ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 17

ದೇವರ ರಾಜ್ಯದ ಕುರಿತು ಯೇಸುವಿನ ಬೋಧನೆ

ದೇವರ ರಾಜ್ಯದ ಕುರಿತು ಯೇಸುವಿನ ಬೋಧನೆ

ಯೇಸು ತನ್ನ ಶಿಷ್ಯರಿಗೆ ಅನೇಕ ವಿಷಯಗಳನ್ನು ಕಲಿಸುತ್ತಾನೆ. ಅವನ ಎಲ್ಲಾ ಬೋಧನೆಗಳಲ್ಲಿ ದೇವರ ರಾಜ್ಯವು ಮುಖ್ಯ ವಿಷಯವಾಗಿತ್ತು

ಯೇಸು ಭೂಮಿಗೆ ಬಂದ ಉದ್ದೇಶವೇನಾಗಿತ್ತು? ಉತ್ತರವನ್ನು ಯೇಸುವಿನ ಮಾತಿನಿಂದಲೇ ತಿಳಿದುಕೊಳ್ಳೋಣ. “ನಾನು ದೇವರ ರಾಜ್ಯದ ಸುವಾರ್ತೆಯನ್ನು . . . ಪ್ರಕಟಿಸಬೇಕಾಗಿದೆ; ನಾನು ಇದಕ್ಕಾಗಿಯೇ ಕಳುಹಿಸಲ್ಪಟ್ಟಿದ್ದೇನೆ” ಎಂದು ಸ್ವತಃ ಯೇಸುವೇ ಹೇಳಿದನು. (ಲೂಕ 4:43) ಹೌದು, ಅವನು ಮುಖ್ಯವಾಗಿ ದೇವರ ರಾಜ್ಯದ ಕುರಿತು ಜನರಿಗೆ ಸಾರಲು ಭೂಮಿಗೆ ಬಂದಿದ್ದನು. ಆ ರಾಜ್ಯದ ಕುರಿತು ಅವನು ಕಲಿಸಿದ ನಾಲ್ಕು ವಿಷಯಗಳನ್ನು ಈಗ ಗಮನಿಸಿ.

1. ಯೇಸು—ದೇವರ ರಾಜ್ಯದ ರಾಜನು. ಯೇಸು ತಾನೇ ಮೆಸ್ಸೀಯನು ಎಂದು ಜನರಿಗೆ ನೇರವಾಗಿ ತಿಳಿಸಿದನು. (ಯೋಹಾನ 4:25, 26) ಮಾತ್ರವಲ್ಲ, ಪ್ರವಾದಿ ದಾನಿಯೇಲನು ದರ್ಶನದಲ್ಲಿ ಕಂಡಿದ್ದ ರಾಜನು ಬೇರೆ ಯಾರೂ ಅಲ್ಲ, ತಾನೇ ಎಂಬುದನ್ನೂ ಯೇಸು ತೋರಿಸಿಕೊಟ್ಟನು. ಮುಂದೊಂದು ದಿನ ತಾನು “ಮಹಿಮೆಯ ಸಿಂಹಾಸನದಲ್ಲಿ” ಕುಳಿತುಕೊಳ್ಳಲಿರುವೆನೆಂದು ಅವನು ತನ್ನ ಅಪೊಸ್ತಲರಿಗೆ * ಹೇಳಿದನು. ಅಲ್ಲದೆ, ಆ ಅಪೊಸ್ತಲರು ಸಹ ಸಿಂಹಾಸನಗಳಲ್ಲಿ ಕುಳಿತು ತನ್ನೊಂದಿಗೆ ರಾಜ್ಯಭಾರ ಮಾಡುವರೆಂದು ತಿಳಿಸಿದನು. (ಮತ್ತಾಯ 19:28) ರಾಜ್ಯಭಾರ ಮಾಡುವ ಆ ಜನರ ಗುಂಪನ್ನು ಅವನು ‘ಚಿಕ್ಕ ಹಿಂಡು’ ಎಂದು ಕರೆದನು. ಇದಲ್ಲದೆ ‘ಬೇರೆ ಕುರಿಗಳು’ ಎಂದು ಕರೆಯಲ್ಪಡುವ ಮತ್ತೊಂದು ವರ್ಗವೂ ತನಗಿದೆ ಎಂದವನು ಹೇಳಿದನು. ಈ ಗುಂಪು ‘ಚಿಕ್ಕ ಹಿಂಡಿನ’ ಭಾಗವಾಗಿರುವುದಿಲ್ಲ.—ಲೂಕ 12:32; ಯೋಹಾನ 10:16.

2. ದೇವರ ರಾಜ್ಯದಲ್ಲಿ ನ್ಯಾಯವಿರುವುದು. ಏದೆನ್‌ ತೋಟದ ದಂಗೆಯಿಂದ ಆರಂಭಿಸಿ ಸೈತಾನನು ಯೆಹೋವನ ನಾಮಕ್ಕೆ ತಂದಿರುವ ಎಲ್ಲಾ ಕಳಂಕಗಳನ್ನು ದೇವರ ರಾಜ್ಯವು ತೆಗೆದುಹಾಕುವುದು ಮತ್ತು ದೇವರ ನಾಮವನ್ನು ಪವಿತ್ರೀಕರಿಸಿ ಅದಕ್ಕುಂಟಾಗಿರುವ ಭಾರಿ ಕಳಂಕವನ್ನು ಸರಿಪಡಿಸುವುದೆಂದು ಯೇಸು ಸೂಚಿಸಿದನು. (ಮತ್ತಾಯ 6:9, 10) ಸ್ತ್ರೀ-ಪುರುಷ, ಬಡವ-ಬಲ್ಲಿದ ಎನ್ನುವ ಭೇದಭಾವ ತೋರಿಸದೆ ಪ್ರತಿಯೊಬ್ಬರಿಗೂ ಕಲಿಸುವ ಮೂಲಕ ಯೇಸು ತನ್ನಲ್ಲಿ ಪಕ್ಷಪಾತವಿಲ್ಲ ಎಂದು ತೋರಿಸಿದನು. ಇಸ್ರಾಯೇಲ್‌ ಜನರಿಗೆ ಕಲಿಸುವುದೇ ತನ್ನ ಆದ್ಯ ಉದ್ದೇಶವಾಗಿತ್ತಾದರೂ ಸಮಾರ್ಯದ ಜನರಿಗೆ, ಅನ್ಯಜನರಿಗೆ ಅಂದರೆ ಯೆಹೂದ್ಯರಲ್ಲದವರಿಗೆ ಸಹ ಅವನು ಕಲಿಸಿದನು. ತನ್ನ ಕಾಲದಲ್ಲಿದ್ದ ಧಾರ್ಮಿಕ ಗುರುಗಳು ಪಕ್ಷಪಾತ ತೋರಿಸುತ್ತಿದ್ದರೂ ಯೇಸುವಿನಲ್ಲಿ ಪಕ್ಷಪಾತವಾಗಲಿ ಭೇದಭಾವವಾಗಲಿ ಲವಲೇಶವೂ ಇರಲಿಲ್ಲ.

3. ದೇವರ ರಾಜ್ಯ ಈ ಲೋಕದ ಭಾಗವಾಗಿರುವುದಿಲ್ಲ. ಯೇಸು ಜೀವಿಸಿದ್ದ ಸಮಯದಲ್ಲಿ ರಾಜಕೀಯ ಕ್ರಾಂತಿ ನಡೆಯುತ್ತಿತ್ತು. ಅವನಿದ್ದ ದೇಶವನ್ನು ವಿದೇಶೀಯರು ಆಳುತ್ತಿದ್ದರು. ಅಂಥ ಸಮಯದಲ್ಲಿ ಜನರು ಅವನನ್ನು ರಾಜಕೀಯಕ್ಕೆ ಎಳೆಯಲು ಪ್ರಯತ್ನಿಸಿದರು. ಆದರೆ ಯೇಸು ಅದಕ್ಕೆ ಒಪ್ಪದೆ ಅಲ್ಲಿಂದ ಹೊರಟುಹೋದನು. (ಯೋಹಾನ 6:14, 15) ಒಬ್ಬ ರಾಜಕೀಯ ಧುರೀಣನಿಗೆ ಅವನು, “ನನ್ನ ರಾಜ್ಯವು ಈ ಲೋಕದ ಭಾಗವಾಗಿಲ್ಲ” ಎಂದು ಹೇಳಿದನು. (ಯೋಹಾನ 18:36) ತನ್ನ ಶಿಷ್ಯರಿಗೂ, ‘ನೀವು ಲೋಕದ ಭಾಗವಾಗಿಲ್ಲ’ ಎಂದು ಹೇಳಿದನು. (ಯೋಹಾನ 15:19) ಅಷ್ಟೇ ಅಲ್ಲ, ತನ್ನ ಶಿಷ್ಯರು ಶಸ್ತ್ರಾಸ್ತ್ರಗಳನ್ನು ಬಳಸಬಾರದೆಂದು ಹೇಳಿದನು. ಅವರು ಯೇಸುವಿನ ಪ್ರಾಣರಕ್ಷಣೆಗಾಗಿ ಸಹ ಶಸ್ತ್ರಾಸ್ತ್ರ ಹಿಡಿಯಬಾರದಾಗಿತ್ತು.—ಮತ್ತಾಯ 26:51, 52.

“ಅವನು ದೇವರ ರಾಜ್ಯದ ಸುವಾರ್ತೆಯನ್ನು ಸಾರುತ್ತಾ ಊರಿಂದ ಊರಿಗೂ ಹಳ್ಳಿಯಿಂದ ಹಳ್ಳಿಗೂ ಪ್ರಯಾಣಿಸಿದನು.”ಲೂಕ 8:1.

4. ಕ್ರಿಸ್ತನ ರಾಜ್ಯಭಾರವು ಪ್ರೀತಿಯಿಂದ ಕೂಡಿರುವುದು. ತಾನು ಜನರ ಭಾರಗಳನ್ನು ತಗ್ಗಿಸಿ ಅವರಿಗೆ ಚೈತನ್ಯ ಒದಗಿಸುವನೆಂದು ಯೇಸು ವಚನ ನೀಡಿದನು. (ಮತ್ತಾಯ 11:28-30) ವಚನ ನೀಡಿದ್ದಷ್ಟೇ ಅಲ್ಲ, ಅದಕ್ಕೆ ಸರಿಯಾಗಿ ನಡೆದುಕೊಂಡನು. ಜನರಿಗೆ ತಮ್ಮ ಚಿಂತೆ ಕಳವಳಗಳನ್ನು ನಿಭಾಯಿಸಲು ಬೇಕಾದ ಪ್ರಾಯೋಗಿಕವಾದ ಸಲಹೆಗಳನ್ನು ನೀಡಿದನು. ಇತರರೊಂದಿಗೆ ಸಂಬಂಧಗಳನ್ನು ಉಳಿಸಿಕೊಳ್ಳಲು, ಹಣ ಐಶ್ವರ್ಯದಂಥ ಪ್ರಾಪಂಚಿಕ ಆಶೆಗಳಿಗೆ ಬಲಿಯಾಗದಿರಲು ಮತ್ತು ಸಂತೋಷವನ್ನು ಕಂಡುಕೊಳ್ಳಲು ಸಹಾಯವಾಗುವಂಥ ಸಲಹೆಗಳನ್ನು ಪ್ರೀತಿಯಿಂದ ತಿಳಿಸಿಕೊಟ್ಟನು. (ಮತ್ತಾಯ, ಅಧ್ಯಾಯ 5-7) ಜನರೆಡೆಗೆ ಅವನು ಬಹಳ ಪ್ರೀತಿಯುಳ್ಳವನಾಗಿದ್ದುದರಿಂದ ಎಲ್ಲ ರೀತಿಯ ಜನರು ಅವನ ಹತ್ತಿರ ಹೋಗುತ್ತಿದ್ದರು. ಇತರರಿಂದ ದಬ್ಬಾಳಿಕೆಗೆ ಒಳಗಾದ ಕೆಳವರ್ಗದ ಜನರು ಸಹ ಅವನ ಹತ್ತಿರ ಹೋಗಲು ಹಿಂಜರಿಯುತ್ತಿರಲಿಲ್ಲ. ಏಕೆಂದರೆ, ಅವನು ಕರುಣೆ ತೋರಿಸುತ್ತಾನೆ, ತಮ್ಮನ್ನು ದಯಾಭಾವದಿಂದ ನೋಡಿಕೊಳ್ಳುತ್ತಾನೆ ಎಂಬ ಖಾತ್ರಿ ಅವರಲ್ಲಿತ್ತು. ನಿಜಕ್ಕೂ ಯೇಸು ಒಬ್ಬ ಉತ್ತಮ ಅರಸನಾಗಿರುವನು!

ಯೇಸು ದೇವರ ರಾಜ್ಯದ ಕುರಿತು ಜನರಿಗೆ ಕಲಿಸಲು ಇನ್ನೊಂದು ವಿಧಾನವನ್ನು ಉಪಯೋಗಿಸಿದನು. ಅದುವೇ ಅವನು ಮಾಡಿದ ಅದ್ಭುತಗಳಾಗಿದ್ದವು. ಅದರ ಕುರಿತು ನಾವೀಗ ನೋಡೋಣ.

ಮತ್ತಾಯ, ಮಾರ್ಕ, ಲೂಕ ಮತ್ತು ಯೋಹಾನ ಪುಸ್ತಕಗಳ ಮೇಲೆ ಆಧಾರಿತವಾಗಿದೆ.

[ಪಾದಟಿಪ್ಪಣಿ]

^ ಪ್ಯಾರ. 5 ‘ಅಪೊಸ್ತಲರು’ ಎಂಬ ಪದವು, ಯಾರನ್ನು ಯೇಸು ತನ್ನೊಂದಿಗೆ ಶುಶ್ರೂಷೆಯಲ್ಲಿ ಭಾಗವಹಿಸಲಿಕ್ಕಾಗಿ ಮೊದಮೊದಲು ಆರಿಸಿಕೊಂಡನೋ ಆ 12 ಮಂದಿ ಪುರುಷರನ್ನು ಸೂಚಿಸುತ್ತದೆ. ‘ಅಪೊಸ್ತಲ’ ಎಂದು ಭಾಷಾಂತರಿಸಿರುವ ಮೂಲ ಗ್ರೀಕ್‌ ಪದದ ಅರ್ಥ ‘ಕಳುಹಿಸಲಾದವನು’ ಎಂದಾಗಿದೆ.