ಷೋಪಲಕ್ಷ ತೀರ್ಮಾನಗಳನ್ನು ಮಾಡಿದ್ದಾರೆ​—⁠ಅವುಗಳಲ್ಲಿ ಅನೇಕ ತೀರ್ಮಾನಗಳು ಒಳ್ಳೆಯವು, ಕೆಲವು ಅಸಮಂಜಸವಾದವುಗಳು, ಮತ್ತು ಇತರ ತೀರ್ಮಾನಗಳು ಸಂಪೂರ್ಣವಾಗಿ ಕೆಟ್ಟವುಗಳಾಗಿದ್ದವು. ಮಾನವನ ಕೆಲವು ಕೆಟ್ಟ ತೀರ್ಮಾನಗಳು ಧ್ವಂಸಕಾರಕ ಫಲಿತಾಂಶಗಳನ್ನು ತಂದೊಡ್ಡಿವೆ. ಆದರೂ, ದೇವರು ಎಂದಿಗೂ ನಮ್ಮ ಆಯ್ಕೆಯ ಹಕ್ಕಿನಲ್ಲಿ ತಲೆಹಾಕಿರುವುದಿಲ್ಲ. ಒಬ್ಬ ಪ್ರೀತಿಯ ತಂದೆಯೋಪಾದಿ, ನಾವು ಒಳ್ಳೆಯ ತೀರ್ಮಾನಗಳನ್ನು ಮಾಡುವಂತೆ ದೇವರು ಬೈಬಲಿನ ಮೂಲಕ ಸಹಾಯವನ್ನು ಒದಗಿಸುತ್ತಾನೆ. ತಪ್ಪು ಆಯ್ಕೆಗಳನ್ನು ಮಾಡುವುದರ ಪರಿಣಾಮಗಳ ಕುರಿತಾಗಿಯೂ ನಮ್ಮನ್ನು ಎಚ್ಚರಿಸುತ್ತಾನೆ. ನಾವು ಬಿತ್ತುವುದನ್ನೇ ಕೊಯ್ಯುವೆವು ಎಂದು ಬೈಬಲ್‌ ಹೇಳುತ್ತದೆ.​—⁠ಗಲಾತ್ಯ 6:⁠7.

ವೈಯಕ್ತಿಕ ವಿಚಾರಗಳಲ್ಲಿ ತೀರ್ಮಾನಗಳು

ಕೆಲವು ವಿಚಾರಗಳಲ್ಲಿ ದೇವರು ತನ್ನ ಚಿತ್ತವನ್ನು ಸ್ಪಷ್ಟವಾಗಿ ತಿಳಿಯಪಡಿಸುತ್ತಾ, ನಮಗೆ ನಿರ್ದಿಷ್ಟವಾದ ನಿರ್ದೇಶನವನ್ನೀಯುತ್ತಾನೆ. ಆದರೆ, ಹೆಚ್ಚಿನ ವಿಚಾರಗಳಲ್ಲಿ, ನಮ್ಮ ಎಲ್ಲಾ ವೈಯಕ್ತಿಕ ವ್ಯವಹಾರಗಳನ್ನು ನಿಯಂತ್ರಿಸಲು ಬೈಬಲು ವಿಧಿಸೂತ್ರಗಳನ್ನು ಪಟ್ಟಿಮಾಡುವುದಿಲ್ಲ. ಬದಲಿಗೆ, ಅದು ವ್ಯಕ್ತಿಪರ ಇಷ್ಟಾನಿಷ್ಟಗಳಿಗೆ ಅವಕಾಶ ನೀಡುವ ವ್ಯಾಪಕವಾದ ಮಾರ್ಗದರ್ಶನವನ್ನು ಕೊಡುತ್ತದೆ. ಉದಾಹರಣೆಗೆ, ಅದು ವಿನೋದಾವಳಿಯ ಕುರಿತು ಏನು ಹೇಳುತ್ತದೆಂಬುದನ್ನು ಗಮನಿಸಿರಿ.

ಶಾಸ್ತ್ರವು ಯೆಹೋವನನ್ನು “ಸಂತೋಷಭರಿತ ದೇವರು” ಎಂದು ಕರೆಯುತ್ತದೆ. (1 ತಿಮೊಥೆಯ 1:​11, NW) ಆತನ ವಾಕ್ಯವು “ನಗುವ ಸಮಯ” ಮತ್ತು “ಕುಣಿದಾಡುವ ಸಮಯ” ಇದೆಯೆಂದು ತಿಳಿಸುತ್ತದೆ. (ಪ್ರಸಂಗಿ 3:1, 4) ರಾಜ ದಾವೀದನು ಬೇರೆಯವರ ಹಿತಕ್ಕೆಂದು ಸಂಗೀತವನ್ನು ನುಡಿಸಿದನು. (1 ಸಮುವೇಲ 16:16-18, 23) ಯೇಸು ಒಂದು ಮದುವೆಯ ಔತಣಕ್ಕೆ ಹಾಜರಾಗಿದ್ದನು, ಮತ್ತು ಸಂದರ್ಭದ ಸಂತೋಷವನ್ನು ಹೆಚ್ಚಿಸಲು ನೀರನ್ನು ದ್ರಾಕ್ಷಾರಸವಾಗಿ ಪರಿವರ್ತಿಸಿದನು.​—⁠ಯೋಹಾನ 2:1-10.

ಆದರೂ, “ಜ್ಞಾನಿಗಳ ಸಹವಾಸಿ ಜ್ಞಾನಿಯಾಗುವನು; ಜ್ಞಾನಹೀನರ ಒಡನಾಡಿ ಸಂಕಟಪಡುವನು” ಎಂದು ಬೈಬಲು ಯುಕ್ತವಾಗಿಯೇ ಎಚ್ಚರಿಸುತ್ತದೆ. (ಜ್ಞಾನೋಕ್ತಿ 13:20) “ಕುಚೋದ್ಯ” ಮತ್ತು ಅನೈತಿಕ ನಡವಳಿಕೆಗಳು ದೇವರನ್ನು ಅಸಂತೋಷಪಡಿಸುತ್ತವೆ ಮತ್ತು ಆತನೊಂದಿಗಿರುವ ನಮ್ಮ ಸಂಬಂಧವನ್ನು ಕೆಡವಿ ಹಾಕಬಲ್ಲವು. (ಎಫೆಸ 5:3-5) ಸರಿಯಾದ ನಿಯಂತ್ರಣವಿಲ್ಲದೆ ಸ್ನೇಹ ಸೌಹಾರ್ದ ಕೂಟಗಳಲ್ಲಿ ಮದ್ಯಪಾನಗಳು ಉಪಯೋಗಿಸಲ್ಪಡುವುದಾದರೆ, ಗಂಭೀರವಾದ ಸಮಸ್ಯೆಗಳು ಫಲಿಸಬಹುದು. (ಜ್ಞಾನೋಕ್ತಿ 23:29-35; ಯೆಶಾಯ 5:11, 12) ಯೆಹೋವ ದೇವರು ಹಿಂಸಾಚಾರವನ್ನು ಕೂಡ ದ್ವೇಷಿಸುತ್ತಾನೆ.​—⁠ಕೀರ್ತನೆ 11:​5, NW; ಜ್ಞಾನೋಕ್ತಿ 3:​31, NW.

ಈ ಬೈಬಲ್‌ ವಚನಗಳು, ವಿನೋದಾವಳಿಯನ್ನು ದೇವರು ವೀಕ್ಷಿಸುವಂತೆಯೇ ವೀಕ್ಷಿಸಲು ನಮಗೆ ಸಹಾಯಮಾಡುತ್ತವೆ. ಆಯ್ಕೆಗಳನ್ನು ಮಾಡುವುದರಲ್ಲಿ ಕ್ರೈಸ್ತರು ಬೈಬಲನ್ನು ಪರಿಗಣೆನೆಗೆ ತೆಗೆದುಕೊಳ್ಳುತ್ತಾರೆ. ವಾಸ್ತವದಲ್ಲಿ, ನಾವೆಲ್ಲರೂ ನಮ್ಮ ನಮ್ಮ ಆಯ್ಕೆಗಳ ಒಳ್ಳೆಯ ಅಥವಾ ಕೆಟ್ಟ ಪರಿಣಾಮಗಳನ್ನು ಖಂಡಿತ ಅನುಭವಿಸುವೆವು.​—⁠ಗಲಾತ್ಯ 6:7-10.

ತದ್ರೀತಿಯಲ್ಲಿ, ಕ್ರೈಸ್ತರು ಉಡುಗೆತೊಡುಗೆ, ಮದುವೆ, ಹೆತ್ತವರೋಪಾದಿಯ ಜವಾಬ್ದಾರಿಗಳು ಮತ್ತು ವ್ಯಾಪಾರ ವ್ಯವಹಾರಗಳೆಂಬ ವಿದ್ಯಮಾನಗಳಲ್ಲಿ ಬೈಬಲ್‌ ಮೂಲತತ್ತ್ವಗಳಿಗೆ ಹೊಂದಿಕೆಯಲ್ಲಿ ವಿವೇಕಪ್ರದ ತೀರ್ಮಾನಗಳನ್ನು ಮಾಡುವಂತೆ ಅವರನ್ನು ಪ್ರೋತ್ಸಾಹಿಸಲಾಗಿದೆ. ಇವುಗಳಲ್ಲಿ ಶಾಸ್ತ್ರವು ನಿರ್ದಿಷ್ಟವಾಗಿ ಸೂಚಿಸದ ವಿಚಾರಗಳೂ ಒಳಗೊಂಡಿವೆ. ಆದರೂ ಅದರಲ್ಲಿರುವ ಮೂಲತತ್ತ್ವಗಳು ಮನಸ್ಸಾಕ್ಷಿಯ ಮೇಲಾಧಾರಿತವಾದ ತೀರ್ಮಾನಗಳನ್ನು ಮಾಡುವಂತೆ ಸಹಾಯವನ್ನು ಒದಗಿಸುತ್ತವೆ. (ರೋಮಾಪುರ 2:14, 15) ಮುಂದೆ ಹೇಳಲ್ಪಟ್ಟಿರುವ ತತ್ತ್ವವು ಕ್ರೈಸ್ತರು ಮಾಡುವ ಎಲ್ಲಾ ವೈಯಕ್ತಿಕ ತೀರ್ಮಾನಗಳನ್ನು ಆವರಿಸಬೇಕು: “ನೀವು ಉಂಡರೂ ಕುಡಿದರೂ ಇನ್ನೇನು ಮಾಡಿದರೂ ಎಲ್ಲವನ್ನೂ ದೇವರ ಘನತೆಗಾಗಿ ಮಾಡಿರಿ.”​—⁠1 ಕೊರಿಂಥ 10:31.

ಈ ಸಂಬಂಧದಲ್ಲಿ ನಾವು ನಮ್ಮ “ಸ್ವಂತ ಕಾರ್ಯವನ್ನೇ ನಡಿಸಿಕೊಂಡು” ಹೋಗಬೇಕೆಂಬ ಮೂಲತತ್ತ್ವವನ್ನೂ ಪರಿಗಣಿಸುವುದು ಉತ್ತಮ. (1 ಥೆಸಲೊನೀಕ 4:11) ಕ್ರೈಸ್ತರು ದೇವರ ಚಿತ್ತಕ್ಕೆ ಎದುರುಬೀಳದ ಹಲವು ರೀತಿಯ ಆಯ್ಕೆಗಳನ್ನು ಎದುರಿಸುತ್ತಾರೆ. ಆದುದರಿಂದ, ಒಬ್ಬ ಕ್ರೈಸ್ತನು ಮಾಡುವ ಸ್ವಂತ ಆಯ್ಕೆಯು ಮತ್ತೊಬ್ಬನದ್ದಕ್ಕಿಂತ ವ್ಯತ್ಯಾಸವುಳ್ಳದ್ದಾಗಿರಬಹುದು. ತನ್ನ ಸೇವಕರು ಒಬ್ಬರಿಗೊಬ್ಬರು ತೀರ್ಪುಮಾಡಿಕೊಳ್ಳುವುದು ದೇವರನ್ನು ಅಪ್ರಸನ್ನಗೊಳಿಸುವುದು. (ಯಾಕೋಬ 4:11, 12) ಬೈಬಲ್‌ ವಿವೇಕಯುತವಾಗಿಯೇ, “ನಿಮ್ಮಲ್ಲಿ ಯಾವನಾದರೂ . . . ಪರಕಾರ್ಯಗಳಲ್ಲಿ ತಲೆಹಾಕುವವನು ಆಗಿದ್ದು ಶಿಕ್ಷಾಪಾತ್ರನಾಗಬಾರದು” ಎಂದು ಬುದ್ಧಿ ಹೇಳುತ್ತದೆ.​—⁠1 ಪೇತ್ರ 4:15.

ದೇವರನ್ನು ಸೇವಿಸುವ ತೀರ್ಮಾನವನ್ನು ಮಾಡುವುದು

ಬೈಬಲು ದೇವರಿಗೆ ಅಧೀನರಾಗುವುದರ ಪ್ರಯೋಜನಗಳನ್ನು ಎತ್ತಿತೋರಿಸುತ್ತದೆ. ಆದರೂ, ಜನರು ತನ್ನನ್ನು ಆರಾಧಿಸುವಂತೆ ದೇವರು ಅವರನ್ನು ಬಲವಂತಪಡಿಸುವುದಿಲ್ಲ. ಬದಲಾಗಿ, ತನ್ನ ಮಾನವ ಸೃಷ್ಟಿಜೀವಿಗಳು ತನ್ನ ಆರಾಧಕರಾಗುವಂತೆ ಆತನು ಆಮಂತ್ರಿಸುತ್ತಾನೆ. ಉದಾಹರಣೆಗೆ, “ಬನ್ನಿರಿ; ನಮ್ಮ ನಿರ್ಮಾಣಿಕನಾದ ಯೆಹೋವನಿಗೆ ಸಾಷ್ಟಾಂಗವೆರಗಿ ಆರಾಧಿಸೋಣ” ಎಂದು ಬೈಬಲ್‌ ತಿಳಿಸುತ್ತದೆ.​—⁠ಕೀರ್ತನೆ 95:⁠6.

ಇಂತಹ ಒಂದು ಆಮಂತ್ರಣವು ಪುರಾತನ ಇಸ್ರಾಯೇಲ್‌ಗೆ ಕೊಡಲ್ಪಟ್ಟಿತು. 3,500 ವರ್ಷಗಳಿಗೆ ಹಿಂದೆ ಇಸ್ರಾಯೇಲ್‌ ಜನಾಂಗವು ಸೀನಾಯಿಬೆಟ್ಟದ ಮುಂದೆ ನಿಂತಿತು, ಮತ್ತು ಮೋಶೆಯ ಧರ್ಮಶಾಸ್ತ್ರದಲ್ಲಿ ಒಳಗೂಡಿಸಲ್ಪಟ್ಟಿದ್ದ ಸತ್ಯ ಧರ್ಮದ ಏರ್ಪಾಡನ್ನು ದೇವರು ಆ ಲಕ್ಷಾಂತರ ಜನರಿಗೆ ಪರಿಚಯಿಸಿದನು. ಅವರೀಗ ಒಂದು ಆಯ್ಕೆಯನ್ನು ಮಾಡಬೇಕಾಗಿತ್ತು: ಅವರು ದೇವರನ್ನು ಸೇವಿಸುವರೋ ಇಲ್ಲವೋ? ಅವರು ಹೇಗೆ ಪ್ರತಿಕ್ರಿಯಿಸಿದರು? ಅವರು ಒಗ್ಗಟ್ಟಿನಿಂದ ಹೇಳಿದ್ದು: “ಯೆಹೋವನು ಮಾತಾಡಿರುವುದನ್ನೆಲ್ಲಾ ಮಾಡಲು ಮತ್ತು ವಿಧೇಯರಾಗಿರಲು ನಾವು ಬಯಸುತ್ತೇವೆ.” (ವಿಮೋಚನಕಾಂಡ 24:​7, NW) ಯೆಹೋವನನ್ನು ಆರಾಧಿಸಬೇಕೆಂಬುದು ಅವರ ಸ್ವಂತ ತೀರ್ಮಾನವಾಗಿತ್ತು.

ಪ್ರಥಮ ಶತಮಾನದಲ್ಲಿ, ಯೇಸು ದೇವರ ರಾಜ್ಯದ ಸುವಾರ್ತೆಯನ್ನು ಸಾರಲು ಪ್ರಾರಂಭಿಸಿದನು. (ಮತ್ತಾಯ 4:17; 24:14) ಈ ಕೆಲಸದಲ್ಲಿ ಜೊತೆಗೂಡುವಂತೆ ಅವನು ಯಾರೊಬ್ಬನನ್ನೂ ಬಲವಂತಪಡಿಸಲಿಲ್ಲ. ಬದಲಿಗೆ, ಅವನು ಕನಿಕರದಿಂದ, “ಬಂದು ನನ್ನನ್ನು ಹಿಂಬಾಲಿಸು” ಎಂದು ಹೇಳುತ್ತಾ ಇತರರನ್ನು ಆಮಂತ್ರಿಸಿದನು. (ಮಾರ್ಕ 2:14; 10:21) ಅನೇಕರು ಅವನ ಆಮಂತ್ರಣವನ್ನು ಸ್ವೀಕರಿಸಿದರು ಮತ್ತು ಅವನೊಂದಿಗೆ ಸಾರತೊಡಗಿದರು. (ಲೂಕ 10:1-9) ಸ್ವಲ್ಪಕಾಲದ ನಂತರ, ಕೆಲವರು ಯೇಸುವನ್ನು ಬಿಟ್ಟುಹೋಗುವ ಆಯ್ಕೆಮಾಡಿದರು. ಯೂದನು ಯೇಸುವಿಗೆ ದ್ರೋಹ ಬಗೆಯುವ ಆಯ್ಕೆಯನ್ನು ಮಾಡಿದನು. (ಯೋಹಾನ 6:66; ಅ. ಕೃತ್ಯಗಳು 1:24) ತರುವಾಯ, ಅಪೊಸ್ತಲರ ಮಾರ್ಗದರ್ಶನದ ಕೆಳಗೆ ಇನ್ನೂ ಅನೇಕರು ಶಿಷ್ಯರಾದರು; ಕತ್ತಿ ಮೊನೆಯ ಬೆದರಿಕೆಯ ಕಾರಣದಿಂದಲ್ಲ, ತಮ್ಮ ಸ್ವ-ಇಚ್ಛೆಯನ್ನು ಉಪಯೋಗಿಸುವ ಮೂಲಕವೇ. ಅವರು “ಒಳ್ಳೆಯ ಪ್ರವೃತ್ತಿ”ಯುಳ್ಳವರಾಗಿದ್ದರು ಮತ್ತು ‘ನಂಬುವವರಾದರು.’ (ಅ. ಕೃತ್ಯಗಳು 13:​48, NW; 17:34) ಇಂದು ಕೂಡ ಸತ್ಯ ಕ್ರೈಸ್ತರು ಮನಃಪೂರ್ವಕವಾಗಿ ದೇವರ ವಾಕ್ಯಕ್ಕೆ ಅಧೀನರಾಗುತ್ತಾರೆ ಮತ್ತು ಯೇಸುವಿನ ಬೋಧನೆಗಳನ್ನು ಅನುಕರಿಸುತ್ತಾರೆ.

ಸ್ಪಷ್ಟವಾಗಿಯೇ, ನಾವು ನಮ್ಮ ಆಯ್ಕೆ ಮಾಡುವ ಸಾಮರ್ಥ್ಯವನ್ನು ಉಪಯೋಗಿಸುವಂತೆ ದೇವರು ಬಯಸುತ್ತಾನೆ. ಮತ್ತು ವಿವೇಕಯುತ ತೀರ್ಮಾನಗಳನ್ನು ಮಾಡುವುದರಲ್ಲಿ ನಮಗೆ ಸಹಾಯಮಾಡಬಹುದಾದ ಮಾರ್ಗದರ್ಶನವನ್ನೂ ಆತನು ಬೈಬಲಿನಲ್ಲಿ ಒದಗಿಸುತ್ತಾನೆ. (ಕೀರ್ತನೆ 25:12) ವೈಯಕ್ತಿಕ ತೀರ್ಮಾನಗಳ ಮೇರೆಯಲ್ಲಿ, ಪ್ರತಿಯೊಬ್ಬ ಕ್ರೈಸ್ತನು ದೈವಿಕ ಮೂಲತತ್ತ್ವಗಳನ್ನು ಜಾಗರೂಕತೆಯಿಂದ ಪರಿಶೀಲಿಸಬೇಕು. ಈ ರೀತಿಯಲ್ಲಿ ಮಾತ್ರವೇ ನಾವು ದೇವರಿಗೆ ‘ನಮ್ಮ ವಿವೇಕಪೂರ್ವಕವಾದ ಆರಾಧನೆ’ಯನ್ನು ಸಲ್ಲಿಸಬಲ್ಲೆವು.​—⁠ರೋಮಾಪುರ 12:⁠1.(g03 3/08)