ವಿಮೋಚನಕಾಂಡ 25:1-40

  • ಪವಿತ್ರ ಡೇರೆಗಾಗಿ ಕಾಣಿಕೆಗಳು (1-9)

  • ಮಂಜೂಷ (10-22)

  • ಮೇಜು (23-30)

  • ದೀಪಸ್ತಂಭ (31-40)

25  ಆಮೇಲೆ ಯೆಹೋವ ಮೋಶೆಗೆ ಹೀಗಂದನು:  “ನನಗೋಸ್ಕರ ಕಾಣಿಕೆ ಕೊಡೋಕೆ ಇಸ್ರಾಯೇಲ್ಯರಿಗೆ ಹೇಳು. ಕಾಣಿಕೆ ನೀಡೋಕೆ ಯಾರ ಹೃದಯ ಪ್ರೇರಿಸುತ್ತೋ ಅವರಿಂದ ನನಗಾಗಿ ನೀನು ಕಾಣಿಕೆ ತಗೊಬೇಕು.+  ಆ ಕಾಣಿಕೆಗಳು ಯಾವುದಂದ್ರೆ: ಚಿನ್ನ,+ ಬೆಳ್ಳಿ,+ ತಾಮ್ರ,+  ನೀಲಿ ದಾರ, ನೇರಳೆ ಬಣ್ಣದ ಉಣ್ಣೆ,* ಕಡುಗೆಂಪು ಬಣ್ಣದ ನೂಲು,* ಒಳ್ಳೇ ಗುಣಮಟ್ಟದ ನಾರುಬಟ್ಟೆ, ಆಡಿನ ಕೂದಲು,  ಕೆಂಪು ಬಣ್ಣ ಹಚ್ಚಿದ ಟಗರುಚರ್ಮ, ಸೀಲ್‌ ಪ್ರಾಣಿಯ* ಚರ್ಮ, ಅಕೇಶಿಯ ಮರ,*+  ದೀಪಗಳಿಗೆ ಬೇಕಾದ ಎಣ್ಣೆ,+ ಅಭಿಷೇಕ ತೈಲಕ್ಕೆ,+ ಒಳ್ಳೇ ವಾಸನೆ ಇರೋ ಧೂಪಕ್ಕೆ+ ಬೇಕಾದ ಸುಗಂಧ ತೈಲ,  ಏಫೋದಿನಲ್ಲೂ*+ ಎದೆಪದಕದಲ್ಲೂ+ ಇಡೋಕೆ ಗೋಮೇದಕ ರತ್ನಗಳು, ಬೇರೆಬೇರೆ ವಿಧದ ರತ್ನಗಳು.  ಅವರು ನನಗೋಸ್ಕರ ಒಂದು ಆರಾಧನಾ ಸ್ಥಳ ಮಾಡಬೇಕು. ನಾನು ಅವರ ಮಧ್ಯ ವಾಸಿಸ್ತೀನಿ.+  ಪವಿತ್ರ ಡೇರೆಯನ್ನ, ಅದ್ರ ಎಲ್ಲ ಸಾಮಗ್ರಿಗಳ ವಿನ್ಯಾಸ ತೋರಿಸ್ತೀನಿ. ಅದೇ ತರ ನೀನು ಅದನ್ನೆಲ್ಲಾ ಮಾಡಬೇಕು.+ 10  ಅವರು ಅಕೇಶಿಯ ಮರದಿಂದ ಒಂದು ಮಂಜೂಷ ಮಾಡಬೇಕು. ಆ ಪೆಟ್ಟಿಗೆ ಎರಡೂವರೆ ಮೊಳ* ಉದ್ದ, ಒಂದೂವರೆ ಮೊಳ ಅಗಲ, ಒಂದೂವರೆ ಮೊಳ ಎತ್ತರ ಇರಬೇಕು.+ 11  ಒಳಗೂ ಹೊರಗೂ ಶುದ್ಧ ಚಿನ್ನದ ತಗಡುಗಳನ್ನ ಹೊದಿಸಬೇಕು.+ ಮೇಲ್ಭಾಗದ ಸುತ್ತ ಅಲಂಕಾರ ಇರೋ ಚಿನ್ನದ ಅಂಚು ಮಾಡಬೇಕು.+ 12  ಚಿನ್ನದ ನಾಲ್ಕು ಬಳೆಗಳನ್ನ ಅಚ್ಚಲ್ಲಿ ಮಾಡಿ ಮಂಜೂಷದ ನಾಲ್ಕು ಕಾಲುಗಳ ಮೇಲ್ಭಾಗದಲ್ಲಿ ಜೋಡಿಸಬೇಕು. ಎರಡೂ ಬದಿಗೆ ಎರಡೆರಡು ಬಳೆಗಳನ್ನ ಜೋಡಿಸಬೇಕು. 13  ಅಕೇಶಿಯ ಮರದಿಂದ ಕೋಲುಗಳನ್ನ ಮಾಡಿ ಅವುಗಳಿಗೆ ಚಿನ್ನದ ತಗಡುಗಳನ್ನ ಹೊದಿಸಬೇಕು.+ 14  ಆ ಕೋಲುಗಳನ್ನ ಮಂಜೂಷದ ಎರಡೂ ಬದಿಯಲ್ಲಿರೋ ಬಳೆಗಳ ಒಳಗೆ ಹಾಕಬೇಕು. ಇದ್ರಿಂದ ಮಂಜೂಷನ ಹೊತ್ಕೊಂಡು ಹೋಗೋಕೆ ಆಗುತ್ತೆ. 15  ಆ ಕೋಲುಗಳು ಮಂಜೂಷಕ್ಕಿರೋ ಬಳೆಗಳಲ್ಲೇ ಇರಬೇಕು. ಅವುಗಳಿಂದ ತೆಗಿಬಾರದು.+ 16  ಆಜ್ಞೆಗಳಿರೋ* ಕಲ್ಲಿನ ಹಲಗೆಗಳನ್ನ ಕೊಡ್ತೀನಿ. ನೀನು ಅವುಗಳನ್ನ ಮಂಜೂಷದ ಒಳಗೆ ಇಡಬೇಕು.+ 17  ಮಂಜೂಷಕ್ಕಾಗಿ ಶುದ್ಧ ಚಿನ್ನದಿಂದ ಒಂದು ಮುಚ್ಚಳ ಮಾಡಬೇಕು. ಆ ಮುಚ್ಚಳ ಎರಡೂವರೆ ಮೊಳ ಉದ್ದ, ಒಂದೂವರೆ ಮೊಳ ಅಗಲ ಇರಬೇಕು.+ 18  ಚಿನ್ನವನ್ನ ಸುತ್ತಿಗೆಯಿಂದ ಬಡಿದು ಕೆರೂಬಿಯರ ಎರಡು ಆಕೃತಿಗಳನ್ನ ಮಾಡಬೇಕು. ಅವುಗಳನ್ನ ಮುಚ್ಚಳದ ಮೇಲೆ ಎರಡು ಕೊನೆಗಳಲ್ಲಿ ಇಡಬೇಕು.+ 19  ಮುಚ್ಚಳದ ಒಂದು ಕೊನೆಯಲ್ಲಿ ಒಂದು, ಇನ್ನೊಂದು ಕೊನೆಯಲ್ಲಿ ಇನ್ನೊಂದು ಹೀಗೆ ಕೆರೂಬಿಯರ ಎರಡು ಆಕೃತಿಗಳನ್ನ ಇಡಬೇಕು. 20  ಆ ಕೆರೂಬಿಯರ ಎರಡೆರಡು ರೆಕ್ಕೆಗಳು ಬಿಚ್ಕೊಂಡಿದ್ದು ಮೇಲಕ್ಕೆ ಚಾಚ್ಕೊಂಡಿರಬೇಕು. ಅವರ ರೆಕ್ಕೆಗಳು ಮುಚ್ಚಳವನ್ನ ಆವರಿಸಿಕೊಂಡಿರಬೇಕು.+ ಕೆರೂಬಿಯರು ಎದುರುಬದುರಾಗಿ ಇರಬೇಕು. ಅವರ ಮುಖ ಮುಚ್ಚಳದ ಕಡೆಗೆ ಬಾಗಿರಬೇಕು. 21  ಆ ಮುಚ್ಚಳವನ್ನ+ ಮಂಜೂಷದ ಮೇಲೆ ಇಡಬೇಕು. ನಿನಗೆ ಕೊಡೋ ಕಲ್ಲಿನ ಹಲಗೆಗಳನ್ನ ಮಂಜೂಷದೊಳಗೆ ಇಡಬೇಕು. 22  ಪೆಟ್ಟಿಗೆಯ ಮುಚ್ಚಳದ ಮೇಲೆ ನಿನಗೆ ಕಾಣಿಸಿಕೊಳ್ತೀನಿ, ಅಲ್ಲಿಂದ ನಿನ್ನ ಜೊತೆ ಮಾತಾಡ್ತೀನಿ.+ ನೀನು ಇಸ್ರಾಯೇಲ್ಯರಿಗೆ ಹೇಳಬೇಕಾದ ಎಲ್ಲ ಆಜ್ಞೆಗಳನ್ನ ನಾನು ಸಾಕ್ಷಿ ಮಂಜೂಷದ ಮೇಲಿರೋ ಕೆರೂಬಿಯರ ಮಧ್ಯದಿಂದ ನಿನಗೆ ಹೇಳ್ತೀನಿ. 23  ಅಕೇಶಿಯ ಮರದಿಂದ ಒಂದು ಮೇಜು+ ಸಹ ಮಾಡಬೇಕು. ಅದು ಎರಡು ಮೊಳ ಉದ್ದ, ಒಂದು ಮೊಳ ಅಗಲ, ಒಂದೂವರೆ ಮೊಳ ಎತ್ತರ+ ಇರಬೇಕು. 24  ಅದಕ್ಕೆ ಶುದ್ಧ ಚಿನ್ನದ ತಗಡುಗಳನ್ನ ಹೊದಿಸಬೇಕು. ಮೇಜಿನ ಸುತ್ತ ಚಿನ್ನದ ಅಂಚು ಮಾಡಬೇಕು. 25  ಆ ಅಂಚಿನ ಸುತ್ತ ಕೈಯಗಲದಷ್ಟು* ಇರೋ ಪಟ್ಟಿಯನ್ನ ಮಾಡಬೇಕು. ಆ ಪಟ್ಟಿಯ ಸುತ್ತ ಚಿನ್ನದ ಇನ್ನೊಂದು ಅಂಚು ಇರಬೇಕು. 26  ಮೇಜಿಗಾಗಿ ಚಿನ್ನದ ನಾಲ್ಕು ಬಳೆಗಳನ್ನ ಮಾಡಬೇಕು. ಮೇಜಿನ ನಾಲ್ಕು ಕಾಲುಗಳನ್ನ ಜೋಡಿಸಿರೋ ನಾಲ್ಕು ಮೂಲೆಗಳಲ್ಲಿ ಆ ಬಳೆಗಳನ್ನ ಹಾಕಬೇಕು. 27  ಆ ಬಳೆಗಳು ಪಟ್ಟಿ ಹತ್ರ ಇರಬೇಕು. ಮೇಜನ್ನ ಹೊತ್ಕೊಂಡು ಹೋಗೋಕೆ ಬಳಸೋ ಕೋಲುಗಳಿಗೆ ಆ ಬಳೆಗಳು ಹಿಡಿಗಳಾಗಿರುತ್ತೆ. 28  ಅಕೇಶಿಯ ಮರದಿಂದ ಕೋಲುಗಳನ್ನ ಮಾಡಿ ಅವುಗಳಿಗೆ ಚಿನ್ನದ ತಗಡುಗಳನ್ನ ಹೊದಿಸಬೇಕು. ಆ ಕೋಲುಗಳಿಂದಾನೇ ಮೇಜನ್ನ ಹೊತ್ಕೊಂಡು ಹೋಗಬೇಕು. 29  ಮೇಜಿನ ಮೇಲೆ ಇಡಬೇಕಾದ ತಟ್ಟೆ-ಲೋಟಗಳನ್ನ, ಪಾನ ಅರ್ಪಣೆ ಸುರಿಯೋಕೆ ಬೇಕಾದ ಹೂಜಿಗಳನ್ನ ಬೋಗುಣಿಗಳನ್ನ ಶುದ್ಧ ಚಿನ್ನದಿಂದ ಮಾಡಬೇಕು.+ 30  ನೀನು ಆ ಮೇಜಿನ ಮೇಲೆ ನನ್ನ ಮುಂದೆ ಯಾವಾಗ್ಲೂ ಅರ್ಪಣೆಯ ರೊಟ್ಟಿಗಳನ್ನ ಇಡಬೇಕು.+ 31  ಶುದ್ಧ ಚಿನ್ನದಿಂದ ದೀಪಸ್ತಂಭ+ ಮಾಡಬೇಕು. ಚಿನ್ನವನ್ನ ಸುತ್ತಿಗೆಯಿಂದ ಬಡಿದು ಅದನ್ನ ಮಾಡಬೇಕು. ದೀಪಸ್ತಂಭದ ಬುಡ, ದಿಂಡು, ಕೊಂಬೆಗಳು, ಪುಷ್ಪಪಾತ್ರೆಗಳು, ಮೊಗ್ಗುಗಳು, ಹೂವುಗಳು ಇದನ್ನೆಲ್ಲ ಚಿನ್ನದ ಒಂದೇ ತುಂಡಿಂದ ಮಾಡಬೇಕು.+ 32  ದೀಪಸ್ತಂಭದ ದಿಂಡಿನ ಎರಡು ಬದಿಗಳಲ್ಲಿ ಒಟ್ಟು ಆರು ಕೊಂಬೆಗಳು ಇರಬೇಕು. ದಿಂಡಿನ ಒಂದು ಬದಿ ಮೂರು ಕೊಂಬೆ, ಇನ್ನೊಂದು ಬದಿ ಮೂರು ಕೊಂಬೆ. 33  ಒಂದು ಕೊಂಬೆಯಲ್ಲಿ ಬಾದಾಮಿ ಹೂವಿನ ಆಕಾರದ ಮೂರು ಪುಷ್ಪಪಾತ್ರೆಗಳು ಇರಬೇಕು. ಒಂದೊಂದು ಪುಷ್ಪಪಾತ್ರೆಯ ನಂತ್ರ ಒಂದು ಮೊಗ್ಗು, ಒಂದು ಹೂವು ಇರಬೇಕು. ಇನ್ನೊಂದು ಕೊಂಬೆಯಲ್ಲಿ ಬಾದಾಮಿ ಹೂವಿನ ಆಕಾರದ ಮೂರು ಪುಷ್ಪಪಾತ್ರೆ ಇರಬೇಕು. ಒಂದೊಂದು ಪುಷ್ಪಪಾತ್ರೆ ನಂತ್ರ ಒಂದು ಮೊಗ್ಗು, ಒಂದು ಹೂ ಇರಬೇಕು. ದೀಪಸ್ತಂಭದ ಆರು ಕೊಂಬೆಗಳಲ್ಲೂ ಹೀಗೇ ಇರಬೇಕು. 34  ದೀಪಸ್ತಂಭದ ದಿಂಡಿನಲ್ಲಿ ಬಾದಾಮಿ ಹೂವಿನ ಆಕಾರದ ನಾಲ್ಕು ಪುಷ್ಪಪಾತ್ರೆ ಇರಬೇಕು. ಒಂದೊಂದು ಪುಷ್ಪಪಾತ್ರೆ ನಂತ್ರ ಒಂದು ಮೊಗ್ಗು, ಒಂದು ಹೂ ಇರಬೇಕು. 35  ಕವಲು ಒಡೆದಿರೋ ಎರಡೆರಡು ಕೊಂಬೆಗಳ ಕೆಳಗೆ ಒಂದೊಂದು ಮೊಗ್ಗು ಇರಬೇಕು. ದಿಂಡಿನಿಂದ ಕವಲು ಒಡೆದಿರೋ ಎಲ್ಲ ಆರು ಕೊಂಬೆಗಳ ಕೆಳಗೂ ಇದೇ ರೀತಿ ಇರಬೇಕು. 36  ಶುದ್ಧ ಚಿನ್ನದ ಒಂದೇ ತುಂಡಿಂದ ಮೊಗ್ಗುಗಳನ್ನ, ಕೊಂಬೆಗಳನ್ನ, ಇಡೀ ದೀಪಸ್ತಂಭವನ್ನ ಮಾಡಬೇಕು. ಚಿನ್ನವನ್ನ ಸುತ್ತಿಗೆಯಿಂದ ಬಡಿದು+ ಇದನ್ನೆಲ್ಲ ಮಾಡಬೇಕು. 37  ದೀಪಸ್ತಂಭಕ್ಕಾಗಿ ಏಳು ದೀಪಗಳನ್ನ ಮಾಡಬೇಕು. ದೀಪಗಳನ್ನ ಹಚ್ಚಿದಾಗ ಅದ್ರ ಮುಂದಿರೋ ಸ್ಥಳದಲ್ಲೆಲ್ಲ ಬೆಳಕು ಪ್ರಕಾಶಿಸುತ್ತೆ.+ 38  ಅದ್ರ ಚಿಮಟಗಳನ್ನ,* ಸುಟ್ಟ ಬತ್ತಿಗಳನ್ನ ಹಾಕೋ ಪಾತ್ರೆಗಳನ್ನ ಶುದ್ಧ ಚಿನ್ನದಿಂದ ಮಾಡಬೇಕು.+ 39  ದೀಪಸ್ತಂಭವನ್ನ, ಅದ್ರ ಎಲ್ಲ ಉಪಕರಣಗಳನ್ನ ಒಂದು ತಲಾಂತು* ಶುದ್ಧ ಚಿನ್ನದಿಂದ ಮಾಡಬೇಕು. 40  ನಾನು ನಿನಗೆ ಬೆಟ್ಟದಲ್ಲಿ ತೋರಿಸಿದ ಮಾದರಿಯಲ್ಲೇ ನೀನು ಎಲ್ಲವನ್ನ ಜಾಗ್ರತೆಯಿಂದ ಮಾಡಬೇಕು.+

ಪಾದಟಿಪ್ಪಣಿ

ಅಥವಾ “ನಸುಗೆಂಪಾದ ನೇರಳೆ ಬಣ್ಣದ ಉಣ್ಣೆ.”
ಅಥವಾ “ಕಿರಮಂಜಿ ಕೆಂಪು ಬಣ್ಣದ ನೂಲು.” ಕಿರಮಂಜಿ ಉಜ್ವಲವಾದ ಕೆಂಪು ಬಣ್ಣ. ಈ ಬಣ್ಣವನ್ನ ಕಾಚಿನೀಲ್‌ ಕೀಟದಿಂದ ತೆಗೆಯಲಾಗುತ್ತೆ.
ಇದೊಂದು ಕಡಲ ಪ್ರಾಣಿ.
ಇದು ಜಾಲಿ ಕುಲಕ್ಕೆ ಸೇರಿದ ಮರ.
ಒಂದು ಮೊಳ ಅಂದ್ರೆ 44.5 ಸೆಂ.ಮೀ. (17.5 ಇಂಚು). ಪರಿಶಿಷ್ಟ ಬಿ14 ನೋಡಿ.
ಅಥವಾ “ಸಾಕ್ಷಿಯಾಗಿ ಇರೋ.”
ಸುಮಾರು 7.4 ಸೆಂ.ಮೀ. (2.9 ಇಂಚು). ಪರಿಶಿಷ್ಟ ಬಿ14 ನೋಡಿ.
ಅಥವಾ “ದೀಪಶಾಮಕಗಳನ್ನ.”
ಒಂದು ತಲಾಂತು ಅಂದ್ರೆ 34.2 ಕೆ.ಜಿ. ಪರಿಶಿಷ್ಟ ಬಿ14 ನೋಡಿ.