ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಕಷ್ಟಗಳಿಗೆಲ್ಲ ಕೊನೆ ಅತಿ ಶೀಘ್ರದಲ್ಲೇ!

ಕಷ್ಟಗಳಿಗೆಲ್ಲ ಕೊನೆ ಅತಿ ಶೀಘ್ರದಲ್ಲೇ!

ಕಷ್ಟಗಳಿಲ್ಲದ ಜಗತ್ತು—ಪಾತಕ, ಯುದ್ಧ, ಕಾಯಿಲೆ, ನೈಸರ್ಗಿಕ ವಿಪತ್ತು ಯಾವುದರ ಸುಳಿವೂ ಇಲ್ಲದ ಭೂಮಿ ಹೇಗಿರುತ್ತೆಂದು ಸ್ವಲ್ಪ ಊಹಿಸಿ. ಹಣಕಾಸಿನ ಚಿಂತೆ, ನಾಳೆ ಏನಾಗುತ್ತೋ ಎಂಬ ಭಯ, ದಬ್ಬಾಳಿಕೆ ಇಲ್ಲದಂಥ ದಿನವನ್ನು ನೋಡುವುದು ಎಷ್ಟು ಚೆಂದ ಅಲ್ವಾ! ಯಾವ ಮನುಷ್ಯನಾಗಲಿ ಅವನಿಂದ ಸ್ಥಾಪಿತವಾಗಿರುವ ಯಾವುದೇ ಸಂಘ-ಸಂಸ್ಥೆಯಾಗಲಿ ಇಂತಹ ಪರಿಸ್ಥಿತಿಯನ್ನು ಜಾರಿಗೆ ತರುವುದು ಅಸಾಧ್ಯ ಅನ್ನೋದು ನಮಗೆ ಗೊತ್ತಿರುವ ವಿಷಯ. ಆದರೆ ನಮ್ಮ ಕಷ್ಟಗಳಿಗೆ ಕಾರಣವಾಗಿರುವ ಎಲ್ಲವನ್ನೂ ದೇವರು ತೆಗೆದು ಹಾಕುವನೆಂದು ಮಾತು ಕೊಟ್ಟಿದ್ದಾನೆ. ದೇವರ ವಾಕ್ಯವಾದ ಬೈಬಲ್‌ನಲ್ಲಿರುವ ಈ ಆಶ್ವಾಸನೆಗಳನ್ನು ಪರಿಗಣಿಸಿ:

ಒಳ್ಳೇ ಆಡಳಿತ

“ಪರಲೋಕದೇವರು ಒಂದು ರಾಜ್ಯವನ್ನು ಸ್ಥಾಪಿಸುವನು; ಅದು ಎಂದಿಗೂ ಅಳಿಯದು, ಅದರ ಪ್ರಾಬಲ್ಯವು ಬೇರೆ ಜನಾಂಗಕ್ಕೆ ಕದಲಿಹೋಗದು, ಆ ರಾಜ್ಯಗಳನ್ನೆಲ್ಲಾ ಭಂಗಪಡಿಸಿ ನಿರ್ನಾಮಮಾಡಿ ಶಾಶ್ವತವಾಗಿ ನಿಲ್ಲುವದು.”—ದಾನಿಯೇಲ 2:44.

ದೇವರ ರಾಜ್ಯದ ಆಡಳಿತ ಸ್ವರ್ಗದಿಂದ ನಡೆಯುತ್ತದೆ. ಆಡಳಿತ ಮಾಡುವವನು ಯೇಸು ಕ್ರಿಸ್ತ. ಅವನು ಮನುಷ್ಯರ ಸರ್ಕಾರಗಳನ್ನು ಭೂಮಿಯಿಂದ ಅಳಿಸಿ ಹಾಕುತ್ತಾನೆ. ಆಗ ಸ್ವರ್ಗದಲ್ಲಿ ಇರುವ ಹಾಗೆ ಭೂಮಿಯಲ್ಲಿ ಸಹ ದೇವರ ರಾಜ್ಯದ ಆಡಳಿತ ಇರುವುದು. (ಮತ್ತಾಯ 6:9, 10) ಈ ಆಡಳಿತವನ್ನು ಯಾವ ಮಾನವ ಸರ್ಕಾರಕ್ಕೂ ಉರುಳಿಸಕ್ಕಾಗಲ್ಲ. ಯಾಕೆಂದರೆ ಆಗ ಭೂಮಿ ಶಾಂತಿ ನೆಲೆಸಿರುವ “ಯೇಸು ಕ್ರಿಸ್ತನ ನಿತ್ಯರಾಜ್ಯ”ವಾಗುವುದು.—2 ಪೇತ್ರ 1:11.

ಕಪಟ ಧರ್ಮಗಳ ಸುಳಿವಿರುವುದಿಲ್ಲ

“ಸೈತಾನನು ಸಹ ಬೆಳಕಿನ ದೂತನೆಂದು ತೋರಿಸಿಕೊಳ್ಳಲು ವೇಷಹಾಕಿಕೊಳ್ಳುತ್ತಾ ಇರುತ್ತಾನೆ. ಹಾಗಿರುವಾಗ ಅವನ ಸೇವಕರು ಸಹ ತಮ್ಮನ್ನು ನೀತಿಯ ಸೇವಕರಾಗಿ ತೋರಿಸಿಕೊಳ್ಳಲು ವೇಷಹಾಕಿಕೊಂಡರೆ ಅದೇನೂ ದೊಡ್ಡದಲ್ಲ. ಅವರ ಅಂತ್ಯವು ಅವರ ಕೃತ್ಯಗಳಿಗೆ ತಕ್ಕ ಹಾಗೆಯೇ ಇರುವುದು.”—2 ಕೊರಿಂಥ 11:14, 15.

ಕಪಟ ತುಂಬಿರುವ ಧರ್ಮಗಳ ಹಿಂದೆ ಸೈತಾನನ ಕೈವಾಡವಿದೆ ಎಂದು ಬಯಲಾಗುವುದು. ಅವುಗಳನ್ನೆಲ್ಲ ಭೂಮಿಯಿಂದ ನಿರ್ನಾಮ ಮಾಡಲಾಗುವುದು. ಧರ್ಮದ ಹೆಸರೇಳಿ ನಡೆಯುವ ರಕ್ತಪಾತ ಮತಾಂಧತೆ ಕೊನೆ ಕಾಣುವುದು. ಹೀಗೆ, ‘ಜೀವವುಳ್ಳ ಸತ್ಯದೇವರನ್ನು’ ಯಾರು ಪ್ರೀತಿಸುತ್ತಾರೋ ಅವರು ‘ಒಂದೇ ನಂಬಿಕೆಯಿಂದ’ ‘ಪವಿತ್ರಾತ್ಮ ಮತ್ತು ಸತ್ಯದಿಂದ’ ದೇವರನ್ನು ಆರಾಧಿಸಲು ಸಾಧ್ಯವಾಗುತ್ತೆ.—1 ಥೆಸಲೊನೀಕ 1:9; ಎಫೆಸ 4:5; ಯೋಹಾನ 4:23.

ಮಾನವ ಕುಂದುಕೊರತೆ ಇನ್ನಿರುವುದಿಲ್ಲ

“ಆತನು [ಯೆಹೋವ ದೇವರು] ಅವರೊಂದಿಗೆ ವಾಸಮಾಡುವನು ಮತ್ತು ಅವರು ಆತನ ಜನರಾಗಿರುವರು. ದೇವರು ತಾನೇ ಅವರೊಂದಿಗಿರುವನು. ಆತನು ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು; ಇನ್ನು ಮರಣವಿರುವುದಿಲ್ಲ; ಇನ್ನು ದುಃಖವಾಗಲಿ ಗೋಳಾಟವಾಗಲಿ ನೋವಾಗಲಿ ಇರುವುದಿಲ್ಲ. ಮೊದಲಿದ್ದ ಸಂಗತಿಗಳು ಗತಿಸಿಹೋಗಿವೆ.”—ಪ್ರಕಟನೆ 21:3, 4.

ಮಾನವರಿಗೋಸ್ಕರ ಜೀವವನ್ನೇ ಅರ್ಪಿಸಿದ ತನ್ನ ಮಗನಾದ ಯೇಸುವಿನ ಮೂಲಕ ಯೆಹೋವ ದೇವರು ಮೇಲಿನ ಮಾತುಗಳನ್ನು ನಿಜ ಮಾಡುತ್ತಾನೆ. (ಯೋಹಾನ 3:16) ಯೇಸುವಿನ ನಿರ್ದೇಶನದ ಕೆಳಗೆ ಮಾನವಕುಲ ಪರಿಪೂರ್ಣತೆಗೇರುವುದು. ಆಗ ಯಾವ ಕಷ್ಟ ನೋವು ಇರುವುದಿಲ್ಲ. ಯಾಕೆಂದರೆ ದೇವರು “ಅವರೊಂದಿಗೆ ವಾಸಮಾಡುವನು” ಮತ್ತು “ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು.” ಮಾನವ ಅಪರಿಪೂರ್ಣತೆ ಮತ್ತು ಕಷ್ಟ-ನೋವುಗಳೆಲ್ಲಾ ನಿನ್ನೆಯ ವಿಷಯಗಳಾಗುವವು. “ನೀತಿವಂತರು ಭೂಮಿಯನ್ನು ಸ್ವಾಧೀನ ಮಾಡಿಕೊಂಡು ಎಂದೆಂದಿಗೂ ಅದರಲ್ಲಿ ವಾಸವಾಗಿರುವರು.”—ಕೀರ್ತನೆ 37:29, ಪವಿತ್ರ ಗ್ರಂಥ ಬೈಬಲ್‌.

ಕೆಟ್ಟ ದೇವದೂತರು ವಿನಾಶವಾಗುತ್ತಾರೆ

“ಪಿಶಾಚನೂ ಸೈತಾನನೂ ಆಗಿರುವ ಪುರಾತನ ಸರ್ಪವನ್ನು, ಅಂದರೆ ಘಟಸರ್ಪವನ್ನು ಹಿಡಿದು [ಯೇಸು ಕ್ರಿಸ್ತನು] ಸಾವಿರ ವರ್ಷಗಳ ವರೆಗೆ ಬಂಧನದಲ್ಲಿಟ್ಟನು. ಇದಲ್ಲದೆ, ಆ ಸಾವಿರ ವರ್ಷಗಳು ಮುಗಿಯುವ ತನಕ ಇನ್ನೆಂದೂ ಜನಾಂಗಗಳನ್ನು ಮರುಳುಗೊಳಿಸದಂತೆ [ಸೈತಾನನನ್ನು] ಅಗಾಧ ಸ್ಥಳಕ್ಕೆ ದೊಬ್ಬಿ ಅದನ್ನು ಮುಚ್ಚಿ ಅದಕ್ಕೆ ಮುದ್ರೆಹಾಕಿದನು.”—ಪ್ರಕಟನೆ 20:2, 3.

ಸೈತಾನ ಮತ್ತವನ ದೆವ್ವಗಳನ್ನು ಯೇಸು “ಅಗಾಧ ಸ್ಥಳಕ್ಕೆ” ದೊಬ್ಬಿ ಬಿಡುತ್ತಾನೆ ಅಂದರೆ ಅವುಗಳನ್ನು ಸಂಪೂರ್ಣ ನಿಷ್ಕ್ರಿಯ ಮಾಡಿಬಿಡುತ್ತಾನೆ. ಆಗ ಮನುಷ್ಯರ ಮಧ್ಯೆ ಅವುಗಳ ಆಟ ನಡೆಯುವುದಿಲ್ಲ. ದುಷ್ಟದೂತರ ಮತ್ತು ಸೈತಾನನ ಪ್ರಭಾವವಿಲ್ಲದ ಭೂಮಿಯಲ್ಲಿ ಬದುಕುವುದು ಎಷ್ಟೊಂದು ಆರಾಮವಾಗಿರುತ್ತಲ್ಲವಾ!

“ಕಡೇ ದಿವಸ”ಗಳು ಮುಗಿಯುವವು

“ಕಡೇ ದಿವಸಗಳು” ಯೇಸು ಹೇಳಿದ “ಮಹಾ ಸಂಕಟ” ಕೊನೆಯಾಗುವಾಗ ಮುಗಿಯುವುದು. ಯೇಸು ಹೇಳಿದ್ದು: “ಆಗ ಮಹಾ ಸಂಕಟವು ಇರುವುದು; ಲೋಕದ ಆರಂಭದಿಂದ ಇಂದಿನ ವರೆಗೆ ಅಂಥ ಸಂಕಟವು ಸಂಭವಿಸಿಲ್ಲ; ಇನ್ನು ಮುಂದೆಯೂ ಸಂಭವಿಸುವುದಿಲ್ಲ.”—ಮತ್ತಾಯ 24:21.

ಅದರ ತೀವ್ರತೆ ಎಷ್ಟಿರುವುದು ಅಂದರೆ ಹಿಂದೆಂದೂ ನಡೆಯದ ವಿಪತ್ತುಗಳು ಸಂಭವಿಸುವವು. ಇದು ಅಂತಿಮ ಘಟ್ಟ ತಲುಪುವುದು “ಸರ್ವಶಕ್ತನಾದ ದೇವರ ಮಹಾ ದಿನದಲ್ಲಾಗುವ ಯುದ್ಧ”ದಲ್ಲಿ. “ಹರ್ಮಗೆದೋನ್‌” ಆ ಯುದ್ಧದ ಹೆಸರು.—ಪ್ರಕಟನೆ 16:14, 16.

ಒಳ್ಳೇದನ್ನು ಪ್ರೀತಿಸುವ ಯಾರೇ ಆಗಲಿ ಈಗ ನಡೆಯುತ್ತಿರುವ ಕೆಟ್ಟತನ ಬೇಗ ಕೊನೆಯಾಗಲಿ ಎಂದು ಆಶಿಸುತ್ತಾರೆ. ದೇವರ ಆಡಳಿತದಿಂದ ನಮಗೆ ಸಿಗುವ ಕೆಲವು ಆಶೀರ್ವಾದಗಳು ಯಾವುದೆಂದು ನೋಡಿ.

ಆಶೀರ್ವಾದಗಳು. . . !

“ಮಹಾ ಸಮೂಹ”ದವರು ಶಾಶ್ವತ ಶಾಂತಿ ನೆಲೆಸಿರುವ ಭೂಮಿಯಲ್ಲಿ ನೆಲೆಸುವರು: ಬೈಬಲ್‌ ಹೇಳುವುದು ನೀತಿವಂತರ “ಮಹಾ ಸಮೂಹ” “ಮಹಾ ಸಂಕಟ”ದಿಂದ ಪಾರಾಗಿ ಭೂಮಿಯಲ್ಲಿ ಶಾಶ್ವತವಾಗಿ ಬದುಕುವುದು. (ಪ್ರಕಟನೆ 7:9, 10, 14; 2 ಪೇತ್ರ 3:13) ತಮಗೆ ಸಿಕ್ಕಿದ ರಕ್ಷಣೆಗಾಗಿ “ಲೋಕದ ಪಾಪವನ್ನು ತೆಗೆದುಹಾಕುವ ದೇವರ ಕುರಿಮರಿ” ಅಂದರೆ ಯೇಸು ಕ್ರಿಸ್ತನನ್ನು ಹಾಡಿ ಹೊಗಳುವರು.—ಯೋಹಾನ 1:29.

ದೇವರು ಕೊಡುವ ಶಿಕ್ಷಣದಿಂದ ಅನೇಕ ಪ್ರಯೋಜನಗಳಿರುವವು: “ಸಮುದ್ರದಲ್ಲಿ ನೀರು ಹೇಗೋ ಹಾಗೆಯೇ ಭೂಮಿಯಲ್ಲಿ ಯೆಹೋವನ ಜ್ಞಾನವು ತುಂಬಿಕೊಂಡಿರುವದು.” (ಯೆಶಾಯ 11:9) ಶಾಂತಿ ಸಮಾಧಾನದಿಂದ ಜನರೊಂದಿಗೆ ಹೇಗೆ ಜೀವಿಸುವುದೆಂದು ದೇವರು ಕೊಡುವ ಶಿಕ್ಷಣ ನಮಗೆ ಕಲಿಸುತ್ತದೆ. ಭೇದಭಾವ ಇಲ್ಲದೆ ಎಲ್ಲಾ ಜನರೊಂದಿಗೆ ಬೆರೆಯುವುದು ಹೇಗೆಂದೂ ಕಲಿಸುತ್ತದೆ. “ನಾನೇ ನಿನ್ನ ದೇವರಾದ ಯೆಹೋವನು, ನಿನಗೆ ವೃದ್ಧಿಮಾರ್ಗವನ್ನು ಬೋಧಿಸಿ ನೀನು ನಡೆಯಬೇಕಾದ ದಾರಿಯಲ್ಲಿ ನಿನ್ನನ್ನು ನಡೆಯಿಸುವವನಾಗಿದ್ದೇನೆ” ಎಂದು ದೇವರು ಮಾತು ಕೊಟ್ಟಿದ್ದಾನೆ.—ಯೆಶಾಯ 48:17.

ಸತ್ತವರು ಮತ್ತೆ ಜೀವಂತರಾಗುತ್ತಾರೆ: ಯೇಸು ಭೂಮಿಯಲ್ಲಿದ್ದಾಗ ತನ್ನ ಸ್ನೇಹಿತನಾಗಿದ್ದ ಲಾಜರನು ಸತ್ತಾಗ ಅವನಿಗೆ ಮತ್ತೆ ಜೀವ ಬರುವಂತೆ ಮಾಡಿದನು. (ಯೋಹಾನ 11:1, 5, 38-44) ಹೀಗೆ ಮಾಡುವ ಮೂಲಕ ದೇವರ ಆಡಳಿತ ಭೂಮಿಯಲ್ಲೂ ಬಂದಾಗ ಯೇಸು ಏನು ಮಾಡುವನೆಂದು ತೋರಿಸಿಕೊಟ್ಟನು.—ಯೋಹಾನ 5:28, 29.

ನಿರಂತರ ನೀತಿ-ನೆಮ್ಮದಿ ಇರುವುದು: ನಿಯಮ ಮೀರಿ ಮನಸ್ಸಿಗೆ ಬಂದಂತೆ ವರ್ತಿಸುವವರು ಯಾರೂ ಭೂಮಿ ಮೇಲೆ ಇರುವುದಿಲ್ಲ. ಏಕೆಂದರೆ ಯೇಸು ಹೃದಯವನ್ನು ಓದಬಲ್ಲವನು. ಯಾರು ಒಳ್ಳೆಯವರು ಯಾರು ಕೆಟ್ಟವರು ಎಂದು ತೀರ್ಮಾನಿಸಲು ಈ ಸಾಮರ್ಥ್ಯವನ್ನು ಯೇಸು ಉಪಯೋಗಿಸುವನು. ಹೀಗೆ ಯಾರು ಕೆಟ್ಟ ಹಾದಿಯನ್ನು ಬಿಡಲು ನಿರಾಕರಿಸುತ್ತಾರೊ ಅಂಥವರಿಗೆ ನೀತಿ-ನೆಮ್ಮದಿ ತುಂಬಿರುವ ಭೂಮಿಯಲ್ಲಿ ಜೀವಿಸುವ ಆಶೀರ್ವಾದ ಸಿಗುವುದಿಲ್ಲ.—ಕೀರ್ತನೆ 37:9, 10; ಯೆಶಾಯ 11:3, 4; 65:20; ಮತ್ತಾಯ 9:4.

ನಮಗೆ ಸಿಗುವ ಉಜ್ವಲ ಭವಿಷ್ಯದ ಬಗ್ಗೆ ಬೈಬಲ್‌ ಹೇಳುವ ಕೆಲವು ಅಂಶಗಳನ್ನು ಮಾತ್ರ ನಾವೀಗ ನೋಡಿದೆವು. ಭೂಮಿಯಲ್ಲಿ ದೇವರ ಆಡಳಿತ ಬಂದಾಗ “ಮಹಾಸೌಖ್ಯ” ಶಾಶ್ವತವಾಗಿ ನೆಲೆಸಿರುವುದು. (ಕೀರ್ತನೆ 37:11, 29) ಮನುಷ್ಯನ ಜೀವನವನ್ನು ಇಂಚಿಚಾಗಿ ತೆಗೆಯುವ ಎಲ್ಲಾ ನೋವು ಸಂಕಟಗಳು ಇಲ್ಲವಾಗುವವು. ಇದರ ಬಗ್ಗೆ ದೇವರೇ ಹೇಳಿರುವ ಮಾತು ಹೀಗಿದೆ: “ಇಗೋ, ನಾನು ಎಲ್ಲವನ್ನು ಹೊಸದು ಮಾಡುತ್ತಿದ್ದೇನೆ . . . ಈ ಮಾತುಗಳು ನಂಬತಕ್ಕವುಗಳೂ ಸತ್ಯವಾದವುಗಳೂ ಆಗಿವೆ.”—ಪ್ರಕಟನೆ 21:5. (w13-E 09/01)

[ಕೃಪೆ]

© Silke Woweries/​Corbis