ಮಾರ್ಕ 14:1-72

  • ಪುರೋಹಿತರು ಯೇಸುನ ಕೊಲ್ಲೋಕೆ ಸಂಚು ಮಾಡ್ತಾರೆ (1, 2)

  • ಯೇಸುವಿನ ಮೇಲೆ ಸುಗಂಧ ತೈಲ ಹಾಕಿದಳು (3-9)

  • ಯೂದ ಯೇಸುಗೆ ಮೋಸಮಾಡಿದ (10, 11)

  • ಕೊನೇ ಪಸ್ಕ (12-21)

  • ಒಡೆಯನ ಸಂಜೆ ಊಟ (22-26)

  • ಯೇಸುವನ್ನ ಗೊತ್ತಿಲ್ಲ ಅಂತ ಪೇತ್ರ ಹೇಳ್ತಾನೆ ಅನ್ನೋ ಭವಿಷ್ಯವಾಣಿ (27-31)

  • ಗೆತ್ಸೇಮನೆ ತೋಟದಲ್ಲಿ ಯೇಸು ಪ್ರಾರ್ಥಿಸಿದನು (32-42)

  • ಯೇಸುವನ್ನ ಹಿಡ್ಕೊಂಡು ಹೋದ್ರು (43-52)

  • ಹಿರೀಸಭೆಯಲ್ಲಿ ವಿಚಾರಣೆ (53-65)

  • ಯೇಸುವನ್ನ ಗೊತ್ತಿಲ್ಲ ಅಂತ ಪೇತ್ರ ಹೇಳಿದ (66-72)

14  ಇನ್ನೇನು ಎರಡು ದಿನದಲ್ಲಿ+ ಪಸ್ಕ ಹಬ್ಬ+ ಮತ್ತು ಹುಳಿಯಿಲ್ಲದ ರೊಟ್ಟಿ ಹಬ್ಬ+ ಇತ್ತು. ಮುಖ್ಯ ಪುರೋಹಿತರು, ಪಂಡಿತರು ಯೇಸುವನ್ನ ಮೋಸದಿಂದ ಹಿಡಿದು ಕೊಲ್ಲೋಕೆ ಅವಕಾಶ ಸಿಗುತ್ತಾ ಅಂತ ಕಾಯ್ತಾ ಇದ್ರು.+  ಆದ್ರೆ “ಹಬ್ಬದ ಸಮಯದಲ್ಲಿ ಬೇಡ. ಜನ ಗಲಾಟೆ ಮಾಡಬಹುದು” ಅಂತ ಮಾತಾಡ್ಕೊಂಡ್ರು.  ಯೇಸು ಬೇಥಾನ್ಯದ ಸೀಮೋನನ ಮನೇಲಿ ಊಟ ಮಾಡ್ತಿದ್ದನು. ಸೀಮೋನನಿಗೆ ಈ ಮುಂಚೆ ಕುಷ್ಠರೋಗ ಇತ್ತು. ಒಬ್ಬ ಸ್ತ್ರೀ ದುಬಾರಿಯಾದ ಶುದ್ಧ ಸುಗಂಧ ತೈಲದ ಬಾಟ್ಲಿ ತಂದು ಆತನ ತಲೆ ಮೇಲೆ ಸುರಿಯೋಕೆ ಶುರುಮಾಡಿದಳು.+  ಇದನ್ನ ನೋಡಿ ಶಿಷ್ಯರಿಗೆ ತುಂಬ ಕೋಪ ಬಂದು “ಇವಳು ಯಾಕೆ ಈ ರೀತಿ ಹಾಳು ಮಾಡ್ತಿದ್ದಾಳೆ?  ಇದನ್ನ 300 ದಿನಾರುಗಿಂತ* ಜಾಸ್ತಿ ಬೆಲೆಗೆ ಮಾರಿ ಬಂದ ಹಣನ ಬಡವರಿಗೆ ಕೊಡಬಹುದಲ್ಲಾ” ಅಂತ ಮಾತಾಡ್ಕೊಂಡ್ರು. ಅವಳ ಮೇಲೆ ಅವ್ರಿಗೆ ತುಂಬ ಸಿಟ್ಟು ಬಂತು.*  ಆದ್ರೆ ಯೇಸು “ಸುಮ್ಮನಿರಿ! ಯಾಕೆ ಅವಳ ಮನಸ್ಸಿಗೆ ನೋವು ಮಾಡ್ತೀರಾ? ಅವಳು ನನಗೆ ಒಳ್ಳೇದನ್ನೇ ಮಾಡಿದ್ದಾಳೆ.+  ಯಾಕಂದ್ರೆ ನಿಮ್ಮ ಜೊತೆ ಬಡವರು ಯಾವಾಗ್ಲೂ ಇರ್ತಾರೆ.+ ಯಾವಾಗ ಬೇಕಾದ್ರೂ ಅವ್ರಿಗೆ ಒಳ್ಳೇದು ಮಾಡಬಹುದು. ಆದ್ರೆ ನಾನು ಯಾವಾಗ್ಲೂ ಇರಲ್ಲ.+  ಅವಳಿಂದ ಆಗೋದನ್ನ ಅವಳು ಮಾಡಿದ್ದಾಳೆ. ಅವಳು ನನ್ನ ಮೇಲೆ ಸುಗಂಧ ತೈಲ ಹಾಕಿ ಈಗಲೇ ನನ್ನ ದೇಹವನ್ನ ಸಮಾಧಿ ಮಾಡೋಕೆ ಸಿದ್ಧಮಾಡ್ತಾ ಇದ್ದಾಳೆ.+  ನಿಮಗೆ ನಿಜ ಹೇಳ್ತೀನಿ, ಲೋಕದಲ್ಲಿ ಸಿಹಿಸುದ್ದಿ ಸಾರೋ ಜಾಗದಲ್ಲೆಲ್ಲ+ ಇವಳು ಮಾಡಿದ ಈ ಕೆಲಸದ ಬಗ್ಗೆ ಮಾತಾಡ್ತಾ ಇವಳನ್ನ ನೆನಪಿಸ್ಕೊಳ್ತಾರೆ” ಅಂದನು.+ 10  ಆಮೇಲೆ 12 ಶಿಷ್ಯರಲ್ಲಿ ಒಬ್ಬನಾದ ಇಸ್ಕರಿಯೂತ ಯೂದ ಯೇಸುವನ್ನ ಹಿಡಿದು ಕೊಡೋದ್ರ ಬಗ್ಗೆ ಮಾತಾಡೋಕೆ ಮುಖ್ಯ ಪುರೋಹಿತರ ಹತ್ರ ಹೋದ.+ 11  ಅವನ ಮಾತನ್ನ ಕೇಳಿ ಅವ್ರಿಗೆ ತುಂಬ ಖುಷಿ ಆಯ್ತು. ಅವನಿಗೆ ಬೆಳ್ಳಿ ನಾಣ್ಯಗಳನ್ನ ಕೊಡ್ತೀವಿ ಅಂತ ಮಾತುಕೊಟ್ರು.+ ಹಾಗಾಗಿ ಅವನು ಅವತ್ತಿಂದ ಯೇಸುನ ಹಿಡುಕೊಡೋಕೆ ಅವಕಾಶಕ್ಕಾಗಿ ಕಾಯ್ತಿದ್ದ. 12  ಹುಳಿಯಿಲ್ಲದ ರೊಟ್ಟಿ ಹಬ್ಬದ ಮೊದಲನೇ ದಿನ ಅದು.+ ಆ ದಿನ ಪಸ್ಕದ ಬಲಿ ಅರ್ಪಿಸೋ ಪದ್ಧತಿ ಇತ್ತು.+ ಅವತ್ತು ಶಿಷ್ಯರು ಯೇಸು ಹತ್ರ “ಪಸ್ಕ ಹಬ್ಬದ ಊಟವನ್ನ ನಾವೆಲ್ಲಿ ಸಿದ್ಧಮಾಡಬೇಕು?” ಅಂತ ಕೇಳಿದ್ರು.+ 13  ಆಗ ಆತನು ಇಬ್ರು ಶಿಷ್ಯರಿಗೆ “ನೀವು ಪಟ್ಟಣಕ್ಕೆ ಹೋಗಿ. ಅಲ್ಲಿ ಮಡಿಕೆಯಲ್ಲಿ ನೀರು ಹೊತ್ಕೊಂಡು ಹೋಗ್ತಿರೋ ಒಬ್ಬ ವ್ಯಕ್ತಿ ಸಿಗ್ತಾನೆ. ಅವನ ಹಿಂದೆ ಹೋಗಿ.+ 14  ಅವನು ಯಾವ ಮನೆಯೊಳಗೆ ಹೋಗ್ತಾನೋ ಆ ಮನೆ ಯಜಮಾನನಿಗೆ ‘ನಮ್ಮ ಗುರು ನಿನ್ನ ಮನೇಲಿ ಶಿಷ್ಯರ ಜೊತೆ ಪಸ್ಕ ಹಬ್ಬ ಮಾಡಬೇಕು, ಆ ಕೋಣೆ ಎಲ್ಲಿದೆ? ಅಂತ ಕೇಳ್ತಿದ್ದಾನೆ’ ಅನ್ನಿ. 15  ಆಗ ಅವನು ಮಾಳಿಗೆ ಮೇಲೆ ಇರೋ ದೊಡ್ಡ ಕೋಣೆ ತೋರಿಸ್ತಾನೆ. ನಮಗೆ ಬೇಕಾಗಿರೋ ಎಲ್ಲ ವಸ್ತುಗಳೂ ಅಲ್ಲಿರುತ್ತೆ. ಅಲ್ಲಿ ಪಸ್ಕ ಹಬ್ಬದ ಊಟ ತಯಾರಿ ಮಾಡಿ” ಅಂತ ಹೇಳಿ ಕಳಿಸಿದನು. 16  ಶಿಷ್ಯರು ಪಟ್ಟಣಕ್ಕೆ ಹೋದ್ರು. ಯೇಸು ಹೇಳಿದ ಹಾಗೇ ಆಯ್ತು. ಪಸ್ಕ ಹಬ್ಬಕ್ಕೆ ಎಲ್ಲ ಸಿದ್ಧತೆ ಮಾಡಿದ್ರು. 17  ಸಂಜೆ ಆದಾಗ ಯೇಸು 12 ಶಿಷ್ಯರ ಜೊತೆ ಅಲ್ಲಿ ಬಂದನು.+ 18  ಅವರು ಮೇಜಿನ ಹತ್ರ ಕೂತು ಊಟ ಮಾಡ್ತಿರುವಾಗ ಯೇಸು ಅವ್ರಿಗೆ “ನಿಮಗೆ ನಿಜ ಹೇಳ್ತೀನಿ, ನನ್ನ ಜೊತೆ ಊಟ ಮಾಡ್ತಿರೋ ನಿಮ್ಮಲ್ಲೇ ಒಬ್ಬ ನನಗೆ ಮೋಸ ಮಾಡ್ತಾನೆ” ಅಂದನು.+ 19  ಅದನ್ನ ಕೇಳಿ ಶಿಷ್ಯರಿಗೆ ತುಂಬ ದುಃಖ ಆಯ್ತು. “ಗುರು, ಅದು ನಾನಲ್ಲ ತಾನೇ?” ಅಂತ ಒಬ್ಬರಾದ ಮೇಲೆ ಒಬ್ಬರು ಯೇಸುನ ಕೇಳೋಕೆ ಶುರುಮಾಡಿದ್ರು. 20  ಆಗ ಯೇಸು “ಇಲ್ಲಿರೋ 12 ಜನ್ರಲ್ಲಿ ಒಬ್ಬ ಅಂದ್ರೆ ನನ್ನ ಜೊತೆ ಬಟ್ಟಲಲ್ಲಿ ರೊಟ್ಟಿ ಅದ್ದಿ ತಿಂತಿರೋ ವ್ಯಕ್ತಿನೇ ಅವನು.+ 21  ಪವಿತ್ರ ಗ್ರಂಥದಲ್ಲಿ ಹೇಳಿರೋ ಪ್ರಕಾರ ಮನುಷ್ಯಕುಮಾರ ಸತ್ತುಹೋಗ್ತಾನೆ ನಿಜ. ಆದ್ರೆ ಮನುಷ್ಯಕುಮಾರನಿಗೆ ಮೋಸ ಮಾಡೋ ಆ ವ್ಯಕ್ತಿಗೆ ಆಗೋ ಗತಿಯನ್ನ ಏನು ಹೇಳಲಿ!+ ಅವನು ಹುಟ್ಟದೇ ಇದ್ದಿದ್ರೆ ಚೆನ್ನಾಗಿರ್ತಿತ್ತು” ಅಂದನು.+ 22  ಶಿಷ್ಯರು ಊಟಮಾಡ್ತಿದ್ದಾಗ ಯೇಸು ರೊಟ್ಟಿ ತಗೊಂಡು ಪ್ರಾರ್ಥನೆ ಮಾಡಿ ಅದನ್ನ ಮುರಿದು ಶಿಷ್ಯರಿಗೆ ಕೊಡ್ತಾ “ತಗೊಳ್ಳಿ, ಇದು ನನ್ನ ದೇಹವನ್ನ ಸೂಚಿಸುತ್ತೆ” ಅಂದನು.+ 23  ಆಮೇಲೆ ಬಟ್ಟಲು ತಗೊಂಡು ದೇವರಿಗೆ ಧನ್ಯವಾದ ಹೇಳಿ ಅದನ್ನ ಅವ್ರಿಗೆ ಕೊಟ್ಟನು. ಅವ್ರೆಲ್ಲ ಅದ್ರಲ್ಲಿ ಇರೋದನ್ನ ಕುಡಿದ್ರು.+ 24  ಆತನು ಅವ್ರಿಗೆ “ಇದು ನನ್ನ ರಕ್ತವನ್ನ ಸೂಚಿಸುತ್ತೆ.+ ಈ ರಕ್ತ ದೇವರ ಒಪ್ಪಂದಕ್ಕೆ ಆಧಾರ.+ ನನ್ನ ರಕ್ತವನ್ನ ತುಂಬ ಜನ್ರಿಗಾಗಿ ಸುರಿಸ್ತೀನಿ.+ 25  ನಾನು ದೇವರ ಆಳ್ವಿಕೆಯಲ್ಲಿ ನಿಮ್ಮ ಜೊತೆ ಹೊಸ ದ್ರಾಕ್ಷಾಮದ್ಯ ಕುಡಿಯೋ ತನಕ ಅದನ್ನ ಕುಡಿಯಲ್ಲ ಅಂತ ನಿಮಗೆ ಹೇಳ್ತೀನಿ” ಅಂದನು. 26  ಆಮೇಲೆ ಅವರು ಗೀತೆಗಳನ್ನ* ಹಾಡ್ತಾ ದೇವರನ್ನ ಹೊಗಳ್ತಾ ಆಲೀವ್‌ ಗುಡ್ಡಕ್ಕೆ ಹೋದ್ರು.+ 27  ಯೇಸು ಅವ್ರಿಗೆ “ನೀವೆಲ್ಲ ನನ್ನನ್ನ ಬಿಟ್ಟು ಓಡಿಹೋಗ್ತೀರ.* ಯಾಕಂದ್ರೆ ಪವಿತ್ರ ಗ್ರಂಥದಲ್ಲಿ ‘ನಾನು ಕುರುಬನ ಮೇಲೆ ಆಕ್ರಮಣ ಮಾಡ್ತೀನಿ.+ ಕುರಿಗಳು ಚೆದರಿಹೋಗ್ತವೆ’ ಅಂತ ಬರೆದಿದೆ.+ 28  ಆದ್ರೆ ನಾನು ಸತ್ತ ಮೇಲೆ ದೇವರು ನನ್ನನ್ನ ಜೀವಂತ ಎಬ್ಬಿಸ್ತಾನೆ. ಆಮೇಲೆ ನಿಮಗಿಂತ ಮುಂಚೆ ಗಲಿಲಾಯಕ್ಕೆ ಹೋಗ್ತೀನಿ” ಅಂದನು.+ 29  ಆಗ ಪೇತ್ರ “ಎಲ್ರೂ ನಿನ್ನನ್ನ ಬಿಟ್ಟು ಹೋದ್ರೂ* ನಾನಂತೂ ನಿನ್ನನ್ನ ಬಿಟ್ಟು ಹೋಗಲ್ಲ” ಅಂದ.+ 30  ಯೇಸು ಅವನಿಗೆ “ನಿಜ ಹೇಳ್ತೀನಿ, ಇವತ್ತು ರಾತ್ರಿನೇ ಕೋಳಿ ಎರಡು ಸಾರಿ ಕೂಗೋ ಮುಂಚೆ ನಾನು ಯಾರಂತಾನೇ ಗೊತ್ತಿಲ್ಲ ಅಂತ ನೀನು ಮೂರು ಸಾರಿ ಹೇಳ್ತೀಯ” ಅಂದನು.+ 31  ಆದ್ರೆ ಪೇತ್ರ “ನಾನು ನಿನ್ನ ಜೊತೆ ಸಾಯಬೇಕಾಗಿ ಬಂದ್ರೂ ಹಾಗೆ ಮಾಡಲ್ಲ” ಅಂತ ಹೇಳ್ತಾನೇ ಇದ್ದ. ಬೇರೆ ಶಿಷ್ಯರು ಸಹ ಅದನ್ನೇ ಹೇಳಿದ್ರು.+ 32  ಆಮೇಲೆ ಅವರು ಗೆತ್ಸೇಮನೆ ಅನ್ನೋ ಜಾಗಕ್ಕೆ ಬಂದ್ರು. ಯೇಸು ಶಿಷ್ಯರಿಗೆ “ನಾನು ಪ್ರಾರ್ಥನೆ ಮಾಡಿ ಬರ್ತಿನಿ, ನೀವು ಇಲ್ಲೇ ಕೂತಿರಿ” ಅಂದನು.+ 33  ಪೇತ್ರ, ಯಾಕೋಬ, ಯೋಹಾನನನ್ನ ಜೊತೆಗೆ ಕರ್ಕೊಂಡು ಹೋದನು.+ ಆಗ ಆತನನ್ನ ತುಂಬ ಚಿಂತೆ, ಕಳವಳ ಕಾಡ್ತಾ ಇತ್ತು. 34  ಅವ್ರಿಗೆ “ಪ್ರಾಣ ಹೋಗುವಷ್ಟು ದುಃಖದಲ್ಲಿ ನಾನು ಒದ್ದಾಡ್ತಾ ಇದ್ದೀನಿ.+ ಇಲ್ಲೇ ಇರಿ, ಎಚ್ಚರವಾಗಿರಿ” ಅಂದನು.+ 35  ಅಲ್ಲಿಂದ ಸ್ವಲ್ಪ ಮುಂದೆ ಹೋಗಿ ನೆಲಕ್ಕೆ ಕುಸಿದು, ಸಾಧ್ಯ ಆಗೋದಾದ್ರೆ ಈ ಪರಿಸ್ಥಿತಿ ತನಗೆ ಬರದ ಹಾಗೆ ಮಾಡು ಅಂತ ಪ್ರಾರ್ಥಿಸೋಕೆ ಶುರುಮಾಡಿದನು. 36  “ಅಪ್ಪಾ,* ತಂದೆ,+ ನಿನಗೆ ಯಾವುದೂ ಅಸಾಧ್ಯ ಅಲ್ಲ. ಈ ಬಟ್ಟಲನ್ನ ನನ್ನಿಂದ ತೆಗೆದುಬಿಡು. ಆದ್ರೂ ನನ್ನ ಇಷ್ಟ ಅಲ್ಲ, ನಿನ್ನ ಇಷ್ಟಾನೇ ಆಗಲಿ” ಅಂದನು.+ 37  ಆತನು ಶಿಷ್ಯರ ಹತ್ರ ಬಂದಾಗ ಅವರು ನಿದ್ದೆ ಮಾಡ್ತಿದ್ರು. ಪೇತ್ರನಿಗೆ “ಸೀಮೋನ, ನಿದ್ದೆ ಮಾಡ್ತಾ ಇದ್ಯಾ? ನನ್ನ ಜೊತೆ ಸ್ವಲ್ಪ ಹೊತ್ತು ಎಚ್ಚರ ಇರೋಕೂ ಶಕ್ತಿ ಇಲ್ವಾ?+ 38  ನೀವು ಪಾಪ ಮಾಡದೆ ಇರಬೇಕಂದ್ರೆ ಎಚ್ಚರವಾಗಿದ್ದು, ಪ್ರಾರ್ಥನೆ ಮಾಡ್ತಾ ಇರಬೇಕು.+ ನಿಮಗೇನೋ ಮನಸ್ಸಿದೆ, ಆದ್ರೆ ದೇಹಕ್ಕೆ ಶಕ್ತಿ ಇಲ್ಲ” ಅಂದನು.+ 39  ಆತನು ಮತ್ತೆ ಹೋಗಿ ಅದೇ ವಿಷ್ಯದ ಬಗ್ಗೆ ಪ್ರಾರ್ಥನೆ ಮಾಡಿದನು.+ 40  ವಾಪಸ್‌ ಬಂದು ನೋಡಿದಾಗ ಅವರು ನಿದ್ದೆ ಮಾಡ್ತಿದ್ರು. ಯಾಕಂದ್ರೆ ಅವ್ರಿಗೆ ನಿದ್ದೆ ತಡ್ಕೊಳ್ಳೋಕೆ ಆಗಲಿಲ್ಲ. ಹಾಗಾಗಿ ಆತನಿಗೆ ಏನು ಹೇಳೋದು ಅಂತ ಅವ್ರಿಗೆ ತೋಚಲಿಲ್ಲ. 41  ಆತನು ಮೂರನೇ ಸಲ ಅವ್ರ ಹತ್ರ ಬಂದು “ಇಂಥ ಸಮಯದಲ್ಲಿ ನಿದ್ದೆ ಮಾಡಿ ವಿಶ್ರಾಂತಿ ತಗೊಳ್ತಾ ಇದ್ದೀರಾ? ನಿದ್ದೆ ಮಾಡಿದ್ದು ಸಾಕು! ನೋಡಿ, ಸಮಯ ಬಂದೇ ಬಿಡ್ತು!+ ಮನುಷ್ಯಕುಮಾರನಿಗೆ ಮೋಸ ಮಾಡಿ ಪಾಪಿಗಳ ಕೈಗೆ ಹಿಡಿದುಕೊಡ್ತಾರೆ. 42  ಎದ್ದೇಳಿ ಹೋಗೋಣ. ನನಗೆ ಮೋಸ ಮಾಡುವವನು ಹತ್ರ ಬಂದಿದ್ದಾನೆ” ಅಂದನು.+ 43  ಆಗಲೇ 12 ಶಿಷ್ಯರಲ್ಲಿ ಒಬ್ಬ ಅಲ್ಲಿಗೆ ಬಂದ. ಅವನೇ ಯೂದ. ಅವನ ಜೊತೆ ಮುಖ್ಯ ಪುರೋಹಿತರು, ಪಂಡಿತರು, ಹಿರಿಯರು ಕಳಿಸಿದ ಜನ್ರು ಕತ್ತಿ, ದೊಣ್ಣೆಗಳನ್ನ ಹಿಡ್ಕೊಂಡು ಬಂದ್ರು.+ 44  “ನಾನು ಯಾರಿಗೆ ಮುತ್ತು ಕೊಡ್ತೀನೋ ಅವನೇ ಆ ವ್ಯಕ್ತಿ. ಅವನನ್ನ ಬಂಧಿಸಿ ಜಾಗ್ರತೆಯಿಂದ ಕರ್ಕೊಂಡು ಹೋಗಿ” ಅಂತ ಆ ಮೋಸಗಾರ ಗುರುತು ಕೊಟ್ಟಿದ್ದ. 45  ಅವನು ನೇರವಾಗಿ ಯೇಸು ಹತ್ರ ಹೋಗಿ “ರಬ್ಬೀ” ಅಂತ ಹೇಳಿ ಮುತ್ತು ಕೊಟ್ಟ. 46  ಆಗ ಜನ ಬಂದು ಯೇಸುನ ಹಿಡ್ಕೊಂಡ್ರು. 47  ಆದ್ರೆ ಯೇಸು ಪಕ್ಕದಲ್ಲಿ ನಿಂತಿದ್ದ ಒಬ್ಬ ಕತ್ತಿ ತೆಗೆದು ಮಹಾ ಪುರೋಹಿತನ ಆಳಿಗೆ ಹೊಡೆದು ಕಿವಿ ಕತ್ತರಿಸಿದ.+ 48  ಆಗ ಯೇಸು ಅವ್ರಿಗೆ “ಒಬ್ಬ ಕಳ್ಳನನ್ನ ಹಿಡಿಯೋ ತರ ಕತ್ತಿ, ದೊಣ್ಣೆ ತಗೊಂಡು ನನ್ನನ್ನ ಹಿಡಿಯೋಕೆ ಬಂದಿದ್ದೀರಲ್ಲಾ?+ 49  ನಾನು ಪ್ರತಿದಿನ ದೇವಾಲಯದಲ್ಲಿ ಕಲಿಸ್ತಾ+ ನಿಮ್ಮ ಜೊತೆ ಇದ್ದಾಗ ನನ್ನನ್ನ ಹಿಡಿಲಿಲ್ಲ. ಆದ್ರೆ ಪವಿತ್ರ ಗ್ರಂಥದಲ್ಲಿರೋದು ನೆರವೇರೋಕೆ ಇದೆಲ್ಲ ಆಯ್ತು” ಅಂದನು.+ 50  ಆಗ ಶಿಷ್ಯರೆಲ್ಲ ಆತನನ್ನ ಬಿಟ್ಟು ಓಡಿಹೋದ್ರು.+ 51  ಆದ್ರೆ ಮೈಮೇಲೆ ನಾರಿನ ಬಟ್ಟೆ ಹಾಕೊಂಡಿದ್ದ ಒಬ್ಬ ಯುವಕ ಆತನ ಹಿಂದೆ ಬರ್ತಾ ಇದ್ದ. ಅವರು ಅವನನ್ನ ಹಿಡಿಯೋಕೆ ಪ್ರಯತ್ನಿಸಿದಾಗ 52  ಅವನ ಬಟ್ಟೆ ಬಿಚ್ಚಿ ಹೋಯ್ತು. ಅವನು ಬರೀ ಮೈಲಿ* ಹಾಗೇ ಓಡಿಹೋದ. 53  ಅಷ್ಟರಲ್ಲಿ ಅವರು ಯೇಸುವನ್ನ ಮಹಾ ಪುರೋಹಿತನ ಹತ್ರ ಕರ್ಕೊಂಡು ಹೋದ್ರು.+ ಅಲ್ಲಿ ಎಲ್ಲ ಮುಖ್ಯ ಪುರೋಹಿತರು, ಹಿರಿಯರು, ಪಂಡಿತರು ಸೇರಿದ್ರು.+ 54  ಪೇತ್ರ ದೂರದಿಂದ ಯೇಸುವನ್ನ ಹಿಂಬಾಲಿಸ್ತಾ ಮಹಾ ಪುರೋಹಿತನ ಮನೆ ಅಂಗಳದ ತನಕ ಬಂದ. ಉರಿತಿದ್ದ ಬೆಂಕಿ ಹತ್ರ ಮನೆ ಆಳುಗಳ ಜೊತೆ ಕೂತು ಚಳಿ ಕಾಯಿಸ್ಕೊಳ್ತಿದ್ದ.+ 55  ಮುಖ್ಯ ಪುರೋಹಿತರು ಹಿರೀಸಭೆಯವರು* ಯೇಸುನ ಸಾಯಿಸೋಕೆ ಆತನ ವಿರುದ್ಧ ಸುಳ್ಳುಸಾಕ್ಷಿ ಹುಡುಕ್ತಿದ್ರು. ಆದ್ರೆ ಅವ್ರಿಗೆ ಯಾವ ಸಾಕ್ಷಿನೂ ಸಿಗಲಿಲ್ಲ.+ 56  ತುಂಬ ಜನ ಆತನ ವಿರುದ್ಧ ಸುಳ್ಳು ಸಾಕ್ಷಿ ಹೇಳ್ತಿದ್ರು.+ ಆದ್ರೆ ಒಬ್ರು ಹೇಳೋದಕ್ಕೂ ಇನ್ನೊಬ್ರು ಹೇಳೋದಕ್ಕೂ ಸಂಬಂಧ ಇರಲಿಲ್ಲ. 57  ಕೆಲವರು ಮುಂದೆ ಬಂದು ಆತನ ವಿರುದ್ಧವಾಗಿ ಹೀಗೆ ಸುಳ್ಳು ಸಾಕ್ಷಿ ಹೇಳಿದ್ರು 58  “‘ಕೈಯಿಂದ ಕಟ್ಟಿರೋ ಈ ಆಲಯವನ್ನ ನಾನು ಕೆಡವಿ ಕೈಯಿಂದ ಕಟ್ಟದ ಇನ್ನೊಂದು ಆಲಯವನ್ನ ಮೂರೇ ದಿನದಲ್ಲಿ ಕಟ್ತೀನಿ’ ಅಂತ ಇವನು ಹೇಳೋದನ್ನ ಕೇಳಿದ್ದೀವಿ” ಅಂದ್ರು.+ 59  ಆದ್ರೆ ಇದನ್ನ ಸಹ ಒಬ್ರು ಒಂದು ತರ ಇನ್ನೊಬ್ರು ಇನ್ನೊಂದು ತರ ಹೇಳ್ತಿದ್ರು. 60  ಆಗ ಮಹಾ ಪುರೋಹಿತ ಎದ್ದುನಿಂತು ಯೇಸುಗೆ “ಇದ್ರ ಬಗ್ಗೆ ನೀನು ಏನೂ ಹೇಳಲ್ವಾ? ನಿನ್ನ ವಿರುದ್ಧ ಇವರು ಸಾಕ್ಷಿ ಹೇಳ್ತಿರೋದು ನಿನಗೆ ಕೇಳಿಸ್ತಿಲ್ವಾ?” ಅಂತ ಕೇಳಿದ.+ 61  ಆದ್ರೆ ಯೇಸು ಸುಮ್ಮನಿದ್ದನು. ಏನೂ ಉತ್ರ ಕೊಡಲಿಲ್ಲ.+ ಆಗ ಮಹಾ ಪುರೋಹಿತ ಮತ್ತೆ “ನೀನು ಪವಿತ್ರ ದೇವರ ಮಗನಾದ ಕ್ರಿಸ್ತನಾ?” ಅಂತ ಕೇಳಿದ. 62  ಅದಕ್ಕೆ ಯೇಸು “ಹೌದು. ಮನುಷ್ಯಕುಮಾರ+ ಸರ್ವಶಕ್ತನ ಬಲಗಡೆಯಲ್ಲಿ+ ಕೂತಿರೋದನ್ನ, ಮೋಡಗಳ ಮೇಲೆ ಬರೋದನ್ನ ನೀವು ನೋಡ್ತೀರ” ಅಂದನು.+ 63  ಇದನ್ನ ಕೇಳಿ ಮಹಾ ಪುರೋಹಿತ ತನ್ನ ಬಟ್ಟೆ ಹರ್ಕೊಂಡು “ಇದಕ್ಕಿಂತ ನಮಗೆ ಬೇರೆ ಸಾಕ್ಷಿ ಬೇಕಾ?+ 64  ದೇವರ ವಿರುದ್ಧ ಮಾತಾಡಿದ್ದನ್ನ ನೀವೇ ಕೇಳಿಸ್ಕೊಂಡ್ರಿ. ನಿಮ್ಮ ತೀರ್ಮಾನ ಏನು?” ಅಂದ. ಆಗ ಅವ್ರೆಲ್ಲ ಯೇಸುಗೆ ಮರಣಶಿಕ್ಷೆ ಆಗ್ಲೇಬೇಕು ಅಂದ್ರು.+ 65  ಆಮೇಲೆ ಕೆಲವರು ಆತನ ಮುಖಕ್ಕೆ ಉಗುಳಿದ್ರು.+ ಮುಖಕ್ಕೆ ಮುಸುಕು ಹಾಕಿ ಗುದ್ದಿ “ನಿನ್ನನ್ನ ಯಾರು ಹೊಡೆದ್ರು ಅಂತ ಹೇಳು ನೋಡೋಣ!” ಅಂದ್ರು. ಆಮೇಲೆ ನ್ಯಾಯಸಭೆಯ ಸೇವಕರು ಆತನ ಕೆನ್ನೆಗೆ ಹೊಡೆದು ಅಲ್ಲಿಂದ ಕರ್ಕೊಂಡು ಹೋದ್ರು.+ 66  ಪೇತ್ರ ಕೆಳಗೆ ಅಂಗಳದಲ್ಲಿ ಇದ್ದಾಗ ಮಹಾ ಪುರೋಹಿತನ ಒಬ್ಬ ಸೇವಕಿ ಬಂದಳು.+ 67  ಪೇತ್ರ ಚಳಿಕಾಯಿಸ್ತಾ ಇದ್ದಾಗ ಅವಳು ಅವನನ್ನ ಗುರಾಯಿಸಿ ನೋಡಿ “ನೀನೂ ಆ ನಜರೇತಿನ ಯೇಸು ಜೊತೆ ಇದ್ದೆ ತಾನೇ?” ಅಂದಳು. 68  ಆದ್ರೆ ಅವನು ಒಪ್ಪದೆ “ಅವನು ಯಾರಂತಾನೇ ನಂಗೊತ್ತಿಲ್ಲ, ನೀನು ಏನು ಮಾತಾಡ್ತಾ ಇದ್ದೀಯ ಅಂತಾನೂ ನನಗೆ ಅರ್ಥ ಆಗ್ತಿಲ್ಲ” ಅಂತ ಹೇಳಿ ಅಲ್ಲಿಂದ ಹೊರಗೆ ಬಂದ. 69  ಇನ್ನೊಂದು ಸಲ ಆ ಸೇವಕಿ ಅವನನ್ನ ನೋಡಿ ಅಲ್ಲಿ ಹತ್ರ ನಿಂತಿದ್ದವ್ರಿಗೆ “ಇವನೂ ಅವ್ರ ಜೊತೆ ಇದ್ದ” ಅಂತ ಹೇಳೋಕೆ ಶುರುಮಾಡಿದಳು. 70  ಆಗ್ಲೂ ಪೇತ್ರ ಒಪ್ಪಲಿಲ್ಲ. ಸ್ವಲ್ಪ ಸಮಯ ಆದ ಮೇಲೆ ಅಲ್ಲಿ ನಿಂತಿದ್ದವರು ಪೇತ್ರನಿಗೆ “ನಿಜ ಹೇಳು, ನೀನೂ ಅವ್ರಲ್ಲಿ ಒಬ್ಬ ತಾನೇ. ಯಾಕಂದ್ರೆ ನೀನೂ ಗಲಿಲಾಯದವನು” ಅಂದ್ರು. 71  ಅವನು ಆಣೆಯಿಟ್ಟು “ನಾನು ನಿಜ ಹೇಳ್ತಿಲ್ಲಾಂದ್ರೆ ನನ್ನ ಮೇಲೆ ಶಾಪ ಬರಲಿ. ನೀವು ಯಾರ ಬಗ್ಗೆ ಮಾತಾಡ್ತಾ ಇದ್ದೀರಾ? ಅವನು ಯಾರಂತ ನಿಜವಾಗ್ಲೂ ನಂಗೊತ್ತಿಲ್ಲ!” ಅಂದ. 72  ಸರಿಯಾಗಿ ಅದೇ ಸಮಯಕ್ಕೆ ಕೋಳಿ ಎರಡನೇ ಸಲ ಕೂಗ್ತು.+ ಆಗ ಪೇತ್ರ “ಕೋಳಿ ಎರಡು ಸಾರಿ ಕೂಗೋ ಮುಂಚೆ ನಾನು ಯಾರಂತಾನೇ ಗೊತ್ತಿಲ್ಲ ಅಂತ ನೀನು ಮೂರು ಸಾರಿ ಹೇಳ್ತೀಯ”+ ಅಂತ ಯೇಸು ಹೇಳಿದ್ದನ್ನ ನೆನಪಿಸ್ಕೊಂಡು ಹೊರಗೆ ಹೋಗಿ ಜೋರಾಗಿ ಅತ್ತುಬಿಟ್ಟ.

ಪಾದಟಿಪ್ಪಣಿ

ಅಥವಾ “ಅವರು ಅವಳನ್ನ ಬೈದ್ರು, ಗದರಿಸಿದ್ರು.”
ಅಥವಾ “ಕೀರ್ತನೆಗಳನ್ನ.”
ಅಕ್ಷ. “ಎಡವೋದು.”
ಅಕ್ಷ. “ಎಡವೋದು.”
ಅಕ್ಷ. “ಅಬ್ಬಾ.” ಇದು ಹೀಬ್ರು ಅಥವಾ ಅರಾಮಿಕ್‌ ಪದ.
ಅಥವಾ “ಕಡಿಮೆ ಬಟ್ಟೆ, ಒಳಉಡುಪಲ್ಲೇ.”
ಅಕ್ಷ. “ಸನ್ಹೇದ್ರೀನ್‌.” ಅಥವಾ “ಸರ್ವೋಚ್ಛ ನ್ಯಾಯಾಲಯ.”