ಮತ್ತಾಯ 1:1-25
1 ಯೇಸು ಕ್ರಿಸ್ತನ* ಜೀವನಚರಿತ್ರೆ* ಬಗ್ಗೆ ತಿಳಿಸೋ ಪುಸ್ತಕ. ಯೇಸು ದಾವೀದನ ವಂಶದವನು.+ ದಾವೀದ ಅಬ್ರಹಾಮನ ವಂಶದವನು.+
2 ಅಬ್ರಹಾಮನಿಗೆ ಇಸಾಕ ಹುಟ್ಟಿದ.+
ಇಸಾಕನಿಗೆ ಯಾಕೋಬ ಹುಟ್ಟಿದ.+
ಯಾಕೋಬನಿಗೆ ಯೆಹೂದ+ ಮತ್ತು ಅವನ ಅಣ್ಣತಮ್ಮಂದಿರು ಹುಟ್ಟಿದ್ರು.
3 ಯೆಹೂದನಿಗೆ ಪೆರೆಚ ಮತ್ತು ಜೆರಹ+ ಹುಟ್ಟಿದ್ರು, ತಾಮಾರ ಇವ್ರ ತಾಯಿ.
ಪೆರೆಚನಿಗೆ ಹೆಚ್ರೋನ ಹುಟ್ಟಿದ.+
ಹೆಚ್ರೋನನಿಗೆ ರಾಮ ಹುಟ್ಟಿದ.+
4 ರಾಮನಿಗೆ ಅಮ್ಮೀನಾದಾಬ ಹುಟ್ಟಿದ.
ಅಮ್ಮೀನಾದಾಬನಿಗೆ ನಹಶೋನ ಹುಟ್ಟಿದ.+
ನಹಶೋನನಿಗೆ ಸಲ್ಮೋನ ಹುಟ್ಟಿದ.
5 ಸಲ್ಮೋನನಿಗೆ ಬೋವಜ ಹುಟ್ಟಿದ, ರಾಹಾಬ ಬೋವಜನ ತಾಯಿ.+
ಬೋವಜನಿಗೆ ಓಬೇದ ಹುಟ್ಟಿದ, ರೂತ್ ಓಬೇದನ ತಾಯಿ.+
ಓಬೇದನಿಗೆ ಇಷಯ ಹುಟ್ಟಿದ.+
6 ಇಷಯನಿಗೆ ರಾಜ ದಾವೀದ+ ಹುಟ್ಟಿದ.
ದಾವೀದನಿಗೆ ಸೊಲೊಮೋನ+ ಹುಟ್ಟಿದ, ಊರೀಯನ ಹೆಂಡತಿ ಸೊಲೊಮೋನನ ತಾಯಿ.
7 ಸೊಲೊಮೋನನಿಗೆ ರೆಹಬ್ಬಾಮ ಹುಟ್ಟಿದ.+
ರೆಹಬ್ಬಾಮನಿಗೆ ಅಬೀಯ ಹುಟ್ಟಿದ.
ಅಬೀಯನಿಗೆ ಆಸ ಹುಟ್ಟಿದ.+
8 ಆಸನಿಗೆ ಯೆಹೋಷಾಫಾಟ ಹುಟ್ಟಿದ.+
ಯೆಹೋಷಾಫಾಟನಿಗೆ ಯೆಹೋರಾಮ ಹುಟ್ಟಿದ.+
ಯೆಹೋರಾಮನಿಗೆ ಉಜ್ಜೀಯ ಹುಟ್ಟಿದ.
9 ಉಜ್ಜೀಯನಿಗೆ ಯೋತಾಮ ಹುಟ್ಟಿದ.+
ಯೋತಾಮನಿಗೆ ಆಹಾಜ ಹುಟ್ಟಿದ.+
ಆಹಾಜನಿಗೆ ಹಿಜ್ಕೀಯ ಹುಟ್ಟಿದ.+
10 ಹಿಜ್ಕೀಯನಿಗೆ ಮನಸ್ಸೆ ಹುಟ್ಟಿದ.+
ಮನಸ್ಸೆಗೆ ಆಮೋನ ಹುಟ್ಟಿದ.+
ಆಮೋನನಿಗೆ ಯೋಷೀಯ ಹುಟ್ಟಿದ.+
11 ಯೋಷೀಯನಿಗೆ+ ಯೆಕೊನ್ಯ+ ಮತ್ತು ಅವನ ಸಹೋದರರು ಹುಟ್ಟಿದ್ರು. ಯೆಹೂದ್ಯರನ್ನ ಬಾಬೆಲಿಗೆ ಬಂದಿಗಳಾಗಿ ಕರ್ಕೊಂಡು ಹೋದ ಸಮಯದಲ್ಲಿ ಇವರು ಹುಟ್ಟಿದ್ರು.+
12 ಯೆಕೊನ್ಯನಿಗೆ ಶೆಯಲ್ತಿಯೇಲ ಹುಟ್ಟಿದ. ಯೆಹೂದ್ಯರು ಬಾಬೆಲಿಗೆ ಬಂದಿಗಳಾಗಿ ಹೋದ ಮೇಲೆ ಇವನು ಹುಟ್ಟಿದ.
ಶೆಯಲ್ತಿಯೇಲನಿಗೆ ಜೆರುಬ್ಬಾಬೆಲ ಹುಟ್ಟಿದ.+
13 ಜೆರುಬ್ಬಾಬೆಲನಿಗೆ ಅಬಿಹೂದ ಹುಟ್ಟಿದ.
ಅಬಿಹೂದನಿಗೆ ಎಲ್ಯಕೀಮ ಹುಟ್ಟಿದ.
ಎಲ್ಯಕೀಮನಿಗೆ ಅಜೋರ ಹುಟ್ಟಿದ.
14 ಅಜೋರನಿಗೆ ಸದೋಕ ಹುಟ್ಟಿದ.
ಸದೋಕನಿಗೆ ಅಖೀಮ ಹುಟ್ಟಿದ.
ಅಖೀಮನಿಗೆ ಎಲಿಹೂದ ಹುಟ್ಟಿದ.
15 ಎಲಿಹೂದನಿಗೆ ಎಲಿಯಾಜರ ಹುಟ್ಟಿದ.
ಎಲಿಯಾಜರನಿಗೆ ಮತ್ತಾನ ಹುಟ್ಟಿದ.
ಮತ್ತಾನನಿಗೆ ಯಾಕೋಬ ಹುಟ್ಟಿದ.
16 ಯಾಕೋಬನಿಗೆ ಯೋಸೇಫ ಹುಟ್ಟಿದ. ಯೋಸೇಫ ಮರಿಯಳ ಗಂಡ. ಮರಿಯಗೆ ಯೇಸು ಹುಟ್ಟಿದನು.+ ಆತನೇ ಕ್ರಿಸ್ತ.+
17 ಹೀಗೆ ಅಬ್ರಹಾಮನಿಂದ ದಾವೀದನ ತನಕ 14 ಪೀಳಿಗೆ. ದಾವೀದನಿಂದ ಯೆಹೂದ್ಯರು ಬಾಬೆಲಿಗೆ ಬಂದಿಗಳಾಗಿ ಹೋದ ಸಮಯದ ತನಕ 14 ಪೀಳಿಗೆ. ಯೆಹೂದ್ಯರು ಬಾಬೆಲಿಗೆ ಬಂದಿಗಳಾಗಿ ಹೋದ ಸಮಯದಿಂದ ಕ್ರಿಸ್ತನ ತನಕ 14 ಪೀಳಿಗೆ.
18 ಯೇಸು ಕ್ರಿಸ್ತ ಹುಟ್ಟಿದ್ದು ಹೇಗಂದ್ರೆ ಆತನ ಅಮ್ಮ ಮರಿಯಗೆ ಯೋಸೇಫನ ಜೊತೆ ನಿಶ್ಚಿತಾರ್ಥ ಆಗಿತ್ತು. ಮದುವೆ ಆಗೋ* ಮುಂಚೆನೇ ಮರಿಯ ದೇವರ ಪವಿತ್ರಶಕ್ತಿಯಿಂದ+ ಗರ್ಭಿಣಿ ಆದಳು.
19 ಅವಳ ಗಂಡ ಯೋಸೇಫ ನೀತಿವಂತನಾಗಿದ್ದ. ಅವಳು ಗರ್ಭಿಣಿ ಅಂತ ಎಲ್ರಿಗೂ ಹೇಳಿ ಅವಮಾನ ಮಾಡೋದು ಅವನಿಗೆ ಇಷ್ಟ ಇರಲಿಲ್ಲ. ಹಾಗಾಗಿ ಗುಟ್ಟಾಗಿ ವಿಚ್ಛೇದನ+ ಕೊಡಬೇಕು ಅಂದ್ಕೊಂಡ.
20 ಅವನು ಹೀಗೆ ಯೋಚಿಸ್ತಿದ್ದಾಗ ಯೆಹೋವನ* ದೂತ ಕನಸಲ್ಲಿ ಬಂದು “ಯೋಸೇಫನೇ, ದಾವೀದನ ಮಗನೇ, ಮರಿಯಳನ್ನ ಮದುವೆ ಆಗೋಕೆ* ಹೆದ್ರಬೇಡ. ಅವಳು ಪವಿತ್ರಶಕ್ತಿಯಿಂದ ಗರ್ಭಿಣಿ ಆಗಿದ್ದಾಳೆ.+
21 ಅವಳಿಗೆ ಒಂದು ಗಂಡು ಮಗು ಹುಟ್ಟುತ್ತೆ. ಆ ಮಗುಗೆ ಯೇಸು*+ ಅಂತ ಹೆಸ್ರಿಡು. ಯಾಕಂದ್ರೆ ಆತನು ಜನ್ರನ್ನ ಪಾಪಗಳಿಂದ ಬಿಡಿಸ್ತಾನೆ” ಅಂದ.+
22 ಯೆಹೋವ* ಹೇಳಿದ್ದೆಲ್ಲ ನಿಜ ಆಯ್ತು. ಆತನು ತುಂಬ ವರ್ಷಗಳ ಮುಂಚೆ ಒಬ್ಬ ಪ್ರವಾದಿ ಬಾಯಿಂದ ಹೀಗೆ ಹೇಳಿಸಿದ್ದ
23 “ನೋಡಿ! ಒಬ್ಬ ಕನ್ಯೆ ಗರ್ಭಿಣಿಯಾಗಿ ಒಂದು ಗಂಡು ಮಗು ಹೆರ್ತಾಳೆ. ಜನ ಆತನನ್ನ ಇಮ್ಮಾನುವೇಲ್+ ಅಂತ ಕರಿತಾರೆ.” “ದೇವರು ನಮ್ಮ ಜೊತೆ ಇದ್ದಾನೆ”+ ಅನ್ನೋದೇ ಆ ಹೆಸ್ರಿನ ಅರ್ಥ.
24 ಆಮೇಲೆ ಯೋಸೇಫ ನಿದ್ದೆಯಿಂದ ಎದ್ದು ಯೆಹೋವನ* ದೂತ ಹೇಳಿದ ಹಾಗೇ ಮಾಡಿದ. ಮರಿಯಳನ್ನ ಮದುವೆ ಆದ.*
25 ಆದ್ರೆ ಅವಳಿಗೆ ಮಗು ಹುಟ್ಟೋ ತನಕ ಅವಳ ಜೊತೆ ಲೈಂಗಿಕ ಸಂಬಂಧ ಇಟ್ಕೊಳ್ಳಲಿಲ್ಲ.+ ಅವನು ಆ ಮಗುಗೆ ಯೇಸು ಅಂತ ಹೆಸ್ರಿಟ್ಟ.+
ಪಾದಟಿಪ್ಪಣಿ
^ ಅಥವಾ “ಮೆಸ್ಸೀಯನ, ಅಭಿಷಿಕ್ತನ.”
^ ಅಥವಾ “ವಂಶಾವಳಿಯ.”
^ ಅಥವಾ “ಒಂದಾಗೋದಕ್ಕಿಂತ.”
^ ಕ್ರೈಸ್ತ ಗ್ರೀಕ್ ಪವಿತ್ರಗ್ರಂಥದ ಈ ಆವೃತ್ತಿಯ ಮುಖ್ಯಬರಹದಲ್ಲಿ ದೇವರ ಹೆಸ್ರಾದ “ಯೆಹೋವ” ಅನ್ನೋದು 237 ಸಲ ಇದೆ. ಮೊದಲನೇ ಸಲ ಬಂದಿರೋದು ಈ ವಚನದಲ್ಲಿ. ಪರಿಶಿಷ್ಟ ಎ5 ನೋಡಿ.
^ ಅಕ್ಷ. “ನೀನು ನಿನ್ನ ಹೆಂಡತಿ ಮರಿಯಳನ್ನ ಮನೆಗೆ ಕರ್ಕೊಂಡು ಬರೋಕೆ.”
^ ಇದು ಹೀಬ್ರು ಹೆಸ್ರುಗಳಾಗಿರೋ “ಯೆಷೂವ” ಮತ್ತು “ಯೆಹೋಶುವ” ಅನ್ನೋ ಹೆಸ್ರುಗಳ ತರ ಇದೆ. ಯೇಸು ಅನ್ನೋದ್ರ ಅರ್ಥ “ಯೆಹೋವ ರಕ್ಷಣೆ ಆಗಿದ್ದಾನೆ.”
^ ಪರಿಶಿಷ್ಟ ಎ5 ನೋಡಿ.
^ ಪರಿಶಿಷ್ಟ ಎ5 ನೋಡಿ.
^ ಅಕ್ಷ. “ತನ್ನ ಹೆಂಡತಿನ ಮನೆಗೆ ಕರ್ಕೊಂಡು ಬಂದ.”