ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮುಖಪುಟ ಲೇಖನ | ಒಳ್ಳೆಯ ಅಭ್ಯಾಸಗಳನ್ನು ಮೈಗೂಡಿಸಿಕೊಳ್ಳಿ

2. ಒಳ್ಳೇ ವಾತಾವರಣ ಇರಲಿ

2. ಒಳ್ಳೇ ವಾತಾವರಣ ಇರಲಿ
  • ಆರೋಗ್ಯಕರ ಆಹಾರ ತಿನ್ನೋಣ ಅಂತ ನಿರ್ಧಾರ ಮಾಡಿರುತ್ತೀರಾ, ಆದರೆ ನಿಮ್ಮ ಕಣ್ಮುಂದೆನೇ ಐಸ್‌ಕ್ರೀಮ್‌ ಇದ್ದಾಗ ಆ ನಿರ್ಧಾರವೆಲ್ಲಾ ನೀರುಪಾಲಾಗುತ್ತದೆ.

  • ಸಿಗರೇಟ್‌ ಸೇದುವುದನ್ನ ಬಿಡಬೇಕು ಅಂತಿರುತ್ತೀರಾ, ಇದು ಗೊತ್ತಿರೋ ನಿಮ್ಮ ಸ್ನೇಹಿತನೇ ಬಂದು ಸೇದು ಅಂತ ಸಿಗರೇಟ್‌ ಕೊಡ್ತಾನೆ.

  • ಜಾಗಿಂಗ್‍ಗೆ ಹೋಗೋಣ ಅಂತ ಅಂದುಕೊಂಡಿರುತ್ತೀರಾ, ಆದರೆ ಶೂ ಹುಡುಕಿ ಹಾಕಿಕೊಳ್ಳೋಕೂ ಸುಸ್ತು ಅನಿಸ್ತಿದೆ!

ಈ ಎಲ್ಲಾ ಸನ್ನಿವೇಶದಲ್ಲಿ ಒಂದು ಸಾಮಾನ್ಯವಾಗಿತ್ತು ಅದೇನಂತ ಗಮನಿಸಿದ್ರಾ? ನಾವು ಒಳ್ಳೇ ಅಭ್ಯಾಸಗಳನ್ನು ಬೆಳೆಸಿಕೊಂಡು ಕೆಟ್ಟ ಅಭ್ಯಾಸಗಳನ್ನು ಬಿಡುವ ನಮ್ಮ ಪ್ರಯತ್ನ ಎಷ್ಟರ ಮಟ್ಟಿಗೆ ಸಫಲ ಆಗುತ್ತೆ ಅನ್ನುವುದು ನಮ್ಮ ಸುತ್ತ-ಮುತ್ತಲಿನ ಪರಿಸ್ಥಿತಿ ಮತ್ತು ಜನರ ಮೇಲೆ ಹೊಂದಿಕೊಂಡಿರುತ್ತದೆ.

ಬೈಬಲ್‌ ತತ್ವ: “ಜಾಣನು ಕೇಡನ್ನು ಕಂಡು ಅಡಗಿಕೊಳ್ಳುವನು; ಬುದ್ಧಿಹೀನನು ಮುಂದೆ ಹೋಗಿ ನಷ್ಟಪಡುವನು.”ಜ್ಞಾನೋಕ್ತಿ 22:3.

ಮೊದಲೇ ಯೋಚನೆ ಮಾಡಿ ಅಂತ ಬೈಬಲ್‌ ಸಲಹೆ ಕೊಡುತ್ತೆ. ಈ ರೀತಿ ಯೋಚನೆ ಮಾಡಿದರೆ ನಾವು ಮಾಡಿರೋ ನಿರ್ಧಾರಗಳನ್ನು ಮುರಿಯುವಂಥ ಪರಿಸ್ಥಿತಿ ಅಥವಾ ಸನ್ನಿವೇಶದಿಂದ ದೂರ ಇರುತ್ತೇವೆ. (2 ತಿಮೊಥೆಯ 2:22) ಹೀಗೆ ನಾವು ಬುದ್ಧಿವಂತರಾಗಿ ನಡೆದುಕೊಳ್ಳಬಹುದು.

ಕೆಟ್ಟ ಅಭ್ಯಾಸಗಳಿಗೆ ಅವಕಾಶ ಕೊಡಬೇಡಿ, ಒಳ್ಳೇ ಅಭ್ಯಾಸಗಳನ್ನು ಮಾಡಲು ಸುಲಭವಾಗುವಂತೆ ನೋಡಿಕೊಳ್ಳಿ

ನೀವೇನು ಮಾಡಬಹುದು?

  • ಕೆಟ್ಟ ಅಭ್ಯಾಸಗಳಿಗೆ ಅವಕಾಶ ಕೊಡಬೇಡಿ. ಉದಾಹರಣೆಗೆ, ಕುರುಕಲು ತಿಂಡಿಗಳಿಂದ ದೂರವಿರಬೇಕು ಅಂತ ಇದ್ದರೆ ಮನೆಯಲ್ಲಿ ಅಂತ ವಸ್ತುಗಳು ಇರದಂತೆ ನೋಡಿಕೊಳ್ಳಿ. ಆಗ ನಿಮ್ಮ ನಿರ್ಧಾರಕ್ಕೆ ಅಂಟಿಕೊಳ್ಳಲು ಸಹಾಯ ಆಗುತ್ತೆ.

  • ಒಳ್ಳೇ ಅಭ್ಯಾಸಗಳನ್ನು ಮಾಡಲು ಸುಲಭವಾಗುವಂತೆ ನೋಡಿಕೊಳ್ಳಿ. ಉದಾಹರಣೆಗೆ, ಬೆಳಿಗ್ಗೆ ವ್ಯಾಯಾಮ ಮಾಡಬೇಕು ಅಂತ ನಿರ್ಧಾರ ಮಾಡಿದ್ದರೆ ಹಿಂದಿನ ರಾತ್ರಿಯೇ ಜಾಗಿಂಗ್‌ ಬಟ್ಟೆಯನ್ನು ಎತ್ತಿ ನಿಮ್ಮ ಹಾಸಿಗೆ ಹತ್ರ ಇಡಿ. ಆಗ ವ್ಯಾಯಾಮಕ್ಕೆ ಹೋಗಲು ಸುಲಭ ಆಗುತ್ತೆ.

  • ಒಳ್ಳೇ ಸ್ನೇಹಿತರನ್ನು ಆರಿಸಿಕೊಳ್ಳಿ. ನಾವು ಯಾರೊಟ್ಟಿಗೆ ಹೆಚ್ಚು ಸಮಯ ಕಳೆಯುತ್ತೇವೋ ಅವರಂತೆ ಆಗಿಬಿಡುತ್ತೇವೆ. (1 ಕೊರಿಂಥ 15:33) ಹಾಗಾಗಿ, ಕೆಟ್ಟ ಅಭ್ಯಾಸಗಳನ್ನು ಬಿಡುವ ನಿಮ್ಮ ಪ್ರಯತ್ನಕ್ಕೆ ಅಡ್ಡಗಾಲು ಹಾಕುವವರ ಸಹವಾಸದಿಂದ ದೂರವಿರಿ. ಒಳ್ಳೇ ಅಭ್ಯಾಸಗಳನ್ನು ಬೆಳೆಸಿಕೊಳ್ಳಲು ಬೆಂಬಲಿಸುವವರ ಸಹವಾಸ ಮಾಡಿ. (g16-E No. 4)