ಮತ್ತಾಯ 11:1-30

  • ದೀಕ್ಷಾಸ್ನಾನ ಮಾಡಿಸ್ತಿದ್ದ ಯೋಹಾನನನ್ನ ಯೇಸು ಹೊಗಳಿದನು (1-15)

  • ಗಮನ ಕೊಡದೆ ಇರೋ ಪೀಳಿಗೆಗೆ ಬೈದನು (16-24)

  • ದೇವರು ದೀನ ಜನ್ರನ್ನ ಇಷ್ಟಪಟ್ಟಿದ್ದಕ್ಕೆ ಯೇಸು ಹೊಗಳಿದನು (25-27)

  • ಯೇಸುವಿನ ನೊಗ ಹೊಸಬಲ ಕೊಡುತ್ತೆ (28-30)

11  ಯೇಸು 12 ಶಿಷ್ಯರಿಗೆ ಸೂಚನೆ ಕೊಟ್ಟ ಮೇಲೆ ಹತ್ರದ ಊರುಗಳಿಗೆ ಕಲಿಸೋಕೆ ಮತ್ತು ಸಾರೋಕೆ ಹೋದನು.+  ಕ್ರಿಸ್ತ ಮಾಡ್ತಿದ್ದ ಕೆಲಸಗಳು ಜೈಲಲ್ಲಿದ್ದ+ ಯೋಹಾನನಿಗೆ ಗೊತ್ತಾಯ್ತು. ಅವನು ತನ್ನ ಶಿಷ್ಯರನ್ನ ಯೇಸು ಹತ್ರ ಕಳಿಸಿ+  ಹೀಗೆ ಕೇಳೋಕೆ ಹೇಳಿದ “ನಮಗೆ ಸಹಾಯ ಮಾಡೋಕೆ ದೇವರು ಒಬ್ಬನನ್ನ ಕಳಿಸ್ತೀನಿ ಅಂತ ಹೇಳಿದ್ನಲ್ಲಾ, ಅದು ನೀನೇನಾ? ಅಥವಾ ಇನ್ನೊಬ್ಬ ಬರ್ತಾನಾ?”+  ಅದಕ್ಕೆ ಯೇಸು ಅವ್ರಿಗೆ “ನೀವು ಇಲ್ಲಿ ನೋಡಿದ್ದನ್ನ ಕೇಳಿದ್ದನ್ನ ಹೋಗಿ ಯೋಹಾನನಿಗೆ ಹೇಳಿ+  ಕುರುಡರಿಗೆ ಈಗ ಕಣ್ಣು ಕಾಣ್ತಿದೆ,+ ಕುಂಟರು ನಡಿತಿದ್ದಾರೆ, ಕುಷ್ಠರೋಗಿಗಳು+ ವಾಸಿ ಆಗ್ತಿದ್ದಾರೆ, ಕಿವುಡರಿಗೆ ಕಿವಿ ಕೇಳಿಸ್ತಿದೆ, ಸತ್ತವರಿಗೆ ಮತ್ತೆ ಜೀವ ಬಂದಿದೆ, ಬಡವರು ಸಿಹಿಸುದ್ದಿ ಕೇಳಿಸ್ಕೊಳ್ತಿದ್ದಾರೆ.+  ಒಂಚೂರು ಸಂಶಯಪಡದೆ ನನ್ನ ಮೇಲೆ ನಂಬಿಕೆ ಇಡೋ ವ್ಯಕ್ತಿ ಸಂತೋಷವಾಗಿ ಇರ್ತಾನೆ”+ ಅಂದನು.  ಯೋಹಾನನ ಶಿಷ್ಯರು ಹೋದಮೇಲೆ ಯೇಸು ಜನ್ರ ಕಡೆ ತಿರುಗಿ ಯೋಹಾನನ ಬಗ್ಗೆ ಹೀಗಂದನು “ನೀವು ಯಾರನ್ನ ನೋಡಬೇಕಂತ ಕಾಡಿಗೆ ಹೋಗ್ತಿದ್ರಿ?+ ಗಾಳಿಗೆ ಅಲ್ಲಾಡೋ ಗಿಡದ ತರ ಇದ್ದ ವ್ಯಕ್ತಿಯನ್ನಾ?+  ಇಲ್ಲ ಅಂದಮೇಲೆ ಬೇರೆ ಯಾರನ್ನ ನೋಡಕ್ಕೆ ಹೋದ್ರಿ? ದುಬಾರಿ ಬಟ್ಟೆ ಹಾಕಿದವನನ್ನ ನೋಡೋಕೆ ಹೋದ್ರಾ? ಅಂಥ ದುಬಾರಿ ಬಟ್ಟೆ ಹಾಕಿದವರು ಅರಮನೆಯಲ್ಲಿ ಇರ್ತಾರೆ.  ಹಾಗಾದ್ರೆ ಯೋಹಾನ ಯಾರು? ಪ್ರವಾದಿನಾ? ಹೌದು ಪ್ರವಾದಿನೇ. ನಾನು ಹೇಳ್ತೀನಿ ಅವನು ಪ್ರವಾದಿಗಿಂತ ದೊಡ್ಡವನು.+ 10  ‘ನೋಡು! ನಾನು ನಿನಗಿಂತ ಮುಂಚೆ ಒಬ್ಬ ಸಂದೇಶವಾಹಕನನ್ನ ಕಳಿಸ್ತಿದ್ದೀನಿ. ಅವನು ನಿನ್ನ ದಾರಿಯನ್ನ ಸಿದ್ಧಮಾಡ್ತಾನೆ’ ಅಂತ ಬರೆದಿತ್ತು. ಅದು ಇವನ ಬಗ್ಗೆನೇ.+ 11  ನಾನು ನಿಮಗೆ ನಿಜ ಹೇಳ್ತೀನಿ, ದೀಕ್ಷಾಸ್ನಾನ ಮಾಡಿಸ್ತಿದ್ದ ಯೋಹಾನನಿಗಿಂತ ದೊಡ್ಡವನು ಇಲ್ಲಿ ತನಕ ಯಾರೂ ಹುಟ್ಟಿಲ್ಲ. ಆದ್ರೆ ಸ್ವರ್ಗದ ಆಳ್ವಿಕೆಯಲ್ಲಿ ಇರೋ ಚಿಕ್ಕವನು ಸಹ ಯೋಹಾನನಿಗಿಂತ ದೊಡ್ಡವನು.+ 12  ಯೋಹಾನ ದೀಕ್ಷಾಸ್ನಾನ ಮಾಡಿಸ್ತಿದ್ದ ದಿನದಿಂದ ಇವತ್ತಿನ ತನಕ ಜನ ಸ್ವರ್ಗದ ಆಳ್ವಿಕೆ ಮೇಲೆ ಗುರಿಯಿಟ್ಟು ಅದನ್ನ ಮುಟ್ಟಲೇಬೇಕು ಅಂತ ಶ್ರಮಿಸ್ತಿದ್ದಾರೆ. ಹಾಗೆ ಶ್ರಮ ಹಾಕೋರು ಮುಟ್ತಿದ್ದಾರೆ.+ 13  ಯಾಕಂದ್ರೆ ಯೋಹಾನನ ಸಮಯದ ತನಕ ಏನೇನು ಆಗುತ್ತೆ ಅಂತ ಪ್ರವಾದಿಗಳ ಬರಹಗಳಲ್ಲಿ ಮತ್ತು ನಿಯಮ ಪುಸ್ತಕದಲ್ಲಿ ಹೇಳಿತ್ತು.+ 14  ನೀವು ಒಪ್ತೀರೋ ಬಿಡ್ತೀರೋ ‘ಎಲೀಯ ಬರ್ತಾನೆ ಅಂತ ಪ್ರವಾದಿಗಳು ಹೇಳಿದ್ದು ಇವನ ಬಗ್ಗೆನೇ.’+ 15  ಈ ವಿಷ್ಯವನ್ನ ಕೇಳಿಸ್ಕೊಳ್ಳೋಕೆ ಮನಸ್ಸಿರುವವನು ಕೇಳಿಸ್ಕೊಳ್ಳಲಿ. 16  ನಾನು ಈ ಪೀಳಿಗೆಯನ್ನ ಯಾರಿಗೆ ಹೋಲಿಸಲಿ?+ ಇವರು ಸಂತೆಯಲ್ಲಿ ಕೂತಿರೋ ಚಿಕ್ಕ ಮಕ್ಕಳ ತರ ಇದ್ದಾರೆ. ಇವ್ರನ್ನ ಮೆಚ್ಚಿಸೋಕಾಗಲ್ಲ. ಆ ಮಕ್ಕಳು ತಮ್ಮ ಗೆಳೆಯರನ್ನ ಕರೆದು 17  ‘ನೀವು ಕುಣಿಬೇಕಂತ ನಾವು ಸಂಗೀತ ನುಡಿಸಿದ್ವಿ, ಆದ್ರೆ ನೀವು ಕುಣಿಲಿಲ್ಲ. ನಾವು ಶೋಕಗೀತೆ ಹಾಡಿದ್ವಿ, ಆದ್ರೆ ನೀವು ಅಳ್ತಾ ಎದೆಬಡ್ಕೊಳ್ಳಲಿಲ್ಲ’ ಅಂತ ಹೇಳ್ತಿದ್ರು. 18  ಅದೇ ತರ ಯೋಹಾನ ಬೇರೆಯವರ ತರ ತಿಂತಾ ಕುಡಿತಾ ಇರಲಿಲ್ಲ. ಆದ್ರೂ ಜನ ಅವನನ್ನ ಮೆಚ್ಚಲಿಲ್ಲ. ‘ಇವನಲ್ಲಿ ಕೆಟ್ಟ ದೇವದೂತ ಇದ್ದಾನೆ’ ಅಂತ ಹೇಳ್ತಿದ್ದಾರೆ. 19  ಮನುಷ್ಯಕುಮಾರ ಬೇರೆಯವರ ತರ ತಿಂತಾನೆ ಕುಡಿತಾನೆ.+ ಆಗಲೂ ಜನ ‘ಇವನು ಹೊಟ್ಟೆಬಾಕ, ಕುಡುಕ, ಪಾಪಿಗಳ ಗೆಳೆಯ, ತೆರಿಗೆ ವಸೂಲಿ ಮಾಡುವವರ ಸ್ನೇಹಿತ’+ ಅಂತ ಹೇಳ್ತಾರೆ. ಆದ್ರೆ ಏನೇ ಆಗಲಿ ಒಬ್ಬ ಮಾಡೋ ಒಳ್ಳೇ ಕೆಲಸಗಳಿಂದಾನೇ ಅವನು ಬುದ್ಧಿವಂತ ಅಂತ ಗೊತ್ತಾಗುತ್ತೆ.”+ 20  ಯೇಸು ಯಾವ್ಯಾವ ಪಟ್ಟಣದಲ್ಲಿ ಜಾಸ್ತಿ ಅದ್ಭುತ ಮಾಡಿದ್ದನೋ ಆ ಪಟ್ಟಣದ ಜನ್ರನ್ನ ತರಾಟೆಗೆ ತಗೊಂಡನು. ಯಾಕಂದ್ರೆ ಅವರು ತಮ್ಮ ತಪ್ಪು ತಿದ್ಕೊಂಡಿರಲಿಲ್ಲ. ಯೇಸು ಅವ್ರಿಗೆ ಹೀಗೆ ಹೇಳಿದನು 21  “ಖೊರಾಜಿನ ಜನ್ರೇ, ಬೇತ್ಸಾಯಿದ ಜನ್ರೇ, ನಿಮಗಾಗೋ ಗತಿ ನೆನಸ್ಕೊಂಡ್ರೆ ಬೇಜಾರಾಗ್ತಿದೆ! ನಿಮ್ಮ ಮುಂದೆ ಮಾಡಿದ ಅದ್ಭುತಗಳನ್ನ ತೂರ್‌, ಸೀದೋನ್‌ ಪಟ್ಟಣಗಳಲ್ಲಿ ಮಾಡಿದ್ರೆ ಅವರು ಇಷ್ಟೊತ್ತಿಗಾಗಲೇ ಗೋಣಿ ಸುತ್ಕೊಂಡು ಬೂದಿಯಲ್ಲಿ ಕೂರ್ತಿದ್ರು.+ 22  ಹಾಗಾಗಿ ನಾನು ಹೇಳ್ತಿದ್ದೀನಿ, ತೀರ್ಪಿನ ದಿನದಲ್ಲಿ ತೂರ್‌ ಮತ್ತು ಸೀದೋನ್‌ ಪಟ್ಟಣದ ಗತಿಗಿಂತ ನಿಮ್ಮ ಗತಿ ಭಯಂಕರ ಆಗಿರುತ್ತೆ.+ 23  ಕಪೆರ್ನೌಮ್‌+ ಜನ್ರೇ, ದೇವರು ನಿಮ್ಮನ್ನ ಆಕಾಶದಷ್ಟು ಎತ್ರಕ್ಕೆ ಎತ್ತುತ್ತಾನೆ ಅಂತ ಅಂದ್ಕೊಂಡಿದ್ದೀರಾ? ಇಲ್ಲ, ಸಮಾಧಿಗೇ* ಕರ್ಕೊಂಡು ಹೋಗ್ತಾನೆ.+ ನಿಮ್ಮ ಮುಂದೆ ಮಾಡಿದ ಅದ್ಭುತಗಳನ್ನ ಸೊದೋಮಿನ ಜನ್ರ ಮುಂದೆ ಮಾಡಿದ್ರೆ ಆ ಪಟ್ಟಣ ಇವತ್ತಿಗೂ ಇರ್ತಿತ್ತು. 24  ಹಾಗಾಗಿ ನಾನು ಹೇಳ್ತಿದ್ದೀನಿ, ತೀರ್ಪಿನ ದಿನದಲ್ಲಿ ಸೊದೋಮಿನ ಗತಿಗಿಂತ ನಿಮ್ಮ ಗತಿ ಭಯಂಕರ ಆಗಿರುತ್ತೆ.”+ 25  ಆಮೇಲೆ ಯೇಸು “ಅಪ್ಪಾ, ಭೂಮಿ ಆಕಾಶದ ಒಡೆಯನೇ, ನಾನು ನಿನ್ನನ್ನ ಎಲ್ರ ಮುಂದೆ ಹೊಗಳ್ತೀನಿ. ಯಾಕಂದ್ರೆ ನೀನು ಈ ವಿಷ್ಯಗಳನ್ನ ವಿದ್ಯಾವಂತರಿಗೆ ಹೇಳದೆ ಚಿಕ್ಕ ಮಕ್ಕಳಿಗೆ ಹೇಳಿದ್ದೀಯ.+ 26  ಅಪ್ಪಾ, ಅದೇ ನಿನ್ನ ಇಷ್ಟ ಆಗಿತ್ತು” ಅಂದನು. 27  ಅಷ್ಟೇ ಅಲ್ಲ ಯೇಸು “ನನ್ನ ಅಪ್ಪ ಎಲ್ಲ ವಿಷ್ಯಗಳನ್ನ ನನ್ನ ಕೈಗೆ ಒಪ್ಪಿಸಿದ್ದಾನೆ.+ ನನ್ನ* ಬಗ್ಗೆ ಅಪ್ಪನಿಗೆ ಮಾತ್ರ ಚೆನ್ನಾಗಿ ಗೊತ್ತು.+ ಅದೇ ತರ ಅಪ್ಪನ ಬಗ್ಗೆ ನನಗೆ ಮಾತ್ರ ಚೆನ್ನಾಗಿ ಗೊತ್ತು. ನಾನು ಅಪ್ಪನ ಬಗ್ಗೆ ಬೇರೆಯವರಿಗೆ ಕಲಿಸದೆ ಇದ್ರೆ ಯಾರಿಗೂ ಅಪ್ಪನ ಬಗ್ಗೆ ಗೊತ್ತಾಗಲ್ಲ.+ 28  ಕಷ್ಟಪಟ್ಟು ಕೆಲಸ ಮಾಡ್ತಿರೋರೇ, ಹೊರೆ ಹೊತ್ತು ಸುಸ್ತಾಗಿರೋರೇ, ನೀವೆಲ್ಲ ನನ್ನ ಹತ್ರ ಬನ್ನಿ. ನಾನು ನಿಮಗೆ ಹೊಸಬಲ ಕೊಡ್ತೀನಿ. 29  ನನ್ನ ನೊಗ ಹೊತ್ಕೊಂಡು ನನ್ನಿಂದ ಕಲಿರಿ. ಆಗ ನಿಮಗೆ ಹೊಸಬಲ ಸಿಗುತ್ತೆ. ಯಾಕಂದ್ರೆ ನಾನು ಮೃದುಸ್ವಭಾವ, ದೀನಮನಸ್ಸು ಇರುವವನು.+ 30  ನನ್ನ ನೊಗ ಭಾರ ಇಲ್ಲ, ನಾನು ಕೊಡೋ ಹೊರೆ ಹಗುರ” ಅಂದನು.

ಪಾದಟಿಪ್ಪಣಿ

ಅಕ್ಷ. “ಮಗನ.”