ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಗಿಲ್ಯಾದಿನ ಸುಗಂಧತೈಲ ಗುಣಕಾರಿ ಔಷಧಿ

ಗಿಲ್ಯಾದಿನ ಸುಗಂಧತೈಲ ಗುಣಕಾರಿ ಔಷಧಿ

ಗಿಲ್ಯಾದಿನ ಸುಗಂಧತೈಲ ಗುಣಕಾರಿ ಔಷಧಿ

ಯೋಸೇಫನೆಂಬವನ ಅಣ್ಣಂದಿರು, ಈಜಿಪ್ಟ್‌ ದೇಶಕ್ಕೆ ಹೋಗುತ್ತಿದ್ದ ಇಷ್ಮಾಯೇಲ್ಯ ವರ್ತಕರಿಗೆ ಯೋಸೇಫನನ್ನು ಮಾರಿದಂಥ ಚಿರಪರಿಚಿತ ವೃತ್ತಾಂತ ಬೈಬಲಿನ ಆದಿಕಾಂಡ ಪುಸ್ತಕದಲ್ಲಿದೆ. ವರ್ತಕರ ಆ ಗುಂಪು ಗಿಲ್ಯಾದಿನಿಂದ ಬರುತ್ತಿತ್ತು; ಅವರು ಒಂಟೆಗಳ ಮೇಲೆ ಸುಗಂಧತೈಲ ಹಾಗೂ ಇನ್ನಿತರ ವಸ್ತುಗಳನ್ನು ಈಜಿಪ್ಟಿಗೆ ಸಾಗಿಸುತ್ತಿದ್ದರು. (ಆದಿಕಾಂಡ 37:25) ಚುಟುಕಾದ ಈ ವೃತ್ತಾಂತವು, ಗಿಲ್ಯಾದಿನ ಸುಗಂಧತೈಲಕ್ಕೆ ಪ್ರಾಚೀನ ಮಧ್ಯಪ್ರಾಚ್ಯದಲ್ಲಿ ತುಂಬ ಬೇಡಿಕೆ ಇತ್ತು ಹಾಗೂ ಅದಕ್ಕಿದ್ದ ಔಷಧೀಯ ಗುಣಗಳಿಂದಾಗಿ ಅಲ್ಲಿಯವರು ಅದನ್ನು ಬೆಲೆಯುಳ್ಳದೆಂದು ಪರಿಗಣಿಸುತ್ತಿದ್ದರು ಎಂಬುದನ್ನು ತೋರಿಸುತ್ತದೆ.

ಹಾಗಿದ್ದರೂ ಕ್ರಿ.ಪೂ. ಆರನೇ ಶತಮಾನದಲ್ಲಿ ಪ್ರವಾದಿಯಾದ ಯೆರೆಮೀಯನು “ಗಿಲ್ಯಾದಿನಲ್ಲಿ ಔಷಧ [ಸುಗಂಧತೈಲ]ವಿಲ್ಲವೋ?” ಎಂದು ದುಃಖದಿಂದ ಕೇಳಿದನು. (ಯೆರೆಮೀಯ 8:22) ಯೆರೆಮೀಯನು ಹೀಗೆ ಕೇಳಲು ಕಾರಣವೇನು? ಆ ಸುಗಂಧತೈಲವನ್ನು ಹೇಗೆ ತಯಾರಿಸಲಾಗುತ್ತಿತ್ತು? ಔಷಧೀಯ ಗುಣಗಳಿರುವ ಸುಗಂಧತೈಲ ಇಂದೂ ಇದೆಯೋ?

ಬೈಬಲ್‌ ಸಮಯಗಳಲ್ಲಿದ್ದ ಸುಗಂಧತೈಲ

ಬೇರೆಬೇರೆ ಗಿಡ-ಪೊದೆಗಳಿಂದ ಸ್ರವಿಸುವ ಅಂಟುಅಂಟಾದ ಪದಾರ್ಥವನ್ನು ಬಳಸಿ ಸುಗಂಧತೈಲವನ್ನು ತಯಾರಿಸಲಾಗುತ್ತಿತ್ತು. ಧೂಪ ಹಾಗೂ ಸುಗಂಧದ್ರವ್ಯಗಳಲ್ಲಿ ಉಪಯೋಗಿಸಲ್ಪಡುತ್ತಿದ್ದ ಸುಗಂಧತೈಲವು ಪ್ರಾಚೀನ ಮಧ್ಯಪ್ರಾಚ್ಯದಲ್ಲಿ ಸಿಗುತ್ತಿದ್ದ ಅತ್ಯಂತ ದುಬಾರಿ ವಸ್ತುಗಳಲ್ಲಿ ಒಂದಾಗಿತ್ತು. ಇಸ್ರಾಯೇಲ್ಯರು ಈಜಿಪ್ಟಿನಿಂದ ಹೊರಬಂದ ಸ್ವಲ್ಪದರಲ್ಲೇ ದೇವದರ್ಶನ ಗುಡಾರದಲ್ಲಿ ಉಪಯೋಗಿಸಲಾಗುತ್ತಿದ್ದ ಪವಿತ್ರ ಅಭಿಷೇಕತೈಲ ಹಾಗೂ ಪರಿಮಳಧೂಪವನ್ನು ತಯಾರಿಸಲು ಬಳಸಲಾಗುತ್ತಿದ್ದ ಪದಾರ್ಥಗಳಲ್ಲಿ ಸುಗಂಧತೈಲವೂ ಸೇರಿತ್ತು. (ವಿಮೋಚನಕಾಂಡ 25:6; 35:8) ಶೆಬದ ರಾಣಿಯು ರಾಜ ಸೊಲೊಮೋನನಿಗೆ ಕೊಟ್ಟ ದುಬಾರಿ ಉಡುಗೊರೆಗಳಲ್ಲಿ ಸುಗಂಧತೈಲವೂ ಒಂದಾಗಿತ್ತು. (1 ಅರಸುಗಳು 10:2, 10) ಎಸ್ತೇರಳು ರಾಜ ಅಹಷ್ವೇರೋಷನ ಮುಂದೆ ಹೋಗುವ ಮುಂಚೆ ‘ಆರು ತಿಂಗಳು ಸುಗಂಧತೈಲದಿಂದ’ ಸೌಂದರ್ಯವರ್ಧಕ ಆರೈಕೆಯನ್ನೂ ಮಾಲೀಸನ್ನೂ ಪಡೆದಳು.—ಎಸ್ತೇರಳು 1:1; 2:12.

ಸುಗಂಧತೈಲವು ಮಧ್ಯಪ್ರಾಚ್ಯದ ವಿವಿಧ ಸ್ಥಳಗಳಲ್ಲಿ ದೊರಕುತ್ತಿದ್ದರೂ ವಾಗ್ದತ್ತ ದೇಶದ ಯೊರ್ದನ್‌ ನದಿಯ ಪೂರ್ವಕ್ಕಿದ್ದ ಗಿಲ್ಯಾದಿನಲ್ಲಿ ಒಂದು ವಿಶೇಷ ರೀತಿಯ ಸುಗಂಧತೈಲ ದೊರಕುತ್ತಿತ್ತು. ಪೂರ್ವಜನಾಗಿದ್ದ ಯಾಕೋಬನು ಸುಗಂಧತೈಲವನ್ನು “ದೇಶದಲ್ಲಿ ದೊರಕುವ ಶ್ರೇಷ್ಠವಾದ ವಸ್ತುಗಳಲ್ಲಿ” ಒಂದಾಗಿ ಪರಿಗಣಿಸಿ ಈಜಿಪ್ಟಿಗೆ ಉಡುಗೊರೆಯಾಗಿ ಕಳುಹಿಸಿದನು. (ಆದಿಕಾಂಡ 43:11) ಪ್ರವಾದಿಯಾದ ಯೆಹೆಜ್ಕೇಲನು ಯೆಹೂದ ಹಾಗೂ ಇಸ್ರಾಯೇಲ್‌ ಜನಾಂಗದವರು ತೂರ್‌ ಎಂಬ ದೇಶಕ್ಕೆ ರಫ್ತುಮಾಡುತ್ತಿದ್ದ ವ್ಯಾಪಾರಿ ಸರಕುಗಳ ಪಟ್ಟಿಯಲ್ಲಿ ಸುಗಂಧತೈಲವನ್ನೂ ಸೇರಿಸಿದನು. (ಯೆಹೆಜ್ಕೇಲ 27:17) ಅದು ಮುಖ್ಯವಾಗಿ ತನ್ನ ಔಷಧೀಯ ಗುಣಗಳಿಗಾಗಿ ಹೆಸರುವಾಸಿಯಾಗಿತ್ತು. ಪುರಾತನ ಸಾಹಿತ್ಯಗಳಲ್ಲಿ ಈ ಸುಗಂಧತೈಲಕ್ಕಿರುವ ಗುಣಪಡಿಸುವ ಹಾಗೂ ಆರೋಗ್ಯವನ್ನು ಪುನಃ ಕೊಡುವ, ಮುಖ್ಯವಾಗಿ ಗಾಯಗಳನ್ನು ವಾಸಿಮಾಡುವ ಶಕ್ತಿಯ ಬಗ್ಗೆ ಪದೇಪದೇ ಬರೆಯಲಾಗಿದೆ.

ಒಂದು ರೋಗಿಷ್ಠ ಜನಾಂಗಕ್ಕೆ ಔಷಧಿ

ಹಾಗಾದರೆ ‘ಗಿಲ್ಯಾದಿನಲ್ಲಿ ಸುಗಂಧತೈಲವಿಲ್ಲವೋ?’ ಎಂದು ಯೆರೆಮೀಯನು ಕೇಳಿದ್ದೇಕೆ? ಇದನ್ನು ಅರ್ಥಮಾಡಿಕೊಳ್ಳಲಿಕ್ಕಾಗಿ ಇಸ್ರಾಯೇಲ್‌ ಜನಾಂಗದ ಆಗಿನ ಸ್ಥಿತಿ ಹೇಗಿತ್ತು ಎಂಬುದನ್ನು ನಾವು ನೋಡಬೇಕು. ಯೆರೆಮೀಯನು ಈ ಪ್ರಶ್ನೆಯನ್ನು ಕೇಳುವ ಬಹಳ ಸಮಯದ ಹಿಂದೆ ಪ್ರವಾದಿಯಾದ ಯೆಶಾಯನು ಆ ಜನಾಂಗದ ಹೀನ ಆಧ್ಯಾತ್ಮಿಕ ಸ್ಥಿತಿಯ ಬಗ್ಗೆ ಈ ವರ್ಣನೆ ಕೊಟ್ಟಿದ್ದನು: “ಅಂಗಾಲಿನಿಂದ ನಡುನೆತ್ತಿಯ ತನಕ ಪೆಟ್ಟು ಬಾಸುಂಡೆ ಮಾಗದ ಗಾಯಗಳೇ ಹೊರತು ಏನೂ ಸೌಖ್ಯವಿಲ್ಲ; ಅವನ್ನು ಹಿಸಕಿ ಮುಚ್ಚಿಲ್ಲ, ಕಟ್ಟಿಲ್ಲ.” (ಯೆಶಾಯ 1:6) ತಮ್ಮ ದುರ್ದೆಶೆಯನ್ನು ಒಪ್ಪಿಕೊಂಡು ಗುಣವಾಗಲಿಕ್ಕಾಗಿ ಮದ್ದನ್ನು ಹುಡುಕುವ ಬದಲು ಆ ಜನಾಂಗದವರು ಯೆಹೋವನಿಂದ ದೂರ ಸರಿಯುತ್ತಲೇ ಇದ್ದರು. ಯೆರೆಮೀಯನ ದಿನಗಳಲ್ಲೂ ಅವರ ಸ್ಥಿತಿ ಹೀಗೆಯೇ ಇತ್ತು. ಹಾಗಾಗಿ, ‘ಅವರು ಯೆಹೋವನ ಮಾತನ್ನು ನಿರಾಕರಿಸಿದರು; ಅವರ ಜ್ಞಾನವು ಎಷ್ಟರದು?’ ಎಂದವನು ಕೇಳಿದನು. ಇಸ್ರಾಯೇಲ್ಯರು ಯೆಹೋವನ ಬಳಿ ಹಿಂದಿರುಗುತ್ತಿದ್ದಲ್ಲಿ ಆತನು ಅವರನ್ನು ಗುಣಪಡಿಸುತ್ತಿದ್ದನು. ಆದ್ದರಿಂದಲೇ ‘ಗಿಲ್ಯಾದಿನಲ್ಲಿ ಸುಗಂಧತೈಲವಿಲ್ಲವೋ?’ ಎಂಬುದು ಒಂದು ವಿಚಾರಪ್ರೇರಕ ಪ್ರಶ್ನೆಯಾಗಿತ್ತು!—ಯೆರೆಮೀಯ 8:9.

ಇಂದಿನ ಲೋಕದಲ್ಲಿರುವ ಜನರಿಗೆ ಅನೇಕ ವಿಧಗಳಲ್ಲಿ ‘ಪೆಟ್ಟು ಬಾಸುಂಡೆ ಹಾಗೂ ಮಾಗದ ಗಾಯಗಳಾಗಿವೆ.’ ಜನರು ಬಡತನ, ಅನ್ಯಾಯ, ಸ್ವಾರ್ಥ, ನಿರ್ದಯೆ ಮುಂತಾದವುಗಳ ಕಾರಣ ನರಳುತ್ತಿದ್ದಾರೆ. ದೇವರ ಮೇಲಣ ಹಾಗೂ ನೆರೆಯವರ ಮೇಲಣ ಪ್ರೀತಿಯು ತಣ್ಣಗಾಗಿ ಹೋಗಿರುವುದರಿಂದಲೇ ಇವೆಲ್ಲ ಆಗುತ್ತಿದೆ. (ಮತ್ತಾಯ 24:12; 2 ತಿಮೊಥೆಯ 3:1-5) ಅನೇಕರು ತಮ್ಮ ಜಾತಿ, ಸಾಂಸ್ಕೃತಿಕ ಹಿನ್ನೆಲೆ ಅಥವಾ ವಯಸ್ಸಿನ ಕಾರಣ ಇತರರ ತಿರಸ್ಕಾರಕ್ಕೆ ಗುರಿಯಾಗುತ್ತಾರೆ. ಅಲ್ಲದೆ ಕ್ಷಾಮ, ಅಸ್ವಸ್ಥತೆ, ಯುದ್ಧ, ಮರಣ ಮುಂತಾದುವು ಜನರ ಗಾಯದ ಮೇಲೆ ಬರೆ ಎಳೆಯುತ್ತಿವೆ. ದೇವರಲ್ಲಿ ನಂಬಿಕೆಯಿಡುವ ಅನೇಕ ಯಥಾರ್ಥರು, ನರಳುತ್ತಿರುವ ಜನರ ಭಾವನಾತ್ಮಕ ಹಾಗೂ ಆಧ್ಯಾತ್ಮಿಕ ಗಾಯಗಳಿಗೆ ಕಟ್ಟುವಂಥ ‘ಗಿಲ್ಯಾದಿನ ಸುಗಂಧತೈಲವಿಲ್ಲವೋ?’ ಎಂದು ಯೆರೆಮೀಯನಂತೆ ಕೇಳುತ್ತಾರೆ.

ಗುಣಕಾರಿ ಸುವಾರ್ತೆ

ಯೇಸುವಿನ ದಿನಗಳಲ್ಲಿದ್ದ ದೀನಭಾವದ ಜನರ ಮನಸ್ಸುಗಳಲ್ಲೂ ಅದೇ ಪ್ರಶ್ನೆಯಿತ್ತು; ಆ ಪ್ರಶ್ನೆಗೆ ಉತ್ತರವೂ ಸಿಕ್ಕಿತು. ಕ್ರಿ.ಶ. 30ನೇ ಇಸವಿಯ ಆರಂಭದಲ್ಲಿ ನಜರೇತಿನ ಸಭಾಮಂದಿರದಲ್ಲಿ ಯೇಸು ಯೆಶಾಯನ ಸುರುಳಿಯನ್ನು ತೆರೆದು, ‘ಯೆಹೋವನು ನನ್ನನ್ನು ಬಡವರಿಗೆ ಶುಭವರ್ತಮಾನವನ್ನು ಸಾರುವದಕ್ಕೆ ಅಭಿಷೇಕಿಸಿದನು; ಮನಮುರಿದವರನ್ನು ಕಟ್ಟಿ ವಾಸಿಮಾಡುವದಕ್ಕೂ ಆತನು ನನ್ನನ್ನು ಕಳುಹಿಸಿದ್ದಾನೆ’ ಎಂದು ಓದಿದನು. (ಯೆಶಾಯ 61:1, 3) ನಂತರ ಯೇಸು ಆ ಮಾತುಗಳನ್ನು ತನಗೇ ಅನ್ವಯಿಸುತ್ತಾ, ಸಾಂತ್ವನದ ವಾರ್ತೆಯನ್ನು ಎಲ್ಲರಿಗೆ ಸಾರುವ ನೇಮಕವುಳ್ಳ ಮೆಸ್ಸೀಯ ತಾನೇ ಎಂದು ಸೂಚಿಸಿದನು.—ಲೂಕ 4:16-21.

ಯೇಸು ತನ್ನ ಶುಶ್ರೂಷೆಯಾದ್ಯಂತ ದೇವರ ರಾಜ್ಯದ ಸುವಾರ್ತೆಯನ್ನು ಹುರುಪಿನಿಂದ ಸಾರಿದನು. (ಮತ್ತಾಯ 4:17) ಕಷ್ಟಸಂಕಷ್ಟಗಳಲ್ಲಿರುವವರ ಪರಿಸ್ಥಿತಿ ಬದಲಾಗುವುದೆಂದು ಆತನು ತನ್ನ ಪರ್ವತ ಪ್ರಸಂಗದಲ್ಲಿ ವಾಗ್ದಾನಿಸಿದನು: “ಈಗ ಅಳುವವರಾದ ನೀವು ಸಂತೋಷಿತರು; ನೀವು ನಗುವಿರಿ.” (ಲೂಕ 6:21) ದೇವರ ರಾಜ್ಯ ಬರುತ್ತದೆಂಬ ನಿರೀಕ್ಷೆಯ ಸಂದೇಶವನ್ನು ಪ್ರಕಟಿಸುವ ಮೂಲಕ ಯೇಸು ‘ಮನಮುರಿದವರನ್ನು ವಾಸಿಮಾಡಿದನು.’

ನಮ್ಮ ದಿನಗಳಲ್ಲೂ “ರಾಜ್ಯದ ಸುವಾರ್ತೆ” ಸಾಂತ್ವನ ಕೊಡುತ್ತದೆ. (ಮತ್ತಾಯ 6:10; 9:35) ಉದಾಹರಣೆಗೆ ರೋಜರ್‌ ಹಾಗೂ ಲಿಲ್ಯಾನ್‌ ಎಂಬವರ ಅನುಭವ ಕೇಳಿ. ಶಾಶ್ವತ ಜೀವನದ ಕುರಿತ ದೇವರ ವಾಗ್ದಾನವನ್ನು ಅವರು ಮೊದಲಬಾರಿಗೆ ಕೇಳಿಸಿಕೊಂಡದ್ದು 1961ರ ಜನವರಿ ತಿಂಗಳಲ್ಲಿ. ಅದು ಅವರಿಗೆ ಶಮನಕಾರಿ ಸುಗಂಧತೈಲದಂತೆ ಇತ್ತು. “ಕಲಿತ ವಿಷಯ ಎಷ್ಟು ಚೆನ್ನಾಗಿತ್ತೆಂದರೆ ನಾನು ಅಡುಗೆಮನೆಯಲ್ಲಿ ಕುಣಿದಾಡಿಬಿಟ್ಟೆ; ನನಗೆ ಅಷ್ಟು ಸಂತೋಷವಾಗಿತ್ತು” ಎಂದು ನೆನಪಿಸಿಕೊಳ್ಳುತ್ತಾಳೆ ಲಿಲ್ಯಾನ್‌. ಆಗ ರೋಜರ್‌ಗೆ ಪಾರ್ಶ್ವವಾಯು ರೋಗ ಬಂದು ಹತ್ತು ವರ್ಷಗಳಾಗಿದ್ದವು. ಆತನು ತಾನು ಕೇಳಿಸಿಕೊಂಡ ಸಂದೇಶದ ಬಗ್ಗೆ, “ಸತ್ತವರಿಗೆ ಪುನರುತ್ಥಾನವಾಗಲಿದೆ, ಎಲ್ಲಾ ಕಷ್ಟಸಂಕಟ ಹಾಗೂ ಅಸ್ವಸ್ಥತೆ ಕೊನೆಗೊಳ್ಳಲಿದೆ ಎಂಬ ಅತ್ಯದ್ಭುತವಾದ ನಿರೀಕ್ಷೆಯ ಬಗ್ಗೆ ಕೇಳಿದಾಗ ಬದುಕುವ ಆಸೆ ನನ್ನಲ್ಲಿ ಚಿಗುರಿತು. ನನಗಾದ ಆನಂದಕ್ಕೆ ಪಾರವೇ ಇರಲಿಲ್ಲ” ಎಂದು ಹೇಳಿದನು.—ಪ್ರಕಟನೆ 21:4.

1970ರಲ್ಲಿ ಅವರು ತಮ್ಮ 11 ವರ್ಷದ ಮಗನನ್ನು ಕಳೆದುಕೊಂಡರು. ಆದರೂ ಅವರು ದುಃಖದ ಮಡುವಿನಲ್ಲಿ ಮುಳುಗಿಹೋಗಲಿಲ್ಲ. ಯೆಹೋವನು “ಮುರಿದ ಮನಸ್ಸುಳ್ಳವರನ್ನು ವಾಸಿಮಾಡುತ್ತಾನೆ; ಅವರ ಗಾಯಗಳನ್ನು ಕಟ್ಟುತ್ತಾನೆ” ಎಂಬುದನ್ನು ಅವರು ವೈಯಕ್ತಿಕವಾಗಿ ಅನುಭವಿಸಿ ನೋಡಿದರು. (ಕೀರ್ತನೆ 147:3) ಅವರಿಗಿರುವ ಬೈಬಲಾಧರಿತ ನಿರೀಕ್ಷೆ ಅವರಿಗೆ ಸಾಂತ್ವನಕೊಟ್ಟಿತು. ಬರಲಿರುವ ದೇವರ ರಾಜ್ಯದ ಕುರಿತ ಸುವಾರ್ತೆ ಅವರಿಗೆ ಸುಮಾರು 50 ವರ್ಷಗಳಿಂದ ಶಾಂತಿ-ನೆಮ್ಮದಿ ತಂದಿದೆ.

ಹೆಚ್ಚಿನ ಗುಣಪಡಿಸುವಿಕೆ ಬರಲಿದೆ ಮುಂದೆ

ಹಾಗಾದರೆ ‘ಗಿಲ್ಯಾದಿನ ಸುಗಂಧತೈಲ’ ಇಂದು ಇದೆಯೋ? ಹೌದು, ಆಧ್ಯಾತ್ಮಿಕವಾದ ಸುಗಂಧತೈಲ ಇಂದೂ ಇದೆ. ರಾಜ್ಯದ ಸುವಾರ್ತೆಯು ಕೊಡುವ ಸಾಂತ್ವನ ಹಾಗೂ ನಿರೀಕ್ಷೆ ಮುರಿದ ಮನಸ್ಸುಗಳನ್ನು ಕಟ್ಟಲು ಸಹಾಯಮಾಡುತ್ತದೆ. ಇಂಥ ಗುಣಪಡಿಸುವಿಕೆ ನಿಮಗೂ ಬೇಕೋ? ನೀವು ಮಾಡಬೇಕಾದದ್ದು ಇಷ್ಟೇ: ದೇವರ ವಾಕ್ಯದಿಂದ ಬರುವ ಸಾಂತ್ವನದಾಯಕ ಸಂದೇಶಕ್ಕೆ ನಿಮ್ಮ ಹೃದಯದ ದ್ವಾರವನ್ನು ತೆರೆದು, ಆ ಸಂದೇಶ ನಿಮ್ಮ ಜೀವನವನ್ನು ತುಂಬಲು ದಾರಿಮಾಡಿಕೊಡಿ. ಈಗಾಗಲೇ ಲಕ್ಷಾಂತರ ಜನರು ಹೀಗೆ ಮಾಡಿದ್ದಾರೆ.

ಈ ಸುಗಂಧತೈಲದಿಂದ ಸಾಧ್ಯವಾಗುವ ಗುಣಪಡಿಸುವಿಕೆಯು ಮುಂದೆ ಬರಲಿರುವ ಬೃಹತ್‌ ಪ್ರಮಾಣದ ಗುಣಪಡಿಸುವಿಕೆಯ ಮುನ್ನೋಟವನ್ನು ನೀಡುತ್ತಿದೆ. ಶಾಶ್ವತ ಜೀವನವನ್ನು ಕೊಡುವ ಉದ್ದೇಶದಿಂದ ಯೆಹೋವನು ‘ಜನಾಂಗಗಳನ್ನು ವಾಸಿಮಾಡುವ’ ಸಮಯವು ಶರವೇಗದಿಂದ ಧಾವಿಸಿಬರುತ್ತಿದೆ. ಆಗ “ಯಾವ ನಿವಾಸಿಯೂ ತಾನು ಅಸ್ವಸ್ಥನು ಎಂದು ಹೇಳನು.” ಹೌದು, ‘ಗಿಲ್ಯಾದಿನ ಸುಗಂಧತೈಲ’ ಇನ್ನೂ ಇದೆ!—ಪ್ರಕಟನೆ 22:2; ಯೆಶಾಯ 33:24. (w10-E 06/01)

[ಪುಟ 27ರಲ್ಲಿರುವ ಚಿತ್ರ]

ದೇವರ ರಾಜ್ಯದ ಸುವಾರ್ತೆಗಿರುವ ಗುಣಕಾರಿ ಶಕ್ತಿಯು ಮುರಿದ ಮನಸ್ಸುಳ್ಳವರ ದುಃಖವನ್ನು ಇಂದೂ ಶಮನಗೊಳಿಸುತ್ತಿದೆ