ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 10

ಬುದ್ಧಿವಂತ ರಾಜ ಸೊಲೊಮೋನ

ಬುದ್ಧಿವಂತ ರಾಜ ಸೊಲೊಮೋನ

ಯೆಹೋವನು ರಾಜ ಸೊಲೊಮೋನನಿಗೆ ವಿವೇಕವನ್ನು ದಯಪಾಲಿಸುತ್ತಾನೆ. ಸೊಲೊಮೋನನ ರಾಜ್ಯಭಾರದ ಸಮಯದಲ್ಲಿ ಇಸ್ರಾಯೇಲ್ಯರು ಶಾಂತಿ ನೆಮ್ಮದಿಯಿಂದಿರುತ್ತಾರೆ, ದೇಶದಲ್ಲೆಲ್ಲಾ ಸಮೃದ್ಧಿ ತುಂಬಿತುಳುಕುತ್ತದೆ

ಒಂದು ದೇಶದ ರಾಜನು ಹಾಗೂ ಅವನ ಪ್ರಜೆಗಳೆಲ್ಲರೂ ಯೆಹೋವನನ್ನೇ ತಮ್ಮ ಪರಮಾಧಿಕಾರಿಯಾಗಿ ಸ್ವೀಕರಿಸಿ ಆತನ ಆಜ್ಞೆಗಳಿಗೆ ವಿಧೇಯರಾಗುವುದಾದರೆ ಅಲ್ಲಿನ ಪರಿಸ್ಥಿತಿ ಹೇಗಿರುವುದು? ರಾಜ ಸೊಲೊಮೋನನ 40 ವರ್ಷಗಳ ಆಳ್ವಿಕೆಯು ಇದನ್ನು ತೋರಿಸಿಕೊಟ್ಟಿತು.

ದಾವೀದನು ಸಾಯುವ ಮುಂಚೆ ತನ್ನ ಮಗನಾದ ಸೊಲೊಮೋನನಿಗೆ ಪಟ್ಟಾಭಿಷೇಕ ಮಾಡಿದನು. ಒಂದು ದಿನ ದೇವರು ಕನಸಿನಲ್ಲಿ ಸೊಲೊಮೋನನ ಹತ್ತಿರ ಮಾತಾಡಿ ಒಂದು ವರವನ್ನು ಕೇಳಿಕೊಳ್ಳುವಂತೆ ಹೇಳಿದನು. ತನ್ನ ಪ್ರಜೆಗಳನ್ನು ಚೆನ್ನಾಗಿ ನೋಡಿಕೊಂಡು ಅವರ ಸಮಸ್ಯೆಗಳನ್ನು ವಿವೇಚನೆಯಿಂದ ಇತ್ಯರ್ಥಗೊಳಿಸಲು ಜ್ಞಾನ ವಿವೇಕಗಳನ್ನು ದಯಪಾಲಿಸುವಂತೆ ಸೊಲೊಮೋನನು ಕೇಳಿಕೊಂಡನು. ಸೊಲೊಮೋನನ ಈ ಬೇಡಿಕೆಯನ್ನು ಯೆಹೋವನು ಮೆಚ್ಚಿ ಅವನಿಗೆ ವಿವೇಕ ಮತ್ತು ತಿಳಿವಳಿಕೆಯನ್ನು ಕೊಟ್ಟನು. ಮಾತ್ರವಲ್ಲ, ಅವನು ತನಗೆ ಸದಾ ವಿಧೇಯನಾಗಿರುವಲ್ಲಿ ಐಶ್ವರ್ಯ, ಘನತೆ ಹಾಗೂ ದೀರ್ಘಾಯುಷ್ಯವನ್ನೂ ನೀಡುವನೆಂದು ಯೆಹೋವನು ಮಾತುಕೊಟ್ಟನು.

ಯೆಹೋವನಿಂದ ವರವನ್ನು ಪಡೆದ ಸೊಲೊಮೋನನು ಬುದ್ಧಿವಂತಿಕೆಯಿಂದ ಜನರಿಗೆ ತೀರ್ಪುಮಾಡುತ್ತಾ ತುಂಬಾ ಪ್ರಸಿದ್ಧಿ ಪಡೆದನು. ಒಂದು ಸಲ ಇಬ್ಬರು ಸ್ತ್ರೀಯರು ವ್ಯಾಜ್ಯವೊಂದನ್ನು ತೀರಿಸುವಂತೆ ಕೇಳಿಕೊಳ್ಳುತ್ತಾ ಸೊಲೊಮೋನನ ಆಸ್ಥಾನಕ್ಕೆ ಬಂದರು. ಒಂದು ಗಂಡುಮಗುವನ್ನು ತೋರಿಸಿ ಇಬ್ಬರು ಸಹ ಅದು ತಮ್ಮ ಮಗುವೆಂದು ಹೇಳುತ್ತಿದ್ದರು. ಅದನ್ನು ಆಲಿಸಿದ ಸೊಲೊಮೋನನು, ಆ ಮಗುವನ್ನು ಕಡಿದು ಎರಡು ಭಾಗಮಾಡಿ ಇಬ್ಬರಿಗೂ ಕೊಡುವಂತೆ ಅಪ್ಪಣೆಮಾಡಿದನು. ಕೂಡಲೇ ಒಬ್ಬಳು ಅದಕ್ಕೆ ಒಪ್ಪಿದಳು. ಆದರೆ ಮಗುವಿನ ನಿಜ ತಾಯಿಯು ಕರುಳುಮರುಗಿ ಮಗುವನ್ನು ಕೊಲ್ಲದೆ ಅದನ್ನು ಇನ್ನೊಬ್ಬಳಿಗೆ ಕೊಟ್ಟುಬಿಡುವಂತೆ ಅಂಗಲಾಚಿದಳು. ಮಗುವಿನ ಮೇಲೆ ಮಮತೆಯಿಟ್ಟಿದ್ದ ಆ ಸ್ತ್ರೀಯೇ ಅದರ ನಿಜವಾದ ತಾಯಿ ಎಂಬುದು ಸೊಲೊಮೋನನಿಗೆ ಅರ್ಥವಾಯಿತು. ಹಾಗಾಗಿ ಆ ಗಂಡುಮಗುವನ್ನು ಆಕೆಗೆ ಕೊಟ್ಟನು. ಸೊಲೊಮೋನನ ಆ ತೀರ್ಪಿನ ಸುದ್ದಿ ಬಲುಬೇಗನೆ ಇಸ್ರಾಯೇಲ್‌ ದೇಶದಲ್ಲೆಲ್ಲಾ ಹಬ್ಬಿತು. ಸೊಲೊಮೋನನಿಗೆ ಇಷ್ಟೊಂದು ವಿವೇಕವನ್ನು ದೇವರೇ ಅನುಗ್ರಹಿಸಿರುವನೆಂದು ಜನರಿಗೆ ಮನದಟ್ಟಾಯಿತು.

ಸೊಲೊಮೋನನ ಸಾಧನೆಗಳಲ್ಲಿ ಯೆಹೋವನ ದೇವಾಲಯದ ನಿರ್ಮಾಣವು ಮಹತ್ತ್ವದ್ದು. ಆ ಭವ್ಯವಾದ ಆಲಯವು ಇಸ್ರಾಯೇಲ್ಯರ ಆರಾಧನೆಯ ಕೇಂದ್ರಸ್ಥಾನವಾಗಲಿತ್ತು. ದೇವಾಲಯದ ಪ್ರತಿಷ್ಠಾಪನೆಯ ಸಮಯದಲ್ಲಿ ರಾಜ ಸೊಲೊಮೋನನು, “ಆಕಾಶವೂ ಉನ್ನತೋನ್ನತವಾದ ಆಕಾಶವೂ ನಿನ್ನ ವಾಸಕ್ಕೆ ಸಾಲವು; ಹೀಗಿರುವಲ್ಲಿ ನಾನು ಕಟ್ಟಿಸಿದ ಈ ಮಂದಿರವು ಹೇಗೆ ಸಾಕಾದೀತು!” ಎಂದು ಪ್ರಾರ್ಥಿಸಿದನು.—1 ಅರಸುಗಳು 8:27.

ಸೊಲೊಮೋನನ ಪ್ರಖ್ಯಾತಿಯು ದೂರದೂರದ ದೇಶಗಳಿಗೂ ಹಬ್ಬಿತು. ಎಷ್ಟೆಂದರೆ, ಅರೇಬಿಯದ ಶೆಬಾ ರಾಜ್ಯದ ವರೆಗೂ ಮುಟ್ಟಿತು. ಶೆಬಾದ ರಾಣಿಯು ಸೊಲೊಮೋನನ ಐಶ್ವರ್ಯ ಮಹಿಮೆಯನ್ನು ನೋಡಲು ಮತ್ತು ಅವನ ಜ್ಞಾನವನ್ನು ಪರೀಕ್ಷಿಸಲು ಯೆರೂಸಲೇಮಿಗೆ ಪ್ರಯಾಣಿಸಿದಳು. ಸೊಲೊಮೋನನ ಜ್ಞಾನ ಹಾಗೂ ಇಸ್ರಾಯೇಲ್ಯರ ಸಮೃದ್ಧಿಯನ್ನು ನೋಡಿ ಮೂಕವಿಸ್ಮಿತಳಾದ ಶೆಬಾದ ರಾಣಿಯು ಅಂಥ ವಿವೇಕಿಯಾದ ಒಬ್ಬ ರಾಜನನ್ನು ಸಿಂಹಾಸನದಲ್ಲಿ ಕುಳ್ಳಿರಿಸಿದ್ದಕ್ಕಾಗಿ ಯೆಹೋವನನ್ನು ಸ್ತುತಿಸಿದಳು. ನಿಜ, ಯೆಹೋವನ ಆಶೀರ್ವಾದದಿಂದಾಗಿ ಸೊಲೊಮೋನನ ಆಳ್ವಿಕೆಯ ಸಮಯವು ಪುರಾತನ ಇಸ್ರಾಯೇಲಿನ ಇತಿಹಾಸದಲ್ಲೇ ಅತಿ ಸಮೃದ್ಧ ಹಾಗೂ ಶಾಂತಿಯುತ ಸಮಯವಾಗಿತ್ತು.

ದುಃಖಕರವಾಗಿ, ಸೊಲೊಮೋನನು ಯೆಹೋವನ ವಿವೇಕಕ್ಕನುಗುಣವಾಗಿ ನಡೆಯುವುದನ್ನು ಬಿಟ್ಟುಬಿಟ್ಟನು. ದೇವರ ನಿಯಮ ಗೊತ್ತಿದ್ದರೂ ಅವನು ನೂರಾರು ಸ್ತ್ರೀಯರನ್ನು ಮದುವೆ ಮಾಡಿಕೊಂಡನು. ಅವರಲ್ಲಿ ಅನ್ಯದೇವರನ್ನು ಪೂಜಿಸುವ ಸ್ತ್ರೀಯರೂ ಇದ್ದರು. ಕ್ರಮೇಣ, ಈ ಪತ್ನಿಯರು ಅವನನ್ನು ಯೆಹೋವನಿಂದ ದೂರಮಾಡಿ ಮೂರ್ತಿಪೂಜೆ ಮಾಡುವಂತೆ ಪ್ರೇರೇಪಿಸಿದರು. ಆದ್ದರಿಂದ, ಅವನ ರಾಜ್ಯವು ಇಬ್ಭಾಗವಾಗುವುದೆಂದು ಯೆಹೋವನು ಸೊಲೊಮೋನನಿಗೆ ಹೇಳಿದನು. ಅವನ ತಂದೆಯಾದ ದಾವೀದನನ್ನು ನೆನಸಿ, ಯೆಹೋವನು ರಾಜ್ಯದ ಒಂದು ಭಾಗವನ್ನು ಮಾತ್ರ ಸೊಲೊಮೋನನಿಗಾಗಿ ಉಳಿಸುವನೆಂದು ಹೇಳಿದನು. ಸೊಲೊಮೋನನು ಯೆಹೋವನ ಆರಾಧನೆಯನ್ನು ಬಿಟ್ಟುಬಿಟ್ಟರೂ, ದಾವೀದನೊಂದಿಗೆ ಮಾಡಿಕೊಂಡ ರಾಜ್ಯದ ಒಡಂಬಡಿಕೆಗೆ ಯೆಹೋವನು ನಿಷ್ಠನಾಗಿಯೇ ಉಳಿದನು.

1 ಅರಸುಗಳು ಅಧ್ಯಾಯ 1ರಿಂದ 11; 2 ಪೂರ್ವಕಾಲವೃತ್ತಾಂತ ಅಧ್ಯಾಯ 1ರಿಂದ 9; ಧರ್ಮೋಪದೇಶಕಾಂಡ 17:17.