ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 9

ಅರಸನಿಗಾಗಿ ಇಸ್ರಾಯೇಲ್ಯರ ಬೇಡಿಕೆ

ಅರಸನಿಗಾಗಿ ಇಸ್ರಾಯೇಲ್ಯರ ಬೇಡಿಕೆ

ಇಸ್ರಾಯೇಲ್ಯರ ಮೊದಲ ಅರಸನಾದ ಸೌಲನು ಯೆಹೋವನಿಗೆ ಅವಿಧೇಯನಾಗುತ್ತಾನೆ. ಅವನ ನಂತರ ದಾವೀದನು ರಾಜನಾಗುತ್ತಾನೆ. ದೇವರು ದಾವೀದನೊಂದಿಗೆ ಒಡಂಬಡಿಕೆ ಮಾಡಿಕೊಳ್ಳುತ್ತಾ ಅವನ ರಾಜ್ಯವು ಶಾಶ್ವತವಾಗಿರುವುದೆಂದು ಹೇಳುತ್ತಾನೆ

ಸಂಸೋನನ ಮರಣದ ನಂತರ, ಸಮುವೇಲನು ಇಸ್ರಾಯೇಲಿನಲ್ಲಿ ಪ್ರವಾದಿಯಾಗಿ ಹಾಗೂ ನ್ಯಾಯಸ್ಥಾಪಕನಾಗಿ ಕಾರ್ಯನಡೆಸಿದನು. ಇಸ್ರಾಯೇಲ್ಯರು ಅವನ ಮುಂದೆ ಒಂದು ಬೇಡಿಕೆಯನ್ನಿಡುತ್ತಾ ಸುತ್ತಮುತ್ತಲಿದ್ದ ಜನಾಂಗಗಳಿಗೆ ಅರಸರಿರುವಂತೆ ತಮಗೂ ಒಬ್ಬ ಅರಸನನ್ನು ನೇಮಿಸುವಂತೆ ಪೀಡಿಸಿದರು. ಅವರನ್ನು ಅನುಗ್ರಹಿಸಿ ಒಳ್ಳೆಯ ರೀತಿಯಲ್ಲಿ ಪೋಷಿಸುತ್ತಿದ್ದ ಯೆಹೋವನ ಮನಸ್ಸಿಗೆ ಇದು ನೋವುಂಟುಮಾಡಿತಾದರೂ ಅವರ ಬೇಡಿಕೆಯನ್ನು ಈಡೇರಿಸುವಂತೆ ಯೆಹೋವನು ಸಮುವೇಲನಿಗೆ ತಿಳಿಸಿದನು. ಮಾತ್ರವಲ್ಲ, ಸೌಲ ಎಂಬ ಪುರುಷನನ್ನು ರಾಜನಾಗಿ ಮಾಡಿದನು. ಈ ಸೌಲನು ಆರಂಭದಲ್ಲಿ ತುಂಬಾ ದೀನ ಸ್ವಭಾವದವನಾಗಿದ್ದನು. ಕ್ರಮೇಣ ಅವನು ದುರಹಂಕಾರಿಯಾಗಿ ಯೆಹೋವನಿಗೆ ಅವಿಧೇಯನಾದನು. ಆದ್ದರಿಂದ ಯೆಹೋವನು ಅವನನ್ನು ರಾಜನ ಸ್ಥಾನದಿಂದ ತಳ್ಳಿಬಿಟ್ಟನು ಮತ್ತು ಯುವಕನಾದ ದಾವೀದನನ್ನು ರಾಜನಾಗಿ ಅಭಿಷೇಕಿಸುವಂತೆ ಸಮುವೇಲನಿಗೆ ಹೇಳಿದನು. ಅಭಿಷೇಕಗೊಂಡ ದಾವೀದನು ಬಹಳ ವರ್ಷಗಳ ನಂತರವೇ ರಾಜನಾಗಿ ಆಳ್ವಿಕೆ ನಡೆಸತೊಡಗಿದನು.

ಒಮ್ಮೆ ದಾವೀದನು ಸೌಲನ ಸೈನ್ಯದಲ್ಲಿ ಸೇವೆ ಸಲ್ಲಿಸುತ್ತಿದ್ದ ತನ್ನ ಅಣ್ಣಂದಿರನ್ನು ನೋಡಲು ಹೋದನು. ಆಗ ದಾವೀದನು ಇನ್ನೂ ಹದಿವಯಸ್ಸಿನಲ್ಲೇ ಇದ್ದನೆಂದು ತೋರುತ್ತದೆ. ಫಿಲಿಷ್ಟಿಯರೊಂದಿಗೆ ಹೋರಾಡಲು ಹೋಗಿದ್ದ ಸೌಲನ ಸೈನ್ಯದವರು ತುಂಬಾ ಭಯಭೀತರಾಗಿದ್ದರು. ಏಕೆಂದರೆ, ಶತ್ರು ಸೈನ್ಯದವರಲ್ಲಿ ಗೊಲ್ಯಾತನೆಂಬ ಭಾರಿ ದೈತ್ಯಾಕಾರದ ಒಬ್ಬ ಯೋಧನಿದ್ದನು. ಅವನು ಇಸ್ರಾಯೇಲ್ಯ ಸೈನಿಕರನ್ನೂ ಅವರ ದೇವರನ್ನೂ ತುಂಬಾ ಹೀನಾಯವಾಗಿ ಹೀಯಾಳಿಸುತ್ತಿದ್ದನು. ತನ್ನ ದೇವರನ್ನು ಹೀಯಾಳಿಸಿದ್ದು ದಾವೀದನಿಗೆ ಸಹಿಸಲಾಗಲಿಲ್ಲ. ಅವನು ಆ ದೈತ್ಯನೊಂದಿಗೆ ಸೆಣಸಲು ಸಿದ್ಧನಾದನು. ಒಂಬತ್ತು ಅಡಿ ಎತ್ತರವಿದ್ದ ಆ ಗೊಲ್ಯಾತನನ್ನು ಎದುರಿಸಲು ದಾವೀದನು ಕೇವಲ ಒಂದು ಕವಣೆ ಹಾಗೂ ಕೆಲವು ಕಲ್ಲುಗಳೊಂದಿಗೆ ಹೋದನು! ಅದನ್ನು ನೋಡಿದ ಗೊಲ್ಯಾತನು ಅವನನ್ನು ಅಣಕಿಸಿದನು. ಅದಕ್ಕೆ ದಾವೀದನು ತಾನು ಯೆಹೋವನ ನಾಮದೊಂದಿಗೆ ಬರುತ್ತಿರುವುದಾಗಿಯೂ ಅದು ಗೊಲ್ಯಾತನ ಯಾವುದೇ ಯುದ್ಧಾಸ್ತ್ರಗಳಿಗಿಂತ ಪ್ರಬಲವಾದದ್ದೆಂದೂ ಉತ್ತರಿಸಿದನು. ಒಂದೇ ಒಂದು ಕಲ್ಲಿನಿಂದ ದಾವೀದನು ಗೊಲ್ಯಾತನನ್ನು ನೆಲಕ್ಕುರುಳಿಸಿದನು. ಗೊಲ್ಯಾತನ ಖಡ್ಗದಿಂದಲೇ ಅವನ ತಲೆಯನ್ನು ತುಂಡರಿಸಿದನು. ಅದನ್ನು ನೋಡಿದ ಫಿಲಿಷ್ಟಿಯ ಸೈನ್ಯವು ಜೀವಭಯದಿಂದ ದಿಕ್ಕಾಪಾಲಾಗಿ ಓಡಿಹೋಯಿತು.

ಧೈರ್ಯವಂತನಾದ ದಾವೀದನನ್ನು ಸೌಲನು ತನ್ನ ಸೇನಾಧಿಕಾರಿಯನ್ನಾಗಿ ಮಾಡಿದನು. ಆರಂಭದಲ್ಲಿ ದಾವೀದನ ಪರಾಕ್ರಮವನ್ನು ಸೌಲನು ಮೆಚ್ಚಿದ್ದನಾದರೂ ತದನಂತರ ಅವನ ಸಾಧನೆಗಳನ್ನು ನೋಡಿ ಹೊಟ್ಟೆಕಿಚ್ಚುಪಟ್ಟನು. ಸೌಲನಿಂದ ತನ್ನ ಜೀವಕ್ಕೆ ಅಪಾಯವೆಂದು ಮನಗಂಡ ದಾವೀದನು ಅಲ್ಲಿಂದ ಓಡಿಹೋಗಿ ಅನೇಕ ವರ್ಷ ತಲೆಮರೆಸಿಕೊಂಡು ಅಲೆಮಾರಿಯಾಗಿ ಜೀವಿಸಿದನು. ಸೌಲನು ತನ್ನನ್ನು ಕೊಲ್ಲಲು ಹವಣಿಸುತ್ತಿದ್ದರೂ ದಾವೀದನು ಅವನಿಗೆ ನಿಷ್ಠೆ ತೋರಿಸುವುದನ್ನು ಬಿಡಲಿಲ್ಲ. ಏಕೆಂದರೆ, ಯೆಹೋವ ದೇವರಿಂದ ನೇಮಕಗೊಂಡ ಅರಸನನ್ನು ಕೊಲ್ಲುವುದು ತಪ್ಪೆಂದು ದಾವೀದನಿಗೆ ಗೊತ್ತಿತ್ತು. ಕೊನೆಗೆ ಸೌಲನು ಒಂದು ಯುದ್ಧದಲ್ಲಿ ಮಡಿದನು. ದೇವರು ಹೇಳಿದಂತೆ ದಾವೀದನು ಸ್ವಲ್ಪ ಸಮಯದಲ್ಲೇ ಸಿಂಹಾಸನವೇರಿದನು.

“ನಾನು ಅವನ ರಾಜ್ಯಸಿಂಹಾಸನವನ್ನು ನಿರಂತರವಾಗಿ ಸ್ಥಿರಪಡಿಸುವೆನು.”2 ಸಮುವೇಲ 7:13

ಯೆಹೋವನಿಗಾಗಿ ಒಂದು ದೇವಾಲಯ ಕಟ್ಟುವುದು ರಾಜ ದಾವೀದನ ಬಹಳ ದಿನಗಳ ಕನಸಾಗಿತ್ತು. ಆದರೆ, ದಾವೀದನಲ್ಲ ಅವನ ವಂಶದಲ್ಲಿ ಹುಟ್ಟುವ ಬೇರೊಬ್ಬನು ಅದನ್ನು ಕಟ್ಟುವನೆಂದು ಯೆಹೋವನು ಹೇಳಿದನು. ಆ ಅವಕಾಶ ದಾವೀದನ ಮಗನಾದ ಸೊಲೊಮೋನನಿಗೆ ದೊರಕಿತು. ದಾವೀದನನ್ನು ಸಹ ಯೆಹೋವನು ಆಶೀರ್ವದಿಸಿ ಅವನೊಂದಿಗೆ ಒಂದು ಭವ್ಯ ಒಡಂಬಡಿಕೆಯನ್ನು ಮಾಡಿಕೊಂಡನು. ಇತರ ಎಲ್ಲಾ ರಾಜವಂಶಕ್ಕಿಂತಲೂ ಭಿನ್ನವಾದ ಒಂದು ವಿಶೇಷ ರಾಜವಂಶವು ದಾವೀದನ ಕುಟುಂಬದಿಂದ ಬರುವುದೆಂದು ಯೆಹೋವನು ತಿಳಿಸಿದನು. ಆ ರಾಜವಂಶದಲ್ಲಿಯೇ ಏದೆನ್‌ ತೋಟದಲ್ಲಿ ದೇವರು ವಾಗ್ದಾನಿಸಿದ ವಿಮೋಚಕನು ಅಥವಾ ಸಂತಾನ ಹುಟ್ಟಲಿದ್ದನು. ಆ ವಿಮೋಚಕನೇ ಮೆಸ್ಸೀಯನು. ಮೆಸ್ಸೀಯನೆಂದರೆ ದೇವರಿಂದ ನೇಮಕಗೊಂಡ “ಅಭಿಷಿಕ್ತನು” ಎಂದರ್ಥ. ಮೆಸ್ಸೀಯನು ಶಾಶ್ವತವಾಗಿ ನೆಲೆನಿಲ್ಲುವ ಒಂದು ಸರ್ಕಾರವನ್ನು ಅಥವಾ ರಾಜ್ಯವನ್ನು ಆಳುವನೆಂದು ಯೆಹೋವನು ವಾಗ್ದಾನಿಸಿದನು.

ಇದರಿಂದ ಸಂತೋಷಗೊಂಡ ದಾವೀದನು ದೇವಾಲಯ ಕಟ್ಟಲು ಬೇಕಾದ ಸಾಮಾಗ್ರಿಗಳನ್ನು ಮತ್ತು ಚಿನ್ನ ಬೆಳ್ಳಿ ಮುಂತಾದ ಬೆಲೆಬಾಳುವ ಲೋಹಗಳನ್ನು ಹೇರಳವಾಗಿ ಸಂಗ್ರಹಿಸಿಟ್ಟನು. ದಾವೀದನು ದೇವರಿಂದ ಪ್ರೇರಿತನಾಗಿ ಅನೇಕ ಕೀರ್ತನೆಗಳನ್ನು ಸಹ ರಚಿಸಿದನು. “ಯೆಹೋವನ ಆತ್ಮವು ನನ್ನಲ್ಲಿ ಉಸುರಿತು; ಆತನ ವಾಕ್ಯವು ನನ್ನ ಬಾಯಲ್ಲಿತ್ತು” ಎಂದು ತನ್ನ ಜೀವನದ ಕೊನೆಯಲ್ಲಿ ದಾವೀದನು ಹೇಳಿದನು.—2 ಸಮುವೇಲ 23:2.

1 ಸಮುವೇಲ; 2 ಸಮುವೇಲ; 1 ಪೂರ್ವಕಾಲವೃತ್ತಾಂತ; ಯೆಶಾಯ 9:7; ಮತ್ತಾಯ 21:9; ಲೂಕ 1:32; ಯೋಹಾನ 7:42 ರ ಮೇಲೆ ಆಧಾರಿತವಾಗಿದೆ.