ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯಾರೆಲ್ಲ ಯೇಸುವಿನ ಬಗ್ಗೆ ಬೈಬಲಿನಲ್ಲಿ ಬರೆದರು?

ಯಾರೆಲ್ಲ ಯೇಸುವಿನ ಬಗ್ಗೆ ಬೈಬಲಿನಲ್ಲಿ ಬರೆದರು?

ನಿಮ್ಮ ಮಕ್ಕಳಿಗೆ ಕಲಿಸಿರಿ

ಯಾರೆಲ್ಲ ಯೇಸುವಿನ ಬಗ್ಗೆ ಬೈಬಲಿನಲ್ಲಿ ಬರೆದರು?

ಯಾರ ಜೊತೆಗಾದರೂ ಕುಳಿತುಕೊಂಡು ಯೇಸುವಿನ ಕುರಿತು ಓದುವುದೆಂದರೆ ನಿನಗೆ ತುಂಬ ಇಷ್ಟನಾ?— * ಯೇಸು ಬೈಬಲಿನ ಯಾವುದೇ ಪುಸ್ತಕವನ್ನು ಸ್ವತಃ ಬರೆದಿಲ್ಲ ಎಂದು ತಿಳಿದಾಕ್ಷಣ ಕೆಲವು ಜನರಿಗೆ ಆಶ್ಚರ್ಯವಾಗುತ್ತದೆ. ಆದರೆ ಆತನ ಬಗ್ಗೆ ಬೈಬಲಿನ 8 ಮಂದಿ ಲೇಖಕರು ತುಂಬ ಬರೆದಿದ್ದಾರೆ. ಯೇಸು ಭೂಮಿ ಮೇಲಿದ್ದಾಗ ಇವರೂ ಜೀವಿಸಿದ್ದರು. ಯೇಸು ಜನರಿಗೆ ಏನು ಕಲಿಸಿದನೆಂದು ಇವರು ನಮಗೆ ತಿಳಿಸುತ್ತಾರೆ. ಇವರ ಹೆಸರುಗಳು ನಿನಗೆ ಗೊತ್ತಾ?— ಮತ್ತಾಯ, ಮಾರ್ಕ, ಲೂಕ, ಯೋಹಾನ, ಪೇತ್ರ, ಯಾಕೋಬ, ಯೂದ, ಪೌಲ. ಇವರ ಬಗ್ಗೆ ನಿನಗೆ ಏನೆಲ್ಲಾ ಗೊತ್ತು?—

ಅವರಲ್ಲಿ ಮೂವರ ಬಗ್ಗೆ ನಾವೀಗ ತಿಳಿಯೋಣ. ಇವರು ಯೇಸುವಿನ 12 ಅಪೊಸ್ತಲರಲ್ಲಿ ಸೇರಿದ್ದರು. ಇವರ ಹೆಸರುಗಳು ನಿನಗೆ ಗೊತ್ತಾ?— ಪೇತ್ರ, ಯೋಹಾನ, ಮತ್ತಾಯ. ಪೇತ್ರನು ತನ್ನ ಸಮಯದಲ್ಲಿದ್ದ ಕ್ರೈಸ್ತರಿಗೆ ಎರಡು ಪತ್ರಗಳನ್ನು ಬರೆದನು. ಯೇಸು ಕಲಿಸಿದ ಮತ್ತು ಮಾಡಿದ ವಿಷಯಗಳ ಬಗ್ಗೆ ತನಗೆ ಗೊತ್ತಿದ್ದದ್ದನ್ನು ಆ ಪತ್ರಗಳಲ್ಲಿ ಬರೆದನು. ಈಗ ಬೈಬಲಿನಲ್ಲಿ 2 ಪೇತ್ರ 1:16-18ನ್ನು ತೆರೆದು ಓದುತ್ತೀಯಾ? ಯೆಹೋವ ದೇವರು ಸ್ವರ್ಗದಿಂದ ಯೇಸುವಿನೊಂದಿಗೆ ಮಾತಾಡಿದಾಗ ತಾನು ಕೇಳಿಸಿಕೊಂಡದ್ದನ್ನು ಪೇತ್ರನು ಅಲ್ಲಿ ವರ್ಣಿಸಿದ್ದಾನೆ.—ಮತ್ತಾಯ 17:5.

ಅಪೊಸ್ತಲ ಯೋಹಾನನು ಬೈಬಲಿನ 5 ಪುಸ್ತಕಗಳನ್ನು ಬರೆದನು. ಯೇಸು ಶಿಷ್ಯರೊಂದಿಗೆ ಕೊನೆಯ ಬಾರಿ ಊಟಮಾಡಿದಾಗ ಇವನು ಆತನ ಪಕ್ಕದಲ್ಲಿ ಕುಳಿತಿದ್ದನು. ಯೇಸು ಸಾಯುವಾಗಲೂ ಆತನ ಬಳಿಯಲ್ಲಿದ್ದನು. (ಯೋಹಾನ 13:23-26; 19:26) ಯೇಸುವಿನ ಜೀವನದ ಬಗ್ಗೆ ತಿಳಿಸುವ 4 ಪುಸ್ತಕಗಳನ್ನು ‘ಸುವಾರ್ತಾ’ ಪುಸ್ತಕಗಳು ಎನ್ನುತ್ತಾರೆ. ಅವುಗಳಲ್ಲಿ ಒಂದನ್ನು ಯೋಹಾನನು ಬರೆದನು. ಅಷ್ಟೇ ಅಲ್ಲ ದರ್ಶನಗಳ ಮೂಲಕ ಯೇಸು ಕೊಟ್ಟ ಮಾಹಿತಿಯನ್ನು ಪ್ರಕಟನೆ ಎಂಬ ಪುಸ್ತಕದಲ್ಲಿ ಬರೆದನು. ತನ್ನದೇ ಹೆಸರಿನ ಮೂರು ಪತ್ರಗಳನ್ನೂ ಬರೆದನು. (ಪ್ರಕಟನೆ 1:1) ಮೂರನೇ ಲೇಖಕನು ಮತ್ತಾಯ. ತೆರಿಗೆ ವಸೂಲಿಗಾರನಾಗಿದ್ದ ಇವನು ಯೇಸುವಿನ ಅಪೊಸ್ತಲನಾದನು.

ಇನ್ನಿಬ್ಬರು ಲೇಖಕರು ಯೇಸುವನ್ನು ವಿಶೇಷ ರೀತಿಯಲ್ಲಿ ಬಲ್ಲವರಾಗಿದ್ದರು. ಯಾಕೆಂದರೆ ಅವರು ಯೇಸುವಿನ ಮಲತಮ್ಮಂದಿರಾಗಿದ್ದರು. ಮರಿಯ-ಯೋಸೇಫರ ಮಕ್ಕಳಾಗಿದ್ದರು. (ಮತ್ತಾಯ 13:55) ಈ ತಮ್ಮಂದಿರು ಆರಂಭದಲ್ಲಿ ಯೇಸುವಿನ ಶಿಷ್ಯರಾಗಿರಲಿಲ್ಲ. ಯೇಸು ಹುರುಪಿನಿಂದ ಸುವಾರ್ತೆ ಸಾರುವುದನ್ನು ನೋಡಿ ಆತನಿಗೆ ಹುಚ್ಚುಹಿಡಿದಿದೆ ಎಂದೂ ನೆನಸಿದ್ದರು. (ಮಾರ್ಕ 3:21) ನಿನಗೆ ಅವರ ಹೆಸರುಗಳು ಗೊತ್ತಾ?— ಒಬ್ಬನ ಹೆಸರು ಯಾಕೋಬ. ಇವನು ಬೈಬಲಿನಲ್ಲಿರುವ ಯಾಕೋಬ ಎಂಬ ಪುಸ್ತಕವನ್ನು ಬರೆದನು. ಇನ್ನೊಬ್ಬನ ಹೆಸರು ಯೂದ. ಇವನು ಬೈಬಲಿನಲ್ಲಿರುವ ಯೂದ ಎಂಬ ಪುಸ್ತಕವನ್ನು ಬರೆದನು.—ಯೂದ 1.

ಯೇಸುವಿನ ಜೀವನದ ಬಗ್ಗೆ ಬರೆದ ಇನ್ನಿಬ್ಬರೆಂದರೆ ಮಾರ್ಕ ಮತ್ತು ಲೂಕ. ಮಾರ್ಕನ ತಾಯಿಯಾದ ಮರಿಯಳಿಗೆ ಯೆರೂಸಲೇಮಿನಲ್ಲಿ ಒಂದು ದೊಡ್ಡ ಮನೆಯಿತ್ತು. ಆಗಿನ ಕ್ರೈಸ್ತರು ಅಲ್ಲಿ ಕೂಡಿಬರುತ್ತಿದ್ದರು. ಅಪೊಸ್ತಲ ಪೇತ್ರನೂ ಬರುತ್ತಿದ್ದನು. (ಅ. ಕಾರ್ಯಗಳು 12:11, 12) ಯೇಸು ಅಪೊಸ್ತಲರೊಂದಿಗೆ ಕೊನೆಯ ಬಾರಿ ಪಸ್ಕ ಹಬ್ಬವನ್ನು ಆಚರಿಸಿದ ರಾತ್ರಿಯಂದು ಅವರು ಗೆತ್ಸೇಮನೆ ತೋಟಕ್ಕೆ ಹೋದಾಗ ಮಾರ್ಕನು ಅವರ ಹಿಂದೆಯೇ ಹೋದನು. ಅಲ್ಲಿ ಯೇಸುವನ್ನು ಬಂಧಿಸಿದ ಬಳಿಕ ಸೈನಿಕರು ಮಾರ್ಕನನ್ನು ಹಿಡಿದಾಗ ತನ್ನ ಬಟ್ಟೆಯನ್ನು ಅವರ ಕೈಯಲ್ಲೇ ಬಿಟ್ಟು ಓಡಿಹೋದನು.—ಮಾರ್ಕ 14:51, 52.

ಲೂಕನು ಒಬ್ಬ ಸುಶಿಕ್ಷಿತ ವೈದ್ಯನಾಗಿದ್ದನು. ಇವನು ಯೇಸು ಮರಣಪಟ್ಟ ನಂತರ ಶಿಷ್ಯನಾಗಿದ್ದಿರಬೇಕು. ಇವನು ಯೇಸುವಿನ ಜೀವನದ ಬಗ್ಗೆ ಸೂಕ್ಷ್ಮ ಅಧ್ಯಯನಮಾಡಿ ಅದರ ಬಗ್ಗೆ ಸ್ಪಷ್ಟವಾಗಿ ಮತ್ತು ನಿಖರವಾಗಿ ಬರೆದನು. ಸಮಯಾನಂತರ ಅಪೊಸ್ತಲ ಪೌಲನೊಂದಿಗೆ ದೂರ ದೂರದ ಊರುಗಳಿಗೆ ಸಂಚರಿಸಿ ಸುವಾರ್ತೆ ಸಾರಿದನು. ಬೈಬಲಿನಲ್ಲಿರುವ ಅಪೊಸ್ತಲರ ಕಾರ್ಯಗಳು ಎಂಬ ಪುಸ್ತಕವನ್ನೂ ಬರೆದನು.—ಲೂಕ 1:1-3; ಅ. ಕಾರ್ಯಗಳು 1:1.

ಯೇಸುವಿನ ಬಗ್ಗೆ ಬರೆದಿರುವ 8ನೇ ಲೇಖಕ ಪೌಲ. ಇವನು ಗಮಲಿಯೇಲ ಎಂಬ ಪ್ರಖ್ಯಾತ ವಕೀಲನ ಬಳಿ ಶಿಕ್ಷಣ ಪಡೆದನು. ಫರಿಸಾಯರೇ ಇವನನ್ನು ಬೆಳೆಸಿ ವಿದ್ಯಾಭ್ಯಾಸ ಕೊಟ್ಟರು. ಪೌಲನ ಮೊದಲ ಹೆಸರು ಸೌಲ ಎಂದಾಗಿತ್ತು. ಇವನು ಯೇಸುವಿನ ಶಿಷ್ಯರನ್ನು ದ್ವೇಷಿಸುತ್ತಿದ್ದನು, ಅವರ ಕೊಲೆಗಳಲ್ಲೂ ಇವನ ಕೈವಾಡವಿತ್ತು. (ಅ. ಕಾರ್ಯಗಳು 7:58–8:3; 22:1-5; 26:4, 5) ಇಂಥ ವ್ಯಕ್ತಿ ಯೇಸುವಿನ ಕುರಿತ ಸತ್ಯವನ್ನು ಕಲಿತದ್ದು ಹೇಗೆಂದು ನಿನಗೆ ಗೊತ್ತಾ?—

ಒಮ್ಮೆ ಪೌಲನು ಯೇಸುವಿನ ಶಿಷ್ಯರನ್ನು ಬಂಧಿಸಲು ದಮಸ್ಕಕ್ಕೆ ಹೋಗುತ್ತಿದ್ದನು. ದಾರಿಯಲ್ಲಿ ಇದ್ದಕ್ಕಿದ್ದಂತೆ ಸ್ವರ್ಗದಿಂದ ಬಂದ ಪ್ರಕಾಶಮಾನ ಬೆಳಕಿನಿಂದ ಅವನು ಕುರುಡನಾದನು. “ಸೌಲನೇ, ಸೌಲನೇ, ನನ್ನನ್ನು ಏಕೆ ಹಿಂಸೆಪಡಿಸುತ್ತಿದ್ದೀ?” ಎಂದು ಕೇಳಿದ ಧ್ವನಿ ಕಿವಿಗೆ ಬಿತ್ತು. ಹಾಗೆ ಕೇಳಿದ್ದು ಬೇರಾರೂ ಅಲ್ಲ, ಯೇಸುವೇ! ಅವನು ಪೌಲನಿಗೆ ದಮಸ್ಕವನ್ನು ಪ್ರವೇಶಿಸಲು ಹೇಳಿದನು. ನಂತರ ತನ್ನ ಶಿಷ್ಯನಾಗಿದ್ದ ಅನನೀಯನಿಗೆ ಪೌಲನನ್ನು ಭೇಟಿಯಾಗಿ ಅವನೊಂದಿಗೆ ಮಾತಾಡುವಂತೆ ಯೇಸು ಹೇಳಿದನು. ಹೀಗೆ ಪೌಲನು ಯೇಸುವಿನ ಶಿಷ್ಯನಾದನು. (ಅ. ಕಾರ್ಯಗಳು 9:1-18) ಇವನು ರೋಮನ್ನರಿಗೆ ಎಂಬ ಪುಸ್ತಕದಿಂದ ಹಿಡಿದು ಇಬ್ರಿಯರಿಗೆ ಎಂಬ ಪುಸ್ತಕದ ತನಕ ಬೈಬಲಿನ ಒಟ್ಟು 14 ಪುಸ್ತಕಗಳನ್ನು ಬರೆದನು.

ಯೇಸುವಿನ ಕುರಿತು ತಿಳಿಸುವ ಈ ಎಲ್ಲಾ ಪುಸ್ತಕಗಳನ್ನು ನೀನು ಓದಲು ಆರಂಭಿಸಿದ್ದೀಯಾ ಅಥವಾ ಯಾರಾದರೂ ನಿನಗೆ ಓದಿ ಹೇಳುತ್ತಿದ್ದಾರಾ?— ಯೇಸುವಿನ ಬಗ್ಗೆ ಬೈಬಲ್‌ ಏನು ಹೇಳುತ್ತದೆಂಬುದನ್ನು ನೀನು ಈ ಚಿಕ್ಕ ಪ್ರಾಯದಲ್ಲಿ ಓದಲು ಆರಂಭಿಸುವುದೇ ನಿನ್ನ ಜೀವನದಲ್ಲಿ ಮಾಡಬಹುದಾದ ಅತ್ಯುತ್ತಮ ಕೆಲಸ. (w10-E 06/01)

[ಪಾದಟಿಪ್ಪಣಿ]

^ ಪ್ಯಾರ. 3 ಈ ಲೇಖನವನ್ನು ನೀವು ಚಿಕ್ಕ ಮಗುವಿಗೆ ಓದಿಹೇಳುತ್ತಿರುವುದಾದರೆ ಅಡ್ಡಗೆರೆ ಇರುವಲ್ಲಿ ಸ್ವಲ್ಪ ನಿಲ್ಲಿಸಿ ಮಗು ಉತ್ತರ ಹೇಳುವಂತೆ ಪ್ರೋತ್ಸಾಹಿಸಿರಿ.

ಪ್ರಶ್ನೆಗಳು:

▪ ಯಾವ ಯಾವ ಬೈಬಲ್‌ ಲೇಖಕರು ಯೇಸುವಿನ ಅಪೊಸ್ತಲರಾಗಿದ್ದರು?

▪ ಬೈಬಲಿನ ಯಾವ ಲೇಖಕರು ಯೇಸುವಿನ ಮಲತಮ್ಮಂದಿರಾಗಿದ್ದರು?

▪ ಮಾರ್ಕನಿಗೆ ಯೇಸುವಿನ ವೈಯಕ್ತಿಕ ಪರಿಚಯ ಇದ್ದಿರಬಹುದು ಏಕೆ? ಆದರೆ ಲೂಕನಿಗೆ ಇದ್ದಿರಲಿಕ್ಕಿಲ್ಲ ಏಕೆ?

▪ ಪೌಲನು ಹೇಗೆ ಯೇಸುವಿನ ಶಿಷ್ಯನಾದನು?

[ಪುಟ 29ರಲ್ಲಿರುವ ಚಿತ್ರಗಳು]

ಯೂದ

ಮಾರ್ಕ

ಪೇತ್ರ

ಮತ್ತಾಯ

ಪೌಲ

ಯಾಕೋಬ

ಲೂಕ

ಯೋಹಾನ