ಧರ್ಮೋಪದೇಶಕಾಂಡ 17:1-20

  • ಬಲಿ ಅರ್ಪಿಸೋ ಪ್ರಾಣಿಗಳಲ್ಲಿ ದೋಷ ಇರಬಾರದು (1)

  • ದೇವರಿಗೆ ತಿರುಗಿ ಬಿದ್ದವರನ್ನ ಏನು ಮಾಡಬೇಕು (2-7)

  • ಕಷ್ಟವಾದ ವ್ಯಾಜ್ಯವನ್ನ ತೀರಿಸೋದು (8-13)

  • ಮುಂದೆ ಬರೋ ರಾಜನಿಗೆ ನಿರ್ದೇಶನ (14-20)

    • ರಾಜ ನಿಯಮ ಪುಸ್ತಕದ ಪ್ರತಿಯನ್ನ ಬರಿಬೇಕು (18)

17  ದೋಷ, ಕುಂದುಕೊರತೆ ಇರೋ ಹೋರಿ ಅಥವಾ ಕುರಿಯನ್ನ ನಿಮ್ಮ ದೇವರಾದ ಯೆಹೋವನಿಗೆ ಬಲಿ ಅರ್ಪಿಸಬಾರದು. ಯಾಕಂದ್ರೆ ಅದು ನಿಮ್ಮ ದೇವರಾದ ಯೆಹೋವನಿಗೆ ಅಸಹ್ಯ.+  ನಿಮ್ಮ ದೇವರಾದ ಯೆಹೋವ ಕೊಡೋ ದೇಶದ ಯಾವುದಾದ್ರೂ ಒಂದು ಪಟ್ಟಣದಲ್ಲಿ ಒಬ್ಬ ಪುರುಷ ಅಥವಾ ಸ್ತ್ರೀ ನಿಮ್ಮ ದೇವರಾದ ಯೆಹೋವನಿಗೆ ಇಷ್ಟ ಆಗದನ್ನ ಮಾಡಿದ್ರೆ, ಆತನ ಒಪ್ಪಂದವನ್ನ ಮುರಿದ್ರೆ,+  ತಪ್ಪು ದಾರಿ ಹಿಡಿದು ನಾನು ಹೇಳದೆ ಇರೋದನ್ನ ಮಾಡಿದ್ರೆ+ ಅಂದ್ರೆ ಬೇರೆ ದೇವರುಗಳಿಗೆ ಅಡ್ಡಬಿದ್ದು ಅವುಗಳನ್ನ ಆರಾಧಿಸಿದ್ರೆ ಅಥವಾ ಸೂರ್ಯ, ಚಂದ್ರ, ಆಕಾಶದ ಇಡೀ ಸೈನ್ಯಕ್ಕೆ ಅಡ್ಡಬಿದ್ರೆ+ ಹೀಗೆ ಮಾಡಬೇಕು:  ಯಾರಾದ್ರೂ ಬಂದು ಆ ವಿಷ್ಯ ನಿಮಗೆ ಹೇಳಿದಾಗ ಅಥವಾ ಆ ಸುದ್ದಿ ಕೇಳಿಸ್ಕೊಂಡಾಗ ಅದ್ರ ಬಗ್ಗೆ ಪೂರ್ತಿ ತನಿಖೆ ನಡಿಸಬೇಕು. ಇಸ್ರಾಯೇಲ್ಯರ ಮಧ್ಯ ಆ ಅಸಹ್ಯ ವಿಷ್ಯ ನಡೆದಿದ್ದು ನಿಜ ಅಂತ ಸಾಬೀತಾದ್ರೆ+  ಆ ಕೆಟ್ಟ ಕೆಲಸ ಮಾಡಿದವ್ರನ್ನ ಪಟ್ಟಣದ ಬಾಗಿಲಗಳ ಹತ್ರ ಕರ್ಕೊಂಡು ಬಂದು ಕಲ್ಲೆಸೆದು ಸಾಯಿಸಬೇಕು.+  ಆದ್ರೆ ಒಬ್ಬನೇ ಒಬ್ಬ ಸಾಕ್ಷಿಯ ಹೇಳಿಕೆಯ ಆಧಾರದ ಮೇಲೆ ಅವನಿಗೆ ಮರಣಶಿಕ್ಷೆ ಕೊಡಬಾರದು. ಇಬ್ರು ಅಥವಾ ಮೂವರು ಸಾಕ್ಷಿಗಳ ಹೇಳಿಕೆಯ ಆಧಾರದ ಮೇಲೆನೇ+ ಮರಣಶಿಕ್ಷೆ ಕೊಡಬೇಕು.+  ಸಾಕ್ಷಿ ಹೇಳಿದವ್ರೇ ಅವನನ್ನ ಸಾಯಿಸೋಕೆ ಮೊದ್ಲು ಕಲ್ಲೆಸಿಬೇಕು. ಆಮೇಲೆ ಬೇರೆಲ್ಲ ಜನ್ರು ಕಲ್ಲೆಸಿಬೇಕು. ಹೀಗೆ ನಿಮ್ಮ ಮಧ್ಯದಿಂದ ಆ ಕೆಟ್ಟತನವನ್ನ ತೆಗೆದುಹಾಕಬೇಕು.+  ನಿಮ್ಮ ದೇಶದ ಯಾವುದಾದ್ರೂ ಒಂದು ಪಟ್ಟಣದಲ್ಲಿ ಕೊಲೆ,+ ಮೊಕದ್ದಮೆ, ಹಿಂಸಾಕೃತ್ಯ, ಜಗಳ ಅಥವಾ ಬೇರೆ ಯಾವುದೇ ಜಗಳ ಆದಾಗ ನ್ಯಾಯ ತೀರಿಸೋಕೆ ತುಂಬ ಕಷ್ಟವಾದ್ರೆ ನಿಮ್ಮ ದೇವರಾದ ಯೆಹೋವ ಆರಿಸ್ಕೊಳ್ಳೋ ಜಾಗಕ್ಕೆ ನೀವು ಹೋಗಬೇಕು.+  ಆ ಜಗಳವನ್ನ ಲೇವಿಯರಾದ ಪುರೋಹಿತರ, ಆ ಸಮಯದಲ್ಲಿರೋ ನ್ಯಾಯಾಧೀಶನ ಮುಂದೆ ಇಡಬೇಕು.+ ಅವರು ನಿಮಗೆ ತೀರ್ಪು ಹೇಳ್ತಾರೆ.+ 10  ಯೆಹೋವ ಆರಿಸ್ಕೊಂಡಿರೋ ಜಾಗದಿಂದ ಅವರು ಕೊಡೋ ಆ ತೀರ್ಪಿನ ತರಾನೇ ಮಾಡಬೇಕು. ಅವರು ಏನೇ ನಿರ್ದೇಶನ ಕೊಟ್ರೂ ತಪ್ಪದೆ ಅದೇ ತರ ನಡಿಬೇಕು. 11  ಅವರು ನಿಮಗೆ ತೋರಿಸೋ ನಿಯಮದ ಹಾಗೇ, ಕೊಡೋ ತೀರ್ಪಿನ ಹಾಗೇ ಮಾಡಬೇಕು.+ ಅವರು ಕೊಡೋ ತೀರ್ಪನ್ನ ಬಿಟ್ಟು ನಿಮಗೆ ಸರಿ ಅನಿಸಿದ್ದನ್ನ ಮಾಡಬಾರದು.+ 12  ನಿಮ್ಮ ದೇವರಾದ ಯೆಹೋವನ ಸೇವೆ ಮಾಡೋ ಪುರೋಹಿತನ, ನ್ಯಾಯಾಧೀಶನ ಮಾತನ್ನ ಕೇಳದೆ ಯಾರು ದುರಹಂಕಾರ ತೋರಿಸ್ತಾರೋ ಅವ್ರನ್ನ ಸಾಯಿಸಬೇಕು.+ ಹೀಗೆ ಇಸ್ರಾಯೇಲ್ಯರಿಂದ ಆ ಕೆಟ್ಟತನವನ್ನ ತೆಗೆದುಹಾಕಬೇಕು.+ 13  ಆಗ ಜನ್ರೆಲ್ಲ ಇದನ್ನ ಕೇಳಿ ಹೆದರ್ತಾರೆ, ಮುಂದೆ ಯಾವತ್ತೂ ಅವರು ದುರಹಂಕಾರ ತೋರಿಸಲ್ಲ.+ 14  ನಿಮ್ಮ ದೇವರಾದ ಯೆಹೋವ ಕೊಡೋ ದೇಶಕ್ಕೆ ಹೋಗಿ ಅದನ್ನ ವಶ ಮಾಡ್ಕೊಂಡು ಅದ್ರಲ್ಲಿ ವಾಸಿಸುವಾಗ ‘ನಮ್ಮ ಸುತ್ತ ಇರೋ ಎಲ್ಲ ಜನಾಂಗಗಳ ಹಾಗೇ ನಮಗೂ ಒಬ್ಬ ರಾಜ ಬೇಕು’ ಅಂತ ಅನಿಸಿದ್ರೆ+ 15  ನಿಮ್ಮ ದೇವರಾದ ಯೆಹೋವ ಆರಿಸೋ ವ್ಯಕ್ತಿಯನ್ನೇ ರಾಜನಾಗಿ ಮಾಡಬೇಕು.+ ನಿಮ್ಮ ಸಹೋದರರಾದ ಇಸ್ರಾಯೇಲ್ಯರಲ್ಲಿ ಒಬ್ಬನನ್ನ ರಾಜನಾಗಿ ಮಾಡಬೇಕೇ ಹೊರತು ನಿಮ್ಮ ಸಹೋದರನಲ್ಲದ ವಿದೇಶಿಯನ್ನ ರಾಜನಾಗಿ ಮಾಡಬಾರದು. 16  ಆ ರಾಜ ತುಂಬ ಕುದುರೆಗಳನ್ನ ಇಟ್ಕೊಬಾರದು.+ ಕುದುರೆಗಳನ್ನ ಕೊಂಡ್ಕೊಳ್ಳೋಕೆ ಜನ್ರನ್ನ ಈಜಿಪ್ಟಿಗೆ ಕಳಿಸಬಾರದು.+ ಯಾಕಂದ್ರೆ ‘ನೀವು ಯಾವತ್ತೂ ಈಜಿಪ್ಟಿಗೆ ವಾಪಸ್‌ ಹೋಗಬಾರದು’ ಅಂತ ಯೆಹೋವ ಹೇಳಿದ್ದಾನೆ. 17  ರಾಜ ತುಂಬ ಸ್ತ್ರೀಯರನ್ನ ಮದುವೆ ಮಾಡ್ಕೊಬಾರದು. ಮಾಡ್ಕೊಂಡ್ರೆ ಅವನ ಹೃದಯ ಅವನನ್ನ ತಪ್ಪು ದಾರಿಗೆ ನಡಿಸುತ್ತೆ.+ ಅವನು ತನಗಾಗಿ ಸಿಕ್ಕಾಪಟ್ಟೆ ಚಿನ್ನ, ಬೆಳ್ಳಿ ಕೂಡಿಸ್ಕೊಬಾರದು.+ 18  ಅವನು ರಾಜನಾಗಿ ಆಳ್ವಿಕೆ ಶುರು ಮಾಡಿದಾಗ ಲೇವಿಯರಾದ ಪುರೋಹಿತರ ಹತ್ರ ಇರೋ ನಿಯಮ ಪುಸ್ತಕ ತಗೊಂಡು ಅದ್ರಲ್ಲಿರೋ ಎಲ್ಲ ವಿಷ್ಯಗಳನ್ನ ಒಂದು ಪುಸ್ತಕದಲ್ಲಿ* ಬರಿಬೇಕು. ಹೀಗೆ ತನಗೋಸ್ಕರ ನಿಯಮ ಪುಸ್ತಕದ ಒಂದು ಪ್ರತಿಯನ್ನ ಮಾಡಿಟ್ಕೊಬೇಕು.+ 19  ಅವನು ಆ ಪುಸ್ತಕವನ್ನ ತನ್ನ ಹತ್ರ ಇಟ್ಕೊಂಡು ತನ್ನ ಜೀವನಪೂರ್ತಿ ದಿನಾಲೂ ಅದನ್ನ ಓದಬೇಕು.+ ಅದ್ರಿಂದ ಅವನು ತನ್ನ ದೇವರಾದ ಯೆಹೋವನಿಗೆ ಭಯಪಡೋಕೆ ಕಲಿತಾನೆ, ಆ ನಿಯಮ ಪುಸ್ತಕದಲ್ಲಿರೋ ಎಲ್ಲ ಮಾತು, ನಿಯಮಗಳನ್ನ ಪಾಲಿಸ್ತಾನೆ.+ 20  ಆಗ ಅವನ ಹೃದಯ ಜಂಬದಿಂದ ಉಬ್ಬಿಕೊಳ್ಳಲ್ಲ. ತನ್ನ ಸಹೋದರರಿಗಿಂತ ತಾನು ಶ್ರೇಷ್ಠ ಅಂತ ಭಾವಿಸಲ್ಲ. ದೇವರು ಕೊಟ್ಟ ಆಜ್ಞೆಗಳನ್ನ ಮೀರದೆ ಪೂರ್ತಿ ಪಾಲಿಸ್ತಾನೆ. ಹೀಗೆ ಮಾಡಿದ್ರೆ ಅವನೂ ಅವನ ವಂಶದವರೂ ಇಸ್ರಾಯೇಲಿನಲ್ಲಿ ತುಂಬ ವರ್ಷ ರಾಜರಾಗಿ ಇರ್ತಾರೆ.

ಪಾದಟಿಪ್ಪಣಿ

ಅಥವಾ “ಸುರುಳಿಯಲ್ಲಿ.”