ಮಾರ್ಕ 2:1-28

  • ಲಕ್ವ ಹೊಡೆದವನನ್ನ ಯೇಸು ವಾಸಿಮಾಡಿದನು (1-12)

  • ಯೇಸು ಲೇವಿಯನ್ನ ಕರಿತಾನೆ (13-17)

  • ಉಪವಾಸದ ಬಗ್ಗೆ ಪ್ರಶ್ನೆ (18-22)

  • ಯೇಸು ‘ಸಬ್ಬತ್‌ ದಿನಕ್ಕೆ ಒಡೆಯ’ (23-28)

2  ಆದ್ರೆ ಕೆಲವು ದಿನ ಆದಮೇಲೆ ಯೇಸು ಮತ್ತೆ ಕಪೆರ್ನೌಮಿಗೆ ಬಂದನು. ಆತನು ಒಂದು ಮನೆಯಲ್ಲಿ ಇದ್ದಾನೆ ಅನ್ನೋ ವಿಷ್ಯ ಜನ್ರ ಕಿವಿಗೆ ಬಿತ್ತು.+  ಮನೆಯೊಳಗೆ ಕಾಲಿಡೋಕೂ ಜಾಗ ಇಲ್ಲದಷ್ಟು ಜನ ಸೇರಿದ್ರು. ಬಾಗಿಲ ಹತ್ರ ನಿಲ್ಲೋಕೂ ಜಾಗ ಇರಲಿಲ್ಲ. ಯೇಸು ಅವ್ರಿಗೆ ಸಿಹಿಸುದ್ದಿ ಹೇಳೋಕೆ ಶುರುಮಾಡಿದನು.+  ಆಗ ಲಕ್ವ ಹೊಡೆದಿದ್ದ ಒಬ್ಬನನ್ನ ನಾಲ್ಕು ಜನ ಅಲ್ಲಿಗೆ ಹೊತ್ಕೊಂಡು ಬಂದ್ರು.+  ಆದ್ರೆ ತುಂಬ ಜನ ಅಲ್ಲಿದ್ದ ಕಾರಣ ಅವನನ್ನ ಯೇಸು ಹತ್ರ ಕರ್ಕೊಂಡು ಬರೋಕಾಗಲಿಲ್ಲ. ಅದಕ್ಕೇ ಅವರು ಮನೆ ಮೇಲೆ ಹತ್ತಿ ಆತನಿದ್ದ ಕಡೆ ಚಾವಣಿ ತೆಗೆದು ಲಕ್ವ ಹೊಡೆದವನನ್ನ ಹಾಸಿಗೆ ಸಮೇತ ಕೆಳಗೆ ಇಳಿಸಿದ್ರು.  ಯೇಸು ಅವ್ರ ನಂಬಿಕೆ ನೋಡಿ+ ಆ ಲಕ್ವ ಹೊಡೆದವನಿಗೆ “ಮಗನೇ, ನಿನ್ನ ಪಾಪಗಳನ್ನ ಕ್ಷಮಿಸಿದ್ದೀನಿ”+ ಅಂದನು.  ಅಲ್ಲಿ ಕೂತಿದ್ದ ಕೆಲವು ಪಂಡಿತರು ಮನಸ್ಸಲ್ಲೇ+  “ಈ ಮನುಷ್ಯ ಯಾಕೆ ಹೀಗೆ ಮಾತಾಡ್ತಿದ್ದಾನೆ? ಇವನು ದೇವರಿಗೆ ಅವಮಾನ ಮಾಡ್ತಾ ಇದ್ದಾನೆ. ದೇವರನ್ನ ಬಿಟ್ಟು ಇನ್ಯಾರಿಗೆ ನಮ್ಮ ಪಾಪಗಳನ್ನ ಕ್ಷಮಿಸೋ ಅಧಿಕಾರ ಇದೆ?”+ ಅಂದ್ಕೊಳ್ತಿದ್ರು.  ಇದನ್ನೇ ಅವರು ಒಬ್ರಿಗೊಬ್ರು ಮಾತಾಡ್ಕೊಳ್ತಿದ್ದಾರೆ ಅಂತ ಗೊತ್ತಾದ ತಕ್ಷಣ ಯೇಸು “ನೀವ್ಯಾಕೆ ಹೀಗೆ ಯೋಚಿಸ್ತಿದ್ದೀರಾ?+  ಲಕ್ವ ಹೊಡೆದವನಿಗೆ ‘ನಿನ್ನ ಪಾಪಗಳನ್ನ ಕ್ಷಮಿಸಿದ್ದೀನಿ’ ಅಂತ ಹೇಳೋದು ಸುಲಭನಾ? ಅಥವಾ ‘ಎದ್ದು ನಿನ್ನ ಹಾಸಿಗೆ ತಗೊಂಡು ನಡಿ’ ಅಂತ ಹೇಳೋದು ಸುಲಭನಾ? 10  ಭೂಮಿ ಮೇಲೆ ಪಾಪಗಳನ್ನ ಕ್ಷಮಿಸೋ ಅಧಿಕಾರ ಮನುಷ್ಯಕುಮಾರನಿಗೆ+ ಇದೆ ಅನ್ನೋದು ನಿಮಗೆ ಗೊತ್ತಾಗಲಿ . . .”+ ಅಂತ ಹೇಳಿ ಲಕ್ವ ಹೊಡೆದವನಿಗೆ 11  “ನಾನು ನಿನಗೆ ಹೇಳ್ತೀನಿ, ಎದ್ದು ನಿನ್ನ ಹಾಸಿಗೆ ತಗೊಂಡು ಮನೆಗೆ ಹೋಗು” ಅಂದನು. 12  ಅವನು ಪಟ್ಟಂತ ಎದ್ದು ತನ್ನ ಹಾಸಿಗೆ ತಗೊಂಡು ಎಲ್ರ ಮುಂದೆನೇ ನಡ್ಕೊಂಡು ಹೋದ. ಜನ್ರೆಲ್ಲ ಕಣ್ಣುಬಾಯಿ ಬಿಟ್ಟು ನೋಡ್ತಾ ನಿಂತ್ರು. “ಇಂಥ ವಿಷ್ಯವನ್ನ ನಾವು ಯಾವತ್ತೂ ನೋಡೇ ಇಲ್ಲ”+ ಅಂತ ಹೇಳ್ತಾ ದೇವರನ್ನ ಹೊಗಳಿದ್ರು. 13  ಯೇಸು ಮತ್ತೆ ಸಮುದ್ರ ತೀರಕ್ಕೆ ಹೋದನು. ತುಂಬ ಜನ ಆತನ ಹತ್ರ ಬರ್ತಾ ಇದ್ರು. ಆತನು ಅವ್ರಿಗೆ ಕಲಿಸೋಕೆ ಶುರುಮಾಡಿದನು. 14  ಆತನು ಅಲ್ಲಿಂದ ಹೋಗ್ತಿರುವಾಗ ತೆರಿಗೆ ವಸೂಲಿ ಕಚೇರಿಯಲ್ಲಿ ಕೂತಿದ್ದ ಅಲ್ಫಾಯನ ಮಗ ಲೇವಿಯನ್ನ ನೋಡಿದನು. ಯೇಸು ಅವನಿಗೆ “ಬಾ ನನ್ನ ಶಿಷ್ಯನಾಗು” ಅಂದನು. ಲೇವಿ ಎದ್ದು ಯೇಸು ಜೊತೆ ಹೋದ.+ 15  ಆಮೇಲೆ ಯೇಸು ಲೇವಿಯ ಮನೇಲಿ ಊಟಕ್ಕೆ ಕೂತಿದ್ದಾಗ ತುಂಬ ಜನ ತೆರಿಗೆ ವಸೂಲಿ ಮಾಡುವವರು, ಪಾಪಿಗಳು ಸಹ ಆತನ ಜೊತೆ, ಆತನ ಶಿಷ್ಯರ ಜೊತೆ ಊಟಕ್ಕೆ ಕೂತರು. ಯಾಕಂದ್ರೆ ಅಲ್ಲಿದ್ದ ತುಂಬ ಜನ ಯೇಸುವಿನ ಶಿಷ್ಯರಾಗಿದ್ರು.+ 16  ಆತನು ಪಾಪಿಗಳ ಮತ್ತು ತೆರಿಗೆ ವಸೂಲಿ ಮಾಡೋರ ಜೊತೆ ಊಟ ಮಾಡ್ತಿರೋದನ್ನ ಫರಿಸಾಯರು ಪಂಡಿತರು ನೋಡಿದ್ರು. ಅವರು ಯೇಸುವಿನ ಶಿಷ್ಯರಿಗೆ “ಇವನು ತೆರಿಗೆ ವಸೂಲಿ ಮಾಡುವವರ ಜೊತೆ, ಪಾಪಿಗಳ ಜೊತೆ ಯಾಕೆ ಊಟ ಮಾಡ್ತಾನೆ?” ಅಂತ ಕೇಳಿದ್ರು. 17  ಇದನ್ನ ಕೇಳಿ ಯೇಸು “ಆರೋಗ್ಯವಾಗಿ ಇರೋರಿಗೆ ವೈದ್ಯ ಬೇಕಾಗಿಲ್ಲ, ರೋಗಿಗಳಿಗೆ ಬೇಕು. ನಾನು ನೀತಿವಂತರನ್ನಲ್ಲ, ಪಾಪಿಗಳನ್ನ ಕರಿಯೋಕೆ ಬಂದಿದ್ದೀನಿ”+ ಅಂದನು. 18  ಯೋಹಾನನ ಶಿಷ್ಯರಿಗೆ ಮತ್ತು ಫರಿಸಾಯರಿಗೆ ಉಪವಾಸ ಮಾಡೋ ರೂಢಿ ಇತ್ತು. ಹಾಗಾಗಿ ಯೋಹಾನನ ಶಿಷ್ಯರು ಯೇಸು ಹತ್ರ ಬಂದು “ನಾವೂ ಉಪವಾಸ ಮಾಡ್ತೀವಿ, ಫರಿಸಾಯರ ಶಿಷ್ಯರೂ ಉಪವಾಸ ಮಾಡ್ತಾರೆ. ಆದ್ರೆ ನಿನ್ನ ಶಿಷ್ಯರು ಯಾಕೆ ಮಾಡಲ್ಲ?”+ ಅಂತ ಕೇಳಿದ್ರು. 19  ಅದಕ್ಕೆ ಯೇಸು “ಮದುಮಗ+ ಜೊತೆ ಇರುವಾಗ ಅವನ ಸ್ನೇಹಿತರು ಉಪವಾಸ ಮಾಡಲ್ಲ ತಾನೇ? ಮದುಮಗ ಅವ್ರ ಜೊತೆ ಇರೋ ತನಕ ಅವರು ಉಪವಾಸ ಮಾಡೋಕಾಗಲ್ಲ. 20  ಆದ್ರೆ ಮದುಮಗನನ್ನ ಕರ್ಕೊಂಡು ಹೋಗೋ ಸಮಯ ಬರುತ್ತೆ,+ ಆ ದಿನ ಅವರು ಉಪವಾಸ ಮಾಡ್ತಾರೆ. 21  ಹರಿದಿರೋ ಹಳೇ ಬಟ್ಟೆ ಮೇಲೆ ಯಾರೂ ಹೊಸ ಬಟ್ಟೆ ತುಂಡನ್ನ ತೇಪೆ ಹಾಕಲ್ಲ. ಹಾಗೆ ಹಾಕಿದ್ರೆ ಹೊಸ ಬಟ್ಟೆಯ ತುಂಡು ಮುದರಿದಾಗ ಹಳೇ ಬಟ್ಟೆ ಇನ್ನೂ ಜಾಸ್ತಿ ಹರಿದುಹೋಗುತ್ತೆ.+ 22  ಅಷ್ಟೇ ಅಲ್ಲ ಯಾರೂ ಹೊಸ ದ್ರಾಕ್ಷಾಮದ್ಯವನ್ನ ಹಳೇ ಚರ್ಮದ ಚೀಲದಲ್ಲಿ ಹಾಕಲ್ಲ. ಹಾಕಿಟ್ರೆ ಚರ್ಮದ ಚೀಲ ಹರಿದು ದ್ರಾಕ್ಷಾಮದ್ಯ ಚೆಲ್ಲುತ್ತೆ, ಚರ್ಮದ ಚೀಲನೂ ಹಾಳಾಗುತ್ತೆ. ಅದಕ್ಕೇ ಜನ ಹೊಸ ದ್ರಾಕ್ಷಾಮದ್ಯವನ್ನ ಹೊಸ ಚರ್ಮದ ಚೀಲದಲ್ಲಿ ಹಾಕ್ತಾರೆ” ಅಂದನು. 23  ಒಮ್ಮೆ ಸಬ್ಬತ್‌ ದಿನದಲ್ಲಿ ಯೇಸು ಹೊಲ ದಾಟ್ತಿದ್ದಾಗ ಆತನ ಶಿಷ್ಯರು ತೆನೆಗಳನ್ನ ಕಿತ್ತು ತಿಂತಾ ಇದ್ರು.+ 24  ಆಗ ಫರಿಸಾಯರು “ನೋಡಲ್ಲಿ! ನಿನ್ನ ಶಿಷ್ಯರು ಸಬ್ಬತ್‌ ದಿನದಲ್ಲಿ ಮಾಡಬಾರದ ಕೆಲಸ ಮಾಡ್ತಿದ್ದಾರೆ” ಅಂದ್ರು. 25  ಅದಕ್ಕೆ ಯೇಸು “ದಾವೀದ ಮತ್ತು ಅವನ ಜನ್ರು ಹಸಿದಾಗ ಅವನು ಏನು ಮಾಡಿದ ಅಂತ ನೀವು ಓದಿಲ್ವಾ?+ 26  ದಾವೀದ ದೇವಾಲಯಕ್ಕೆ ಹೋಗಿ ಪುರೋಹಿತರು ಮಾತ್ರ ತಿನ್ನಬೇಕಾಗಿದ್ದ ನೈವೇದ್ಯದ ರೊಟ್ಟಿಗಳನ್ನ+ ತಿಂದು ಅವನ ಜೊತೆ ಇದ್ದವ್ರಿಗೂ ಕೊಟ್ಟ ಅಂತ ಮುಖ್ಯ ಪುರೋಹಿತ ಅಬಿಯಾತರನ+ ಬಗ್ಗೆ ಇರೋ ದಾಖಲೆಯಲ್ಲಿ ನೀವು ಓದಿಲ್ವಾ? 27  ದೇವರು ಮನುಷ್ಯನಿಗೋಸ್ಕರ ಸಬ್ಬತ್ತನ್ನ ಮಾಡಿದ್ದಾನೆ,+ ಸಬ್ಬತ್ತಿಗೋಸ್ಕರ ಮನುಷ್ಯನನ್ನ ಮಾಡಿಲ್ಲ. 28  ಮನುಷ್ಯಕುಮಾರ ಸಬ್ಬತ್‌ ದಿನದ ಒಡೆಯನಾಗಿದ್ದಾನೆ”+ ಅಂದನು.

ಪಾದಟಿಪ್ಪಣಿ