ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸಲಿಂಗಕಾಮದ ಬಗ್ಗೆ ಬೈಬಲ್‌ ಏನು ಹೇಳುತ್ತದೆ?

ಸಲಿಂಗಕಾಮದ ಬಗ್ಗೆ ಬೈಬಲ್‌ ಏನು ಹೇಳುತ್ತದೆ?

ಸಲಿಂಗ ವಿವಾಹ ಸರಿನಾ ತಪ್ಪಾ ಅಂತ ಅನೇಕದೇಶಗಳಲ್ಲಿ ಚರ್ಚೆ ನಡೆಯುತ್ತಾ ಇದೆ. ಆದರೆ ಜೂನ್‌ 26, 2015ರಂದು ಅಮೆರಿಕ ದೇಶದಾದ್ಯಂತ ಸಲಿಂಗ ವಿವಾಹವು ಕಾನೂನುಬದ್ಧವೆಂದು ಅಲ್ಲಿನ ಸರ್ವೋಚ್ಚ ನ್ಯಾಯಾಲಯವು ಪ್ರಕಟಿಸಿತು. ಇದಾದ ನಂತರ, ಅಂತರಜಾಲದಲ್ಲಿ ಈ ವಿಷಯದ ಕುರಿತು ಮಾಹಿತಿ ಹುಡುಕುವವರ ಸಂಖ್ಯೆ ಗಗನಕ್ಕೇರಿತು. “ಸಲಿಂಗಕಾಮಿಗಳು ವಿವಾಹವಾಗುವುದರ ಬಗ್ಗೆ ಬೈಬಲ್‌ ಏನು ಹೇಳುತ್ತದೆ?” ಎನ್ನುವ ಪ್ರಶ್ನೆಯನ್ನು ಅವರಲ್ಲಿ ಅನೇಕರು ಕೇಳಿದರು.

ಜನರು ಮದುವೆಯೆಂದು ಒಪ್ಪಿಕೊಳ್ಳುವ ಒಂದೇ ಲಿಂಗದವರ ಆ ಸಂಬಂಧದ ಬಗ್ಗೆಯಾಗಲಿ, ಅದರ ನಂತರ ಅವರಿಗೆ ಸಿಗುವಂಥ ಕಾನೂನುಬದ್ಧ ಹಕ್ಕುಗಳ ಬಗ್ಗೆಯಾಗಲಿ ಬೈಬಲ್‌ ನಿರ್ದಿಷ್ಟವಾಗಿ ಏನನ್ನೂ ಹೇಳುವುದಿಲ್ಲ. ಆದರೆ ನಮಗೆ ಇದಕ್ಕಿಂತ ಪ್ರಾಮುಖ್ಯವಾದ ಒಂದು ಪ್ರಶ್ನೆಗೆ ಉತ್ತರ ಬೇಕಾಗಿದೆ. ಅದೇನೆಂದರೆ, “ಸಲಿಂಗಕಾಮದ ಬಗ್ಗೆ ಬೈಬಲ್‌ ಏನು ಹೇಳುತ್ತದೆ?”

ಸಲಿಂಗಕಾಮದ ಕುರಿತು ಬೈಬಲ್‌ ಏನು ಹೇಳುತ್ತದೆಂದು ಸರಿಯಾಗಿ ತಿಳಿದುಕೊಳ್ಳದೆ, ಅನೇಕರು ತಮಗೆ ಉತ್ತರ ಗೊತ್ತು ಅಂದುಕೊಳ್ಳುತ್ತಾರೆ. ಆದರೆ ಅವರ ಉತ್ತರಗಳು ಒಂದಕ್ಕೊಂದು ತದ್ವಿರುದ್ಧವಾಗಿವೆ! ಸಲಿಂಗಕಾಮವನ್ನು ಬೈಬಲ್‌ ಕಿಂಚಿತ್ತೂ ಒಪ್ಪಿಕೊಳ್ಳುವುದಿಲ್ಲ ಎಂದು ಕೆಲವರು ಹೇಳುತ್ತಾರೆ. ಇನ್ನು ಕೆಲವರು ಬೈಬಲಿನಲ್ಲಿ ‘ನಿನ್ನ ನೆರೆಯವನನ್ನು ಪ್ರೀತಿಸಬೇಕು’ ಎಂಬ ಆಜ್ಞೆ ಇರುವುದರಿಂದ ಎಲ್ಲಾ ರೀತಿಯ ಲೈಂಗಿಕ ಜೀವನಶೈಲಿಗಳನ್ನು ಬೈಬಲ್‌ ಸರಿಯೆಂದು ಒಪ್ಪಿಕೊಳ್ಳುತ್ತದೆ ಎನ್ನುತ್ತಾರೆ.—ರೋಮನ್ನರಿಗೆ 13:9.

ಬೈಬಲ್‌ ಏನು ಹೇಳುತ್ತದೆ?

ಈ ಕೆಳಗಿನ ಹೇಳಿಕೆಗಳಲ್ಲಿ ಯಾವುದು ಸರಿಯೆಂದು ನೀವು ಒಪ್ಪುತ್ತೀರಾ?

  1. ಬೈಬಲ್‌ ಸಲಿಂಗಕಾಮಕ್ಕೆ ಸಂಬಂಧಪಟ್ಟ ವಿಷಯಗಳನ್ನು ಒಪ್ಪುವುದಿಲ್ಲ.

  2. ಬೈಬಲ್‌ ಸಲಿಂಗಕಾಮಕ್ಕೆ ಸಂಬಂಧಪಟ್ಟ ವಿಷಯಗಳನ್ನು ಒಪ್ಪುತ್ತದೆ.

  3. ಬೈಬಲ್‌ ಸಲಿಂಗಕಾಮಿಗಳನ್ನು ದ್ವೇಷಿಸುವಂತೆ ಮತ್ತು ಅವರನ್ನು ಕೀಳಾಗಿ ನೋಡುವಂತೆ ಪ್ರೋತ್ಸಾಹಿಸುತ್ತದೆ.

ಉತ್ತರಗಳು:

  1. ಸರಿ. ಯಾಕೆಂದರೆ, ‘ಪುರುಷಗಾಮಿಗಳು ದೇವರ ರಾಜ್ಯಕ್ಕೆ ಬಾಧ್ಯರಾಗುವುದಿಲ್ಲ’ ಎಂದು ಬೈಬಲ್‌ ಹೇಳುತ್ತದೆ. (1 ಕೊರಿಂಥ 6:9, 10) ಇದೇ ತತ್ವ ಸ್ತ್ರೀಯರಿಗೂ ಅನ್ವಯಿಸುತ್ತದೆ.—ರೋಮನ್ನರಿಗೆ 1:26.

  2. ತಪ್ಪು. ಯಾಕೆಂದರೆ, ಗಂಡು ಮತ್ತು ಹೆಣ್ಣಿನ ನಡುವೆ ಮಾತ್ರ ಲೈಂಗಿಕ ಸಂಬಂಧವಿರಬೇಕು ಮತ್ತು ಅವರು ಮದುವೆಯಾಗಿರಬೇಕು ಎಂದು ಬೈಬಲ್‌ ಕಲಿಸುತ್ತದೆ. —ಆದಿಕಾಂಡ 1:27, 28; ಜ್ಞಾನೋಕ್ತಿ 5:18, 19.

  3. ತಪ್ಪು. ಯಾಕೆಂದರೆ, ಸಲಿಂಗಕಾಮಕ್ಕೆ ಸಂಬಂಧಪಟ್ಟ ವಿಷಯಗಳನ್ನು ಬೈಬಲ್‌ ಒಪ್ಪುವುದಿಲ್ಲವಾದರೂ ಸಲಿಂಗಕಾಮಿಗಳನ್ನು ದ್ವೇಷಿಸಬೇಕು, ಕೀಳಾಗಿ ನೋಡಬೇಕು ಅಥವಾ ಅವರನ್ನು ಹಿಂಸಿಸಬೇಕು ಎಂದು ಬೈಬಲ್‌ ಪ್ರೋತ್ಸಾಹಿಸುವುದಿಲ್ಲ.—ರೋಮನ್ನರಿಗೆ 12:18. [1]

ಯೆಹೋವನ ಸಾಕ್ಷಿಗಳು ಏನು ಹೇಳುತ್ತಾರೆ?

ಬೈಬಲಿನಲ್ಲಿರುವ ನೈತಿಕ ಮಟ್ಟಗಳನ್ನು ಪಾಲಿಸುವುದರಿಂದ ಮಾತ್ರ ಒಳ್ಳೇ ಜೀವನ ಸಿಗುತ್ತದೆ ಎಂದು ಯೆಹೋವನ ಸಾಕ್ಷಿಗಳು ನಂಬುತ್ತಾರೆ. ಅಲ್ಲದೆ ಅವುಗಳನ್ನು ಅವರು ತಪ್ಪದೆ  ಪಾಲಿಸುತ್ತಾರೆ. (ಯೆಶಾಯ 48:17) [2] ಹಾಗಾಗಿ ಅವರು ಎಲ್ಲ ರೀತಿಯ ತಪ್ಪಾದ ಲೈಂಗಿಕ ನಡತೆಯಿಂದ ದೂರವಿರುತ್ತಾರೆ. ಇದರಲ್ಲಿ ಸಲಿಂಗಕಾಮವೂ ಸೇರಿದೆ. (1 ಕೊರಿಂಥ 6:18) [3] ಇಂಥ ಜೀವನ ಶೈಲಿ ನಡೆಸುವ ಆಯ್ಕೆಯನ್ನು ಯೆಹೋವನ ಸಾಕ್ಷಿಗಳು ಮಾಡಿದ್ದಾರೆ. ಹೀಗೆ ಮಾಡಲು ಅವರಿಗೆ ಸಂಪೂರ್ಣ ಹಕ್ಕಿದೆ.

ಸಾಕ್ಷಿಗಳು ಸುವರ್ಣ ನಿಯಮವನ್ನು ಪಾಲಿಸಲು ಆದಷ್ಟು ಪ್ರಯತ್ನ ಮಾಡುತ್ತಾರೆ

ಅದೇ ಸಮಯದಲ್ಲಿ ಯೆಹೋವನ ಸಾಕ್ಷಿಗಳು “ಎಲ್ಲ ಜನರೊಂದಿಗೆ ಶಾಂತಿಯನ್ನು” ಕಾಪಾಡಿಕೊಳ್ಳಲು ಪ್ರಯತ್ನಿಸುತ್ತಾರೆ. (ಇಬ್ರಿಯ 12:14) ಅವರು ಸಲಿಂಗಕಾಮಕ್ಕೆ ಸಂಬಂಧಪಟ್ಟ ವಿಷಯಗಳನ್ನು ತ್ಯಜಿಸುತ್ತಾರೆ ಎನ್ನುವುದೇನೋ ನಿಜ, ಆದರೆ ತಮ್ಮ ನಂಬಿಕೆಗಳನ್ನು ಇತರರ ಮೇಲೆ ಹೇರುವುದಿಲ್ಲ. ಅಲ್ಲದೆ, ಸಲಿಂಗಕಾಮಿಗಳನ್ನು ಹಿಂಸಿಸುವ ಯಾವುದೇ ರೀತಿಯ ಚಟುವಟಿಕೆಯಲ್ಲಿ ಕೈಹಾಕುವುದಿಲ್ಲ. ಅಂಥ ವಿಷಯಗಳನ್ನು ಕೇಳಿ ಸಂತೋಷಿಸುವುದೂ ಇಲ್ಲ. ಯೆಹೋವನ ಸಾಕ್ಷಿಗಳು ಬೈಬಲಿನಲ್ಲಿರುವ ಸುವರ್ಣ ನಿಯಮವನ್ನು ಪಾಲಿಸಲು ತಮ್ಮಿಂದ ಆಗುವಂಥ ಎಲ್ಲ ಪ್ರಯತ್ನ ಮಾಡುತ್ತಾರೆ. ಹಾಗಾಗಿ ಇತರರು ತಮ್ಮೊಂದಿಗೆ ಹೇಗೆ ವ್ಯವಹರಿಸಬೇಕು ಎಂದು ಅಂದುಕೊಳ್ಳುತ್ತಾರೋ ಅದೇ ರೀತಿಯಲ್ಲಿ ಇತರರೊಂದಿಗೆ ಅವರೂ ವ್ಯವರಿಸುತ್ತಾರೆ.—ಮತ್ತಾಯ 7:12.

ಸಲಿಂಗಕಾಮಿಗಳನ್ನು ಕೀಳಾಗಿ ನೋಡುವಂತೆ ಬೈಬಲ್‌ ಹೇಳುತ್ತದಾ?

ಸಲಿಂಗಕಾಮಿಗಳನ್ನು ಕೀಳಾಗಿ ನೋಡುವಂತೆ ಬೈಬಲ್‌ ಪ್ರೋತ್ಸಾಹಿಸುತ್ತದೆಂದು ಮತ್ತು ಯಾರು ಬೈಬಲಿನ ನೈತಿಕ ಮಟ್ಟಗಳ ಪ್ರಕಾರ ನಡೆಯುತ್ತಾರೋ ಅವರು ಸಲಿಂಗಕಾಮಿಗಳನ್ನು ದ್ವೇಷಿಸುತ್ತಾರೆಂದು ಕೆಲವರ ಅಭಿಪ್ರಾಯ. ಅಂಥವರು ಹೇಳುವುದು: ‘ಜನರು ಅಷ್ಟೇನೂ ವಿಶಾಲವಾಗಿ ಯೋಚಿಸದಿದ್ದ ಸಮಯದಲ್ಲಿ ಬೈಬಲನ್ನು ಬರೆಯಲಾಯಿತು. ಆದರೆ ಇವತ್ತು ನಾವು ಎಲ್ಲಾ ಬಣ್ಣ, ಭಾಷೆ, ದೇಶ, ಲಿಂಗದವರನ್ನು ಒಪ್ಪುತ್ತೇವೆ.’ ಇವರ ಈ ಹೇಳಿಕೆ ಹೇಗಿದೆ ಅಂದರೆ, ಬೇರೆ ಬಣ್ಣದವರನ್ನು ನಾವು ಹೇಗೆ ಈಗ ಒಪ್ಪಿಕೊಂಡಿದ್ದೇವೋ ಹಾಗೆಯೇ ಸಲಿಂಗಕಾಮವನ್ನೂ ಒಪ್ಪಿಕೊಳ್ಳಬೇಕು ಎಂದಾಗಿದೆ.’ ಈ ರೀತಿಯ ಹೋಲಿಕೆ ಸರಿನಾ? ಖಂಡಿತ ಇಲ್ಲ.

ಸಲಿಂಗಕಾಮವನ್ನು ದ್ವೇಷಿಸುವುದಕ್ಕೂ ಸಲಿಂಗಕಾಮಿಗಳನ್ನು ದ್ವೇಷಿಸುವುದಕ್ಕೂ ವ್ಯತ್ಯಾಸವಿದೆ. ಕ್ರೈಸ್ತರು ಎಲ್ಲ ರೀತಿಯ ಜನರನ್ನು ಗೌರವಿಸಬೇಕೆಂದು ಬೈಬಲ್‌ ಹೇಳುತ್ತದೆ. (1 ಪೇತ್ರ 2:17) [4] ಇದರರ್ಥ, ಅವರು ಎಲ್ಲ ರೀತಿಯ ನಡತೆಯನ್ನು ಒಪ್ಪಿಕೊಳ್ಳಲೇಬೇಕು ಎಂದಲ್ಲ ತಾನೆ?

ಇದನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಈ ಹೋಲಿಕೆಯನ್ನು ಗಮನಿಸಿ: ಸಿಗರೇಟ್‌ ಸೇದುವುದು ಅಪಾಯಕಾರಿ, ಅದು ಅಸಹ್ಯ ಎಂದು ನೀವು ಭಾವಿಸುತ್ತೀರ ಅಂದುಕೊಳ್ಳಿ. ಒಂದುವೇಳೆ ನಿಮ್ಮ ಕೆಲಸದ ಸ್ಥಳದಲ್ಲಿ ಯಾರಾದರೂ ಸಿಗರೇಟ್‌ ಸೇದುವವರು ಇದ್ದರೆ ನೀವೇನು ಮಾಡುತ್ತೀರಾ? ಈ ವಿಷಯದಲ್ಲಿ ನಿಮ್ಮ ಅಭಿಪ್ರಾಯ ಮತ್ತು ಆ ವ್ಯಕ್ತಿಯ ಅಭಿಪ್ರಾಯ ಬೇರೆಬೇರೆ ಆಗಿರುವುದರಿಂದ ನಿಮ್ಮ ಯೋಚನೆ ವಿಶಾಲವಾಗಿಲ್ಲ ಅಂತಾನಾ? ಆ ವ್ಯಕ್ತಿ ಸಿಗರೇಟ್‌ ಸೇದುತ್ತಾನೆ, ನೀವು ಸೇದುವುದಿಲ್ಲ ಅಂದಮಾತ್ರಕ್ಕೆ ನೀವು ಅವನನ್ನು ದ್ವೇಷಿಸುತ್ತೀರಾ? ‘ಸಿಗರೇಟ್‌ ಸೇದಿ, ಅದರ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಬದಲಾಯಿಸಿಕೊಳ್ಳಿ’ ಅಂತ ಆ ವ್ಯಕ್ತಿ ನಿಮಗೆ ಒತ್ತಾಯಮಾಡಿದರೆ ಅವನ ಬಗ್ಗೆ ಏನು ಹೇಳಬಹುದು? ಅವನ ಯೋಚನೆ ವಿಶಾಲವಾಗಿಲ್ಲ ಮತ್ತು ಅವನು ನಿಮ್ಮನ್ನು ದ್ವೇಷಿಸುತ್ತಾನೆ ಅಂತ ತಾನೆ?

ಯೆಹೋವನ ಸಾಕ್ಷಿಗಳು ಬೈಬಲಿನಲ್ಲಿರುವ ನೈತಿಕ ಮಟ್ಟದ ಪ್ರಕಾರ ಜೀವಿಸುವ ಆಯ್ಕೆಮಾಡಿದ್ದಾರೆ. ಬೈಬಲ್‌ ಯಾವುದನ್ನು ತಪ್ಪೆಂದು ಹೇಳುತ್ತದೋ ಅಂತಹ ನಡವಳಿಕೆಗಳನ್ನು ಅವರು ಒಪ್ಪುವುದಿಲ್ಲ. ಆದರೆ ಅವರು ತಮಗೆ ವಿರುದ್ಧವಾದ ಅಭಿಪ್ರಾಯಗಳಿರುವಂಥ ಜನರನ್ನು ಹೀಯಾಳಿಸುವುದೂ ಇಲ್ಲ, ಕೀಳಾಗಿ ನೋಡುವುದೂ ಇಲ್ಲ.

ಬೈಬಲ್‌ ಹೇಳುವುದು ತುಂಬ ಕಟುವಾಗಿದೆಯಾ?

ಸಲಿಂಗಕಾಮದ ಆಸೆಯಿರುವ ವ್ಯಕ್ತಿಗಳ ಬಗ್ಗೆ ಏನು? ಅವರಿಗೆ ಹುಟ್ಟುವಾಗಲೇ ಅಂಥ ಆಸೆಯಿರುತ್ತದಾ? ಒಂದುವೇಳೆ ಅವರಿಗೆ ಹುಟ್ಟುವಾಗಲೇ ಅಂಥ ಆಸೆಯಿದ್ದರೆ, ಅಂಥ ಆಸೆ ತಪ್ಪು ಮತ್ತು ಅದನ್ನು ಬಿಟ್ಟುಬಿಡಬೇಕು ಎಂದು ಬೈಬಲ್‌ ಹೇಳುವುದು ಸರಿನಾ? ಅದು ತುಂಬ ಕಟುವಾದ ಆಜ್ಞೆಯಲ್ವಾ?

ಸಲಿಂಗಕಾಮದ ಆಸೆ ಹುಟ್ಟಿನಿಂದಲೇ ಇರುತ್ತದೆಂದು ಬೈಬಲ್‌ ಹೇಳುವುದಿಲ್ಲವಾದರೂ ಕೆಲವು ಗುಣಗಳು ಮನುಷ್ಯರಲ್ಲಿ ಬಲವಾಗಿ ಬೇರೂರಿರುತ್ತವೆ ಎಂದು ಒಪ್ಪಿಕೊಳ್ಳುತ್ತದೆ. ಆದರೆ ನಾವು ದೇವರನ್ನು ಮೆಚ್ಚಿಸಲಿಕ್ಕಾಗಿ ಕೆಲವು ನಡವಳಿಕೆಗಳನ್ನು ಸಂಪೂರ್ಣವಾಗಿ ತ್ಯಜಿಸಲೇಬೇಕು ಎಂದು ಬೈಬಲ್‌ ಹೇಳುತ್ತದೆ. ಅದರಲ್ಲಿ ಸಲಿಂಗಕಾಮದ ಆಸೆಯೂ ಒಂದು.—2 ಕೊರಿಂಥ 10:4, 5.

ಈ ವಿಷಯದ ಬಗ್ಗೆ ಬೈಬಲ್‌ ಹೇಳುವ ಮಾತು ಕಟುವಾಗಿದೆ ಎಂದು ಕೆಲವರು ಹೇಳುತ್ತಾರೆ. ಅವರು ಹೀಗೆ ಹೇಳಲು ಕಾರಣವೇನೆಂದರೆ, ‘ಮನುಷ್ಯನು ತನ್ನ ಆಸೆಗಳ ಪ್ರಕಾರ ಅಥವಾ ಲೈಂಗಿಕ ಬಯಕೆಗಳ ಪ್ರಕಾರ ನಡೆದುಕೊಳ್ಳುವುದು ತುಂಬ ಪ್ರಾಮುಖ್ಯ. ಹಾಗಾಗಿ ಅವುಗಳಿಗೆ ಬೆಲೆ ಕೊಡಲೇಬೇಕು. ಆ ಬಯಕೆಗಳನ್ನು ನಿಯಂತ್ರಿಸಲೂ ಬಾರದು, ನಿಯಂತ್ರಿಸಲು ಆಗುವುದೂ ಇಲ್ಲ’ ಎನ್ನುವುದು ಅವರ ಅಭಿಪ್ರಾಯ. ಆದರೆ ಅಂಥ ಆಸೆಗಳನ್ನು ನಿಯಂತ್ರಿಸಬಹುದು ಎಂದು ಹೇಳುವ ಮೂಲಕ ಬೈಬಲ್‌ ಮನುಷ್ಯರನ್ನು ಗೌರವಿಸುತ್ತದೆ. ಮನುಷ್ಯರಿಗೂ ಪ್ರಾಣಿಗಳಿಗೂ ವ್ಯತ್ಯಾಸವಿದೆ. ಮನುಷ್ಯರಿಗೆ ತಮ್ಮ ಆಸೆಗಳನ್ನು ನಿಯಂತ್ರಿಸಲು ಖಂಡಿತ ಸಾಧ್ಯ.—ಕೊಲೊಸ್ಸೆ 3:5. [5]

ಈ ಹೋಲಿಕೆಯನ್ನು ಗಮನಿಸಿ: ಕೆಲವು ಪ್ರವೃತ್ತಿಗಳು ಅಂದರೆ ಕೋಪ, ಕ್ರೋಧ ಇವೆಲ್ಲ ಹುಟ್ಟಿನಿಂದಲೇ ಒಬ್ಬನಲ್ಲಿ ಬಂದಿರಬಹುದೆಂದು  ಕೆಲವು ನಿಪುಣರು ಹೇಳುತ್ತಾರೆ. ಬೈಬಲ್‌ ಇದರ ಬಗ್ಗೆ ಏನೂ ಹೇಳುವುದಿಲ್ಲವಾದರೂ ಕೆಲವರು ‘ಕೋಪಿಷ್ಠರು’ ಅಥವಾ ‘ಕ್ರೋಧಶೀಲರು’ ಆಗಿರುತ್ತಾರೆಂದು ಅದು ಒಪ್ಪಿಕೊಳ್ಳುತ್ತದೆ. (ಜ್ಞಾನೋಕ್ತಿ 22:24; 29:22) ಹಾಗಿದ್ದರೂ “ಕೋಪವನ್ನು ಅಣಗಿಸಿಕೋ; ರೋಷವನ್ನು ಬಿಡು” ಎಂಬ ಬುದ್ಧಿವಾದವನ್ನು ಬೈಬಲ್‌ ಕೊಡುತ್ತದೆ.—ಕೀರ್ತನೆ 37:8; ಎಫೆಸ 4:31.

ಇದನ್ನು ಕೆಲವರು ಒಪ್ಪಲಿಕ್ಕಿಲ್ಲ. ಹುಟ್ಟಿನಿಂದಲೇ ಅಂಥ ಪ್ರವೃತ್ತಿ ಇರುವವರಿಂದ ಬೈಬಲ್‌ ಅದನ್ನು ಬಿಟ್ಟುಬಿಡುವಂತೆ ಕೇಳಿಕೊಳ್ಳುವುದು ಸರಿಯಲ್ಲ. ಅದು ಬಹಳ ಕಟುವಾಗಿದೆ ಎಂದು ಅವರು ಅಂದುಕೊಳ್ಳುತ್ತಾರೆ. ನಿಜ ಏನೆಂದರೆ, ಇಂಥ ಪ್ರವೃತ್ತಿ ಹುಟ್ಟಿನಿಂದಲೇ ಇರುತ್ತದೆಂದು ಹೇಳುವ ನಿಪುಣರೇ ಜನರಿಗೆ ಅದರಿಂದ ಹೊರಬರಲು ಸಾಕಷ್ಟು ಸಹಾಯಮಾಡುತ್ತಿದ್ದಾರೆ.

ಅದೇ ರೀತಿ ಯೆಹೋವನ ಸಾಕ್ಷಿಗಳು ಸಹ ಯಾವುದನ್ನು ಬೈಬಲ್‌ ತಪ್ಪೆಂದು ಹೇಳುತ್ತದೋ ಅಂಥ ಎಲ್ಲಾ ನಡವಳಿಕೆಯನ್ನು ಬಿಟ್ಟುಬಿಡಲು ಸಾಕಷ್ಟು ಪ್ರಯತ್ನಮಾಡುತ್ತಾರೆ. ಮದುವೆಗೆ ಮೊದಲೇ ಒಂದು ಗಂಡು ಮತ್ತು ಹೆಣ್ಣು ಇಟ್ಟುಕೊಳ್ಳುವ ಲೈಂಗಿಕ ಸಂಬಂಧವೂ ಇದರಲ್ಲಿ ಸೇರಿದೆ. ಇಂಥ ಎಲ್ಲ ಸನ್ನಿವೇಶಗಳಲ್ಲಿ ಬೈಬಲಿನ ಈ ತತ್ವ ಅನ್ವಯಿಸುತ್ತದೆ: “ನಿಮ್ಮಲ್ಲಿ ಪ್ರತಿಯೊಬ್ಬನು ಪವಿತ್ರತೆಯಲ್ಲಿಯೂ ಗೌರವದಲ್ಲಿಯೂ ತನ್ನ ಸ್ವಂತ ದೇಹವನ್ನು ಸ್ವಾಧೀನದಲ್ಲಿ ಇಟ್ಟುಕೊಳ್ಳುವುದು ಹೇಗೆಂಬುದನ್ನು ತಿಳಿದವನಾಗಿರಬೇಕು, . . . ದುರಾಶೆಭರಿತ ಕಾಮಾಭಿಲಾಷೆಯನ್ನು ಹೊಂದಿರಬಾರದು.”—1 ಥೆಸಲೊನೀಕ 4:4, 5.

“ನಿಮ್ಮಲ್ಲಿ ಕೆಲವರು ಅಂಥವರಾಗಿದ್ದಿರಿ”

ಒಂದನೇ ಶತಮಾನದಲ್ಲಿ ಕ್ರೈಸ್ತರಾಗಲು ಬಯಸಿದ ಅನೇಕರು ಬೇರೆಬೇರೆ ಹಿನ್ನೆಲೆಯಿಂದ ಬಂದವರಾಗಿದ್ದರು. ಬೇರೆಬೇರೆ ರೀತಿಯ ಜೀವನ ಶೈಲಿಯನ್ನು ನಡೆಸಿದ್ದರು. ತಮ್ಮ ಜೀವನದಲ್ಲಿ ದೊಡ್ಡದೊಡ್ಡ ಬದಲಾವಣೆಗಳನ್ನು ಮಾಡಿಕೊಂಡರು. ಉದಾಹರಣೆಗೆ, ‘ಜಾರರ, ವಿಗ್ರಹಾರಾಧಕರ, ವ್ಯಭಿಚಾರಿಗಳ, ಅಸ್ವಾಭಾವಿಕ ಲೈಂಗಿಕ ಉದ್ದೇಶವಿರುವ ಪುರುಷರ, ಪುರುಷಗಾಮಿಗಳ’ ಬಗ್ಗೆ ಬೈಬಲ್‌ ಮಾತಾಡುತ್ತಾ ಕೊನೆಯಲ್ಲಿ “ನಿಮ್ಮಲ್ಲಿ ಕೆಲವರು ಅಂಥವರಾಗಿದ್ದಿರಿ” ಎಂದು ಹೇಳಿತು.—1 ಕೊರಿಂಥ 6:9-11.

“ನಿಮ್ಮಲ್ಲಿ ಕೆಲವರು ಅಂಥವರಾಗಿದ್ದಿರಿ” ಎಂಬ ಮಾತಿನ ಅರ್ಥ ಯಾರು ಸಲಿಂಗಕಾಮದಲ್ಲಿ ಒಳಗೂಡಿದ್ದರೋ ಅವರು ಒಮ್ಮೆ ಅದನ್ನು ಬಿಟ್ಟುಬಿಟ್ಟರೆ ಮುಂದೆ ಎಂದಿಗೂ ಅಂಥ ಬಯಕೆಗಳು ಬರುವುದೇ ಇಲ್ಲ ಎಂದಾಗಿತ್ತಾ? ಖಂಡಿತ ಇಲ್ಲ. ಯಾಕೆಂದರೆ ಬೈಬಲ್‌ ಹೀಗೆ ಪ್ರೋತ್ಸಾಹಿಸುತ್ತದೆ: “ಪವಿತ್ರಾತ್ಮವನ್ನು ಅನುಸರಿಸಿ ನಡೆಯುತ್ತಾ ಇರಿ, ಆಗ ನೀವು ಶಾರೀರಿಕ ಬಯಕೆಗಳನ್ನು ಎಂದಿಗೂ ನಡೆಸುವವರಾಗಿರುವುದಿಲ್ಲ.”—ಗಲಾತ್ಯ 5:16.

ಗಮನಿಸಿ ಕ್ರೈಸ್ತರಿಗೆ ಯಾವತ್ತಿಗೂ ಇಂಥ ಕೆಟ್ಟ ಬಯಕೆಗಳು ಬರುವುದಿಲ್ಲವೆಂದು ಬೈಬಲ್‌ ಹೇಳುವುದಿಲ್ಲ. ಬದಲಿಗೆ ಅವರು ಅಂಥ ಬಯಕೆಗಳನ್ನು ನಿಯಂತ್ರಿಸುವ ಆಯ್ಕೆ ಮಾಡುತ್ತಾರೆ ಎಂದು ಹೇಳುತ್ತದೆ. ಅಂಥ ಬಯಕೆಗಳನ್ನು ನಿಯಂತ್ರಿಸಲು ಅವರು ಕಲಿಯುತ್ತಾರೆಯೇ ಹೊರತು ಆ ಬಯಕೆಗಳ ಬಗ್ಗೆಯೇ ಯೋಚಿಸುತ್ತಾ ಅವುಗಳನ್ನು ತೃಪ್ತಿಪಡಿಸಿಕೊಳ್ಳಲು ಹೋಗುವುದಿಲ್ಲ.—ಯಾಕೋಬ 1:14, 15. [6]

ಹಾಗಾಗಿಯೇ ಬಯಕೆಗಳು ಬರುವುದಕ್ಕೂ ಮತ್ತು ಬಯಕೆಗಳನ್ನು ಕ್ರಿಯೆಯಲ್ಲಿ ಹಾಕುವುದಕ್ಕೂ ಇರುವ ವ್ಯತ್ಯಾಸವನ್ನು ಬೈಬಲ್‌ ಸ್ಪಷ್ಟವಾಗಿ ತಿಳಿಸುತ್ತದೆ. (ರೋಮನ್ನರಿಗೆ 7:16-25) ಕೋಪ, ವ್ಯಭಿಚಾರ ಮತ್ತು ದುರಾಶೆ ಇಂಥ ವಿಷಯಗಳ ಬಗ್ಗೆ ಮನಸ್ಸಿನಲ್ಲಿ ಯೋಚಿಸದೆ ಇರುವ ಮೂಲಕ ಒಬ್ಬ ವ್ಯಕ್ತಿ ಅವುಗಳಿಂದ ದೂರವಿರಬಹುದು. ಅದೇ ರೀತಿಯಲ್ಲಿ ಸಲಿಂಗಕಾಮದ ಬಗ್ಗೆ ಯೋಚಿಸದೆ ಇದ್ದರೆ ಅದನ್ನು ಸಹ ನಿಯಂತ್ರಿಸಬಹುದು.—1 ಕೊರಿಂಥ 9:27; 2 ಪೇತ್ರ 2:14, 15.

ಬೈಬಲಿನಲ್ಲಿರುವ ನೈತಿಕ ಮಟ್ಟಗಳನ್ನು ಯೆಹೋವನ ಸಾಕ್ಷಿಗಳು ಅಮೂಲ್ಯವಾಗಿ ಕಾಣುತ್ತಾರೆ. ಆದರೆ ತಮ್ಮ ನಂಬಿಕೆಗಳನ್ನು ಇತರರ ಮೇಲೆ ಹೇರುವುದಿಲ್ಲ. ಅಲ್ಲದೆ, ತಮ್ಮ ನಂಬಿಕೆಗಳಿಗೆ ವಿರುದ್ಧವಾಗಿರುವ ಜೀವನ ಶೈಲಿಯನ್ನು ನಡೆಸುತ್ತಿರುವವರಿಗಾಗಿ ಇರುವಂಥ ಮಾನವ ಹಕ್ಕುಗಳನ್ನು ಬದಲಾಯಿಸಲು ಅವರು ಪ್ರಯತ್ನಿಸುವುದಿಲ್ಲ. ಯೆಹೋವನ ಸಾಕ್ಷಿಗಳು ಒಂದು ಉತ್ತಮವಾದ ವಿಷಯವನ್ನು ಹೇಳಲು ಬಯಸುತ್ತಾರೆ ಮತ್ತು ಅದನ್ನು ಕೇಳಲು ಇಷ್ಟಪಡುವಂಥ ಪ್ರತಿಯೊಬ್ಬರಿಗೂ ಅವರು ಅದನ್ನು ಹುರುಪಿನಿಂದ ತಿಳಿಸುತ್ತಾರೆ.—ಅಪೊಸ್ತಲರ ಕಾರ್ಯಗಳು 20:20. ▪ (g16-E No. 4)

^ 1. ರೋಮನ್ನರಿಗೆ 12:18: “ಎಲ್ಲರೊಂದಿಗೆ ಶಾಂತಿಶೀಲರಾಗಿರಿ.”

^ 2. ಯೆಶಾಯ 48:17: ‘ನಾನೇ ನಿನ್ನ ದೇವರಾದ ಯೆಹೋವನು, ನಿನಗೆ ವೃದ್ಧಿಮಾರ್ಗವನ್ನು ಬೋಧಿಸುವವನಾಗಿದ್ದೇನೆ.’

^ 3. 1 ಕೊರಿಂಥ 6:18: “ಜಾರತ್ವಕ್ಕೆ [ಅಂದರೆ, ಲೈಂಗಿಕ ಅನೈತಿಕತೆಯಿಂದ] ದೂರವಾಗಿ ಓಡಿಹೋಗಿರಿ.”

^ 4. 1 ಪೇತ್ರ 2:17: “ಎಲ್ಲ ರೀತಿಯ ಜನರನ್ನು ಗೌರವಿಸಿರಿ.”

^ 5. ಕೊಲೊಸ್ಸೆ 3:5: “ಆದುದರಿಂದ ಜಾರತ್ವ, ಅಶುದ್ಧತೆ, ಕಾಮಾಭಿಲಾಷೆ, ಹಾನಿಕಾರಕ ಆಶೆ . . . ಇವುಗಳಿಗೆ ಸಂಬಂಧಿಸಿದ ಭೂಸಂಬಂಧವಾದ ನಿಮ್ಮ ದೈಹಿಕ ಅಂಗಗಳನ್ನು ಸಾಯಿಸಿರಿ.”

^ 6. ಯಾಕೋಬ 1:14, 15: “ಪ್ರತಿಯೊಬ್ಬನು ತನ್ನ ಸ್ವಂತ ಆಶೆಯಿಂದ ಸೆಳೆಯಲ್ಪಟ್ಟು ಮರುಳುಗೊಳಿಸಲ್ಪಟ್ಟವನಾಗಿ ಪರೀಕ್ಷಿಸಲ್ಪಡುತ್ತಾನೆ. ಬಳಿಕ ಆಶೆಯು ಬಸುರಾದಾಗ ಪಾಪವನ್ನು ಹೆರುತ್ತದೆ.”