ಯೆಶಾಯ 1:1-31
1 ಉಜ್ಜೀಯ,+ ಯೋತಾಮ,+ ಆಹಾಜ+ ಮತ್ತು ಹಿಜ್ಕೀಯ+ ಅನ್ನೋ ಯೆಹೂದದ ರಾಜರ+ ಕಾಲದಲ್ಲಿ ಆಮೋಚನ ಮಗ ಯೆಶಾಯ*+ ಯೆಹೂದ ಮತ್ತು ಯೆರೂಸಲೇಮಿಗೆ ಏನಾಗುತ್ತೆ ಅಂತ ಒಂದು ದರ್ಶನವನ್ನ ಕಂಡ. ಅದೇನಂದ್ರೆ:
2 ಆಕಾಶವೇ ಕೇಳು, ಭೂಮಿಯೇ ಗಮನಿಸು,+ಯೆಹೋವ ಹೀಗೆ ಹೇಳಿದ್ದಾನೆ:
“ನಾನು ಸಾಕಿ ಬೆಳೆಸಿದ ಗಂಡು ಮಕ್ಕಳೇ+ನನ್ನ ವಿರುದ್ಧ ದಂಗೆ ಎದ್ದಿದ್ದಾರೆ.+
3 ಹೋರಿಗೆ ತನ್ನ ಯಜಮಾನನ ಬಗ್ಗೆ ಚೆನ್ನಾಗಿ ಗೊತ್ತಿರುತ್ತೆ,ಕತ್ತೆಗೆ ತನ್ನ ಒಡೆಯ ತನಗೆ ಎಲ್ಲಿ ಮೇವು ಹಾಕ್ತಾನೆ ಅಂತ ಗೊತ್ತಿರುತ್ತೆ.
ಆದ್ರೆ ಇಸ್ರಾಯೇಲ್ಯರಿಗೆ ನನ್ನ* ಪರಿಚಯ ಇಲ್ಲ,+ನನ್ನ ಸ್ವಂತ ಜನ ತಿಳುವಳಿಕೆಯಿಂದ ನಡ್ಕೊಳ್ಳಲ್ಲ.”
4 ಪಾಪಿಷ್ಠ ಜನಾಂಗವೇ, ನಿನ್ನ ಗತಿ ಏನು ಹೇಳಲಿ!+
ಪಾಪದ ಭಾರ ಹೊತ್ತಿರೋ ಜನ್ರೇ,ಕೆಟ್ಟವರ ಸಂತತಿಯೇ, ಭ್ರಷ್ಟ ಮಕ್ಕಳೇ, ನಿಮ್ಮ ಗತಿ ಏನು ಹೇಳಲಿ!
ನೀವು ಯೆಹೋವನನ್ನ ತೊರೆದುಬಿಟ್ರಿ,+ಇಸ್ರಾಯೇಲ್ಯರ ಪವಿತ್ರ ದೇವ್ರನ್ನ ಅಗೌರವಿಸಿದ್ರಿ.
ನೀವು ಆತನಿಗೆ ಬೆನ್ನು ಹಾಕಿದ್ರಿ.
5 ನಿಮ್ಮನ್ನ ಹೊಡಿಯೋಕೆ ನಿಮ್ಮ ದೇಹದಲ್ಲಿ ಯಾವ ಸ್ಥಳ ತಾನೇ ಉಳಿದಿದೆ?
ಯಾಕೆ ನೀವು ದಂಗೆ ಏಳ್ತೀರಾ?+
ನಿಮ್ಮ ತಲೆ ತುಂಬ ಗಾಯಗಳೇ,ನಿಮ್ಮ ಹೃದಯ ತುಂಬ ರೋಗ ತುಂಬಿದೆ.+
6 ಅಡಿಯಿಂದ ಮುಡಿ ತನಕ ಆರೋಗ್ಯವಾಗಿರೋ ಒಂದು ಸ್ಥಳನೂ ಇಲ್ಲ.
ಎಲ್ಲ ಕಡೆ ಗಾಯ, ಏಟು, ಕೀವುಗಟ್ಟಿದ ಹುಣ್ಣುಗಳು.
ಅವುಗಳ ಕೀವನ್ನ ತೆಗೆದಿಲ್ಲ,* ಅವುಗಳನ್ನ ಕಟ್ಟಿಲ್ಲ, ಎಣ್ಣೆ ಸವರಿ ಮೃದು ಮಾಡಿಲ್ಲ.+
7 ನಿಮ್ಮ ದೇಶ ಹಾಳುಬಿದ್ದಿದೆ,ನಿಮ್ಮ ಪಟ್ಟಣಗಳು ಬೆಂಕಿಯಿಂದ ಸುಟ್ಟೋಗಿವೆ.
ವಿದೇಶಿಯರು ನಿಮ್ಮ ಕಣ್ಮುಂದೆನೇ ನಿಮ್ಮ ದೇಶನ ನುಂಗಿಹಾಕಿದ್ದಾರೆ.+
ಶತ್ರುಗಳ ದಾಳಿ ಆದ ಮೇಲೆ ಹಾಳುಬೀಳೋ ದೇಶದ ತರ ಅದು ನಿರ್ಜನವಾಗಿದೆ.+
8 ದ್ರಾಕ್ಷಿತೋಟದಲ್ಲಿರೋ ಚಪ್ಪರದ ತರ,ಸೌತೆ ಹೊಲದಲ್ಲಿರೋ ಗುಡಿಸಲಿನ ತರ,ಮುತ್ತಿಗೆ ಹಾಕಲಾಗಿರೋ ಪಟ್ಟಣದ ತರ ಚೀಯೋನ್ ಪಟ್ಟಣನ ಬಿಟ್ಟು ಬಿಡಲಾಗಿದೆ.+
9 ಸೈನ್ಯಗಳ ದೇವರಾದ ಯೆಹೋವ ನಮ್ಮಲ್ಲಿ ಸ್ವಲ್ಪ ಜನ್ರನ್ನಾದ್ರೂ ಉಳಿಸದೆ ಹೋಗಿದ್ರೆ,ನಾವು ಸೊದೋಮಿನ ತರ ಆಗ್ತಿದ್ವಿ,ಗೊಮೋರಕ್ಕೆ ಆದ ಗತಿನೇ ನಮಗೂ ಆಗ್ತಿತ್ತು.+
10 ಸೊದೋಮನ್ನ ಆಳುವವರೇ,*+ ಯೆಹೋವನ ಮಾತು ಕೇಳಿ.
ಗೊಮೋರದ ಜನ್ರೇ,+ ನಮ್ಮ ದೇವರ ನಿಯಮ ಪುಸ್ತಕಕ್ಕೆ* ಗಮನಕೊಡಿ.
11 ಯೆಹೋವ ಹೀಗೆ ಹೇಳ್ತಿದ್ದಾನೆ “ನೀವು ಕೊಡೋ ತುಂಬ ಬಲಿಗಳಿಂದ ನನಗೇನು ಲಾಭ?+
ನಿಮ್ಮ ಟಗರುಗಳ ಸರ್ವಾಂಗಹೋಮ ಬಲಿಗಳಿಂದ ಮತ್ತು ದಷ್ಟಪುಷ್ಟ ಪ್ರಾಣಿಗಳ ಕೊಬ್ಬಿಂದ+ ನನಗೆ ಸಾಕಾಗಿ ಹೋಗಿದೆ,+ಹೋರಿ,+ ಕುರಿ, ಆಡುಗಳ+ ರಕ್ತದಲ್ಲಿ ನನಗೆ ಸಂತೋಷ ಇಲ್ಲ.+
12 ನನ್ನ ಸನ್ನಿಧಿಗೆ ಬರೋಕೆ,+ನನ್ನ ಅಂಗಳಗಳನ್ನ ಹೀಗೆ ತುಳಿಯೋಕೆನಿಮ್ಮನ್ನ ಕೇಳಿಕೊಂಡವ್ರು ಯಾರು?+
13 ಪ್ರಯೋಜನಕ್ಕೆ ಬಾರದ ಧಾನ್ಯ ಅರ್ಪಣೆ ತರೋದನ್ನ ನಿಲ್ಲಿಸಿ.
ನಿಮ್ಮ ಧೂಪ ನನಗೆ ಅಸಹ್ಯ.+
ನೀವು ಅಮಾವಾಸ್ಯೆಯನ್ನ,+ ಸಬ್ಬತ್ತನ್ನ ಆಚರಿಸ್ತೀರ,+ ಸಮ್ಮೇಳನಗಳಿಗೆ ಸೇರಿಬರ್ತಿರ.+
ಆಕಡೆ ಅದೂ ಮಾಡ್ತೀರ ಈಕಡೆ ಮಂತ್ರತಂತ್ರಗಳನ್ನೂ+ ಮಾಡ್ತೀರ. ಅದನ್ನ ನನ್ನಿಂದ ಸಹಿಸೋಕಾಗಲ್ಲ.
14 ನಾನು ನಿಮ್ಮ ಅಮಾವಾಸ್ಯೆಗಳನ್ನ ಮತ್ತು ಹಬ್ಬಗಳನ್ನ ದ್ವೇಷಿಸ್ತೀನಿ.
ಅವು ನನಗೆ ಹೊರೆ.
ಅವುಗಳನ್ನ ಸಹಿಸಿ ಸಹಿಸಿ ಸಾಕಾಗಿದೆ.
15 ಪ್ರಾರ್ಥನೆ ಮಾಡೋಕೆ ನೀವು ಕೈಗಳನ್ನ ಚಾಚುವಾಗನಾನು ನಿಮ್ಮನ್ನ ನೋಡಲ್ಲ.+
ನೀವು ಎಷ್ಟು ಸಲ ಪ್ರಾರ್ಥಿಸಿದ್ರೂ+ನಾನು ಕೇಳಲ್ಲ.+
ಯಾಕಂದ್ರೆ ನಿಮ್ಮ ಕೈ ರಕ್ತದಿಂದ ತುಂಬಿದೆ.+
16 ನೀವು ನಿಮ್ಮನ್ನ ತೊಳ್ಕೊಂಡು ಶುದ್ಧಮಾಡ್ಕೊಳ್ಳಿ,+ನನ್ನ ಕಣ್ಮುಂದಿಂದ ನಿಮ್ಮ ಕೆಟ್ಟ ಕೆಲಸಗಳನ್ನ ದೂರತಳ್ಳಿ,ಕೆಟ್ಟದ್ದು ಮಾಡೋದನ್ನ ನಿಲ್ಲಿಸಿ.+
17 ಒಳ್ಳೇ ಕೆಲಸ ಮಾಡೋದನ್ನ ಕಲಿರಿ, ನ್ಯಾಯದಿಂದ ನಡಿರಿ,+ದಬ್ಬಾಳಿಕೆ ಮಾಡೋರನ್ನ ತಿದ್ದಿ ಸರಿಮಾಡಿ,ತಂದೆಯಿಲ್ಲದ ಮಗುವಿನ* ಹಕ್ಕುಗಳಿಗಾಗಿ ಹೋರಾಡಿ,ವಿಧವೆ ಪರವಾಗಿ ವಾದಿಸಿ.”+
18 ಯೆಹೋವ ಹೀಗೆ ಹೇಳ್ತಿದ್ದಾನೆ: “ಬನ್ನಿ, ನಾವೀಗ ನಮ್ಮ ಮಧ್ಯ ಇರೋ ವಿಷ್ಯಗಳನ್ನ ಇತ್ಯರ್ಥ ಮಾಡ್ಕೊಳ್ಳೋಣ,+ನಿಮ್ಮ ಪಾಪಗಳು ಕಡುಗೆಂಪಾಗಿದ್ರೂಅವನ್ನ ಹಿಮದ ತರ ಬೆಳ್ಳಗೆ ಮಾಡ್ತೀನಿ.+
ತುಂಬ ಕೆಂಪಗೆ ಇರೋ ಬಟ್ಟೆ ತರ ಇದ್ರೂಉಣ್ಣೆ ತರ ಬೆಳ್ಳಗೆ ಮಾಡ್ತೀನಿ.
19 ನೀವು ನನ್ನ ಮಾತು ಕೇಳೋ ಮನಸ್ಸು ಮಾಡಿದ್ರೆದೇಶದ ಒಳ್ಳೇ ಊಟ ತಿಂತೀರ.+
20 ಆದ್ರೆ ನೀವು ಅದನ್ನ ಕೇಳದೆ ದಂಗೆ ಎದ್ರೆಕತ್ತಿಗೆ ಬಲಿಯಾಗ್ತೀರ.+
ಯಾಕಂದ್ರೆ ಈ ಮಾತು ಯೆಹೋವನ ಬಾಯಿಂದ ಬಂದಿದ್ದು.”
21 ನಂಬಿಗಸ್ತಿಕೆಯಿಂದ ಇದ್ದ ಪಟ್ಟಣ+ ಹೇಗೆ ವೇಶ್ಯೆ ತರ ಆಯ್ತಂತ ನೋಡಿ!+
ಆ ಪಟ್ಟಣದಲ್ಲಿ ನ್ಯಾಯ ತುಂಬಿತ್ತು,+ನೀತಿ ನೆಲೆಸಿತ್ತು,+ಆದ್ರೆ ಈಗ ಅಲ್ಲಿ ಕೊಲೆಗಾರರೇ ತುಂಬ್ಕೊಂಡಿದ್ದಾರೆ.+
22 ನಿನ್ನ ಬೆಳ್ಳಿ ಕಲ್ಮಶದ* ತರ ಆಗಿದೆ+ನಿನ್ನ ಮದ್ಯದಲ್ಲಿ* ನೀರು ಬೆರೆತು ಹೋಗಿದೆ.
23 ನಿನ್ನ ಅಧಿಕಾರಿಗಳು ಹಠಮಾರಿಗಳಾಗಿದ್ದಾರೆ, ಅವರು ಕಳ್ಳರ ಜೊತೆ ಕೈಜೊಡಿಸಿದ್ದಾರೆ.+
ಅವ್ರಲ್ಲಿ ಪ್ರತಿಯೊಬ್ಬರು ಲಂಚನ ಪ್ರೀತಿಸ್ತಾರೆ, ಉಡುಗೊರೆಗಳನ್ನ ಎದುರುನೋಡ್ತಾರೆ.+
ತಂದೆಯಿಲ್ಲದ ಮಕ್ಕಳಿಗೆ ಅವರು ನ್ಯಾಯ ಕೊಡಿಸಲ್ಲ,ವಿಧವೆಯರ ಮೊಕದ್ದಮೆ ಅವ್ರಿಗೆ ತಲುಪೋದೇ ಇಲ್ಲ.+
24 ಹಾಗಾಗಿ ನಿಜವಾದ ಒಡೆಯನೂ ಸೈನ್ಯಗಳ ದೇವರೂ ಆದ ಯೆಹೋವ,ಇಸ್ರಾಯೇಲ್ಯರ ಬಲಿಷ್ಠ ದೇವರು ಹೀಗೆ ಘೋಷಿಸ್ತಿದ್ದಾನೆ “ನಾನು ನನ್ನ ಶತ್ರುಗಳನ್ನ ಅಳಿಸಿಹಾಕ್ತೀನಿ,ನನ್ನ ಶತ್ರುಗಳ ವಿರುದ್ಧ ಸೇಡು ತೀರಿಸ್ತೀನಿ.+
25 ನನ್ನ ಕೈಯನ್ನ ನಿನ್ನ ವಿರುದ್ಧ ಎತ್ತುತೀನಿ,ಸಾಬೂನಿನಿಂದ ತೊಳೆಯೋ ತರ ನಿನ್ನ ಕಲ್ಮಶವನ್ನೆಲ್ಲ ತೊಳೆದುಬಿಡ್ತೀನಿ,ನಿನ್ನ ಕೊಳೆಯನ್ನ ತೆಗೆದುಬಿಡ್ತೀನಿ.+
26 ಮೊದಲಿನ ತರ ಮತ್ತೊಮ್ಮೆನಾನು ನಿನಗೆ ನ್ಯಾಯಾಧೀಶರನ್ನ ಮತ್ತು ಸಲಹೆಗಾರರನ್ನ ಕೊಡ್ತೀನಿ.+
ಇದಾದ ಮೇಲೆ ನಿನ್ನನ್ನ ನೀತಿಯ ಪಟ್ಟಣ ಮತ್ತು ನಂಬಿಗಸ್ತ ಪಟ್ಟಣ ಅಂತ ಕರೀತಾರೆ.+
27 ಚೀಯೋನನ್ನ ನ್ಯಾಯದಿಂದ,ವಾಪಸ್ ಬರೋ ಅದ್ರ ಜನ್ರನ್ನ ನೀತಿಯಿಂದ ಬಿಡಿಸಲಾಗುತ್ತೆ.+
28 ದಂಗೆ ಏಳೋರನ್ನ ಮತ್ತು ಪಾಪಿಗಳನ್ನ ಒಟ್ಟಿಗೆ ನಾಶಮಾಡಲಾಗುತ್ತೆ,+ಯೆಹೋವನನ್ನ ತೊರೆದು ಬಿಟ್ಟವರು ಅಂತ್ಯ ಕಾಣ್ತಾರೆ.+
29 ನೀವು ಇಷ್ಟಪಟ್ಟ ದೊಡ್ಡದೊಡ್ಡ ಮರಗಳಿಂದಾಗಿ ಅವಮಾನ ಅನುಭವಿಸ್ತೀರ,+ನೀವು ಆಯ್ಕೆಮಾಡಿದ ತೋಟದಿಂದ* ಅಪಮಾನಕ್ಕೆ ಗುರಿಯಾಗ್ತೀರ.+
30 ಎಲೆಗಳು ಉದುರಿ ಹೋಗೋ ದೊಡ್ಡ ಮರದ ತರ ನೀವು ಆಗ್ತೀರ,+ನೀರಿಲ್ಲದ ತೋಟದ ತರ ಆಗ್ತೀರ.
31 ಬಲಿಷ್ಠ ವ್ಯಕ್ತಿ ಒಣಹುಲ್ಲಿನ ತರ* ಆಗ್ತಾನೆ,ಅವನ ಕೆಲಸಗಳು ಬೆಂಕಿ ಕಿಡಿ ತರ ಇರುತ್ತೆ.
ಅವನು ಮತ್ತು ಅವನ ಕೆಲಸಗಳು ಒಟ್ಟಿಗೆ ಸುಟ್ಟು ಹೋಗುತ್ತೆ,ಅದನ್ನ ಆರಿಸೋಕೆ ಯಾರೂ ಇರಲ್ಲ.”

