ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಶಿಶು ಶೋಷಣೆ ಬೇಗನೆ ಅಂತ್ಯಗೊಳ್ಳಲಿದೆ!

ಶಿಶು ಶೋಷಣೆ ಬೇಗನೆ ಅಂತ್ಯಗೊಳ್ಳಲಿದೆ!

ಶಿಶು ಶೋಷಣೆ ಬೇಗನೆ ಅಂತ್ಯಗೊಳ್ಳಲಿದೆ!

“ಬಾಲ್ಯಾವಸ್ಥೆಯು ವಿಶೇಷ ಆರೈಕೆ ಮತ್ತು ನೆರವನ್ನು ಪಡೆದುಕೊಳ್ಳಲು ಯೋಗ್ಯವಾಗಿದೆ ಎಂದು, ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆಯಲ್ಲಿ ವಿಶ್ವ ಸಂಸ್ಥೆಯು ಘೋಷಿಸಿದೆ,” ಎಂದು ಮಕ್ಕಳ ಹಕ್ಕುಗಳ ಕುರಿತಾದ ಒಪ್ಪಂದದ ಪೀಠಿಕಾ ಹೇಳಿಕೆಯು ತಿಳಿಸಿತು. ಕುಟುಂಬದ ಪ್ರಾಮುಖ್ಯತೆಯ ವಿಷಯದಲ್ಲಿ ಅದು ಕೂಡಿಸಿದ್ದು: “ಒಂದು ಮಗು, ಅವನ ಅಥವಾ ಅವಳ ವ್ಯಕ್ತಿತ್ವದ ಪೂರ್ಣ ಮತ್ತು ಕ್ರಮಾನುಗತವಾದ ಬೆಳವಣಿಗೆಗಾಗಿ ಒಂದು ಕೌಟುಂಬಿಕ ಪರಿಸರದಲ್ಲಿ, ಸಂತೋಷ, ಪ್ರೀತಿ ಮತ್ತು ಪರಸ್ಪರ ಪರಿಗಣನೆಯ ಆವರಣದಲ್ಲಿ ಬೆಳೆಯಬೇಕು.” ಆದರೂ, ಈ ಧ್ಯೇಯವು ಸಾಧಿಸಲ್ಪಟ್ಟಿರುವಂತೆ ತೋರುವುದಿಲ್ಲ.

ಮಕ್ಕಳಿಗಾಗಿ ಒಂದು ಉತ್ತಮ ಲೋಕ ಬೇಕೆಂದು ಕೇವಲ ಮಾತಾಡಿಬಿಡುವುದು ಸಾಕಾಗುವುದಿಲ್ಲ. ನೈತಿಕ ಅವನತಿ ವ್ಯಾಪಕವಾಗಿದೆ ಮತ್ತು ಅನೇಕರು ಈ ಪರಿಸ್ಥಿತಿಯನ್ನು ಸಾಮಾನ್ಯವಾದದ್ದಾಗಿ ಪರಿಗಣಿಸುತ್ತಾರೆ. ಕಾನೂನನ್ನು ಅನುಸರಿಸುವಂತೆ ನಿರ್ಬಂಧಿಸುವುದರಿಂದ ಸರ್ವವ್ಯಾಪಿ ಭ್ರಷ್ಟತೆ ಮತ್ತು ಈರ್ಷ್ಯೆಯನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಕೆಲವೊಮ್ಮೆ ಹೆತ್ತವರು ಕೂಡ ಪ್ರೀತಿಯನ್ನು ತೋರಿಸಿ ತಮ್ಮ ಮಕ್ಕಳನ್ನು ಸಂರಕ್ಷಿಸುವ ಬದಲು, ಅನಿರ್ಬಂಧಿತ ನಡತೆಯನ್ನು ಪ್ರಚೋದಿಸುವ ವಾತಾವರಣಕ್ಕೆ ಹೆಚ್ಚನ್ನು ಕೂಡಿಸುತ್ತಾರೆ. ಆದರೆ, ಬಾಲ್ಯ ವೇಶ್ಯಾವೃತ್ತಿಯ ಅಂತ್ಯದ ವಿಷಯದಲ್ಲಿ ನಮಗೆ ಯಾವ ನಿರೀಕ್ಷೆಯಿದೆ?

ಈ ಭ್ರಷ್ಟ ವ್ಯವಸ್ಥೆಯು ಎಲ್ಲಾ ಮಕ್ಕಳಿಗೆ ಒಂದು ಪ್ರೀತಿಯ ಮನೆ ಮತ್ತು ಸುಭದ್ರ ಭವಿಷ್ಯತ್ತನ್ನು ಒದಗಿಸುವುದರಲ್ಲಿ ವಿಫಲವಾಗಿದೆಯಾದರೂ, ಅತಿ ಬೇಗನೆ ನಮ್ಮ ಸೃಷ್ಟಿಕರ್ತನು ಬಾಲ್ಯ ವೇಶ್ಯಾವೃತ್ತಿಯೊಂದಿಗೆ ಎಲ್ಲಾ ರೀತಿಯ ವಿಕೃತತೆ ಮತ್ತು ಸ್ವೇಚ್ಛಾಚಾರವನ್ನು ನಿರ್ನಾಮಮಾಡುವನು. ಶೀಘ್ರವೇ, ಲೋಕವೇ ಬೆಚ್ಚಿಬೀಳುವಂಥ ರೀತಿಯಲ್ಲಿ, ಯೆಹೋವ ದೇವರು ತನ್ನ ರಾಜ್ಯದ ಮೂಲಕ ಮಾನವ ವ್ಯವಹಾರಗಳಲ್ಲಿ ಹಸ್ತಕ್ಷೇಪಮಾಡುವನು. ಭ್ರಷ್ಟಾಚಾರಿಗಳು ಮತ್ತು ಶೋಷಣೆಮಾಡುವವರು ದೈವಿಕ ನ್ಯಾಯತೀರ್ಪಿನಿಂದ ತಪ್ಪಿಸಿಕೊಳ್ಳುವುದು ಅಸಾಧ್ಯ. ಆದರೆ ತಮ್ಮ ಜೊತೆ ಮಾನವರನ್ನು ಪ್ರೀತಿಸುವವರು ಮಾತ್ರ ದೇವರ ಹೊಸ ಲೋಕದಲ್ಲಿ ಜೀವಿಸಲಿಕ್ಕಾಗಿ ಪಾರಾಗಿ ಉಳಿಯುವರು. “ಯಥಾರ್ಥವಂತರು ದೇಶದಲ್ಲಿ ಸ್ವತಂತ್ರರಾಗಿರುವರು, ನಿರ್ದೋಷಿಗಳು ಅದರಲ್ಲಿ ನೆಲೆಯಾಗಿರುವರು. ದುಷ್ಟರಾದರೋ ದೇಶದೊಳಗಿಂದ ಕೀಳಲ್ಪಡುವರು, ದ್ರೋಹಿಗಳು ನಿರ್ಮೂಲರಾಗುವರು.”​—⁠ಜ್ಞಾನೋಕ್ತಿ 2:21, 22.

ಮಕ್ಕಳು ಮತ್ತು ಯುವ ಜನರು, ದುರ್ಗತಿ ಮತ್ತು ಲೈಂಗಿಕ ದೌರ್ಜನ್ಯದಿಂದ ವಿಮುಕ್ತರಾಗಿ ಜೀವಿಸುವುದು ಎಷ್ಟು ಉಪಶಮನದಾಯಕವಾಗಿರುವುದು ಎಂಬುದನ್ನು ತುಸು ಯೋಚಿಸಿ ನೋಡಿ! ಶೋಷಣೆ ಮತ್ತು ಹಿಂಸಾಚಾರದಿಂದಾದ ಭಾವನಾತ್ಮಕ ಮತ್ತು ಶಾರೀರಿಕ ಹಾನಿಗಳು ಕೂಡ ಗತಕಾಲದ ವಿಷಯಗಳಾಗುವವು. ಲೈಂಗಿಕ ಶೋಷಣೆಗೆ ಬಲಿಯಾದವರು ಕ್ಷೋಭೆಗೊಳಿಸುವ ನೆನಪುಗಳಿಲ್ಲದೆ ಮತ್ತು ಅದರಿಂದುಂಟಾದ ಪರಿಣಾಮಗಳನ್ನು ಅನುಭವಿಸದೇ ಜೀವಿಸಬಲ್ಲರು. “ಮೊದಲಿದ್ದದ್ದನ್ನು ಯಾರೂ ಜ್ಞಾಪಿಸಿಕೊಳ್ಳರು, ಅದು ನೆನಪಿಗೆ ಬಾರದು.”​—⁠ಯೆಶಾಯ 65:17.

ಆಗ ಯಾವ ಮಗುವೂ ದುರುಪಚಾರವನ್ನು ಅಥವಾ ಲೈಂಗಿಕ ದೌರ್ಜನ್ಯವನ್ನು ಅನುಭವಿಸಲಿಕ್ಕೆಂದು ಹುಟ್ಟದು. ಸಂತೋಷ, ಪ್ರೀತಿ, ಮತ್ತು ಪರಸ್ಪರರ ಪರಿಗಣನೆಯು ಕೇವಲ ಒಂದು ಧ್ಯೇಯವಾಗಿರದು. ದೇವರ ಹೊಸ ಲೋಕದ ನಿವಾಸಿಗಳ ಕುರಿತಾಗಿ ಯೆಶಾಯ 11:9 ಘೋಷಿಸುವುದು: “ಯಾರೂ ಕೇಡು ಮಾಡುವದಿಲ್ಲ.”

ನಿಜವಾಗಿಯೂ, ಬಡತನ, ಅಮಲೌಷಧದ ದುರುಪಯೋಗ, ಅಸಂತುಷ್ಟ ಕುಟುಂಬಗಳು, ಮತ್ತು ನೈತಿಕ ಕೆಡುಕು ಇನ್ನೆಂದಿಗೂ ಇಲ್ಲದಿರುವಾಗ ಅದೆಷ್ಟು ಆನಂದಕರವಾಗಿರುವುದು! ಶಾಂತಿ, ನೀತಿ, ಮತ್ತು ಭದ್ರತೆಯು ರಾಜ್ಯಭಾರ ನಡೆಸುವುದು. “ನನ್ನ ಜನರು ಸಮಾಧಾನನಿವಾಸದಲ್ಲಿಯೂ ನಿರ್ಭಯನಿಲಯಗಳಲ್ಲಿಯೂ ನೆಮ್ಮದಿಯ ಆಶ್ರಯಗಳಲ್ಲಿಯೂ ನೆಲೆಗೊಳ್ಳುವರು.”​—⁠ಯೆಶಾಯ 32:18. (g03 2/08)

[ಪುಟ 9ರಲ್ಲಿರುವ ಚೌಕ/ಚಿತ್ರಗಳು]

ಹೆತ್ತವರ ಆರೈಕೆ ಕುಟುಂಬದ ಒಡೆಯುವಿಕೆಯನ್ನು ತಡೆಯಬಲ್ಲದು

● “ನಾನು ಶಾಲಾ ವರ್ಷಗಳ ಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳುತ್ತಾ ಒಂದು ಕೆಲಸವನ್ನು ಕಲಿತುಕೊಳ್ಳುವಂತೆ ನನ್ನ ಹೆತ್ತವರು ಪ್ರೋತ್ಸಾಹಿಸಿದರು. ಅವರು ತಮ್ಮ ಬಯಕೆಗಳನ್ನು ನನ್ನ ಮೇಲೆ ಒತ್ತಾಯಿಸುವ ಬದಲು, ನನಗೆ ಬೇಕಾಗಿದ್ದ ಕೋರ್ಸ್‌ ಅನ್ನು ಒದಗಿಸುವ ಶಾಲೆಗಳನ್ನು ಆಯ್ದುಕೊಳ್ಳುವಂತೆ ನನಗೆ ಸಹಾಯಮಾಡಿದರು.”​—⁠ಟೈಸ್‌.

● “ನಾನು ಮತ್ತು ನನ್ನ ತಂಗಿ ಶಾಪಿಂಗ್‌ಗೆ ಹೋಗುವಾಗ, ನಮ್ಮ ತಾಯಿ ನಮ್ಮೊಟ್ಟಿಗೆ ಬರುತ್ತಿದ್ದರು. ನಾವು ದುಂದುವೆಚ್ಚಮಾಡದಂತೆ ನಮಗೆ ಸಹಾಯಮಾಡುವುದರೊಂದಿಗೆ, ನಾವು ಅತ್ಯಲಂಕೃತವಾದ ಮತ್ತು ಅತಿರೇಕವಾಗಿ ಮೈ ಬಯಲುಗೊಳಿಸುವಂತಹ ಬಟ್ಟೆಗಳನ್ನು ಧರಿಸುವುದನ್ನು ತ್ಯಜಿಸಲು ನಮಗೆ ಸಹಾಯಮಾಡಿದರು.”​—⁠ಬ್ಯಾಂಕ.

● “ನಾವು ಪಾರ್ಟಿಗಳಿಗೆ ಹೋದಾಗ, ನಮ್ಮ ಹೆತ್ತವರು ಯಾವಾಗಲೂ ಅಲ್ಲಿ ಯಾರೆಲ್ಲ ಹಾಜರಿರುವರು, ಯಾವ ರೀತಿಯ ಸಂಗೀತವು ನುಡಿಸಲ್ಪಡುವುದು, ಮತ್ತು ಪಾರ್ಟಿ ಎಷ್ಟು ಹೊತ್ತಿಗೆ ಆರಂಭವಾಗಿ ಎಷ್ಟು ಹೊತ್ತಿಗೆ ಕೊನೆಗೊಳ್ಳುವುದೆಂದೆಲ್ಲಾ ಕೇಳುತ್ತಿದ್ದರು. ಹೆಚ್ಚಿನ ಪಾರ್ಟಿಗಳಲ್ಲಿ ನಾವೆಲ್ಲರೂ ಒಂದು ಕುಟುಂಬವಾಗಿ ಹಾಜರಿರುತ್ತಿದ್ದೆವು.”​—⁠ಪ್ರೀಸೀಲ.

● “ನನ್ನ ಶೈಶವಾವಸ್ಥೆ ಮತ್ತು ಹದಿಪ್ರಾಯದಲ್ಲಿ, ನಾನು ಮತ್ತು ನನ್ನ ಹೆತ್ತವರು ಯಾವಾಗಲೂ ಒಳ್ಳೆಯ ಸಂವಾದ ಮಾಡುವವರಾಗಿದ್ದೆವು. ನನ್ನ ಸಹಪಾಠಿಯೊಬ್ಬಳು ಇದನ್ನು ಗಮನಿಸಿ, ‘ನೀನು ನಿನ್ನ ಹೆತ್ತವರೊಂದಿಗೆ ಯಾವುದೇ ಅಂಜಿಕೆಯಿಲ್ಲದೆ ಯಾವುದೇ ವಿಷಯದ ಕುರಿತು ಮಾತಾಡುವುದನ್ನು ನೋಡಿ ನಾನು ಅಸೂಯೆಪಡುತ್ತೇನೆ. ನಾನು ನನ್ನ ತಾಯಿಯೊಂದಿಗೆ ಮಾತಾಡಲು ಸಹ ಹಿಂಜರಿಯುತ್ತೇನೆ, ಮತ್ತು ಹೆಚ್ಚಾಗಿ ನಾನು ತಿಳಿದುಕೊಳ್ಳಬಯಸುವ ವಿಷಯಗಳನ್ನು ಬೇರೆಯವರಿಂದ ತಿಳಿದುಕೊಳ್ಳುತ್ತೇನೆ.’”​—⁠ಸಾಮಾರ.

● “ನಾನು ಯಾವಾಗಲೂ ಖುಷಿಯಾಗಿದ್ದ ಯುವತಿಯಾಗಿದ್ದೆ. ನಾನು ಯಾರನ್ನೂ ಸಂದೇಹಿಸುತ್ತಿರಲಿಲ್ಲ ಮತ್ತು ನಗುನಗುತ್ತಾ ಇರುತ್ತಿದ್ದೆ. ನನ್ನ ಸ್ನೇಹಿತರೊಂದಿಗೆ ಬೆರೆಯುವುದರಲ್ಲಿ ನನಗೆ ಯಾವುದೇ ಅಂಜಿಕೆ ಇರುತ್ತಿರಲಿಲ್ಲ ಮತ್ತು ನಾನು ಅವರೊಂದಿಗೆ ತಮಾಷೆಮಾಡುವುದರಲ್ಲಿ ಆನಂದಿಸುತ್ತಿದ್ದೆ. ಇದು ನನ್ನ ಸ್ವಭಾವ ಎಂಬುದನ್ನು ನನ್ನ ಹೆತ್ತವರು ಗ್ರಹಿಸಿದರು ಮತ್ತು ನನ್ನ ವರ್ತನಾಶೈಲಿಯನ್ನು ಬದಲಾಯಿಸಲು ಅವರು ಪ್ರಯತ್ನಿಸಲಿಲ್ಲ. ಆದರೆ ನಾನು ವಿರುದ್ಧ ಲಿಂಗದವರೊಂದಿಗೆ ವ್ಯವಹರಿಸುವುದರಲ್ಲಿ ಜಾಗರೂಕಳಾಗಿರಬೇಕು ಮತ್ತು ಸುನಡತೆಯನ್ನು ಕಾಪಾಡಿಕೊಳ್ಳಬೇಕು ಎಂದು ನನಗೆ ವಿನಯದಿಂದ ಅರ್ಥಮಾಡಿಸಿದರು.”​—⁠ಟೈಸ್‌.

● “ಇತರ ಹೆಚ್ಚಿನ ಯುವ ಜನರಂತೆಯೇ ನಾನೂ ವಿರುದ್ಧ ಲಿಂಗದವರ ಕಡೆಗೆ ಆಕರ್ಷಿತಳಾದೆ. ನಾನು ನನ್ನ ಪ್ರೇಮಪ್ರಸಂಗದಲ್ಲಿ ತೊಡಗಲು ಒಂದು ನಿರ್ದಿಷ್ಟ ವಯಸ್ಸನ್ನು ನನ್ನ ತಂದೆ ನಿಗದಿಪಡಿಸಿದರು. ಇದು ನನ್ನನ್ನು ಕಿರಿಕಿರಿಗೊಳಿಸಲಿಲ್ಲ. ಆದರೆ, ನನ್ನ ಹೆತ್ತವರು ನನ್ನ ಕುರಿತು ಕಾಳಜಿ ವಹಿಸುತ್ತಾರೆ ಮತ್ತು ನನ್ನನ್ನು ಭಾವೀ ಹಾನಿಯಿಂದ ಸಂರಕ್ಷಿಸಲು ಪ್ರಯತ್ನಿಸುತ್ತಿದ್ದಾರೆ ಎಂಬುದನ್ನು ನಾನು ಗ್ರಹಿಸಿದೆ.”​—⁠ಬ್ಯಾಂಕ.

● “ವಿವಾಹವನ್ನು ನಾನು ತುಂಬ ರಮ್ಯವಾದದ್ದಾಗಿ ವೀಕ್ಷಿಸಿದೆ. ನನ್ನ ಹೆತ್ತವರ ಉತ್ತಮ ಮಾದರಿಯೇ ವಿಶೇಷವಾಗಿ ನನ್ನಲ್ಲಿ ಈ ಭಾವನೆಯನ್ನು ಮೂಡಿಸಿತು. ಅವರ ಮಧ್ಯೆ ಯಾವಾಗಲೂ ಒಂದು ಒಳ್ಳೆಯ ಸಂಬಂಧವಿತ್ತು ಮತ್ತು ಅವರು ಒಳ್ಳೆಯ ಸಂವಾದವನ್ನು ಕಾಪಾಡಿಕೊಂಡರು. ನಾನು ಡೇಟಿಂಗ್‌ ಮಾಡುತ್ತಿದ್ದಾಗ, ಕೆಲವೊಂದು ಸಂದರ್ಭಗಳಲ್ಲಿ ನಾನು ಹೇಗೆ ವರ್ತಿಸಬೇಕು ಎಂದು ನನ್ನ ತಾಯಿ ಸಲಹೆಯನ್ನು ಕೊಟ್ಟರು ಎಂಬುದು ನನಗೆ ಜ್ಞಾಪಕವಿದೆ ಮತ್ತು ಇದು ನನ್ನ ವಿವಾಹದ ಮೇಲೆ ಹೇಗೆ ಪರಿಣಾಮ ಬೀರುವುದೆಂದು ಅವರು ವಿವರಿಸಿದರು.”​—⁠ಪ್ರೀಸೀಲ.

[ಪುಟ 10ರಲ್ಲಿರುವ ಚಿತ್ರ]

ದೇವರ ಹೊಸ ಲೋಕದಲ್ಲಿ, ಯಾವ ಮಗುವೂ ಅತ್ಯಾಚಾರವನ್ನು ಅನುಭವಿಸದು