ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪೇತ್ರ ಮತ್ತು ಅನನೀಯ ಸುಳ್ಳು ಹೇಳಿದರು ನಮಗೇನು ಪಾಠ?

ಪೇತ್ರ ಮತ್ತು ಅನನೀಯ ಸುಳ್ಳು ಹೇಳಿದರು ನಮಗೇನು ಪಾಠ?

ನಿಮ್ಮ ಮಕ್ಕಳಿಗೆ ಕಲಿಸಿರಿ

ಪೇತ್ರ ಮತ್ತು ಅನನೀಯ ಸುಳ್ಳು ಹೇಳಿದರು ನಮಗೇನು ಪಾಠ?

ಸುಳ್ಳು ಅಂದ್ರೆ ಏನು ಅಂತ ನಿನಗೆ ಗೊತ್ತಿದೆ ಅಲ್ವಾ? ನಿಜವಲ್ಲದ್ದನ್ನು ಹೇಳಿದರೆ ಅದೇ ಸುಳ್ಳು. ನೀನು ಯಾವತ್ತಾದರೂ ಸುಳ್ಳು ಹೇಳಿದ್ದೀಯಾ? * ಕೆಲವು ದೊಡ್ಡವರು ದೇವಭಕ್ತರು ಸಹ ಸುಳ್ಳು ಹೇಳಿದ್ದರ ಬಗ್ಗೆ ಬೈಬಲ್‌ನಲ್ಲಿ ಇದೆ. ಅದರಲ್ಲಿ ಒಬ್ಬ ವ್ಯಕ್ತಿ ಯೇಸುವಿನ 12 ಶಿಷ್ಯರಲ್ಲಿ ಒಬ್ಬರಾದ ಪೇತ್ರ. ಅವರು ಯಾಕೆ ಸುಳ್ಳು ಹೇಳಿದರು ಅನ್ನೋ ಕಥೆ ಓದೋಣ.

ಅಂದು ಯೇಸುವನ್ನು ಕೈದು ಮಾಡಿ ಧರ್ಮಗುರುಗಳ ಮನೆಗೆ ಕರೆದುಕೊಂಡು ಹೋದರು. ಆಗಲೇ ಮಧ್ಯರಾತ್ರಿ ಆಗಿತ್ತು. ಅವರನ್ನು ಹಿಂಬಾಲಿಸುತ್ತಾ ಪೇತ್ರ ಧರ್ಮಗುರುಗಳ ಮನೆಯಂಗಳಕ್ಕೆ ಬರುತ್ತಾರೆ. ಬೆಂಕಿಯ ಬೆಳಕಿನಲ್ಲಿ ಪೇತ್ರರ ಮುಖ ಕಂಡಾಗ ಧರ್ಮಗುರುಗಳ ಸೇವಕಿ ಗುರುತು ಹಿಡಿದು ‘ಗಲಿಲಾಯದವರಾದ ಯೇಸುವಿನ ಜೊತೆ ನೀವು ಸಹ ಇದ್ರಲ್ಲಾ’ ಅಂತ ಕೇಳುತ್ತಾಳೆ. ಪೇತ್ರ ಹೆದರಿ ಇಲ್ಲ ಅಂತ ಹೇಳಿಬಿಡುತ್ತಾರೆ.

ಸ್ವಲ್ಪ ಹೊತ್ತಿನ ನಂತರ ಇನ್ನೊಬ್ಬ ಹುಡುಗಿ ಅವರನ್ನು ನೋಡಿ, ‘ಇವರು ನಜರೇತಿನವರಾದ ಯೇಸುವಿನೊಂದಿಗೆ ಇದ್ದರು’ ಅಂತ ಹೇಳುತ್ತಾಳೆ. ಮತ್ತೆ ಪೇತ್ರ ಇಲ್ಲ ಅಂತ ಹೇಳುತ್ತಾರೆ. ಸ್ವಲ್ಪ ಸಮಯದ ನಂತರ ಸುತ್ತಲೂ ನಿಂತಿದ್ದವರು ಪೇತ್ರರ ಹತ್ರ ಬಂದು, ‘ನೀವು ಸಹ ಅವರ ಜೊತೆ ಇದ್ದವರೇ’ ಅಂತ ಹೇಳುತ್ತಾರೆ.

ಪೇತ್ರ ತುಂಬ ಹೆದರಿಬಿಡುತ್ತಾರೆ. ಮೂರನೇ ಸಲ “ಆ ಮನುಷ್ಯನನ್ನು ನಾನರಿಯೆ” ಅಂತ ಸುಳ್ಳು ಹೇಳುತ್ತಾರೆ. ಆಗ ಹುಂಜ ಕೂಗುತ್ತೆ. ಯೇಸು ಪೇತ್ರರನ್ನು ನೋಡುತ್ತಾರೆ. ಆಗ ಪೇತ್ರರಿಗೆ ಯೇಸು ಹೇಳಿದ ಮಾತು ನೆನಪಾಗುತ್ತೆ. “ಹುಂಜವು ಕೂಗುವುದರೊಳಗೆ ನೀನು ನನ್ನನ್ನು ಮೂರು ಸಾರಿ ಅಲ್ಲಗಳೆಯುವಿ” ಅಂತ ಹೇಳಿದ್ದನ್ನು ನೆನಪುಮಾಡಿಕೊಳ್ಳುತ್ತಾ ತುಂಬ ನೊಂದುಕೊಳ್ಳುತ್ತಾರೆ. ಅಳುತ್ತಾರೆ.

ಆ ತರದ ಯಾವ ಪರಿಸ್ಥಿತಿ ನಿನಗೆ ಬರಬಹುದು?— ಸ್ಕೂಲಲ್ಲಿ ಕೆಲವು ಮಕ್ಕಳು ಒಟ್ಟಾಗಿ ನಿಂತು ಮಾತಾಡುತ್ತಿದ್ದಾರೆ. ಅದರಲ್ಲಿ ಒಬ್ಬ ಹೇಳ್ತಾನೆ: “ನಿನ್ನೆ ನಮ್ಮ ಮನೆಗೆ ಕೆಲ್ವು ಕ್ರೈಸ್ತರು ಬಂದಿದ್ದರು. ಏನೋ ಸುವಾರ್ತೆ ಅಂತೆ.” ಮತ್ತೊಬ್ಬ ಹೇಳ್ತಾನೆ: “ಹೌದು ನಮ್ಮ ಮನೆಗೂ ಬಂದಿದ್ದರು. ಮನೆಮನೆಗೆ ಹೋಗಿ ಪುಸ್ತಕಗಳ್ನ ಕೊಡುತ್ತಿದ್ದರು.” ಅದರಲ್ಲಿ ಒಬ್ಬ ನಿನ್ನ ನೋಡಿ “ನೀನೂ ಅವರ ಜೊತೆ ಇದ್ದೆ ಅಲ್ವಾ?” ಅಂತ ಕೇಳ್ತಾನೆ. ಆಗ ನೀನು ಏನು ಹೇಳ್ತಿಯಾ?

ಇಂಥ ಪರಿಸ್ಥಿತಿ ಎದುರಾಗುವ ಮುಂಚೆನೇ ನೀನು ಏನು ಉತ್ತರ ಕೊಡಬೇಕು ಅಂತ ಯೋಚಿಸಿಟ್ಟಿರಬೇಕು. ಪೇತ್ರ ಅದನ್ನ ಮಾಡಿರಲಿಲ್ಲ. ಒತ್ತಡ ಬಂದಾಗ ಅದಕ್ಕೆ ಸುಳ್ಳು ಹೇಳಿದ್ದು. ಆದರೆ ತಮ್ಮ ತಪ್ಪಿನ ಅರಿವಾದಾಗ ಪೇತ್ರ ತುಂಬ ಕೊರಗಿದರು ಕ್ಷಮೆ ಕೇಳಿದರು. ಹಾಗಾಗಿ ದೇವರು ಅವರನ್ನು ಮನ್ನಿಸಿದರು.

ಯೇಸುವಿನ ಮತ್ತೊಬ್ಬ ಅನುಯಾಯಿ ಅನನೀಯ ಸಹ ಸುಳ್ಳು ಹೇಳಿದ್ದರು. ಆದರೆ ದೇವರು ಅವರನ್ನು ಮನ್ನಿಸಲಿಲ್ಲ. ಗಂಡನ ಜೊತೆ ಸೇರಿ ಸುಳ್ಳು ಹೇಳಿದ ಅವರ ಹೆಂಡತಿ ಸಪ್ಫೈರರನ್ನೂ ಮನ್ನಿಸಲಿಲ್ಲ. ಇವರಿಬ್ಬರನ್ನು ದೇವರು ಯಾಕೆ ಕ್ಷಮಿಸಲಿಲ್ಲ ಅಂತ ನೋಡೋಣ.

ಪಂಚಾಶತ್ತಮ ಹಬ್ಬದ ಸಮಯ. ಯೇಸು ಸ್ವರ್ಗಕ್ಕೆ ಹೋಗಿ 10 ದಿನಗಳಾಗಿತ್ತು ಅಷ್ಟೆ. ಜನರು ಬೇರೆ ಬೇರೆ ದೇಶಗಳಿಂದ ಯೆರೂಸಲೇಮಿಗೆ ಪಂಚಾಶತ್ತಮ ಹಬ್ಬವನ್ನು ಆಚರಿಸಲು ಬಂದಿದ್ದರು. ಆ ಸಮಯದಲ್ಲಿ ಸುಮಾರು 3,000 ಜನರು ದೀಕ್ಷಾಸ್ನಾನ ಪಡೆದರು, ಯೇಸುವಿನ ಅನುಯಾಯಿಗಳಾದರು. ದೀಕ್ಷಾಸ್ನಾನ ಪಡೆದವರಿಗೆ ದೇವರ ಬಗ್ಗೆ ಹೆಚ್ಚು ತಿಳಿದುಕೊಳ್ಳುವ ಹಂಬಲ ಹುಟ್ಟಿತು. ಅದಕ್ಕಾಗಿ ಇನ್ನೂ ಸ್ವಲ್ಪ ದಿನ ಅಲ್ಲೇ ಉಳಿದುಕೊಂಡರು. ಅವರ ಖರ್ಚುವೆಚ್ಚಕ್ಕಾಗಿ ಯೆರೂಸಲೇಮಿನಲ್ಲಿರೋ ಯೇಸುವಿನ ಅನುಯಾಯಿಗಳಲ್ಲಿ ಕೆಲವರು ಧನ ಸಹಾಯ ಮಾಡಲು ಮುಂದೆ ಬಂದರು.

ಅವರಲ್ಲಿ ಅನನೀಯ ಸಪ್ಫೈರರೂ ಒಬ್ಬರು. ಧನ ಸಹಾಯ ಮಾಡಲು ಅವರು ತಮ್ಮ ಆಸ್ತಿಯನ್ನು ಮಾರುತ್ತಾರೆ. ನಂತರ ಅನನೀಯ ಹಣವನ್ನು ತಂದು ಅಪೊಸ್ತಲರ ಕೈಗೆ ಕೊಡುತ್ತಾ ಇಷ್ಟೇ ಹಣ ಸಿಕ್ಕಿದ್ದು ಅಂತ ಹೇಳುತ್ತಾರೆ. ಆದರೆ ಅದು ಶುದ್ಧ ಸುಳ್ಳು! ಅವರು ಸ್ವಲ್ಪ ಹಣವನ್ನು ತೆಗೆದಿಟ್ಟಿದ್ದರು. ಈ ವಿಷಯ ಪೇತ್ರರಿಗೆ ದಿವ್ಯಶಕ್ತಿಯಿಂದ ಗೊತ್ತಾಗುತ್ತೆ. ಆಗ ಪೇತ್ರ “ನೀನು ವಂಚಿಸಲು ಪ್ರಯತ್ನಿಸಿದ್ದು ಮನುಷ್ಯರನ್ನಲ್ಲ, ದೇವರನ್ನೇ” ಅಂತ ಅನನೀಯರಿಗೆ ಹೇಳುತ್ತಾರೆ. ತಕ್ಷಣ ಅನನೀಯ ಕೆಳಗೆ ಕುಸಿದು ಬಿದ್ದು ಸತ್ತುಹೋಗುತ್ತಾರೆ. ಇವೆಲ್ಲ ಆಗಿ ಮೂರು ತಾಸುಗಳ ನಂತರ ಸಪ್ಫೈರ ಬರುತ್ತಾರೆ. ಇಲ್ಲಿ ನಡೆದದ್ದು ಯಾವುದೂ ಆಕೆಗೆ ಗೊತ್ತಿಲ್ಲ. ಆಕೆಯೂ ಹಣದ ವಿಷಯದಲ್ಲಿ ಸುಳ್ಳು ಹೇಳುತ್ತಾರೆ. ತಕ್ಷಣ ಆಕೆಯೂ ಕೆಳಗೆ ಕುಸಿದು ಬಿದ್ದು ಸತ್ತುಹೋಗುತ್ತಾರೆ.

ನಾವು ಯಾಕೆ ಸುಳ್ಳು ಹೇಳಬಾರದು ಅನ್ನೋದಕ್ಕೆ ಇದು ಒಳ್ಳೇ ಪಾಠ. ಅದಕ್ಕೆ ನಾವು ಯಾವಾಗ್ಲೂ ಸತ್ಯವನ್ನೇ ಹೇಳಬೇಕು. ಹಾಗಿದ್ದರೂ ನಾವೆಲ್ಲರೂ ತಪ್ಪು ಮಾಡಿಬಿಡುತ್ತೀವಿ. ಅದರಲ್ಲೂ ಚಿಕ್ಕವರಾಗಿರುವಾಗ ತುಂಬಾನೇ ತಪ್ಪು ಮಾಡುತ್ತೀವಿ. ಆದರೆ ಯೆಹೋವ ದೇವರು ನಮ್ಮನ್ನು ಪ್ರೀತಿಸುತ್ತಾರೆ ಮತ್ತು ಪೇತ್ರರನ್ನು ಮನ್ನಿಸಿದ್ದಂತೆ ನಮ್ಮನ್ನೂ ಮನ್ನಿಸುತ್ತಾರೆ ಅಂತ ಗೊತ್ತಾದಾಗ ನಿನಗೆ ಖುಷಿ ಆಗಿಲ್ವಾ?— ಒಂದುವೇಳೆ ನಾವು ಸುಳ್ಳು ಹೇಳಿರುವುದಾದರೆ ದೇವರ ಹತ್ರ ಕ್ಷಮೆ ಕೇಳಬೇಕು. ಪೇತ್ರ ತುಂಬ ಬೇಡಿಕೊಂಡಿರಬೇಕು ಅದಕ್ಕೆ ದೇವರು ಅವರನ್ನು ಕ್ಷಮಿಸಿದರು. ದೇವರು ನಮ್ಮನ್ನೂ ಕ್ಷಮಿಸಬೇಕಾದರೆ ನಾವು ಇನ್ನು ಮುಂದೆ ಸತ್ಯವನ್ನೇ ಹೇಳಬೇಕು. ಸುಳ್ಳು ಹೇಳಬಾರದು. ▪ (w13-E 03/01)

ನಿಮ್ಮ ಬೈಬಲಿನಲ್ಲೇ ಓದಿ

ಮತ್ತಾಯ 26:69-75

ಅಪೊಸ್ತಲರ ಕಾರ್ಯಗಳು 2:38-42; 4:32-37; 5:1-11

[ಪಾದಟಿಪ್ಪಣಿ]

^ ಪ್ಯಾರ. 3 ಈ ಲೇಖನವನ್ನು ನೀವು ಚಿಕ್ಕ ಮಗುವಿಗೆ ಓದಿಹೇಳುತ್ತಿರುವುದಾದರೆ ಅಡ್ಡಗೆರೆ ಇರುವಲ್ಲಿ ಸ್ವಲ್ಪ ನಿಲ್ಲಿಸಿ ಮಗು ಉತ್ತರ ಹೇಳುವಂತೆ ಪ್ರೋತ್ಸಾಹಿಸಿ.

[ಪುಟ 8ರಲ್ಲಿರುವ ಚಿತ್ರ]

[ಪುಟ 8ರಲ್ಲಿರುವ ಚಿತ್ರ]

[ಪುಟ 9ರಲ್ಲಿರುವ ಚಿತ್ರ]