ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಊಟದ ಅಲರ್ಜಿ ಮತ್ತು ಅಸಹಿಷ್ಣುತೆ—ಇವೆರಡರ ಮಧ್ಯೆ ವ್ಯತ್ಯಾಸ ಏನು?

ಊಟದ ಅಲರ್ಜಿ ಮತ್ತು ಅಸಹಿಷ್ಣುತೆ—ಇವೆರಡರ ಮಧ್ಯೆ ವ್ಯತ್ಯಾಸ ಏನು?

ಎಮಿಲಿ: “ನಾನು ಊಟ ಮಾಡುತ್ತಿರುವಾಗ ಏನೋ ಆಗ್ತಾ ಇರೋ ತರ ಅನಿಸಿತು. ಬಾಯಲ್ಲಿ ತುರಿಕೆ ಶುರುವಾಯಿತು. ನಾಲಿಗೆ ಊದಿಕೊಳ್ಳುತ್ತಾ ಇತ್ತು. ತಲೆ ಸುತ್ತುವ ಹಾಗೆ ಅನಿಸಿತು. ಉಸಿರಾಡಕ್ಕೆ ಕಷ್ಟ ಅನಿಸಿತು. ಕೈ ಮತ್ತು ಕತ್ತಲ್ಲಿ ಸಣ್ಣ ಗುಳ್ಳೆಗಳು ಬಂತು. ಗಾಬರಿಯಾಗದೆ ಇರಲು ಪ್ರಯತ್ನಿಸಿದೆ, ಆದರೆ ಆದಷ್ಟು ಬೇಗ ಆಸ್ಪತ್ರೆಗೆ ಹೋಗಬೇಕಾಗುತ್ತೆ ಅಂತ ಗೊತ್ತಾಯಿತು.”

ಅನೇಕರು ಊಟವನ್ನು ಆನಂದಿಸುತ್ತಾ ತಿನ್ನುತ್ತಾರೆ. ಆದರೆ ಕೆಲವು ನಿರ್ದಿಷ್ಟ ಆಹಾರವನ್ನು ಕೆಲವರು ಶತ್ರುವಂತೆ ನೋಡಬೇಕಾಗುತ್ತದೆ. ಹಾಗೆ ಮಾಡಲು ಅವರಿಗೆ ಇಷ್ಟ ಇರುವುದಿಲ್ಲ. ಎಮಿಲಿಯಂತೆ ಅವರಿಗೂ ಊಟದ ಅಲರ್ಜಿ ಇದೆ. ಎಮಿಲಿಗಿರುವ ಸಮಸ್ಯೆಯನ್ನು ಅತಿಸಂವೇದನಶೀಲತೆ ಎಂದು ಕರೆಯಲಾಗಿದೆ. ಅದು ತುಂಬ ಅಪಾಯಕಾರಿ. ಆದರೆ ನೆಮ್ಮದಿಯ ವಿಷಯವೇನೆಂದರೆ ಎಲ್ಲಾ ಊಟದ ಅಲರ್ಜಿ ಹೀಗೆ ಇರುವುದಿಲ್ಲ.

ಇತ್ತೀಚಿನ ವರ್ಷಗಳಲ್ಲಿ ಊಟದ ಅಲರ್ಜಿ ಮತ್ತು ಅಸಹಿಷ್ಣುತೆ ಹೆಚ್ಚಾಗಿದೆ ಎಂದು ವರದಿಗಳು ತೋರಿಸುತ್ತವೆ. ಆದರೆ ನಿಜವಾಗಿಯೂ ಊಟದ ಅಲರ್ಜಿ ಇದೆಯಾ ಎಂದು ಡಾಕ್ಟರ್‌ ಹತ್ತಿರ ಹೋಗಿ ಖಚಿತಪಡಿಸಿಕೊಳ್ಳುವವರು ಕೆಲವರು ಮಾತ್ರ ಎಂದು ಸಮೀಕ್ಷೆ ತೋರಿಸುತ್ತದೆ.

ಊಟದ ಅಲರ್ಜಿ ಅಂದರೇನು?

ದ ಜರ್ನಲ್‌ ಆಫ್‌ ದಿ ಅಮೆರಿಕನ್‌ ಮೆಡಿಕಲ್‌ ಅಸೋಸಿಯೇಷನ್‌ ಎಂಬ ಪತ್ರಿಕೆ “ಊಟದ ಅಲರ್ಜಿಗೆ ಒಬ್ಬೊಬ್ಬರ ಒಂದೊಂದು ರೀತಿಯ ಅರ್ಥವಿವರಣೆ ಕೊಡುತ್ತಾರೆ” ಎಂದು ತಿಳಿಸುತ್ತದೆ. (ಇದು ಡಾಕ್ಟರ್‌ ಜೆನಿಫರ್‌ ಜೆ. ಶ್ನೈಡರ್‌ ಚೇಫನ್‌ ಉಸ್ತುವಾರಿ ವಹಿಸಿದ್ದ ವಿಜ್ಞಾನಿಗಳ ತಂಡದ ವರದಿ.) ಆದರೂ ಅಲರ್ಜಿ ಆಗುವುದು ಮುಖ್ಯವಾಗಿ ರೋಗ ನಿರೋಧಕ ಶಕ್ತಿಯಿಂದ ಎಂದು ಅನೇಕ ತಜ್ಞರು ನಂಬುತ್ತಾರೆ.

ಕೆಲವು ಆಹಾರಗಳಲ್ಲಿರುವ ಪ್ರೋಟೀನ್‌ ಅಲರ್ಜಿ ಉಂಟುಮಾಡುತ್ತದೆ. ನಮ್ಮ ದೇಹದಲ್ಲಿರುವ ರೋಗ ನಿರೋಧಕ ಶಕ್ತಿ ಈ ಪ್ರೋಟೀನ್‌ ಅಪಾಯಕಾರಿ ಎಂದು ತಪ್ಪಾಗಿ ಅರ್ಥಮಾಡಿಕೊಳ್ಳುತ್ತದೆ. ನಮ್ಮ ದೇಹದೊಳಗೆ ಆ ಪ್ರೋಟೀನ್‌ ಸೇರಿದಾಗ ರೋಗ ನಿರೋಧಕ ಶಕ್ತಿ ಅದನ್ನು ಎದುರಿಸಲು IgE (ಇಮ್ಯುನೋಗ್ಲೋಬುಲಿನ್‌ ಇ) ಎಂಬ ಪ್ರತಿಕಾಯವನ್ನು ಉತ್ಪತ್ತಿ ಮಾಡುತ್ತದೆ. ಅಲರ್ಜಿಯನ್ನು ಉಂಟುಮಾಡುವ ಪದಾರ್ಥವನ್ನು ಪುನಃ ತಿಂದರೆ ಈ ಮುಂಚೆ ಉತ್ಪತ್ತಿಯಾಗಿದ್ದ ಪ್ರತಿಕಾಯಗಳು ಹಿಸ್ಟಮಿನ್‌ ಮತ್ತು ಬೇರೆ ಕೆಲವು ರಾಸಾಯನಿಕಗಳನ್ನು ಉಂಟುಮಾಡುತ್ತದೆ.

ನಮ್ಮ ರೋಗ ನಿರೋಧಕ ವ್ಯವಸ್ಥೆಯಲ್ಲಿ ಹಿಸ್ಟಮಿನ್‌ ಇರುವುದರಿಂದ ನಮಗೆ ಪ್ರಯೋಜನ ಇದೆ. ಆದರೆ ಒಬ್ಬ ವ್ಯಕ್ತಿ ತಿನ್ನಬಾರದಿದ್ದ ಒಂದು ಪ್ರೋಟೀನ್‌ ಇರುವ ಆಹಾರವನ್ನು ತಿಂದಾಗ ಈ IgE ಪ್ರತಿಕಾಯಗಳು ಮತ್ತು ಹಿಸ್ಟಮಿನ್‌ ಅಲರ್ಜಿಯನ್ನು ಯಾಕೆ ಉಂಟುಮಾಡುತ್ತವೆ ಎಂದು ಸರಿಯಾಗಿ ಅರ್ಥವಾಗಿಲ್ಲ.

ಆದ್ದರಿಂದಲೇ ಕೆಲವೊಂದು ಆಹಾರ ಮೊದಲನೇ ಸಾರಿ ತಿನ್ನುವಾಗ ಅಲರ್ಜಿಯಾದಂತೆ ಅನಿಸುವುದಿಲ್ಲ. ಆದರೆ ಅದೇ ಆಹಾರ ಪುನಃ ತಿಂದಾಗ ಅಲರ್ಜಿಯಾಗುತ್ತದೆ.

ಊಟದ ಅಸಹಿಷ್ಣುತೆ ಅಂದರೇನು?

ಏನಾದರೂ ತಿಂದಾಗ ನಮಗೆ ತೊಂದರೆಯಾದರೆ ಅದನ್ನು ಊಟದ ಅಲರ್ಜಿ ಅನ್ನುತ್ತೇವೆ. ಊಟದ ಅಸಹಿಷ್ಣುತೆ ಕೂಡ ಅದೇ ರೀತಿ. ಊಟದ ಅಲರ್ಜಿ ರೋಗ ನಿರೋಧಕ ಶಕ್ತಿಯ ಪ್ರತಿಕ್ರಿಯೆಯಿಂದ ಉಂಟಾಗುತ್ತದೆ, ಆದರೆ ಊಟದ ಅಸಹಿಷ್ಣುತೆ ಪಚನ ವ್ಯವಸ್ಥೆಯ ಪ್ರತಿಕ್ರಿಯೆಯಿಂದ ಉಂಟಾಗುತ್ತದೆ. ಇದರಲ್ಲಿ ಯಾವುದೇ ಪ್ರತಿಕಾಯ ಒಳಗೂಡಿಲ್ಲ. ಒಬ್ಬ ವ್ಯಕ್ತಿಗೆ ಆಹಾರವನ್ನು ಜೀರ್ಣಗೊಳಿಸುವುದರಲ್ಲಿ ಕಷ್ಟ ಅನಿಸಬಹುದು. ಅದು ಕಿಣ್ವದ (ಎಂಜೈಮು) ಕೊರತೆಯಿಂದ ಇರಬಹುದು ಅಥವಾ ಆಹಾರದಲ್ಲಿರುವ ರಾಸಾಯನಿಕದಿಂದ ಇರಬಹುದು. ಉದಾಹರಣೆಗೆ, ಹಾಲಿನ ಪದಾರ್ಥಗಳಲ್ಲಿ ಕಂಡುಬರುವ ಸಕ್ಕರೆಯನ್ನು ಜೀರ್ಣಗೊಳಿಸಲು ಕರುಳು ಬೇಕಾದ ಕಿಣ್ವಗಳನ್ನು (ಎಂಜೈಮು) ಉತ್ಪತ್ತಿ ಮಾಡಿಲ್ಲ ಅಂದರೆ ಲ್ಯಾಕ್ಟೋಸ್‌ ಅಸಹಿಷ್ಣುತೆ ಉಂಟಾಗುತ್ತದೆ.

ಪ್ರತಿಕಾಯ ಉಂಟಾಗಲಿಲ್ಲವಾದರೆ ಮೊದಲನೇ ಸಲ ಊಟ ತಿಂದಾಗ ಊಟದ ಅಸಹಿಷ್ಣುತೆ ಇದೆ ಎಂದು ಗೊತ್ತಾಗುತ್ತದೆ. ಒಂದು ಆಹಾರ ಪದಾರ್ಥ ಕಡಿಮೆ ತಿಂದರೆ ಸಮಸ್ಯೆ ಆಗಲಿಕ್ಕಿಲ್ಲ, ಜಾಸ್ತಿ ತಿಂದರೆ ತೊಂದರೆಯಾಗುವ ಸಾಧ್ಯತೆ ಹೆಚ್ಚು. ಆದರೆ ಊಟದ ಅಲರ್ಜಿಯ ವಿಷಯದಲ್ಲಿ ಹಾಗಿಲ್ಲ. ಏಕೆಂದರೆ ಅಲರ್ಜಿಯಾಗುವ ಪದಾರ್ಥ ಸ್ವಲ್ಪವೇ ತಿಂದರೂ ಜೀವಕ್ಕೆ ಅಪಾಯ ತರುವ ಸನ್ನಿವೇಶ ಬರಬಹುದು.

ಲಕ್ಷಣಗಳು ಏನು?

ಆಹಾರದ ಅಲರ್ಜಿಯಾದರೆ ತುರಿಕೆ, ಗುಳ್ಳೆಗಳು, ಗಂಟಲಿನಲ್ಲಿ ಕಣ್ಣಿನಲ್ಲಿ ನಾಲಿಗೆಯಲ್ಲಿ ಊತ, ವಾಕರಿಕೆ, ವಾಂತಿ ಅಥವಾ ಭೇದಿಯಾಗುತ್ತದೆ. ತುಂಬ ತೀವ್ರವಾದಾಗ ರಕ್ತದ ಒತ್ತಡ ಕಡಿಮೆ ಆಗುತ್ತದೆ, ತಲೆ ಸುತ್ತು, ಪ್ರಜ್ಞೆ ಕಳಕೊಳ್ಳುವುದು ಮತ್ತು ಹೃದಯಾಘಾತ ಕೂಡ ಆಗಬಹುದು. ಈ ಅತಿಸಂವೇದನಶೀಲತೆ ತುಂಬ ವೇಗವಾಗಿ ಆಗುತ್ತದೆ. ಜೀವಕ್ಕೆ ಅಪಾಯ ತರುತ್ತದೆ.

ಯಾವುದೇ ಆಹಾರದಿಂದ ಅಲರ್ಜಿ ಆಗಬಹುದು. ಹಾಗಿದ್ದರೂ ತೀವ್ರವಾದ ಆಹಾರದ ಅಲರ್ಜಿಯಾಗುವುದು ಕೆಲವು ಆಹಾರಗಳಿಂದ. ಅದು ಹಾಲು, ಮೊಟ್ಟೆ, ಮೀನು, ಚಿಪ್ಪುಜೀವಿಗಳು, ಕಡಲೆಕಾಯಿ, ಸೋಯಾ ಬೀಜ, ಮರದಲ್ಲಿ ಬೆಳೆಯುವ ಕರಟಕಾಯಿಗಳು ಮತ್ತು ಗೋದಿ. ಒಬ್ಬ ವ್ಯಕ್ತಿಗೆ ಯಾವ ವಯಸ್ಸಿನಲ್ಲಿ ಬೇಕಾದರೂ ಅಲರ್ಜಿ ಬರಬಹುದು. ಹೆತ್ತವರಿಗಿರುವ ಅಲರ್ಜಿ ಮಕ್ಕಳಿಗೂ ಬರುವ ಸಾಧ್ಯತೆ ಹೆಚ್ಚು. ಆದರೆ ಮಕ್ಕಳು ದೊಡ್ಡವರಾಗುತ್ತಾ ಹೋದಂತೆ ಅವರಿಗಿರುವ ಅಲರ್ಜಿ ಕಡಿಮೆಯಾಗುತ್ತಾ ಹೋಗುತ್ತೆ.

ಆಹಾರದ ಅಸಹಿಷ್ಣುತೆಯ ಲಕ್ಷಣಗಳಿಗಿಂತ ತೀವ್ರವಾದ ಅಲರ್ಜಿಯ ಲಕ್ಷಣಗಳು ತುಂಬ ಅಪಾಯಕಾರಿ. ಆಹಾರದ ಅಸಹಿಷ್ಣುತೆಯಿಂದ ಹೊಟ್ಟೆ ನೋವು, ಹೊಟ್ಟೆ ಉಬ್ಬುವುದು, ವಾಯು ತುಂಬಿಕೊಳ್ಳುವುದು, ಹೊಟ್ಟೆ ನುಲಿತ, ತಲೆ ನೋವು, ಗುಳ್ಳೆಗಳು, ಸುಸ್ತು ಮತ್ತು ಅಸ್ವಸ್ಥತೆ ಅನಿಸುತ್ತದೆ. ಹಾಲಿನ ಪದಾರ್ಥಗಳು, ಗೋದಿ, ಗ್ಲೂಟನ್‌, ಮದ್ಯ ಮತ್ತು ಕಿಣ್ವ ಇಂಥ ಪದಾರ್ಥಗಳಿಂದ ಆಹಾರದ ಅಸಹಿಷ್ಣುತೆ ಉಂಟಾಗುತ್ತದೆ.

ತಪಾಸಣೆ ಮತ್ತು ಚಿಕಿತ್ಸೆ

ಊಟದ ಅಲರ್ಜಿ ಅಥವಾ ಊಟದ ಅಸಹಿಷ್ಣುತೆ ನಿಮಗಿದೆ ಎಂದು ಅನಿಸಿದರೆ ವೈದ್ಯರ ಬಳಿ ಹೋಗಿ. ಕೆಲವು ಆಹಾರ ಪದಾರ್ಥವನ್ನು ತಿನ್ನುವುದಾದರೆ ಹಾನಿಯಾಗುತ್ತದೆಂದು ಸ್ವತಃ ನೀವೇ ತೀರ್ಮಾನ ಮಾಡಬೇಡಿ. ಏಕೆಂದರೆ ಹೀಗೆ ಮಾಡುವುದರಿಂದ ನಿಮಗೆ ಗೊತ್ತಿಲ್ಲದೆ ನಿಮಗೆ ಬೇಕಾಗಿರುವ ಪೌಷ್ಟಿಕ ಆಹಾರವನ್ನು ತ್ಯಜಿಸಿದ ಹಾಗೆ ಆಗುತ್ತದೆ.

ತೀವ್ರವಾದ ಊಟದ ಅಲರ್ಜಿಗೆ ಹೆಚ್ಚಾಗಿ ಎಲ್ಲರೂ ಕೊಡುವ ಚಿಕಿತ್ಸೆ ಒಂದೇ – ತೊಂದರೆ ಕೊಡುವ ಆಹಾರ ಪದಾರ್ಥವನ್ನು ತಿನ್ನದೇ ಇರುವುದು. * ಅಲ್ಪಸ್ವಲ್ಪ ಊಟದ ಅಲರ್ಜಿ ಅಥವಾ ಊಟದ ಅಸಹಿಷ್ಣುತೆ ಆಗುತ್ತಿದೆಯಾದರೆ ಅಂಥ ಆಹಾರವನ್ನು ಯಾವಾಗಲೋ ಒಮ್ಮೆ ಸ್ವಲ್ಪ ತಿಂದರೆ ಒಳ್ಳೇದಿರುತ್ತದೆ. ಆದರೆ ಕೆಲವೊಂದು ಸನ್ನಿವೇಶಗಳಲ್ಲಿ ತೊಂದರೆಗೆ ಒಳಗಾದವರು ಆ ಆಹಾರ ಪದಾರ್ಥದಿಂದ ಸಂಪೂರ್ಣವಾಗಿ ಅಥವಾ ಸ್ವಲ್ಪ ಸಮಯದ ವರೆಗೆ ದೂರವಿರಬೇಕಾಗುತ್ತದೆ. ಇದು ಅಸಹಿಷ್ಣುತೆಯ ತೀವ್ರತೆಯ ಮೇಲೆ ಹೊಂದಿಕೊಂಡಿರುತ್ತದೆ.

ನಿಮಗೆ ಊಟದ ಅಲರ್ಜಿ ಅಥವಾ ಊಟದ ಅಸಹಿಷ್ಣುತೆಯ ತೊಂದರೆಯಿದ್ದರೆ ಭಯಪಡಬೇಡಿ. ಏಕೆಂದರೆ ಈಗಾಗಲೇ ಅನೇಕರು ಇದನ್ನು ನಿಭಾಯಿಸುವುದು ಹೇಗೆಂದು ಕಲಿತು ಬಗೆಬಗೆಯ ಪೌಷ್ಟಿಕ ಮತ್ತು ರುಚಿಕರ ಆಹಾರವನ್ನು ಆನಂದಿಸುತ್ತಿದ್ದಾರೆ. ▪ (g16-E No. 3)

^ ಪ್ಯಾರ. 19 ತೀವ್ರವಾದ ಅಲರ್ಜಿಯಿಂದ ಬಳಲುತ್ತಿರುವವರು ತಮ್ಮೊಂದಿಗೆ ಅಡ್ರೆನಲಿನ್‌ (ಎಪಿನೆಫ್ರಿನ್‌) ಎಂಬ ಇಂಜೆಕ್ಷನ್‌ ಅನ್ನು ಇಟ್ಟುಕೊಳ್ಳುವುದು ಒಳ್ಳೇದು ಎಂದು ಹೇಳಲಾಗಿದೆ. ತುರ್ತು ಪರಿಸ್ಥಿತಿ ಎದುರಾದರೆ ಇದನ್ನು ಹಾಕಿಕೊಳ್ಳಬಹುದು. ಮಕ್ಕಳಿಗೆ ಅಲರ್ಜಿ ಇದೆ ಎಂದು ಶಿಕ್ಷಕರಿಗೆ ಅಥವಾ ಅವರನ್ನು ನೋಡಿಕೊಳ್ಳುವವರಿಗೆ ಗೊತ್ತಾಗಲಿಕ್ಕಾಗಿ ಮಕ್ಕಳ ಕೈಗೆ ಏನಾದರೂ ಗುರುತನ್ನು ಹಾಕುವಂತೆ ಅಥವಾ ಅವರು ಸಂಬಂಧಪಟ್ಟ ದಾಖಲೆಗಳನ್ನು ಇಟ್ಟುಕೊಳ್ಳುವಂತೆ ಕೆಲವು ವೈದ್ಯರು ಹೇಳುತ್ತಾರೆ.