ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನು ಒಂದು ನಗರದ ಸೊಕ್ಕಡಗಿಸುತ್ತಾನೆ

ಯೆಹೋವನು ಒಂದು ನಗರದ ಸೊಕ್ಕಡಗಿಸುತ್ತಾನೆ

ಅಧ್ಯಾಯ ಹದಿನಾಲ್ಕು

ಯೆಹೋವನು ಒಂದು ನಗರದ ಸೊಕ್ಕಡಗಿಸುತ್ತಾನೆ

ಯೆಶಾಯ 13:​1-14:⁠23

1. ಯೆಶಾಯನ ಪುಸ್ತಕವು ಈಗ ಭವಿಷ್ಯತ್ತಿನ ಕಡೆಗೆ ಎಷ್ಟು ದೂರದ ವರೆಗೆ ನೋಟ ಹರಿಸುತ್ತದೆ?

ಯೆಶಾಯನ ಪ್ರವಾದನ ಪುಸ್ತಕವು ಸಾ.ಶ.ಪೂ. ಎಂಟನೆಯ ಶತಮಾನದಲ್ಲಿ ಬರೆಯಲ್ಪಟ್ಟಿತು. ಆ ಸಮಯದಲ್ಲಿ ಅಶ್ಶೂರ್ಯರು ವಾಗ್ದತ್ತ ದೇಶದ ಮೇಲೆ ಮುತ್ತಿಗೆ ಹಾಕಿದ್ದರು. ಯೆಶಾಯನ ಪುಸ್ತಕದ ಹಿಂದಿನ ಅಧ್ಯಾಯಗಳಲ್ಲಿ ನೋಡಿರುವಂತೆಯೇ, ಮುಂದೆ ನಡೆಯಲಿರುವ ಸಂಭವಗಳನ್ನು ಅವನು ನಿಖರವಾಗಿ ಮುಂತಿಳಿಸುತ್ತಾನೆ. ಆದರೆ ಈ ಪುಸ್ತಕವು, ಅಶ್ಶೂರ್ಯರ ಆಧಿಪತ್ಯದ ಅನಂತರ ಬಹಳ ಮುಂದಕ್ಕೆ ನಡೆಯಲಿದ್ದ ವಿಷಯಗಳನ್ನು ತಿಳಿಯಪಡಿಸುತ್ತದೆ. ಯೆಹೋವನ ಒಡಂಬಡಿಕೆಯ ಜನರು ಬಾಬೆಲಿನ ನಿವೇಶನವಾಗಿದ್ದ ಶಿನಾರ್‌ ಅನ್ನು ಸೇರಿಸಿ, ಅನೇಕ ದೇಶಗಳಲ್ಲಿನ ತಮ್ಮ ಪರದೇಶವಾಸವನ್ನು ಮುಗಿಸಿ, ಸ್ವದೇಶಕ್ಕೆ ಹಿಂದಿರುಗುವುದನ್ನು ಈ ಪುಸ್ತಕವು ಮುಂತಿಳಿಸಿತು. (ಯೆಶಾಯ 11:11) ಯೆಶಾಯ 13ನೆಯ ಅಧ್ಯಾಯದಲ್ಲಿ, ಇಂತಹದ್ದೇ ಆದ ಒಂದು ವಿಶೇಷ ಪ್ರವಾದನೆಯಿದೆ. ಈ ಪ್ರವಾದನೆಯು ನೆರವೇರಿದಾಗ, ಯೆಹೋವನ ಜನರಿಗೆ ಅಂತಹ ಒಂದು ಹಿಂದಿರುಗುವ ಮಾರ್ಗವು ತೆರೆದುಕೊಳ್ಳುವುದು. ಈ ಪ್ರವಾದನೆಯು ಕೆಳಗಿನ ಮಾತುಗಳಿಂದ ಆರಂಭವಾಗುತ್ತದೆ: “ಆಮೋಚನ ಮಗನಾದ ಯೆಶಾಯನಿಗೆ ಬಾಬೆಲಿನ ವಿಷಯವಾಗಿ ಕಂಡುಬಂದ ದೈವೋಕ್ತಿ.”​—ಯೆಶಾಯ 13:⁠1.

‘ನಾನು ಹೆಮ್ಮೆಯನ್ನು ತಗ್ಗಿಸುವೆನು’

2. (ಎ) ಹಿಜ್ಕೀಯನು ಬಾಬೆಲಿನೊಂದಿಗೆ ಹೇಗೆ ಸಂಬಂಧ ಬೆಳೆಸಿದನು? (ಬಿ) ಏರಿಸಲ್ಪಡಲಿರುವ ಆ ‘ಧ್ವಜವು’ ಯಾವುದು?

2 ಯೆಶಾಯನ ಜೀವಮಾನಕಾಲದಲ್ಲೇ ಯೆಹೂದವು ಬಾಬೆಲಿನೊಂದಿಗೆ ಸಂಬಂಧ ಬೆಳೆಸಿಕೊಳ್ಳುತ್ತದೆ. ಆ ಸಮಯದಲ್ಲಿ, ರಾಜ ಹಿಜ್ಕೀಯನು ಘೋರವಾದ ಕಾಯಿಲೆಗೆ ತುತ್ತಾಗುತ್ತಾನೆ. ತದನಂತರ ಗುಣಹೊಂದುತ್ತಾನೆ. ಗುಣಹೊಂದಿದ್ದಕ್ಕಾಗಿ ಅವನನ್ನು ಅಭಿನಂದಿಸಲು ಬಾಬೆಲಿನಿಂದ ರಾಯಭಾರಿಗಳು ಬರುತ್ತಾರೆ. ಆದರೆ ಅವರ ಗುಟ್ಟಾದ ಉದ್ದೇಶವು, ಹಿಜ್ಕೀಯನನ್ನು ಅವರ ಪಕ್ಷದಲ್ಲಿ ಸೇರಿಸಿಕೊಂಡು ಅಶ್ಶೂರ್ಯರ ವಿರುದ್ಧ ಯುದ್ಧಮಾಡುವುದೇ ಆಗಿದೆ. ಆಗ ರಾಜ ಹಿಜ್ಕೀಯನು, ಮೂರ್ಖತನದಿಂದ ಅವರಿಗೆ ತನ್ನೆಲ್ಲ ಸಿರಿಸಂಪತ್ತನ್ನು ತೋರಿಸುತ್ತಾನೆ. ಈ ಕಾರಣ, ಅವನ ಮೃತ್ಯುವಿನ ನಂತರ ಎಲ್ಲ ಸಿರಿಸಂಪತ್ತು ಬಾಬೆಲಿಗೆ ಒಯಲ್ಪಡುವುದೆಂದು ಯೆಶಾಯನು ಹಿಜ್ಕೀಯನಿಗೆ ತಿಳಿಸುತ್ತಾನೆ. (ಯೆಶಾಯ 39:​1-7) ಸಾ.ಶ.ಪೂ. 607ರಲ್ಲಿ ಯೆರೂಸಲೇಮ್‌ ನಾಶಗೊಂಡು, ಅಲ್ಲಿನ ಜನರು ದೇಶಭ್ರಷ್ಟರಾಗಿ ಮಾಡಲ್ಪಟ್ಟಾಗ ಯೆಶಾಯನ ಈ ಮಾತು ನೆರವೇರುತ್ತದೆ. ಹಾಗಿದ್ದರೂ, ದೇವರಾದುಕೊಂಡ ಜನರು ಸದಾಕಾಲ ಬಾಬೆಲಿನಲ್ಲಿ ಉಳಿಯಲಾರರು. ತಾನು ಅವರ ಹಿಂದಿರುಗುವಿಕೆಗೆ ಹೇಗೆ ಮಾರ್ಗವನ್ನು ತೆರೆಯುವೆನೆಂದು ಯೆಹೋವನು ಮುಂತಿಳಿಸುತ್ತಾನೆ. ಆತನು ಆರಂಭಿಸುವುದು: [ಶತ್ರುಗಳು] ಬಂದು ಪ್ರಭುಗಳ ಪುರದ್ವಾರಗಳಲ್ಲಿ ನುಗ್ಗುವಂತೆ ಬೋಳುಬೆಟ್ಟದ ಮೇಲೆ ಧ್ವಜವೆತ್ತಿರಿ, ಕೂಗಿ ಅವರನ್ನು ಕರೆಯಿರಿ, ಕೈಸನ್ನೆಮಾಡಿರಿ.” (ಯೆಶಾಯ 13:2) ಈ ‘ಧ್ವಜವು’ ಉದಯಿಸುತ್ತಿರುವ ಇನ್ನೊಂದು ಲೋಕ ಸಾಮ್ರಾಜ್ಯವಾಗಿದೆ. ಇದು ಬಾಬೆಲನ್ನು ಅದರ ಉನ್ನತಸ್ಥಾನದಿಂದ ಕೆಳಗುರುಳಿಸುವುದು. ಅದು ದೂರದಿಂದಲೇ ನೋಡಸಾಧ್ಯವಿರುವಂತೆ “ಬೋಳುಬೆಟ್ಟದ ಮೇಲೆ” ಎಬ್ಬಿಸಲ್ಪಟ್ಟಿರುವುದು. ಬಾಬೆಲಿನ ಮೇಲೆ ಆಕ್ರಮಣಮಾಡಲು ಕರೆಯಲ್ಪಟ್ಟಿರುವ ಆ ಹೊಸ ಲೋಕ ಶಕ್ತಿಯು, “ಪ್ರಭುಗಳ ಪುರದ್ವಾರಗಳಲ್ಲಿ,” ಅಂದರೆ ಆ ಮಹಾ ನಗರದ ದ್ವಾರಗಳೊಳಗೆ ನುಗ್ಗಿ ಅದನ್ನು ಜಯಿಸುವುದು.

3. (ಎ) ಯೆಹೋವನು ಎಬ್ಬಿಸಲಿರುವ “ಶುದ್ಧೀಕರಿಸಲ್ಪಟ್ಟ ಜನರು” ಯಾರು? (ಬಿ) ಯಾವ ಅರ್ಥದಲ್ಲಿ ವಿಧರ್ಮಿ ಸೇನೆಗಳು ‘ಶುದ್ಧೀಕರಿಸಲ್ಪಟ್ಟಿವೆ’?

3 ಯೆಹೋವನು ಈಗ ಹೇಳುವುದು: “ನಾನು ಆರಿಸಿಕೊಂಡವರಿಗೆ [“ಶುದ್ಧೀಕರಿಸಲ್ಪಟ್ಟ ಜನರಿಗೆ,” NW] ಅಪ್ಪಣೆಮಾಡಿದ್ದೇನೆ, ಹೌದು, ಉತ್ಸಾಹದಿಂದ ಮೆರೆಯುವ ಆ ನನ್ನ ಶೂರರು ನನ್ನ ಕೋಪವನ್ನು ತೀರಿಸಲಿ ಎಂದು ಅವರನ್ನು ಕರೆದಿದ್ದೇನೆ. ಆಹಾ, ಬಹು ಜನಸಮೂಹವಿದ್ದಂತೆ ಗದ್ದಲವು ಬೆಟ್ಟಗಳಲ್ಲಿ ಕೇಳಿಬರುತ್ತದೆ! ಇಗೋ, ಒಟ್ಟಿಗೆ ಕೂಡಿಕೊಂಡ ರಾಜ್ಯಜನಾಂಗಗಳ ಆರ್ಬಟ! ಸೇನಾಧೀಶ್ವರನಾದ ಯೆಹೋವನು ಸೈನ್ಯವನ್ನು ಯುದ್ಧಕ್ಕಾಗಿ ಅಣಿಮಾಡುತ್ತಿದ್ದಾನೆ.” (ಯೆಶಾಯ 13:3, 4) ಬಾಬೆಲಿನ ಸೊಕ್ಕಡಗಿಸಲು ನೇಮಕಗೊಂಡ ಈ “ಶುದ್ಧೀಕರಿಸಲ್ಪಟ್ಟ ಜನರು” ಯಾರು? ಅವರು “ಒಟ್ಟಿಗೆ ಕೂಡಿಕೊಂಡ ರಾಜ್ಯಜನಾಂಗಗಳ” ಒಂದುಗೂಡಿದ ಸೇನೆಗಳೇ. ಅವರು ದೂರದ ಬೆಟ್ಟಗಳ ಪ್ರದೇಶದಿಂದ ಬಾಬೆಲಿನ ಮೇಲೆ ಎರಗುತ್ತಾರೆ. ಅವರು “ದೂರದೇಶದಿಂದ, ಅಂದರೆ ಆಕಾಶಮಂಡಲದ ಕಟ್ಟಕಡೆಯಿಂದ . . . ಬಂದಿದ್ದಾರೆ.” (ಯೆಶಾಯ 13:5) ಇವರು ಯಾವ ಅರ್ಥದಲ್ಲಿ ಶುದ್ಧೀಕರಿಸಲ್ಪಟ್ಟಿದ್ದಾರೆ? ಪವಿತ್ರರಾಗಿರುವವರು ಎಂಬ ಅರ್ಥದಲ್ಲಂತೂ ಖಂಡಿತವಾಗಿಯೂ ಅಲ್ಲ. ಇವರು ವಿಧರ್ಮಿ ಸೈನಿಕರಾಗಿದ್ದಾರೆ. ಇವರಿಗೆ ಯೆಹೋವನನ್ನು ಸೇವಿಸುವ ಯಾವ ಅಭಿರುಚಿಯೂ ಇರುವುದಿಲ್ಲ. ಹಾಗಿದ್ದರೂ, ಹೀಬ್ರು ಶಾಸ್ತ್ರವಚನಗಳಲ್ಲಿ, “ಶುದ್ಧೀಕರಿಸಲ್ಪಟ್ಟ” ಎಂಬ ಪದದ ಅರ್ಥವು, “ದೇವರಿಂದ ಆತನ ಕೆಲಸಕ್ಕಾಗಿ ಮೀಸಲಾಗಿಡಲ್ಪಟ್ಟ” ಜನರು ಎಂದಾಗಿದೆ. ಯೆಹೋವನು ಈ ರಾಷ್ಟ್ರಗಳ ಸೇನೆಗಳನ್ನು ಶುದ್ಧೀಕರಿಸಿ, ತನ್ನ ಕೋಪವನ್ನು ವ್ಯಕ್ತಪಡಿಸಲು ಅವುಗಳ ಸ್ವಾರ್ಥ ಹೆಬ್ಬಯಕೆಗಳನ್ನು ಉಪಯೋಗಿಸಬಲ್ಲನು. ಆತನು ಅಶ್ಶೂರ್ಯರನ್ನು ಈ ವಿಧದಲ್ಲೇ ಉಪಯೋಗಿಸಿದನು. ಈಗ ಬಾಬೆಲನ್ನು ತದ್ರೀತಿಯಲ್ಲೇ ಉಪಯೋಗಿಸಲಿದ್ದಾನೆ. (ಯೆಶಾಯ 10:5; ಯೆರೆಮೀಯ 25:⁠9) ಮತ್ತು ಬಾಬೆಲನ್ನು ದಂಡಿಸಲು ಆತನು ಬೇರೆ ರಾಷ್ಟ್ರಗಳನ್ನು ಉಪಯೋಗಿಸುವನು.

4, 5. (ಎ) ಬಾಬೆಲಿನ ಕುರಿತು ಯೆಹೋವನು ಏನನ್ನು ಮುಂತಿಳಿಸುತ್ತಾನೆ? (ಬಿ) ಬಾಬೆಲಿನ ಮೇಲೆ ಆಕ್ರಮಣಮಾಡುವವರು ಏನನ್ನು ಎದುರಿಸಬೇಕಾಗುವುದು?

4 ಬಾಬೆಲು ಈಗಿನ್ನೂ ಒಂದು ಪ್ರಬಲವಾದ ಲೋಕ ಶಕ್ತಿಯಾಗಿಲ್ಲ. ಆದರೂ, ಅದು ಆ ಸ್ಥಾನಕ್ಕೆ ಏರಲಿರುವ ಮತ್ತು ಅಲ್ಲಿಂದ ಬೀಳಲಿರುವ ಸಮಯವನ್ನು ಯೆಹೋವನು ಯೆಶಾಯನ ಮೂಲಕ ಮುಂತಿಳಿಸುತ್ತಾನೆ. ಆತನು ಹೇಳುವುದು: “ಅರಚಿಕೊಳ್ಳಿರಿ, ಯೆಹೋವನ ದಿನವು ಸಮೀಪವಾಯಿತು; ಅದು ಸರ್ವಶಕ್ತನಿಂದ ನಾಶರೂಪವಾಗಿ ಬರುವದು.” (ಯೆಶಾಯ 13:6) ಹೌದು, ಬಾಬೆಲಿನ ಹೆಮ್ಮೆಯು ಬೇಗನೆ ಗೋಳಾಟವಾಗಿ ಬದಲಾಗುವುದು. ಏಕೆ? ಏಕೆಂದರೆ, “ಯೆಹೋವನ ದಿನ” ಅಂದರೆ ಯೆಹೋವನು ಅದರ ಮೇಲೆ ನ್ಯಾಯವಿಧಿಸುವ ದಿನವು ಸಮೀಪವಾಗಿದೆ.

5 ಆದರೆ, ಬಾಬೆಲು ಹೇಗೆ ನಾಶವಾಗುವುದು? ಯೆಹೋವನು ಅದರ ನಾಶನಕ್ಕಾಗಿ ಗೊತ್ತುಪಡಿಸಿದ ಸಮಯವು ಬಂದಾಗ, ನಗರವು ತುಂಬ ಭದ್ರವಾಗಿರುವಂತೆ ತೋರುವುದು. ಆಕ್ರಮಿಸುತ್ತಿರುವ ಸೇನೆಗಳು, ಮೊದಲು ಯೂಫ್ರೇಟೀಸ್‌ ನದಿಯನ್ನು ದಾಟಿಯೇ ನಗರವನ್ನು ಪ್ರವೇಶಿಸಬೇಕಾಗುವುದು. ಏಕೆಂದರೆ ಈ ನದಿಯು ನಗರದ ಮಧ್ಯಭಾಗದಲ್ಲಿ ಹರಿಯುತ್ತದೆ ಮಾತ್ರವಲ್ಲ, ಅದು ನಗರಕ್ಕೆ ಸುರಕ್ಷೆಯನ್ನು ಒದಗಿಸುವ ಒಂದು ಹಳ್ಳಕ್ಕೂ ಜೋಡಿಸಲ್ಪಟ್ಟಿದೆ. ಈ ಹಳ್ಳದಿಂದಲೇ ನಗರಕ್ಕೆ ಕುಡಿಯುವ ನೀರಿನ ಸರಬರಾಯಿ ಮಾಡಲಾಗುತ್ತದೆ. ಇದಲ್ಲದೆ, ಬಾಬೆಲಿಗೆ ಬೃಹದಾಕಾರದ ಜೋಡಿ ಗೋಡೆಗಳಿರುವವು. ಇವುಗಳನ್ನು ಭೇದಿಸಿ ಒಳನುಗ್ಗುವುದು ಅಸಾಧ್ಯವೊ ಎಂಬಂತೆ ತೋರುವುದು. ಅಲ್ಲದೆ, ನಗರದಲ್ಲಿ ಆಹಾರದ ಸಂಗ್ರಹವು ಹೇರಳವಾಗಿರುವುದು. ಡೇಲಿ ಬೈಬಲ್‌ ಇಲಸ್ಟ್ರೇಷನ್ಸ್‌ ಎಂಬ ಪುಸ್ತಕವು ಹೇಳುವುದೇನೆಂದರೆ, ಬಾಬೆಲಿನ ಕೊನೆಯ ರಾಜನಾದ ನೆಬೊನೈಡಸ್‌, “ನಗರದಲ್ಲಿ ಆಹಾರ ಪದಾರ್ಥಗಳನ್ನು ಸಂಗ್ರಹಿಸಿಡಲು ಭಾರೀ ಶ್ರಮ ವಹಿಸಿದನು. ಮತ್ತು ಆ ಸಂಗ್ರಹವು, ಇಪ್ಪತ್ತು ವರ್ಷಗಳ ವರೆಗೆ ಎಲ್ಲ ನಿವಾಸಿಗಳಿಗೆ ಸಾಕಷ್ಟು [ಆಹಾರವನ್ನು] ಒದಗಿಸುವಷ್ಟಿತ್ತೆಂದು ಹೇಳಲಾಯಿತು.”

6. ಬಾಬೆಲು ಮುಂತಿಳಿಸಲ್ಪಟ್ಟ ಆಕ್ರಮಣಕ್ಕೆ ಒಳಗಾದಾಗ, ಯಾವ ಅನಿರೀಕ್ಷಿತ ಘಟನೆಯು ಸಂಭವಿಸುವುದು?

6 ಆದರೆ ಬಾಬೆಲಿನ ಈ ಹೊರನೋಟಗಳು ಮೋಸಗೊಳಿಸುವಂಥದ್ದಾಗಿರಬಲ್ಲವು. ಯೆಶಾಯನು ಹೇಳುವುದು: “ಅದರಿಂದ ಎಲ್ಲರ ಕೈ ಜೋಲುಬೀಳುವದು, ಎಲ್ಲರ ಹೃದಯ ಕರಗಿ ನೀರಾಗುವದು; ಅವರು ಬೆಚ್ಚಿಬೀಳುವರು, ಯಾತನೆವೇದನೆಗಳು ಅವರನ್ನಾಕ್ರಮಿಸುವವು, ಹೆರುವ ಹೆಂಗಸಿನಂತೆ ಸಂಕಟಪಡುವರು; ಒಬ್ಬರನ್ನೊಬ್ಬರು ನೋಡಿ ವಿಸ್ಮಯಪಡುವರು, ಅವರ ಮುಖಗಳು [ತಲ್ಲಣದಿಂದ] ಬೆಂಕಿಬೆಂಕಿಯಾಗುವವು.” (ಯೆಶಾಯ 13:7, 8) ಜಯಸಾಧಿಸುವ ಸೇನೆಗಳು ಆ ನಗರವನ್ನು ಆಕ್ರಮಿಸುವಾಗ, ನೆಮ್ಮದಿಯಿಂದ ಕಾಲಕಳೆಯುತ್ತಿದ್ದ ಅದರ ನಿವಾಸಿಗಳು, ಹೆರುವ ಹೆಂಗಸಿನಂತೆ ಹಠಾತ್ತನೆಯ ಮತ್ತು ತೀವ್ರವಾದ ವೇದನೆಗೆ ಗುರಿಯಾಗುವರು. ಅವರ ಹೃದಯವು ಭಯದಿಂದ ಕರಗಿಹೋಗುವುದು. ಶಕ್ತಿಹೀನಗೊಂಡ ಅವರ ಕೈಗಳು ಜೋಲುಬೀಳುವವು. ಆಗ ಅವರು ತಮ್ಮ ರಕ್ಷಣೆಯನ್ನು ಮಾಡಿಕೊಳ್ಳಲು ಅಸಮರ್ಥರಾಗಿರುವರು. ಅವರ ಮುಖಗಳು, ಭಯ ಹಾಗೂ ಕಳವಳದಿಂದ “ಬೆಂಕಿಬೆಂಕಿಯಾಗುವವು.” ಅವರು ವಿಸ್ಮಯಗೊಂಡು ಒಬ್ಬರನ್ನೊಬ್ಬರು ನೋಡುವರು, ತಮ್ಮ ಮಹಾ ನಗರವು ಹೇಗೆ ಪತನಗೊಳ್ಳಸಾಧ್ಯವೆಂದು ಕುತೂಹಲಪಡುವರು.

7. “ಯೆಹೋವನ” ಯಾವ “ದಿನವು” ಬರುತ್ತಿದೆ, ಮತ್ತು ಇದರಿಂದ ಬಾಬೆಲಿಗೆ ಏನು ಸಂಭವಿಸುವುದು?

7 ಆದರೆ ಬಾಬೆಲು ಖಂಡಿತವಾಗಿಯೂ ಬೀಳುವುದು. ಅದು ಬಹಳ ವೇದನಾಮಯವಾದ ಪ್ರತೀಕಾರದ ದಿನವನ್ನು, ಅಂದರೆ “ಯೆಹೋವನ ದಿನ”ವನ್ನು ಎದುರಿಸಲಿದೆ. ಸರ್ವಶ್ರೇಷ್ಠ ನ್ಯಾಯಾಧೀಶನು ತನ್ನ ಕೋಪವನ್ನು ವ್ಯಕ್ತಪಡಿಸುವನು ಮತ್ತು ಬಾಬೆಲಿನ ಪಾಪಪೂರ್ಣ ನಿವಾಸಿಗಳ ಮೇಲೆ ತಕ್ಕದಾದ ನ್ಯಾಯತೀರ್ಪನ್ನು ತರುವನು. ಪ್ರವಾದನೆಯು ಹೇಳುವುದು: “ಇಗೋ, ಯೆಹೋವನ ದಿನವು ಬರುತ್ತಿದೆ; ಅದು ಭೂಮಿಯನ್ನು ಹಾಳುಮಾಡಿ ಪಾಪಿಗಳನ್ನು ನಿರ್ಮೂಲಪಡಿಸುವದಕ್ಕೆ [ಆತನ] ಕೋಪೋದ್ರೇಕದಿಂದಲೂ ತೀಕ್ಷ್ಣರೋಷದಿಂದಲೂ ಕ್ರೂರವಾಗಿರುವದು.” (ಯೆಶಾಯ 13:9) ಬಾಬೆಲಿನ ಭವಿಷ್ಯತ್ತು ಕರಾಳವಾಗಿದೆ. ಅದು ಸೂರ್ಯ ಚಂದ್ರ ನಕ್ಷತ್ರಗಳು ತಮ್ಮ ಬೆಳಕನ್ನು ಕೊಡದೆ ಇರುವಂತಿದೆ. “ಆಕಾಶದ ತಾರೆಗಳೂ ನಕ್ಷತ್ರರಾಶಿಗಳೂ ಬೆಳಗವು, ಸೂರ್ಯನು ಮೂಡುತ್ತಲೇ ಕತ್ತಲಾಗುವನು, ಚಂದ್ರನು ಪ್ರಕಾಶಿಸನು.”​—ಯೆಶಾಯ 13:⁠10.

8. ಯೆಹೋವನು ಬಾಬೆಲಿನ ಪತನವನ್ನು ವಿಧಿಸುವುದೇಕೆ?

8 ಇಂತಹ ಒಂದು ಹೆಮ್ಮೆಯ ನಗರಕ್ಕೆ ಏಕೆ ಈ ಗತಿ? ಯೆಹೋವನು ಹೇಳುವುದು: “ನಾನು ಲೋಕದವರಿಗೆ ಅವರ ಪಾಪದ ಫಲವನ್ನೂ ದುಷ್ಟರಿಗೆ ಅವರ ದುಷ್ಕೃತ್ಯಗಳ ಫಲವನ್ನೂ ತಿನ್ನಿಸಿ ಸೊಕ್ಕಿದವರ ಸೊಕ್ಕನ್ನು ಅಡಗಿಸಿ ಭಯಂಕರರ ಹೆಮ್ಮೆಯನ್ನು ತಗ್ಗಿ”ಸುವೆನು. (ಯೆಶಾಯ 13:11) ಬಾಬೆಲು ದೇವರ ಜನರನ್ನು ಕ್ರೂರತನದಿಂದ ನಡೆಸಿಕೊಂಡದ್ದಕ್ಕಾಗಿ, ಯೆಹೋವನು ತನ್ನ ಕೋಪಾಗ್ನಿಯನ್ನು ಸುರಿಸಿ ಅದನ್ನು ದಂಡಿಸುವನು. ಬಾಬೆಲಿನವರ ಕೆಟ್ಟತನಕ್ಕಾಗಿ ಇಡೀ ದೇಶವು ಕಷ್ಟಾನುಭವಿಸುವುದು. ಆ ಗರ್ವಿಷ್ಠ ಪೀಡಕರು ಇನ್ನು ಮುಂದೆ ಯೆಹೋವನನ್ನು ಕೆಣಕಲಾರರು!

9. ಯೆಹೋವನ ನ್ಯಾಯತೀರ್ಪಿನ ದಿನದಂದು ಬಾಬೆಲು ಏನನ್ನು ಎದುರಿಸಲಿದೆ?

9 ಯೆಹೋವನು ಹೇಳುವುದು: “ಮನುಷ್ಯರನ್ನು ಅಪರಂಜಿಗಿಂತಲೂ ಮಾನವರನ್ನು ಓಫೀರಿನ ಬಂಗಾರಕ್ಕಿಂತಲೂ ಅಪರೂಪವಾಗುವಂತೆ ಮಾಡುವೆನು.” (ಯೆಶಾಯ 13:12) ಹೌದು, ಆ ನಗರವು ಪಾಳುಬಿದ್ದ ಭೂಮಿಯಂತಾಗುವುದು. ಯೆಹೋವನು ಮುಂದುವರಿಸಿ ಹೇಳುವುದು: “ಇದಕ್ಕಾಗಿ ಸೇನಾಧೀಶ್ವರನಾದ ಯೆಹೋವನ ಕೋಪೋದ್ರೇಕವೂ ತೀಕ್ಷ್ಣರೋಷವೂ ಮಸಗುತ್ತಿರುವ ದಿನದಲ್ಲಿ [ಯೆಹೋವನೆಂಬ] ನಾನು ಆಕಾಶಮಂಡಲವನ್ನು ನಡುಗಿಸಿ ಭೂಲೋಕವನ್ನು ಸ್ಥಳದಿಂದ ಕದಲಿಸುವೆನು.” (ಯೆಶಾಯ 13:13) ಬಾಬೆಲಿನ ‘ಆಕಾಶಮಂಡಲವು’ ಅಂದರೆ, ಅದು ಪೂಜಿಸುವ ದೇವದೇವತೆಗಳ ಸಮೂಹವು, ನಗರಕ್ಕೆ ಬೇಕಾದ ಸಹಾಯವನ್ನು ಮಾಡಲು ಸಾಧ್ಯವಿಲ್ಲದೆ ನಡುಗುವುದು. “ಭೂಲೋಕ,” ಅಂದರೆ ಬಾಬೆಲ್‌ ಸಾಮ್ರಾಜ್ಯವು, ಅದರ ಸ್ಥಳದಿಂದ ಕದಲಿಹೋಗುವುದು. ಇದರರ್ಥ, ಅದು ಕೂಡ ಗತಿಸಿಹೋದ ಇತರ ಸಾಮ್ರಾಜ್ಯಗಳಂತೆ, ಕೇವಲ ಮೃತ ಇತಿಹಾಸವಾಗಿರುವುದು. “ಅಟ್ಟಿದ ಜಿಂಕೆಯಂತೆಯೂ ಯಾರೂ ಕೂಡದ ಕುರಿಗಳ ಹಾಗೂ ಪ್ರತಿಯೊಬ್ಬನು ಸ್ವಜನದ ಕಡೆಗೆ ತಿರುಗಿಕೊಂಡು ಸ್ವದೇಶಕ್ಕೆ ಓಡಿಹೋಗುವನು.” (ಯೆಶಾಯ 13:14) ಬಾಬೆಲನ್ನು ಬೆಂಬಲಿಸುತ್ತಿದ್ದ ಎಲ್ಲ ವಿದೇಶೀಯರು ಅದನ್ನು ತ್ಯಜಿಸಿ ಓಡುವರು ಮಾತ್ರವಲ್ಲ, ಜಯಸಾಧಿಸುತ್ತಿರುವ ಲೋಕ ಶಕ್ತಿಯೊಂದಿಗೆ ಹೊಸ ಸಂಬಂಧಗಳನ್ನು ಸ್ಥಾಪಿಸುವುದರಲ್ಲಿ ಮಗ್ನರಾಗಿರುವರು. ಕೊನೆಗೂ ಬಾಬೆಲು, ಸೋತು ಸೂರೆಗೊಂಡ ನಗರದ ವೇದನೆಯನ್ನು ಅನುಭವಿಸುವುದು. ಈ ರೀತಿಯ ವೇದನೆಯನ್ನು, ಅದು ತನ್ನ ವೈಭವದ ದಿನಗಳಲ್ಲಿ ಅನೇಕರ ಮೇಲೆ ಬರಮಾಡಿದೆ: “ಸಿಕ್ಕಿಸಿಕ್ಕಿದವರೆಲ್ಲಾ ಇರಿಯಲ್ಪಡುವರು, ಅಟ್ಟಿ ಹಿಡಿಯಲ್ಪಟ್ಟ ಸಕಲರೂ ಕತ್ತಿಗೆ ತುತ್ತಾಗುವರು. ಅವರ ಮಕ್ಕಳನ್ನು ಬಂಡೆಗೆ ಅಪ್ಪಳಿಸಿಬಿಡುವರು, ಅವರ ಮನೆಗಳನ್ನು ಸೂರೆಮಾಡುವರು, ಅವರ ಹೆಂಡರನ್ನು ಕೆಡಿಸುವರು.”​—ಯೆಶಾಯ 13:15, 16.

ನಾಶನಕ್ಕಾಗಿ ದೇವರು ಉಪಯೋಗಿಸುವ ಸಾಧನ

10. ಬಾಬೆಲನ್ನು ಸೋಲಿಸಲು ಯೆಹೋವನು ಯಾರನ್ನು ಉಪಯೋಗಿಸುವನು?

10 ಬಾಬೆಲನ್ನು ಸೋಲಿಸಲು ಯೆಹೋವನು ಯಾವ ಲೋಕ ಶಕ್ತಿಯನ್ನು ಉಪಯೋಗಿಸುವನು? ಸುಮಾರು 200 ವರ್ಷಗಳ ಮುಂಚೆಯೇ, ಯೆಹೋವನು ಆ ಪ್ರಶ್ನೆಗೆ ಉತ್ತರವನ್ನು ಪ್ರಕಟಿಸಿದನು: “ಇಗೋ, ಅವರಿಗೆ ವಿರುದ್ಧವಾಗಿ ಮೇದ್ಯರನ್ನು ಎಬ್ಬಿಸುವೆನು; ಇವರು ಬೆಳ್ಳಿಯನ್ನು ಲಕ್ಷಿಸರು, ಬಂಗಾರವನ್ನು ಪ್ರೀತಿಸರು. ಇವರ ಬಿಲ್ಲುಗಳು ಯುವಕರನ್ನು ಚೂರುಚೂರು ಮಾಡುವವು; ಇವರು ಗರ್ಭಫಲವನ್ನು ಕನಿಕರಿಸರು, ಇವರ ಕಣ್ಣು ಮಕ್ಕಳನ್ನೂ ಕರುಣಿಸದು. ರಾಜ್ಯಗಳಿಗೆ ಶಿರೋರತ್ನವೂ ಕಸ್ದೀಯರ ಮಹಿಮೆಗೆ ಭೂಷಣವೂ ಆದ ಬಾಬೆಲಿಗೆ ದೇವರು ಕೆಡವಿದ ಸೊದೋಮ್‌ ಗೊಮೋರಗಳ ಗತಿಯು ಸಂಭವಿಸುವದು.” (ಯೆಶಾಯ 13:17-19) ವೈಭವಯುತ ಬಾಬೆಲು ಪತನಗೊಳ್ಳುವುದು, ಮತ್ತು ಇದಕ್ಕಾಗಿ ಯೆಹೋವನು ದೂರದ ಬೆಟ್ಟಗಳಿಂದ ಬರುವ ಮೇದ್ಯಯ ಸೇನೆಗಳನ್ನು ಉಪಯೋಗಿಸುವನು. * ಕಟ್ಟಕಡೆಗೆ ಬಾಬೆಲು, ಘೋರವಾದ ಅನೈತಿಕತೆಯಲ್ಲಿ ತೊಡಗಿದ್ದ ಸೋದೋಮ್‌ ಗೊಮೋರಗಳಂತೆ ಪಾಳುಬೀಳುವುದು.​—⁠ಆದಿಕಾಂಡ 13:​13; 19:​13, 24, 25.

11, 12. (ಎ) ಮೇದ್ಯರು ಲೋಕ ಶಕ್ತಿಯ ಸ್ಥಾನಕ್ಕೆ ಹೇಗೆ ಏರುತ್ತಾರೆ? (ಬಿ) ಮೇದ್ಯ ಸೇನೆಗಳ ಯಾವ ಅಸಾಮಾನ್ಯ ಗುಣಲಕ್ಷಣವನ್ನು ಪ್ರವಾದನೆಯು ತಿಳಿಸುತ್ತದೆ?

11 ಯೆಶಾಯನ ದಿನದಲ್ಲಿ, ಮೇದ್ಯರು ಮತ್ತು ಬಾಬೆಲಿನವರು ಅಶ್ಶೂರರ ಹತೋಟಿಯಲ್ಲಿದ್ದರು. ಸುಮಾರು ಒಂದು ಶತಮಾನದ ನಂತರ, ಸಾ.ಶ.ಪೂ. 632ರಲ್ಲಿ, ಮೇದ್ಯ ಹಾಗೂ ಬಾಬೆಲಿನ ಸೇನೆಗಳು ಒಟ್ಟುಸೇರಿ, ಅಶ್ಶೂರರ ರಾಜಧಾನಿಯಾದ ನಿನೆವೆಯನ್ನು ಕೆಳಗುರುಳಿಸುತ್ತವೆ. ಆಗ, ಬಾಬೆಲ್‌ ಪ್ರಧಾನ ಲೋಕ ಶಕ್ತಿಯ ಸ್ಥಾನಕ್ಕೇರುತ್ತದೆ. ಆದರೆ, ಇದಾದ 100 ವರ್ಷಗಳ ನಂತರ, ಅದು ಮೇದ್ಯರಿಂದ ಸೋಲನ್ನು ಅನುಭವಿಸುವುದೆಂದು ಕನಸಿನಲ್ಲೂ ನೆನಸುವುದಿಲ್ಲ! ಇಂತಹ ಭವಿಷ್ಯವಾಣಿಯನ್ನು ಯೆಹೋವ ದೇವರಲ್ಲದೆ ಮತ್ತಾರೂ ಮಾಡಸಾಧ್ಯವಿಲ್ಲ?

12 ನಾಶನಕ್ಕಾಗಿ ತಾನಾದುಕೊಂಡ ಸಾಧನವನ್ನು ಗುರುತಿಸುತ್ತಾ ಯೆಹೋವನು ಹೇಳುವುದೇನೆಂದರೆ, ಮೇದ್ಯರು “ಬೆಳ್ಳಿಯನ್ನು ಲಕ್ಷಿಸರು, ಬಂಗಾರವನ್ನು ಪ್ರೀತಿಸರು.” ಸೂರೆಮಾಡುವ ಇತರ ಸೈನಿಕರಿಗಿಂತ ಇವರು ಎಷ್ಟು ಭಿನ್ನರು! ಬೈಬಲ್‌ ಪಂಡಿತರಾದ ಆ್ಯಲ್ಬರ್ಟ್‌ ಬಾರ್ನ್ಸ್‌ ಹೇಳುವುದು: “ಯುದ್ಧವನ್ನು ಗೆದ್ದ ಸೈನ್ಯಗಳಲ್ಲಿ ಸೂರೆಮಾಡದೆ ಇರುವ ಸೈನ್ಯಗಳು ಬಹು ಕೊಂಚ.” ಈ ವಿಷಯದಲ್ಲಿ ಮೇದ್ಯ ಸೇನೆಗಳು ಯೆಹೋವನ ಮಾತನ್ನು ನಿಜವಾಗಿಸುತ್ತವೊ? ಹೌದು. ದ ಬೈಬಲ್‌​—⁠ವರ್ಕ್‌ ಎಂಬ ಪುಸ್ತಕದಲ್ಲಿ ಜೆ. ಗ್ಲೇಂಟ್‌ವರ್ತ್‌ ಬಟ್ಲರ್‌ ಅವರ ಈ ಹೇಳಿಕೆಗಳನ್ನು ಗಮನಿಸಿರಿ: “ಮೇದ್ಯರು ಮತ್ತು ವಿಶೇಷವಾಗಿ ಪಾರಸಿಯರು, ಯುದ್ಧ ಹೂಡುವ ಬೇರೆ ಅನೇಕ ರಾಷ್ಟ್ರಗಳಂತೆ, ಬಂಗಾರಕ್ಕೆ ಹೆಚ್ಚಿನ ಮಹತ್ವವನ್ನು ನೀಡದೆ, ವಿಜಯ ಹಾಗೂ ಕೀರ್ತಿಯನ್ನೇ ಅಮೂಲ್ಯವೆಂದೆಣಿಸಿದರು.” * ಆದುದರಿಂದಲೇ, ಪಾರಸಿಯ ರಾಜನಾದ ಕೋರೆಷನು ಇಸ್ರಾಯೇಲ್ಯರನ್ನು ಬಾಬೆಲಿನ ಸೆರೆವಾಸದಿಂದ ಬಿಡಿಸಿದಾಗ, ನೆಬೂಕದ್ನೆಚ್ಚರನು ಯೆರೂಸಲೇಮಿನ ದೇವಾಲಯದಿಂದ ಲೂಟಿಮಾಡಿದ್ದ ಸಾವಿರಾರು ಬೆಳ್ಳಿಬಂಗಾರದ ಪಾತ್ರೆಗಳನ್ನು ಅವರಿಗೆ ಹಿಂದಿರುಗಿಸಿದುದರಲ್ಲಿ ಯಾವ ಆಶ್ಚರ್ಯವೂ ಇಲ್ಲ.​—⁠ಎಜ್ರ 1:​7-11.

13, 14. (ಎ) ಲೂಟಿ ಹೊಡೆಯುವುದರಲ್ಲಿ ಅಷ್ಟೊಂದು ಆಸಕ್ತರಾಗಿರದಿದ್ದರೂ, ಮೇದ್ಯಯಪಾರಸಿಯ ಯೋಧರು ಯಾವ ವಿಷಯದಲ್ಲಿ ಮಹತ್ವಾಕಾಂಕ್ಷಿಗಳಾಗಿದ್ದಾರೆ? (ಬಿ) ಬಾಬೆಲು ಹೆಮ್ಮೆಪಟ್ಟುಕೊಳ್ಳುತ್ತಿದ್ದ ರಕ್ಷಣಾ ವ್ಯವಸ್ಥೆಗಳನ್ನು ಕೋರೆಷನು ಹೇಗೆ ಜಯಿಸುತ್ತಾನೆ?

13 ಮೇದ್ಯ ಹಾಗೂ ಪಾರಸಿಯ ಯೋಧರಿಗೆ ಸೂರೆಮಾಡುವ ಆಸೆ ಎಳ್ಳಷ್ಟೂ ಇಲ್ಲ ಎಂಬುದು ನಿಜ, ಆದರೆ ಅವರು ಮಹತ್ವಾಕಾಂಕ್ಷಿಗಳು ಎಂಬುದರಲ್ಲಿ ಸಂದೇಹವೇ ಇಲ್ಲ. ಅವರು ಲೋಕ ರಂಗದಲ್ಲಿ ಎರಡನೆಯ ಸ್ಥಾನದಲ್ಲಿರಲು ಬಯಸುವುದಿಲ್ಲ. ಅಲ್ಲದೆ, ಯೆಹೋವನು ಅವರ ಮನಸ್ಸಿನಲ್ಲಿ ‘ನಾಶನವನ್ನು’ ಹಾಕಿದ್ದಾನೆ. (ಯೆಶಾಯ 13:⁠6) ಆದಕಾರಣ ಅವರು ಲೋಹದ ಬಿಲ್ಲುಗಳಿಂದ ಬಾಬೆಲನ್ನು ಜಯಿಸಲು ದೃಢನಿಶ್ಚಯವನ್ನು ಮಾಡಿದ್ದಾರೆ. ಈ ಬಿಲ್ಲುಗಳ ಮೂಲಕ ಅವರು ಬಾಣಬಿಡುತ್ತಾರೆ ಮಾತ್ರವಲ್ಲ, ಬಾಬೆಲಿನ ವಂಶಸ್ಥರನ್ನು ಅಂದರೆ ವೈರಿ ಸೈನಿಕರನ್ನು ಹೊಡೆದು ಜಜ್ಜಿಬಿಡುತ್ತಾರೆ.

14 ಮೇದ್ಯಯಪಾರಸಿಯ ಸೇನೆಗಳ ನಾಯಕನಾದ ಕೋರೆಷನು, ಬಾಬೆಲಿನ ಭದ್ರವಾದ ಕೋಟೆಗಳಿಂದ ಭಯಭೀತನಾಗುವುದಿಲ್ಲ. ಸಾ.ಶ.ಪೂ. 539ರ ಅಕ್ಟೋಬರ್‌ 5/6ರ ರಾತ್ರಿಯಂದು, ಅವನು ಯೂಫ್ರೇಟೀಸ್‌ ನದಿಯು ಹರಿಯುವ ದಿಕ್ಕನ್ನು ಬದಲಾಯಿಸುವ ಆಜ್ಞೆಯನ್ನು ಕೊಡುತ್ತಾನೆ. ನದೀ ನೀರಿನ ಮಟ್ಟವು ಇಳಿದಂತೆ, ಆಕ್ರಮಣಕಾರರು ತಮ್ಮ ತೊಡೆಯ ವರೆಗಿದ್ದ ನೀರಿನಲ್ಲಿ ಕಳ್ಳಹೆಜ್ಜೆಹಾಕುತ್ತಾ ನಗರವನ್ನು ಪ್ರವೇಶಿಸುತ್ತಾರೆ. ಅನಿರೀಕ್ಷಿತವಾಗಿ ಬಂದ ಈ ಆಕ್ರಮಣಕ್ಕೆ ಬಾಬೆಲಿನ ನಿವಾಸಿಗಳು ಸಿದ್ಧರಾಗಿಲ್ಲ, ಆದುದರಿಂದ ಬಾಬೆಲು ಸೋಲನ್ನಪ್ಪುತ್ತದೆ. (ದಾನಿಯೇಲ 5:30) ಈ ಘಟನೆಗಳನ್ನು ಪ್ರವಾದಿಸುವಂತೆ ಯೆಹೋವ ದೇವರು ಯೆಶಾಯನನ್ನು ಪ್ರೇರೇಪಿಸುತ್ತಾನೆ. ಇದರಿಂದ ಆತನೇ ವಿಷಯಗಳನ್ನು ನಿರ್ದೇಶಿಸುತ್ತಿದ್ದಾನೆಂಬ ವಿಷಯವು ತೀರ ಸ್ಪಷ್ಟವಾಗುತ್ತದೆ.

15. ಬಾಬೆಲಿನ ಭವಿಷ್ಯತ್ತು ಏನಾಗಿದೆ?

15 ಬಾಬೆಲು ಸಂಪೂರ್ಣವಾಗಿ ನಾಶವಾಗುವುದೊ? ಯೆಹೋವನ ಪ್ರಕಟನೆಗೆ ಕಿವಿಗೊಡಿರಿ: “ಅದು ಎಂದಿಗೂ ನಿವಾಸಸ್ಥಳವಾಗದು, ತಲತಲಾಂತರಕ್ಕೂ ಅಲ್ಲಿ ಜನರು ಒಕ್ಕಲಿರರು; ಯಾವ ಅರಬಿಯನೂ ಗುಡಾರಹಾಕನು; ಕುರುಬರು ಮಂದೆಗಳನ್ನು ತಂಗಿಸರು. ಅದು ಕಾಡುಮೃಗಗಳಿಗೆ ಹಕ್ಕೆಯಾಗುವದು, ಅಲ್ಲಿನ ಮನೆಗಳಲ್ಲಿ ಗೂಬೆಗಳು ತುಂಬಿಕೊಳ್ಳುವವು, ಅಲ್ಲಿ ಉಷ್ಟ್ರಪಕ್ಷಿಗಳು ವಾಸಿಸುವವು, ದೆವ್ವಗಳು ಕುಣಿದಾಡುವವು; ಅರಮನೆಗಳಲ್ಲಿ ತೋಳಗಳೂ, ವಿಲಾಸಮಂದಿರಗಳಲ್ಲಿ ನರಿಗಳೂ ಎದುರುಬದುರಾಗಿ ಕೂಗುವವು; ಅದಕ್ಕೆ ಹೊತ್ತು ಸಮೀಪಿಸಿದೆ, ಇನ್ನು ದಿನ ಹೆಚ್ಚದು.” (ಯೆಶಾಯ 13:20-22) ಸಂಪೂರ್ಣ ನಾಶನವೇ ಆ ನಗರದ ಗತಿಯಾಗಿರುವುದು.

16. ಬಾಬೆಲಿನ ಸದ್ಯದ ಪರಿಸ್ಥಿತಿಯು ನಮಗೆ ಯಾವ ಭರವಸೆಯನ್ನು ನೀಡುತ್ತದೆ?

16 ಈ ಪ್ರವಾದನೆಯು ಸಾ.ಶ.ಪೂ. 539ರಲ್ಲಿ ಸಂಪೂರ್ಣವಾಗಿ ನೆರವೇರಲಿಲ್ಲ. ಆದರೆ ಇಂದು, ಬಾಬೆಲಿನ ಕುರಿತು ಯೆಶಾಯನು ಮುಂತಿಳಿಸಿದ್ದ ಎಲ್ಲವೂ ನೆರವೇರಿದೆ. ಒಬ್ಬ ಬೈಬಲ್‌ ವ್ಯಾಖ್ಯಾನಗಾರನು ಹೇಳುವುದು, ಬಾಬೆಲು “ಶತಮಾನಗಳಿಂದ ಹಿಡಿದು ಇಂದಿನ ವರೆಗೂ ವ್ಯಾಪಕವಾದ ವಿನಾಶಕ್ಕೆ ಗುರಿಯಾಗಿದೆ ಮಾತ್ರವಲ್ಲ, ಭಗ್ನಾವಶೇಷಗಳ ಗುಡ್ಡೆಯೂ ಆಗಿದೆ.” ತದನಂತರ ಅವನು ಕೂಡಿಸುವುದು: “ಈ ದೃಶ್ಯವನ್ನು ಕಂಡು, ಯೆಶಾಯ ಹಾಗೂ ಯೆರೆಮೀಯರು ನುಡಿದಂತಹ ಭವಿಷ್ಯವಾಣಿಗಳು ಎಷ್ಟು ನಿಕರವಾಗಿ ನೆರವೇರಿದವೆಂಬುದರ ಕುರಿತು ವಿಸ್ಮಯಪಡದೆ ಇರಸಾಧ್ಯವಿಲ್ಲ.” ಯೆಶಾಯನ ದಿನದಲ್ಲಿ ಜೀವಿಸಿದ ಯಾವ ಮನುಷ್ಯನೂ, ನಿಸ್ಸಂದೇಹವಾಗಿ ಬಾಬೆಲಿನ ಪತನ ಹಾಗೂ ಅದರ ಅಂತಿಮ ದುರ್ಗತಿಯ ಬಗ್ಗೆ ಮುಂತಿಳಿಸಿರಲು ಸಾಧ್ಯವೇ ಇಲ್ಲ. ಏಕೆಂದರೆ, ಯೆಶಾಯನು ತನ್ನ ಪುಸ್ತಕವನ್ನು ಬರೆದು ಸುಮಾರು 200 ವರ್ಷಗಳು ಗತಿಸಿದ ನಂತರವೇ, ಬಾಬೆಲು ಮೇದ್ಯಯಪಾರಸಿಯರಿಗೆ ಶರಣಾಯಿತು! ಮತ್ತು ಅದರ ಅಂತಿಮ ದುರ್ಗತಿಯು ಕೆಲವು ಶತಮಾನಗಳ ನಂತರ ಸಂಭವಿಸಿತು. ಬೈಬಲು ದೇವರ ಪ್ರೇರಿತ ವಾಕ್ಯವೆಂಬ ವಿಷಯದಲ್ಲಿ ಇದು ನಮ್ಮ ನಂಬಿಕೆಯನ್ನು ಬಲಪಡಿಸುವುದಿಲ್ಲವೊ? (2 ತಿಮೊಥೆಯ 3:16) ಅದೂ ಅಲ್ಲದೆ, ಯೆಹೋವನು ಗತಕಾಲದಲ್ಲಿ ತನ್ನ ಪ್ರವಾದನೆಗಳನ್ನು ನೆರವೇರಿಸಿರುವುದರಿಂದ, ಇನ್ನೂ ನೆರವೇರದೆ ಉಳಿದಿರುವ ಪ್ರವಾದನೆಗಳು ದೇವರ ನೇಮಿತ ಸಮಯದಲ್ಲಿ ನೆರವೇರುವವು ಎಂಬ ವಿಷಯದಲ್ಲಿ ನಾವು ಪೂರ್ಣ ಭರವಸೆಯಿಂದಿರಸಾಧ್ಯವಿದೆ.

“ಸಂಕಟದಿಂದ . . . ವಿಶ್ರಾಂತಿ”

17, 18. ಬಾಬೆಲಿನ ಅಪಜಯವು ಇಸ್ರಾಯೇಲ್ಯರಿಗೆ ಯಾವ ಆಶೀರ್ವಾದಗಳನ್ನು ತರುವುದು?

17 ಬಾಬೆಲಿನ ಪತನವು ಇಸ್ರಾಯೇಲ್ಯರಿಗೆ ಬಿಡುಗಡೆಯನ್ನು ತರುವುದು. ಅವರು ಸೆರೆವಾಸದಿಂದ ಸ್ವಾತಂತ್ರ್ಯಪಡೆದು, ವಾಗ್ದತ್ತ ದೇಶಕ್ಕೆ ಹಿಂದಿರುಗುವ ಅವಕಾಶವನ್ನು ಪಡೆದುಕೊಳ್ಳುವರು. ಆದಕಾರಣ, ಯೆಶಾಯನು ಈಗ ಹೇಳುವುದು: “ಯೆಹೋವನು ಯಾಕೋಬ್ಯರನ್ನು ಕನಿಕರಿಸಿ ಮತ್ತೆ ಇಸ್ರಾಯೇಲ್ಯರನ್ನು ಆರಿಸಿಕೊಂಡು ಸ್ವದೇಶದಲ್ಲಿ ತಂಗಿಸಬೇಕೆಂದಿದ್ದಾನಷ್ಟೆ; ಪರದೇಶಿಗಳು ಅವರೊಂದಿಗೆ ಕೂಡಿ ಬಂದು ಯಾಕೋಬನ ಮನೆತನಕ್ಕೆ ಸೇರಿಕೊಳ್ಳುವರು. ಜನಾಂಗದವರು ಅವರನ್ನು ಕರತಂದು ಸ್ವಸ್ಥಳಕ್ಕೆ ಸೇರಿಸುವರು; ಆಗ ಇಸ್ರಾಯೇಲಿನ ಮನೆತನದವರು ಯೆಹೋವನ ದೇಶದಲ್ಲಿ ಆ ಜನಾಂಗದವರನ್ನು ಗಂಡು ಹೆಣ್ಣಾಳುಗಳನ್ನಾಗಿ ಇಟ್ಟುಕೊಳ್ಳುವರು; ಯಾರಿಗೆ ಸೆರೆಯಾಗಿದ್ದರೋ ಅವರನ್ನು ಸೆರೆಹಿಡಿಯುವರು; ತಮ್ಮನ್ನು ಹಿಂಸಿಸಿದವರ ಮೇಲೆ ಅಧಿಕಾರನಡಿಸುವರು.” (ಯೆಶಾಯ 14:1, 2) “ಯಾಕೋಬ” ಎಂಬ ಪದವು, ಇಡೀ ಇಸ್ರಾಯೇಲ್‌ ಜನಾಂಗವನ್ನು, ಅಂದರೆ ಎಲ್ಲ 12 ಗೋತ್ರಗಳನ್ನು ಸೂಚಿಸುತ್ತದೆ. ಆ ಜನಾಂಗವು ಮನೆಗೆ ಹಿಂದಿರುಗುವಂತೆ ಅನುಮತಿಸುವ ಮೂಲಕ, ಯೆಹೋವನು “ಯಾಕೋಬ”ನಿಗೆ ಕರುಣೆ ತೋರಿಸುವನು. ಅವರ ಜೊತೆಗೆ ಸಾವಿರಾರು ವಿದೇಶೀಯರು ಸಹ ಬರುವರು. ಅವರಲ್ಲಿ ಅನೇಕರು ದೇವಾಲಯದ ದಾಸರಾಗಿ ಇಸ್ರಾಯೇಲ್ಯರಿಗೆ ಸೇವೆಸಲ್ಲಿಸುವರು. ಕೆಲವು ಇಸ್ರಾಯೇಲ್ಯರು, ತಾವು ಈ ಮೊದಲು ಯಾರ ಸೆರೆಯಾಳುಗಳಾಗಿದ್ದರೊ ಅವರ ಮೇಲೆಯೇ ಅಧಿಕಾರ ಚಲಾಯಿಸುವರು. *

18 ಇನ್ನು ಮುಂದೆ ಇಸ್ರಾಯೇಲ್ಯರು ದೇಶಭ್ರಷ್ಟರಾಗಿ ಜೀವಿಸುವ ಯಾತನೆಯನ್ನು ಅನುಭವಿಸುವುದಿಲ್ಲ. ಬದಲಿಗೆ, ಯೆಹೋವನು ತನ್ನ ಜನರನ್ನು “ಸಂಕಟದಿಂದಲೂ ಕಳವಳದಿಂದಲೂ ಕಠಿನವಾದ ಬಿಟ್ಟಿಯ ಸೇವೆಯಿಂದಲೂ . . . ವಿಶ್ರಾಂತಿಗೊಳಿಸುವ”ನು. (ಯೆಶಾಯ 14:​3, 4ಎ) ಇಸ್ರಾಯೇಲ್ಯರು ಶಾರೀರಿಕ ದಾಸತ್ವದಿಂದ ಬಿಡುಗಡೆ ಹೊಂದುವುದರ ಜೊತೆಗೆ, ಸುಳ್ಳು ದೇವರ ಆರಾಧಕರ ಮಧ್ಯೆ ಜೀವಿಸುವ ವೇದನೆ ಹಾಗೂ ತಳಮಳದಿಂದಲೂ ಬಿಡುಗಡೆ ಹೊಂದುವರು. ಈ ವಿಷಯದಲ್ಲಿ ಹೇಳಿಕೆ ನೀಡುತ್ತಾ, ಬೈಬಲಿನ ದೇಶಗಳು ಮತ್ತು ಜನರು (ಇಂಗ್ಲಿಷ್‌) ಎಂಬ ಪುಸ್ತಕವು ಹೇಳುವುದು: “ಬಾಬೆಲಿನ ನಿವಾಸಿಗೆ, ಅವನ ದೇವರುಗಳು ಒಟ್ಟಾರೆ ಅವನಂತೆಯೇ ಇದ್ದರು. ಅವನಲ್ಲಿದ್ದ ಎಲ್ಲ ದುರ್ಬುದ್ಧಿಯು ಅವರಲ್ಲಿತ್ತು. ಅವರು ಹೇಡಿಗಳು, ಕುಡುಕರು ಮತ್ತು ಬಲಹೀನರು ಆಗಿದ್ದರು.” ಇಂತಹ ಕೀಳ್ಮಟ್ಟದ ಧಾರ್ಮಿಕ ವಾತಾವರಣದಿಂದ ಹೊರಬರುವುದು ಎಷ್ಟೊಂದು ನೆಮ್ಮದಿದಾಯಕವಾಗಿರುವುದು!

19. ಯೆಹೋವನ ಕ್ಷಮಾಪಣೆಯನ್ನು ಪಡೆದುಕೊಳ್ಳಲು ಇಸ್ರಾಯೇಲ್‌ ಏನು ಮಾಡಬೇಕಿತ್ತು, ಮತ್ತು ಇದರಿಂದ ನಾವು ಏನನ್ನು ಕಲಿಯುತ್ತೇವೆ?

19 ಹಾಗಿದ್ದರೂ, ಯೆಹೋವನ ಕರುಣೆ ಒಂದು ಷರತ್ತಿನ ಮೇಲೆ ಅವಲಂಬಿಸಿದೆ. ಯಾವ ವಿಷಯಕ್ಕಾಗಿ ದೇವರು ತನ್ನ ಜನರನ್ನು ಉಗ್ರವಾಗಿ ದಂಡಿಸಿದನೊ ಆ ದುಷ್ಟತನಕ್ಕಾಗಿ ಅವರು ಪಶ್ಚಾತ್ತಾಪಪಡಬೇಕು. (ಯೆರೆಮೀಯ 3:25) ಅವರು ಮುಚ್ಚುಮರೆಯಿಲ್ಲದೆ ಹೃತ್ಪೂರ್ವಕವಾಗಿ ಪಾಪನಿವೇದನೆ ಮಾಡಿಕೊಂಡರೆ ಮಾತ್ರ ಯೆಹೋವನ ಕ್ಷಮಾಪಣೆಯನ್ನು ಪಡೆಯಸಾಧ್ಯವಿತ್ತು. (ನೋಡಿ ನೆಹೆಮೀಯ 9:​6-37; ದಾನಿಯೇಲ 9:⁠5.) ಇದೇ ತತ್ವವು ನಮ್ಮ ದಿನಗಳಿಗೂ ಅನ್ವಯಿಸುತ್ತದೆ. “ಪಾಪಮಾಡದ ಮನುಷ್ಯನು ಒಬ್ಬನೂ ಇಲ್ಲ”ದಿರುವುದರಿಂದ, ನಮಗೆಲ್ಲರಿಗೂ ಯೆಹೋವನ ಕರುಣೆಯ ಅಗತ್ಯವಿದೆ. (2 ಪೂರ್ವಕಾಲವೃತ್ತಾಂತ 6:36) ಕರುಣಾಮಯ ದೇವರಾಗಿರುವ ಯೆಹೋವನು, ನಾವು ನಮ್ಮ ಪಾಪಗಳ ನಿವೇದನೆಯನ್ನು ಮಾಡುವಂತೆ, ಪಶ್ಚಾತ್ತಾಪಪಡುವಂತೆ ಹಾಗೂ ಕೆಟ್ಟ ಮಾರ್ಗದಲ್ಲಿ ಮುಂದುವರಿಯುವುದನ್ನು ನಿಲ್ಲಿಸುವಂತೆ ಪ್ರೀತಿಯಿಂದ ಆಮಂತ್ರಿಸುತ್ತಾನೆ. ಹೀಗೆ ಮಾಡುವ ಮೂಲಕ ನಾವು ಒಂದುವೇಳೆ ಗುಣಮುಖರಾಗಸಾಧ್ಯವಿದೆ. (ಧರ್ಮೋಪದೇಶಕಾಂಡ 4:31; ಯೆಶಾಯ 1:18; ಯಾಕೋಬ 5:16) ನಾವು ಆತನ ಅನುಗ್ರಹವನ್ನು ಪುನಃ ಪಡೆದುಕೊಳ್ಳುವಂತೆ ಸಹಾಯಮಾಡುವುದರ ಜೊತೆಗೆ ಇದು ನಮಗೆ ಸಾಂತ್ವನವನ್ನೂ ನೀಡುತ್ತದೆ.​—⁠ಕೀರ್ತನೆ 51:1; ಜ್ಞಾನೋಕ್ತಿ 28:13; 2 ಕೊರಿಂಥ 2:⁠7.

ಬಾಬೆಲಿನ ವಿರುದ್ಧ ಒಂದು “ಪದ್ಯ”

20, 21. ಬಾಬೆಲಿನ ಪತನದಿಂದ ಅದರ ನೆರೆಯವರು ಹೇಗೆ ಹರ್ಷಿಸುತ್ತಾರೆ?

20 ಬಾಬೆಲು ಲೋಕ ರಂಗದಲ್ಲಿ ಪ್ರಧಾನ ಲೋಕ ಶಕ್ತಿಯಾಗುವ 100ಕ್ಕಿಂತಲೂ ಹೆಚ್ಚಿನ ವರ್ಷಗಳ ಮುಂಚೆಯೇ, ಅದರ ಪತನಕ್ಕೆ ಲೋಕವು ಹೇಗೆ ಪ್ರತಿಕ್ರಿಯಿಸುವುದೆಂದು ಯೆಶಾಯನು ಮುಂತಿಳಿಸುತ್ತಾನೆ. ಅದರ ಸೆರೆಯಿಂದ ಬಿಡುಗಡೆ ಹೊಂದಿದ ಇಸ್ರಾಯೇಲ್ಯರಿಗೆ ಅವನು ಪ್ರವಾದನಾತ್ಮಕವಾಗಿ ಆಜ್ಞಾಪಿಸುವುದು: “ನಿಮ್ಮನ್ನು ವಿಶ್ರಾಂತಿಗೊಳಿಸುವ ದಿನದಲ್ಲಿ ಬಾಬೆಲಿನ ರಾಜನಿಗೆ ವಿರುದ್ಧವಾದ ಈ ಪದ್ಯವನ್ನು ನೀವು ಹೀಗೆ ಎತ್ತಿ ಹೇಳಬೇಕು​—⁠ಆಹಾ, ಹಿಂಸಕನು ಕೊನೆಗಂಡನು, ರೇಗಾಟವು ನಿಂತಿತು! ಜನಗಳನ್ನು ಕೋಪೋದ್ರೇಕದಿಂದ ಎಡೆಬಿಡದೆ ಹೊಡೆದು ಜನಾಂಗಗಳನ್ನು ಸಿಟ್ಟಿನಿಂದ ತಡೆಯಿಲ್ಲದೆ ಹಿಂಸಿಸಿ ಆಳುತ್ತಿದ್ದ ದುಷ್ಟರ ಕೋಲನ್ನೂ ರಾಜರ ದಂಡವನ್ನೂ ಯೆಹೋವನು ಮುರಿದುಬಿಟ್ಟನು.” (ಯೆಶಾಯ 14:4-6) ಬಾಬೆಲಿಗೆ ಜಯಶಾಲಿ ಎಂಬ ಬಿರುದಿನ ಜೊತೆಗೆ, ಸ್ವತಂತ್ರ ಜನರನ್ನು ದಾಸರನ್ನಾಗಿ ಮಾಡುವ ಪೀಡಕನೆಂಬ ಹೆಸರಿದೆ. ಆದುದರಿಂದ ಅದರ ಪತನದ ಸಮಯದಲ್ಲಿ ಜನರು “ಪದ್ಯ” ಹಾಡಿ ಸಂಭ್ರಮಪಡುವರು. ಈ ಪದ್ಯವು ಮುಖ್ಯವಾಗಿ, ಆ ಮಹಾ ನಗರದ ವೈಭವದ ದಿನಗಳಲ್ಲಿ ಆಳ್ವಿಕೆ ನಡೆಸಿದ ಬಾಬೆಲಿನ ರಾಜವಂಶದ ಪತನವನ್ನುದ್ದೇಶಿಸಿ ಹಾಡಲ್ಪಡುವದು. ಅದು ನೆಬೂಕದ್ನೆಚ್ಚರನಿಂದ ಆರಂಭಿಸಿ ನೆಬೊನೈಡಸ್‌ ಮತ್ತು ಬೇಲ್ಶಚ್ಚರನಿಂದ ಅಂತ್ಯಗೊಂಡ ವಂಶವೇ ಆಗಿತ್ತು.

21 ಅದರ ಪತನದಿಂದ ಎಷ್ಟೆಲ್ಲ ಬದಲಾವಣೆಗಳಾಗುವವು! “ಭೂಲೋಕವೆಲ್ಲಾ ಶಾಂತವಾಗಿ ವಿಶ್ರಾಂತಿಗೊಂಡಿದೆ, ಹರ್ಷಧ್ವನಿಗೈಯುತ್ತಾರೆ. ಹೌದು, ತುರಾಯಿಮರಗಳೂ ಲೆಬನೋನಿನ ದೇವದಾರು ವೃಕ್ಷಗಳೂ ನೀನು ಬಿದ್ದುಕೊಂಡ ಮೇಲೆ ಕಡಿಯುವವನು ಯಾವನೂ ನಮ್ಮ ತಂಟೆಗೆ ಬಂದಿಲ್ಲವೆಂದು ನಿನ್ನ ವಿಷಯವಾಗಿ ಉಲ್ಲಾಸಗೊಳ್ಳುತ್ತವೆ.” (ಯೆಶಾಯ 14:7, 8) ಬಾಬೆಲಿನ ಅರಸರು, ತಮ್ಮ ಸುತ್ತಮುತ್ತಲಿದ್ದ ರಾಜರನ್ನು ಮರಗಳೆಂದು ಭಾವಿಸಿದರು. ಈ ಮರಗಳನ್ನು ಕಡಿದು, ಅವರು ತಮ್ಮ ಸ್ವಂತ ಉದ್ದೇಶಗಳಿಗಾಗಿ ಬಳಸಿಕೊಂಡರು. ಆದರೆ ಈಗ, ಅದೆಲ್ಲವೂ ಮುಗಿದುಹೋದ ಕಥೆ. ಬಾಬೆಲಿನ ಮರಕಡಿಯುವವನು ಇನ್ನು ಮುಂದೆ ಯಾವ ಮರವನ್ನೂ ಕಡಿಯಲಾರನು!

22. ಕಾವ್ಯಾತ್ಮಕವಾಗಿ, ಬಾಬೆಲ್‌ ರಾಜವಂಶದ ಪತನದಿಂದಾಗಿ ಸಮಾಧಿಯು ಹೇಗೆ ಪ್ರತಿಕ್ರಿಯಿಸುತ್ತದೆ?

22 ಬಾಬೆಲಿನ ಪತನವು ಎಷ್ಟೊಂದು ಅಚ್ಚರಿಯ ವಿಷಯವಾಗಿರುವುದೆಂದರೆ, ಸಮಾಧಿಯು ತಾನೇ ಹೀಗೆಂದು ಹೇಳುವುದು: “ಬರುತ್ತಿರುವ ನಿನ್ನನ್ನು ಎದುರುಗೊಳ್ಳುವದಕ್ಕೆ ಕೆಳಗಡೆ ಪಾತಾಳವು [“ಸಮಾಧಿ,” NW] ತಳಮಳಪಡುತ್ತದೆ; ನಿನಗೋಸ್ಕರ ಪ್ರೇತಗಳನ್ನು, ಅಂದರೆ ಭೂಲೋಕದಲ್ಲಿ ಮುಖಂಡರಾಗಿದ್ದವರೆಲ್ಲರನ್ನು ಎಚ್ಚರಗೊಳಿಸಿ ಜನಾಂಗಗಳ ಸಕಲ ರಾಜರನ್ನು ಅವರವರ ಆಸನಗಳಿಂದ ಎಬ್ಬಿಸುತ್ತದೆ. ಇವರೆಲ್ಲಾ ನಿನ್ನನ್ನು ಕುರಿತು​—⁠ನೀನು ಸಹ ನಮ್ಮ ಹಾಗೆ ಬಲಹೀನನಾದೆಯಾ? ನಮಗೆ ಸರಿಸಮಾನನಾದೆಯೋ? ಎಂದು ಹೇಳುತ್ತಾರೆ. ನಿನ್ನ ವೈಭವವೂ ವೀಣಾನಾದವೂ ಪಾತಾಳಕ್ಕೆ ತಳ್ಳಲ್ಪಟ್ಟಿವೆ; ನಿನಗೆ ಹುಳಗಳೇ ಹಾಸಿಗೆ, ಕ್ರಿಮಿಗಳೇ ಹೊದಿಕೆ.” (ಯೆಶಾಯ 14:9-11) ಎಂತಹ ಪ್ರಭಾವಕಾರಿ ಕಾವ್ಯಾತ್ಮಕ ಚಿತ್ರಣ! ಬಾಬೆಲಿನ ಅರಸರಿಗಿಂತ ಮುಂಚೆ ಮಡಿದ ಎಲ್ಲ ರಾಜರನ್ನು ಸ್ವತಃ ಮಾನವವರ್ಗದ ಸಮಾಧಿಯೇ ಎಬ್ಬಿಸಿ, ಬಂದಿರುವ ಹೊಸಬನಿಗೆ ಸ್ವಾಗತನೀಡುವ ಅವಕಾಶವನ್ನು ಅವರಿಗೆ ಕಲ್ಪಿಸಿಕೊಡುವುದೊ ಎಂಬಂತೆ ಇದಿದೆ. ಈ ರಾಜರು, ದುಬಾರಿ ಹಾಸಿಗೆಯ ಬದಲು ಹುಳಗಳ ಮೇಲೆ ಮಲಗಿ, ಬೆಲೆಬಾಳುವ ಹೊದಿಕೆಗಳ ಬದಲು ಕ್ರಿಮಿಗಳನ್ನೇ ಹೊದ್ದುಕೊಂಡು ನಿಸ್ಸಹಾಯಕವಾಗಿ ಬಿದ್ದುಕೊಂಡಿರುವ ಬಾಬೆಲಿನ ರಾಜವಂಶವನ್ನು ಕಂಡು ಗೇಲಿಮಾಡುತ್ತಾರೆ.

‘ತುಳಿತಕ್ಕೆ ಈಡಾದ ಶವದಂತೆ’

23, 24. ಬಾಬೆಲಿನ ರಾಜರು ಮಿತಿಮೀರಿದ ಅಹಂಕಾರವನ್ನು ತೋರಿಸುವುದು ಹೇಗೆ?

23 ಪದ್ಯವನ್ನು ಮುಂದುವರಿಸುತ್ತಾ ಯೆಶಾಯನು ಹೇಳುವುದು: “ಆಹಾ, ಉದಯನಕ್ಷತ್ರವೇ, ಬೆಳ್ಳಿಯೇ, ಆಕಾಶದಿಂದ ಹೇಗೆ ಬಿದ್ದೆ! ಜನಾಂಗಗಳನ್ನು ಕೆಡವಿದ ನೀನು ಕಡಿಯಲ್ಪಟ್ಟು ನೆಲಕ್ಕೆ ಉರುಳಿದೆಯಲ್ಲಾ!” (ಯೆಶಾಯ 14:12) ಸ್ವಾರ್ಥಪರ ಗರ್ವದ ಕಾರಣ, ಬಾಬೆಲಿನ ಅರಸರು ತಮ್ಮ ಸುತ್ತಲಿರುವವರಿಗಿಂತಲೂ ತಾವೇ ಉನ್ನತರೆಂದು ಭಾವಿಸಿಕೊಳ್ಳುತ್ತಾರೆ. ಪ್ರಕಾಶಮಾನವಾಗಿ ಬೆಳಗುತ್ತಿರುವ ಉದಯನಕ್ಷತ್ರದಂತೆ, ಅವರು ಗರ್ವದಿಂದ ಶಕ್ತಿ ಹಾಗೂ ಅಧಿಕಾರವನ್ನು ಚಲಾಯಿಸುತ್ತಾರೆ. ಅಶ್ಶೂರವು ಜಯಿಸದೆ ಹೋದ ಯೆರೂಸಲೇಮನ್ನು ನೆಬೂಕದ್ನೆಚ್ಚರನು ಗೆದ್ದುಕೊಂಡದ್ದು, ಅವರ ಪ್ರತಿಷ್ಠೆಯನ್ನು ಹೆಚ್ಚಿಸಿತು. ಆದಕಾರಣ, ಜಂಬಕೊಚ್ಚಿಕೊಳ್ಳುವ ಬಾಬೆಲಿನ ರಾಜವಂಶವು ಹೀಗೆ ಹೇಳುವುದಾಗಿ ಪದ್ಯವು ತಿಳಿಸುತ್ತದೆ: “ನೀನು ನಿನ್ನ ಮನಸ್ಸಿನಲ್ಲಿ​—⁠ನಾನು ಆಕಾಶಕ್ಕೆ ಹತ್ತಿ ಉತ್ತರದಿಕ್ಕಿನ ಕಟ್ಟಕಡೆಯಿರುವ ಸುರಗಣ [“ಸಭೆಸೇರುವ,” NW] ಪರ್ವತದಲ್ಲಿ ನನ್ನ ಸಿಂಹಾಸನವನ್ನು ದೇವರ ನಕ್ಷತ್ರಗಳಿಗಿಂತ ಮೇಲೆ ಏರಿಸಿ ಆಸೀನನಾಗುವೆನು; ಉನ್ನತ ಮೇಘಮಂಡಲದ ಮೇಲೆ ಏರಿ ಉನ್ನತೋನ್ನತನಿಗೆ ಸರಿಸಮಾನನಾಗುವೆನು ಅಂದುಕೊಂಡಿದ್ದೆಯಲ್ಲಾ!” (ಯೆಶಾಯ 14:13, 14) ಇದಕ್ಕಿಂತಲೂ ಮಿತಿಮೀರಿದ ಅಹಂಕಾರವು ಬೇರೆ ಇದ್ದೀತೊ?

24 ದಾವೀದನ ವಂಶದಲ್ಲಿ ಬರುವ ರಾಜರನ್ನು, ಬೈಬಲು ನಕ್ಷತ್ರಗಳಿಗೆ ಹೋಲಿಸುತ್ತದೆ. (ಅರಣ್ಯಕಾಂಡ 24:17) ದಾವೀದನಿಂದ ಆರಂಭಿಸಿ ಆ ‘ನಕ್ಷತ್ರಗಳು’ ಚೀಯೋನ್‌ ಪರ್ವತದಿಂದ ಆಳಿದವು. ಸೊಲೊಮೋನನು ಯೆರೂಸಲೇಮಿನಲ್ಲಿ ದೇವಾಲಯವನ್ನು ಕಟ್ಟಿದ ಬಳಿಕ, ಇಡೀ ನಗರವೇ ಚೀಯೋನ್‌ ಎಂಬ ಹೆಸರಿನಿಂದ ಕರೆಯಲ್ಪಟ್ಟಿತು. ಧರ್ಮಶಾಸ್ತ್ರಕ್ಕನುಸಾರ, ಎಲ್ಲ ಇಸ್ರಾಯೇಲ್ಯ ಪುರುಷರು ವರ್ಷಕ್ಕೆ ಮೂರಾವರ್ತಿ ಚೀಯೋನಿಗೆ ಹೋಗಲೇಬೇಕಿತ್ತು. ಹೀಗೆ ಅದು “ಸಭೆಸೇರುವ ಪರ್ವತ”ವಾಯಿತು. ಈ ಪರ್ವತದಿಂದ ಆಳುತ್ತಿದ್ದ ಯೆಹೂದ ಅರಸರನ್ನು ಸೋಲಿಸಿ, ಅವರನ್ನು ಆ ಪರ್ವತದಿಂದ ತೆಗೆದುಹಾಕುವ ಮೂಲಕ, ತನ್ನನ್ನು ಆ “ನಕ್ಷತ್ರಗಳಿಗಿಂತ” ಮೇಲಿನ ಸ್ಥಾನಕ್ಕೆ ಏರಿಸಿಕೊಳ್ಳಲು ನೆಬೂಕದ್ನೆಚ್ಚರನು ಬಯಸುತ್ತಾನೆ. ತಾನು ಅವರ ಮೇಲೆ ಸಾಧಿಸಿದ ಜಯಕ್ಕೆ ಅವನು ಯೆಹೋವನಿಗೆ ಕೀರ್ತಿ ಸಲ್ಲಿಸುವುದಿಲ್ಲ. ಬದಲಿಗೆ, ಅವನು ತನ್ನನ್ನೇ ಯೆಹೋವನ ಸ್ಥಾನದಲ್ಲಿ ಇರಿಸಿಕೊಳ್ಳುತ್ತಾನೆ.

25, 26. ಬಾಬೆಲಿನ ರಾಜವಂಶವು ಅವಮಾನಕರವಾದ ಅಂತ್ಯಕ್ಕೆ ತುತ್ತಾಗುವುದು ಹೇಗೆ?

25 ಈ ಅಹಂಕಾರಿ ಬಾಬೆಲ್‌ ರಾಜವಂಶದ ಸ್ಥಿತಿಯು ತಲೆಕೆಳಗಾಗಲಿದೆ! ಬಾಬೆಲು ದೇವರ ನಕ್ಷತ್ರಗಳಿಗಿಂತ ಉನ್ನತ ಸ್ಥಾನಕ್ಕೆ ಏರಿಸಲ್ಪಡಲಾರದು. ಬದಲಿಗೆ, ಯೆಹೋವನು ಹೇಳುವುದು: “ಆದರೆ ನೀನು ಪಾತಾಳಕ್ಕೆ, ಅಧೋಲೋಕದ ಅಗಾಧಸ್ಥಳಗಳಿಗೆ, ತಳ್ಳಲ್ಪಡುತ್ತಿದ್ದೀ. ನಿನ್ನನ್ನು ಕಂಡವರು ದಿಟ್ಟಿಸಿ ನೋಡಿ ಯೋಚಿಸುತ್ತಾ​—⁠ಭೂಮಿಯನ್ನು ನಡುಗಿಸಿ ರಾಜ್ಯಗಳನ್ನು ಕದಲಿಸಿ ಪಟ್ಟಣಗಳನ್ನು ಕೆಡವಿ ಲೋಕವನ್ನು ಕಾಡನ್ನಾಗಿ ಮಾಡಿ ಸೆರೆಹಿಡಿದವರನ್ನು ಮನೆಗೆ ಬಿಡದೆ ಇದ್ದವನು ಇವನೋ? ಅಂದುಕೊಳ್ಳುವರು.” (ಯೆಶಾಯ 14:15-17) ಈ ಹೆಬ್ಬಯಕೆಯ ರಾಜವಂಶವು, ಒಬ್ಬ ಸಾಮಾನ್ಯ ಮನುಷ್ಯನಂತೆ ಅಧೋಲೋಕ (ಶೀಯೋಲ್‌)ಕ್ಕೆ ಇಳಿಯುವುದು.

26 ಹಾಗಾದರೆ, ಅನೇಕ ರಾಜ್ಯಗಳನ್ನು ಜಯಿಸಿದ, ಫಲವತ್ತಾದ ಭೂಮಿಯನ್ನು ಧ್ವಂಸಮಾಡಿದ ಮತ್ತು ಲೆಕ್ಕವಿಲ್ಲದಷ್ಟು ನಗರಗಳನ್ನು ಕೆಡವಿಹಾಕಿದ ಆ ಸಾಮ್ರಾಜ್ಯವು ಎಲ್ಲಿ? ಜನರನ್ನು ಕೈದುಮಾಡಿ, ಅವರನ್ನು ಎಂದಿಗೂ ತಮ್ಮ ದೇಶಕ್ಕೆ ಕಳುಹಿಸದ ಆ ಲೋಕ ಶಕ್ತಿ ಎಲ್ಲಿ? ಅಷ್ಟೇಕೆ, ಈ ಬಾಬೆಲಿನ ರಾಜವಂಶಕ್ಕೆ ಗೌರವ ಯೋಗ್ಯವಾದ ಶವಸಂಸ್ಕಾರಕ್ಕೂ ಗತಿಯಿರುವುದಿಲ್ಲವಲ್ಲಾ! ಯೆಹೋವನು ಹೇಳುವುದು: “ಜನಾಂಗಗಳ ಎಲ್ಲಾ ಅರಸರೂ, ಹೌದು, ಸಕಲ ರಾಜರೂ ತಮ್ಮ ತಮ್ಮ ಮನೆಗಳಲ್ಲಿ ವೈಭವದೊಡನೆ ದೀರ್ಘ ನಿದ್ರೆಮಾಡುತ್ತಾರೆ. ನೀನಾದರೋ ನಿನ್ನ ಗೋರಿಗೆ ದೂರವಾಗಿ ಕೆಟ್ಟ ಮೊಳಿಕೆಯಂತೆ ಬಿಸಾಡಲ್ಪಟ್ಟಿದ್ದೀ; ನಿನ್ನ ಶವವು ತುಳಿತಕ್ಕೆ ಈಡಾಗಿದೆ, ಕತ್ತಿ ತಿವಿದು ಗುಂಡಿಯ ಕಲ್ಲುಗಳ ಪಾಲಾದ ಹತರೇ ಅದಕ್ಕೆ ಹೊದಿಕೆ. ನೀನು ಆ ರಾಜರಂತೆ ಗೋರಿಗೆ ಸೇರುವದಿಲ್ಲ; ನಿನ್ನ ಪ್ರಜೆಯನ್ನು ಕೊಂದು ನಿನ್ನ ದೇಶವನ್ನು ಹಾಳುಮಾಡಿದ್ದೀ, ದುಷ್ಟರ ಸಂತಾನವು ನಿರಂತರವೂ ನಿರ್ನಾಮವಾಗಿರುವದಲ್ಲವೆ.” (ಯೆಶಾಯ 14:18-20) ಗತಕಾಲದಲ್ಲಿ ಒಬ್ಬ ರಾಜನಿಗೆ ಗೌರವಾರ್ಹವಾದ ಶವಸಂಸ್ಕಾರ ಮಾಡದಿದ್ದಲ್ಲಿ, ಅದನ್ನು ಅವಮಾನವಾಗಿ ಪರಿಗಣಿಸಲಾಗುತ್ತಿತ್ತು. ಹಾಗಾದರೆ, ಬಾಬೆಲಿನ ರಾಜವಂಶದ ಕುರಿತೇನು? ಕೆಲವು ವ್ಯಕ್ತಿಗತ ರಾಜರಿಗೆ ಗೌರವಾರ್ಹವಾದ ಶವಸಂಸ್ಕಾರ ಮಾಡಲಾಗುತ್ತದಾದರೂ, ನೆಬೂಕದ್ನೆಚ್ಚರನಿಂದ ಬಂದ ರಾಜವಂಶವನ್ನು “ಕೆಟ್ಟ ಮೊಳಿಕೆಯಂತೆ” ಬಿಸಾಡಲಾಗುತ್ತದೆ. ಇದು, ಒಂದು ಗುರುತಿಲ್ಲದ ಸಮಾಧಿಯಲ್ಲಿ ಹೂಳಲ್ಪಡುವ ಒಬ್ಬ ಸಾಮಾನ್ಯ ಕಾಲಾಳಿನಂತೆ ಈ ರಾಜವಂಶವನ್ನು ಬಿಸಾಡಲಾಗುತ್ತದೊ ಎಂಬಂತಿದೆ. ಎಂತಹ ಅವಮಾನ!

27. ಯಾವ ವಿಧದಲ್ಲಿ ಬಾಬೆಲಿನ ಮುಂದಿನ ತಲೆಮಾರುಗಳು, ತಮ್ಮ ಪಿತೃಗಳ ಅಧರ್ಮದ ನಿಮಿತ್ತ ಕಷ್ಟಾನುಭವಿಸುತ್ತವೆ?

27 ಜಯಶಾಲಿಗಳಾಗಲಿದ್ದ ಮೇದ್ಯಯಪಾರಸಿಯರಿಗೆ ಅಂತಿಮ ಆಜ್ಞೆಗಳನ್ನು ವಿಧಿಸುತ್ತಾ, ಈ ಪದ್ಯವು ಕೊನೆಗೊಳ್ಳುತ್ತದೆ: “ಪಿತೃಗಳ ಅಧರ್ಮದ ನಿಮಿತ್ತ ಇವನ ಮಕ್ಕಳಿಗೂ ವಧ್ಯಸ್ಥಾನವನ್ನು ಸಿದ್ಧಮಾಡಿರಿ! ಅವರು ತಲೆಯೆತ್ತಿ ಲೋಕವನ್ನು ವಶಪಡಿಸಿಕೊಂಡು ಭೂಮಂಡಲದ ಮೇಲೆಲ್ಲಾ ಪಟ್ಟಣಗಳನ್ನು ಕಟ್ಟಿಕೊಳ್ಳದಿರಲಿ!” (ಯೆಶಾಯ 14:21) ಬಾಬೆಲಿನ ಪತನವು ಶಾಶ್ವತವಾಗಿರುವುದು. ಆ ರಾಜವಂಶವು ಬೇರು ಸಹಿತ ಕಿತ್ತುಹಾಕಲ್ಪಡುವುದು. ಅದಕ್ಕೆ ಮರುಹುಟ್ಟೇ ಇಲ್ಲ. ಬಾಬೆಲಿನ ಮುಂದಿನ ತಲೆಮಾರುಗಳು ತಮ್ಮ “ಪಿತೃಗಳ ಅಧರ್ಮದ” ನಿಮಿತ್ತ ಕಷ್ಟಾನುಭವಿಸುವವು.

28. ಬಾಬೆಲಿನ ಅರಸರ ಪಾಪದ ಮೂಲವು ಏನಾಗಿತ್ತು, ಮತ್ತು ಇದರಿಂದ ನಾವು ಏನನ್ನು ಕಲಿಯುತ್ತೇವೆ?

28 ಬಾಬೆಲಿನ ರಾಜವಂಶದ ಮೇಲೆ ಪ್ರಕಟಿಸಲಾದ ತೀರ್ಪು, ನಮಗೆಲ್ಲರಿಗೂ ಒಂದು ಪ್ರಮುಖವಾದ ಪಾಠವನ್ನು ಕಲಿಸುತ್ತದೆ. ಬಾಬೆಲಿನ ರಾಜರ ಪಾಪವು, ಅವರ ಅಪರಿಮಿತ ಹೆಬ್ಬಯಕೆಯಲ್ಲಿ ಬೇರೂರಿತ್ತು. (ದಾನಿಯೇಲ 5:23) ಅವರ ಹೃದಯಗಳು ಅಧಿಕಾರ ದಾಹದಿಂದ ತುಂಬಿಹೋಗಿದ್ದವು. ಇತರರನ್ನು ತಮ್ಮ ಬಿಗಿಮುಷ್ಠಿಯಲ್ಲಿ ಇಟ್ಟುಕೊಳ್ಳಲು ಅವರು ಬಯಸಿದರು. (ಯೆಶಾಯ 47:​5, 6) ದೇವರಿಗೆ ಮಾತ್ರ ಸಲ್ಲಬೇಕಾದ ಮಹಿಮೆಯನ್ನು, ಅವರು ಮನುಷ್ಯರಿಂದ ಪಡೆಯಲು ಹಾತೊರೆದರು. (ಪ್ರಕಟನೆ 4:11) ಇದು ಅಧಿಕಾರದಲ್ಲಿರುವ ಎಲ್ಲರಿಗೆ ಮತ್ತು ಕ್ರೈಸ್ತ ಸಭೆಯಲ್ಲಿರುವವರಿಗೂ ಒಂದು ಎಚ್ಚರಿಕೆಯಾಗಿದೆ. ಹೆಬ್ಬಯಕೆ ಮತ್ತು ಸ್ವಾರ್ಥಪರ ಅಹಂಕಾರದಂತಹ ಗುಣಲಕ್ಷಣಗಳು ವ್ಯಕ್ತಿಗಳಲ್ಲಿರಲಿ ಇಲ್ಲವೇ ರಾಷ್ಟ್ರಗಳಲ್ಲಿರಲಿ, ಯೆಹೋವನು ಅವುಗಳನ್ನು ಎಂದಿಗೂ ಸಹಿಸಲಾರನು.

29. ಬಾಬೆಲ್‌ ಅರಸರ ಅಹಂಕಾರ ಹಾಗೂ ಹೆಬ್ಬಯಕೆಯು ಯಾವುದರ ಪ್ರತಿಬಿಂಬವಾಗಿತ್ತು?

29 ಬಾಬೆಲಿನ ಅರಸರ ಗರ್ವವು, ‘ಈ ಪ್ರಪಂಚದ ದೇವನಾಗಿರುವ’ ಪಿಶಾಚನಾದ ಸೈತಾನನ ಮನೋಭಾವವನ್ನೇ ಪ್ರತಿಬಿಂಬಿಸಿತು. (2 ಕೊರಿಂಥ 4:⁠4) ಅವನು ಕೂಡ ಅಧಿಕಾರಕ್ಕಾಗಿ ಹಾತೊರೆಯುತ್ತಾನೆ ಮತ್ತು ಯೆಹೋವ ದೇವರಿಗಿಂತಲೂ ಉನ್ನತ ಸ್ಥಾನಕ್ಕೆ ಏರಲು ಬಯಸುತ್ತಾನೆ. ಬಾಬೆಲಿನ ರಾಜ ಮತ್ತು ಅವನು ಸ್ವಾಧೀನಪಡಿಸಿಕೊಂಡ ಜನರಿಗಾದಂತೆಯೇ ಸೈತಾನನ ದುಷ್ಟ ಹೆಬ್ಬಯಕೆಯು, ಇಡೀ ಮಾನವವರ್ಗಕ್ಕೆ ಕಷ್ಟಸಂಕಟವನ್ನು ಬರಮಾಡಿದೆ.

30. ಬೇರೆ ಯಾವ ಬಾಬೆಲಿನ ಕುರಿತು ಬೈಬಲಿನಲ್ಲಿ ತಿಳಿಸಲಾಗಿದೆ, ಮತ್ತು ಯಾವ ಮನೋಭಾವವನ್ನು ಅದು ತೋರಿಸಿದೆ?

30 ಪ್ರಕಟನೆ ಪುಸ್ತಕದಲ್ಲಿ, ನಾವು ಮತ್ತೊಂದು ಬಾಬೆಲಿನ ಕುರಿತು ಓದುತ್ತೇವೆ. ಅದು ‘ಮಹಾ ಬಾಬೆಲ್‌’ ಎಂಬ ಹೆಸರಿನಿಂದ ಗುರುತಿಸಲ್ಪಡುತ್ತದೆ. (ಪ್ರಕಟನೆ 18:⁠2) ಸುಳ್ಳು ಧರ್ಮದ ಲೋಕ ಸಾಮ್ರಾಜ್ಯವಾಗಿರುವ ಈ ಸಂಘಟನೆಯು ಕೂಡ, ಗರ್ವಿಷ್ಠ, ಪೀಡಕ ಮತ್ತು ಕ್ರೂರ ಮನೋಭಾವವನ್ನೇ ತೋರ್ಪಡಿಸಿದೆ. ಈ ಕಾರಣ, ಅದು ಕೂಡ “ಯೆಹೋವನ ದಿನ”ವನ್ನು ಎದುರಿಸಿ, ದೇವರ ನೇಮಿತ ಸಮಯದಲ್ಲಿ ನಾಶವಾಗುವುದು. (ಯೆಶಾಯ 13:⁠6) 1919ರಂದಿನಿಂದ, “ಬಾಬೆಲೆಂಬ ಮಹಾ ನಗರಿಯು ಬಿದ್ದಳು” ಎಂಬ ಸಂದೇಶವು ಭೂಮಿಯ ಎಲ್ಲೆಡೆಯೂ ಘೋಷಿಸಲ್ಪಟ್ಟಿದೆ. (ಪ್ರಕಟನೆ 14:⁠8) ಬಾಬೆಲು ದೇವಜನರನ್ನು ಸೆರೆವಾಸದಲ್ಲಿಡಲು ಅಸಮರ್ಥವಾದಾಗ, ಬಿದ್ದುಹೋಯಿತು. ಬೇಗನೆ ಅದು ಸಂಪೂರ್ಣ ನಾಶನವನ್ನು ಅನುಭವಿಸುವುದು. ಪುರಾತನ ಬಾಬೆಲಿನ ಬಗ್ಗೆ ಯೆಹೋವನು ಆಜ್ಞಾಪಿಸಿದ್ದು: “ಅದರ ಕೃತ್ಯಕ್ಕೆ ತಕ್ಕಂತೆ ಮುಯ್ಯಿತೀರಿಸಿರಿ; ಅದು ಮಾಡಿದಂತೆಯೇ ಅದಕ್ಕೆ ಮಾಡಿರಿ; ಅದು ಸೊಕ್ಕೇರಿ ಇಸ್ರಾಯೇಲ್ಯರ ಸದಮಲಸ್ವಾಮಿಯಾದ ಯೆಹೋವನನ್ನು ಅಸಡ್ಡೆಮಾಡಿತಲ್ಲಾ.” (ಯೆರೆಮೀಯ 50:29; ಯಾಕೋಬ 2:13) ಮಹಾ ಬಾಬೆಲು ಸಹ ತದ್ರೀತಿಯ ನ್ಯಾಯತೀರ್ಪಿಗೆ ಗುರಿಯಾಗುವುದು.

31. ಶೀಘ್ರದಲ್ಲೇ ಮಹಾ ಬಾಬೆಲಿಗೆ ಏನು ಸಂಭವಿಸುವುದು?

31 ಹೀಗೆ, ಯೆಶಾಯನ ಪುಸ್ತಕದಲ್ಲಿರುವ ಈ ಪ್ರವಾದನೆಯಲ್ಲಿ ದಾಖಲಿಸಲಾಗಿರುವ ಯೆಹೋವನ ಅಂತಿಮ ಹೇಳಿಕೆಯು, ಪುರಾತನ ಬಾಬೆಲಿಗೆ ಮಾತ್ರವಲ್ಲ ಮಹಾ ಬಾಬೆಲಿಗೂ ಅನ್ವಯಿಸುತ್ತದೆ: “ನಾನು ಅವರಿಗೆ ವಿರುದ್ಧವಾಗಿ ಎದ್ದು ಬಾಬೆಲಿನಿಂದ ಹೆಸರನ್ನೂ ಜನಶೇಷವನ್ನೂ ಪುತ್ರಪೌತ್ರರನ್ನೂ ಕತ್ತರಿಸಿಬಿಡುವೆನು; ಮತ್ತು ಆ ಪ್ರದೇಶವನ್ನು ಜವುಗುನೆಲವನ್ನಾಗಿಯೂ ಮುಳ್ಳುಹಂದಿಗೆ ಸೊತ್ತನ್ನಾಗಿಯೂ ಮಾಡಿ ನಾಶನವೆಂಬ ಬರಲಿನಿಂದ ಗುಡಿಸಿಬಿಡುವೆನು.” (ಯೆಶಾಯ 14:22, 23) ಪುರಾತನ ಬಾಬೆಲಿನ ಭಗ್ನಾವಶೇಷಗಳು, ಯೆಹೋವನು ಬೇಗನೆ ಮಹಾ ಬಾಬೆಲಿಗೆ ಏನು ಮಾಡಲಿರುವನೆಂಬುದನ್ನು ತೋರಿಸುತ್ತವೆ. ಸತ್ಯಾರಾಧನೆಯನ್ನು ಪ್ರೀತಿಸುವವರಿಗೆ ಎಂತಹ ಉಪಶಮನ! ಸೈತಾನನ ಗುಣಲಕ್ಷಣಗಳಾದ ಗರ್ವ, ಹೆಮ್ಮೆ ಇಲ್ಲವೆ ಕ್ರೂರತನವು ನಮ್ಮಲ್ಲಿ ಎಂದಿಗೂ ಬೆಳೆಯಬಿಡದಂತೆ ಪ್ರಯಾಸಪಡುತ್ತಿರಲು ನಮಗೆಂತಹ ಉತ್ತೇಜನ!

[ಪಾದಟಿಪ್ಪಣಿಗಳು]

^ ಪ್ಯಾರ. 10 ಯೆಶಾಯನು ಮೇದ್ಯರನ್ನು ಮಾತ್ರ ಹೆಸರಿಸುವುದಾದರೂ, ಬಾಬೆಲಿನ ವಿರುದ್ಧ ಮೇದ್ಯ, ಪಾರಸಿಯ, ಏಲಾಮ ಮತ್ತು ಇತರ ಚಿಕ್ಕಪುಟ್ಟ ಜನಾಂಗಗಳು ಕೂಡಿಕೊಂಡಿರುವವು. (ಯೆರೆಮೀಯ 50:9; 51:​24, 27, 28) ಸುತ್ತಮುತ್ತಲಿನ ರಾಷ್ಟ್ರಗಳು, ಮೇದ್ಯಪಾರಸಿಯರನ್ನು ಒಟ್ಟಾಗಿ “ಮೇದ್ಯರು” ಎಂಬುದಾಗಿ ಸೂಚಿಸಿದವು. ಅಲ್ಲದೆ, ಯೆಶಾಯನ ದಿನದಲ್ಲಿ ಮೇದ್ಯರು ಪ್ರಬಲರಾಗಿದ್ದರು. ಪಾರಸಿಯರು ಪ್ರಾಬಲ್ಯಕ್ಕೆ ಬಂದದ್ದು ಕೋರೆಷನ ಆಳ್ವಿಕೆಯ ಸಮಯದಲ್ಲಿ ಮಾತ್ರ.

^ ಪ್ಯಾರ. 12 ಆದರೆ, ಕಾಲಕಳೆದಂತೆ ಮೇದ್ಯರು ಮತ್ತು ಪಾರಸಿಯರು ಸುಖಭೋಗಗಳಿಗಾಗಿ ಅತಿಯಾಗಿ ಆಶಿಸತೊಡಗಿದರೆಂದು ತಿಳಿದುಬರುತ್ತದೆ.​—⁠ಎಸ್ತೇರಳು 1:​1-7.

^ ಪ್ಯಾರ. 17 ಉದಾಹರಣೆಗೆ, ದಾನಿಯೇಲನು ಮೇದ್ಯಯಪಾರಸಿಯರ ಆಳ್ವಿಕೆಯಲ್ಲಿ ಬಾಬೆಲಿನ ಒಬ್ಬ ಉನ್ನತ ಅಧಿಕಾರಿಯಾಗಿ ನೇಮಿಸಲ್ಪಟ್ಟಿದ್ದನು. ಮತ್ತು 60 ವರ್ಷಗಳ ನಂತರ, ಎಸ್ತೇರಳು ಪಾರಸಿಯ ರಾಜನಾದ ಅಹಷ್ವೇರೋಷನ ರಾಣಿಯಾದಳು ಮತ್ತು ಮೊರ್ದೆಕೈ ಇಡೀ ಪಾರಸಿಯ ಸಾಮ್ರಾಜ್ಯದ ಪ್ರಧಾನ ಮಂತ್ರಿಯಾದನು.

[ಅಧ್ಯಯನ ಪ್ರಶ್ನೆಗಳು]

[ಪುಟ 178ರಲ್ಲಿರುವ ಚಿತ್ರ]

ಬಿದ್ದುಹೋದ ಬಾಬೆಲು ಕಾಡು ಜೀವಿಗಳ ವಾಸಸ್ಥಾನವಾಗುವುದು

[ಪುಟ 186ರಲ್ಲಿರುವ ಚಿತ್ರಗಳು]

ಪುರಾತನ ಬಾಬೆಲಿನಂತೆ, ಮಹಾ ಬಾಬೆಲು ಭಗ್ನಾವಶೇಷಗಳ ಗುಡ್ಡೆಯಾಗುವುದು