ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅನಾರೋಗ್ಯ ಪೀಡಿತ ಕಂದನ ಆರೈಕೆ

ಅನಾರೋಗ್ಯ ಪೀಡಿತ ಕಂದನ ಆರೈಕೆ

ಸುಖ ಸಂಸಾರಕ್ಕೆ ಸೂತ್ರಗಳು

ಅನಾರೋಗ್ಯ ಪೀಡಿತ ಕಂದನ ಆರೈಕೆ

ಚಾರ್ಲ್ಸ್‌: * “ನಮ್ಮ ಮಗ ಜಾನಿಗೆ ಡೌನ್‌ ಸಿಂಡ್ರೋಮ್‌. ಅವನ ಪಾಲನೆ ಮಾಡಿ ಮಾಡಿ ನಮ್ಮ ದೇಹಮನಸ್ಸು ಬಳಲಿ ಹೋಗುತ್ತೆ. ಒಂದು ಆರೋಗ್ಯವಂತ ಮಗುವನ್ನ ನೋಡ್ಕೊಳ್ಳೋಕೆ ಎಷ್ಟು ಶಕ್ತಿ ಬೇಕಾಗುತ್ತೆ ಅಂತ ನಿಮಗೇ ಗೊತ್ತು. ಅದರ ನೂರುಪಟ್ಟು ಶಕ್ತಿ ಇಂಥ ಮಕ್ಕಳನ್ನ ನೋಡ್ಕೊಳ್ಳೋಕೆ ಬೇಕಾಗುತ್ತೆ ಅಂದ್ರೆ ಯೋಚಿಸಿ. ಅಷ್ಟೇ ಅಲ್ಲ ಇದರಿಂದ ಕೆಲವೊಮ್ಮೆ ಗಂಡಹೆಂಡತಿ ಮಧ್ಯೆನೂ ವಿರಸ ಬಂದುಬಿಡುತ್ತೆ.”

ಮೋನಿಕಾ: “ಚಿಕ್ಕ ಚಿಕ್ಕ ವಿಷ್ಯ ಕಲಿಯಕ್ಕೂ ಜಾನಿಗೆ ತುಂಬ ಸಮಯ ಬೇಕಾಗುತ್ತೆ. ನಮಗೆ ಎಷ್ಟು ತಾಳ್ಮೆ ಇದ್ದರೂ ಸಾಕಾಗಲ್ಲ. ಕೆಲವೊಂದು ಸಲ ತುಂಬ ಕಿರಿಕಿರಿಯಾಗುತ್ತೆ. ಆಗ ಯಜಮಾನರ ಮೇಲೆ ರೇಗಾಡ್ಬಿಡ್ತಿನಿ. ಇದರಿಂದ ನಮ್ಮಿಬ್ಬರ ಮಧ್ಯೆ ಭಿನ್ನಾಭಿಪ್ರಾಯ ಏಳುತ್ತೆ, ಕೆಲವೊಮ್ಮೆ ಜಗಳನೂ ಆಗುತ್ತೆ.”

ನಿಮ್ಮ ಕಂದ ಹುಟ್ಟಿದ ಕ್ಷಣವನ್ನು ನೆನಪಿಸಿಕೊಳ್ಳಿ. ಅವತ್ತು ನಿಮ್ಮ ಆ ಕರುಳಬಳ್ಳಿಯನ್ನು ಎತ್ತಿ ಮುದ್ದಾಡಲು ಎಷ್ಟು ಹಾತೊರೆಯುತ್ತಿದ್ರಿ. ಚಾರ್ಲ್ಸ್‌ ಮತ್ತು ಮೋನಿಕಾ ಕೂಡ ಜಾನಿ ಹುಟ್ಟಿದಾಗ ಸಂಭ್ರಮ ಪಟ್ಟರು. ಆದರೆ ಜಾನಿ ಅಂಗವಿಕಲ, ಬುದ್ಧಿಮಾಂಧ್ಯ ಮಗು ಅಂತ ಗೊತ್ತಾದಾಗ ಆ ದಂಪತಿಯನ್ನು ಚಿಂತೆ ಕಾಡತೊಡಗಿತು.

ನಿಮ್ಮ ಮನೆಯಲ್ಲೂ ಇಂಥದ್ದೊಂದು ಮಗು ಇದೆಯಾ? ಹೇಗಪ್ಪಾ ನೋಡಿಕೊಳ್ಳೋದು ಅನ್ನೋ ಚಿಂತೆನಾ? ಚಿಂತೆಮಾಡಬೇಡಿ. ಎಷ್ಟೋ ಹೆತ್ತವರು ಇಂಥ ಮಕ್ಕಳನ್ನು ಬೆಳೆಸುವ ಸವಾಲನ್ನು ಜಯಿಸಿದ್ದಾರೆ. ಅವರಿಗೆ ಬಂದ ಸವಾಲುಗಳೇನು? ಅದನ್ನು ನಿಭಾಯಿಸಲು ಬೈಬಲ್‌ ಹೇಗೆ ಸಹಾಯಮಾಡಿತು? ನೋಡೋಣ.

ಸವಾಲು 1: ವಾಸ್ತವ ಒಪ್ಪಿಕೊಳ್ಳುವುದು ಕಷ್ಟ.

ಮಕ್ಕಳಿಗೆ ಒಂದು ದೊಡ್ಡ ಕಾಯಿಲೆ ಇದೆ ಅಂತ ತಿಳಿದುಬಂದಾಗ ಹೆತ್ತವರ ಕರುಳು ಕಿತ್ತುಬಂದಂತಾಗುತ್ತೆ. ಮೆಕ್ಸಿಕೋ ದೇಶದ ಜೂಲಿಯಾನ ಎಂಬವರು ಹೇಳ್ತಾರೆ: “ನನ್ನ ಮಗನಿಗೆ ಮಿದುಳ-ಲಕ್ವ ಇದೆ ಅಂತ ಕೇಳಿಸ್ಕೊಂಡಾಗ ಅದನ್ನ ಅರಗಿಸಿಕೊಳ್ಳೋಕೆ ಆಗ್ಲಿಲ್ಲ. ಆಕಾಶನೇ ಕಳಚಿ ತಲೆಮೇಲೆ ಬಿದ್ದಂಗೆ ಅನಿಸ್ತು.” ಇನ್ನು ಕೆಲವರಿಗೆ ಇಟಲಿಯ ವಿಲಾನಾರವರ ತರ ಅಪರಾಧಿಭಾವ ಕಾಡಬಹುದು. ಅವರು ಹೇಳ್ತಾರೆ: “ವಯಸ್ಸು ಮೀರಿ ಹೋದ ಮೇಲೆ ತಾಯಿಯಾದರೆ ಅಪಾಯ ಅಂತ ಗೊತ್ತಿದ್ದರೂ ಮಗು ಮಾಡ್ಕೊಂಡೆ. ಈಗ ಆ ಮಗು ಡೌನ್‌ ಸಿಂಡ್ರೋಮ್‌ನಿಂದ ಕಷ್ಟಪಡೋದು ನೋಡಿದ್ರೆ ಮನಸ್ಸಾಕ್ಷಿ ಚುಚ್ಚುತ್ತೆ.”

ಈ ರೀತಿ ದುಃಖ, ಅಪರಾಧಿ ಪ್ರಜ್ಞೆ ಕಾಡೋದು ಸಹಜ. ಏಕೆಂದರೆ ದೇವರು ಮನುಷ್ಯರನ್ನು ಸೃಷ್ಟಿಸಿದಾಗ ಅವರಲ್ಲಿ ಕಾಯಿಲೆ-ಕಸಾಲೆ ಅನ್ನೋ ಯೋಚನೆಯನ್ನೇ ಇಟ್ಟಿರಲಿಲ್ಲ. (ಆದಿಕಾಂಡ 1:27, 28) ಹಾಗಾಗಿ ನಮ್ಮ ಮನಸ್ಸು ಯಾವಾಗ್ಲೂ ಒಳ್ಳೇ ಆರೋಗ್ಯವನ್ನೇ ಬಯಸುತ್ತೆ. ಅನಾರೋಗ್ಯ ಬಂದಾಗ ಅದನ್ನು ಅರಗಿಸಿಕೊಳ್ಳೋಕೆ ಕಷ್ಟ ಆಗುತ್ತೆ. ಅದರಲ್ಲೂ ಮಕ್ಕಳ ಅನಾರೋಗ್ಯ ಕಂಡಾಗ ಅತೀವ ನೋವಾಗುತ್ತೆ. ಈ ನೋವು, ದುಃಖವನ್ನು ಹಿಡಿತದಲ್ಲಿಡಲು ಮತ್ತು ಪರಿಸ್ಥಿತಿಗೆ ಹೊಂದಿಕೊಳ್ಳಲು ಸಮಯ ಹಿಡಿಯುತ್ತೆ.

ಮಗುವಿನ ದುಸ್ಥಿತಿಗೆ ನಾನೇ ಕಾರಣ ಅನ್ನೋ ಭಾವನೆ ನಿಮ್ಮನ್ನು ಕಿತ್ತು ತಿನ್ನುತ್ತಿದ್ಯಾ? ಹಾಗಾದರೆ ನೀವು ಒಂದು ವಿಷಯವನ್ನು ನೆನಪಿಟ್ಟುಕೊಳ್ಳಬೇಕು. ಮಕ್ಕಳ ಅನಾರೋಗ್ಯಕ್ಕೆ ಅನುವಂಶೀಯತೆನಾ, ವಾತಾವರಣನಾ ಅಥವಾ ಇನ್ನೇನು ಕಾರಣ ಅನ್ನೋದು ಇಂದಿಗೂ ಬಿಡಿಸಲಾಗದ ಗಂಟಾಗಿ ಉಳಿದಿದೆ. ಅಂಥದರಲ್ಲಿ ನೀವು ದುಃಖ ಅಪರಾಧಿ ಭಾವ ಹೆಚ್ಚಾಗಕ್ಕೆ ಬಿಟ್ಟರೆ ಕೊನೆಗೆ ನಿಮ್ಮ ಸಂಗಾತಿಯ ಮೇಲೆ ತಪ್ಪುಹೊರಿಸಲು ಶುರುಮಾಡುತ್ತೀರಿ. ಹಾಗಾಗಿ ದೋಷಿ ಮನೋಭಾವವನ್ನು ತೆಗೆದುಹಾಕಿ. ನಿಮ್ಮ ಸಂಗಾತಿಗೆ ಸಹಕರಿಸುತ್ತಾ ಮಗುವಿನ ಆರೈಕೆ ಮಾಡುವುದರ ಕಡೆ ಗಮನಹರಿಸಿ.—ಪ್ರಸಂಗಿ 4:9, 10.

ಸಲಹೆ: ಮಗುವನ್ನು ಕಾಡುತ್ತಿರೋ ರೋಗದ ಬಗ್ಗೆ ತಿಳಿದುಕೊಳ್ಳಿ. ಏಕೆಂದ್ರೆ ಬೈಬಲ್‌ ಹೇಳುವಂತೆ “ಮನೆಯನ್ನು ಕಟ್ಟುವದಕ್ಕೆ ಜ್ಞಾನವೇ ಸಾಧನ; ಅದನ್ನು ಸ್ಥಿರಪಡಿಸುವದಕ್ಕೆ ವಿವೇಕವೇ ಆಧಾರ.”—ಜ್ಞಾನೋಕ್ತಿ 24:3.

ಡಾಕ್ಟರ್‌ ಹತ್ತಿರ ಕೇಳಿನೋ ಭರವಸಾರ್ಹವಾದ ಸಾಹಿತ್ಯ ಓದಿನೋ ರೋಗದ ಬಗ್ಗೆ, ಅದು ಮಾಡುವ ಅವಾಂತರದ ಬಗ್ಗೆ ತಿಳಿದುಕೊಳ್ಳಿ. ಆರಂಭದಲ್ಲಿ ನಿಮಗೆ ಅರ್ಥವಾಗದಿರಬಹುದು. ಆದರೆ ನೀವು ಒಂದು ಹೊಸ ಭಾಷೆ ಕಲಿಯುತ್ತಿದ್ದಿರೇನೋ ಅಂತ ತಗೊಳ್ಳಿ. ಹೊಸ ಭಾಷೆ ಕಲಿಯೋದು ಅಷ್ಟು ಸುಲಭದ ಕೆಲಸವಲ್ಲದಿದ್ದರೂ ಪ್ರಯತ್ನಪಟ್ಟು ನೀವು ಕಲಿಯೋದಿಲ್ವಾ?

ಚಾರ್ಲ್ಸ್‌-ಮೋನಿಕಾ ಏನು ಮಾಡಿದರೆಂದರೆ ತಮ್ಮ ಮಗನಿಗೆ ಇಲಾಜು ಕೊಡುತ್ತಿರೋ ಡಾಕ್ಟರ್‌ರಿಂದ ಮತ್ತು ಒಂದು ಸಂಸ್ಥೆಯಿಂದ ಅವನ ಕಾಯಿಲೆ ಬಗ್ಗೆ ಮಾಹಿತಿ ಪಡೆದುಕೊಂಡರು. ಇದರಿಂದ ಅವರಿಗೆ ಹೇಗೆ ಒಳಿತಾಯ್ತು ಅನ್ನೋದರ ಬಗ್ಗೆ ಹೀಗೆ ಹೇಳ್ತಾರೆ: “ಡೌನ್‌ ಸಿಂಡ್ರೋಮ್‌ ಇರೋ ವ್ಯಕ್ತಿಗೆ ಬರೋ ಸಮಸ್ಯೆಗಳೇನು ಅಂತ ತಿಳಿದುಕೊಂಡ್ವಿ. ಮಕ್ಕಳಿಗೆ ಡೌನ್‌ ಸಿಂಡ್ರೋಮ್‌ ಇದ್ದರೂ ಅವರಿಂದ ಏನೆಲ್ಲ ಸಾಧ್ಯ ಅಂತನೂ ಗೊತ್ತಾಯ್ತು. ಸಾಮಾನ್ಯವಾಗಿ ನಾವೆಲ್ಲ ಮಾಡೋ ಎಷ್ಟೋ ಕೆಲಸಗಳನ್ನು ನಮ್ಮ ಮಗನೂ ಮಾಡಕ್ಕೆ ಆಗುತ್ತೆ ಅಂತ ಗೊತ್ತಾದಾಗ ಮನಸ್ಸಿಗೆ ತುಂಬ ನೆಮ್ಮದಿ ಸಿಕ್ತು.”

ಹೀಗೆ ಮಾಡಿ: ನಿಮ್ಮ ಮಗುವಿಗೆ ಏನು ಮಾಡಕ್ಕೆ ಆಗಲ್ವೋ ಅದರ ಮೇಲಲ್ಲ ಏನು ಮಾಡಕ್ಕೆ ಆಗುತ್ತೋ ಅದಕ್ಕೆ ಗಮನಕೊಡಿ. ಇಡೀ ಕುಟುಂಬವಾಗಿ ಮಗುವಿನ ಜತೆ ಸಮಯ ಕಳೆಯಲು ಕೆಲಸಕಾರ್ಯಗಳನ್ನು ಹೊಂದಿಸಿಕೊಳ್ಳಿ. ಅವನು ಮಾಡುವ ಚಿಕ್ಕಚಿಕ್ಕ ವಿಷಯಗಳಿಗೂ ಸಂಭ್ರಮಪಡಿ. ಶ್ಲಾಘಿಸಿ. ಅವನು ಸಂತೋಷವಾಗಿದ್ದರೆ ನೀವೂ ಜೊತೆ ಸೇರಿ ಸಂಭ್ರಮಿಸಿ.

ಸವಾಲು 2: ಮೈಮನ ಸೋತುಹೋಗುತ್ತೆ. ಒಬ್ಬಂಟಿ ಅನಿಸುತ್ತೆ.

ಅನಾರೋಗ್ಯದಿಂದ ಬಳಲುತ್ತಿರೋ ಮಗುವಿನ ಪಾಲನೆ ಪೋಷಣೆಯಲ್ಲೇ ಸಮಯ, ಶಕ್ತಿಯೆಲ್ಲ ಉಡುಗಿಹೋಗುತ್ತೆ. ನ್ಯೂಜಿಲೆಂಡ್‌ನ ಜೆನಿ ಎಂಬವರು ಹೇಳ್ತಾರೆ “ನನ್ನ ಮಗನಿಗೆ ಸ್ಪೈನ ಬೈಫಿಡ ಇದೆ. ಆರಂಭದಲ್ಲಿ ತುಂಬ ಕಷ್ಟ ಆಗ್ತಿತ್ತು. ಅವನನ್ನೂ ನೋಡ್ಕೋಬೇಕು ಮನೇಲಿರೋ ಕೆಲಸಗಳನ್ನೂ ಮಾಡಬೇಕು. ಕೆಲವೊಂದು ಸಲ ಕೆಲಸ ಜಾಸ್ತಿ ಆಗ್ಬಿಟ್ರೆ ಸಾಕಾಗ್ಬಿಡ್ತಿತ್ತು. ತುಂಬ ಅಳು ಬರುತ್ತಿತ್ತು.”

ಬೆನ್‌ ಎಂಬವರ ಮಗನಿಗೆ ಮಸ್ಕುಲರ್‌ ಡಿಸ್ಟ್ರೋಫಿ ಮತ್ತು ಆಸ್ಪೆರ್ಜರ್ಸ್‌ ಸಿಂಡ್ರೋಮ್‌ ಇದೆ. “ನಮ್ಮ ಮಗನನ್ನು ನೋಡಿಕೊಳ್ಳೋದರಲ್ಲಿ ಎಷ್ಟೆಲ್ಲ ಕಷ್ಟಗಳಿವೆ ಅನ್ನೋದು ತುಂಬ ಜನರಿಗೆ ಅರ್ಥವಾಗೋದಿಲ್ಲ” ಎನ್ನುತ್ತಾರೆ ಬೆನ್‌. ಕೆಲವೊಮ್ಮೆ ನಿಮಗೂ ಒಂಟಿ ಭಾವನೆ ಕಾಡಬಹುದು. ಯಾರ ಹತ್ರವಾದರೂ ಮನಸ್ಸು ಬಿಚ್ಚಿ ಮಾತಾಡಬೇಕು ಅಂತ ನೀವು ತವಕಿಸುತ್ತಿರಬಹುದು. ಆದರೆ ಹಾಗೆ ಮಾತಾಡಕ್ಕೆ ಹೋದಾಗ ಅವರ ಆರೋಗ್ಯವಂತ ಮಗುವನ್ನು ನೋಡಿ ನಿಮಗೆ ಮಾತೇ ಹೊರಡಲ್ಲ.

ಸಲಹೆ: ಸಹಾಯ ಕೇಳಿ. ಸಹಾಯ ಮಾಡಲು ಯಾರಾದ್ರೂ ಮುಂದೆ ಬಂದರೆ ಬೇಡವೆನ್ನಬೇಡಿ. “ಸಹಾಯ ಕೇಳಕ್ಕೆ ನಮಗೆ ಕೆಲವೊಮ್ಮೆ ಮುಜುಗರ ಆಗ್ತಿತ್ತು. ಆದರೆ ಬೇರೆಯವರ ಸಹಾಯ ನಮಗೆ ಬೇಕು. ಅದರಿಂದ ನಾವು ಒಬ್ಬಂಟಿಯಲ್ಲ ಅನ್ನೋ ಆಶ್ವಾಸನೆ ಸಿಗುತ್ತೆ” ಅಂತಾರೆ ಜೂಲಿಯಾನ. ಕ್ರೈಸ್ತ ಕೂಟಗಳಲ್ಲಿ ಅಥವಾ ಸಮಾರಂಭಕ್ಕೆ ಹೋದಲ್ಲಿ ನಿಮ್ಮ ಮಗ/ಮಗಳ ಜತೆ ಕುಳಿತುಕೊಳ್ಳಲು ನಿಮ್ಮ ಆತ್ಮೀಯರು, ಮನೆಮಂದಿಗೆ ಇಷ್ಟವಿರುವಲ್ಲಿ ವಿನಯದಿಂದ ಅವರ ಸಹಾಯ ಸ್ವೀಕರಿಸಿ. ಬೈಬಲ್‌ ನುಡಿಮುತ್ತೊಂದು ಹೀಗನ್ನುತ್ತೆ: “ಮಿತ್ರನ ಪ್ರೀತಿಯು ನಿರಂತರ; ಸಹೋದರನ ಜನ್ಮವು ಆಪತ್ತಿನಲ್ಲಿ ಸಾರ್ಥಕ.”—ಜ್ಞಾನೋಕ್ತಿ 17:17.

ಈ ಜಂಜಾಟದಲ್ಲಿ ನಿಮ್ಮ ಆರೋಗ್ಯವನ್ನು ಅಲಕ್ಷಿಸಬೇಡಿ. ಉದಾ: ಆಂಬ್ಯುಲೆನ್ಸ್‌ ರೋಗಿಗಳನ್ನು ಆಸ್ಪತ್ರೆಗೆ ಸಾಗಿಸುತ್ತಾ ಇರಬೇಕಾದರೆ ಅದಕ್ಕೆ ಯಾವಾಗಲೂ ಇಂಧನ ತುಂಬಿಸುತ್ತಾ ಇರಬೇಕು. ಹಾಗೆ ನಿಮ್ಮ ಮಗುವನ್ನು ಚೆನ್ನಾಗಿ ನೋಡಿಕೊಳ್ಳಬೇಕಾದರೆ ನಿಮ್ಮ ದೇಹದಲ್ಲಿ ಶಕ್ತಿ ಇರಬೇಕು. ಅದಕ್ಕಾಗಿ ನೀವು ಪೋಷಕಾಂಶಯುಕ್ತ ಆಹಾರ ಸೇವಿಸುತ್ತಿರಬೇಕು. ವ್ಯಾಯಾಮ ಮಾಡುತ್ತಿರಬೇಕು, ಒಳ್ಳೇ ವಿಶ್ರಾಂತಿ ತೆಗೆದುಕೊಳ್ಳಬೇಕು. ಕುಂಟ ಮಗನಿರೋ ಒಬ್ಬ ತಂದೆ ಹೀಗೆ ಹೇಳ್ತಾರೆ: “ನಾನು ಚೆನ್ನಾಗಿ ಊಟಮಾಡಬೇಕು. ಯಾಕಂದ್ರೆ ನನ್ನ ಮಗನಿಗೆ ನಡಿಯಕ್ಕಾಗಲ್ಲ. ನನ್ನ ಕಾಲುಗಳೇ ಅವನ ಕಾಲುಗಳು. ನಾನೇ ಅವನನ್ನ ಆಕಡೆ ಈಕಡೆ ಕರ್ಕೊಂಡು ಹೋಗಬೇಕು. ಅದಕ್ಕೆ ನಂಗೆ ಶಕ್ತಿ ಬೇಕು.”

ನಿಮ್ಮ ಮಗುವಿನ ಪಾಲನೆಗೆ ಸಮಯನೇ ಸಾಕಾಗುತ್ತಿಲ್ಲ ಅಂತ ಅನಿಸುತ್ತಿದ್ಯಾ? ಕೆಲವು ಅಪ್ಪಅಮ್ಮ ಮಗುವನ್ನು ನೋಡಿಕೊಳ್ಳಲು ಸರದಿ ತೆಗೆದುಕೊಳ್ಳುತ್ತಾರೆ. ಇದರಿಂದ ತಮ್ಮ ಖಾಸಗಿ ಸಂಗತಿಗಳಿಗೆ ಮತ್ತು ವಿಶ್ರಾಂತಿ ತೆಗೆದುಕೊಳ್ಳಲು ಸಮಯ ಸಿಗುತ್ತೆ. ಅನಗತ್ಯ ವಿಷಯಗಳಲ್ಲಿ ಸಮಯ ಪೋಲಾಗುತ್ತಿದ್ಯಾ ಅಂತ ಪರಿಶೀಲಿಸಿ. ಆ ಸಮಯವನ್ನು ನಿಮ್ಮ ಆರೋಗ್ಯ ನೋಡಿಕೊಳ್ಳಲು ಬಳಸಬಹುದು. ಈ ರೀತಿ ಸಮತೂಕ ಕಾಪಾಡಿಕೊಳ್ಳುವುದು ಕಷ್ಟವಾಗಬಹುದು. ಆದರೆ “ಹೋಗ್ತಾ ಹೋಗ್ತಾ ಎಲ್ಲನೂ ರೂಢಿಯಾಗಿಬಿಡುತ್ತೆ” ಅನ್ನುತ್ತಾರೆ ಭಾರತದಲ್ಲಿರೋ ಮಯೂರಿ ಅನ್ನೋ ಹುಡುಗಿಯ ತಾಯಿ.

ಆಪ್ತ ಗೆಳೆಯ/ಗೆಳತಿಯ ಬಳಿ ಮಾತಾಡಿ. ಅವರಿಗೆ ಅನಾರೋಗ್ಯ ಪೀಡಿತ ಮಕ್ಕಳಿಲ್ಲದಿರಬಹುದು ಆದರೆ ಖಂಡಿತ ನಿಮ್ಮ ಕಷ್ಟ ಅವರಿಗೂ ಅರ್ಥವಾಗುತ್ತೆ. ಯೆಹೋವ ದೇವರ ಬಳಿನೂ ನಿಮ್ಮ ದುಃಖವನ್ನು ಹೇಳಿಕೊಳ್ಳಬಹುದು. ಇದರಿಂದ ಹೇಗೆ ಸಹಾಯ ಆಗುತ್ತೆ ಅಂತ ಯೋಚಿಸುತ್ತಿದ್ದೀರಾ? ಯಾಸ್ಮೀನ್‌ ಎಂಬವರ ಇಬ್ಬರು ಮಕ್ಕಳು ಸಿಸ್ಟಿಕ್‌ ಫೈಬ್ರೋಸಿಸ್‌ನಿಂದ ಬಳಲುತ್ತಿದ್ದಾರೆ. ಯಾಸ್ಮೀನ್‌ ಹೇಳ್ತಾರೆ “ಕೆಲವೊಮ್ಮೆ ಕೆಲಸದ ಒತ್ತಡ ಎಷ್ಟಿರುತ್ತೆ ಅಂದ್ರೆ ಇನ್ನು ನನ್ನಿಂದ ಆಗೋದೆ ಇಲ್ಲ ಅಂತ ಅನ್ಸಿಬಿಡುತ್ತೆ. ಆಗೆಲ್ಲ ಯೆಹೋವ ದೇವರ ಹತ್ರ ಬೇಡ್ಕೋತೀನಿ. ತುಂಬ ಬಲ ಸಿಗುತ್ತೆ. ನನ್ನಿಂದ ಆಗುತ್ತೆ ಅನ್ನೋ ಧೈರ್ಯ ಸಿಗುತ್ತೆ.”—ಕೀರ್ತನೆ 145:18.

ಹೀಗೆ ಮಾಡಿ: ಸರಿಯಾಗಿ ಊಟ ಮಾಡುತ್ತಿದ್ದೀನಾ? ದಿನಾಲೂ ವ್ಯಾಯಾಮ ಮಾಡುತ್ತಿದ್ದೀನಾ? ಎಷ್ಟು ಗಂಟೆ ನಿದ್ದೆ ಮಾಡುತ್ತಿದ್ದೀನಿ? ಅಂತ ಪರೀಕ್ಷಿಸಿಕೊಳ್ಳಿ. ಅನಗತ್ಯವಾಗಿ ಯಾವುದರಲ್ಲಿ ಸಮಯ ವ್ಯಯವಾಗುತ್ತಿದೆ ಅಂತ ನೋಡಿ ಆ ಸಮಯವನ್ನು ನಿಮ್ಮ ಆರೋಗ್ಯದ ಪಾಲನೆಯಲ್ಲಿ ಬಳಸಿ. ಅಗತ್ಯಕ್ಕೆ ತಕ್ಕ ಹಾಗೆ ನಿಮ್ಮ ಕಾರ್ಯತಖ್ತೆಯನ್ನು ಹೊಂದಿಸಿಕೊಳ್ಳುತ್ತಾ ಇರಿ.

ಸವಾಲು 3: ಅನಾರೋಗ್ಯ ಪೀಡಿತ ಮಗುವಿಗೆ ಕೊಡುವಷ್ಟು ಗಮನ ಉಳಿದ ಮನೆಮಂದಿಗೆ ಕೊಡಕ್ಕಾಗಲ್ಲ.

ಅನಾರೋಗ್ಯ ಪೀಡಿತ ಮಗುವಿಗೆ ತಕ್ಕಂತೆ ಮನೆಯಲ್ಲಿ ಅಡುಗೆ ಮಾಡಬೇಕಾಗುತ್ತೆ, ಮಗುವನ್ನು ನೋಡಿಕೊಳ್ಳಕ್ಕೆ ಮನೆಯಲ್ಲಿ ಒಬ್ಬರು ಇರಲೇಬೇಕು ಹಾಗಾಗಿ ಎಲ್ಲರೂ ಒಟ್ಟಿಗೆ ಹೊರಗೆ ಹೋಗಕ್ಕೆ ಆಗಲ್ಲ, ಅಪ್ಪಅಮ್ಮ ಆ ಮಗುವಿಗೇ ಹೆಚ್ಚು ಸಮಯ ವ್ಯಯಿಸಬೇಕಾಗುತ್ತೆ. ಹೀಗಾಗುವಾಗ ಮನೆಯಲ್ಲಿರೋ ಬೇರೆ ಮಕ್ಕಳಿಗೆ ತಮ್ಮನ್ನು ಅಸಡ್ಡೆಮಾಡುತ್ತಿದ್ದಾರೆ ಅಂತ ಅನಿಸಬಹುದು. ಇನ್ನು ಕೆಲವೊಮ್ಮೆ ಬಾಳಸಂಗಾತಿಗಳ ಮಧ್ಯೆ ಜಗಳಕ್ಕೂ ಕಾರಣವಾಗಬಹುದು. ಲೈಬೀರಿಯ ದೇಶದ ಲೈನಲ್‌ ಎಂಬವರ ಮನೆಯಲ್ಲೂ ಹೀಗೆ ಆಗ್ತಿತ್ತು “ನನ್ನ ಹೆಂಡ್ತಿ ಹೇಳ್ತಾಳೆ ‘ಎಲ್ಲ ಕೆಲ್ಸ ನಾನೊಬ್ಬಳೇ ಮಾಡಬೇಕು ನೀವು ಸ್ವಲ್ಪನೂ ಸಹಾಯಮಾಡಲ್ಲ, ಮಗನನ್ನ ನೋಡ್ಕೊಳ್ಳಲ್ಲ’ ಅಂತ. ಕೆಲವೊಮ್ಮೆ ಇವಳಿಗೇನು ನನ್ನ ಮೇಲೆ ಸ್ವಲ್ಪನೂ ಗೌರವನೇ ಇಲ್ಲ ಅಂತನಿಸುತ್ತೆ. ಕೆಲವೊಮ್ಮೆ ಒರಟಾಗಿ ವರ್ತಿಸಿಬಿಡುತ್ತೀನಿ.”

ಸಲಹೆ: ನಿಮ್ಮ ಉಳಿದ ಮಕ್ಕಳನ್ನೂ ನೀವು ಪ್ರೀತಿಸುತ್ತೀರಿ ಅಂತ ಆಶ್ವಾಸನೆ ಕೊಡಿ. ಅವರಿಷ್ಟಪಡುವ ವಿಷಯಗಳನ್ನೂ ಮಾಡಿ. “ನಮ್ಮ ಹಿರಿ ಮಗನ ಸಂತೋಷಕ್ಕಾಗಿ ಕೆಲವೊಮ್ಮೆ ನಾವೇನಾದರೂ ಸ್ಪೆಷಲ್‌ ಆಗಿ ಮಾಡ್ತೀವಿ. ಅವನ ಇಷ್ಟದ ಹೋಟೆಲಿಗೆ ಊಟಕ್ಕೆ ಕರಕೊಂಡು ಹೋಗ್ತೀವಿ” ಎನ್ನುತ್ತಾರೆ ಜೆನಿ.

ನಿಮ್ಮ ವಿವಾಹ ಬಾಂಧವ್ಯದ ಕ್ಷೇಮಕ್ಕಾಗಿ ನಿಮ್ಮಿಬ್ಬರ ಮಧ್ಯೆ ಸಂವಾದ ಮುಖ್ಯ. ಇಬ್ಬರೂ ಒಟ್ಟಿಗೆ ಪ್ರಾರ್ಥಿಸುವುದು ಮುಖ್ಯ. ಮೂರ್ಛೆ ರೋಗದಿಂದ ಬಳಲುತ್ತಿರೋ ಮಗನಿರುವ ಆಸೀಮ್‌(ಭಾರತ) ಎಂಬವರು ಹೇಳ್ತಾರೆ “ನಾನು ನನ್ನ ಹೆಂಡ್ತಿ ಎಷ್ಟೇ ಸುಸ್ತಾಗಿದ್ದರೂ ಕೂತು ಮಾತಾಡೋಕೆ, ಒಟ್ಟಿಗೆ ಪ್ರಾರ್ಥನೆ ಮಾಡೋಕೆ ಸಮಯ ಮಾಡಿಕೊಳ್ತೀವಿ. ಬೆಳಿಗ್ಗೆ ಮಕ್ಕಳು ಏಳೋ ಮುಂಚೆ ಇಬ್ಬರೂ ಬೈಬಲ್‌ನಿಂದ ಒಂದು ವಾಕ್ಯವನ್ನ ಓದಿ ಚರ್ಚಿಸ್ತೀವಿ.” ಇನ್ನು ಕೆಲವು ದಂಪತಿಗಳು ರಾತ್ರಿ ನಿದ್ದೆ ಮಾಡುವ ಮುಂಚೆ ಮಾತಾಡಕ್ಕೆ ಸಮಯ ಮಾಡಿಕೊಳ್ತಾರೆ. ನೀವು ಖಾಸಗಿಯಾಗಿ ಕೂತು ಮಾತಾಡುವುದರಿಂದ, ಒಟ್ಟಿಗೆ ಮನದಾಳದಿಂದ ಪ್ರಾರ್ಥಿಸುವುದರಿಂದ ಅದೆಂಥ ಒತ್ತಡದ ಸನ್ನಿವೇಶ ಬಂದರೂ ವಿವಾಹಬಂಧ ಬಲವಾಗಿಯೇ ಇರುತ್ತೆ. (ಜ್ಞಾನೋಕ್ತಿ 15:22) “ದುಸ್ತರ ಸನ್ನಿವೇಶದಲ್ಲಿ ಒಬ್ಬರಿಗೊಬ್ಬರು ಒತ್ತಾಸೆಯಾಗಿದ್ದ ಸಮಯವೇ ನಮ್ಮ ಬಾಳಲ್ಲಿ ಬಲು ಮಧುರವಾದ ಕ್ಷಣಗಳು” ಎನ್ನುತ್ತಾರೆ ಒಬ್ಬ ದಂಪತಿ.

ಹೀಗೆ ಮಾಡಿ: ಅನಾರೋಗ್ಯ ಮಗುವನ್ನು ನಿಮ್ಮ ಉಳಿದ ಮಕ್ಕಳು ಚೆನ್ನಾಗಿ ನೋಡಿಕೊಂಡಾಗ ಶ್ಲಾಘಿಸಿ. ಆ ಮಕ್ಕಳ ಮೇಲೆ, ನಿಮ್ಮ ಸಂಗಾತಿಯ ಮೇಲೆ ಇರುವ ಪ್ರೀತಿಯನ್ನು ಆಗಾಗ್ಗೆ ವ್ಯಕ್ತಪಡಿಸಿ.

ಆಶಾಭಾವ ಆರದಿರಲಿ

ದೇವರು ಎಲ್ಲ ಕಾಯಿಲೆ ಅನಾರೋಗ್ಯವನ್ನು ಬಹು ಬೇಗ ಅಳಿಸಿಹಾಕುವೆನೆಂದು ಮಾತುಕೊಟ್ಟಿದ್ದಾರೆ. (ಪ್ರಕಟನೆ 21:3, 4) ಆಗ “ಯಾವ ನಿವಾಸಿಯೂ ತಾನು ಅಸ್ವಸ್ಥನು ಎಂದು ಹೇಳನು.” *ಯೆಶಾಯ 33:24.

ಅಲ್ಲಿ ತನಕ ಅನಾರೋಗ್ಯ ಪೀಡಿತ ಮಗುವನ್ನು ಪಾಲನೆಮಾಡುವ ಸವಾಲನ್ನು ನೀವು ಜಯಿಸಬಲ್ಲಿರಿ. “ಏನು ಮಾಡಿದ್ರೂ ಸರಿಯಾಗ್ತಿಲ್ಲ ಅಂತ ಕೆಲವೊಮ್ಮೆ ಅನ್ಸುತ್ತೆ. ಆದ್ರೆ ನಿರಾಶರಾಗಬೇಡಿ. ನಿಮ್ಮ ಮಗುವಿನಲ್ಲಿರೋ ಒಳ್ಳೇ ವಿಷಯಗಳನ್ನು ಎಣಿಸಲು ಶುರುಮಾಡಿ. ತುಂಬ ಸಿಗುತ್ತೆ” ಎನ್ನುತ್ತಾರೆ ಚಾರ್ಲ್ಸ್‌ ಮತ್ತು ಮೋನಿಕಾ. ▪ (w13-E 02/01)

[ಪಾದಟಿಪ್ಪಣಿಗಳು]

^ ಪ್ಯಾರ. 3 ಈ ಲೇಖನದಲ್ಲಿ ಹೆಸರುಗಳನ್ನು ಬದಲಿಸಲಾಗಿದೆ.

^ ಪ್ಯಾರ. 29 ಮನುಷ್ಯರು ಪರಿಪೂರ್ಣ ಆರೋಗ್ಯ ಪಡೆಯುವರು ಅಂತ ದೇವರು ಬೈಬಲಿನಲ್ಲಿ ಹೇಳಿರುವ ವಿಷಯದ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಪುಸ್ತಕದ ಅಧ್ಯಾಯ 3ನ್ನು ಓದಿ. ಇದು ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತ.

ನಿಮ್ಮನ್ನೇ ಕೇಳಿಕೊಳ್ಳಿ. . .

ನನ್ನ ಶಾರೀರಿಕ, ಭಾವನಾತ್ಮಕ, ಆಧ್ಯಾತ್ಮಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ನಾನೇನು ಮಾಡುತ್ತಿದ್ದೀನಿ?

ಮಕ್ಕಳು ಮಾಡಿದ ಸಹಾಯವನ್ನು ಮುಕ್ತಕಂಠದಿಂದ ಹೊಗಳಿದ್ದೀನಾ? ಯಾವಾಗ?

[ಪುಟ 10ರಲ್ಲಿರುವ ಚಿತ್ರ]

[ಪುಟ 12ರಲ್ಲಿರುವ ಚಿತ್ರ]

ನಿಮ್ಮ ಎಲ್ಲ ಮಕ್ಕಳಿಗೂ ಸಮಯ ಆಶ್ವಾಸನೆ ನೀಡಿ